ಅಕ್ಕನೆಡೆಗೆ-ವಚನ-21.   ವಾರದ  ವಿಶೇಷ ವಚನ ವಿಶ್ಲೇಷಣೆ

 

ಬಿಡದ ಬಂಧನಕೆ ಬೇಡಿಯ ತೊಡಕು

ಪಂಚೇಂದ್ರಿಯಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ?
ಸಪ್ತವ್ಯಸನಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ?
ರತ್ನದ ಸಂಕಲೆಯಾದಡೇನು
ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ?

ಅಕ್ಕ ಮೇಲಿನ ವಚನದಲ್ಲಿ ಬಹಳ ಕಡಿಮೆ ಶಬ್ದಗಳನ್ನು ಬಳಸಿ, ಮಹತ್ತರವಾದ ವಿಷಯವನ್ನು ತಿಳಿಯಪಡಿಸಿರುವುದು, ಅವಳ ಕಾವ್ಯ ಕಟ್ಟುವ ಕಲೆ ಮತ್ತು ಶಕ್ತಿ. ಆಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ನಡೆದ ಅವಳು ಸಹಜವಾಗಿಯೇ ಅನೇಕ ಕಷ್ಟ ಸುಖಗಳನ್ನು ಎದುರಿಸಿದವಳು. ಹಾಗೆಯೆ ಅದನ್ನು ಮೆಟ್ಟಿ ನಡೆದವಳು. ಲೌಕಿಕವನ್ನು ದಾಟಿ ಅಲೌಕಿಕದೆಡೆಗೆ ಸಾಗುವಾಗ, ತನಗಾದ ಬಾಹ್ಯ ಮತ್ತು ಆಂತರಿಕ ಅನುಭವಗಳನ್ನು ಅನೇಕ ವಚನಗಳಲ್ಲಿ ಹೊರ ಹಾಕಿದ್ದಾಳೆ.

ಈ ವಚನ ನ್ಯಾಯ, ನೀತಿ, ಕಿವಿ ಮಾತು, ಬುದ್ಧಿ ಪಾಠಗಳತ್ತ ಮುಖ ಮಾಡುತ್ತದೆ. ಅವಳ ಕಾವ್ಯದ ವೈಶಿಷ್ಟ್ಯವೆಂದರೆ, ಸಂದೇಶಗಳು ನಿವೇದನೆಯ ಸ್ವರೂಪದಲ್ಲಿ ಇರುತ್ತವೆ. ಇಲ್ಲಿ ಪ್ರಶ್ನೆಗಳನ್ನು ಕೇಳುವುದರಲ್ಲಿಯೆ ಎಲ್ಲವನ್ನು ಅನಾವರಣಗೊಳಿಸುವ ಪರಿ ಮನಮುಟ್ಟುವಂತಿದೆ. ಪ್ರೀತಿ ಮತ್ತು ಭಕ್ತಿಯಿಂದ ಚೆನ್ನಮಲ್ಲಿಕಾರ್ಜುನನಿಗೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಪರಿಣಾಮವೇ ಇಂತಹ ರಚನೆಗೆ ಕಾರಣವಿರಬಹುದು. ಅಕ್ಕನ ವೈಯಕ್ತಿಕ ನೆಲೆಯ ಈ ವಚನವು ಮನುಕುಲಕ್ಕೆ ಬಹುದೊಡ್ಡ ಸಂದೇಶ ನೀಡುತ್ತದೆ. ಮನುಷ್ಯ ಹೇಗೆ ಈ ಭವದ ಬಂಧನಕ್ಕೊಳಗಾಗುತ್ತಾನೆ? ಅದರಿಂದ ಹೇಗೆ ಹೊರಬರಬಹುದು? ಎನ್ನುವುದನ್ನು ಈ ವಚನ ಬಹಳ ಸೂಕ್ಷ್ಮವಾಗಿ ಸೂಚಿಸುತ್ತದೆ.

ಎಲ್ಲರಿಗೂ ತಿಳಿದಂತೆ ಮನುಷ್ಯನ ದೇಹ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮವೆಂಬ ಐದು ಇಂದ್ರಿಯಗಳಿಂದ ಕೂಡಿದೆ. ಕಣ್ಣುಗಳಲ್ಲಿ ನೋಟ, ಮೂಗಿನಿಂದ ಆಘ್ರಾಣಿಸುವುದು, ಕಿವಿಯಿಂದ ಆಲಿಸುವುದು, ಬಾಯಿಂದ ರುಚಿ ಹಾಗೂ ಮಾತು, ಚರ್ಮದಿಂದ ಸ್ಪರ್ಶ, ಹೀಗೆ ಪಂಚೇಂದ್ರಿಯಗಳು ತಮ್ಮ ಕಾರ್ಯ ನಿರ್ವಹಿಸುತ್ತವೆ.

ಮಾನವ ಸಹಜವಾದ ಗುಣ ದೌರ್ಬಲ್ಯ. ಆ ದೌರ್ಬಲ್ಯ ಮೆಟ್ಟಿ ನಿಲ್ಲುವುದೇ ಈ ಬದುಕಿನ ಬಹುದೊಡ್ಡ ಸವಾಲು! ಈ ಸವಾಲನ್ನು ಸ್ವೀಕರಿದರೂ ನಿಭಾಯಿಸಲಾಗದೆ ಒದ್ದಾಡುವವರು ಸಾಮಾನ್ಯರು. ಈ ಮೇಲಿನ ಸಾಲಿನಲ್ಲಿ ಕೆಟ್ಟದ್ದನ್ನು ನೋಡುತ್ತಲೇ ಇರುವುದಾಗಲಿ, ಕೇಳುತ್ತಲೇ ಇರುವುದಾಗಲಿ, ಹೇಳುತ್ತಲೇ ಇರುವುದಾಗಲಿ, ಅಘ್ರಾಣಿಸುತ್ತಲೇ ಇರುವುದಾಗಲಿ, ಸ್ಪರ್ಶಿಸುತ್ತಲೇ ಇರುವುದಾಗಲಿ, ಇವುಗಳಲ್ಲಿ ಯಾವುದಾದರೊಂದಕ್ಕೆ ಬಲಿಯಾದರೂ ಅದು ಅವನತಿಗೆ ಕಾರಣವಾಗುತ್ತದೆ. ಇದನ್ನೇ ಅಕ್ಕ ಇಲ್ಲಿ ಪ್ರಶ್ನಿಸುತ್ತಾಳೆ.

‘ಸಪ್ತ ವ್ಯಸನ’ ಎಂದರೆ ಏಳು ದುರಭ್ಯಾಸಗಳು. ಒಳ್ಳೆಯ ಅಭ್ಯಾಗಳು ಹವ್ಯಾಸ, ಅಭಿರುಚಿ ಎನಿಸಿಕೊಂಡರೆ,
ಮನುಷ್ಯನಿಗೆ ಮಾರಕವಾಗಿದ್ದು ಚಟ ಎನಿಸಿಕೊಳ್ಳುತ್ತದೆ. ಅಂತಹ ದುರಭ್ಯಾಸವುಳ್ಳವನು ವ್ಯಸನಿ. ಕುಡಿತ, ಹಣ, ಪ್ರಾಣಿ ಹಿಂಸೆ, ಅನೈತೆಕತೆ, ಚುಚ್ಚು ಮಾತು, ದೈಹಿಕ ಹಿಂಸೆ, ಆಸ್ತಿ ಲಪಟಾಯಿಸುವುದು ಇವೇ‌ ಮನುಷ್ಯನಲ್ಲಿರುವ ಏಳು ಬಗೆಯ ವ್ಯಸನಗಳು. ಇವುಗಳಲ್ಲಿ ಯಾವುದಾದರೊಂದು ವ್ಯಸನವಿದ್ದರೂ ಸಾಕಲ್ಲವೆ? ಎನ್ನುವುದು ಅಕ್ಕನ ಪ್ರಶ್ನೆ.

ಇಲ್ಲಿ ರತ್ನ ಎಂದರೆ ಬೆಲೆ ಬಾಳುವ ವಜ್ರ. ಸಂಕಲೆ ಎಂದರೆ ಬೇಡಿ. ಅತ್ಯಂತ ದುಬಾರಿಯಾದ ರತ್ನದ ಬೇಡಿ ಇದ್ದರೂ, ಅದು ಬಂಧನಕ್ಕೊಳಪಡಿಸುತ್ತದೆ. ಬಂಧನ ಮತ್ತು ಬಂಧಿಯಾಗುವ ಸತ್ಯವನ್ನು ಇಲ್ಲಿ ಅರುಹಿದ್ದಾಳೆ.

ಈಗ ವಚನವನ್ನು ಇಡಿಯಾಗಿ ಗ್ರಹಿಸಬಹುದು. ಐದು ಇಂದ್ರಿಯಗಳಲ್ಲಿ ಯಾವುದಾದರೊಂದನ್ನು ಬಳಸಿಕೊಂಡು ದುರಭ್ಯಾಸಕ್ಕೆ ಬಲಿಯಾಗುವ ರೀತಿಯನ್ನು ಇಲ್ಲಿ ಅರ್ಥೈಸಲಾಗಿದೆ. ಏಳು ಚಟಗಳಲ್ಲಿ ಯಾವುದಾದರೊಂದಕ್ಕೆ ಈಡಾಗುವ ಚಿತ್ರಣವನ್ನು ಕಣ್ಮುಂದೆ ತಂದುಕೊಳ್ಳಬಹುದು. ಆಗ ಆ ಕೆಟ್ಟ ಅಭ್ಯಾಸವು ಕ್ಷಣಿಕ ಸುಖ ನೀಡುತ್ತ ಬಹಳ ಆನಂದವನ್ನುಂಟು ಮಾಡುವ ಚಿತ್ರಣ ಗೋಚರಿಸುತ್ತದೆ. ಆ ಆನಂದವು ರತ್ನದ ಬೇಡಿ ಇರುವಂತೆ ಎನ್ನುವ ಒಳಾರ್ಥವೂ ಅಡಗಿದೆ.

ಮನುಷ್ಯ ಹೇಗೆ ದುರಭ್ಯಾಸಗಳ ದಾಸನಾಗುತ್ತಾನೆಂದು ತಿಳಿದು ಬರುತ್ತದೆ. ಅದೊಂದು ಬಂಧನವಾಗಿ ಅದರಿಂದ ಮುಕ್ತಿ ಪಡೆಯುವುದೇ ಅಸಾಧ್ಯವಾಗುತ್ತದೆ. ಸುಂದರ ಬದುಕು ರೂಪಿಸಿಕೊಳ್ಳುವವರು, ಇಂತಹ ವ್ಯಸನಗಳಿಗೆ ಬಲಿಯಾಗದಿರುವುದೇ ಜಾಣತನ. ಸತ್ಸಂಗ, ಸದ್ವಿಚಾರ, ಸಾತ್ವಿಕ ಆಹಾರ, ಪರಿಶುದ್ಧ ನಡೆನುಡಿಗಳನ್ನು ರೂಢಿಸಿಕೊಳ್ಳುವುದರಿಂದ ಬದುಕು ಹಸನಾಗುತ್ತದೆ.

ಸರ್ವಜ್ಞನ ವಚನವೊಂದಿದೆ. ‘ಕಚ್ಛೆ ಕೈ ಬಾಯಿಗಳು ಇಚ್ಛೆಯಿಂದಿದ್ದಿಹರೆ ಅಚ್ಚುತನಪ್ಪ ಅಜನಪ್ಪ ಲೋಕದೊಳು ನಿಶ್ಚಿಂತನಪ್ಪ ಸರ್ವಜ್ಞ’ ಇದೂ ಕೂಡ ಅದೇ ಭಾವವನ್ನು ಬಿಂಬಿಸುತ್ತದೆ.

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಆರೋಗ್ಯಕರ ವಾತಾವರಣ ಎಷ್ಟಿದೆ? ವೈಯಕ್ತಿಕವಾಗಿ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆ. ಇಂದು ಆತ್ಮಾವಲೋಕನ, ಆತ್ಮ ವಿಮರ್ಶೆಯ ಅಗತ್ಯವಿದೆ.

ಆಧುನಿಕ ತಂತ್ರ ಜ್ಞಾನದಿಂದಾಗಿ ಅನೇಕ ವೆಬ್ಸೈಟ್‌ಗಳು ಸುಲಭವಾಗಿ ವೀಕ್ಷಣೆಗೆ ಕೈಗೆಟುಕುವುದರಿಂದ, ಮತ್ತೆ ಮತ್ತೆ ಕಣ್ಣುಗಳು ಕೆಟ್ಟದ್ದನ್ನು ನೋಡುವಂತಾಗಿದೆ, ಕೇಳುವಂತಾಗಿದೆ. ಅದರ ಪರಿಣಾಮ ಚಿತ್ತ ಚಾಂಚಲ್ಯದ ಕಡೆಗೆ ಮನಸು ವಾಲುತ್ತದೆ. ಆಗ ಮನಸು ವಿಕಾರವಾಗಿ, ಕ್ರೌರ್ಯದೆಡೆಗೆ ಸಾಗಿ, ಅನಾಹುತಗಳು ನಡೆಯುತ್ತಿವೆ. ಅನ್ಯಾಯ, ಅತ್ಯಾಚಾರ, ಶೋಷಣೆ, ಮೋಸ ವಂಚನೆ, ಡ್ರಗ್ಸ್, ಎಲ್ಲವೂ ನಡೆದಿದೆ. ಅದರ ಜಾಲದಲ್ಲಿ ಸಿಲುಕಿದವರು ಹೊರ ಬರುವುದೇ ಕಷ್ಟ.

ಪುರಂದರದಾಸರು, ‘ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ, ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವಿರೆ’ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಮನುಷ್ಯನ ಸ್ವಭಾವ ಕುರಿತು ಅನೇಕ ಗಾದೆ ಮಾತುಗಳು ಪ್ರಚಲಿವಾಗಿವೆ. ‘ಹುಟ್ಟು ಗುಣ ಸುಟ್ಟರೂ ಹೋಗದು’, ‘ಹುಟ್ಟು ಗುಣ ಹೂಳುವ ತನಕ’, ‘ಚಟ್ಟ ಏರಿದರೂ ಚಟ ತೀರುವುದಿಲ್ಲ’ ಹೀಗೆಲ್ಲಾ ಹೇಳುವ ಮಾತುಗಳು ಮನುಷ್ಯನ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಮೇಲಿನ ವಚನ ಇವುಗಳಿಂದ ಮುಕ್ತಿ ಪಡೆಯುವ ಮಾರ್ಗವನ್ನು ಸೂಚಿಸುತ್ತದೆ.

ಅಕ್ಕಮಹಾದೇವಿಯು ಪಂಚೇಂದ್ರಯಗಳಿಂದ ಮುಕ್ತಳಾದ ಬಗೆಯನ್ನು ಈ ವಚನದಿಂದ ಗ್ರಹಿಸಬಹುದು. ದೇಹ ಭಾವವನ್ನು ಅರಿತು, ಅದೇ ದೇಹದಾಚೆಗಿನ ಅನುಭೂತಿ ಪಡೆಯುವ ಮಾರ್ಗವನ್ನು ಕಾಣುತ್ತೇವೆ. ಪಂಚೇಂದ್ರಿಯಗಳು ಪಂಚಭೂತಗಳಲ್ಲಿ ಲೀನವಾಗುವ ಮೊದಲು ಅದನ್ನು ಅರಿತು ನಡೆಯುವ ಸೂಕ್ಷ್ಮ ವಿವೇಚನೆ ಇದರಲ್ಲಡಗಿದೆ. ಅಂಗ, ಲಿಂಗ, ಅರಿವು, ಶಿವಯೋಗದ ಧ್ಯಾನ ಅದರಾಚೆಗಿನ ಅನುಭಾವವನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಈ ವಚನದ ಮೂಲಕ ಮಾಡಬೇಕಿದೆ.


ಸಿಕಾ

Don`t copy text!