ವಚನಗಳಲ್ಲಿ ಸ್ತ್ರೀ ಸಂವೇದನೆ ಮತ್ತು ಶಿಕ್ಷಣ.

 

ವಚನಗಳಲ್ಲಿ ಸ್ತ್ರೀ ಸಂವೇದನೆ ಮತ್ತು ಶಿಕ್ಷಣ.

ಭಕ್ತಿ ಸುಭಾಷೆಯ ನುಡಿಯ ನುಡಿವೆ/, ನುಡಿದಂತೆ ನಡೆವೆ /ನಡೆಯೊಳಗೆ ನುಡಿಯ ಪೂರೈಸುವೆ. ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ. ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀನೆದ್ದು ಹೋಗಾ ಕೂಡಲಸಂಗಮದೇವಾ,

ನಡೆ ನುಡಿ ಒಂದಾಗಿ ನಡೆದು ತೋರಿದ, ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕನ್ನು ಪಸರಿಸಿ, ವೈಚಾರಿಕತೆಯಿಂದ ಬಾಳು ಹಸನುಗೊಳಿಸಿದ ಬಸವಾದಿ ಶರಣರನ್ನು ಹೃದಯ ತುಂಬಿ ನೆನದರು ಸಾಲದು.

ವಚನಗಳು ವಿಶ್ವ ಸಾಹಿತ್ಯಕ್ಕೆ ಕೊಟ್ಟಂತಹ ಅತ್ಯಂತ ಮಹತ್ತಾದ ಕೊಡುಗೆ. ವಚನವನ್ನು ಹೊಲುವ ಸಾಹಿತ್ಯ ಪ್ರಕಾರ ಜಗತ್ತಿನಲ್ಲಿ ಬೇರೆ ಯಾವ ಭಾಷೆಯಲ್ಲಿಯೂ ಕೂಡ ಇಲ್ಲ. ಅತ್ಯಂತ ಸರಳವಾಗಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಮಾತೃ ಭಾಷೆಯಲ್ಲಿ ರಚಿಸಿದ “ಶರಣರ ಅಂತರಂಗದ ಅರಿವಿನ ಅನುಭವದ ಅಭಿವ್ಯಕ್ತಿಗಳೇ ವಚನಗಳು”.

ಚೆನ್ನವೀರ ಕಣವಿ ಅವರು “ಎದೆಯಲ್ಲಿ ಅಕ್ಷರ ಅರಿಯದವರು ಜಗಕೆ ಅಕ್ಷರದ ಬೆಳಕನ್ನು ನೀಡಿದರು” ಎಂದು ವಚನಕಾರರ ಕುರಿತು ಹೇಳಿದರು. ನಿಜವಾಗಿಯೂ ವಚನಗಳು ಜಗಕೆ ಜ್ಞಾನದ ಬೆಳಕನ್ನು ನೀಡುವ ಅನುಪಮ ದೀವಿಗೆಯಾಗಿವೆ.

ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ವಚನದ ಮಹತ್ವವನ್ನು ಈ ಒಂದು ವಚನದಲ್ಲಿ ಹೀಗೆ ತಿಳಿಸುತ್ತಾರೆ.

ಪಾತಾಳದಗ್ಘವಣಿಯ ನೇಣಿಲ್ಲದೆ, ಸೋಪಾನದ ಬಲದಿಂದಲ್ಲದೆ ತೆಗೆಯಬಹುದೆ?
ಶಬ್ಧ ಸೋಪಾನವ ಕಟ್ಟಿ ನಡೆಸಿದರು ನಮ್ಮ ಪುರಾತನರು, ದೇವಲೋಕಕ್ಕೆ ಬಟ್ಟೆ ಕಾಣಿರೋ
ಮರ್ತ್ಯಲೋಕದವರ ಮನದ ಮೈಲಿಗೆಯ ಕಳೆಯಲೆಂದು ಗೀತ ಮಾತೆಂಬ ಜ್ಯೋತಿಯ ಬೆಳಗಕೊಟ್ಟರು
ಕೂಡಲ ಚೆನ್ನ ಸಂಗನ ಶರಣರು”

“ದೇಹಕ್ಕೆ ಅನ್ನ ವಸ್ತ್ರಗಳ ಅವಶ್ಯಕತೆ ಇರುವಂತೆ ಮನಸ್ಸು ಮತ್ತು ಆತ್ಮಗಳ ಉನ್ನತಿಗೆ ಆಧ್ಯಾತ್ಮ ಅಷ್ಟೆ ಅವಶ್ಯ” ಆತ್ಮೋನ್ನತಿಗೆ ಅವಶ್ಯವಾದ ಶಬ್ಧ ಸೋಪಾನವನ್ನು ವಚನ ಸಾಹಿತ್ಯದ ಮೂಲಕ ಕಟ್ಟಿಕೊಟ್ಟರು. ಆ ವಚನ ಸಾಹಿತ್ಯ ದೈವತ್ವವನ್ನು ಕರುಣಿಸುನ ಮಾರ್ಗವಾಗಿದೆ. ನಮ್ಮೆಲ್ಲರ ಮನದ ಮೈಲಿಗೆಯನ್ನು ಕಳೆದು, ಅಂತರಂಗದ ಅರಿವಿನ ಜ್ಯೋತಿಯ ಬೆಳಗಿಸುವ ನಂದಾದೀವಿಗೆಯಾಗಿದೆ.

ಡಾ|| ಬಸವರಾಜ ಸಬರದ ಅವರ “ವಚನ ಸಂಸ್ಕೃತಿ” ಕೃತಿಯಲ್ಲಿ: ಮಾನವನ ಮನೋಂಡಲದಲ್ಲಿ ಮೂಡುವ ಪ್ರತಿಯೊಂದು ಭಾವವು, ವಿಚಾರವು, ಕಲ್ಪನಯು, ಹೊರಗೆ ಬರಲು ಒಂದು ಯೋಗ್ಯ ವಾಹಕವು ಮತ್ತು ಅದು ವ್ಯಕ್ತವಾಗಲು ಒಂದು ಬಾಹ್ಯ ರೂಪವೂ ಬೇಕು, ಆ ವಾಹಕದ ಅಥವಾ ರೂಪದ ಮುಖಾಂತರವೇ ಆ ಭಾವವನ್ನು ಅಥವಾ ವಿಚಾರವನ್ನು ಮತ್ತೊಬ್ಬರಿಗೆ ವ್ಯಕ್ತ ಪಡಿಸಲು ಸಾಧ್ಯ. ಆ ವ್ಯಕ್ತ ರೂಪ, ಧರ್ಮ ಸ್ಪೂರ್ತಿಯಿಂದ, ವೈಜ್ಞಾನಿಕ ಅರಿವಿನಿಂದ, ಸಮಾನತೆಯ ತತ್ವದಿಂದ, ಸಾಮಾಜಿಕ ಕಳಕಳಿಯಿಂದ, ಶರಣರ ಅಂತರಾಕಾಶದಲ್ಲಿ ಉದಯಿಸಿದ ಉನ್ನತ ಭಾವವೇ ವಚನ ರೂಪದಿಂದ ಕಂಗೊಳಿಸುತ್ತಿವೆ. ನೀತಿ ನಿಯಮಗಳು ಇಲ್ಲಿ ಶರಣರ ಅಂತರಂಗದ ಅರಿವಿನ ಅನುಭವಗಳ ವ್ಯಕ್ತ ರೂಪ. ಎಂದು ವಚನಗಳ ಕುರಿತು ಅದ್ಭುತ ವ್ಯಾಖ್ಯಾನವನ್ನು ನೀಡಿದ್ದಾರೆ.

ಹೀಗೆ ವಚನ ಸಾಹಿತ್ಯವು ಧರ್ಮಮಾರ್ಗದಲ್ಲಿ ಅರಿವಿನ ಜ್ಯೋತಿ ಹಿಡಿದು, ವೈಚಾರಿಕತೆ ಮತ್ತು ಸಮಾನತೆಯ ಜೊತೆಗೆ ಸಾಮಾಜಿಕ ಕಳಕಳಿಯಿಂದ ಉದಯಿಸಿತು.

ಬಸವಾದಿ ಶರಣರು “ಕಾಯಕ ತತ್ವ ಮತ್ತು ದಾಸೋಹ” ಎನ್ನುವ ವಿಶಿಷ್ಠ ಪರಿಕಲ್ಪನೆಯ ಜೊತೆಗೆ “ಹಸಿವು ಮುಕ್ತ ಸಮಾಜ ನಿರ್ಮಾಣ” ಅವರ ಮುಖ್ಯ ಗುರಿಯಾಗಿತ್ತು. ಜೊತೆಗೆ ಎಲ್ಲಾ ಸ್ತರದ ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರುವದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವದು ಅವರ ಮುಖ್ಯ ಧ್ಯೇಯವಾಗಿತ್ತು.

ಇವೆಲ್ಲದರ ಜೊತೆಗೆ ಬಸವಣ್ಣನವರು ಮುಖ್ಯವಾಗಿ ಸ್ಪಂದಿಸಿದ್ದು ಸ್ತ್ರೀ ಸಂವೇದನೆಗೆ.

“SENSATION” ಎಂಬ ಆಂಗ್ಲಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಸಂವೇದನೆ ಎಂಬ ಪದವಿದೆ. ಸಂವೇದನೆ ಎಂದರೆ: ಅನಿಸುವಿಕೆ, ಮನಸ್ಸಿಗೆ ತಟ್ಟುವಿಕೆ, ಅನುಭವ, ಅರಿವು, ಹೊಳೆಯುವಿಕೆ, ಜ್ಞಾನ, ಭಾವನೆ, ಗ್ರಹಿಕೆ ಹೀಗೆ ನಾನಾ ಅರ್ಥಗಳಿವೆ.

“ಸಂವೇದನೆ” ಅಂದರೆ “ಯಾವುದೇ ಜನಾಂಗದ ಅಥವಾ ಯಾವುದೇ ವ್ಯಕ್ತಿಯ ಅಂತರಂಗದ ಅಳಲಿನ ಅಭಿವ್ಯಕ್ತಿಯೇ ಸಂವೇದನೆ” ಅಂದರೆ ಅರಿವು, ಭಾವನೆ, ಸಂಕಲ್ಪಗಳು, ಜ್ಞಾನ, ಅನುಭಾವ, ಇಚ್ಛಾಶಕ್ತಿಗಳ ಸಂಗಮವೇ ಸಂವೇದನೆ.

ನಾಗಭೂಷಣ ಸ್ವಾಮಿ ಅವರು: “ಯಾವುದೇ ಅನುಭವಕ್ಕೆ ವ್ಯಕ್ತಿಯೊಬ್ಬನ ವಿಶಿಷ್ಠವಾದ ಭಾವನಾತ್ಮಕ ಮತ್ತು ಬೌದ್ಧಿಕ ಪ್ರಕ್ರಿಯೆಯೆ ಸಂವೇದನೆ” ಎಂದಿದ್ದಾರೆ.

ನಮ್ಮ ಜಾನಪದರು ರಚಿಸಿದ ಜಾನಪದ ಸಾಹಿತ್ಯದಲ್ಲಿ ಸ್ತ್ರೀ ಯರ ಕುರಿತು ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನು ನೋಡುತ್ತೇವೆ. ಪ್ರತಿಯೊಂದು ಕೌಟುಂಬಿಕ ಸಂಬಂಧಗಳ ಕುರಿತು ಕೃಷಿ, ವ್ಯವಹಾರ ಮತ್ತು ತಮ್ಮ ನೋವು ನಲಿವಿನಿಂದ ಕೂಡಿದ ಭಾವಗಳು ಮತ್ತು ಇತರ ಎಲ್ಲಾ ಕಾಯಕದ ಜೊತೆಗೆ ಕಾವ್ಯವನ್ನು ಕಟ್ಟಿದವರು ನಮ್ಮ ಜಾನಪದರು.

ಹೆಣ್ಣು ಹಡೆಯಲು ಬೇಡ, ಹೆರವರಿಗೆ ಕೊಡಬೇಡ,
ಹೆಣ್ಣು ಹೋಗುವಾಗ ಅಳಬೇಡ|| ಹಡೆದವ್ವ
ಸಿಟ್ಟಾಗಿ ಶಿವನ ಬೈಬ್ಯಾಡ||”

ಎಂದು ಒಬ್ಬ ನೊಂದ ಜಾನಪದ ಸ್ತ್ರೀ ಹೇಳಿದರೆ, ಮತ್ತೊಬ್ಬರು

ಹೆಣ್ಣುಮಕ್ಕಳ ಬೇಡಿ, ಎಣ್ಣಿ ಹೋಳಿಗೆ ಮಾಡಿ,
ಬನ್ನಿಯ ಗಿಡಕ ಎಡಿಮಾಡಿ /ತಂಗೆವ್ವ,
ಹೆಣ್ಣಿಲ್ಲದವರ ಬಾಳು ಹಸನಲ್ಲ”

ಮತ್ತು

“ಹತ್ತು ಗಂಡು ಹಡೆದರೆ ಮತ್ತೆ ಬಂಜಿ ಎನ್ನುವರು,
ದಟ್ಟೀಯ ಉಡುವ ಧರಣೀಯ /ಹಡೆದರೆ
ಬಂಜೆತನವೆಲ್ಲಾ ಬಯಲಾಗಿ”

ಎಂದು ಹೆಣ್ಣಿಗಾಗಿ ಹಂಬಲಿಸಿದವರೂ ಇದ್ದಾರೆ. ಹೆಣ್ಣಿರದ ಪ್ರಪಂಚವನ್ನು ಕಲ್ಪನೆಮಾಡಿಕೊಳ್ಳಲೂ ಸಾಧ್ಯವಿಲ್ಲ. ಹೆಣ್ಣಿನ ಸೂಕ್ಷ್ಮ ಭಾವವನ್ನು ನಾವು ಜಾನಪದ ಸಾಹಿತ್ಯದಲ್ಲಿ ಅರಿಯಬಹುದು.

ಅತ್ಯಂತ ಕೆಳಸ್ತರದಲ್ಲಿದ್ದ ಸ್ತ್ರೀಯರ ಸ್ಥಾನಮಾನಗಳನ್ನು, ಜೊತೆಗೆ ಲಿಂಗ ತಾರತಮ್ಯಗಳನ್ನು ಅಳಿಸಿ ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿ ಅವರು ಎಲ್ಲದಕ್ಕೂ ಯೋಗ್ಯರು ಎಂಬುದನ್ನು ಸಾಬೀತುಪಡಿಸಿದವರು ನಮ್ಮ ಬಸವಾದಿ ಶರಣರು. ಇಡಿ ಜಗತ್ತಿನಲ್ಲಿಯೇ ಸೂತಕಗಳನ್ನು ಅಲ್ಲಗಳೆದು ಅವುಗಳನ್ನು ವೈಚಾರಿಕವಾಗಿ ಚಿಂತಿಸಿ, ಅರುಹಿನ ಕುರುಹಾದ ಇಷ್ಟಲಿಂಗವನ್ನು ಸ್ತ್ರೀಯರಿಗೂ ನೀಡಿ ಸಾಮೂಹಿಕವಾಗಿ ವಚನ ರಚನೆಯಲ್ಲಿ ತೊಡಗಿಸಿ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿ ಅವರ ಮುಕ್ತ ಪ್ರತಿಭೆಗೆ ನೀರೆರೆದು ಪೋಷಿಸಿವದರು ನಮ್ಮ ಬಸವಾದಿ ಶರಣರು.

ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ” ಎಂಬ ವಚನದ ಉಕ್ತಿ ಎಷ್ಟು ಸತ್ಯ. ಎಲ್ಲ ಸ್ತರದ ಶರಣರಿಗೂ ಮುಕ್ತವಾದ ಅವಕಾಶವನ್ನು, ಆತ್ಮವಿಶ್ವಾಸವನ್ನು ವೈಚಾರಿಕ ಪ್ರಜ್ಞೆಯನ್ನು, ಮೂಡಿಸಿದವರು ಅಪ್ಪ ಬಸವಣ್ಣನವರು.

ಶಿಕ್ಷಣ:
ಶಿಕ್ಷಣ ಅಂದರೆ ಕೇವಲ ಅಕ್ಷರಾಭ್ಯಾಸವಲ್ಲ.”ಅದೊಂದು ಅದ್ಭುತ ಕಲೆ. ಜ್ಞಾನ ಮತ್ತು ಕೌಶಲ್ಯಗಳ ಜೊತೆಗೆ ಸಾರ್ಥಕ ಬದುಕು ಕಟ್ಟಿಕೊಳ್ಳುವ ಕಲೆ”. “ಶಿಕ್ಷಣ ಸಾಮಾಜವನ್ನು ಜ್ಞಾನದ ಕಡೆಗೆ ಸಾಗಿಸುವ ಮಾನವೀಯ ಬೆಳಕು”. ಶಿಕ್ಷಣ ಸಂಪತ್ತನ್ನು ಗಳಿಸುವ ಸಾಧನವಾಗಬಾರದು, ಬಸವಣ್ಣನವರು ಎಲ್ಲಾ ಸ್ತರದ ಶರಣರಿಗೂ ಸ್ವಾಭಿಮಾನದ ಸ್ವತಂತ್ರವಾದ ಬದುಕನ್ನು ಕಟ್ಟಿಕೊಟ್ಟವರು. ಜೊತೆಗೆ ಕಾಯಕದಲ್ಲಿ ದೈವತ್ವವನ್ನು ಬೆರೆಸಿ ಸಾಮಾನ್ಯ ಮಾನವರನ್ನು ಶರಣ ಸ್ಥಲಕ್ಕೆ ಏರಿಸಿದ ಕೀರ್ತಿ ಅಪ್ಪ ಬಸವಣ್ಣನವರದು. ಅಕ್ಷರಾಭ್ಯಾಸ ಕೇವಲ ಉಪಜೀವನ್ನಕ್ಕಾದರೆ, ಬಸವಾದಿ ಶರಣರು ಕೊಟ್ಟ ಶಿಕ್ಷಣ ಅಂದಿನ ಶರಣರನ್ನು ಪರಮ್ಮೋನ್ನತ ಸ್ಥಾನಕ್ಕೇರಿಸಿ ಇತಿಹಾಸದಲ್ಲಿ ಅವರನ್ನು ಅಜರಾಮರಗೊಳಿಸಿತು.

ಯಾವುದನ್ನು ಪ್ರಶ್ನಿಸುವ ಸ್ವಾತಂತ್ರ್ಯವಿಲ್ಲದ ಸ್ತ್ರೀಯರು ಬಸವಣ್ಣನವರ ಅವಿಮುಕ್ತ ಕ್ಷೇತ್ರದಲ್ಲಿ, ಸಮಾಜದಲ್ಲಿ ತಮಗಾದ ಅನ್ಯಾಯ, ಅವಮಾನಗಳನ್ನು ಪ್ರಶ್ನಿಸತೊಡಗಿದರು. ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನಗಳನ್ನು ಕಂಡುಕೊಂಡರು.

ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ ?
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ ?
ಬೇರೊಂದಡಿಯಿಡದಿರು, ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಬಲ್ಲಡೆ.

ಎಂದು ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅರಿವು ಪಡೆಯಲು ಸ್ತ್ರೀ ಪುರುಷವೆಂಬ ಬೇದಭಾವವಿಲ್ಲ. “ಅರಿವಿಂಗೆ ಬೇರೊಂದೊಡಲುಂಟೆ ?” ಎಂದು ಪ್ರಶ್ನಿಸಿದಳು. ಎಲ್ಲ ರೀತಿಯ ಜ್ಞಾನ ಸಂಪಾದನೆಗೆ ಸ್ತ್ರೀಯೂ ಕೂಡ ಯೋಗ್ಯಳು, ಅವಳು ಎನೆಲ್ಲ ಜ್ಞಾನ ಸಂಪಾದಿಸಲು ಸಮರ್ಥಳು ಎಂಬುದನ್ನು ನಮ್ಮ ಶಿವಶರಣೆಯರು ತೋರಿಸಿಕೊಟ್ಟರು. ದಾಂಪತ್ಯಕ್ಕೆ ದೈವತ್ವವನ್ನು ತಂದು ಕೊಟ್ಟರು. ಸಮಾನತೆಯ ತತ್ವದ ಜೊತೆಗೆ ಅಜ್ಞಾನದ ಮಾಯೆಯನ್ನು ಸ್ವಸಾಮರ್ಥ್ಯದಿಂದ ಗೆದ್ದು, ಹೆಣ್ಣು ,ಹೊನ್ನು, ಮಣ್ಣು ಮಾಯೆ ಎಂಬ ಮಾತನ್ನು ಹುಸಿಗೊಳಿಸಿ ಮಾಯೆಗೆ ಹೊಸ ಅರ್ಥವನ್ನು ಕಲ್ಪಿಸಿದರು.

ಪುರುಷನ ಮುಂದೆ ಮಾಯೆ, ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.
ಸ್ತ್ರೀಯ ಮುಂದೆ ಮಾಯೆ, ಪುರುಷನೆಂಬ ಅಭಿಮಾನವಾಗಿ ಕಾಡುವುದು.
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ, ಮರುಳಾಗಿ ತೋರುವುದು.
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ”

ಎಂದು ಮಾಯೆಯ ಕುರಿತು ಅದ್ಭುತ ವ್ಯಾಖ್ಯಾನವನ್ನು ವೀರವಿರಾಗಿಣಿ ಶರಣೆ
ಅಕ್ಕಮಹಾದೇವಿಯವರು ನೀಡಿದರು.. ಮಾಯೆ ಅಜ್ಞಾನದ ಪ್ರತೀಕವಾದರೆ, ಅಭಿಮಾನ ಅಹಂಕಾರದ ಪ್ರತೀಕ. ಶರಣರು ಲೋಕದ ಮಾಯೆಯ ಜಯಿಸಿ ಅಭಿಮಾನವನ್ನು ಮೀರಿನಿಂದವರು.

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ?
ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ ಅಮರೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ.

ಬಡತನವನ್ನು ಮೀರಿ ನಿಂತು, ಯಾರ ಹಂಗೂ ಇಲ್ಲದೆ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡವರು ನಮ್ಮ ಶರಣೆಯರು. ಅಂಗಕ್ಕೆ ಬಡತನವಿದ್ದರೂ ಅದರ ನಂಟು ಮನಕ್ಕೆ ಅಂಟಲಿಲ್ಲ. ವೃತ ನಿಷ್ಟೆಯಿಂದ ಮನವನ್ನು ಗಟ್ಟಿಗೊಳಿಸಿದರು. ಬೃಹದಾಕಾರದಲ್ಲಿದ್ದ ಸಮಾಜದ ಸಮಸ್ಯಗಳನ್ನು ಅಂತರಂಗದ ಅರಿವಿನ ಅಗ್ನಿಯಿಂದ ಸುಟ್ಟು ಭಸ್ಮಮಾಡಿದರು. ಅಂತರಂಗದ ಸೌಂದರ್ಯವನ್ನು ಮೆರೆದರು.

ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ
ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ
ಬೇಗ ಹೋಗು ಮಾರಯ್ಯಾ.

ಎಂದು ಎಚ್ಚರಿಸಿ ಕಾಯಕ ಪ್ರಜ್ಞೆಯ ಜೊತೆಗೆ ಸಮಯ ಪ್ರಜ್ಞೆಯನ್ನು ಮೆರೆದವರು ನಮ್ಮ ಶರಣೆಯರು.

ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.
ವೃತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ

ಕೊಟ್ಟಣದ ಸೋಮಮ್ಮನ ಈ ವಚನದಲ್ಲಿ ಬದುಕಿನ ಹದವರಿತು ವೈಚಾರಿಕತೆಯ ಮಾರ್ಗದಲ್ಲಿ ನಡೆದು ವೃತ ನೇಮಗಳನ್ನು ನಿಷ್ಠೆಯಿಂದ ಪಾಲಿಸಿದವರು ನಮ್ಮ ಶರಣೆಯರು.

ಶರಣೆ ಸತ್ಯಕ್ಕ:

ಲಂಚವಂಚನಕ್ಕೆ ಕೈಯಾನದಭಾಷೆ. ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ, ನಾನು ಕೈ ಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಅದೇನು ಕಾರಣವೆಂದರೆ, ನೀವಿಕ್ಕಿದ ಬಿಕ್ಷದಲ್ಲಿಪ್ಪೆನಾಗಿ. ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ. ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.

ಪ್ರಸ್ತುತ ವಚನದಲ್ಲಿ ನಮ್ಮ ಶರಣೆಯರ ಪ್ರಮಾಣಿಕ ಬದುಕನ್ನು ಮತ್ತು ಅವರ ನೇರ ನಿಷ್ಟುರ ನುಡಿಗಳನ್ನು, ಅವರ ಆತ್ಮವಿಶ್ವಾಸವನ್ನು ನೋಡಬಹುದು.

* ಸಮಾಜದ ಪ್ರತಿಷ್ಠಿತ ಜನರು ದೇವರು, ಧರ್ಮ, ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಂಡರು. ಇದರ ವಿರುದ್ಧ ಎಷ್ಟೇ ಕಾನೂನುಗಳು ಬಂದಿದ್ದರೂ ಸಂಪೂರ್ಣವಾಗಿ ಮೌಢ್ಯದಿಂದ ಕೂಡಿದ, ಅವೈಜ್ಞಾನಿಕ ಸಂಪ್ರದಾಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಅರಿವು ಜಾಗೃತವಾಗದ ಹೊರತು ಇಂತಹ ಸಂಪ್ರದಾಯಗಳು ರಾಜಾರೋಷವಾಗಿ ಮುನ್ನಡೆಯುತ್ತಲೇ ಇರುತ್ತವೆ. ಸಂಪ್ರದಾಯಗಳನ್ನು ಅರಿತು ಆಚರಿಸೋಣ.

ಎಲ್ಲಾ ಸ್ಥರದವರು ನುಡಿದಂತೆ ನಡೆದು, ಎಲ್ಲ ಸಾಮಾಜಿಕ ತಲ್ಲಣಗಳನ್ನು ಎದುರಿಸಿ, ಮುಂದಿನ ಸಮಾಜಕ್ಕೆ ಎಲ್ಲರ ಹೃದಯದಲ್ಲಿ ಧೈರ್ಯದ ದೀವಿಗೆಯನ್ನು ಹೊತ್ತಿಸಿ, ನಾಡಿಗೆ ಅನುಪಮ ಸಿದ್ಧಾಂತ ನೀಡಿದವರು ನಮ್ಮ ಶರಣೆಯರು. ಇವರು ಹಾಕಿಕೊಟ್ಟ ಹೆದ್ದಾರಿಯಲ್ಲಿ ಹೆಮ್ಮೆಯಿಂದ ಮುನ್ನಡೆಯೋಣ.

ಸವಿತಾ, ಮಾಟೂರ. ಇಲಕಲ್ಲ
7892710782.

Don`t copy text!