ನಿಶ್ಚಯವಾಗಿ ನಿನ್ನ ನೀನೇ ನೋಡಿಕೊ
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೇನಲೇತಕ್ಕೆ?
ಪರುಷರಸ ಕೈಯಲ್ಲಿದ್ದುಕೂಲಿಯ ಮಾಡಲೇತಕ್ಕೆ?
ಕ್ಷುತ್ತು ನಿವೃತ್ತಿ ಯಾದವಂಗೆ
ಕಟ್ಟೋಗರದ ಹೊರೆಯ ಹೊರಲೇತಕ್ಕೆ?
ನಿತ್ಯ ಅನಿತ್ಯವ ತಿಳಿದು ಮತ್ತೆ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ. ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿನ್ನ ನೀನೇ ನೋಡಿಕೊ
ಎನ್ನಯ್ಯಪ್ರಿಯ ಇಮ್ಮಡಿ ನಿಕಳಂಕ ಮಲ್ಲಿಕಾರ್ಜುನನಲ್ಲಿ
-ಮೋಳಿಗೆ ಮಹಾದೇವಿ
(ಶಿವಶರಣೆಯರ ವಚನ ಸಂಪುಟ -೫ ವಚನ ಸಂಖ್ಯೆ ೨೯)
ಮುಕ್ತಿಯ ಮರ್ಮ ಈ ವಚನದ ತಾತ್ಪರ್ಯವಾಗಿದೆ. ಮಹಾದೇವಿಯ ಮಾತುಗಳು ಎಂತಹ ಪ್ರಜ್ಞಾವಂತರನ್ನು ಎಚ್ಚರಗೊಳಿಸಬಲ್ಲವು.”ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ” ಎಂಬ ವಚನದ ಮಹತ್ವ ಅರಿತ ನಿಜವಾದ ಭಕ್ತನಿಗೆ ಮರ್ತ್ಯ ಕೈಲಾಸವೆಂಬ ಭೇದವಿಲ್ಲ. ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಸಂಪೂರ್ಣ ಸಾಮರಸ್ಯ ಹೊಂದಬೇಕು ಎನ್ನುವ ಮಹತ್ವ ಇಲ್ಲಿನದಾಗಿದೆ. ಕೈಯಲ್ಲಿ ದೀಪದ ಬೆಳಕಿರುವಾಗ ಕತ್ತಲೆಗೆ ಭಯಪಡುವ ಅವಶ್ಯಕತೆ ಇಲ್ಲ. ನಮ್ಮ ಕೈಯಲ್ಲಿ ಮುಟ್ಟಿದುದನ್ನು ಭಂಗಾರವಾಗಿಸುವ ರಸವಿದ್ದಾಗ ಕೂಲಿ ಮಾಡಬೇಕೆನ್ನುವ ಬಯಕೆ ಬೇಡ. ಹಾಗೆಯೇ ಕ್ಷುತ್ ಅಂದರೆ ಹಸಿವು ಇಲ್ಲದವನಿಗೆ ಕಟ್ಟಿದ ಅನ್ನ, ಬುತ್ತಿಯ ಭಾರವನ್ನು ಹೊತ್ತುಕೊಂಡು ಶ್ರಮಪಡುವ ಅನಿವಾರ್ಯತೆ ಇಲ್ಲ.
ಅಂದರೆ ನಮ್ಮ ನಮ್ಮ ಕಾಯಕವನ್ನು ಮನಮುಟ್ಟಿ ಮಾಡುವ ಶರಣರಿಗೆ ಅಮರತ್ವ ಹಾಗೂ ಮರಣದ ಗುಟ್ಟ ಬಲ್ಲವನಿಗೆ ಭೂಲೋಕ ಕೈಲಾಸವೆಂಬ ಭೇದ ತರವಲ್ಲ. ಮುಕ್ತಿ ಯೆಂಬುದು “ಮುಟ್ಟಿದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತೆ” ಸಹಜ ಸ್ವಾಭಾವಿಕವಾಗಿರಬೇಕು. “ನಿಷ್ಪತ್ತಿ ಎಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ” ಎಂಬ ಬಸವಣ್ಣನ ಮಾತಿನಲ್ಲಿಯೂ ಇದೇ ಭಾವವಿದೆ. ಶರಣೆ ಮಹಾದೇವಿ ಕೂಡ ಭಕ್ತನಿಗೆ ಕೈವಲ್ಯ ಸಹಜವಾಗಿ ಕೈಗೆಟಕುತ್ತದೆ ಎಂದು ಹೇಳುತ್ತಾ ಮೋಕ್ಷವೆಂಬುದು ಎಲ್ಲೋ ಇರುವ ಒಂದು ಸ್ಥಾನವಲ್ಲ. ಬಯಲು ಬಯಲ ಬೆರೆಸಿದಂತೆ ಲಿಂಗ ಸಮರಸನಾಗುವ ಕ್ರಿಯೆ. ಎನ್ನಯ್ಯಪ್ರಿಯ ನಿಕಳಂಕ ಮಲ್ಲಿಕಾರ್ಜುನನಲ್ಲಿ ಮೊರೆ ಯಿಡುವುದರಿಂದ ಇದೆಲ್ಲಾ ಸಾಧ್ಯವಾಗುತ್ತದೆ. ಮುಕ್ತಿ ಯೆಂಬುದು ಎಂದೋ ಒಂದು ದಿನ ಪಡೆಯಬೇಕಾದ ದೂರದ ಆದರ್ಶವಲ್ಲ. ಈ ಜೀವನದೊಂದಿಗೆ ಬೆರೆತು ಹೋದ ಸ್ವಾಭಾವಿಕ ಕ್ರಿಯೆ. ಪೂರ್ಣ ಜೀವನದೊಂದಿಗೆ ಲಭಿಸುವ ಆಂತರಿಕ ನಿಲುವು. ಆಸೆ ಅಹಂಕಾರಗಳನ್ನಳಿದು
ತ್ರಿಕರಣ ಶುದ್ಧವಾಗಿ ಫಲಾಪೇಕ್ಷೆ ಇಲ್ಲದೆ ನಡೆಸುವ ಕಾಯಕವೇ ಲಿಂಗೈಕ್ಯ ಎಂದು ತನ್ನ ಪತಿಯಾದ ಮೋಳಿಗೆ ಮಹಾದೇವನಿಗೆ ತಿಳಿಹೇಳುವಳು. ಮಹಾದೇವಿಯ ಇಂತಹ ಮಾತುಗಳಿಂದ ಮಾರಯ್ಯನವರಲ್ಲುಂ ಟಾದ ಮುಕ್ತಿಯ ಮಮಕಾರ ದೂರವಾಗುತ್ತದೆ. ಐಕ್ಯ ತತ್ವವನ್ನು ಮಡದಿಯಿಂದ ಅರಿತುಕೊಂಡು ನಿನ್ನಿಂದಲೇ ಮುಕ್ತಿ ಎಂದು ಆಕೆಯ ಹಿರಿಮೆಯನ್ನು ಕೊಂಡಾಡುತ್ತಾನೆ.
ಸಂಕ್ಷಿಪ್ತ ಪರಿಚಯ
ಮೋಳಿಗೆ ಮಹಾದೇವಿ ಕಾಲ ಕ್ರಿ.ಶ. ೧೧೬೦ ಅಂಕಿತ ಎನ್ನಯ್ಯಪ್ರಿಯ ಇಮ್ಮಡಿ ನಿಕಳಂಕ ಮಲ್ಲಿಕಾರ್ಜುನ ಪತಿ ಮೋಳಿಗೆ ಮಹಾದೇವ ಸಿಕ್ಕಂತಹ ವಚನಗಳು ೬೯ ಐಕ್ಯ ಸ್ಥಳ ಕಲ್ಯಾಣದ ಸಮೀಪದ ಮೋಳಿಗೆ ಕೇರಿ ಎಂಬ ಹಳ್ಳಿ. ಮಹಾದೇವಿ ಎಂದು ಖ್ಯಾತಳಾಗಿರುವ ಶರಣೆ ಕಾಶ್ಮೀರದ ಸವಾಲಾಕ್ಷದ ದೊರೆ ಮಹಾದೇವನ ಸತಿ. ಮೊದಲ ಹೆಸರು ಗಂಗಾದೇವಿ ಈ ರಾಜ ದಂಪತಿಗಳು ಅಪರೂಪದ ಸಾಹಿತ್ಯ ಸಂಗಾತಿಗಳು.
ವೀರಶೈವ ಕಾವ್ಯಗಳಾದ ಭೀಮ ಕವಿಯ ಬಸವ ಪುರಾಣ, ಗೌರವಾಂಕನ ಮೋಳಿಗೆ ಮಾರಯ್ಯ ಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಶೂನ್ಯ ಸಂಪಾದನೆ ಕೃತಿಗಳಲ್ಲಿ ಕಾಶ್ಮೀರದಿಂದ ಬಂದ ಈ ರಾಜ ದಂಪತಿಗಳು *ಕಟ್ಟಿಗೆ ಮಾರುವ ಕಾಯಕ* ವನ್ನು ಕೈಗೊಂಡಿದ್ದರು ಎಂದು ತಿಳಿದುಬರುವುದು. ಜಂಗ ಮಾರೋಗಣೆ ಮಾಡಿಸುವ ಪತಿ-ಪತ್ನಿಯರ ಭಕ್ತಿಯ ನಿಲುವನ್ನು ಪರೀಕ್ಷಿಸುವ, ತನ್ಮೂಲಕ ಲೋಕಕ್ಕೆ ಪ್ರಕಟಪಡಿಸುವ ಉದ್ದೇಶದಿಂದ ಬಸವಣ್ಣನವರು ಅಮೃತದಂತಹ ಅಂಬಲಿಯನ್ನುಂಡು ಎರಡು ಸಾವಿರ ಹೊನ್ನ ಜಾಳಿಗೆಗಳನ್ನಿರಿಸಿ ಹೋಗುತ್ತಾರೆ. ಮಾರಯ್ಯ ನವರು ಇದು ಬಸವಣ್ಣ ಹೂಡಿದ ತಂತ್ರವೆಂದು ಊಹಿಸಿ ಅವನ್ನು ಜಂಗಮರಿಗೆ ಇತ್ತು. ತಾವು ತಂದ ಕಟ್ಟಿಗೆಯ ಹೊರೆಗಳ ಮೇಲೆ ಜಂಗಮ ಪಾದೋದಕ ಸಿಂಪಡಿಸಿದಾಗ ಅವು ಬಂಗಾರದ ಕಟ್ಟಿಗೆಗಳಾಗುತ್ತವೆ. ಅವನ್ನು ಜಂಗಮರಿಗಿತ್ತು ಕೃತಾರ್ಥರಾಗುತ್ತಾರೆ. ಧನದಲ್ಲಿ ಶುಚಿತ್ವವನ್ನು ತೋರಿ ಇವರಿಬ್ಬರು ಶರಣರ ಗೌರವಕ್ಕೆ ಪಾತ್ರರಾಗುತ್ತಾರೆ. ಹೀಗೆ ಸತಿಪತಿಗಳು ಒಂದಾಗಿ ಅನ್ಯೋನ್ಯ ಆಧ್ಯಾತ್ಮ ಜೀವನ ನಡೆಸಿ ಕಲ್ಯಾಣದ ಸಮೀಪದ ಮೋಳಿಗೆ ಕೇರಿಯಲ್ಲಿ ಐಕ್ಯರಾಗುತ್ತಾರೆ.
-ಡಾ. ಆಶಾ ಗುಡಿ
ಕನ್ನಡ ಉಪನ್ಯಾಸಕರು
ಹಾವೇರಿ