ಸಂತೆ ಜನಪದರ ಸಂಸ್ಕ್ರತಿ

ಸಂತೆ ಜನಪದರ ಸಂಸ್ಕ್ರತಿ

ಪಟ್ಟಣದ ಸೂಳೆಯ ಕೂಡೆ | ಪರಬ್ರಹ್ಮ ನುಡಿಯಲೇಕೆ? ||
ಸಂತೆಗೆ ಬಂದವರ ಕೂಡೆ | ಸಹಜವ ನುಡಿಯಲೇಕೆ? ||
ಕತ್ತೆಯನೇರುವರ ಕೂಡೆ | ನಿತ್ಯರೆಂದು ನುಡಿಯಲೇಕೆ? ||
ಹೊತ್ತು ಹೋಕರ ಕೂಡೆ | ಕರ್ತನ ಸುದ್ದಿಯ ನುಡಿಯಲೇಕೆ? ||
ಆಮುಗೇಶ್ವರಲಿಂಗವನರಿದ ಶರಣಂಗೆ | ಹತ್ತು ಸಾವಿರವನೋದಲೇಕೆ? ||
ಹತ್ತು ಸಾವಿರ ಕೇಳಲೇಕೆ? | ಭ್ರಷ್ಟರ ಕೂಡೆ ನುಡಿಯಲೇಕೆ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-862 / ವಚನ ಸಂಖ್ಯೆ-663)

ವಚನ ಸಾಹಿತ್ಯ ಪರಂಪರೆಯಲ್ಲಿ ಮತ್ತೊಬ್ಬ ದಿಟ್ಟ ಮಹಿಳಾ ವಚನಕಾರ್ತಿಯೆಂದರೆ ಆಮುಗೆ ರಾಯಮ್ಮ. ಆಮುಗೆ ದೇವಯ್ಯನ ಪತ್ನಿ ಈಕೆ. ಆಮುಗೆ ದೇವಯ್ಯನ ಸಾಂಗತ್ಯದಲ್ಲಿ ಈ ದಂಪತಿಗಳ ಪ್ರಸ್ತಾಪವಿದೆ. ಸೊಲ್ಲಾಪುರದ ನೇಕಾರಿಕೆಯ ಕಾಯಕದಲ್ಲಿ ತಮ್ಮನ್ನು ಇವರು ತೊಡಗಿಸಿಕೊಂಡಿದ್ದರು..

ಆಮುಗೆ ರಾಯಮ್ಮ ತನ್ನ ವೈಚಾರಿಕ ವಚನಗಳ ಮೂಲಕ ಅವಿವೇಕಿಗಳನ್ನು ದುಷ್ಟರನ್ನು ಚಾಡಿಕೋರರನ್ನು ಪ್ರಾಣಿ ಪಕ್ಷಿಗಳಿಗೆ ಹೋಲಿಸಿ ಹೇಳಿದ್ದಾಳೆ. ಅವರ ನಡೆ-ನುಡಿಗಳನ್ನು ಖಂಡಿಸಿ ಎಚ್ಚರಿಸಿದ್ದಾಳೆ. ಸಮಾಜದಲ್ಲಿರುವ ದುಷ್ಟರನ್ನು ಚಾಡಿಕೋರರನ್ನು ಕುರಿತು ವ್ಯಂಗಿಸಿ ತರ್ಕಿಸಿದ್ದಾಳೆ. ಭಕ್ತಿ ಮತ್ತು ಆಧ್ಯಾತ್ಮಿಕ ಚೌಕಟ್ಟಿನಲ್ಲಿ ವಿಶಿಷ್ಟ ಅಭಿವ್ಯಕ್ತಿಯ ಶರಣೆ ಆಮುಗೆ ರಾಯಮ್ಮ. ಹೊಟ್ಟೆ ಪಾಡಿಗಾಗಿ ತಮ್ಮ ದೇಹವನ್ನು ಮಾರಿಕೊಳ್ಳುವ ಸೂಳೆ ಎನ್ನುವ ಪದ ನೋವುಂಟು ಮಾಡುತ್ತದೆ‌. ಆದರೆ ರಾಯಮ್ಮ ಈ ಪದವನ್ನು ಬೈಗಳಾಗಿ ಸಮರ್ಥಿಸುವ ಸನ್ನಿವೇಶಗಳನ್ನು ವಿರೋಧಿಸುವ ಒಬ್ಬ ದಿಟ್ಟ ಬಂಡಾಯಗಾರ್ತಿಯಾಗಿ ಕಂಡು ಬರುತ್ತಾಳೆ.

ಈ ದೇಹವೆಂಬ ನಗರದಲ್ಲಿ ಮಾಯೆ ಎಂಬ ಸೂಳೆ ವಾಸವಾಗಿದ್ದಾಳೆ. ಇದೊಂದು ರೀತಿಯಲ್ಲಿ ಜನಪದರ ಬೈಗಳ ಪದವಾಗಿದೆ. ಧಾರ್ಮಿಕತೆಯಲ್ಲಿ ನಿಗೂಢತೆಯನ್ನು ಜನಪದ ಭಾಷೆಯಲ್ಲಿ ನಿರ್ಭೀತಿ ಹೇಳಿಕೆಯ ಸಮರ್ಥನೆ ಆಕೆಯದು. ಮಾಯೆ ಎಂಬ ಗ್ರಹಿಕೆ ಸತ್ಯಾ-ಸತ್ಯೆತೆಯ ಪ್ರಯೋಗವನ್ನು ಮುಂದು ಮಾಡುತ್ತದೆ. ಜಿಜ್ಞಾಸೆಗಾರರಿಗೆ ಮಾಯೆ ಭ್ರಮೆಯಾಗುತ್ತದೆ.

ಆಮುಗೆ ರಾಯಮ್ಮನ ಹೇಳಿಕೆಯಂತೆ ಮಾಯೆ ಸತ್ವ ರಜ ತಮೋ ಗುಣಗಳಿಂದ ಆವೃತವಾದವಾದದ್ದು. ಲೌಕಿಕ ಬದುಕಿನಲ್ಲಿ ಆಸಕ್ತಿ ಹೊಂದಿದವರನ್ನು ಬೆಲೆವೆಣ್ಣಿನ ರೂಪದಲ್ಲಿ ಕಾಣುವ ಸಮರ್ಥನೆ ಆಕೆಯದು. ವೇಶ್ಯೆ ಸಮಾಜವನ್ನು ಕಲುಷಿತಗೊಳಿಸಿದರೆ ಮಾಯೆ ಮನಸ್ಸನ್ನು ಕಲ್ಮಶಗೊಳಿಸುತ್ತದೆ. ಸತ್ಯಕ್ಕೆ ಬೆಂಬಲ ನೀಡಿ ಸಮರ್ಥಿಸಿಕೊಳ್ಳುವ ಪರಿ ಈ ಮಾಯೆಗಿದೆ.

ಈ ಪಟ್ಟಣದ ವೇಶ್ಯೆಯ ಸಂಗವನ್ನು ನಿರಾಕರಿಸುವ ಸತ್ವ ರಜ ತಮೋ ಗುಣ ಹೊಂದಿದವರು ಜನ ನಿಬಿಡವಾದ ಈ ಸಂತೆಯಲ್ಲಿ ವಾಸವಾಗಿದ್ದಾರೆ. ಸತ್ವಗುಣ ಜಾಗೃತವಾದಾಗ ನಮ್ಮಲ್ಲಿ ಅರಿವಿನ ಬೆಳಕು ಎಚ್ಚರವಾಗುತ್ತದೆ. ರಜೋಗುಣ ಲೋಭತ್ವದ ಆಮಿಷವನ್ನು ಹೆಚ್ವಿಸುತ್ತದೆ. ಸತ್ವಗುಣವನ್ನು ಮೆಟ್ಟಿ ರಜೋಭಾವಗಳು ಉದ್ದೀಪನಗೊಳ್ಳಲು ಪ್ರಾರಂಬವಾಗುತ್ತವೆ. ತಮೋಗುಣ‌ ಕತ್ತಲೆ. ಇದೊಂದು ರೀತಿಯಲ್ಲಿ ಆಲಸ್ಯ ಸೋಮಾರಿತನದ ಸಾಮಿಪ್ಯ ಬಯಸುವ ಗುಣವಿದು. ಹೀಗಾಗಿ ಆಮುಗೆ ರಾಯಮ್ಮನು ಸಂತೆಗೆ ಬಂದವರ ಕೂಡ ಸಹಜವ ನುಡಿಯಲೇಕೆ? ಎಂದು ವೇಶ್ಯೆ ಎಂಬ ಮಾಯೆಯ ವಿರುದ್ದ ದ್ವನಿ ಎತ್ತುತ್ತಾಳೆ.
ನಾನು ಚರ್ಚಿಸುತ್ತಿರುವ ಈ ವಚನದಲ್ಲಿ ಅನೇಕ ಸೂಕ್ಷ್ಮ ಅಂಶಗಳನ್ನು ಕಾಣಾಹುದು. ಜನಪದರ ಗಾದೆಗಳ ಒಳನೋಟದ ವಾಸ್ತವತೆಯನ್ನು ಕಾಣಬಹುದು. ಸಂತೆಯಲ್ಲಿ ವ್ಯವಹಾರ ಮಾಡುವವನು ಜನಜಂಗುಳಿಯ ಗದ್ದಲದಲ್ಲಿರುವನು. ತನ್ನ ಬೇಡಿಕೆಯ ವಸ್ತುವಿನ ಬೆಲೆ ಹಾಗು ಗುಣ ಮಟ್ಟವನ್ನು ಹೆಚ್ಚಿಸಲು ತನ್ನ ಮಾತುಗಳನ್ನು ಬಂಡವಾಳ ಮಾಡಿಕೊಳ್ಳುತ್ತಾನೆ. ಸಂತೆಯಲ್ಲಿ ಹೊಂಚು ಹಾಕುವ ನಯವಂಚಕರು ಗಂಟು ಕಳ್ಳರೂ ಇಲ್ಲಿರುತ್ತಾರೆ. ಇವರ ಜೊತೆ ವ್ಯವಹಾರ ಮಾಡ ಬೇಕಾದರೆ ಮೈ ಎಲ್ಲಾ ಕಣ್ಣಾಗಿರಬೇಕು. ಆದ್ದರಿಂದ ಸಂತೆಯ ವ್ಯವಹಾರ ರೋಚಕವಾಗಬಹುದು. ಆದರೆ ಅಪಾಯವಂತೂ ಇದ್ದೇ ಇರುತ್ತದೆ‌. ರಾಯಮ್ಮನ ಎಚ್ಚರಿಕೆ ಕತ್ತೆಯನೇರುವವರ ಕೂಡ ನಿತ್ಯರೆಂದು ನುಡಿಯಲೇಕೆ? ಮೂರ್ಖರು ಅವಿವೇಕಿಗಳನ್ನು ಕತ್ತೆ ಎಂದು ಹೋಲಿಸಿ ಹೇಳುವ ಮೂದಲಿಕೆ ಆಕೆಯದು.

ಊರಿಂದ ಊರಿಗೆ ಅಲೆಮಾರಿಗಳಂತೆ ತಿರುಗಾಡುವವರು ಸಂತೆಗಳಲ್ಲಿ ಅಂಗಡಿ ಹಾಕುವರು ಎಲ್ಲರಿಗೂ ಚಿರಪರಿಚಿತರು ಇವರು. ಪಟ್ಟಣದ ಸೂಳೆಯಂತೆ ಈ ಸಂತೆಯಲ್ಲಿ ಸುಳ್ಳು ಮೋಸ, ಕಳ್ಳತನ, ವಂಚನೆ ತುಂಬಿದ ಈ ಸಂತೆಯಲ್ಲಿ ಮೋಸ ಕಪಟತನ ಮಾಡಿದರೆ ಕತ್ತೆಯ ಒದೆಗಳು ಬೀಳುವವು. ಹೀಗಾಗಿ ಜನಪದರು ಹೇಳುವ ಮಾತುಗಳು ಸಂತೆ ಸೂಳೆ ನೆಚ್ಚಿ ಮನೆ ಹೆಂಡತಿ ಬಿಟ್ಟ ವಚನದ ಜೊತೆಗೆ ಜನಪದರ ಈ ಗಾದೆಯನ್ನು ನಾವು ನಿರಾಕರಿಸಲು ಸಾದ್ಯವಿಲ್ಲ. ಇನ್ನೊಂದು ಮಾತುಗಳು ಕಳ್ಳರು ಕಳ್ಳರು ಕೂಡಿ ಸಂತೆ ಕಟ್ಟಿದ ಹಾಗೆ, ಚಿಂತಿಯಿಲ್ಲದ ಮುದುಕನಿಗೆ ಸಂತೆಯಲ್ಲೂ ನಿದ್ದೆ.

ಅಂಗ ಲಿಂಗ ವನರಿಯದವರು ಕರ್ತನ ಸುದ್ದಿಯ ನುಡಿಯಲೇಕೆ? ಜನಪದರ ಚಿತ್ರಣದ ಜೊತೆಗೆ ಸಂತೆ ಎಂಬ ಶಬ್ದದ ಸನ್ನಿವೇಶಗಳು “ಹತ್ತು ಸಾವಿರವ ನೋದಲೇಕೆ ಹತ್ತುಸಾವಿರ ಕೇಳಲೇಕೆ? ಹತ್ತು ಮಾತ ನಾಡುವುದಕ್ಕಿಂತ ಒಂದು ಮುತ್ತಿನಂತಾ ಮಾತನಾಡು” ಈ ವಾಕ್ಯಗಳನ್ನು ನಮ್ಮ ಹಿರಿಯರಿಂದ ಕಲಿತ ಉಪದೇಶದ ವಾಕ್ಯವಾಗಿದೆ. ಬಸವಣ್ಣನವರ ಈ ವಚನ ಇದೇ ತಾತ್ಪರ್ಯ ಕೊಡುತ್ತದೆ.
ನೂರನೋದಿ | ನೂರ ಕೇಳಿ ಏನು? ||
ಆಸೆ ಬಿಡದು | ರೋಷ ಪರಿಯದು ||
ಮಜ್ಜನಕ್ಕೆರೆದು | ಫಲವೇನು? ||
ಮಾತಿನಂತೆ ಮನವಿಲ್ಲದ | ಜಾತಿ [ಡಂ]ಬರ ನೋಡಿ ||
ನಗುವನಯ್ಯಾ ನಮ್ಮ | ಕೂಡಲಸಂಗಮದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-60 / ವಚನ ಸಂಖ್ಯೆ-652)

ನಮ್ಮ ನಡೆ ನುಡಿಯ ಆವರಣದಲ್ಲಿ ಶರಣರು ಸದಾಚಾರದ ಸಂಸ್ಕ್ರತಿ ಯನ್ನು ಅಪೇಕ್ಷಿಸಿದರು. ಸಮಾಜ ಮುಖಿ ಧರ್ಮ ನಿಷ್ಠೆ ವೈಯಕ್ತಿಕ ಬದುಕಿಗೆ ಮಾದರಿಯಾಗಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ಮಾತನಾಡುವ ಕಲೆಗಿಂತ ಪ್ರಾಮಾಣಿಕವಾಗಿ ಬದುಕುವುದು ಬಹಳ ದೊಡ್ಡದು. ಮಾತು ಸಮಾಜದ ಸಂವಹನ ಮಾತ್ರವಲ್ಲ ಅದು ಶರಣ ಸಂಸ್ಕ್ರತಿಯ ಜೀವ ಸೆಲೆಯದು. ನಮ್ಮ ನಡೆ ನುಡಿಯಲ್ಲಿ ಹತ್ತು ಸಾವಿರ ಓದ ಲೇಕೆ? ಹತ್ತು ಸಾವಿರ ಕೇಳಲೇಕೆ? ರಾಯಮ್ಮನ ಈ ವ‍ಚನವು ಸಮಾಜಮುಖಿ ತರ್ಕದ ಜೊತೆಗೆ ಜನಪದರ ಗಟ್ಟಿತನದ ವಿಶೇಷತೆಯನ್ನು, ಪ್ರತಿಭಟನೆಯ ಆಯಾಮಗಳನ್ನು ಸ್ಪಷ್ಟಪಡಿಸುತ್ತಾಳೆ.

-ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.

Don`t copy text!