ಕಾಣಬಾರದ ಗುರು
ಕಾಣಬಾರದ ಗುರು ಕಣ್ಗೆ ಗೋಚರವಾದಡೆ
ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ
ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿ ಪಟ್ಟ,
ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ* *ಕಲಶಾಭಿಷೇಕ,
ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ,
ಸಂಗವಿಲ್ಲದ ಸಂಬಂಧ
ಸ್ವಯವಪ್ಪ ಅನುಗ್ರಹ,
ಆನುಗೊಂಬಂತೆ ಮಾಡಾ ಗುಹೇಶ್ವರಾ.
-ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1076 ಪುಟ-320.
ಕಲ್ಯಾಣದಲ್ಲಿ ವರ್ಗ ವರ್ಣ ಆಶ್ರಮ ಲಿಂಗ ಭೇದ ಹೊಡೆದು ಹಾಕಿ ಸಾರ್ವಕಾಲಿಕ ಸಮಕಾಲೀನ ಸಮತೆಯನ್ನು ನೀಡಿದ ಬಸವಣ್ಣ ಈ ನೆಲವು ಕಂಡ ಜಗತ್ತಿನ ಶ್ರೇಷ್ಠ
ಸಮಾಜವಾದಿ ಚಿಂತಕ . ಶಿವ ನೆಂಬುದು ಚೈತನ್ಯ -ಅರಿವು ಜ್ಞಾನ ಮಂಗಳ ಎಂಬ ಪಾರಿಭಾಷಿಕ ಪದಗಳಲ್ಲಿ ಶರಣರು ಕಂಡಿದ್ದಾರೆ
ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ ).
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.
ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ.
ಕಾಣಬಾರದ ಗುರು ಕಣ್ಗೆ ಗೋಚರವಾದೊಡೆ
ಗುರು ಎಂಬ ಪದವು ಲಿಂಗಾಯತ ಶರಣ ಧರ್ಮದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ,ಸನಾತನ ಭಾರತೀಯ ಪರಂಪರೆಯಲ್ಲಿ ಗುರು ವ್ಯಕ್ತಿಯಾಗಿ ಪ್ರೇರಕ ಶಕ್ತಿಯಾಗಿ ,ಮುಕ್ತಿ ತೋರುವ ಪಥಿಕನಾಗಿ ಶಿಷ್ಯನೆಂಬ ಸಾಧಕನನ್ನು ಕೈ ಹಿಡಿದು ಕರೆದೊಯ್ಯುವ ಮಹತ್ತರ ಪಾತ್ರ ಪಡೆದಿದ್ದಾನೆ.ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿದಂತೆ. ಸಾಧಕನ ಜೀವನದಲ್ಲಿ ಗುರು ಸರ್ವೋಚ್ಚ ಸ್ಥಾನ ಪಡೆದಿರುವ ವ್ಯಕ್ತಿ.
ಶರಣರು ಇದಕ್ಕೆ ಸಂಪೂರ್ಣವಾಗಿ ಭಿನ್ನವಾಗಿ ಗುರುವನ್ನು ವ್ಯಾಖ್ಯಾನಿಸಿದ್ದಾರೆ ಅರ್ಥೈಸಿದ್ದಾರೆ . ಗುರು ಎಂಬುದು ಅರಿವಿನ ಸಂಕೇತ ,ಗುರು ಪ್ರಜ್ಞೆ ,ಗುರು ಅರಿವಿನ ಸಾಕ್ಷಾತ್ಕಾರ ,ಅಂತೆಯೇ ಬಸವಣ್ಣನವರು ಭಕ್ತಿ ಎಂಬ ಪೃಥ್ವಿಯ ಮೇಲೆ ಗುರು ಎಂಬ ಬೀಜ ಉಂಕರಿಸಿ ಎಂದಿದ್ದಾರೆ . ಬೀಜ ಮೊಳಕೆ ಮಾಡುವ ವಿಕಸನದ ಸಂಕೇತ .ಅರಿವೇ ಗುರು ಆಚಾರವೇ ಲಿಂಗ ಮತ್ತು ಅನುಭವವೇ ಜಂಗಮ .ಗುರು ವ್ಯಕ್ತಿಯಲ್ಲ ಲಿಂಗ ವಸ್ತು ಅಲ್ಲ ಜಂಗಮ ಜಾತಿ ಅಲ್ಲ ಇಂತಹ ಪ್ರಜ್ಞಾಪ್ರೇರಕ ಶಕ್ತಿಯು ಕಾಣಬಾರದ ಗುರುವು ,ಇಂತಹ ಗುರುವು ಕಣ್ಣಿಗೆ ಗೋಚರವಾದಡೆ ನಡೆಯುವ ಅಭೂತಪೂರ್ವ ಬದಲಾವಣೆಗಳು ಕ್ರಿಯೆಗಳ ಬಗ್ಗೆ ಅಲ್ಲಮರು ಸುಂದರವಾಗಿ ಹೇಳಿದ್ದಾರೆ.
ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ.
ಇಲ್ಲಿ ಶಿಷ್ಯ ಗುರುವು ಒಬ್ಬನೇ ವ್ಯಕ್ತಿಯಾಗಿದ್ದಾಗ ,ಆತನ ಅರಿವೇ ಅವನ ಗುರು ಸ್ವರೂಪವಾಗಿ ಕಂಡು ಬಂದಾಗ ,ಅಂತರಂಗದ ಅರಿವಿನ ಕೂಗಿಗೆ ಜ್ಞಾನವೆಂಬ ಗುರುವು ಸ್ಪಂದಿಸಿ ಯಾವುದೇ ಬಿನ್ನಹವಿಲ್ಲದೆ ಜ್ಞಾನ ಅರಿವೆಂಬ ಗುರುವು ಭಕ್ತನೆಂಬ ಶಿಷ್ಯನ ಸಾಧನೆಗೆ ಧಾವಿಸುತ್ತಾನೆ. ಇಲ್ಲಿ ಗುರುವಿನ ದರ್ಶನಕ್ಕೆ ಕರೆ ಅಥವಾ ಬಿನ್ನಹ ಇಲ್ಲ.ಅವು ಭಕ್ತನ ಮಾನಸಿಕ ಭದ್ರತೆಯ ಸ್ಪಷ್ಟತೆ.
ಸಾಮನ್ಯವಾಗಿ ಗುರುವು ಶಿಷ್ಯನ ಮನೆಗೆ ಬಂದಾಗ ಅಥವಾ ಶಿಷ್ಯ ಗುರುವಿನ ದರ್ಶನಕ್ಕೆ ಹಾತೊರೆಯುವಾಗ ಗುರುವೆಂಬ ವ್ಯಕ್ತಿಯು ಭಕ್ತನ ತಲೆಯ ಮೇಲೆ ಕೈ ಇತ್ತು ಆಶಿರ್ವಾದಿಸುತ್ತಾನೆ ,
ಇದನ್ನು ಹಸ್ತಮಸ್ತಕ ಯೋಗವೆಂತಲೂ ಕರೆಯುತ್ತಾರೆ .ಸ್ಪರ್ಶಯೋಗ -ಇದನ್ನು ಶರಣರು ಒಪ್ಪದೇ ಅರಿವೆಂಬ ಗುರು ಅಂತರಂಗದ ಶಿಷ್ಯಂಗೆ ಅನುಸಂಧಾನದ ದೀಕ್ಷೆಯನ್ನು ಕರುಣಿಸುತ್ತಾನೆ.ಇಲ್ಲಿ ಗುರು ಶಿಷ್ಯ ಎಂಬ ಶ್ರೇಣೀಕೃತ ತಾರತಮ್ಯವಿಲ್ಲ .ಪ್ರಾಯಶ ಜಗತ್ತಿನ ಇಂತಹ ಸುಂದರ ತಾತ್ವಿಕ ಚಿಂತನೆಯನ್ನೊಳಗೊಂಡ ಶ್ರೇಷ್ಠ ಚಿಂತನೆಯೇ ಲಿಂಗ ಧರ್ಮ .ಹಸ್ತಮಸ್ತಕ ಸಯೋಗವು ಗುಲಾಮಗಿರಿಯನ್ನು ಕಲ್ಪಿಸುತ್ತದೆ.
ಹೂಸಲಿಲ್ಲದ ವಿಭೂತಿ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ.
ಗುರುವಿನ ಆಗಮನದ ನಂತರ ಒಂದು ಎತ್ತರದ ಆಸನದ ಮೇಲೆ ಆತನನ್ನು ಕೂಳಿರಿಸಿ ಆತನ ಪಾದಗಳನ್ನು ತೊಳೆದು ಮೃದುವಾದ ಬಟ್ಟೆಯಿಂದ ಅವುಗಳನ್ನು ಸವರಿಸಿ, ಆಶೀರ್ವಾದ ರೂಪದಲ್ಲಿ ಗುರುವು ತನ್ನ ಶಿಷ್ಯನ ತಲೆಯ ಮೇಲೆ ಹಸ್ತಮಸ್ತಕ ಸಂಯೋಗಮಾಡಿ ಅವನನ್ನು ಪುನೀತ ಮಾಡುವ ಕ್ರಿಯೆ ನಡೆಯುತ್ತದೆ. ನಂತರ ಭಕ್ತನ ಹಣೆಗೆ ವಿಭೂತಿ ಪಟ್ಟವನ್ನು ಗುರುವು ಭಕ್ತನ ಹಣೆಗೆ ಹಚ್ಚುತ್ತಾನೆ ,ಕಿವಿಯಲ್ಲಿ ಗುರು ಮಂತ್ರವನ್ನು ಹೇಳುತ್ತಾನೆ.ಆದರೆ ನಿಷ್ಪತ್ತಿಯ ರಾಯಭಾರಿ ಅನುಭವಿ ಅಲ್ಲಮರು ಇವುಗಳನ್ನು ತಿರಸ್ಕರಿಸುತ್ತಾರೆ .ಇಲ್ಲಿ ಜ್ಞಾನವೆಂಬ ಗುರು ಅರಿವೆಂಬ ಗುರು ಹಣೆಗೆ ವಿಭೂತಿ ಪಟ್ಟ ಹಚ್ಚುವದಿಲ್ಲ ,ಕಿವಿಯಲ್ಲಿ ಕರ್ಣ ಮಂತ್ರ ಜಪಿಸುವದಿಲ್ಲ..ಜಪವೇ ಅಜಪವಾಗಿ ,ಮಾತುಗಳೇ ಮಂತ್ರಗಳಾದಾಗ ,ನಡೆ ನುಡಿ ಶುದ್ಧತೆಯನ್ನು ಹೆಜ್ಜೆ ಹೆಜ್ಜೆಗೂ ಕಾಳಜಿಪೂರ್ವಕ ಪಾಲಿಸಿದಾಗ ಇಂತಃ ಬಾಹ್ಯ ಕ್ರಿಯೆಗಳನ್ನು ಅಲ್ಲಮರು ಖಡಾಖಂಡಿತವಾಗಿ ಅಲ್ಲಗಳೆದು ಸ್ವಯಮ ಮಂತ್ರವಾಗಲು ಕರೆ ನೀಡುತ್ತಾರೆ.
ತುಂಬಿ ತುಳುಕದ ಕಲಶಾಭಿಷೇಕ,ಆಗಮವಿಲ್ಲದ ದೀಕ್ಷೆ,
ಗುರುವಿನ ಬರುವಿಗೆ ತುಂಬು ಕಲಶದ ಸ್ವಾಗತ,ಕೊಡ ಅದರ ಮೇಲೆ ಕಲಶ ಮಹಿಳೆಯರು ಅವುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಅದ್ಧುರಿಯಾಗಿ ಸ್ವಾಗತಿಸುತ್ತಾರೆ .ಆದರೆ ನೀರಿನಿಂದ ತುಂಬಿದ ಕಲಶ ತುಳುಕಾಡುತ್ತದೆ .ಅಲ್ಲಮರ ಗುರುವಿನ ಸ್ವಾಗತದಲ್ಲಿ ಅಂತಹ ಕುಂಭ ಕಲಶದ ಸ್ವಾಗತವನ್ನು ಧಿಕ್ಕರಿಸಿದ್ದಾರೆ . ತುಂಬಿ ತುಳುಕದ ಕಲಶಾಭಿಷೇಕವನ್ನು ಮಾರ್ಮಿಕವಾಗಿ ಹೇಳಿದ್ದಾರೆ . ಇನ್ನು ದೀಕ್ಷಾಪ್ರಸಂಗದಲ್ಲಿ ಗುರುವು ಶಿಷ್ಯನನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿ ಅತ್ಯಂತ ಗೌಪ್ಯವಾಗಿ ವೇದ ಆಗಮ ಶಾಸ್ತ್ರ ಪ್ರಮಾಣವಾಗಿ ದೀಕ್ಷೆ ನೀಡುತ್ತಾನೆ.ಅವುಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿದ ಅಲ್ಲಮರು ,ಇಂತಹ ಅರ್ಥವಿಲ್ಲದ ದೀಕ್ಷೆ ಭೌತಿಕ ಆಡಂಬರವಾಗುವುದೆ ಹೊರತು ಭೌದ್ಧಿಕ ಜ್ಞಾನದ ಏಳಿಗೆಯಾಗುವದಿಲ್ಲ ಎಂದಿದ್ದಾರೆ ಅಲ್ಲಮರು .
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂದ.
ಪೂಜೆ ಆಚರಣೆ ಆರಾಧನೆಗೆ ಬಾರದ ಲಿಂಗವು ,ಇಲ್ಲಿ ಯಾವುದೇ ತರಹದ ಪೂಜೆಗೆ ಅವಕಾಶವಿಲ್ಲ ,ಲಿಂಗವೆಂಬುದು ಸಮಷ್ಟಿಯ ಸಂಕೇತವಾದ ಮೇಲೆ ಬಾಹ್ಯದ ಗುರು ಕರುಣಿಸುವ ಲಿಂಗವು ಜಡವಾಗುತ್ತದೆ .ಇಷ್ಟಲಿಂಗವು ಅರುವಿನ ಅನುಸಂಧಾನದ ಸಾಧನ ಮಾತ್ರ .ಹೇಗೆ ಗುರುವು ಕಾಣಬಾರದ ಸಾಧನವೋ ಹಾಗೆ ಲಿಂಗವು ಕಾಣಬಾರದ ವಸ್ತು .ಅಂತರಂಗದ ಚೈತನ್ಯದ ಚಿತ್ಕಳೆಯಾಗಿದೆ . ಶರಣರು ಬೋಧಿಸರಿಯುವುದು ಲಿಂಗ ಯೋಗ ,ಪೂಜೆಯಲ್ಲ.ಅದನ್ನು ಅಲ್ಲಮರು ಅಂದೇ ಸ್ಪಷ್ಟವಾಗಿ ಹೇಳಿದ್ದಾರೆ.ಅಂಗ ಲಿಂಗ ಒಂದಾದ ಮೇಲೆ .ಲಿಂಗಾಂಗ ಸಾಮರಸ್ಯವನ್ನು ಅರಿತೊಡೆ ಸಂಗವಿಲದ ಸಂಬಂಧವು ಭಕ್ತನ ದೈವತ್ವದೆಡಗೆ ಕರೆದೊಯ್ಯುವ ಸ್ವಯಮ ಭಾವವು .ಅದಕ್ಕೆ ಅಕ್ಕ ಮಹಾದೇವಿಯು ಲಿಂಗವೆನ್ನೆ ಲಿಂಗೈಕ್ಯವೆನ್ನೆ ,ಸಂಗವೆನ್ನೆ ಸಮರಸವೆನ್ನೆ ನಾ ಎನ್ನೆ ಏನೂ ಎನ್ನೆ ಎಂದು ಎಂದು ಹೇಳಿ ಬಯಲಿನಲ್ಲಿ ಬಯಲಾದ ಮಹಾ ಬೆಳಕನ್ನು ಕೂಡುವ ಪರಿಯನ್ನು ಅರ್ಥಪೂರ್ಣವಾಗಿ ತಿಳಿಸಿದ್ದಾಳೆ .ಸಂಗ ಸಮರಸ ಒಂದೇ ಎಂದು ಶರಣರು ಹೇಳಿದ್ದಾರೆ .ಆಯತ ಸ್ವಾಯತ ಸನ್ನಿತದಲ್ಲಿ ಭಕ್ತ ತನ್ನನ್ನು ತಾನು ತಿಳಿದುಕೊಳ್ಳಬೇಕು.
ಸ್ವಯವಪ್ಪ ಅನುಗ್ರಹ, ಆನುಗೊಂಬಂತೆ ಮಾಡಾ ಗುಹೇಶ್ವರಾ.
ಮಾತು ಮನಗಳಿಂದ ಅತ್ತತ್ತ ಮೀರಿದ ಸಾತಿಶಯ ನಿರುಪಾಧಿತ ಲಿಂಗವೇ ಜ್ಯೋತಿ ಬೆಳಗುತಿದೆ ಎಂದು ನಿಜಗುಣರು ಹೇಳಿದ್ದಾರೆ .ಜ್ಯೋತಿ ಕರ್ಪುರ ಪೂಜೆ ಫಲ ಪತ್ರಿ ತಾಂಬೂಲ ಆರತಿ ಗಂಧ ಕುಂಕುಮ ಮುಂತಾದ ಬಾಹ್ಯ ಅರ್ಥವಿಲ್ಲದ ಸಾಮಗ್ರಿಗಳು ಅರಿವನ್ನು ಜಾಗೃತಗೊಳಿಸಿದೆ ಮನಃಶಾಂತಿಯನ್ನು ಸ್ವಲ್ಪ ಮಟ್ಟಿಗೆ ನೀಡಿ ಜ್ಞಾನ ಅರಿವನ್ನು ಮರೆಮಾಚಿ ಒಂದು ಹುಸಿ ಸುಖ ತೃಪ್ತಿಯನ್ನು ತಾತ್ಪೂರ್ತಿಕವಾಗಿ ನೀಡುತ್ತದೆ .ಇವುಗಳನ್ನು ಕಠೋರವಾಗಿ ಅಲ್ಲಗಳೆದು ಆಯತ ಸ್ವಾಯತ ಸಂನಿತನಾಗುವ ಸುಂದರ ಪರಿಯನ್ನು ಅರಿವಿನ ಮೂಲಕ ಸ್ವಯವಪ್ಪ ಅನುಗ್ರಹ ಭಕ್ತನಾದವನು ಪಡೆಯಬೇಕು .ತಾನೇ ಗುರು ತಾನೇ ಲಿಂಗ ಜಂಗಮವಾದ ಮೇಲೆ ಹೊರಗೆ ನಡೆಯುವ ಆಧ್ಯಾತ್ಮಿಕ ಕ್ರಿಯೆಗಳು ಶಬ್ದದ ಲಜ್ಜೆ ಶಬ್ದದ ಸಂತೆ ಎಂದು ಅಲ್ಲಮರು ವಿಡಂಬಿಸಿದ್ದಾರೆ.
ಇಂತಹ ಕಾಣಬಾರದ ಗುರು ಲಿಂಗದಿಂದ ಚೈತನ್ಯದ ಕಾರುಣ್ಯ ಪಡೆಯುವ ಸ್ವಯಂ ಸಾಧನ ಮಾಡುವ ಆನುಗೊಂಬಂತೆ ಮಾಡಾ ಗುಹೇಶ್ವರಾ.ತಮ್ಮನ್ನು ಇಂತಹ ಸರಳ ಸುಂದರ ಪ್ರಕ್ರಿಯೆಗೆ ಒಳಪಡಿಸು ಎಂದಿದ್ದಾರೆ ಅಲ್ಲಮರು.
ಜಗತ್ತಿಗೆ ನಿಷ್ಪತ್ತಿಯ ಸರ್ವೋಚ್ಚ ನೀತಿ ತತ್ವವನ್ನು ನೀಡಿದ ಇಂದಿನ ಲಿಂಗಾಯತ ಮಠಗಳಲ್ಲಿ ಧರ್ಮದಲ್ಲಿ ಕ್ರಿಯೆ ಆಚರಣೆಗಳಲ್ಲಿ ಮೇಲಿನ ವಿಚಾರಗಳಿಗೆ ತದ್ವಿರುದ್ಧಾವಾಗಿ ಗುರು ಸರ್ವ ಶ್ರೇಷ್ಠ
ಭಕ್ತನ ಮುಕ್ತಿಗೆ ಗುರುವು ಅಗತ್ಯ ,ನಿರಂಜನ ದೀಕ್ಷೆಯಲ್ಲಿ ಜಂಗಮ ದೀಕ್ಷೆಯಲ್ಲಿ ಇಂತಹ ಅಸಹ್ಯಕರವಾದ ಪ್ರಕ್ರಿಯೆಗಳು ನಡೆದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ,
ಶರಣರು ಉರಿಯುಂಡ ಕರ್ಪುರ ಶಿಶು ಕಂಡ ಕನಸಿನ ತಾತ್ವಿಕ ಸಿದ್ಧಾಂತಗಳಿಗೆ ಬದ್ಧರಾದವರು .ಇನ್ನಾದರೂ ಲಿಂಗಾಯತ ಧರ್ಮದಲ್ಲಿ ದೀಕ್ಷೆ ಪೂಜೆ ಗುರು ಕಾರುಣ್ಯ ಮುಂತಾದ ಮೌಢ್ಯ ವಿಚಾರಗಳಿಗೆ ತಿಲಾಂಜಲಿ ನೀಡುವುದು ಅನಿವಾರ್ಯ ಮತ್ತು ಅಗತ್ಯ ಕ್ರಮವಾಗಿದೆ.
-ಡಾ ಶಶಿಕಾಂತ ಪಟ್ಟಣ ರಾಮದುರ್ಗ