ಜನಪದರ ಸಿರಿದೇವಿ ” ಶೀಗವ್ವ”

ಜನಪದರ ಸಿರಿದೇವಿ ” ಶೀಗವ್ವ”

ಜನಪದ ಸಂಸ್ಕೃತಿ ಅತ್ಯಂತ ಸಂಪದ್ಭರಿತವಾದದ್ದು.ಜನಪದರು ಬದುಕಿನ ಸಂಪತ್ತು ಸಮೃದ್ಧಿಗೆ ಕಾರಣವಾದ ಭೂಮಿ, ಫಸಲು, ಪ್ರಕೃತಿಯನ್ನು ಸ್ಮರಿಸುವ,ಪೂಜಿಸುವ ಅದರ ಋಣ ತೀರಿಸುವ ಮಟ್ಟಿಗೆ ಅದರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವವರು .ನಿಸರ್ಗಕ್ಕೆ ಹತ್ತಿರವಾದ ಇವರು ನಿಸರ್ಗದಲ್ಲಿಯೇ ದೇವರನ್ನು ಕಾಣುವವರು.ಇವರಿಗೆ ಶಿಷ್ಟ ವರ್ಗದವರಂತೆ ಶ್ರೀಮಂತ ದೇವತೆಗಳ ಹಂಗಿಲ್ಲ.ತಮ್ಮ ಜೀವನಾವಶ್ಯಕ ವಸ್ತುಗಳಲ್ಲಿಯೇ ದೇವರನ್ನು ಕಾಣುವ ಸಂಸ್ಕೃತಿ ಇವರದು. ತಮ್ಮ ನಿತ್ಯ ಬದುಕಿನ ಅವಶ್ಯಕತೆ ಪೂರೈಸುವ ಪ್ರಕೃತಿಯ ಪ್ರತಿಯೊಂದು ವಸ್ತುಗಳು ಇವರ ಪಾಲಿಗೆ ದೇವರು. ಪ್ರಕೃತಿಯ ವಸ್ತುಗಳನ್ನು ಪೂಜಿಸುವ ಇವರು ತಮ್ಮ ನೋವು ನಲಿವು ಸಂಭ್ರಮಗಳನ್ನು ವ್ಯಕ್ತಪಡಿಸುವದು ಅದೆ ದೇವರುಗಳೊಂದಿಗೆ.ಆ ದೇವರುಗಳಿಗೆ ಸಂಬಂಧಿಸಿದಂತೆ ಆಚರಿಸುವ ಹಬ್ಬ ಹರಿದಿನಗಳು ಅವರ ಜೀವನದ ಅವಿಭಾಜ್ಯ ಅಂಗಗಳಾಗಿವೆ.

ಜನಪದರ ಮೂಲ ಉದ್ಯೋಗ ಕೃಷಿ ಅಥವಾ ಕೃಷಿಗೆ ಸಂಬಂಧಿಸಿದ್ದೆ ಆಗಿರುವುದರಿಂದ ಅವರಿಗೆ ದುಡಿಮೆ ನೀಡುವ ಭೂಮಿತಾಯಿ ತಾಯಿಗೆ ಸಮಾನಳು.ಹಾಗಾಗಿ ತುತ್ತು ನೀಡುವ ಭೂಮಿ ತಾಯಿಯನ್ನು ಆರಾಧಿಸುವ ಮನೋಭಾವ ಜನಪದರದ್ದು.ಅದಕ್ಕಾಗಿಯೇ ಜನಪದ ಗರತಿ,

” ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ

ಎಳ್ಳು ಜೀರಿಗೆ ಬೆಳೆಯೊಳ / ಭೂ ತಾಯಿನ

‌‌    ‌ ಎದ್ದೊಂದ ಗಳಿಗೆ ನೆನದೇನ ”

ಎಂದು ಎದ್ದ ತಕ್ಷಣ ಭೂಮಿ ತಾಯಿಯನ್ನು ನೆನೆಯುತ್ತಾಳೆ.ತಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿ ತಾಯಿಯನ್ನು ಸಂತೃಪ್ತಗೊಳಿಸಿದರೆ ಅವಳು ನಮ್ಮ ರಕ್ಷಣೆ ಮಾಡುತ್ತಾಳೆ ಎಂಬ ಅಚಲವಾದ ನಂಬಿಕೆ,ಶೃದ್ಧೆ ಅವರದು. ಅದಕ್ಕಾಗಿಯೇ ಭೂಮಿ ತಾಯಿಯನ್ನು ಕಾರಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸ್ಯೆಗಳಲ್ಲಿ ಗುಳ್ಳವ್ವ-ಬಸವಣ್ಣ,ನಾಗರ ಪಂಚಮಿಯಲ್ಲಿ ನಾಗಪ್ಪ, ಗಣೇಶ ಚತುರ್ಥಿಯಲ್ಲಿ ಗಣಪತಿ, ಜೋಕುಮಾರನ ಹುಣ್ಣುಮೆಗೆ ಜೋಕುಮಾರನ ಮತ್ತು ಶೀಗಿಹುಣ್ಣಮೆ ಗೌರಿಹುಣ್ಣಿಮೆ ಗಳಲ್ಲಿ ಶೀಗವ್ವ,ಗೌರವ್ವನ ಮಣ್ಣಿನ ಮೂರ್ತಿಗಳನ್ನು ಮಾಡಿ ವರ್ಷದಲ್ಲಿ ಐದು ಭಾರಿ ಮಣ್ಣಿನ ಆರಾಧನೆ ಮಾಡುತ್ತಾರೆ. ಈ ಐದು ಮಣ್ಣಿನ ಆಚರಣೆಗಳಲ್ಲಿ ಕೊನೆಯದಾಗಿ ಬರುವದು ಶೀಗವ್ವ ಮತ್ತು ಗೌರವ್ವನ ಹುಣ್ಣುಮೆಗಳು.ಜೋಕುಮಾರನು ಕೃಷಿಕರಿಗೆ ಕಷ್ಟ ಸುಖ ಹೇಳಿಕೊಳ್ಳುವ ದೇವರಾದರೆ ಮುಂಗಾರಿನ ಸುಗ್ಗಿ ಮುಗಿಯುತ್ತಾ ಹಿಂಗಾರಿನ ಬಿತ್ತನೆ ಆರಂಭಗೊಳ್ಳುವ ವೇಳೆ ಶೀಗಿಹುಣ್ಣಿಮೆಯಲ್ಲಿ ಬರುವ ಶೀಗವ್ವ ಅವರ ಪಾಲಿಗೆ ಸಂಭ್ರಮ ತರುವ ಸಿರಿದೇವಿ.ಮುಂಗಾರಿನ ಫಸಲಿಗೆ ಚರಗ ಚೆಲ್ಲಿ ಬಂದು ಸಂಭ್ರಮದಿಂದ ಶೀಗವ್ವನ ಆರಾಧನೆ ಮಾಡುತ್ತಾರೆ.

‌ ಅಶ್ವಯುಜ ಮಾಸದ ಪೂರ್ಣಿಮೆಯನ್ನು ಶೀಗಿಹುಣ್ಣಿಮೆ ಎಂದು ಕರೆಯುತ್ತಾರೆ. ಅಂದು ರೈತಾಪಿ ಹೆಣ್ಣುಮಕ್ಕಳ ಪಾಲಿಗೆ ಎರಡು ರೀತಿಯ ಸಂಭ್ರಮ. ಒಂದು ಹೊಲಕ್ಕೆ ಚರಗ ಚೆಲ್ಲುವದಾದರೆ ಮತ್ತೊಂದು ಶೀಗವ್ವನ ಆರಾಧನೆ. ಶೀಗವ್ವನ ಆರಾಧನೆ ಬನ್ನಿ ಮುಡಿಯುವ ಹಬ್ಬದಿಂದಲೆ ಪ್ರಾರಂಭವಾಗುತ್ತದೆ. ಸಾಡೆತೀನ್ ಮೂಹರ್ತಗಳಲ್ಲಿ ಒಂದೆಂದು ಎಲ್ಲ ರೀತಿಯ ಶುಭ ಕಾರ್ಯಗಳಿಗೆ ಅತ್ಯಂತ ಶ್ರೇಷ್ಠ ಎಂದು ಭಾವಿಸಲಾದ ವಿಜಯದಶಮಿ ದಿನದಂದು ಶೀಗವ್ವನನ್ಬು ಕೂಡಿಸಲಾಗುತ್ತದೆ(ಪ್ರತಿಷ್ಟಾಪನೆ). ಶೀಗವ್ವನನ್ನು ಎಲ್ಲರ ಮನೆಯಲ್ಲಿ ಕೂಡಿಸುವದಿಲ್ಲ‌.ಸಾರ್ವಜನಿಕ ಚಾವಡಿ, ಚಂದ್ರಸಾಲಿ,ಗುಡಿ,ಮಠ ಮತ್ತು ಸಂಪ್ರದಾಯ ಇರುವ ಮನೆಯಲ್ಲಿ ಮಾತ್ರ ಕೂಡಿಸಲಾಗುತ್ತದೆ.ವಿಜಯದಶಮಿ ದಿನ ಬನ್ನಿ ಮುಡಿದ ನಂತರ ಓಣಿಯ ಹೆಣ್ಣುಮಕ್ಕಳು ಸೇರಿ ಶೀಗವ್ವನನ್ನು ಕರೆತರಲು ಹೋಗುತ್ತಾರೆ. ಹೋಗುವಾಗ ಆರತಿ,ಪೂಜೆ ಸಾಮಾಗ್ರಿಗಳು, ಕುಂಬಾರರಿಗೆ ಕೊಡಲು ದವಸ (ಮೊದಲು ಜೋಳ ಕೊಡುತ್ತಿದ್ದರು ಈಗ ರೇಷನ್ ಅಕ್ಕಿ ಆ ಸ್ಥಾನ ಆಕ್ರಮಿಸಿಕೊಂಡಿದೆ.),ದಕ್ಷೀಣೆ ಮುಂತಾದವುಗಳನ್ನು ಒಯ್ಯೊತ್ತಾರೆ.ಕುಂಬಾರರ ಮನೆಯಲ್ಲಿ ತಿಗರಿಯಿಂದ ಸಿದ್ಧಗೊಳಿಸಿದ ಶೀಗವ್ವನ ಮೂರ್ತಿಗಳನ್ನು ಇಟ್ಟಿರುತ್ತಾರೆ. ಹೋದ ತಕ್ಷಣ ಅವರು ಕೊಡುವ ಎರಡು ಮಣ್ಣಿನ ಶೀಗವ್ವನ ಮೂರ್ತಿಗಳನ್ನು ಕೂಡುವ ಮನೆಯ ಮೇಲಿಟ್ಟು ಪೂಜೆ ಸಲ್ಲಿಸಿ, ಆರತಿ ಬೆಳಗಿ ಕುಂಬಾರರಿಗೆ ದವಸ ದಕ್ಷಿಣೆ ಕೊಟ್ಟು ,ದವಸ ತಂದ ಗಂಗಾಳದಲ್ಲಿಯೇ (ತಟ್ಟೆ) ಶೀಗವ್ವನನ್ನು ಇಟ್ಟುಕೊಂಡು ಬರುತ್ತಾರೆ.

ಬರುವಾಗ ಶೀಗವ್ವನನ್ನು ತರುವ ಮುತ್ತೈದೆ ಅತ್ಯಂತ ಜಾಗರೂಕತೆಯಿಂದ ತರುತ್ತಾಳೆ.ಶೀಗವ್ವನ ಮೂರ್ತಿಗೆ ಎನಾದರು ಧಕ್ಕೆ ಆದರೆ ಶೀಗವ್ವನನ್ನು ಕೂಡಿಸುವವರ ಮನೆಗೆ ಓಣಿಗೆ ಅಪಶಕುನ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಹೋಗುವಾಗಲೇ ಹಿರಿಯರು “ಶೀಗವ್ವನ ಜ್ವಾಕಿಲೆ ತಗೊಂಡ ಬರ್ರೆವ್ವಾ ” ಎಂದು ಎಚ್ಚರಿಕೆಯನ್ನು ಕೊಟ್ಟಿರುತ್ತಾರೆ. ಶೀಗವ್ವನ ತರುವವರಿಗೆ ತಮ್ಮ ಕೈ ಕಾಲು ಬಡಿಯಬಾರದೆಂದು ಉಳಿದವರು ಅವರಿಂದ ಸ್ವಲ್ಪ ದೂರವೇ ಇರುತ್ತಾರೆ.ಶೀಗವ್ವನನ್ನು ಕರೆ ತರುವದರೊಳಗಡೆ ಮನೆಯಲ್ಲಿ ಇರುವವರು ಕುಂಕುಮ ನೀರು, ನಿವಾಳಿ ಆರತಿ ಸಿದ್ದ ಮಾಡಿ ಇಟ್ಟುಕೊಂಡಿರುತ್ತಾರೆ.ಶೀಗವ್ವನನ್ನು ಕರೆ ತಂದ ತಕ್ಷಣ ಬಾಗಿಲ ಹೊರಗೆ ಅವರನ್ನು ನಿಲ್ಲಿಸಿ ಶೀಗವ್ವನನ್ನು ತಂದವರ ಕಾಲಿಗೆ ಕುಂಕುಮ ನೀರನ್ನು ಹಾಕಿ ,ನಿವಾಳಿ ಅರತಿ ಎತ್ತುತ್ತಾರೆ.ನಂತರ ಬಲಗಾಲು ಮೊದಲಿಟ್ಟು ಶೀಗವ್ವನನ್ನು ಕೂಡಿಸುವ ಮನೆ,ಮಠ ಪ್ರವೇಶ ಮಾಡುತ್ತಾರೆ.ಮನೆ ಇಟ್ಟು, ರಂಗೋಲಿ ಹಾಕಿ ಸಿದ್ದಗೊಳಿಸಿದ ಸ್ಥಳದಲ್ಲಿ ಶೀಗವ್ವನನ್ನು ಕೂಡಿಸಲಾಗುತ್ತದೆ.

ಶೀಗವ್ವನನ್ನು ಪ್ರತಿಷ್ಠಾಪನೆ ಮಾಡಿದ ನಂತರ ಐದು ದಿನ ಅವಳಿಗೆ ಆರತಿ ಬೆಳಗುವ ಕಾರ್ಯಕ್ರಮ ನಡೆಯುತ್ತದೆ. ಹುಣ್ಣಿಮೆ ಐದು ದಿನ ಇರುವಾಗಲೆ ಓಣಿಯ ಬಾಲಕಿಯರೆಲ್ಲ ಸೇರಿ ಐದು ದಿನ ಶೀಗವ್ವನನ್ನು ಕೂಡಿಸಿದ ಸ್ಥಳಕ್ಕೆ ಹೋಗಿ ಅವಳಿಗೆ ಆರತಿ ಬೆಳಗಿ ಬರುತ್ತಾರೆ.ಅವರು ಒಯ್ಯುವ ಆರತಿಯಲ್ಲಿ ವೈವಿಧ್ಯತೆಗಳಿವೆ.ಹಿತ್ತಾಳೆ ಆರತಿ,ಮಣ್ಣಿನ ಆರತಿ ಜೊತೆಗೆ ಕಣಕ,ಸವತಿಕಾಯಿ,ಮೆಕ್ಕಿಕಾಯಿ,ಬಾಳೆಹಣ್ಣಗಳನ್ನು ದೀಪದಂತೆ ಮಾಡಿ ಅದರಲ್ಲಿ ಕಡ್ಲಿಬತ್ತಿ ಇಟ್ಟು ದೀಪ ಹಚ್ಚಿಕೊಂಡು ಹೋಗುತ್ತಾರೆ. (ಇಂದು ಸ್ಟೀಲ್ ಆರತಿಗಳು ಆ ಸ್ಥಾನವನ್ನು ಅಕ್ರಮಿಸಿದ್ದು ಮುಂದೆ ಪ್ಲ್ಯಾಸ್ಟಿಕ್, ಪೈಬರ್ ಆರತಿಗಳು ಬಂದರು ಸಂಶಯವಿಲ್ಲ). ಆರತಿ ತಟ್ಟೆಯಲ್ಲಿ ಹೊಲದ ಬದುವಿನಲ್ಲಿ ಬೆಳೆಯುವ ಅವರಿ ಹೂವು, ಹೊನ್ನೆಕುಕ್ಕ,ಚೆಂಡು ಹೂವು ಮುಂತಾದ ಹೂವುಗಳನ್ನು ಇಟ್ಟುಕೊಂಡು ಹೋಗುತ್ತಾರೆ. ಹೋಗುವಾಗ ಬಾಲಕಿಯರ ದಂಡು ” ಒಂದು ಸೇರು ಎಣ್ಣಿಯ ತಂದಿನ ಶೀಗಿ ,ಒಂದ ದೀಪ ಬೆಳಗಿನ ಶೀಗಿ ,ಶೀಗವ್ವಗೆ ಎಕದಾರುತಿ,ಶೀಗವ್ವಗೆ ಬೆಳಗದಾರುತಿರೆ ” ಎಂದೋ ಅಥವಾ “ಒಂದು ಮಂಟಪದ ಕಂಬ ಅದಕ ಹೊಂದಿ ನಿಂತಾನೊ ಬಸವ ,ಬಸವಕ ಬಸವ ಎನ್ನಿರೊ ಬಸವನ ಪಾದಕ ಶರಣು ಎನ್ನಿರೊ ” ಮುಂತಾದ ಶೀಗವ್ವನನ್ನು ಕುರಿತಾದ ಜನಪದ ಹಾಡುಗಳನ್ನು ಹಾಡುತ್ತಾ ಹೋಗುತ್ತಾರೆ. ಇಲ್ಲಿ ಶೀಗವ್ವನ ಜೊತೆಗೆ ಉತ್ತಿ ಬಿತ್ತುವ ಕಾರ್ಯ ಮಾಡುವ ಬಸವನ ಸ್ಮರಣೆಯು ನಡೆಯುತ್ತದೆ. ಈ ಹಾಡು ಒಂದರಿಂದ ಹತ್ತರವರೆಗೆ ಮುಂದುವರೆಯುತ್ತದೆ. ನಂತರ ಶೀಗವ್ವನಿಗೆ ಹೂ ಎರಿಸಿ ಆರತಿ ಬೆಳಗಿದ ನಂತರ ಮತ್ತೆ ಶೀಗವ್ವನಿಗೆ ಸಂಬಂಧಿಸಿದ ಹಾಡು ಮಂಗಳಾರತಿ ಪದಗಳನ್ನು ಹಾಡುತ್ತಾರೆ.ಆರತಿ ಬೆಳಗಿ ಮನೆಗೆ ಬಂದ ನಂತರ ತೊಲಬಾಗಿಲ ಹೊಸ್ತಿಲಿಗೆ ,ಗ್ವಾದೆಲಿಯಲ್ಲಿರುವ (ದನದ ಕೊಟ್ಟಿಗೆ ) ಲಕ್ಷ್ಮೀಗೆ,ಆಕಳು ,ಎತ್ತುಗಳಿಗೆ ಆರತಿ ಬೆಳಗುತ್ತಾರೆ.ಜನಪದರಿಗೆ ಭೂಮಿ ತಾಯಿಯ ಜೊತೆಗೆ ಕೃಷಿಗೆ ಸಹಾಯ ಮಾಡುವ ಆಕಳು,ಎತ್ತು ಜೊತೆಗೆ ಪ್ರತಿಯೊಂದು ವಸ್ತುಗಳು ಪೂಜ್ಯನೀಯ ಆದವುಗಳು. ಈ ಪದ್ಧತಿ ಐದು ದಿನಗಳವರೆಗೆ ಮುಂದುವರೆಯುತ್ತದೆ.

ಐದನೆಯ ದಿನ ಬಾಲಕಿಯರಿಗೆ ಅತ್ಯಂತ ಸಂಭ್ರಮದ ದಿನ. ಕೊನೆಯ ದಿನವಾದ ಅಂದು ಎಲ್ಲ ಬಾಲಕಿಯರು ಸೀರೆ ಉಟ್ಟು ಆರತಿ ಬೆಳಗಲು ಹೋಗುತ್ತಾರೆ. ಅದಕ್ಕಾಗಿ ಅಂದು ಬಾಲಕಿಯರಿಗೆ ಸೀರೆ ಉಡುವ, ದಂಡೆ ಕಟ್ಟಿಕೊಳ್ಳುವ ಸಂಭ್ರಮವೊ ಸಂಭ್ರಮ. ಅವ್ವ,ಅಜ್ಜಿಯರ ಸೀರೆ ಉಟ್ಟು, ಅವರ ಬೊರಮಾಳ,ಗುಂಡುಸರ,ಪುತಳಿಸರ,ಟಿಕ್ಕೆಸರ ಹಾಕಿಕೊಂಡು, ಹಣೆಗೆ ಚೆಂಡು ಹೂವಿನ ದಂಡೆ ಕಟ್ಟಿಕೊಂಡು ಕೈಯಲ್ಲಿ ಆರತಿ ಹಿಡಿದು ಹೋಗುತ್ತಾರೆ. ಹೀಗೆ ತಯಾರಾದ ಬಾಲಕಿಯರು ಸಾಕ್ಷಾತ ಶೀಗವ್ವನಂತೆ ಗೊಚರಿಸುತ್ತಾರೆ.ಅಂದು ನಿತ್ಯದ ಆರತಿ ಜೊತೆಗೆ ಸಕ್ಕರೆ ಆರತಿಯನ್ನು ಒಯ್ಯುತ್ತಾರೆ. ಸಕ್ಕರೆಯ ಪಾಕದಿಂದ ಸಿದ್ಧಗೊಂಡ ಗೊಂಬೆಗಳನ್ನು ಆರತಿಯಲ್ಲಿ ಇಟ್ಟುಕೊಂಡು ಹೋಗುತ್ತಾರೆ. ಈ ಸಕ್ಕರೆ ಆರತಿಯನ್ನು ಸೋದರಮಾವ ತಂದು ಕೊಡುತ್ತಾರೆ. ಆರತಿ ಗೊಂಬೆಗಳಲ್ಲಿ ಯಾವುದೇ ಗೊಂಬೆಗಳಿದ್ದರು ಅದರಲ್ಲಿ ಆರತಿ ಮತ್ತು ತೇರಿನ ಗೊಂಬೆಗಳು ಕಡ್ಡಾಯವಾಗಿ ಇರಲೇಬೇಕು. ಆರತಿ ಮನೆಮಗಳ ಸಂಕೇತವಾಗಿ,ತೇರು ಗಂಡುಮಗನ ಸಂಕೇತವಾಗಿ ಮನೆಗೆ ಎರಡು ಮಕ್ಕಳಿರಬೇಕು ಎಂಬ ಭಾವದಿಂದ ಈ ಸಂಪ್ರದಾಯ ಬೆಳೆದು ಬಂದಿದೆ.ಹೆಣ್ಣುಮಕ್ಕಳು ಇಲ್ಲದವರು ಬೇರೆ ಬಾಲಕಿಯರ ಹತ್ತಿರ ಸಕ್ಕರೆ ಆರತಿ ಕಳುಹಿಸಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಾರೆ.ಶೀಗವ್ವನಿಗೆ ಆರತಿ ಬೆಳಗಿದ ನಂತರ ಒಂದೊ ಎರಡೊ ಗೊಂಬೆಗಳನ್ನು ಶೀಗವ್ವನ ಹತ್ತಿರ ಇಟ್ಟು ಬರುತ್ತಾರೆ.

ಇನ್ನೂ ಕೊನೆಯ ದಿನ ಹೆಣ್ಣುಮಕ್ಕಳು ಆರತಿಯಲ್ಲಿ ಸಕ್ಕರೆ ಗೊಂಬೆಗಳನ್ನು ಇಟ್ಟುಕೊಂಡು ಬರುತ್ತಿರಬೇಕಾದರೆ ಪುಂಡ ಪೊಕರಿ ಹುಡುಗರು ಆರತಿ ತಟ್ಟೆಯಲ್ಲಿರುವ ಗೊಂಬೆಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಮೋದಲೇ ಭಾರವಾದ ಸೀರೆ ಉಟ್ಟು, ಹಣೆಗೆ ಭಾರವಾದ ಚೆಂಡು ಹೂವಿನ ದಂಡೆ ಕಟ್ಟಿಕೊಂಡು, ಭಾರವಾದ ಸಕ್ಕರೆ ಆರತಿ ಹೊತ್ತು ನಿಧಾನವಾಗಿ ಹೆಜ್ಜೆ ಹಾರುತ್ತಿರುವ ಬಾಲಕಿಯರಿಗೆ ಗಂಡುಮಕ್ಕಳ ಕಿರಿಕಿರಿ ,ಉಪಟಳದ ಸಂಕಟ ಬೇರೆ.ಅಲ್ಲಿಯೇ ಇರುವ ದೊಡ್ಡವರು ಗಂಡು ಹುಡುಗರಿಗೆ ಬೆದರಿಸಿ ,ಬಡಿದು ಓಡಿಸುತ್ತಾರೆ. ಅಜ್ಜಿಯರೆನಾದರು ಇವರನ್ನು ನೋಡಿದರೆ ಹುಡುಗರಿಗೆ ಅವರ ಬಾಯಿಂದ ವಾಚಾಮಗೋಚರ ಬೈಗುಳ ಕಟ್ಟಿಟ್ಟ ಬುತ್ತಿ.

ಹುಣ್ಣುಮೆ ದಿನ ಹೆಣ್ಣುಮಕ್ಕಳು ಹೊಂಗೊಡಗಳನ್ನು ಬಿಡುವ ಪದ್ಧತಿಯು ಇದೆ.ಮಹಿಳೆಯರು ಮಡಿಕೆಗಳಿಗೆ ಸುತ್ತಲೂ ತೂತು ಕೊರೆದು ಅವುಗಳ ಸುತ್ತಲೂ ಕೆಮ್ಮಣ್ಣು ,ಸುಣ್ಣ ಹಚ್ಚಿ ಅವುಗಳಿಗೆ ಚೆಂಡು ಹೂವಿನ ಮಾಲೆ ಕಟ್ಟಿ ಅಲಂಕರಿಸುತ್ತಾರೆ. ನಂತರ ಅ ಮಡಕೆ ಮೇಲೆ ಮುಚ್ಚಳವನ್ನು ಇಟ್ಟು ಅದಕ್ಕೆ ಎಣ್ಣೆ ಸುರಿದು ದೀಪ ಹಚ್ಚುತ್ತಾರೆ. ವಾದ್ಯ ವೈಭವಗಳೊಂದಿಗೆ ಅವನ್ನು ಹೊತ್ತ ಮಹಿಳೆಯರು ಹತ್ತಿರದ ನದಿ, ಕೆರೆ,ಹಳ್ಳಗಳಿಗೆ ಹೋಗಿ ಅವುಗಳನ್ನು ಅಲ್ಲಿ ಪೂಜಿಸಿ ನೀರಿನಲ್ಲಿ ತೇಲಿ ಬಿಡುತ್ತಾರೆ.ದೀಪಗಳನ್ನು ಹೊತ್ತ ಆ ಮಡಕೆಗಳು ತೆಲುತ್ತ ಹೋಗುವಾಗ ದೀಪದ ಬೆಳಕಿನಿಂದ ಬಂಗಾರದ ಕೊಡದಂತೆ ಪ್ರಜ್ವಲಿಸುವದರಿಂದ ಅದಕ್ಕೆ ಹೊಂಗೊಡ ( ಹೊನ್ನಿನ ಕೊಡ ) ಎಂಬ ಹೆಸರು ಬಂದಿರಬಹುದು. ಇದೇ ವೇಳೆ ಚಿಕ್ಕ ಚಿಕ್ಕ ಬಾಲಕಿಯರು ರಾಮಾಯಣದೋ, ಮಹಾಭಾರತದೋ ಸೋಗು ಹಾಕಿ ಅವರೊಂದಿಗೆ ತೆರಳುತ್ತಾರೆ.

ಐದು ದಿನಗಳವರೆಗೆ ಹೆಣ್ಣುಮಕ್ಕಳೆಲ್ಲ ರಾತ್ರಿ ಹೊತ್ತು ಬೆಳದಿಂಗಳಿನಲ್ಲಿ ಅಂಗಳದಲ್ಲಿಯೊ,ಚಂದ್ರಸಾಲಿಯಲ್ಲಯೊ,ಚಾವಡಿಯಲ್ಲಿಯೊ  ಕುಳಿತು ಶೀಗವ್ವನ ಹಾಡು,ಪವಾಡ ಪುರುಷರ ಹಾಡು ದೇವರ ಹಾಡು ಜನಪದ ಹಾಡುಗಳನ್ನು ಹಾಡುವರು. ಜೊತೆಗೆ ಕೋಲಾಟ ಆಡುತ್ತಾರೆ.ಬೆಳದಿಂಗಳ ನಿಶಬ್ಧವಾದ ವಾತಾವರಣದಲ್ಲಿ ಒಂದು ಇವರ ಹಾಡು, ಆಟಗಳು ಒಂದು ಅದ್ಭುತ ಲೋಕವನ್ನೆ ಸೃಷ್ಟಿಸುತ್ತವೆ..

ಹುಣ್ಣುಮೆ ಮುಗಿದ ನಂತರ ಶುಕ್ರವಾರ, ಮಂಗಳವಾರ ಹೊರತುಪಡಿಸಿ ಶುಭ ಮೂಹರ್ತದಂದು ಶೀಗವ್ವನ ವಿಸರ್ಜನೆ ನಡೆಯುತ್ತದೆ. ಶೀಗವ್ವನ ವಿಸರ್ಜನೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ವ್ಯತ್ಯಾಸಗಳಿವೆ. ಕೆಲವು ಗ್ರಾಮಗಳಲ್ಲಿ ಮುತ್ತೈದೆಯರು ಹೊತ್ತೊಯ್ದ ಶೀಗವ್ವನನ್ನು ತಳವಾರರು ವಿಸರ್ಜನೆ ಮಾಡುತ್ತಾರೆ. ಕೆಲವು ಕಡೆ ಮುತ್ತೈದೆಯರೆ ಕೆರೆ ಹಳ್ಳ ಬಾವಿಗಳಲ್ಲಿ ವಿಸರ್ಜನೆ ಮಾಡುತ್ತಾರೆ.ಕೆರೆ ಹಳ್ಳ ಬಾವಿಗಳು ಬತ್ತಿರುವ  ಇಂದಿನ ದಿನಗಳಲ್ಲಿ ತಮ್ಮ ಕೈತೋಟದ ಗಿಡಗಳ ಕೆಳಗೆ ವಿಸರ್ಜನೆ ಮಾಡುವ ಪರಂಪರೆಯು ಬೆಳೆಯುತ್ತಿದೆ.

ಜಾಗತೀಕರಣದ ವ್ಯವಸ್ಥೆಯಲ್ಲಿ ಹಬ್ಬಗಳು ಮರೆಯಾಗುತ್ತಿವೆ.ಇದಕ್ಕೆ ಶೀಗಿಹುಣ್ಣಿಮೆಯು ಹೊರತಲ್ಲ.ಬಹುತೇಕ ನಗರ, ಪಟ್ಟಣ ಪ್ರದೇಶದಲ್ಲಿ ಐದು ದಿನಗಳವರೆಗೆ ಸಂಭ್ರಮದಿಂದ ನಡೆಯುತ್ತಿದ್ದ ಆರತಿ ಬೆಳಗುವ ಕಾರ್ಯಕ್ರಮ ಇಂದು ಒಂದೆರಡು ದಿನಕ್ಕೆ ಸೀಮಿತವಾಗಿದೆ. ಬಹುತೇಕ ಶೀಗವ್ವನ ಹಾಡುಗಳು ಮರೆಯಾಗಿವೆ.ಇಂದು ಆರತಿ ಬೆಳಗಲು ಹೊರಟ ಬಾಲಕಿಯರಲ್ಲಿ ಮೊದಲಿನಂತೆ ಉತ್ಸಾಹ ಸಂಭ್ರಮ ಕಾಣುವುದಿಲ್ಲ. ಈ ಹಬ್ಬವೂ ಕೂಡ ಕೇವಲ ಪದ್ಧತಿಗಾಗಿ ಆಚರಣೆ ಮಾಡುವ ಹಂತಕ್ಕೆ ಬಂದು ನಿಂತಿದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಭ್ರಮ ಇನ್ನೂ ಇದೆ ಅನ್ನುವುದು ಮಾತ್ರ ಸ್ವಲ್ಪ ಸಂತೋಷದ ವಿಷಯ.

ಡಾ.ರಾಜೇಶ್ವರಿ ಶೀಲವಂತ, ಬೀಳಗಿ

Don`t copy text!