ಅಕ್ಕನ ನಡೆ- ವಚನ -9

ತಾತ್ವಿಕ ನೆಲೆಯಲ್ಲಿ ಅಕ್ಕನ ಆಲೋಚನೆ…

 

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯಾ
ಸಮುದ್ರದ ದಡದಲ್ಲಿ ಮನೆಯ ಮಾಡಿ
ನೊರೆತೊರೆಗಳಿಗಂಜಿದೊಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯಾ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಅಕ್ಕನ ಕಾವ್ಯ ಪ್ರತಿಭೆ ಅನನ್ಯ. ಅವಳು ಬಳಸುವ ಉಪಮೆ, ರೂಪಕ, ಧ್ವನಿ ಮುಂತಾದವುಗಳು ಅವಳಲ್ಲಿರುವ ಕಾವ್ಯಶಕ್ತಿಗೆ ಸಾಕ್ಷಿ. ಈ ವಚನದಲ್ಲಿ ಭವದ ವ್ಯಾಪಾರವನ್ನು ತಾತ್ವಿಕ ನೆಲೆಯಲ್ಲಿ ಆಲೋಚಿಸುತ್ತಾಳೆ. ಈ ಜಗತ್ತಿನಲ್ಲಿ ಹುಟ್ಟಿ ಸಾವಿನೊಂದಿಗೆ ನಿರ್ಗಮಿಸುವ ಮನುಷ್ಯನಿಗೆ ಬದುಕೇ ಒಂದು ಸವಾಲು. ಆ ಸಾವಲನ್ನು ಸ್ವೀಕರಿಸಿ ನಿಭಾಯಿಸುವುದೇ ಜೀವನ ಪಯಣ. ಪ್ರತಿಯೊಬ್ಬ ಮನುಷ್ಯನು ತನ್ನ ತಿಳಿದಂತೆ ಬದುಕುತ್ತಿರುತ್ತಾನೆ. ನೆಮ್ಮದಿಯ ಜೀವನ ಸಾಗಿಸಲು ಉತ್ತಮ ಸಂದೇಶ ನೀಡುವ ವಚನವಿದು.

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯಾ
ಈ ಸಾಲುಗಳು ಮೇಲ್ನೋಟಕ್ಕೆ ಒಂದು ರೀತಿ ಕಂಡರೂ, ಒಳಾರ್ಥದಲ್ಲಿ ಮತ್ತೇನೊ ಹೇಳುತ್ತಿರುವಂತೆ ತೋರುತ್ತದೆ. ಆ ಧ್ವನಿಯನ್ನು ಗ್ರಹಿಸಬಹುದು. ಗುಡ್ಡ, ಬೆಟ್ಟ, ಕಾಡುಗಳೆಲ್ಲ ಗಿಡ, ಮರ, ಬಳ್ಳಿಗಳಿಂದ ಸುತ್ತುವರಿದಿರುತ್ತವೆ. ಅಲ್ಲಿ ಪಶು, ಪಕ್ಷಿಗಳ ವಾಸ್ತವ್ಯ ಸಹಜ. ಅಂತಹ ಸ್ಥಳದಲ್ಲಿ ಮನುಷ್ಯ ಮನೆ ಮಾಡಿದರೆ ಪ್ರಾಣಿಗಳ ಆತಂಕ ಇದ್ದೇ ಇರುವುದು. ಹಾಗೆ ಮಾಡುವುದಕ್ಕಿಂತ ಮೊದಲು ಕೊಂಚ ಯೋಚಿಸಬೇಕಾಗುತ್ತದೆ. ಒಮ್ಮೆ ಅಲ್ಲಿ ಹೋಗಿ ನೆಲೆಸಿದ ನಂತರ ಮೀನಾ ಮೇಷ ಎಣಿಸುವುದು ಸರಿಯಲ್ಲ. ಅಲ್ಲಿ ವಾಸವಾಗಿರುವ ಮೃಗಗಳು ಖಂಡಿತಾ ಅಪಾಯಕಾರಿ. ಆಗ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಬಗೆ ತಿಳಿಯುವುದೇ ಜಾಣತನ.

ಇನ್ನೊಂದು ಅರ್ಥದ ಗ್ರಹಿಕೆ ಹೀಗಿದೆ. ಬೆಟ್ಟ ಎಂದರೆ ಸಿರಿವಂತ ಜನರು. ಮೃಗಗಳು ಎಂದರೆ ಶ್ರೀಮಂತಿಕೆಯಿಂದ ಮೆರೆಯುವ ಜೋರು, ದರ್ಪದ ವ್ಯಕ್ತಿಗಳು. ಇಂಥವರ ಸಹವಾಸದಲ್ಲಿ ಬಂದರೆ ಅವರ ಮೃಗೀಯ ಗುಣಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುವುದು.

ಸಮುದ್ರದ ದಡದಲ್ಲಿ ಮನೆಯ ಮಾಡಿ
ನೊರೆತೊರೆಗಳಿಗಂಜಿದೊಡೆಂತಯ್ಯಾ
ಪ್ರಕೃತಿಯ ಎದುರು ಮನುಷ್ಯ ಬಹಳ ಚಿಕ್ಕವನು. ಅಷ್ಟೇ ಅಲ್ಲ ಅಸಹಾಯಕನೂ ಹೌದು. ಈ ನಿಸರ್ಗ ವಿಕೋಪದ ದಾರಿ ಹಿಡಿದರೆ ಮನುಷ್ಯ ಏನೂ ಮಾಡಲಾರ. ಸಮುದ್ರ ಎಂದರೆ ಭಯಾನಕ ಅನುಭವ ನೀಡುವ ರಕ್ಕಸ.

ಸಮುದ್ರದ ತಟದಲ್ಲಿರುವ ಮರಳು ರಾಶಿ ಹೇಗೆ ಶೇಖರಿಸುತ್ತದೆ? ಎಂದು ಆಲೋಚಿಸಬೇಕು. ಅದು ಕೇವಲ ಸಮುದ್ರದಿಂದಲೇ ಸಾಧ್ಯ ಎನ್ನುವುದು ಅಷ್ಟೇ ಸತ್ಯ. ಸಮುದ್ರದ ನೀರು ಮೇಲಿಂದ ಮೇಲೆ ಕಲ್ಲುಬಂಡೆಗಳಿಗೆ ಬಂದು ಅಪ್ಪಳಿಸಿ, ಅಷ್ಟೇ ರಭಸವಾಗಿ ಹಿಂದಿರುಗುತ್ತವೆ. ಹಾಗೆ ಅಪ್ಪಳಿಸುವ ಅಲೆಗಳು ಭಯಂಕರ ಶಕ್ತಿಯುತವಾಗಿರುತ್ತವೆ. ಅದರ ಶಕ್ತಿ ಎಷ್ಟಿರುತ್ತದೆಂದರೆ, ಪ್ರತಿ ಬಾರಿಯ ಹೊಡೆತಕ್ಕೆ ಕಲ್ಲು ಒಡೆದು, ಪುಡಿಪುಡಿಯಾಗಿ ಮರಳ ರೂಪ ಪಡೆದುಕೊಳ್ಳುತ್ತ ಹೋಗುತ್ತದೆ. ಎಷ್ಟೊ ಕಾಲದ ಹೊಡೆತದ ಪ್ರತಿಪಲವೇ ಮರಳ ರಾಶಿ. ಅಂತಹ ಸ್ಥಳದಲ್ಲಿ ಮನುಷ್ಯ ಮನೆ ಮಾಡಿದರೆ ಹೇಗೆ ಬದುಕಲು ಸಾಧ್ಯ? ಆದರೂ ಎದೆಗುಂದದೆ ಛಲದಿಂದ ಬಾಳಿ ಬದುಕಬೇಕೆನ್ನುವುದೇ ಇದರ ಅರ್ಥ.

ಇನ್ನೊಂದು ಅರ್ಥದಲ್ಲಿ, ನೆಲೆ ಇಲ್ಲದವರು, ನಿರ್ಗತಿಕರು, ಕಡುಬಡವರು ಎಲ್ಲೆಂದರಲ್ಲಿ ಐದಾರು ಅಡಿ ಜಾಗವನ್ನು ಆಕ್ರಮಿಸಿ ನೆಲೆಸಲು ಆರಂಭಿಸುತ್ತಾರೆ. ಆ ಸ್ಥಳದ ಮಾಲಿಕ ಆಚಾನಕ್ಕಾಗಿ ಬಂದು ನಿರ್ದಯಿಯಾಗಿ, ಆ ನಿರ್ಗತಿಕರನ್ನು ಎನೂ ಇಲ್ಲದಂತೆ ಬೀದಿಪಾಲು ಮಾಡುತ್ತಾನೆ. ಅವರು ವಾಸಿಸುತ್ತಿದ್ದ ಸ್ಥಳವನ್ನು ಒತ್ತಾಯಪೂರ್ವಕವಾಗಿ ಕಸಿದುಕೊಳ್ಳುತ್ತಾನೆ. ಅದು ಬಡವರ ಪಾಲಿಗೆ ಅಪ್ಪಳಿಸುವ ಸಾಗರದ ಅಲೆ ಅಷ್ಟೇ ಅಲ್ಲ, ಅದೊಂದು ಸುನಾಮಿಯಂತೆ ಪರಿಣಮಿಸುತ್ತದೆ.

ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯಾ
ಇತ್ತೀಚಿನ ಮಾಲ್, ಬಿಗ್ ಬಜಾರ್ ಕಾಲಮಾನದಲ್ಲಿ ಸಂತೆ ಎಂದರೇನೆಂದು ಹೊಸ ಪೀಳಿಗೆಗೆ ಗೊತ್ತಿರುವುದು ಸ್ವಲ್ಪ ಕಷ್ಟ. ಊರೊಳಗೆ ವಾರಕೊಮ್ಮೆ ನಡೆಯುವುದೇ ಸಂತೆ. ಇಡೀ ಊರ ಜನರಿಗೆ ಅವಶ್ಯಕತೆ ಇರುವ ಎಲ್ಲಾ ಸಾಮಾನುಗಳು ಲಭ್ಯವಿರುವ ಸ್ಥಳ. ಆ ದಿನ ವ್ಯಾಪಾರಕ್ಕೆ ಬಂದ ಗ್ರಾಹಕರ ನೂಕು ನುಗ್ಗಲು ಹೇಳತೀರದು. ಎಲ್ಲರಿಗೂ ಅವರವರದೇ ಅವಸರ. ಖರೀದಿ, ಮಾತುಕತೆ, ಚರ್ಚೆ, ಚೌಕಾಶಿ ಮಾಡುವ ಕರ್ಕಶ ಕೂಗಾಟ. ಹೀಗೆ ನಡೆಯುವ ವ್ಯಾಪಾರಿ ತಾಣವೇ ಸಂತೆ. ಅಂಥ ಸಂತೆಯೊಳಗೆ ಮನೆಯ ಮಾಡಿ, ಅಲ್ಲಿ ಗಲಾಟೆಗೆ ಹೆದರಿದರೆ ಹೇಗೆ?

ಇನ್ನೊಂದು ತಾತ್ವಿಕ ಅರ್ಥದಲ್ಲಿ ಈ ಜಗತ್ತೊಂದು ವ್ಯಾಪಾರದ ತಾಣ. ಈ ಬದುಕೇ ಒಂದು ಸಂತೆಯಿದ್ದಂತೆ. ಇಲ್ಲಿ ಬಂದು ಹೋಗುವ ಜನಕ್ಕೆ ಲೆಕ್ಕವೇ ಇಲ್ಲ. ಈ ವ್ಯಾಪಾರದಲ್ಲಿ ತಾನು ಬದುಕು ಕಂಡುಕೊಂಡು, ಜೀವನದಲ್ಲಿ ನೆಲೆ ಕಾಣಲು ಧೈರ್ಯ, ಸ್ಥೈರ್ಯ ಬೇಕು. ಸಂತೆಯೊಳಗಿದ್ದರೂ, ಅಲ್ಲಿಯ ಗಲಾಟೆಗೆ ಎದೆಗುಂದದೆ ಛಲದಿಂದ ಬದುಕು ನಡೆಸುವುದು ಅನಿವಾರ್ಯ ಮತ್ತು ಬಹು ದೊಡ್ಡ ಸವಾಲಾಗಿದೆ!

ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟಿ ಬಂದ ಮೇಲೆ ತನ್ನಿಂದ ತಾನೇ ಬದುಕಿನ ಪಯಣ ಆರಂಭವಾಗುತ್ತದೆ. ಸಮಾಜಶಾಸ್ತ್ರಜ್ಞರು ಹೇಳುವಂತೆ ‘Man is a social animal’ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ.‌ ಸಂಘ ಜೀವನ, ಸಂಘ ಪರಿವಾರದಲ್ಲಿ ಸಮಯ ಕಳೆಯುವ ತವಕ.

‘ಒಬ್ಬರಿಗಿಂತ ಇಬ್ಬರು ಲೇಸು.’ ‘ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ.’ ಜನರ ಸಂಖ್ಯೆ ಹೆಚ್ಚಾದಂತೆಲ್ಲಾ ಮಾತುಕತೆ, ಚರ್ಚೆ, ವಾದ, ವಿವಾದ ಆರಂಭವಾಗುತ್ತವೆ. ಬದುಕಿನ ಪ್ರತಿ ಹಂತದಲ್ಲೂ ಸ್ಪರ್ಧೆ ಏರ್ಪಡುತ್ತದೆ. ಅಂಥ ಸಂದರ್ಭದಲ್ಲಿ ಜನ ಹೊಗಳಲಿ, ತೆಗಳಲಿ, ಬೈಯಲಿ, ಏನು ಬೇಕಾದರೂ ಮಾಡಲಿ. ಆದರೆ ವ್ಯಕ್ತಿ ಎಲ್ಲವನ್ನೂ ಸಮಾನ ಮನಸ್ಥಿತಿಯಿಂದ ಸ್ವೀಕರಿಸಬೇಕು. ಬಸವಣ್ಣ ತಮ್ಮ ವಚನದಲ್ಲಿ ಹೇಳಿರುವಂತೆ ಹೇಳಿಕೊಳ್ಳಬೇಕು.

ಎನ್ನ ವಾಮ – ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ – ವೃದ್ಧಿ ನಿಮ್ಮದಯ
ಎನ್ನ ಮಾನಾಪಮಾನವೂ ನಿಮ್ಮದಯ್ಯಾ
ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ.

ಆಗ ಮನದಲ್ಲಿ ಮೂಡುವ ಸಿಟ್ಟು, ಕೋಪ, ತಾಪಕ್ಕೆ ಕಡಿವಾಣ ಹಾಕಬಹುದು. ಶಾಂತಚಿತ್ತರಾಗಿ ಜೀವನ ಸಾಗಿಸಲು ಸಾಧ್ಯ. ಯಾರ ಮಾತಿಗೂ ಧೃತಿಗೆಡದೆ ಸಮಾಧಾನದಿಂದ ಇರಬೇಕೆಂದು ಅಕ್ಕನ ವಚನದ ಆಶಯ.


ಸಿಕಾ

Don`t copy text!