ಅವ್ವಳ ಮುಂದೆ ಮಂಡಿಯೂರಿ

ಅವ್ವಳ ಮುಂದೆ ಮಂಡಿಯೂರಿ

ಐವತ್ತೈದು ವರ್ಷದ ಹಿಂದೆ ದೇವರೆಂಬ ನಂಬಿಕೆಯೆದುರು ಕೈಮುಗಿದು ಗಂಡು ಬೇಕೆಂದು ನನ್ನ ಹಡೆದವಳು ಅವ್ವ. ಭಕ್ತಿಯೆಂಬುದು ಕರಗಸವೇ? ಅರಿಯೆ, ಮಸ್ಕಿಯೆಂಬ ತನ್ನೂರಿಂದ ನಲವತ್ತಾರು ಕಿ.ಮೀ. ದೂರದ ಗುಡಗುಂಟಿ ಅಮರೇಶನವರಗೆ ಕಾಲ್ದಾರಿಯಲ್ಲಿ ವಾರಿಗೆಯವರೊಂದಿಗೆ ಎಷ್ಟು ಬಾರಿ ನಡೆದಳೊ ಗೊತ್ತಿಲ್ಲ, ಬೇಡಿಕೆಯೊಂದೇ, ಗಂಡು ಮಗು ಬೇಕು. ದೇವರು-ಭಕ್ತಿಯನ್ನು ಅಷ್ಟಾಗಿ ಹಚ್ಚಿಕೊಳ್ಳದ ಅಪ್ಪನನ್ನು ಅಪ್ಪಿಕೊಂಡೇ ಪಡೆದದ್ದು ನನ್ನನ್ನು.
ಅಪ್ಪನ ಶಾಲಾ ಮಾಸ್ತರಕಿ ನಡುವೆ ಆಕಳು-ಎಮ್ಮೆ ಕಟ್ಟಿ ಹೈನುಮಾಡಿದವಳು ಅವ್ವ. ನಮ್ಮ ಹೊಲವೋ ಬೇರೆಯವರದೊ ಹರದಾರಿ ನಡೆದು ಮೇವು ತಂದವಳು. ಆಕೆ ಹಿಂಡಿದ ಹಾಲು ಕುಡಿದೇ ಬೆಳೆದವ ನಾನು. ಸರಿ ಸುಮಾರು ನಾಲ್ಕು ವರ್ಷ ಅವ್ವನ ಹಾಲು ಕುಡಿದವ. ಅಕ್ಷರ ಕಲಿಸಲು ಕೈಗೆ ಬೆತ್ತದ ರುಚಿತೋರಿಸಿದ ಅಪ್ಪನಿಗೆ ಸವಾಲೆಂಬಂತೆ ಬೆನ್ನಿಗೆ ಭಾರದ ಕೊಡ ಹೊರಿಸದೆ ಬೆಳಸಿದವಳು. ಹಡೆದಾಗ ಜೊತೆಗಿದ್ದಂತೆ ಸದಾ ಜೊತೆಗಿರಿಸಿಕೊಳ್ಳಬೇಕೆಂಬುದೇ ಹಂಬಲ. ಹೇಗೆ ಸಹಿಸಿದ್ದಳೋ.. ಅಭ್ಯಾಸ ಮಾಡುವಾಗ ಮತ್ತೆ ನೌಕರಿ ಮಾಡಲು ದೂರದಲ್ಲಿದ್ದಾಗ ಗೊತ್ತಿಲ್ಲ.

(ಕಲಾವಿದನ ಕೈಚಳಕದಲ್ಲಿ ಅರಳಿದ ಅವ್ವ ಮತ್ತು ಮಗ)

ದೇವನೂರರ ‘ಒಡಲಾಳ’ದ ಸಾಕವ್ವನಂತೆ, ಲಂಕೇಶರ ‘ಅವ್ವ’ನಂತೆ ಮನೆ, ಮಕ್ಕಳಿಗಾಗಿಯೆ ದುಡಿದವರು ಈ ಅವ್ವಂದಿರು. ಮಕ್ಕಳೊಳಗೆ ನಾನು ಒಬ್ಬನೇ ಗಂಡಾಗಿದ್ದು ಮನೆಯ ಎಲ್ಲ ಸೌಭಾಗ್ಯ ನನಗೇ ದಕ್ಕಬೇಕೆನ್ನುವ ತುಡಿತ. ಈಕೆಯ ಎಲ್ಲ ಎದೆಬಡಿತದಲ್ಲೂ ನಾನೇ.. ನನಗೆ ಯಾವ ಅನ್ಯಾಯ, ಅಪಾಯ ಆಗದಂತೆ ಮತ್ತೆ ತನ್ನ ದೇವರ ಮುಂದೆ ಬೇಡುವವಳು, ತಾನಿಲ್ಲದಾದ ಮೇಲೆ ಏನಾಗುವುದೋ ಎಂಬ ನೋವನ್ನು ಕಲ್ಪಿಸಿಕೊಂಡೆ ಮರಗುವಳು. ಶಾಲೆ ಕಲಿಯದೇ ಇದ್ದರೂ ಅಕ್ಷರಗಳನ್ನು ಜೋಡಿಸಿ ‘ಪಾರ್ವತಮ್ಮ’ ಎಂದು ತನ್ನ ಹೆಸರು ಬರೆಯಲು ಕಲಿತು ಚೆಕ್‍ನ ಮೇಲೆ ತನ್ನ ಹೆಸರಿನ ಸಹಿ ಮಾಡಲು ಬಲ್ಲವಳಾದಳು.
ಅಪ್ಪನ ಅಕ್ಷರದಿಂದ ಹೆಣ್ಣು ಮಕ್ಕಳು ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿಗಳಾದರೂ ತನಗೆ ಮಾತ್ರ ಹಾಲು ಕುಡಿಸಿದ ಹಸಗೂಸುಗಳೇ. ಅವರ ಸ್ಥಾನದ ಗರ್ವ ಗೊತ್ತಿಲ್ಲದಂತೆ ಇದ್ದವಳು ಅವ್ವ.
ಅಪ್ಪನ ಟ್ಯೂಷನ್ ದುಡ್ಡು, ಹೈನು ಮಾರಿದ ಹಣ, ಹೊಲಗಳಿಂದ ಬಂದ ರೊಕ್ಕ ತನ್ನ ಕೈಸೇರಬೇಕೆಂಬ ಅವ್ವಳಿಗೆ ಅಪ್ಪ ತೋರಿಸಿದ ಮೇಲೆಯೇ ಹತ್ತರ, ನೂರರ ನೋಟು ಗೊತ್ತಾಗಿದ್ದು. ಐದುನೂರು ಆಕೆಗೆ ಗೊಂದಲದ ನೋಟು. ಹೀಗೆ ಸಂಗ್ರಹಿಸಿದ ವರ್ಷಪೂರ್ತಿ ಹಣ ಬ್ಯಾಂಕಿನಲ್ಲಿಡಬೇಕೆಂಬುದು ಮುಂದೆ ಮಗನಿಗೆ ಅವನ ಮಕ್ಕಳಿಗೆ ಬೇಕಾಗುತ್ತದೆಂಬ ಜಾಣ್ಮೆ ಮಾತ್ರ ಆಕೆಯ ಸ್ವಂತದ್ದೇ ಸರಿ.

ಅಪ್ಪ ಮಕ್ಕಳಿಗೆ ಟ್ಯೂಷನ್ ಹೇಳಿ ವಿದ್ಯೆ ಹಂಚುವಲ್ಲಿ ಸುಖ ಕಂಡರೆ ಅವ್ವ ಜಗುಲಿಯ ಮೇಲಿನ ದೇವರಿಗೆ ನಿತ್ಯ ಹೊಸ ನೀರನ್ನೇ ತಂದು ಪೂಜಿಸುವುದು ಸೌಭಾಗ್ಯ.
ಅಪ್ಪ ತೀರಿ ಹತ್ತು ವಷಗಳ ನಂತರವೂ ತನ್ನ ತೊಂಬತ್ತು ಮೀರಿದ ವರ್ಷಗಳಲ್ಲಿ ಮಗನ ಸೌಖ್ಯ ನೋಡಲೆಂದೇ ಕಣ್ತೆರದು ಬದುಕಿದವಳು. ತೊಂಬತ್ತರ ನಂತರವೂ ಕೋಲು ಹಿಡಿಯದೇ ನಡೆದಾಡಿದ ಗಟ್ಟಿಗಿತ್ತಿ. ಬೀಳದಂತಿರಲು ಕೈಗೆ ಕೋಲು ಕೊಟ್ಟರೆ ಕೋಲನ್ನೇ ಮರೆತು ಮನೆಗೆ ಬಂದವರ ಹಿಂದೆ ಅಂಗಳದವರೆಗೆ ಬಂದು ಕಳಿಸಿಕೊಟ್ಟವಳು. ಇಂತಹ ಅವ್ವಂದಿರೇ ಎಲ್ಲರ ಮನೆಯಲ್ಲಿ ನಾಸ್ತಿಕ ಮಕ್ಕಳೆದುರೇ ದೀಪ ಹಚ್ಚಿ ಶುಭ ಬೆಳಗಿದವರು. ಅವಳ ಕಣ್ಣಲ್ಲಿಯ ಪ್ರೀತಿ ಕಾಳಜಿಗಳನ್ನು ಗುರುತಿಸದೇ ಮುಖದೆದುರು ಕೂತು ಮಾತಾಡದೇ ಸುಖಾ ಸುಮ್ಮನೆ ಊರೂರು ತಿರುಗಿದ ನನ್ನ ದೇಹ ಗೊತ್ತಿಲ್ಲದೆ ಅವ್ವಳೆದುರು ಮಂಡಿಯೂರುತ್ತದೆ.

ತಿಂಗಳ ಹಿಂದೆ ತನ್ನದಲ್ಲದ ತಪ್ಪಿನಿಂದ ಜಾರಿಬಿದ್ದು ನಡೆದಾಡದೆ ಮಲಗಿದ್ದಾಳೆ.
ಹರದಾರಿ ನಡೆದು, ತಲೆಮೇಲೆ ಮೇವು ಹೊತ್ತ ದೇಹ ಸುಮ್ಮನೆ ಕನಲುತ್ತಿದೆ. ಕನವರಿಕೆಯಲ್ಲೂ ಮೇವು ಮಾಡಿದ ಸಂಗಾತಿಗಳನ್ನು ಕೂಗಿ ಕರೆಯುತ್ತಾಳೆ, ರಾಶಿ ಮಾಡಿದ ಚೀಲಗಳನ್ನು ಎಣಿಸುತ್ತಾಳೆ, ಮೈತೊಳೆದ ಎಮ್ಮೆ, ಹಿಂಡಿದ ಆಕಳಗಳನ್ನು ಹಾಸಿಗೆಯಲ್ಲಿ ಮುದ್ದಿಸುತ್ತಾಳೆ. ಔಷಧಿಗಳ ತಂಟೆ ಇಲ್ಲದೆ ಬದುಕಿದ ಅವ್ವನಿಗೆ ಅಮರೇಶ್ವರನ ‘ಆದಾರವೇ’ ಬದುಕಿಗೆ ದೊಡ್ಡ ಆಧಾರ. ಆತನ ಹೆಸರಿನ ತೀರ್ಥವೇ ಈಕೆಗೆ ಪೆನ್ಸಿಲಿನ್.

ಆಕೆಯ ದೇವರು ಕರುಣಾಮಯಿ. ಹಂಬಲಿಸಿ ಪಡೆದ ಮಗನೊಂದಿಗೆ ಬಹುಕಾಲ ಬಾಳುವ ಆಯುಷ್ಯ ಕರುಣಿಸಿದ್ದಾ ನೆ. ನಡೆದಾಡಿ ಬಳಲದವಳು ಮಲಗಿ ಬಳಲುತ್ತಿದ್ದಾಳೆ.
ನಾನೀಗ ಅವ್ವ ಮತ್ತು ಆಕೆಯೊಳಗಿನ ದೇವರ ಮುಂದೆ ಮಂಡಿಯೂರಿದ್ದೇನೆ. ತಾನೆತ್ತಿಕೊಳ್ಳುವ ಮುನ್ನ ಕನಲದಂತೆ ಬಳಲದಂತಿರಿಸೆಂದು.

ಮಹಾಂತೇಶ ಮಸ್ಕಿ

One thought on “ಅವ್ವಳ ಮುಂದೆ ಮಂಡಿಯೂರಿ

Comments are closed.

Don`t copy text!