ಸೃಷ್ಟಿ ಕರ್ತನ ಲೀಲೆ

ಅಕ್ಕನೆಡೆಗೆ-ವಚನ – 23

ಸೃಷ್ಟಿ ಕರ್ತನ ಲೀಲೆ

ತನ್ನ ವಿನೋದಕ್ಕೆ ತಾನೇ ಸೃಜಿಸಿದ ಸಕಲ ಜಗತ್ತ!
ತನ್ನ ವಿನೋದಕ್ಕೆ ತಾನೇ ಸುತ್ತಿದನದಕ್ಕೆ ಸಕಲ ಪ್ರಪಂಚ!!
ತನ್ನ ವಿನೋದಕ್ಕೆ ತಾನೇ ತಿರುಗಿಸಿದನನಂತ ಭವದುಃಖಂಗಳಲ್ಲಿ
ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದಡೆ ಮತ್ತೆ
ತಾನೇ ಪರಿವನಾ ಮಾಯಾಪಾಶವನು!

ಇಂದು ನಾವು ಅತ್ಯಂತ ಮುಂದುವರಿದ ಯುಗದಲ್ಲಿ ಬದುತ್ತಿದ್ದೇವೆ. ವಿಜ್ಞಾನ, ತಂತ್ರಜ್ಞಾನದಿಂದ ಕೂಡಿದ ಆಧುನಿಕ ಜೀವನದಲ್ಲಿ ಯಾಂತ್ರಿಕ ಬದುಕನ್ನು ಸಾಗಿಸುತ್ತಿರುವುದು ಪ್ರಸ್ತುತದ ಅನಿವಾರ್ಯತೆ. ಗಡಿಯಾರದ ಜೊತೆಜೊತೆಯಲ್ಲೇ ಸಾಗುತ್ತಿರುವ ನಮ್ಮ ದಿನಚರಿ ಅಲಾರ್ಮಿನ ಗಂಟೆಯಂತೆ ಹೆಜ್ಜೆ ಹಾಕುತ್ತದೆ. ಪ್ರತಿನಿತ್ಯದ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ನಾವು ಕಳೆದುಕೊಂಡಿರುವುದು ವಿಷಾದವೇ ಸರಿ.

ಈ ಯಾಂತ್ರಿಕ ಜೀವನದಿಂದ ಕೆಲಕಾಲ ಹೊರ ಬಂದು ಈ ಮೇಲಿನ ವಚನ ಅವಲೋಕಿಸಿದರೆ, ನಾನು ಯಾರು? ಈ ಹುಟ್ಟು – ಸಾವು, ಅದರ ಮಧ್ಯದಲ್ಲಿರುವ ಕಷ್ಟ – ಸುಖ, ಎಲ್ಲವನ್ನೂ ಗ್ರಹಿಸಬಹುದು. ಇದಕ್ಕಾಗಿ ಮೌನದ ಅಗತ್ಯವಿದೆ.

ನಾವು ಈ ಪ್ರಕೃತಿಯನ್ನು ಹಾಗೇ ಸುಮ್ಮನೆ ಕುಳಿತು ನೋಡಿದ್ದೇ ಆದರೆ, ಏನೇನೋ ಹೊಳೆಯುತ್ತದೆ. ಯಾವುದೇ ತರಹದ ಮಾತುಕತೆ ಇಲ್ಲದೆ ಮೌನಾವಲೋಕನ ಮಾಡುತ್ತ ಅದರಲ್ಲೇ ಕಳೆದು ಹೋಗಬೇಕು. ಆಗ ಈ ಸೃಷ್ಟಿ ಅದೆಷ್ಟು ಸುಂದರವಾಗಿ ಕಾಣಿಸುತ್ತದೆಂದರೆ ವರ್ಣಿಸಲು ಅಸಾಧ್ಯ. ಭೂಮಿ, ಆಕಾಶ, ಗಿಡ, ಮರ, ಬೆಟ್ಟ, ಗುಡ್ಡ, ನದಿ, ಸಮುದ್ರ, ಪ್ರಾಣಿ, ಪಕ್ಷಿ ಮುಂತಾದವುಗಳ ಮಧ್ಯೆ ಬುದ್ಧಿವಂತ ಮನುಷ್ಯ! ಎಲ್ಲವೂ ವಿಚಿತ್ರ ಸೃಷ್ಟಿ. ಇದಾವುದನ್ನೂ ಮನುಷ್ಯ ತಯಾರು ಮಾಡಲು ಸಾಧ್ಯವಿಲ್ಲ.

ಅದಕ್ಕಾಗಿ ಅನುಭಾವದ ದೃಷ್ಟಿಯಿಂದ ಅಕ್ಕನ ವಚನವನ್ನು ಗ್ರಹಿಸುವುದು ಅವಶ್ಯಕ. ಅಕ್ಕನ ಹುಡುಕಾಟವೂ ನಮ್ಮ ಹುಡುಕಾಟವಾದಾಗ ಮಾತ್ರ ಅಕ್ಕನನ್ನು ಮತ್ತು ಅಕ್ಕನ ವಚನಗಳನ್ನು ತಿಳಿದುಕೊಳ್ಳುವ ದಾರಿ ತೆರೆಯುತ್ತದೆ.

ಹಾಗಾದರೆ ಈ ಸೃಷ್ಟಿಯ ಸಂರಚನೆ ಮಾಡಿದವರು ಯಾರು? ಇದೆಂಥ ಅದ್ಭುತ ಕೊಡುಗೆ! ನಮ್ಮೊಳಗೆ ಆತ್ಮವಿದ್ದರೆ ಈ ಪ್ರಕೃತಿಯಲ್ಲಿ ಪರಮಾತ್ಮ ಇರಲೇ ಬೇಕಲ್ಲವೆ? ಪ್ರಕೃತಿ ಬಹಳ ಭಿನ್ನವು ಹಾಗೂ ವಿಶೇಷವೆನಿಸುತ್ತದೆ. ಮಾನವನಿಂದ ನಿರ್ಮಿತವಾದುದೆಲ್ಲವನ್ನೂ ನೋಡಿದರೆ, ಪರಮಾತ್ಮನ ಸೃಷ್ಟಿಯ ಸಾಮಾಗ್ರಿಗಳನ್ನೇ ಪಡೆದುಕೊಂಡು ಮನುಷ್ಯ ಅವಿಷ್ಕಾರ ಮಾಡಿದಂತೆ ತೋರುತ್ತದೆ. ಹೀಗೆಲ್ಲಾ ಅಪಾರ, ಅನನ್ಯ ಕೊಡುಗೆ ನೀಡಿದ ಆ ಪರಮಾತ್ಮ ಮತ್ತೆ ಬೇರೆ ಯಾರೂ ಅಲ್ಲ, ‘ಚೆನ್ನಮಲ್ಲಿಕಾರ್ಜುನ ದೇವನೆಂಬ ಪರಶಿವನು’ ಎಂದು ಇಲ್ಲಿ ಅಕ್ಕ ಹೇಳುತ್ತಾಳೆ.

ಈ ವಚನದಲ್ಲಿ ವಿನೋದ ಎನ್ನುವ ಶಬ್ದ ಮತ್ತೆ ಮತ್ತೆ ಪ್ರಯೋಗವಾಗಿದೆ. ‘ವಿನೋದ’ ಅಂದರೆ ಆಟವಾಡಿಕೊಂಡು ಸಂತೋಷದಿಂದಿರುವುದು. ಹಾಗೆ ಆ ಸೃಷ್ಟಿಕರ್ತನು ತನ್ನ ವಿನೋದಕ್ಕೆ ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಈ ಭೂಮಂಡಲ ತಾನೇ ಆಗಿ ಸದಾ ತಿರುಗುತ್ತಲೇ ಇರುವವನು ‘ಅವನು’ ಎನ್ನುವ ಅರ್ಥವನ್ನೂ ಕೊಡುತ್ತದೆ.

ಈ ಭೂಮಿಯ ಮೇಲಿರುವವರನ್ನೆಲ್ಲಾ ದುಃಖಕ್ಕೀಡು ಮಾಡಿ ನೋಡುವುದೂ ಅವನ ವಿನೋದವೇ ಆಗಿದೆ. ಹೀಗೆ ತನ್ನ ವಿನೋದಕ್ಕಾಗಿ ಮಾಡುವ ಈ ಆಟವು ಅವನಿಗೇ ಸಾಕಾದಾಗ ಮತ್ತೆ ಸಂತೋಷವನ್ನು ಕೊಡುತ್ತಾನೆ. ಆಗ ಆ ಮಾಯಪಾಶದಲ್ಲಿ ಸಿಲುಕುವ ಮನುಜ ಆಶಾವಾದಿಯಾಗಿ ಬದುಕು ನಡೆಸುತ್ತಾ ಸಾಗುತ್ತಾನೆ.

ಇದಕ್ಕೊಂದು ಕತೆಯ ಉದಾಹರಣೆ…

ಒಮ್ಮೆ ಹೊಸದಾಗಿ ಮದುವೆಯಾದ ಜೋಡಿ ದೋಣಿಯಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಅವರ ಜೊತೆಯಲ್ಲಿ ಇನ್ನೂ ಅನೇಕರು ಅದೇ ದೋಣಿಯಲ್ಲಿ ಕುಳಿತಿರುತ್ತಾರೆ. ಹಾಗೇ ಸಾಗುತ್ತ ಸರಿಯಾಗಿ ನದಿಯ ಮಧ್ಯಭಾಗ ತಲುಪಿದ್ದೇ ತಡ ಜೋರಾಗಿ ಗಾಳಿ ಬೀಸಲು ಆರಂಭಿಸುತ್ತದೆ. ಆಗ ದೋಣಿ ಆಯ ತಪ್ಪಿದಂತಾಗಿ ಅಲುಗಾಡುತ್ತದೆ. ಒಳಗೆ ಕುಳಿತವರೆಲ್ಲಾ ಗಾಬರಿಯಾಗಿ ತೀವ್ರ ಆತಂಕಕ್ಕೊಳಗಾಗುತ್ತಾರೆ.

ಆದರೆ ಆ ಮದುಮಗ ಈ ಭೀಕರತೆಯಿಂದ ನಿರ್ಲಿಪ್ತನಾಗಿ ತನ್ನ ನವವಧುವನ್ನು ಆಸೆ, ಆಸಕ್ತಿಯಿಂದ ನೋಡುತ್ತಲೇ ಇರುತ್ತಾನೆ. ಅವನ ಮುಖದ ಮೇಲಿನ ಮುಗುಳ್ನಗೆ ಮಾಸದೆ ಹಾಗೇ ಇರುತ್ತದೆ. ಆ ಮಂದಹಾಸ ನೋಡಿದ ಮದುಮಗಳಿಗೂ ಆಶ್ಚರ್ಯವಾಗುತ್ತದೆ. ಅವಳಿಗೂ ಒಳಗೊಳಗೇ ಭಯವಾಗುತ್ತಿರುತ್ತದೆ.

ಕೆಲ ಸಮಯದಲ್ಲಿ ಪ್ರಕೃತಿ ತನ್ನಿಂದ ತಾನೇ ಶಾಂತವಾಗುತ್ತದೆ. ಗಾಳಿ ಬೀಸುವುದು ವಿಧಾನಕ್ಕೆ ತಹಬದಿಗೆ ಬಂದು, ಎಲ್ಲಾ ಶಾಂತವಾಗುತ್ತದೆ. ಆಗ ಸ್ವಲ್ಪ ನಿರಾಳವಾದಂತಾಗಿ ಮದುಮಗಳು ತನ್ನ ಪತಿಯನ್ನು ವಿಚಾರಿಸುತ್ತಾಳೆ.
‘ಇಲ್ಲಿದ್ದವರೆಲ್ಲಾ ಭಯದಿಂದ ಆತಂಕಗೊಂಡರೆ ನೀವು ಮಾತ್ರ ಒಂದು ಚೂರು ಹೆದರದೆ ಮುಗುಳ್ನಗೆ ಬೀರುತ್ತ ನನ್ನನ್ನೇ ನೋಡುತ್ತ ಕುಳಿತಿದ್ರಿ. ಅದು ಹೇಗೆ ಸಾಧ್ಯ?’

ಅದಕ್ಕವನು ಮತ್ತೆ ನಗುತ್ತ, ‘ಗಾಬರಿಯಾಗುವ ಅವಶ್ಯಕತೆ ಇಲ್ಲ. ಇದು ಅವನ ಲೀಲೆ. ಅವನಿಗೆ ತನ್ನ ವಿನೋದ ಸಾಕಾಯಿತು ನಿಲ್ಲಿಸಿದ. ನನಗೆ ಆ ಪರಮಾತ್ಮ ಬೆರಳಿನಿಂದ ತಿವಿದು ಕಚಗುಳಿ ಇಟ್ಟಂತೆ ಆಯಿತು. ಅದಕ್ಕೆ ನಗುತ್ತಿದ್ದೆ. ನನ್ನ ನಗುವಿನಿಂದ ನಿನಗೆ ಧೈರ್ಯ ಬಂತು. ಅಲ್ಲವೆ? ಅದಕ್ಕೆ ಹೇಳೋದು ಬಾರದು ಬಪ್ಪದು, ಬಪ್ಪದು ತಪ್ಪದು.’
ಅವನ ಮಾತುಗಳು ಕೇವಲ ಅವನ ಹೆಂಡತಿಗಷ್ಟೇ ಅಲ್ಲ, ಅಲ್ಲಿದ್ದವರೆಲ್ಲರಿಗೂ ಹೌದೆನಿಸಿತು. ವಿನಾ ಕಾರಣ ಸ್ವಲ್ಪ ಹೊತ್ತು ಎಲ್ಲರೂ ಗೊಂದಲವೆಬ್ಬಿಸಿಕೊಂಡೆವಲ್ಲ ಎಂದು ಪರಿತಪಿಸಿದರು.

ಅಕ್ಕನ ಅನುಭವ-ಅನುಭಾವದ ನೆಲೆಯನ್ನು ತಲುಪಲು ಆಳ ಪಯಣದ ಅಗತ್ಯವಿರುತ್ತದೆ. ಆದರೂ ಈ ವಚನ ಇಂತಹದೇ ಸಂದೇಶ ನೀಡುತ್ತಿದೆ ಎಂದು ಪರಿಭಾವಿಸಿ ಅಕ್ಕನ ವಚನಾಧ್ಯನವನ್ನು ಮುಂದುವರಿಸೋಣ.

ಸಿಕಾ

Don`t copy text!