ಬಸವ ದೇವಮಾನವನಾದ ಪರಿ

ಅಕ್ಕನ ನಡೆ ವಚನ – 24

ಬಸವ ದೇವಮಾನವನಾದ ಪರಿ

ದೇವಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ ನಿಮಗೂ ಎನಗೂ ಎಮ್ಮ ಶರಣರಿಗೂ ಬಸವಣ್ಣನೇ ದೇವರು.

ಹನ್ನೆರಡನೇ ಶತಮಾನವು ಬಸವಾದಿ ಶರಣರ ಸುವರ್ಣ ಯುಗ. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕವಾಗಿ ವಿಭಿನ್ನ ಚಿಂತನೆ ಮಾಡಿದರು. ಅದುವರೆಗೂ ಸಮಾಜದಲ್ಲಿರುವ ವ್ಯವಸ್ಥೆಗೆ ಪರ್ಯಾಯ ಕಂಡುಕೊಂಡರು. ಜಾತಿ ಪದ್ಧತಿ, ದೇವರ ಪರಿಕಲ್ಪನೆ, ಲಿಂಗ ಸಮಾನತೆ, ಕಾಯಕ ನಿಷ್ಟೆ, ಪ್ರಸಾದ, ದಾಸೋಹ, ಮಹಿಳಾ ಸ್ವಾತಂತ್ರ್ಯ ಮುಂತಾದ ಬದಲಾವಣೆಗಳತ್ತ ಹೆಜ್ಜೆ ಹಾಕಿದರು. ಆಗ ಬಸವಣ್ಣನ ಹೆಸರು ಬಹುದೂರ ತಲುಪಿತು. ಅನೇಕರು ಇವರ ಭಕ್ತಿಗೆ ಆಕರ್ಷಿತರಾಗಿ ಕಲ್ಯಾಣದ ಕಡೆಗೆ ಬರಲಾರಂಭಿಸಿದರು. ಮೇಲಿನ ವಚನದಲ್ಲಿ, ಬಸವಣ್ಣನನ್ನು ಅಕ್ಕಮಹಾದೇವಿ ಮನದುಂಬಿ ಹೊಗಳಿ ಹಾರೈಸಿದ್ದಾಳೆ.

ಪುರಾಣಗಳಲ್ಲಿ ಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಭಜಿಸಲಾಗುತ್ತದೆ. ಸ್ವರ್ಗ (ಮೇಲಿನ ಪ್ರದೇಶಗಳು), ಪೃಥ್ವಿ (ಭೂಮಿ) ಮತ್ತು ಪಾತಾಳ (ನೆಲದ ಕೆಳಗಿನ ಪ್ರದೇಶ)

ಪಾತಾಳವೆಂದರೆ ಇಡೀ ಬ್ರಹ್ಮಾಂಡದ ನೆಲದಡಿಯಲ್ಲಿರುವ ಪ್ರಾಂತ. ಇವನ್ನು ಭೂಗತಲೋಕ ಅಥವಾ ಅಧೋಲೋಕ ಎಂದು ಕರೆಯುವುದಿದೆ. ಪಾತಾಳವು ಏಳು ಪ್ರದೇಶಗಳು ಅಥವಾ ಲೋಕಗಳಿಂದ ಕೂಡಿದೆ, ಅವುಗಳಲ್ಲಿ ಏಳನೆಯ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ. ದಾನವರು, ದೈತ್ಯರು, ಯಕ್ಷರು ಮತ್ತು ನಾಗರು ಪಾತಾಳ ಪ್ರದೇಶಗಳಲ್ಲಿ ಇರುತ್ತಾರೆನ್ನುವ ನಂಬಿಕೆ.

ಒಂದು ಖಗೋಳಶಾಸ್ತ್ರೀಯ ಪಠ್ಯವಾದ ಸೂರ್ಯ ಸಿದ್ಧಾಂತವು, ದಕ್ಷಿಣ ಗೋಲಾರ್ಧವನ್ನು ಪಾತಾಳವೆಂದು ಮತ್ತು ಉತ್ತರ ಗೋಲಾರ್ಧವನ್ನು ಜಂಬೂದ್ವೀಪವೆಂದು ಸೂಚಿಸುತ್ತದೆ.

ವಿಷ್ಣು ಪುರಾಣವು ದೈವಿಕ ಅಲೆದಾಡುವ ಋಷಿ ನಾರದರ ಪಾತಾಳ ಭೇಟಿಯ ಬಗ್ಗೆ ಹೇಳುತ್ತದೆ. ನಾರದರು ಪಾತಾಳವನ್ನು ಸ್ವರ್ಗಕ್ಕಿಂತ ಸುಂದರವೆಂದು ವರ್ಣಿಸುತ್ತಾರೆ. ಅದ್ಭುತ ಆಭರಣಗಳು, ಸುಂದರ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರ ಅಸುರ ಕನ್ಯೆಯರಿಂದ ತುಂಬಿರುತ್ತದೆಂದು ವರ್ಣಿಸಲಾಗಿದೆ. ಗಾಳಿಯಲ್ಲಿ ಮಧುರ ಪರಿಮಳದೊಂದಿಗೆ ಸುಮಧುರ ಸಂಗೀತವು ಸೇರಿಕೊಂಡಿದೆ. ಇಲ್ಲಿನ ಮಣ್ಣು ಬಿಳಿ, ಕಪ್ಪು, ಕೆನ್ನೀಲಿ, ಮರಳಿನಂತೆ, ಹಳದಿ, ಕಲ್ಲಿನಿಂದ ಕೂಡಿದೆ ಮತ್ತು ಚಿನ್ನವನ್ನು ಹೊಂದಿದೆ.

ಭಾಗವತ ಪುರಾಣವು ಏಳು ಕೆಳಗಿನ ಲೋಕಗಳನ್ನು ಭೂಮಿಯ ಕೆಳಗಿನ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸುತ್ತದೆ. ಕೆಳಗಿನ ಏಳು ಲೋಕಗಳೆಂದರೆ: ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಮತ್ತು ಪಾತಾಳ.

ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ. ಇಲ್ಲಿನ ಜೀವನ ಆಹ್ಲಾದಕರ, ಸಂಪತ್ತು ಮತ್ತು ಐಷಾರಾಮದಿಂದ ಕೂಡಿದ ಸಂಪೂರ್ಣ ಯಾತನಾರಹಿತವಾಗಿದೆ.

ಅಸುರರ ವಾಸ್ತುಶಿಲ್ಪಿ ಮಯನು ವಿದೇಶಿಯರಿಗಾಗಿ ಆಭರಣಯುಕ್ತ ಅರಮನೆಗಳು, ದೇಗುಲಗಳು, ಮನೆಗಳು, ಅಂಗಳಗಳು, ಮತ್ತು ವಸತಿಗೃಹಗಳನ್ನು ನಿರ್ಮಿಸಿದ್ದಾನೆ. ಕೆಳಗಿನ ಲೋಕಗಳಲ್ಲಿ ಸೂರ್ಯನ ಬೆಳಕಿಲ್ಲ, ಆದರೆ ಪಾತಾಳದ ನಿವಾಸಿಗಳು ಧರಿಸುವ ಆಭರಣಗಳ ಹೊಳಪಿನಿಂದ ಕತ್ತಲು ಕಣ್ಮರೆಯಾಗುತ್ತದೆ. ಪಾತಾಳದಲ್ಲಿ ವೃದ್ಧಾಪ್ಯ, ಬೆವರು, ರೋಗಗಳಿಲ್ಲ.

ಅಕ್ಕಮಹಾದೇವಿ ಇಂತಹ ಅದ್ಭುತವಾದ ದೇವಲೋಕ, ನಾಗಲೋಕ, ಮರ್ತ್ಯಲೋಕಕ್ಕೆಲ್ಲಾ ಬಸವಣ್ಣನೇ ದೇವರೆಂದು ಹೇಳುತ್ತಾರೆ.

ಮೇರುಗಿರಿ ಎಂದರೆ ಮೇರು ಪರ್ವತ. ಇದನ್ನು ಸುಮೇರು, ಮಹಾಮೇರು ಎಂದೂ ಕರೆಯಲಾಗುತ್ತದೆ. ಹಿಂದೂ, ಜೈನ ಮತ್ತು ಬೌದ್ಧ ವಿಶ್ವವಿಜ್ಞಾನದ ಪವಿತ್ರ ಐದು ಶಿಖರಗಳ ಪರ್ವತ. ಇದನ್ನು ಎಲ್ಲ ಭೌತಿಕ, ತತ್ವ ಮೀಮಾಂಸೆ ಹಾಗೂ ಆಧ್ಯಾತ್ಮಿಕ ಬ್ರಹ್ಮಾಂಡಗಳ ಕೇಂದ್ರವೆಂದು ಪರಿಗಣಿಸಲಾಗುತ್ತದೆ.

ಮೇರು ಪರ್ವತವು ಭೂಮಿಯ ಮಧ್ಯದಲ್ಲಿ ಜಂಬೂದ್ವೀಪದಲ್ಲಿ ಸ್ಥಿತವಾಗಿದೆ ಎಂದು ಸೂರ್ಯಸಿದ್ಧಾಂತವು ಹೇಳುತ್ತದೆ. ಯಾಮಲ ತಂತ್ರದ ಬಹುತೇಕವಾಗಿ ಅಪ್ರಕಟಿತ ಪಠ್ಯಗಳನ್ನು ಆಧರಿಸಿ, ಒಂಭತ್ತನೇ ಶತಮಾನದ ಒಂದು ಪಠ್ಯವಾದ ನರಪತಿಜಯಚರ್ಯವು, “ಸುಮೇರು ಭೂಮಿಯ ಮಧ್ಯದಲ್ಲಿ ಇದೆ ಎಂದು ಕೇಳಲ್ಪಟ್ಟಿದೆ, ಆದರೆ ಅಲ್ಲಿ ಕಾಣಿಸುವುದಿಲ್ಲ” ಎಂದು ಹೇಳುತ್ತದೆ.

ಅಸ್ತಿತ್ವದಲ್ಲಿರುವ ಹಿಂದೂ ಪಠ್ಯಗಳಲ್ಲಿ ವಿಶ್ವವಿಜ್ಞಾನದ ಹಲವಾರು ನಿರೂಪಣೆಗಳು ಇವೆ. ಅವುಗಳಲ್ಲಿ ಒಂದರಲ್ಲಿ, ಬ್ರಹ್ಮಾಂಡೀಯವಾಗಿ, ಮೇರು ಪರ್ವತವು ಪೂರ್ವದಲ್ಲಿ ಮಂದರಾಚಲ ಪರ್ವತದಿಂದ, ಪಶ್ಚಿಮದಲ್ಲಿ ಸುಪಸರ್ವ ಪರ್ವತದಿಂದ, ಉತ್ತರದಲ್ಲಿ ಕುಮುದ ಪರ್ವತದಿಂದ ಮತ್ತು ದಕ್ಷಿಣದಲ್ಲಿ ಕೈಲಾಸಪರ್ವತದಿಂದ ಸುತ್ತುವರಿಯಲ್ಪಟ್ಟಿದೆ ಎಂದೂ ವರ್ಣಿಸಲಾಗಿದೆ.

ಮಂದರಗಿರಿಗಳೆಂದರೆ ತುಮಕೂರು- ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ‘ಮಂದರಗಿರಿ ಬೆಟ್ಟ’. ಇನ್ನೊಂದು ಪ್ರಮುಖ ಜೈನ ಧಾರ್ಮಿಕ ಕ್ಷೇತ್ರ. ಬೆಟ್ಟದ ಮೇಲೆ ಜಿನಮಂದಿರ ಮತ್ತು ತೀರ್ಥಂಕರರ ವಿಗ್ರಹವಿದೆ. ಇದು ಎಲ್ಲಾ ಧರ್ಮೀಯರಿಗೂ ಪ್ರಿಯವಾದ ನಿಸರ್ಗ ತಾಣ. ಇಂತಹ ಮೇರುಗಿರಿ-ಮಂದರಗಿರಿಯಂಥ ಸುಂದರ ದೈವೀ ಸ್ಥಳಗಳಲ್ಲಿ ನೆಲೆಸಿರುವವರಿಗೂ ಬಸವಣ್ಣನೇ ದೇವರೆಂದು ಅಕ್ಕ ಹೇಳುತ್ತಾಳೆ.

ಇಂತಹ ಪ್ರದೇಶಗಳಲ್ಲಿ ನೆಲೆಸಿರುವ ಎಲ್ಲರಿಗೂ ಬಸವಣ್ಣನೇ ದೇವರು ಎಂದು ಅಕ್ಕ ಹೇಳಬೇಕಾದರೆ, ಬಸವಣ್ಣನ ವ್ಯಕ್ತಿತ್ವ ಹೇಗಿತ್ತೆಂದು ಊಹಿಸಬಹುದು. ಪ್ರತಿಯೊಬ್ಬರಲ್ಲೂ ಮಾನವೀಯ ಮಲ್ಯಗಳನ್ನು ಬಿತ್ತಿದ ಬಸವಣ್ಣನೇ ದೇವರೆಂದರೆ ಉತ್ಪ್ರೇಕ್ಷೆಯಲ್ಲ.

ಸಿಕಾ

Don`t copy text!