ತನು ಮನದ ಭಾವದಲೆಯಲಿ ಲಿಂಗಪೂಜೆ…

ಅಕ್ಕನೆಡೆಗೆ-ವಚನ – 14 (ವಾರದ ವಿಶೇಷ ಬರಹ)

ತನು ಮನದ ಭಾವದಲೆಯಲಿ ಲಿಂಗಪೂಜೆ…

 

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ.

ಹನ್ನೆರಡನೇ ಶತಮಾನದ ಶಿವಶರಣರು ಸಮಾಜೋದ್ಧಾರಕ ಕಾರ್ಯಗಳನ್ನು ಮಾಡುತ್ತ,‌ ಬದುಕು ಕಟ್ಟಿಕೊಂಡು ಮಾದರಿಯಾದದ್ದು ಇತಿಹಾಸ. ಅವರ ಮುಖ್ಯ ಆಶಯಗಳು ಪ್ರಮುಖವಾಗಿ ಮೂರು, ಒಂದು ಏಕದೇವೋಪಾಸನೆ, ಎರಡು ವರ್ಣ ವ್ಯವಸ್ಥೆಯ ಜಾತಿ ನಿರ್ಮೂಲನೆ ಮತ್ತು ಸ್ತ್ರೀ ಸ್ವಾತಂತ್ರ್ಯ.

ಬಸವಣ್ಣನವರ ದೇವರ ಪರಿಕಲ್ಪನೆ ವಿಶಿಷ್ಠವಾದುದು. ಗುಡಿ ಗುಂಡಾರಗಳ ನಿರಾಕರಿಸಿದ ಕಾಲಘಟ್ಟ. ಅಂದು ಮೇಲ್ವರ್ಗದವರ ಅಟ್ಟಹಾಸದಲ್ಲಿ ಕೆಳವರ್ಗದವರು ದನಿ ಕಳೆದುಕೊಂಡ ಸಂದರ್ಭ. ಅಂತಹ ಸಮಯದಲ್ಲಿ ಬಸವಣ್ಣನವರು ಏಕದೇವೋಪಾಸನೆಯ ರೂಪದಲ್ಲಿ ಇಷ್ಟಲಿಂಗದ ಪರಿಕಲ್ಪನೆಯನ್ನು ಜನರಲ್ಲಿ ಮೂಡಿಸಿದ್ದು ಮಾನವೀಯತೆಯ ಸಂಕೇತ. ಸ್ಥಾವರ ಲಿಂಗಕ್ಕಿಂತಲೂ ಅಂಗೈ ಲಿಂಗವೇ ಶ್ರೇಷ್ಠ ಎನ್ನುವ ಸ್ಪಷ್ಟತೆ. ‘ದೇಹವೇ ದೇವಾಲಯ’ ಎಂದು ಹೇಳುತ್ತ ದೇವಾಲಯಕ್ಕೆ ಹೋಗುವುದನ್ನು ನಿಷೇಧಿಸಲು ಸೂಕ್ಷ್ಮವಾಗಿ ಸೂಚಿಸಿದರು.

‘ದಯವೇ ಧರ್ಮದ ಮೂಲವಯ್ಯ’ ಎಂದು ಧರ್ಮದ ವ್ಯಾಖ್ಯಾನವನ್ನು ಹೊಸ ರೀತಿಯಲ್ಲಿ ನೀಡುತ್ತ ಜನಮನದಲ್ಲಿ ಪರಿವರ್ತನೆ ಬಯಸಿದರು. ಅನೇಕ ಸ್ಥಳಗಳಿಂದ ಕಲ್ಯಾಣಕ್ಕೆ ಬಂದ ಸಜ್ಜನರು ಶರಣ, ಶರಣೆಯರಾದರು. ಹಾಗೆ ಬಂದವರಲ್ಲಿ ಮಹಾದೇವಿ ಅಕ್ಕನೂ ಒಬ್ಬಳು. ಶರಣ ಸಮೂಹದಿಂದ ತನ್ನ ವೈರಾಗ್ಯದ ಶೋಧ ಮಾರ್ಗಕ್ಕೆ ಹೊಸ ಹೊಳವುಗಳು ದೊರೆಯುತ್ತವೆ ಎನ್ನುವ ತೀವ್ರತೆಯಿಂದ ಬರುತ್ತಾಳೆ.

ಈ ವಚನದಲ್ಲೂ ಅಕ್ಕ ಅಂತಹ ಮಹತ್ವದನ್ನೇ ಹೇಳ ಹೊರಟಿದ್ದಾಳೆ. ಬಸವಾದಿ ಶರಣರೆಲ್ಲಾ ಲಿಂಗ ಪೂಜೆಯನ್ನು ಒಪ್ಪಿಕೊಂಡ ಸಂದರ್ಭದಲ್ಲಿ ಹೇಳಿದ ವಚನವಿದು. ಲಿಂಗ ಪೂಜೆ, ಕಾಯಕದ ಮಹತ್ವ, ಮನದ ಶುದ್ಧತೆ, ದೇಹದ ಅಸ್ತಿತ್ವ, ಮಾತಿನ ಬದ್ಧತೆಯನ್ನು ಎತ್ತಿ ಹಿಡಿಯುವ ಅಪರೂಪದ ವಚನ.

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು’

ಮಜ್ಜನವೆಂದರೆ ದೇವರಿಗೆ ಮಾಡಿಸುವ ಸ್ನಾನ. ನೀರಿನಿಂದ ಎರೆಯುವುದು. ಇಲ್ಲಿ ಲಿಂಗ ಪೂಜೆಗೆ ಸಂಬಂಧಿಸಿದ ಮೊದಲ ವಿಧಿ ಎಂದಾಗುತ್ತದೆ.

ತನು ಕರಗದವರು ಎಂದರೆ ಯಾರು? ಶರಣರು ‘ಕಾಯಕವೇ ಕೈಲಾಸ’ ಎಂದು ದುಡಿಮೆಯಲ್ಲಿ ಶ್ರದ್ಧೆ, ಭಕ್ತಿ ಇಟ್ಟವರು. ಕಾಯಕದೊಳು ನಿರತನಾದೊಡೆ ಲಿಂಗ ಪೂಜೆಯನ್ನೂ ಮರೆಯ ಬೇಕೆಂದು ಹೇಳಿ ಹಾಗೇ ನಡೆದುಕೊಂಡರು. ತನುವನ್ನು ಕರಗಿಸುವುದು ಎಂದರೆ ಮೈ ಮುರಿದು ದುಡಿಯುವುದು ಎಂದರ್ಥ. ಯಾವ ವ್ಯಕ್ತಿ ತನ್ನ ಪಾಲಿನ ವೃತ್ತಿ, ಕೆಲಸ, ಕಸುಬನ್ನು ಮಾಡುವುದಿಲ್ಲವೋ ಅಂತಹ ವ್ಯಕ್ತಿಯಿಂದ ಲಿಂಗ ನೀರೆರೆಸಿಕೊಳ್ಳುವುದಿಲ್ಲ.

ಮನುಷ್ಯ ಸೋಮಾರಿಯಾಗದೆ ಕ್ರಿಯಾಶೀಲ ಬದುಕು ನಡೆಸಬೇಕು. ಹಾಗೆ ಬೆವರು ಸುರಿಸಿದವರು ಮಾತ್ರ ಲಿಂಗಕ್ಕೆ ಮಜ್ಜನ ಮಾಡುಬೇಕು ಎನ್ನುವ ಭಾವ ಇದರಲ್ಲಡಗಿದೆ.

ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು

ಮನುಷ್ಯ ಎಂದರೆ ಅಂತಃಕರಣದಿಂದ ಕೂಡಿದ ಜೀವ. ಮನ ಅಂದರೆ ನಮ್ಮೊಳಗಿನ ಮನಸು. ಅದು ಹೇಗಿರಬೇಕೆಂದರೆ, ಕಷ್ಟದಲ್ಲಿದ್ದವರಿಗೆ ಆಸರೆಯಾಗಿರಬೇಕು. ಅವರ ಆಪತ್ತಿಗೆ ಸಾಧ್ಯವಾದಷ್ಟು ಸ್ಪಂದಿಸುವ ಸರಳ, ವಿಶಾಲ ಮನಸ್ಸಿರಬೇಕು. ಅಂಥವರಿಂದ ಮಾತ್ರ ಲಿಂಗ ಹೂವುಗಳನ್ನು ಸ್ವೀಕರಿಸಲು ಸಾಧ್ಯ.

ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು

ಹದುಳರು ಎಂದರೆ ನಂಬಿಕೆಗೆ ಯೋಗ್ಯರಲ್ಲದವರು. ‘ನುಡಿದಡೆ ಮುತ್ತಿನ ಹಾರದಂತಿರಬೇಕು’ ಬಸವಣ್ಣ ಮಾತಿನ ರೀತಿಯ ಮಹತ್ವವನ್ನು ಹೇಳುತ್ತಾರೆ. ಹಾಗೆ ಒಳ್ಳೆಯ ಮಾತುಗಳ ಆಡುವ ರೂಢಿ ನಮ್ಮಲ್ಲಿರುವಂತಾಗಲಿ ಎನ್ನುವ ಆಶಯ. ಒಳ್ಳೆಯ ಮಾತುಗಳ ಹಿಂದೆ ಸದ್ವಿಚಾರಗಳು ಇರುತ್ತವೆ. ಸದ್ವಿಚಾರಗಳು ಸತ್ಕ್ರಿಯೆಗೆ ನಾಂದಿ. ಹಾಗೆ ನಾವು ಮಾಡುವ ಕೆಲಸಗಳು ಸಾತ್ವಿಕವಾದ್ದರೆ ಇತರರು ನಮ್ಮಲ್ಲಿ ನಂಬಿಕೆ ಇಟ್ಟು ಮುಂದುವರಿಯುತ್ತಾರೆ. ಹಾಗಾಗಿ ನಂಬಿಕೆಗೆ ಅರ್ಹರಲ್ಲದವರಿಂದ ಗಂಧ ಮತ್ತು ಅಕ್ಷತೆಯನ್ನು ಲಿಂಗಕ್ಕೆ ಅರ್ಪಿಸಲು ಸಾಧ್ಯವಿಲ್ಲ.

ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು’

ಆರತಿಯ ತಟ್ಟೆ ಅರಿಶಿನ, ಕುಂಕುಮ, ದೀಪಗಳು ಮತ್ತು ಹೂವುಗಳಿಂದ ಅಲಂಕೃತಗೊಂಡು ಲಿಂಗಕ್ಕೆ ಬೆಳಗಲು ಸನ್ನದ್ಧವಾಗಿರುತ್ತದೆ. ಅದನ್ನು ಕೈಯಲ್ಲಿ ಹಿಡಿದು ಬೆಳಗುವ ವ್ಯಕ್ತಿಯೊಳಗಿನ ಅಂತರಾತ್ಮ ಅರಿವಿನಿಂದ ಕಣ್ಣು ತೆರೆದಿರಬೇಕು.

ಇಲ್ಲಿ ಬಸವಣ್ಣನ ‘ಅರಿವೇ ಗುರು’ ಪರಿಕಲ್ಪನೆ ಹೆಚ್ಚು ಅರ್ಥಗರ್ಭಿತ. ತನ್ನ ತಾನರಿಯಬೇಕೆಂಬ ಶರಣರ ತತ್ವ ಸ್ವಯಂ ಶಕ್ತಿಯ ಆತ್ಮ ವಿಶ್ವಾಸದ ಮಾತು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅರಿವಿನಿಂದ ನಡೆಯಬೇಕು. ಅಂಥವರಿಂದಲೇ ಲಿಂಗಕ್ಕೆ ಆರತಿ ಬೆಳಗಿಸಿಕೊಳ್ಳಲು ಸಾಧ್ಯ.

ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು’

ಮನುಷ್ಯನ ಭಾವನೆಗಳು ಶುದ್ಧವಾಗಿರಬೇಕು. ಬಸವಣ್ಣ ಹೇಳುವಂತೆ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’.
ಹೀಗೆ ನಮ್ಮ ಬದುಕಿನ ಮಿತಿಗಳನ್ನು ಈ ಸಪ್ತ ಸೂತ್ರಗಳಲ್ಲಿ ಹೇಳಿದ್ದಾರೆ. ಈ ಎಲ್ಲಾ ಬೇಡಗಳು ಎನ್ನುವ ಮನುಷ್ಯನ ಮಿತಿಯನ್ನು ಮೀರಿ ನಡೆದಾಗ ಬದುಕು ಹಸನಾಗಲು ಸಾಧ್ಯ.

ಹಾಗೆಯೇ ಸೂಕ್ಷ್ಮವಾಗಿ ಹೇಳುವ ಅಕ್ಕನ ‘ಹೊರಗೂ ಕಲ್ಯಾಣ ಒಳಗೂ ಕಲ್ಯಾಣ’ದ ಪರಿಕಲ್ಪನೆಯೂ ಇದೇ ಆಗಿದೆ. ಸಮಾಜದಲ್ಲಿ ಸೋಗಲಾಡಿತನದ ಮುಖವಾಡ ಧರಿಸಿ, ಒಳಗೆ ಬೇರೆಯೇ ಆಲೋಚನೆ ಹೊಂದಿದವರು ಬಹಳ ಜನ ಎದುರಾಗುತ್ತಾರೆ. ಪ್ರಸ್ತುತದಲ್ಲಿ ಈ ಅನುಭವ ಹೇರಳ. ಇಂತಹ ಜನರನ್ನು ಭಾವ ಶುದ್ಧತೆ ಇಲ್ಲದವರೆಂದು ಶರಣರು ಕರೆದರು. ಯಾರ ಮನಸು ಮತ್ತು ಮಾತು ಒಂದೇ ಆಗಿರುತ್ತದೆಯೋ ಅವರು ಮಾತ್ರ ಲಿಂಗಕ್ಕೆ ಧೂಪ ಅಂದರೆ ಘಮಘಮಿಸುವ ಸಾಂಬ್ರಾಣಿ ಅಥವಾ ಲೋಬಾನ ಬೆಳಗಿಸಬಹುದು.

ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು

ನಮಗೆ ಎಲ್ಲವನ್ನು ಅನುಗ್ರಹಿಸಿದ, ನಮಗಿಂತಲೂ ಶಕ್ತಿಯುತವಾದ, ಆ ಇನ್ನೊಂದು ಶಕ್ತಿಯೇ ಪರಮಾತ್ಮ. ನಾವು ಪಡೆದದ್ದನ್ನೇ ಮತ್ತೆ ಅವನಿಗೆ ಅರ್ಪಿಸುವ ಮನೋಭಾವವೇ ಸಮರ್ಪಣೆ. ಹಾಗೆ ನಮ್ಮನ್ನ ನಾವು ಅರ್ಪಿಸಿಕೊಂಡು, ಅನ್ನ ಸೇವಿಸುವುದಕ್ಕೂ ಮೊದಲು ಅವನನ್ನು ನೆನೆದು ಸಮರ್ಪಿಸುವ ಆಹಾರವೇ ನೈವೇದ್ಯ.
ಯಾವ ವ್ಯಕ್ತಿ ಶಾಂತಿ, ಸಮಾಧಾನದಿಂದ ಇರುವನೋ ಅವನೇ ಪರಿಣಾಮಿ. ದೇಹ ಭಾವ ಶುದ್ಧತೆಯಿಂದ, ಮನ ಹತೋಟಿಯಲ್ಲಿರಿಸಿ, ಚಂಚಲತೆಯಿಂದ ದೂರ ಉಳಿದವರು, ಲಿಂಗಕ್ಕೆ ನೈವೇದ್ಯ ಅರ್ಪಿಸಲು ಯೋಗ್ಯ.

ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು’

‘ಕಾಯಾ ವಾಚಾ ಮನಸಾ’ ಅಂದರೆ ತ್ರಿಕರಣ. ಈ ದೇಹ, ಮನಸು, ಮಾತು ಎಂದರ್ಥ. ಇವುಗಳನ್ನು ಶುದ್ಧವಾಗಿರಿಸಿಕೊಳ್ಳಬೇಕು. ಮನಸು ಹೇಳಿದ್ದನ್ನು ಮಾತಿನಲ್ಲಿ ಹೊರಹಾಕಿ, ಆ ಮಾತಿನ್ನು ಉಳಿಸಿಕೊಂಡು, ನಡೆಯುವುದು.
ತಂಬೂಲವೆಂದರೆ ವೀಳ್ಯದೆಲೆ, ಅಡಿಕೆ, ಸುಣ್ಣ ಮುಂತಾದವುಗಳನ್ನು ಸೇರಿಸಿ ಊಟದ ನಂತರ ಸೇವಿಸುವ ಹಿತದ ಅನುಭವ. ದೇಹ, ಮನಸು, ಮಾತುಗಳ ಶುದ್ಧತೆ ಇಲ್ಲದವರಿಂದ, ಲಿಂಗಕ್ಕೆ ತಾಂಬೂಲ ಸ್ವೀಕೃತವಲ್ಲ.

ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು

ಇಲ್ಲಿ ಹೃದಯಕಮಲವೆಂದರೆ ಮನಸಿನೊಳಗಿನ ಬಯಲು. ಮನುಷ್ಯನ ಮನಸು ಹೂವಿನಂತೆ ಅರಳಿ ಸುಕೋಮಲ ಅವಸ್ಥೆಯನ್ನು ತಲುಪುತ್ತದೆ. ಮನದೊಳಗಿನ ಭಾವನೆಗಳಲ್ಲಿರುವ ದ್ವೇಷಾಸೂಯೆಗಳು ಕರಗಿ ಹೋಗುತ್ತವೆ. ನಿರ್ಮಲ, ನಿಶ್ಚಿಂತ ಮನವು ಲಿಂಗ ಧ್ಯಾನಕ್ಕೆ ಪ್ರಶಸ್ತ ಅವಕಾಶ. ಅಂತಹ ಮನಸುಗಳಲ್ಲಿ ಲಿಂಗವು ಚಿರಸ್ಥಾಯಿಯಾಗಿ ನೆಲೆಗೊಳ್ಳುತ್ತದೆ ಎನ್ನುವ ಭಾವ ಈ ಸಾಲಿನಲ್ಲಿದೆ.

ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ’

ಅಕ್ಕಮಹಾದೇವಿ ವೈರಾಗ್ಯದ ಪಥದ ಮೇರು ವ್ಯಕ್ತಿತ್ವ. ಅಂತಹ ಅಕ್ಕನಲ್ಲಿಯೂ, ‘ಎನಗಿಂತ ಕಿರಿಯರಿಲ್ಲ’ ಎನ್ನುವ ಭಾವ ಅಡಗಿದ ಸರಳತೆ. ತನ್ನ ಆರಾಧ್ಯ ದೈವ
ಚೆನ್ನಮಲ್ಲಿಕಾರ್ಜುನನನ್ನು ಪ್ರಶಿಸುತ್ತಾಳೆ. ‘ಹೇ ದೇವಾ ನನ್ನಲ್ಲಿ ನೀನು ಏನು ಕಂಡೆ ತಂದೆ? ನನ್ನ ಅಂಗೈಯಲ್ಲಿ ಬಂದು ಹೇಗೆ ನೆಲೆಸಿದೆ?’ ಇಲ್ಲಿ ಅಕ್ಕನಲ್ಲಿರುವ ಸಮರ್ಪಾಣಾ ಭಾವವೇ ಕಾಣುತ್ತದೆ. ಸರಳ, ವಿಧೇಯ, ವಿನಮ್ರ ಸ್ವಭಾವೇ ಸಮರ್ಪಣೆಯ ಗುಟ್ಟು. ಅದನ್ನು ಇಲ್ಲಿ ಗ್ರಹಿಸಲು ಸಾಧ್ಯ. ಲೌಕಿಕದ ಎಲ್ಲಾ ಅಸೆಗಳನ್ನು ತೊರೆದು, ಪಾರಮಾರ್ಥಿಕ ಪ್ರಪಂಚದಲ್ಲಿ ಪಯಣಿಸುತ್ತಿದ್ದರೂ ತನ್ನನ್ನು ತಾನೇ ಬಗೆದು ಶೋಧಿಸಿಕೊಳ್ಳುವ ಪ್ರಕ್ರಿಯೆಗೆ ಅಕ್ಕ ಅಂತ್ಯ ಹೇಳಲೇ ಇಲ್ಲ. ಸಜ್ಜನಿಕೆ ಎನ್ನುವುದನ್ನು ಇನ್ನಷ್ಟು ಒರೆಗೆ ಹೆಚ್ಚಿ ಹಚ್ಚಿ, ತನ್ನನ್ನು ತಾನು ಶುದ್ಧಗೊಳಿಸಿಕೊಳ್ಳುವ ಪ್ರಯತ್ನ ಈ ಸಾಲಿನಲ್ಲಿ ವೇದ್ಯವಾಗುತ್ತದೆ.

ಹನ್ನೆರಡನೇ ಶತಮಾನದಲ್ಲಿ ಇದೆಲ್ಲದಕ್ಕಿಂತಲೂ ಮಹತ್ವದ ಇನ್ನೊಂದು ಸಂಗತಿ ಇದೆ. ಆ ಸಾಮಾಜಿಕ ಪರಿವರ್ತನೆಯ ಕಾರ್ಯವು ಸ್ವಯಂ ವ್ಯಕ್ತಿಯ ಆಂತರಿಕ, ಬಾಹ್ಯ ಪರಿವರ್ತನೆಯಿಂದ (Transformation) ಸಾಧ್ಯವಾಯಿತು. ‘ಲಿಂಗಪೂಜೆ’ ಸಾಂಕೇತಿಕವಾದುದು ಎನ್ನುವ ಅರಿವು ಮುಖ್ಯ. ಅನೇಕರು ಲಿಂಗಪೂಜೆ ಎನ್ನುವ ಪ್ರಾಥಮಿಕ ಹಂತದಲ್ಲೇ ಉಳಿದರು. ಆದರೆ ಕೇಲವರು ಸ್ವಯಂ ಲಿಂಗವಾಗುವವರೆಗೆ ಊರ್ಧ್ವಮುಖಿಯಾದರು. ಶರಣರು ತಲುಪಿದ ಆ ಹಂತ, ನಮ್ಮ ಗ್ರಹಿಕೆಗೂ ಮೀರಿದ ಆಯಾಮ. ಹಾಗೆ ಪರಿವರ್ತನೆಗೊಂಡವರು ಸಾಮಾಜಿಕ ಏಳುಬೀಳುಗಳಿಗೆ ಸ್ಪಂದಿಸುತ್ತ, ಸಾಹಿತ್ಯದ ಮೂಲಕ ಅಭಿವ್ಯಕ್ತಿಸುತ್ತ, ವಚನಗಳ ರಚಿಸುತ್ತ, ಆಧ್ಯಾತ್ಮ ಲೋಕ ಪ್ರವೇಶಿಸಿದರು.

ಪ್ರಸ್ತುತದಲ್ಲಿ ನಿಂತು ಆಲೋಚಿಸಿದಾಗ, ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಸಂಗತಿಗಳಿಗೆಲ್ಲಾ ಮನುಷ್ಯನ ಮನಸ್ಸೇ ಕಾರಣ ಎನ್ನುವುದು ಸ್ಪಷ್ಟ. ಈ ಮನಸ್ಸು ಎಲ್ಲಕ್ಕೂ ಮೂಲ ಕಾರಣವೆಂದಾದರೆ, ಅದನ್ನೇ ಶುದ್ಧಗೊಳಿಸಿಕೊಳ್ಳುವುದು ಮೊದಲು ಆಗಬೇಕು. ಭಾವ ಶುದ್ಧಿಯಾದರೆ ಮನ ಶುದ್ಧಿ. ಮನ ಶುದ್ಧಿಯಾದರೆ ಶುದ್ಧ ಕಾಯಕ. ಇವೆಲ್ಲವನ್ನೂ ಮಾಡಿದ ನಂತರ ಸ್ವಚ್ಛ ಭಾರತ ಆಂದೋಲನದಲ್ಲಿ ಭಾಗಿಯಾಗುವುದು ಶ್ರೇಯಸ್ಸು. ಅದಕ್ಕಾಗಿ ನಾವು ಪ್ರಾಥಮಿಕ ಹಂತದಿಂದ ಮುಂದೆ ಸಾಗುವ ಪ್ರಯತ್ನ ಮಾಡುತ್ತಿರಬೇಕು. ಆಗ ಜೀವನ ಸಾರ್ಥಕ. ಅದಕ್ಕೆ ಅಕ್ಕನ ಈ ವಚನವೇ ಉದಾಹರಣೆ ಮತ್ತು ಮಾರ್ಗದರ್ಶಿ.

ಸಿಕಾ

Don`t copy text!