ಮೋಳಿಗೆ ಮಾರಯ್ಯ

12ನೇ ಶತಮಾನದ ವಚನ ಚಳುವಳಿಯು ಭಾರತದಲ್ಲಿ ಅಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಅನನ್ಯ ಮತ್ತು ಅನುಪಮ. ಬಸವಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಿಕ ಕ್ರಾಂತಿ ನಡೆಯಿತು. ಸರ್ವ ಸಮಾನತೆ, ಶ್ರಮದ ದುಡಿಮೆ, ಆಧ್ಯಾತ್ಮಿಕ ಸಾಧನೆ, ಇಷ್ಟ ಲಿಂಗದ ಪರಿಕಲ್ಪನೆ ಹಾಗೂ ಅಂತರಂಗ ಬಹಿರಂಗಗಳ ಶುದ್ದಿ, ಅರಿವು, ಆಚರಣೆ, ಅನ್ಯಾಯದ ವಿರುದ್ಧ ಹೋರಾಟ ಇವೆಲ್ಲ ಶರಣರು ನಡೆಸಿದ ಆಂದೋಲನದ ಸ್ವರೂಪವಾಗಿತ್ತು. ಏಕದೇವೋಪಾಸಕರಾದ ಶರಣರು ಅಂಧಶೃದ್ದೆ, ಶೋಷಣೆ, ವೇದಗಳಲ್ಲಿ ಬೋಧಿಸಿದ ಅರ್ಥಹೀನ ಆಚರಣೆ ಸಂಪ್ರದಾಯಗಳು, ದೇವಾಲಯ ಸಂಸ್ಕೃತಿ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳ ವಿರುದ್ಧ ದನಿಯೆತ್ತಿದರು, ಸಿಡಿದೆದ್ದರು.
ಸಮಾಜವು ಶುದ್ಧ ಆದರ್ಶವಾಗಿ ಇರಬೇಕೆಂದು ಹಂಬಲಿಸಿದ ವಚನ ಸಾಹಿತ್ಯದ ಅನುಭಾವಿ ಸಿಖಾಮಣಿಗಳಲ್ಲಿ ಮೋಳಿಗೆ ಮಾರಯ್ಯನವರು ಒಬ್ಬರು. ಅಲ್ಲಮನು ಸಾಧಿಸಿದ ಅನುಭಾವಭೂಮಿಕೆಯನ್ನು ಏರಿ ನಿಲ್ಲಬಲ್ಲ ಸಶಕ್ತ ಶರಣ ಮೋಳಿಗೆ ಮಾರಯ್ಯ. ಮೊದಲು ಕಾಶ್ಮೀರದ ಒಂದು ಭಾಗವಾಗಿದ್ದ ಸಪಾದಲಕ್ಷ ಇಲ್ಲವೇ ಸವಾಲಕ್ಷದ ದೊರೆಯಾಗಿದ್ದ ನೆಂಬುದಕ್ಕೆ ಅವನ ಮತ್ತು ಅವನ ಸತಿ ಮಹದೇವಿಯ ವಚನಗಳಲ್ಲಿಯೇ ನಮಗೆ ಆಧಾರಗಳು ದೊರೆಯುತ್ತವೆ.
“ಬಂದೆನಾ ಬಸವಣ್ಣನ ಕಥನದಿಂದ”
“ನಾನೇಕೆ ಬಂದೆ ಸುಖವ ಬಿಟ್ಟು? ಬಂದೂದಕ್ಕೆ ಒಂದು ಆದುದಿಲ್ಲ”
“ಬಂಧುದ ಕಂಡು ಎನ್ನ ಸಿರಿ ಉರಿಯೋಳಾಯಿತು” ಎಂಬದಾಗಿ ಪ್ರತ್ಯಕ್ಷವಾಗಿ ಆಧಾರ ದೊರೆತರೆ, ಸವಾಲಕ್ಷದಿಂದ ಬಂದೂದಕ್ಕೆ ಆಧಾರವಿಲ್ಲ.
“ಆನೆ ಕುದುರೆ ಬಂಡಿ ಭಾಂಡಾರ ವಿದ್ದಡೇನೋ? ತಾನು ಉಂಬುದು ಪಡಿಯಕ್ಕಿ”_ಎಂಬ ಅರಸೊತ್ತಿಗೆಯ-
“ಸುಗಂಧವ ಕೊಡುವ ಮೃಗವೆಂದರೆ ನೋಯಿಸಿ ಬಂಧಿಸಿದರೆ ದುರ್ಗಂಧವಲ್ಲದೆ ಗಂಧ ಬಂದುದುಂಟೆ? ಎಂಬ ಕಸ್ತೂರಿ ಮೃಗದ ಉಲ್ಲೇಖವಿರುವ ಮಾರಯ್ಯನವರ ವಚನಗಳಲ್ಲಿ ಅಪ್ರತ್ಯಕ್ಷವಾಗಿ ಅವರು ಕಾಶ್ಮೀರದಿಂದ ಬಂದರು ಎನ್ನುವುದಕ್ಕೆ ಆಧಾರ ದೊರೆಯುತ್ತದೆ.
ಕಲ್ಯಾಣದಲ್ಲಿದ್ದ ಅನೇಕ ಶರಣರಂತೆ ತಾವು ಮಾಡಿದ ಕಾಯಕವನ್ನು ಹೆಸರಿನ ಮುಂದೆ ಹೇಳಿಕೊಳ್ಳುವಾಗ ಯಾವುದೇ ರೀತಿಯ ಮುಜುಗರವಾಗಲಿ ಕೀಳರಿಮೆಯಾಗಲಿ, ಮಾರಯ್ಯನವರು ಭಾವಿಸಿಕೊಂಡವರಲ್ಲ . “ಮೋಳಿಗೆ “ಎಂದರೆ ಕಟ್ಟಿಗೆ. ಕಾಡಿನಿಂದ ಕಟ್ಟಿಗೆಗಳನ್ನು ತಂದು ತಕ್ಕ ಬೆಲೆಗೆ ಮಾರಿ, ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಬಸವೇಶ್ವರರ ಕಾಯಕ ತತ್ವಕ್ಕೆ ಮನಸೋತು ರಾಜಪದವಿಯನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದರು. ಅರಸನಾಗಿದ್ದವನು ಆಳಿನಂತಾಗಿ ಕಟ್ಟಿಗೆ ಮಾರಿದ ಮಾರಯ್ಯನವರ ಕಥೆ ಅಚ್ಚರಿಗೊಳಿಸುತ್ತದೆ. ತನ್ನ ಆಧ್ಯಾತ್ಮಿಕ ಅನುಭವಗಳಿಗೆ ಮಾರಯ್ಯನವರು ವಚನಗಳ ರೂಪ ಕೊಟ್ಟಿರುತ್ತಾರೆ .ಅವರು ಬರೆದಿರುವ ವಚನಗಳ ಸಂಖ್ಯೆ 820. ಮಾರಯ್ಯನವರ ವಚನಗಳ ಅಂಕಿತ , “ನಿ:ಖಳಂಕ ಮಲ್ಲಿಕಾರ್ಜುನ ” ಎಂದಿದೆ. ಸಮಾಜ ಹೇಗಿದೆ? ಹೇಗಿರಬೇಕು? ವ್ಯಕ್ತಿಯಾದವನ ನೈಜ ವ್ಯಕ್ತಿತ್ವದ ಚಿಂತನೆಯನ್ನು ತಮ್ಮ ಆಲೋಚನಾ ಇತಿಮಿತಿಯಲ್ಲಿ ತಮ್ಮ ವಚನಗಳಲ್ಲಿ ವಿಷದ ಪಡಿಸಿದ್ದಾರೆ.
ಮೋಳಗಿ ಮಾರಯ್ಯನವರು ಬಸವಣ್ಣನವರ ಸಮಕಾಲೀನರು. ಅವರ ಪತ್ನಿ ಮಹಾದೇವಮ್ಮ ( ಗಂಗಾದೇವಿ) ಅವರೂ ಕೂಡ ವಚನಗಳನ್ನು ಬರೆದಿದ್ದಾರೆ. ಬಸವಣ್ಣನವರು ಮಾರಯ್ಯನನ್ನು ಮಾರಿತಂದೆ ಮೋಳಿಗೆ ಮಾರಿ ತಂದೆ ಎಂದು ನೆನೆಸಿದ್ದಾರೆ.
” ಬ ” ಎಂಬಲ್ಲಿ ಬಳಿಸಂದೆನು
“ಸ” ಎಂಬಲ್ಲಿ ಸಯವಾದೆನು
“ವ” ಎಂಬಲ್ಲಿ ನಿರವಯವಾದೆನು.
ಬಸವಣ್ಣನ ನಿಜ ಪದದಲ್ಲಿ ಸಂದಿಲ್ಲದೆ ಬೆರೆಸಿ-
“ಬಂದೆನಾ ಬಸವಣ್ಣನ ಕಥನದಿಂದ” ಎಂದು ಹೇಳುವಲ್ಲಿ-
ಅಂದು ಬಂದ ಕಥನ ಬಸವೇಶ್ವರನಿಂದ ಬಂದ ಮಥನ ಇಂತಿ ಗಟ್ಟಿ ಬಸವಣ್ಣನ ತಪ್ಪಲಿಲ್ಲ ನಿಶ್ಚಯವಾಗಿ ನಿಂದಲ್ಲದೆ ನಿಖ:ಳಂಕ ಮಲ್ಲಿಕಾರ್ಜುನ ಲಿಂಗವ ಕಾಣಬಾರದು. – ಇದು ಬಸವೇಶ್ವರರ ಸಮಕಾಲೀನರು ಎನ್ನುವುದಕ್ಕೆ ಸಾಕ್ಷಿಯಾದರೆ-
ಅವರು ಪೂರ್ವಾಶ್ರಮದಲ್ಲಿ ಒಬ್ಬ ರಾಜನಾಗಿರಬಹುದು ಅಥವಾ ಒಂದು ಸೈನಿಕ ಪಡೆಯ ಒಡೆಯನಾಗಿದ್ದಿರಬಹುದು ಎಂಬುದಕ್ಕೆ ಸಾಕ್ಷಿಯಾಗಿ –
ಮಹಾರಾಣುವೆಯ ಬಿಟ್ಟು ಬಂದು ಮತ್ತೆ ಒಡೆಯರು ಭಕ್ತರಲ್ಲಿ ರಾಣಿ ವಾಸವೆಂದು ಕಟ್ಟುಮೆಟ್ಟುಂಟೆ?
“ಸಕಲ ದೇಶಕೋಶವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ ಸ್ತ್ರೀಯರ ಬಿಟ್ಟೆನೆಂಬ ಕೈಕೂಲಿಯೇ ನಿಮ್ಮ ಭಕ್ತಿ’ ಎಂದು ಮಹದೇವಮ್ಮ ಕೇಳುವಲ್ಲಿ- ಸವಾಲಕ್ಷದಲ್ಲಿ ಹುಟ್ಟಿ ಸಕಲ ಕ್ರಮಂಗಳದಲ್ಲಿದ್ದು ಭೋಗಿಸಿ ಎನ್ನುವಲ್ಲಿ- ಅವರು ರಾಜತಾಂತ್ರಿಕ ಸೇವೆಯಲ್ಲಿ ಇದ್ದವರು ಎಂಬುದು ಸಾಬೀತು ಆಗುತ್ತದೆ. ಯಾವುದೋ ಘಟನೆಯಿಂದ ರಾಜ್ಯ ಭಂಡಾರವನ್ನು ತೊರೆದು ಕಲ್ಯಾಣಕ್ಕೆ ಬಂದು ದಂಪತಿಗಳಿಬ್ಬರೂ ಶಾಂತಿಯನ್ನು ಪಡೆದು ಅನುಭಾವಿ ಶರಣರಾಗಿ ಕಲ್ಯಾಣದ ಕ್ರಾಂತಿಯ ನಂತರವೂ ಅಲ್ಲಿಯೇ ಬದುಕಿ ಬಾಳಿದರು.

ಮಾರಯ್ಯನವರು ವಚನಗಳಲ್ಲಿ ಸೆಟ್ಸ್ಥಳಗಳ ಪರಿಕಲ್ಪನೆ ಮತ್ತು ಸಾಧಕನು ಸಾಧಿಸಬೇಕಾದ ಅರ್ಹತೆಗಳನ್ನು ರೂಪಕಗಳ ಮೂಲಕ ವಿವರಿಸುತ್ತಾರೆ. ಕಾಯಕ ದಾಸೋಹದ ವಿವರಣೆಯನ್ನು ನೀಡುತ್ತಾರೆ . ಅಷ್ಟಾವರಣಗಳನ್ನು ಬಣ್ಣಿಸುತ್ತಾರೆ. ನಡೆ, ನುಡಿ ಶುದ್ಧವಾಗಿರಬೇಕು ಹಾಗೂ ಒಂದಾಗಿರಬೇಕೆಂಬ ಸಂದೇಶವನ್ನು ನೀಡುತ್ತಾರೆ. ಕಾವ್ಯದ ದೃಷ್ಟಿಯಿಂದಲೂ ಅವರ ವಚನಗಳು ಶ್ರೇಷ್ಠ ಮಟ್ಟದ ರಚನೆಗಳಾಗಿವೆ.
12ನೇ ಶತಮಾನದಲ್ಲೂ ಕಳ್ಳರು, ಕಪಟಿಗಳು, ಸುಳ್ಳರು ಮೋಸಗಾರರು, ಲಂಚಕೋರರು, ಆಲಸಿಗಳು, ಭ್ರಷ್ಟರು ಇದ್ದಿರಬಹುದು. ಅಂತವರನ್ನು ಕಂಡು ಮಾರಯ್ಯನವರು ಮಾರ್ಮಿಕವಾಗಿ ಈ ಕೆಳಗಿನ ವಚನದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾರೆ.

“ಕದ್ದ ಕಳವ ಮರೆಸಿಕೊಂಡು, ನಾ ಸಜ್ಜನನೆಂಬಂತೆ ಇದ್ದ ಗುಣವ ನೋಡಿ ಹೊದ್ದಿ ಶೋಧಿಸಲಾಗಿ ಕದ್ದ ಕಳವು ಕೈಯಲ್ಲಿದ್ದ ಮತ್ತೆ ಸಜ್ಜನತನ ಉಂಟೆ,? ಇಂತಿ ಸಜ್ಜನಗಳ್ಳರ ಕಂಡು ಹೋದದ್ದೆ ಹೋದ ನಿಖ:ಳಂಕ ಮಲ್ಲಿಕಾರ್ಜುನಾ”

ಭಗವಂತನು ನಿರ್ಮಿಸಿದ ಈ ಜಗತ್ತಿನಲ್ಲಿ ಸಕಲ ಜೀವಿಗಳಿಗೂ ಸಮಪಾಲು ಸಮ ಬಾಳು ಇರಬೇಕು. ಆದರೆ ನಮ್ಮಲ್ಲಿರುವ ಕೆಲವೇ ಕೆಲವು ಜನ ನಮ್ಮ ಪರಿಸರದಲ್ಲಿರುವ ನೆಲ, ಜಲ, ವಾಯು ಎಲ್ಲವುಗಳ ಮೇಲೆ ತಮ್ಮ ಪ್ರಭುತ್ವ ಸಾಧಿಸಿಕೊಳ್ಳುವವರಿದ್ದಾರೆ. ಸಂಪತ್ತಿನ ದುರಾಸೆಗೆ ಬಲಿಯಾಗಿ ಭೂಮಿಯನ್ನು ಬೇಕಾಬಿಟ್ಟಿ ಬಗೆಯುತ್ತಾರೆ. ಇಂದಿನ ಗಣಿಧಣಿಗಳು ಭೂಮಿಯಾಳದಲ್ಲಿ ಇರುವ ಖನಿಜಗಳನ್ನು ತೆಗೆದು ಅವುಗಳ ಮೇಲೆ ತಮ್ಮ ಸ್ವಾಮಿತ್ವವನ್ನು ಸಾಧಿಸುವರು. ಪರಿಸರದಲ್ಲಿದ್ದ ಪ್ರಾಣಿ ಸಂಪತ್ತು, ಸಸ್ಯಸಂಪತ್ತು ನೀರು, ವಾಯು ಮುಂತಾದವುಗಳನ್ನು ದುರುಪಯೋಗಪಡಿಸಿಕೊಂಡು ಕೋಟಿ, ಕೋಟಿ ಹಣಗಳಿಸಿರುತ್ತಾರೆ. ಅಂಥವರನ್ನು ಸಜ್ಜನಗಳ್ಳರೆಂದು ಕರೆಯುತ್ತಾರೆ. ಅಂತವರ ಕುರಿತು ಮಾರಯ್ಯನವರಿಗೆ ಇನ್ನಿಲ್ಲದ ಆಕ್ರೋಶ. ಅವರ ಚಿಂತನೆಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಅಲ್ಲದೆ ಕಪ್ಪು ಹಣ ಸಂಗ್ರಹಿಸಿದವರು ತಾವು ಗುಣವಂತರೂ, ಸತ್ಯವಂತರೂ ಎಂದು ಹೇಳಿಕೊಂಡು ಮೆರೆಯುತ್ತಾರೆ. ಅವರ ಡಾಂಭಿಕತನವನ್ನು ಸಜ್ಜನಗಳ್ಳರು ಎಂದು ಕರೆಯುತ್ತಾರೆ. ಅಂತ ವ್ಯಕ್ತಿಗಳ ಲಜ್ಜೆಗೇಡಿತನವನ್ನು ಆ ಹಣದಿಂದ ಅವರು ಮಾಡುವ ಸಾಮಾಜಿಕ ಕಾರ್ಯಗಳನ್ನು ಟೀಕಿಸುತ್ತಾರೆ. ಅವರನ್ನು ಕತ್ತೆ ನಾಯಿಗಳೆಂದು ಜರೆಯುತ್ತಾರೆ .:
ಕತ್ತೆ ಕರ್ಪೂರವ ಬಲ್ಲುದೆ ?
ನಾಗ ನಾನ್ನುಡಿಯ ಬಲ್ಲುದೇ?
ನಾಯಿ ಸುಭಿಕ್ಷವ ಬಲ್ಲುದೇ?ಮಕ್ಷಿಕ ಗಂಧವ ಬಲ್ಲುದೇ? ಹುಟ್ಟುಗೊಡ್ಡು ಮಕ್ಕಳ ಗರ್ಭವ ಬಲ್ಲುದೆ?
ಇಂತಹ ಮಿಥ್ಯವಂತರಿಗೆ ತತ್ವದ ಬುದ್ದಿಯ ಹೇಳಿದರೆ ನಿತ್ಯ ರುದ್ರನಾದರೂ ತಪ್ಪದು ನರಕ ನಿ:ಕಳಂಕ ಮಲ್ಲಿಕಾರ್ಜುನ ಎಂಬ ಅಭಿಪ್ರಾಯವನ್ನು ಹೊಂದಿರುವರು.
ಇಂಥವರು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಜನಸಾಮಾನ್ಯರಿಗೆ ಆದರ್ಶಮಯವಾಗಿ ಬಾಳಿ ತತ್ವ ಬುದ್ಧಿ ಹೇಳಿ ಬದುಕ ಬೇಕಾದವರು, ತಾವೇ ಹೀಗಾದರೆ ಸಮಾಜದ ಉದ್ಧಾರವನ್ನು ಮಾಡುವವರು ಯಾರು?
ಬಯಲು ಬತ್ತಲೆಯಾದರೆ ಹೊದಿಸುವರಿನ್ನಾರೋ?
ಏರಿ ನೀರ ಕುಡಿದಡೆ ಬಿಡಿಸುವರಿನ್ನಾರೋ?
ನಿಮ್ಮ ನಿಜವ ನೀವೇ ಬಲ್ಲಿರಿ ಎಂದು ಆತ್ಮಶೋಧನೆಗೆ ಹಚ್ಚುತ್ತಾರೆ.
ಅವರ ಇನ್ನೊಂದು ವಚನ ಇದೇ ಭಾವವನ್ನು ಪುಷ್ಟೀಕರಿಸುತ್ತದೆ.
ಸಮಾಜದಲ್ಲಿ ಸುಧಾರಣೆಗೆ ಪ್ರೇರಕ ರಾಗಬೇಕಾದವರೇ ಮರವಿನ ಗಾಳಿಗೆ ಸಿಲುಕಬಾರದು. ನಮ್ಮ ಅಂತರಂಗದ ಧ್ವನಿಯ ಎಚ್ಚರಿಕೆಗೆ ನಾವು ಕಿವಿಯಾಗಬೇಕಾಗುತ್ತದೆ. ದೇವರು ನಮ್ಮಲ್ಲಿಯೇ ನೆಲೆಸಿರುವನು. ಆ ನಿಜವ ಅರಿತ ನಾನು ಅಲ್ಲದುದಕ್ಕೆ ಅಂಜುವೆನೆಂದು ಮಾರಯ್ಯನವರು ಹೇಳುತ್ತಾರೆ. ಉರಿಯುವ ಸ್ವಯಂ ಜ್ಯೋತಿಯಾಗಿ ನಡೆಯಬೇಕು. ಸದಾಚಾರಗಳಲ್ಲಿ ನಿರತನಾಗಿ ಕಾಯಕ, ಕಾಯದ ಕರ್ಮ, ಜೀವನದ ಭಾವ, ಜ್ಞಾನದ ಒಳಗನರಿಯಬೇಕು. ಎಂಟನೀಂಟಿ ಅಂದರೆ ಅಷ್ಟಾವರಣಗಳ ಭದ್ರಕೋಟೆಯಲ್ಲಿ ಬದುಕಿ, ಮೂರು ಹರಿದು ಅಂದರೆ ಹೆಣ್ಣು ಹೊನ್ನು ಮಣ್ಣುಗಳನ್ನು ಜಯಿಸಿ , ಐದು ಹರಿದು ಅಂದರೆ ಪಂಚೇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು, ಆರ್ಮೆಟ್ಟಿ ಅಂದರೆ ಶೆಟ್ಟಸ್ಥಳಗಳಲ್ಲಿ ಸಾಧನೆ ಮಾಡಿ ಪರಂಜ್ಯೋತಿ ಪ್ರಕಾಶವಾಗಿ ಬೆಳಗಬೇಕು ಹೀಗೆ ಬೆಳಗಿದವರು ಮಾರಯ್ಯನವರು.
ನೆಟ್ಟಲಿಂಗವ ಪ್ರತಿಷ್ಠೆಯೆಂಬರು
ಹುಟ್ಟಿದ ಲಿಂಗವ ಸ್ವಯಂಭುವೆಂಬರು.
ಈ ಉಭಯದಲ್ಲಿ ಸ್ವಯಂಭು ಪ್ರತಿಷ್ಠೆಯ ನರಿ ಪುತ್ತಿದ್ದವರ ಕಂಡುಮಹಾಜನಂಗಳ ಹೊತ್ತು ಹೋರಲೇಕೆ?
ನನಗೆ ಇಷ್ಟವ ಕೊಟ್ಟ ಗುರು, ಬಟ್ಟೆಯ ಹೇಳಿದ್ದುದಿಲ್ಲ
ಪೃಥ್ವಿಯೊಳಗಣ ಮುತ್ತರದ ಅಚ್ಚಗವ ಬಿಡಿಸ ನಿ:ಖಳಂಕ ಮಲ್ಲಿಕಾರ್ಜುನ…..
ಲೌಕಿಕದಲ್ಲಿ ಕೆಲ ಸಿರಿವಂತರು ತೋರಿಕೆಯ ಭಕ್ತಿಯನ್ನು ನೆಟ್ಟಲಿಂಗಕ್ಕೆ, ಉದ್ಭವ ಲಿಂಗಕ್ಕೆ ತೋರಿ ಪ್ರದರ್ಶನಕ್ಕೆ ಗುಡಿಗಳನ್ನು ಕಟ್ಟಿ ಮೆರೆಯುವರು. ಅದರಲ್ಲಿ ಅದು ಹೆಚ್ಚು ಇದು, ಹೆಚ್ಚು ಎಂದು ವಾದಿಸುವರು. ಇದೆಲ್ಲಾ ಅವರವರ ಪ್ರತಿಷ್ಠೆಯ ಮಾತುಗಳೇ. ಆದರೆ ನನಗೆ ಗುರು ಮಾತ್ರ ದಾರಿ ತೋರಿಸುವವನು ಗುರು ಮಾತ್ರ, ಅವನಲ್ಲಿಯೇ ನನ್ನ ನಿಷ್ಠೆ. ಅವನೇ ನನ್ನ ದುಃಖ, ಕಷ್ಟಗಳನ್ನು ಬಿಡಿಸುವವನು.

ಅವರ ಇನ್ನೊಂದು ವಚನ ಜೀವನ ತತ್ವ ಸಿದ್ಧಾಂತದ ವಿಮಾಂಸೆಯಂತಿದೆ. ಮಾನವನ ಬದುಕು ಹುರುಳಿಲ್ಲದ್ದು, ನಶ್ವರವಾದದ್ದು ಯಾವುದೂ ಅವನ ಜೊತೆಗೆ ಬರುವುದಿಲ್ಲ. ಇದನ್ನೇ ತುಂಬಾ ಅರ್ಥಪೂರ್ಣವಾಗಿ ಈ ಕೆಳಗಿನ ವಚನದಲ್ಲಿ ವಿವೇಚಿಸಿದ್ದಾರೆ.
” ಆನೆ ಕುದುರೆ ಬಂಡಿ ಭಂಡಾರ ವಿಧ೯ಡೇನೋ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವದರ್ದ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೋ?
ಕೈ ವಿಡಿದ ಮಡದಿ ಪರರ ಸಂಗ ಪ್ರಾಣ ವಾಯುವಿನ ಸಂಗ,
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ ನಿ:ಖಳಂಕ
ಮಲ್ಲಿಕಾರ್ಜುನಾ.

ಈ ಮೇಲಿನ ವಚನದಲ್ಲಿ ವೈಭವದ ಜೀವನ ಶಾಶ್ವತವಲ್ಲ. ಈ ಬದುಕು ನಶ್ವರವಾದದ್ದು.ಮನುಷ್ಯನಿಗೆ ಮೂಲಭೂತವಾಗಿ ಬೇಕಾದವು ಪಡಿಯಕ್ಕಿ, ಹಾಲು, ಅರ್ಧ ಮಂಚ. ಕೊನೆಗೆ ಆರಡಿ ಉದ್ದ ಮೂರು ಅಡಿ ಅಗಲ ಜಾಗದಲ್ಲಿ ಚಿರಸ್ಥಾಯಿಯಾಗಿ ಮಲಗುತ್ತಾನೆ. ಸಿರಿ ಸಂಪತ್ತುಗಳಿಂದ ಸಮಾಜದಲ್ಲಿ ಗೌರವಾದರಗಳು ಲಭಿಸುತ್ತವೆ ಎಂಬ ಭ್ರಮೆ ನಮಗೆ ಬೇಡ. ಯಾವ ಸಂಪತ್ತೂ, ಯಾವ ಅಧಿಕಾರವೂ ನಮ್ಮನ್ನು ಸಾವಿನಿಂದ ಉಳಿಸಿಕೊಳ್ಳುವುದಿಲ್ಲ. ಸಾವಿಗೆ ಯಾರೂ ಸಂಗಡ ಬರುವುದಿಲ್ಲ ಹೀಗೆ ಬದುಕಿನ ನಶ್ವರತೆಯನ್ನು ಅರಿತು ನಡೆಯಬೇಕು. ಎಲ್ಲ ಬಂಧನಗಳಿಂದ ಮುಕ್ತರಾಗಿ ಬದುಕಬೇಕು.
ಅಂತೆಯೇ ಬಸವಣ್ಣನವರು ಮಾರಯ್ಯನವರ ಘನ ವ್ಯಕ್ತಿತ್ವವನ್ನು ಕುರಿತು ಆಡಿದ ಮಾತುಗಳನ್ನು ನಾವು ಗಮನಿಸಬಹುದು;
ಧನದಲ್ಲಿ ಶುಚಿ ಪ್ರಾಣದಲ್ಲಿ ನಿರ್ಭಯವ ಇದಾವಂಗಗಳ ವಡುವುದಯ್ಯ
ನಿಧಾನ ತಪ್ಪಿ ಬಂದಡೆ ಒಲ್ಲೆನೆಂಬರಿಲ್ಲ,
ಪ್ರಮಾದವಶ ಬಂದರೆ ಹುಸಿಯೇ ನೆಂಬವವರಿಲ್ಲ
ನಿರಾಸೆ ನಿರ್ಭಯ ಕೂಡಲಸಂಗಮದೇವಾ
ನೀನೊಲಿದ ಶರಣಗಲ್ಲದಿಲ್ಲ.

ಮಾರಯ್ಯನವರು ಇವೆಲ್ಲವನ್ನುಮೀರಿ ನಿಂತ ಶರಣರು.
ಇನ್ನೊಂದು ವಚನದಲ್ಲಿ ಬಸವಣ್ಣನವರು ಮೋಳಿಗೆ ಮಾರಯ್ಯನವರನ್ನು “ಮಾರಿತಂದೆ” “ಮೋಳಿಗೆಯ ಮಾರಿತಂದೆ” ಎಂದು ತುಂಬು ಹೃದಯದಿಂದ ನೆನೆದಿದ್ದಾರೆ._
ಭಕ್ತಿ ವಿಶೇಷವ ಮಾಡುವರೆ ಹತ್ತು ಬೆರಳುಂಟು.
ಹಾಸಿ ದುಡಿವರೇ ತನಗುಂಟು ತನ್ನ ಪ್ರಮಥರಿಗುಂಟು.
ಮೋಳಿಗೆ ಮಾರಿ ತಂದೆಗಳಂತೆ ನನ್ಗೆಕಹುದಯ್ಯ?
ರತ್ನದ ಸಂಕಲೆಯನನಿಕ್ಕಿ ಕಾಡಿಹನಯ್ಯ ಕೂಡಲಸಂಗಮದೇವಾ
ಶಿವದೋ! ಶಿವಧೋ!!
ಎಂದು ಪರಿತಪಿಸುತ್ತಾರೆ. ಕೂಡಲಸಂಗನ ಶರಣರು ಸೋಂಕಿನಲ್ಲಿ ಶುಚಿಗಳು. ಸರ್ವಾಂಗ ಕಲಿಗಳು ಸ್ವತಂತ್ರ ಧೀರರು ಸರ್ವಾಂಗ ಧೀರ ಮೋಳಿಗೆಯ ಮಾರಿತಂದೆ ಎಂದು ಬಣ್ಣಿಸುತ್ತಾರೆ.
ಹಾಗೆಯೇ ಮೋಳಿಗೆ ಮಾರಯ್ಯನವರು , ಬಸವಣ್ಣನವರನ್ನು ಕುರಿತು” “ದ್ವಿತೀಯ ಶಂಭು” ಎಂದೇ ಕರೆದು, ತಮ್ಮ ಅಪರಿಮಿತವಾದ ಭಕ್ತಿಯನ್ನು ತಮ್ಮ ವಚನದಲ್ಲಿ ವ್ಯಕ್ತಪಡಿಸುತ್ತಾರೆ.
ಪಾಪ ಪುಣ್ಯವೆಂದು ಹೇಳುವ ಕೂಪರಪ್ಪ ಭಕ್ತರು ಕೇಳಿರಣ್ಣ
ಎನಗೆ ನನ್ನಕಾಣದೆ ನಿಂದಿಸುವನಲ್ಲ. ಕಂಡು ನುಡಿವನಲ್ಲ.
ಅಂದಗಾರಿಕೆಯಲ್ಲಿ ನಡೆವನಲ್ಲ. ಉಂಬಾಗ ಜಂಗಮವೆಂದು
ಸಂಜೆಗೆ ಕಳ್ಳನೆಂದು ನುಡಿವನಲ್ಲ. ವಂದಿಸಿ ನಿಂದಿಸುವ ಸಂದೇಹದವನಲ್ಲ.
ಎನಗೆ ಅಂದದ್ದಿಗೆ ನೂರಿಪ್ಪತ್ತುಸಂದಿತ್ತು.
ಎನ್ನ ನಿನ್ನ ಬಂದವ ಹೇಳಿರಣ್ಣ
ದ್ವಿತೀಯ ಶಂಭು ಬಸವಣ್ಣ. ಮೊದಲಾದ ಅಸಂಖ್ಯಾತ ಪ್ರಮಥಂಗಳು ನೀವು ಹೋದ ಹೊಲಬಿನ ಹಾದಿಯಲ್ಲದೆ ಎನಗೊಂದು ಹಾದಿ ಇಲ್ಲ.
ಬೊಂಬೆ ಸ್ವತಂತ್ರವಿಲ್ಲ. ಆಡಿಸುವ ಸೂತ್ರ ಧಾರಿಗಲ್ಲದೆ
ಐದರಲ್ಲಿ ಹುದುಗಿದ ಇಪ್ಪತೈದರಲ್ಲಿ ಕೂಡಿದ ಒಂದರಲ್ಲಿ ಉಳಿದ ನಿಜ ಸಂದಿಯಲ್ಲಿ ಒಂದನೆಯ ಮಾಡುತ್ತಾ ಇದ್ದೇನೆ. ಇದರಂದವ ಹೇಳ ನಿ:ಖಳಂಕ ಮಲ್ಲಿಕಾರ್ಜುನ i
ಈ ಜಗತ್ತಿನ ಸೂತ್ರಧಾರಿ ಆಡಿಸಿದಂತೆ ನಾನು ನೀವು ಆಡಬೇಕಿದೆ . ನಾವು ಅವನಾಡಿಸುವಬೊಂಬೆಯಂತೆ. ಸ್ವತಂತ್ರರಲ್ಲ. ಬಸವಣ್ಣ, ನೀ ನಡೆದು ತೋರಿ ಹೋದ ಮಾರ್ಗದಲ್ಲಿ ನಾನು ನಡೆಯಬೇಕಿದೆ.
” ಹಿಡಿದ ಹೊಲಕ್ಕೆ ಒಡವೆಯಕೊಡೆನಂದಡೆ ಬಿಡುವರೇ ಕೊಡವಿಗೊಡೆಯರು? ನುಡಿದ ಮಾತಿಂಗೆ ನಡೆಯದಿದ್ದಹೆ,
ಕೆಡೆ ನುಡಿಯದೆ ಬಿಡುವರೆ, ಲಿಂಗವ ನೊಡಗೂಡಿದ ಶರಣರು?
ಇದಕ್ಕೆ ಪಡಿ ಪುಚ್ಚವಿಲ್ಲವೆಂದೆ ನಿ:ಖಳಂಕ ಮಲ್ಲಿಕಾರ್ಜುನ”
ಭೂಮಿಗೆ ಅಥವಾ ಭೂಮಿಯಲ್ಲಿ ಬೆಳೆದ ಬೆಳೆಗೆ ಭೂ ಮಾಲೀಕನಿಗೆ ಯೋಗ್ಯವಾದ ಬೆಲೆಯನ್ನು ಕೊಡಬೇಕಾಗುತ್ತದೆ. ಹಾಗೆಯೇ ನುಡಿದ ಮಾತಿಗೆ ತಕ್ಕುದಾಗಿ ನಡೆಯಬೇಕಾಗುತ್ತದೆ. ಆದರೆ ನುಡಿಯೊಳಗಾಗಿ ನಡೆ ತಪ್ಪಿದರೆ ನಮ್ಮ ವರ್ತನೆಯು ಆ ಭೂಒಡೆಯನಿಗೆ ಅಪಚಾರ ಮಾಡಿದಂತೆ. ಆದ್ದರಿಂದ ನಮ್ಮ ವರ್ತನೆಗೆ ಪ್ರತಿಯಾಗಿ ಅವನಿಂದ ಕೆಟ್ಟ ನುಡಿಗಳನ್ನು ಕೇಳಬೇಕಾಗುತ್ತದೆ. ಹೀಗೆ ನಡೆಯ ನುಡಿ ಶುದ್ಧವಾಗಿರಬೇಕು ಹಾಗೂ ಒಂದಾಗಿರಬೇಕೆಂಬ ಸಂದೇಶವನ್ನು ನೀಡುತ್ತಾರೆ.

ಮೋಳಿಗೆ ಮಾರಯ್ಯನವರನ್ನು ಉಲ್ಲೇಖಿಸುವ ಚಿತ್ರ ಶಾಸನ ಬನವಾಸಿಯ ಮಧುಕೇಶ್ವರ ದೇವಾಲಯದ ತ್ರೈಲೋಕ್ಯ ಮಂಟಪದಲ್ಲಿದೆ. ಶಿವನ ಬಲದಲ್ಲಿರುವ ಎರಡನೇ ಉಬ್ಬು ಶಿಲ್ಪದ ಕೆಳಗೆ “ಮೋಳಿಗೆ ಮಾರಯ್ಯ”ಎಂದು ಕೆತ್ತಲಾಗಿದೆ.
ಇನ್ನು ಲಿಖಿತ ಶಾಸನಗಳಲ್ಲಿ ಹರಿಹರೇಶ್ವರ ದೇವಾಲಯದ ಶಾಸನದಲ್ಲಿ ‘ಮಹಾದೇವ ದಂಡಾ ದೀಪ’ ಕ್ರಿಸ್ತ .ಶಕ. 1155 ಅಳಣಾವರ ಶಾಸನದಲ್ಲಿ ಕದಂಬರ ಕಾಲದಲ್ಲಿ, ಮಹದೇವರಸ’ “ಮಹಾದೇವ ದಂಡನಾಯಕ” ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಡಾ.
ಸುಶೀಲಾ ನರಕೆ ಇವರ ಪಿಎಚ್ಡಿ ಪ್ರಬಂಧದಲ್ಲಿ(ಮೋಳಿಗೆ ಮಾರಯ್ಯ ಮತ್ತು ಮಹಾದೇವಮ್ಮ (2000). – ಒಂದು ಅಧ್ಯಯನ )ಉಲ್ಲೇಖಿಸಲಾಗಿದೆ
ಮೋಳಿಗೆ ಮಾರಯ್ಯನವರು ವಾಸಿಸುತ್ತಿದ್ದ ಸ್ಥಳ ,ಹಾಗೂ ಲಿಂಗೈಕ್ಯರಾದ ಸ್ಥಳದ ಬಗ್ಗೆ ಹೇಳುವುದಾದರೆ- ಬಸವಕಲ್ಯಾಣದಲ್ಲಿ ಇತರೆ ವಚನಕಾರರ ಹೆಸರಿನ ನೆಲೆಗಳಿವೆ. ಆದರೆ ಮೋಳಿಗೆಯ ಮಾರಯ್ಯನವರ ಗುಹೆ ದೊರೆಯುವುದಿಲ್ಲ. ಬಸವಕಲ್ಯಾಣ ಮತ್ತು ಹುಮ್ನಾಬಾದ್ ದಾರಿಯಲ್ಲಿ 15 – 20 ಕಿಲೋ ಮೀಟರ್ ದೂರದಲ್ಲಿ ‘ಮೊಳಕೇರಿಯಲ್ಲಿ’ ವಾಸಿಸುತ್ತಿದ್ದರು ಎಂಬ ಪ್ರತೀತಿ. ಆದರೆ ಇದಕ್ಕೆ ಸೂಕ್ತ ಆಧಾರಗಳಿಲ್ಲ. ಹೆದ್ದಾರಿಯ ಪಕ್ಕದಲ್ಲಿ ಮೋಳಿಗೆ ಮಾರಯ್ಯ ಮತ್ತು ಮಹಾದೇವಮ್ಮನ – ಹೆಸರಿನಲ್ಲಿ ಒಂದು ಗುಡಿಯಿದೆ. ಈ ಗುಡಿಗೆ ಹೋಗುವ ಮಾರ್ಗದಲ್ಲಿ ಒಂದು ದೊಡ್ಡ ಮರವಿದೆ. ಇದಕ್ಕೆ ಜನಪದರು “ಹೆಸರಿಲ್ಲದ ಮರ” ಎಂದು ಕರೆಯುತ್ತಾರೆ. ಯಾರಾದರೂ ಸಸ್ಯ ಶಾಸ್ತ್ರಜ್ಞರು ಈ ಮರದ ಪ್ರಭೇದವನ್ನು ಗುರುತಿಸಿ ನಿಖರವಾಗಿ ಹೇಳಿದರೆ ಸಹಾಯವಾಗಬಹುದು.
ಇನ್ನು ಅವರು ಲಿಂಗೈಕ್ಯರಾದ ಕಾಲವನ್ನು ಅವರ ವಚನದಿಂದ ಕಂಡುಕೊಳ್ಳಬಹುದು. ಬಸವಣ್ಣನವರು ಕ್ರಿಸ್ತ. ಶಕ. 1167 -1170ರ ಅವಧಿಯಲ್ಲಿ ಕೂಡಲಸಂಗಮದಲ್ಲಿ ಲಿಂಗೈಕರಾದರು ಎಂಬುದನ್ನು ವಿದ್ವಾಂಸರು ಒಪ್ಪುತ್ತಾರೆ .ಮಾರಯ್ಯನವರು ಬಸವಣ್ಣನವರ ನಂತರವೂ ಕೆಲಕಾಲ ಕಲ್ಯಾಣದಲ್ಲಿ ಇದ್ದಿರಬಹುದು. ಈ ಮಾತಿಗೆ ಮಾರಯ್ಯನವರ ಈ ಕೆಳಗಿನ ವಚನ ನಮಗೆ ಆಧಾರವಾಗಬಹುದು.
ಮರ್ತೃಕ್ಕೆ ಸಂಗನ ಬಸವಣ್ಣ ಬಾಹಲ್ಲಿ ಮೂರು ರತ್ನವ ಕಂಡು
ಒಂದು ಸಿರಿಯ ಕೈಯಲ್ಲಿ ಕೊಟ್ಟ , ಒಂದು ಗಿರಿಯ ಕೈಯಲ್ಲಿ ಕೊಟ್ಟ, ಒಂದು ಉರಿಯ ಕೈಯಲ್ಲಿ ಕೊಟ್ಟ…..ವ.ಸಂಖ್ಯೆ 2044
ಪ್ರಭುದೇವರು ಬಸವಣ್ಣ ಮುಂತಾದವರು ಮರೆಯಾದರು ಎಂದು ಹೇಳುತ್ತಾರೆ.
ಒಬ್ಬ ಮಹಾದೇವ ಭೂಪಾಲ ಎಲ್ಲ ರಾಜ್ಯ ವೈಭೋಗವನ್ನು ತೊರೆದು ಬಸವಣ್ಣನವರಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದು ಜಂಗಮ ಆರಾಧನೆ -ಕಟ್ಟಿಗೆ ಮಾರುವುದು ಈ ದೈಹಿಕ ಪರಿಶ್ರಮದ ಕಾಯಕವನ್ನು ಮಾಡಿದರು.ತಮ್ಮ ಆದರ್ಶವಾದ ಬದುಕಿನಲ್ಲಿ ಕಂಡುಂಡ ಅನುಭಾವದ ನುಡಿಗಳನ್ನು ನಾವು ಮೆಲಕು ಹಾಕೋಣ.
ನಿನ್ನ ಕಾಣಿಕೆಯಲ್ಲಿ ನಿನ್ನ ಕಾಯಕಷ್ಟದ ಬೆವರು ಅಂಟಿರಬೇಕು
ಅಮೃತದ ಸಾನಿಧ್ಯದಲ್ಲಿದ್ದರೂ ಅರಿಯದೆ ಕೆಚ್ಚಲಿನ ಉಣ್ಣೆಯಂತೆ ಬದುಕಬಾರದು
ಆನೆ ಕುದುರೆ ಬಂಡಿ ಭಂಡಾರ ವಿದ್ದಡೇನೋ ತಾನು ಉಂಬುದು ಪಡಿಯಕ್ಕಿ
ಸುಗಂಧವ ಕೊಡುವ ಮೃಗವೆಂದರೆ ನೋಯಿಸಿ ಬಂಧಿಸಿದರೆ ದುರ್ಗಂಧವಲ್ಲದೆ ಗಂಧ ಬಂದುದು ಉಂಟೆ?
ಶಿವ ನಿಮಿತ್ತ ಅರ್ಥದ ಸಲೆವೃತ್ತಿಯೆ
ನನಗೆ…. ಅಂಗರಕ್ಷಣೆಗಲ್ಲ. ಹರಗಣರ ತೃಪ್ತಿಗೆ.
ಬಡವನೆಂದು ನಿಮ್ಮವರು ನಿಧಾನವ ನೀವರಯ್ಯ!
ನಾಬಡವನಾದರೆ ನೀ ಬಡವನೇ? ಎನ್ನ ನಿ:ಳಂಕ ಮಲ್ಲಿಕಾರ್ಜುನ.

*ಎನ್ನ ಕಾಯಕದ ಕಾಸ್ಟ* *ಚಿನ್ನವಾದಲ್ಲಿ ಮತ್ತಾವಾಗುಣ* *ಅವಗುಣ ಹಿಂಗಿ ಲೇಸಾದಲ್ಲಿ ಅದು ತನ್ನಯ ವಿಶ್ವಾಸದಿಂದ.*
*ಬಯಲು ಬತ್ತಲೆ ಯಾದರೆ ಹೊದ್ದಿಸುವವರಿನ್ನಾರೋ?*
*ಊರು ಕೆಟ್ಟು ಸೂರೆ ಆಡುವಲ್ಲಿ ಯಾರಿಗಾರು ಇಲ್ಲ!*
*ಅಂಬು ಇಲ್ಲದಿದ್ದರೆ ಅಂಬುಜವ ನಾರು ಬಲ್ಲರು?*
*ಕಾಯ ಸಮಾಧಿಯ ಒಲ್ಲೆ,* *ನೆನಹು ಸಮಾಧಿಯನೊಲ್ಲೇ, ಕೈಲಾಸ ವೆಂಬ ಭವಸಾಗರ ಒಲ್ಲೆ”*
*ಈದಿಂಗೆ ನಾಳೆಗೆ ಎಂದು ಸಂದೇಹವ ಮಾಡಿದರೆ ಲಿಂಗಕ್ಕೆ ದೂರ , ಜಂಗಮಕ್ಕೆ ಸಲ್ಲ,* *ಪ್ರಸಾದವಿಲ್ಲ.*
*ಹೀಗೆ ಮಾರಯ್ಯನವರು* ಬದುಕಿಗೆ ಅವಶ್ಯವಾದ ಮೌಲ್ಯಗಳನ್ನು ಪ್ರತಿಪಾದಿಸಿದರು. ನಿತ್ಯ ತೃಪ್ತಿಯ ನಿರಾಡಂಬರ ಜೀವನವನ್ನು ಸಾಧಿಸಿದರು. ಮನದ ಆಸೆ ರೋಷಗಳಿಂದ ಮುಕ್ತರಾಗಿ ಭಕ್ತಿಯಿಂದ ಜ್ಞಾನವನ್ನು, ಜ್ಞಾನ ದಿಂದ ವೈರಾಗ್ಯವನ್ನು, ವೈರಾಗ್ಯದಿಂದ ನಿಜದ ನಿಶ್ಚಯವನ್ನು ಗಳಿಸಿ
ಬಂದೂದನ್ನು ಇಲ್ಲವೆನ್ನದೆ ಬಾರದುದನ್ನು ಬಯಸದೆ ಬೇಡಬಂದವರಿಗೆ ಕೊಟ್ಟು ಅಂಬಲಿಯನ್ನೇ ಅಮೃತವನ್ನಾಗಿಸಿ ನಿಜಗೂಡಿದ ಬೆಳಕಾಗಿ ನಿ:ಖಳಂಕ ಮಲ್ಲಿಕಾರ್ಜುನ ಲಿಂಗದಲ್ಲಿ ತುಂಬಿ ಇಂಬಾಗಿ ಹೋದುದು ಒಂದು ಪವಾಡ. ಮಾರಯ್ಯ ದಂಪತಿಗಳ ಜೀವನವೇ ಒಂದು ಅದ್ಭುತ ರಮ್ಯ ಪವಾಡ.

ಶಾರದಾ. ಪಾಟೀಲ. (ಮೇಟಿ)
ಬಾದಾಮಿ.

Don`t copy text!