ಗಜೇಶ ಮಸಣಯ್ಯ
“ಲಿಂಗವಂತನು ತಾನಾದ ಬಳಿಕ ಅನುಭವದ ವಚನಗಳ ಹಾಡಿ ಸುಖದುಃಖಗಳಿಗೆ ಭೇದ್ಯವಾಗಿರಬೇಕು”-ಎಂಬ ಸಿದ್ಧರಾಮರ ವಚನವು ಸಾಮಾನ್ಯರೂ ಅಸಾಮಾನ್ಯರೂ ಸ್ತಿಯರೂ ವಚನ ರಚನೆಗೆ ತೊಡಗಿದ್ದುದು ಚಳುವಳಿಯ ಪ್ರಖರತೆಯ ಬಿಂದು ಭಾಗವೇ ಆಗಿತ್ತು. ಅದು ಸಹಜವೂ ಮತ್ತು ಕರ್ತವ್ಯವೂ ಎಂಬ ಭಾವವಾಗಿ ಹೊರಹೊಮ್ಮಿತು. ಅದಕ್ಕೇ ವಚನಗಳು ಕನ್ನಡಮಯವಾಗಿ ಜನ ಮಾನಸರಿಗೆ ಅರ್ಥೈಸುವ ಕಾರ್ಯವು ಜನಪ್ರಿಯವಾಯಿತು.
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. . . ಲಿಂಗಕ್ಕೆ ಮಾತಿಲ್ಲ ಆದರೆ ಲಿಂಗವನ್ನು ಸ್ಪಂದಿಸಲಿಕ್ಕೆ ಹುಟ್ಟಿದವು ವಚನಗಳು. ಅನುಭಾವವನ್ನು ವಚನವನ್ನಾಗಿಸಿದ ಶರಣರಲ್ಲಿ ಗಜೇಶ ಮಸಣಯ್ಯನು ಶ್ರೇಷ್ಠನೆನಿಸುತ್ತಾನೆ.
ಗಜೇಶ ಮಸಣಯ್ಯ ಬಸವಣ್ಣವನವರ ಕಾಲದ ಸಮೀಪದಲ್ಲಿ ಆಗಿ ಹೋದ ಶಿವಶರಣ, ವಚನ ವಾಙ್ಮಯದ ಪ್ರತಿಯೊಂದು ವಚನ ಸಂಗ್ರಹದಲ್ಲಿ ಅವನ ವಚನಗಳು ಕಂಡು ಬರುತ್ತವೆ. ಗುಬ್ಬೀಮಲಹಣ ಮಸಣಯ್ಯರು ಅವನ ವಚನಗಳನ್ನು ತಮ್ಮ ಗ್ರಂಥದಲ್ಲಿ ಉದಾಹರಿಸುತ್ತಾನೆ. ಶಿವಶರಣ ಚರಿತ್ರೆಗಳಲ್ಲಿ ಹಲವು ಕಡೆಗೂ ಕಂಡು ಬರುತ್ತದೆ. ಅವನ ಜನ್ಮಸ್ಥಳ ಅಕ್ಕಲಕೋಟೆ ಸಮೀಪದ ಕರಜಿಗೆ ಗ್ರಾಮ ಅಲ್ಲಿ ಗಜೇಶ್ವರನ ದೇವಾಲಯವಿದೆ. ಅಲ್ಲಿ ೪೦ ಮೈಲಿಗಳ ದೂರದಲ್ಲಿ ಅಳಂದ ತಾಲೂಕಿನ ಮುನವಳ್ಳಿಯಲ್ಲಿ ಮಸಣಯ್ಯನ ದೇವಾಲಯವಿದೆ. ಪ್ರತಿವರ್ಷ ಜಾತ್ರೆಯು ನಡೆಯುತ್ತದೆ.
ಭೈರವೇಶ್ವರ ಕಾವ್ಯದಲ್ಲಿ ಉಲ್ಲೇಖಿತವಾದಂತೆ ಮಸಣಯ್ಯನ ಲಿಂಗಪೂಜಾರತಿ ಪ್ರಸಿದ್ಧವಾದುದು. ಜಂಗಮದಾಸೋಹ ಲಿಂಗಪೂಜೆಯಲ್ಲಿ ನಿರತನಾಗಿದ್ದು ಬಿಸಿಲು, ಮಳೆ, ಗಾಳಿ, ಹಸಿವೆ, ನೀರಡಿಕೆ, ನಿದ್ರೆಗಳು, ಹುಲಿ, ಕರಡಿ, ವಿಷಸರ್ಪಗಳೂ, ಶರಭ, ವೃಶ್ಚಿಕ, ಭೂತ, ಬೇತಾಳ ಇವುಗಳ ಭಾವ ಬಂದಡೆಯೂ ಲಿಂಗಪೂಜೆಯ ಬಿಟ್ಟು ತೊಲಗಬಾರದೆಂಬ ನಿಷ್ಠೆ ಆತನದು.
ಒಂದು ದಿನ ಮಸಣಯ್ಯನು ಗುರುದರ್ಶನಕ್ಕೆ ಹೋಗುವಾಗ ದಾರಿಯಲೊಂದು ನದಿಯ ಕಂಡು ಶಿವಪೂಜೆಗೆ ಮೂರ್ತವ ಮಾಡಿ ಶಿವಧ್ಯಾನದಲ್ಲಿ ಮೈಮರೆತ. ಇವನ ಲಿಂಗನಿಶ್ಚಯವ ನೋಡಬೇಕೆಂದು ಶಿವನು ಗಗನವು ಇಬ್ಭಾಗವಾಗುವಂತೆ ಮಳೆ ಸುರಿಸಲು ಗುಡುಗು ಗದ್ದರಿಸಿದರೂ, ಮಿಂಚು ಕೋರೈಸಿದರೂ, ಸಿಡಿಲು ಖಡಲ್ ಎಂದರೂ ಎಚ್ಚರವಿಲ್ಲ, ಅವನಿಗೆ ಪ್ರಕೃತಿಯೇ ಸೋತು ಶರಣಾಯಿತು. ನದಿಗೆ ನೆರೆಬಂದು ಹೋಗಲು ಮುಸುಕಿ ಬರಲಮ್ಮದೆ ಬಾಳ ಮಾರುದ್ಧದಲ್ಲಿ (ಇಬ್ಬೊಳೆಯಾಗಿ) ಎರಡು ಹೊಳೆಯಾಗಿ ಅಗಲಿ ಮುಂದೆ ಅವನನ್ನು ದಾಟಿ ಮುಂದೆ ಕೂಡಿ ಒಂದಾದ ಪರಿಯನ್ನು ಬಂದ ಜನರೆಲ್ಲ ನಿಬ್ಬೆರಗಾಗಿ ನೋಡಿ ನಿಂತರು. ಕನಸಿನಂತಾಗಿತ್ತು ಮಸಣಯ್ಯ ಮಹಾಲಿಂಗ ಗಜೇಶ್ವರನೆಂಬ ಪ್ರಾಣಲಿಂಗದಲ್ಲಿ ಒಂದಾಗಿದ್ದ.
“ಅಗಲಿದ ನಲ್ಲನ ಕನಸಿನಲಿ ಕಂಡು ಸುಖಿಯಾದಿರವ್ವಾ|
ಕಂಡ ಕನಸು ದಿಟವಾದರೆ ಅವ ನಮ್ಮನೆಲ್ಲ ಮನಸುಳ್ಳವರು ನೀವು ಪುಣ್ಣೆಗೆಯಿರವ್ವಾ.
ಮಹಾಲಿಂಗ ಗಜೇಶ್ವರನ ಅಗಲಿದರೆ ನಿದ್ರೆ ನಮಗೆ ಬಾರದು ಕನಸೆಲ್ಲಿಂದ ಬರುವುದವ್ವಾ.”
ಎಂಥ ಅದ್ಭುತ ಸುಂದರ ಕಲ್ಪನೆ ಕನಸು ಕಟ್ಟುವಿಕೆ ಲಿಂಗವ ನುತಿಸುವ ವಿಕಳಾವಸ್ಥೆಯಲ್ಲಿ ನಿರವಯಲಾದವನು. ಲಿಂಗಾAಗ ಸಾಮರಸ್ಯದಲ್ಲಿ ಗಜೇಶ ಮಸಣಯ್ಯ ಎಷ್ಟು ಉನ್ನತ ಸ್ಥಿತಿಯನ್ನು ಹೊಂದಿದ್ದನೆಂಬುದು ಗೊತ್ತಾಗುತ್ತದೆ.
ಎನ್ನ ಕಡೆಗಣ್ಣು ಕೆಂಪಾಗಿತ್ತವ್ವಾ! ಎನ್ನ ನಳಿತೋಳು ಉಡುಗಿದುದವ್ವಾ|
ಇಕ್ಕಿದ ಹವಳದ ಸರ ಬಿಳುಪಾದುದವ್ವ| ಮುಕ್ತಾಫಳಹಾರದಿಂದಾನು
ಬೆAದೆನವ್ವಾ| ಇಂದು ಮಹಾಲಿಂಗ ಗಜೇಶ್ವರನು
ಬಹಿರಂಗಲೊಲ್ಲದೆ ಅಂತರಂಗದಲ್ಲಿ ನೆರೆದ ತಾಣ ಅವ್ವಾ|
ವಚನ ಸಾಹಿತ್ಯದಲ್ಲಿ ಸತಿಪತಿ ಭಾವದ ವಚನಗಳು ಮುಪ್ಪುರಿಗೊಂಡಿವೆ. ಕಾರಣ ಸತಿಪತಿಭಾವ-ಲಿಂಗಾAಗ ಸಾಮರಸ್ಯದ ಮೂಲ ತಿರುಳು. ಆ ಭಾವದ ತೀವ್ರತೆಯನ್ನು ಉಳಿಸಿ- ಬೆಳೆಸಿದವರಲ್ಲಿ ಅಕ್ಕಮಹಾದೇವಿ ಬಸವಣ್ಣ ಗುರುಲಿಂಗದೇವ ಗಜೇಶ ಮಸಣಯ್ಯ ಪ್ರಮುಖರೆನ್ನಬಹುದು. ಭಾವಭಾಷೆಗಳ ಸೌಂದರ್ಯದಲ್ಲಿ ಅಕ್ಕಮಹಾದೇವಿಯ ವಚನಗಳಿಗೆ ಹೊಯಿಕೈಯಾಗಿ ನಿಲ್ಲಬಲ್ಲ ವಚನಗಳನ್ನು ನೀಡಿರುವ ಮಹಾತ್ಮ ಗಜೇಶ ಮಸಣಯ್ಯ ಶರಣಸತಿ ಲಿಂಗಪತಿ ಭಾವದ ಸೀಮೆಯನ್ನು ವಿಸ್ತರಿಸಿದವರು.
ಅಕ್ಕಮಹಾದೇವಿ ಎಷ್ಟೆಂದರೂ ಹೆಣ್ಣಾಗಿ ಹುಟ್ಟಿದಾಕೆ ಸತಿಪತಿ ಭಾವ ಆಕೆಗೆ ಸಹಜವಾದುದು. ಆದರೆ ಗಂಡಾಗಿ ಹುಟ್ಟಿದ ಗಜೇಶ ಮಸಣಯ್ಯ ಈ ಭಾವದಲ್ಲಿ ಆಕೆಯ ಎತ್ತರಕ್ಕೆ ಏರುವುದು ಕೌತುಕಗಳಲ್ಲಿ ಕೌತುಕ.
ಪರಮಾತ್ಮನನ್ನು ಪತಿಯಾಗಿಸಿ ಅವನನ್ನು ಒಲಿಸುವ ಪರಿಗಳನ್ನು ಅವನ ಹಂಬಲವನ್ನು ಬಹಳ ಸುಂದರವಾಗಿ ಅಭಿವ್ಯಕ್ತಿಸುತ್ತಾನೆ. ಅವನ ಒಲವನ್ನು ಪಡೆಯಲು ಹಾತೊರಿಯುವಿಕೆ, ಆ ಮನಸ್ಥಿತಿಯನ್ನು ಬಣ್ಣಿಸುತ್ತಾನೆ. . . “ಅಗಲಲಾರೆನು ಸಖಿಯೇ ಬೆಳದಿಂಗಳು ಬಿಸಿಲಾಯಿತ್ತು ಅಗಲಲಾರೆನು ಇನ್ನಿನಿಯನ ದಶಾವಸ್ಥೆಗೊಂಡನು. ಜವ್ವನ ಬಳಲ್ದ ಸ್ತಿçÃಯರ ಮುಖಕಾಂತಿಯAತಾದೆ ನೋಡವ್ವಾ ಪರಿಮಳವಿಲ್ಲದ ಪುಷ್ಪದಂತಾದೆ ನೋಡವ್ವ, ಚಂದ್ರಮನಿಲ್ಲದ ಇರುಳಿನಂತಾದೆ ನೋಡವ್ವ ಮಹಾಲಿಂಗ ಗಜೇಶ್ವರನಗಲುವದರಿಂದ ಸಾವುದು ಸುಖ ನೋಡವ್ವಾ. . .” ಎನ್ನುವಲ್ಲಿ ಬಾವತೀತ್ರತೆ ಎದ್ದುಕಾಣುತ್ತದೆ. . “ಅಯ್ಯಾ ಒಲಿದವರ ಕೊಲುವೆಡೆ ಮಸೆದ ಕೂರಲಗೇಕೆ? ಅವರನೊಲ್ಲೆನೆಂದರೆ ಸಾಲದೆ?” ಎಂಥ ಅದ್ಭುತ ಅಲಂಕಾರಿಕ ಉತ್ಪತ್ರೀಕ್ಷಿತ ಮಾತು. ಅವನ ಓಜಸ್ಸು ಅವನ ಮಾತುಗಳಲ್ಲಿ ನಮ್ಮ ಮನವನ್ನು ಬೆಳಗುತ್ತವೆ.
ಕನಸಿನಲ್ಲಿ ಕಾಡುವ ಕಾಣುವ ನಲ್ಲನನ್ನು ಕಾಣುವ ನೀವೇ ಸುಖಿಗಳು, ಪುಣ್ಯವಂತರು. ಆದರೆ ಮಹಾಲಿಂಗ ಗಜೇಶ್ವರನ ಅಗಲಿದಡೆ ನಿದ್ರೆಯಿಲ್ಲ ಕನಸೆಲ್ಲಿ ಬಂದಿತು ಎಂಬ ಪ್ರಶ್ನೆ ನಮ್ಮಗಳ ಶಬ್ಧಮುಗ್ಧರನ್ನಾಗಿಸುತ್ತದೆ.
ಲಿಂಗಪತಿಯಾಗಿ ಹಂಬಲಿಸುವ ಸತಿಯ ಕಾಯುವಿಕೆ ಕಾತರತೆಯು. . . “ಒಳಗೆ ಶೋಧಿಸಿ ಹೊರಗೆ ಧೂಗಳಿಸಿ ಭಾವದಿಂದ ಗುಡಿತೋರಣವ ಕಟ್ಟಿದೆನಯ್ಯ ಲಿಂಗ ಬಾರಯ್ಯ ಎನ್ನದೇವ ಬಾರಯ್ಯ. . .” ಅವನು ಬೇರೆಲ್ಲೂ ಇಲ್ಲ ಎನ್ನಂತರAಗದ ಪರಂಜ್ಯೋತಿಯೇ ನಿಮ್ಮ ನಾನಿದಿರು ಗೊಂಬೆ ನೀ ಬಾರಯ್ಯ ಎನ್ನುವಲ್ಲಿ ಅರಿವಿನ ಒಳಧ್ವನಿಯೊಂದು ಆರ್ತವಾಗಿಸುವ ಒಂದು ಉಯಿಲು ಮೂಡಿಬರುತ್ತದೆ. . “ಗತಿಮತಿಯಿಲ್ಲದ ಚೈತನ್ಯವಿಲ್ಲದ, ತೊತ್ತಿನ ಮನಸ್ಸು ಸಲುವುದೆ? ಅವಳ ಮುನಿಸು ಅವಳಿಗೆ ಕೇಡು. .” ಎಷ್ಟು ಸುಂದರ ವಾಸ್ತವಿಕ ಸತ್ಯದ ವರ್ಗಬೇಧ ಸ್ಥಾನಮಾನಗಳ ಸ್ಪಷ್ಟತೆ ಕಂಡುಬರುತ್ತದೆ.
ಹೆಣ್ಣಿನ ಮಧುರ ಭಾವಗಳು ಮುಪ್ಪರಿಗೊಂತ ಚಿತ್ರಣ. “ತಮ್ಮ ತಮ್ಮ ಗಂಡರು ಚೆಲುವರೆಂದು ಕೊಂಡಾಡುವ ಹೆಣ್ಣು ಪುಣ್ಯಜೀವಿಗಳು. . ನಾನು ಎನ್ನ ನಲ್ಲನೆಂತರವನೆಗಜೇಶ ಮಸಣಯ್ಯಂದರಿಯೆನವ್ವ. . ನೀರೆಯ ಸೆರಗು ಸಡಿಲಿಸಿದೊಡನೆ ಆನೇನೆಂದರಿಯನವ್ವ ಎಂಬಲ್ಲ ಅವನ ಚಿತ್ರಕಶಕ್ತಿಯ ಪ್ರತಿಭಾಶಕ್ತಿ ಎದ್ದು ಕಾಣುತ್ತದೆ. “ಅವನ ಸೋಂಕಿನಲ್ಲೆ ಸುಖಿಯಾದವಳು ಅಗಲಿದಡೆ ಕರಿಗೊಂಡವಳು. . . ಮನದಲಿ ಬೆರೆಸುವ ಭಾವದಲಿ ಬೆರೆಸುವೆ ಎನ್ನುತ್ತ ಆ ಲಿಂಗಾಂಗ ಸಾಮರಸ್ಯದ ವಿರಳಾವಸ್ಥೆಯ ವರ್ಣನೆಯಲ್ಲಿ ಅದ್ಭುತತೆಯನ್ನು ಕಾಣಬಹುದು. ಅಕ್ಕಮಹಾದೇವಿಗಿಂತ ಒಂದು ಹೆಜ್ಜೆ ಮುದಡಿ ಇಡುತ್ತಾನೆ. ಮಹಾಲಿಂಗ ಗಜೇಶ್ವರನ ನೆರೆದ ಪರಿಯಂತು
“ಉಧರತಾಗಿದ ಮಾತು ಅಧರವಾಗಿದ್ದಲ್ಲಿ ಬೀಸರವೋದುದೆಂದು ಅಧರವ ಮುಟ್ಟಿಕೊಂಡಳವ್ವೆ| ಕಂಗಳ ಕೊನೆ ಬೀಸರವೋದುದೆಂದು ಕಂಗಳ ಮುಚ್ಚಿಕೊಂಡಳವ್ವೆ
ಪರಿಮಳ ಬೀಸರವೋದುದೆಂದು ಅಳಿಗೆ ಬುದ್ಧಿಯ ಹೇಳಿದಳವ್ವೆ|
ಮನ ಬೀಸರವೋದುದೆಂದು ದಿನಕರನ ಕಾವಲ ಕೊಟ್ಟಳವ್ವೆ . . .”
ಇದು ಮಹಾಲಿಂಗನ ನೆರೆವ ಭರದ ರೀತಿ. ಎಲ್ಲೂ ಕೇಳದ ಕಂಡರಿಯದ ಪರಿಯಿದು. ಅಂಗಸಂಗದ ಸ್ಥಿತಿ ಹಸು ಮಗುವಿನ ಸ್ಥಿತಿಯಂತೆ ಭಕ್ತವೃಂದಕ್ಕಾಗಿ ಓಲಾಡುವ ಸ್ಥಿತಿಯದು. . . ಗಜೇಶ್ವರನು ಬಹಿರಂಗವನೊಲ್ಲದೆ ಅಂತರಂಗದಲ್ಲಿ ನೆರೆದ ಕಾಣಾ ಅವ್ವಾ. ಅವನು ಅಂತರAಗಲ್ಲಿ ಬರೆಯುವಂತವನು. ಅವನು ನೆರೆಯುವ ಭರವೆಂದರೆ ಮೈಯೆಲ್ಲಾ ಕೈಯಾಗಿ ಹೊರಬೇಕವ್ವಾ. . . ಅವನ ನೆರೆದ ಭರದಿಂದ ನೊಂದು ಅಂಕದ ಮೇಲೆ ಬಿದ್ದಂತೆ ಎನ್ನುವಲ್ಲಿ ಮಸಣಯ್ಯನ ಶಬ್ಧ ಭಾವ ನಿರ್ಭೀಢತೆ ಎದ್ದುಕಾಣುವಂಥದ್ದು. ಅವನ ಸೋಂಕಿದಡೆ ಅವನ ಒಲವು ಎನಗೆ ಸುಖದ ಮೊದಲು ನೋಡವ್ವ ಎನ್ನುವಲ್ಲಿ ಇಷ್ಟ – ಪ್ರಾಣ – ಭಾವ ಲಿಂಗಗಳ ಅನುಸಂಧಾನದಿAದ ಅವುಗಳಾಚೆಯ ನಿಷ್ಕಲಲಿಂಗ, ಶೂನ್ಯಲಿಂಗ, ನಿಶೂನ್ಯಲಿಂಗಗಳ ನಿಲುವನ್ನು ನಿಲುಕಿಸಿಕೊಂಡಿದ್ದ ಮಸಣಯ್ಯ ಎಂಬುದು ವೇದ್ಯವಾಗುತ್ತದೆ.
ಲಿಂಗಸಂಗಕ್ಕೆ ನಿಲುಕ ಭಾವಲಿಂಗ ದೇವನು ಅವ್ವಾ, ಆತನ ಬೆರಸಿದ ಕೂಟವ ಏನೆಂದು ಹೇಳುವೆನವ್ವಾ| ಹೇಳಲುಬಾರದು ಕೇಳಲುಬಾರದು, ಏನು ಹೇಳುವೆನವ್ವಾ? ಶಿಖಿ ಕರ್ಪೂರ ಬೆರೆಸಿದಂತೆ ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ ಹೇಳಲು ಬಾರದವ್ವಾ. . . ಎನ್ನುತ್ತಾ ಲಿಂಗಾಂಗ ಸಾಮರಸ್ಯದ ಅನುಭವ ಎಂಥದೆAಬುದನ್ನು ಸ್ಪಷ್ಟೀಕರಿಸುತ್ತಾನೆ . . “ಹೊಸ ಮದುವೆ ಹೆಸೆಯುಡುಗದ ಮುನ್ನ ಹೊಸಿದ ಅರಿಶಿನ ಬಿಸಿಲಿಂಗೆ ಹರಿಯವ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯದ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ ಹಿಡಿಯಲಿಲ್ಲದಿರ್ದಡೆ ಮಹೇಶ್ವರನೆಂಬೆ, ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ, ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ ಆಸೆಯಿಲ್ಲದಿರ್ದಡೆ ಶರಣನೆಂಬೆ, ಐದರ ಸಂಪರ್ಕ ವಿಯೋಗವಾದಡೆ ಐಕ್ಯವೆಂಬೆ ಐಕ್ಯದ ಸಂತೋಷ, ಹಿಂಗಿದಡೆ ಜ್ಯೋತಿರ್ಮಯನೆಂಬೆ, ಇಂತಾಗಬೇಕೆAಬ ಈ ಮನದ ದೇಹವನಿರಿದೆಡರಿಯದು, ತರಿದಡರಿಯದು, ಬೈದಡರಿಯದು, ಸುಖವನರಿಯದು, ದುಃಖವನರಿಯದು ಈ ಚತುರ್ವಿದತಾಗು ನಿರೋಧವನರಿಯದಿರ್ದಡೆ ಆತನೇ ಮಹಾಲಿಂಗ ಗಜೇಶ್ವರನೆಂಬೆ . . ಎಂಬಲ್ಲಿ ತನು-ಮನ, ಭಾವಗಳನ್ನು ಮೀರಿದ ಮಹಾಲಿಂಗ ಸ್ಥಿತಿ ಅಷ್ಟಾವರಣಗಳ ಮೂಲಕ ಸಾಧಿಸುವ ಸಿದ್ಧಿಯನ್ನು ಸ್ಪಷ್ಟಪಡಿಸುತ್ತಾನೆ. ತತ್ವಕ್ಕೆ ತೊತ್ತಾಗಿ, ನಿತ್ಯಕ್ಕೆ ತೊತ್ತಾಗಿ ಬಾಳಿ ಮುಕ್ತರಾದವರ ಮಾಲಿಕೆಯಲ್ಲಿ ಮಸಣಯ್ಯನಿಗೊಂದು ಮನ್ನಣೆಯ ಸ್ಥಾನವಿದೆ. ಅವನ ವಚನಗಳಲ್ಲಿ ಕಂಡುಬರುವ ಉಕ್ತಿಗಳು ಗಾದೆಮಾತಿನಂತೆ ನುಡಿಗಟ್ಟುಗಳಂತೆ ಅನುಭಾವವೇ ಹರಳುಗಟ್ಟಿವೆ. ಅತ್ಯದ್ಭುತ ಸಾಹಿತ್ಯಿಕ ಅಭಿವ್ಯಕ್ತಿ ಆತನ ವಚನಗಳು ನಮ್ಮ ಮನೋಮಯ ಭಾವಕೋಶವನ್ನು ಎಚ್ಚರಿಸುವ ಕಾರ್ಯಗೈಯುತ್ತವೆ.
“ಒಲಿದವರೆ ಕೊಲುವಡೆ ಮಸೆದ ಕೂರಲಿಗೇಕೆ ಒಲ್ಲೆನೆಂದಡೆ ಸಾಲದೆ?”
“ಇದ್ದಿಲ ಮಿಡಿದಡೆ ರಸವುಂಟೆ?”
“ಒಲಿದವರನಗಲಿದರೆ ಸರ್ವಾಂಗಬೇವುದವ್ವಾ”
“ಮಾತAಗಿಯ ಹೊಳೆಯಲ್ಲಿ ಉತ್ತಮನ ನೆಳಲು
ಸುಳಿದಡೆ ರೂಹು ಹೊಲೆಯನಾಗಬಲ್ಲುದೆ?”
ಗಜೇಶ ಮಸಣಯ್ಯನ ವಚನಗಳಲ್ಲಿ ಭಾವಸ್ಪಷ್ಟತೆ ಶಬ್ಧಸ್ಪಷ್ಟತೆ ಕಂಡುಬರುತ್ತದೆ. ಪ್ರೇಮದ ಉತ್ಕಟ ಭಾವವನ್ನು ಅನುರಾಗವನ್ನು ಅನೇಕ ರೀತಿಯಿಂದ ಹೇಳಲಿವೆ. ಪರಮಾತ್ಮನ ಮೇಲಿನ ಒಲವು ಹಂಬಲ, ಕಾತರತೆ, ಪಡೆಯುವ ಮನಸ್ಥಿತಿ, ಅವನ ಮಧುರ ವಚನಗಳು ಸ್ಪಷ್ಟಪಡಿಸುತ್ತಿವೆ. ಅವನ ತೊತ್ತಾಗಿ ಸೇವೆ ಮಾಡಿದಾಗಲೇ, ಪವಿತ್ರ ಆಚರಣೆ ಅನುಸರಿಸಿದಾಗಲೇ ಪರಮಾತ್ಮನ ಒಲವನ್ನು ಪಡೆಯಲು ಸಾಧ್ಯವೆಂಬ ನಿಲುವು ಆತನದು. ಅವನ ಒಟ್ಟು ೫೯ ವಚನಗಳು ಪ್ರಕಟಗೊಂಡಿವೆ. ಶರಣಸಂಕುಲದಲ್ಲೇ ಅತ್ಯಂತ ಮಹತ್ವದ ವಚನಕಾರನಾಗಿ ಕಂಡುಬರುತ್ತಾನೆ. ಅನುಭಾವವನ್ನು ಶಬ್ಧರೂಪವಾಗಿ ಗಟ್ಟಿಗೊಳಿಸುತ್ತಾನೆ. ಸೊಬಗಿನಿಂದ ಸೊಗಡಿನಿಂದ ಮನಸೂರೆಗೊಳ್ಳುವ ಸುಂದರ ವಚನಗಳಾಗಿಸಿದ್ದಾನೆ. ಕಾವ್ಯದ ಚಮತ್ಕೃತಿ ಎದ್ದು ಕಾಣುತ್ತದೆ. ಲಿಂಗಾಂಗ ಸಾಮರಸ್ಯದ ಸ್ಥಿತಿಯನ್ನು ಅರುಹುತ್ತಲೇ ನಮಗೆ ಸತಿಪತಿ ಭಾವವನ್ನು ಅರ್ಥೈಸುತ್ತದೆ. ಪ್ರತಿಯೊಂದು ವಚನದಲ್ಲಿ ಕನ್ನಡ ನುಡಿಯ ಸೊಬಗು ಹೊರಹೊಮ್ಮಿವೆ. ಸಾಹಿತ್ಯಿಕ ಮೌಲ್ಯವನ್ನು ಒಳಗೊಂಡಿವೆ.
–ಡಾ. ವೀಣಾ ಹೂಗಾರ,
ಮುಖ್ಯಸ್ಥರು, ಕನ್ನಡ ವಿಭಾಗ,
ಕೆ.ಎಲ್.ಇ. ಸಂಸ್ಥೆಯ,
ಶ್ರೀ ಮೃತ್ಯುಂಜಯ ಕಲಾ ಹಾಗೂ
ವಾಣಿಜ್ಯ ಮಹಾವಿದ್ಯಾಲಯ,
ಧಾರವಾಡ-೫೮೦೦೦೮