ಅಕ್ಕನೆಡೆಗೆ ವಚನ – 12 (ವಾರದ ವಿಶೇಷ ವಚನ ವಿಶ್ಲೇಷಣೆ)
ಕಲ್ಯಾಣವೆಂಬ ಕೈಲಾಸದ ಬೆರಗು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನಾ.
ಹನ್ನೆರಡನೇ ಶತಮಾನದ ಶರಣರು ಬದುಕಿದ ರೀತಿ ಅನನ್ಯ. ಅಂದು ಬಸವಾದಿ ಶರಣರ ಸಮಾಜೋದ್ಧಾರಕ ಕೆಲಸಗಳು, ಎಲ್ಲಾ ದಿಕ್ಕುಗಳಿಗೂ ತಲುಪಿತು. ಅಂತೆಯೆ ಶಿವಮೊಗ್ಗ ಜಿಲ್ಲೆಯ ಉಡುತಡಿಯಿಂದ ಕಲ್ಯಾಣಕ್ಕೆ ಬಂದ ಅಕ್ಕಮಹಾದೇವಿಗೆ ಬಸವಣ್ಣನನ್ನು ಕಾಣುವ ತವಕ ತೀವ್ರವಾಗಿ ಕಾಡುತ್ತದೆ.
ಕೌಶಿಕ ಮಹಾರಾಜನನ್ನು ಧಿಕ್ಕರಿಸಿ, ಆಧ್ಯಾತ್ಮಿಕ ಆಲೋಚನೆ ಇಟ್ಟುಕೊಂಡು ಅಕ್ಕ ಹೊಸ ಹಾದಿ ಹಿಡಿದಿದ್ದಳು. ಅವಳಲ್ಲಿ ಉಂಟಾದ ಆತ್ಮಸಾಕ್ಷಾತ್ಕಾರಕ್ಕೆ ಅಗ್ನಿಪರೀಕ್ಷೆಯ ಅಗತ್ಯವಿತ್ತು. ಎಲ್ಲವನ್ನೂ ನಿರಾಕರಿಸಿ ಅಲೌಕಿಕ ಗಂಡ ಚೆನ್ನಮಲ್ಲಿಕಾರ್ಜುನನನ್ನು ಕಾಣುವ ಉದ್ದೇಶದ ಸ್ಪಷ್ಟತೆ ಬೇಕಾಗಿತ್ತು. ಇಲ್ಲದೇ ಹೋದರೆ ಅವಳ ನಿಲುವು ಹಾಸ್ಯಾಸ್ಪದ ಅನಿಸಿಬಿಡುವ ಅಪಾಯವಿತ್ತು. ಅಲೌಕಿಕ ಮಾರ್ಗದ ಆಶಯಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡ ಬಸವಾದಿ ಶರಣರು, ಅದರಲ್ಲೂ ವಿಶೇಷವಾಗಿ ಅಲ್ಲಮಪ್ರಭುವಿನ ಸಮ್ಮತ ಅಕ್ಕನಿಗೆ ಅಗತ್ಯವಿತ್ತು.
ಅನುಭವ ಮಂಟಪದ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರ ತನ್ನ ಹುಡುಕಾಟ ಸಾರ್ಥಕ ಎಂಬುದನ್ನು ಅಕ್ಕ ಅರಿತವಳಾಗಿದ್ದಳು. ಅವಳ ಅರಿವಿಗೆ ಅಣ್ಣನ ಒಪ್ಪಿಗೆಯ ಮುದ್ರೆ ಮತ್ತು ಅಲ್ಲಮನ ಅನುಗ್ರಹದ ಅಗತ್ಯವೂ ಇತ್ತು. ತನ್ನ ಅಲೌಕಿಕ ಗಂಡನನ್ನು ಹುಡುಕಿ ಕೊಡಲು ಸಮರ್ಥರಿರುವ ಶರಣರ ಸಾಮಿಪ್ಯ ಅವಳ ತುಡಿತವಾಗಿತ್ತು. ತಾನು ಅಂದುಕೊಂಡಿದ್ದಕ್ಕಿಂತ ಮಿಗಿಲಾದ ಲೋಕವನ್ನು ಅಕ್ಕ ಕಂಡು ಹರ್ಷಿತಳಾಗುತ್ತಾಳೆ. ಈ ಎಲ್ಲ ಕಾರಣಗಳಿಂದ ಅಣ್ಣನ ಕಾಣುವ ಹಂಬಲ ಈಡೇರಿಸಿಕೊಳ್ಳುವ ಮೂಲ ಆಶಯ ಇಲ್ಲಿದೆ.
ಇಂದು ಬೀದರ ಜಿಲ್ಲೆಯಲ್ಲಿರುವ ಬಸವ ಕಲ್ಯಾಣ ತಾಲೂಕು, ಅಂದಿನ ಶರಣರು ನಡೆದಾಡಿದ ಕಲ್ಯಾಣ. ಅಂದು ಬಸವಣ್ಣ ಹೊಸ ಸಮಾಜ ಕಟ್ಟುವ ಕಾರ್ಯಕ್ಕೆ ಕೈ ಹಾಕಿ ಸಫಲರಾಗಿರುತ್ತಾರೆ. ಹೊಸ ಆಲೋಚನೆ, ಹೊಸ ಚಿಂತನೆ, ಹೊಸ ನುಡಿ, ಹೊಸ ನಡೆ, ಜನರಲ್ಲಿ ಆಳವಾದ ಪ್ರಭಾವ ಬೀರಿತು. ದೇವರ ಪರಿಕಲ್ಪನೆ, ಜಾತಿ ವ್ಯವಸ್ಥೆ, ಸ್ತ್ರೀ ಸಮಾನತೆ, ಇಂತಹ ಮೂಲ ಬದಲಾವಣೆ ತರುವುದರೊಂದಿಗೆ, ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ಸಂಚಲನ ಮೂಡಿಸಿದರು.
ರಾಜಾಶ್ರಯದಲ್ಲಿದ್ದ ಸಾಹಿತ್ಯ ಸಾಮಾನ್ಯ ಜನರನ್ನು ಸರಳ ಕನ್ನಡವಾಗಿ ತಲುಪಿತು. ಅನುಭವ ಮಂಟಪದಲ್ಲಿ ಗಂಭೀರ ಚರ್ಚೆ ನಡೆದು, ವಚನ ಸಾಹಿತ್ಯದ ಭಂಡಾರವೇ ಸಿದ್ಧವಾಯಿತು. ಹಾಗೆಯೆ ಸಾಮಾನ್ಯ ಜನರನ್ನೂ ತಲುಪಿತು.
‘ದಯವೇ ಧರ್ಮದ ಮೂಲವಯ್ಯ’
‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’
‘ನುಡಿದರೆ ಮುತ್ತಿನ ಹಾರದಂತಿರಬೇಕು’
‘ಎನಗಿಂತ ಕಿರಿಯರಿಲ್ಲ’
‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯಾ’
ಇಂತಹ ವಚನದ ಸಾಲುಗಳು ಗಾಢ ಪ್ರಭಾವ ಬೀರಿದವು. ಇದರ ಪ್ರತಿಫಲವೇ ಅನೇಕ ದಿಕ್ಕುಗಳಿಂದ ರಾಜ ಮಹಾರಾಜರು ಮತ್ತು ಸಾಮಾನ್ಯ ಜನರು ಶರಣ ತತ್ವಕ್ಕೆ, ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರು ಹೋಗಿ, ಕಲ್ಯಾಣದ ಕಡೆ ಹರಿದು ಬಂದರು. ‘All great people think alike’ ಎನ್ನುವಂತೆ, ಎಲ್ಲರ ಆಲೋಚನಾ ಕ್ರಮ ಸಮಾನವಾಗಿತ್ತು. ಗುರು, ಲಿಂಗ, ಜಂಗಮ, ಕಾಯಕ, ದಾಸೋಹ, ಪ್ರಸಾದ, ಅರಿವು, ಆಚಾರ, ಲಿಂಗಾಂಗ ಸಾಮರಸ್ಯ ಮುಂತಾದ ನೆಲೆಗಳಲ್ಲಿ ವಚನಗಳು ರಚನೆಯಾದವು. ಅವುಗಳಲ್ಲಿ ‘ಕಾಯಕವೇ ಕೈಲಾಸ’ ಎನ್ನುವುದೇ ಮೂಲ ಮಂತ್ರವಾಯಿತು. ಇಂತಹ ಬಸವಾದಿ ಶರಣರ ಕುರಿತು ಕೇಳಿದ್ದ ಅಕ್ಕನಿಗೆ ಕಲ್ಯಾಣವು ಕೈಲಾಸಕ್ಕೆ ಸಮಾನವಾಗಿ ಕಾಣುವುದಷ್ಟೇ ಅಲ್ಲ ಕೈಲಾಸವೇ ಕಲ್ಯಾಣ ಆಗಿತ್ತು.
ಅಕ್ಕನಿಗೆ ದೇಹದ ಕುರಿತು ಸ್ಪಷ್ಟ ನಿಲುವಿತ್ತು. ಅದನ್ನು ವಚನದಲ್ಲಿ ಹೀಗೆ ವ್ಯಕ್ತಪಡಿಸಿದ್ದಾಳೆ,
‘ಕಾಯ ಕರ್ರನೆ ಕಂದಿದಡೇನು?
ಕಾಯ ಮಿರ್ರನೆ ಮಿಂಚಿದಡೇನು?
ಚೆನ್ನಮಲ್ಲಿಕಾರ್ಜುನನಿಗೊಲಿದ ಕಾಯ ಹೇಗಿದ್ದಡೇನು’
ಹೀಗೆ ದೇಹಾತೀತಳಾಗಿ, ಇಹದ ವ್ಯಾಮೋಹಗಳ ತೊರೆದು, ಕೌಶಿಕ ಮಹಾರಾಜನನ್ನು ಮೂರು ಶರತ್ತುಗಳಿಂದ ಪರಾಭವಗೊಳಿಸಿ, ರಾಜ ವೈಭವ ಧಿಕ್ಕರಿಸಿ, ಕಲ್ಯಾಣದ ಹೆಬ್ಬಾಗಿಲಿಗೆ ಬಂದು ನಿಂತಾಗ, ಪ್ರತಿಯೊಬ್ಬ ಶರಣರ ಕಾಯದೊಳಗೊಂದು ಕಲ್ಯಾಣ ಗೋಚರಿಸುತ್ತದೆ. ಆಗ ತನ್ನ ಒಳಗೂ, ಹೊರಗೂ ಕಲ್ಯಾಣ ದರ್ಶನವಾದ ಭಾವ ಮೂಡುತ್ತದೆ.
‘ಇದರ ಅಂತುವನು ಯಾರು ಬಲ್ಲರು ಅಯ್ಯಾ?’ ಈ ಸಾಲಿನ ‘ಅಂತು’ ಎಂದರೆ ಗುಟ್ಟು. ಕಲ್ಯಾಣದಲ್ಲಿ ಎಲ್ಲೆಲ್ಲಿಂದಲೋ ಬಂದು ಸೇರಿರುವ ಶರಣರು, ತಮ್ಮ ವೃತ್ತಿಯನ್ನೇ ಕಾಯಕವಾಗಿಸಿಕೊಂಡು, ಅದರಿಂದಲೇ ಗುರುತಿಸಿಕೊಂಡರು. ದುಡಿದದ್ದನ್ನು ದಾಸೋಹದಲ್ಲಿ ವಿನಿಯೋಗಿಸಿ, ಮಹಾಮನೆಯ ಪ್ರಸಾದವಾಗಿಸಿದರು. ಅನುಭವ ಮಂಟಪದಲ್ಲಿ ವಿಚಾರ ವಿನಿಮಯ ನಡೆದು, ಸಮಾನತೆ, ಶಾಂತಿ, ಸೌಹಾರ್ದ ಬದುಕನ್ನು ಕಟ್ಟಿಕೊಂಡರು. ಇಂತಹ ಶರಣರ ಬದುಕಿನ ಗುಟ್ಟು ಏನಿರಬಹುದು? ಶರಣ ಸಂಸ್ಕೃತಿ, ತತ್ವಗಳೇ ಕಾರಣ, ಅದೇ ಅದರ ಗುಟ್ಟು.
ಅಕ್ಕನಲ್ಲಿ ಶರಣರ ನಡೆ ನುಡಿ, ಆಚಾರ ವಿಚಾರ, ಅನುಭವ ಅನುಭಾವ, ಎಲ್ಲವನ್ನೂ ಕೇಳಿ ತಿಳಿದುಕೊಳ್ಳುವ ಆಸೆ. ಇದಕ್ಕೆ ಕಾರಣರಾದ ಬಸವಣ್ಣನನ್ನು ಕಾಣುವ ತೀವ್ರ ಹಂಬಲ. ಕಲ್ಯಾಣದ ಹೆಬ್ಬಾಗಿಲಲ್ಲಿ ನಿಂತ ಅಕ್ಕನ ಮನಸಿನ ಪ್ರತಿಬಿಂಬವೇ ಈ ವಚನ.
ಸಿಕಾ