ವಚನ ಭಂಡಾರಿ ಶಾಂತರಸ

ವಚನ ಚಳುವಳಿಯಲ್ಲಿ ಬಹಳಷ್ಟು ಅರಸರು ಪಾಲ್ಗೊಂಡಿದ್ದರು . ಬಸವರಸರು, ಚಂದಿಮರಸರು, ಸಕಲೇಶ ಮಾದರಸರು ಅಂತೆಯೇ ಆ ಸಾಲಿನಲ್ಲಿ ಬರುವ ನಮ್ಮ ಶಾಂತರಸರು ಕೂಡ ಬಹುಶಃ ಯಾವುದೋ ಪಾರುಪತ್ಯದ ಮುಖ್ಯಸ್ಥರಾಗಿದ್ದವರು. ಬಸವಣ್ಣನವರ ವಿಚಾರ ಕ್ರಾಂತಿಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದು ವಚನ ಚಳುವಳಿಯಲ್ಲಿ ಭಾಗವಹಿಸಿ ಕೃತಾರ್ಥರಾದರು. ವಚನ ಭಂಡಾರಿ ಎನ್ನುವ ಹೆಸರು ಅವರ ಸೇವಾ ಕಾರ್ಯದ ಸಂವಾದಿಯಾಗಿ ಬಂದದ್ದು.
‘ಕಟ್ಟು’ ಅಥವಾ ‘ಕವಳಿಗೆ’ ಎಂದರೆ ತಾಡ ಓಲೆಯ ಕಟ್ಟುಗಳು, ಇಂದಿನ ಪುಸ್ತಕ ಎಂದರ್ಥ. ಅನುಭವ ಮಂಟಪದಲ್ಲಿ ಚರ್ಚಿತವಾಗುತ್ತಿದ್ದ ವಚನ ರೂಪದಲ್ಲಿಯ ಸಂಗತಿಗಳನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ನಡೆಯುತ್ತಿತ್ತು. ಆ ವಚನಗಳ ವಿಮರ್ಶೆಯನ್ನು ಬಸವಣ್ಣ, ಚನ್ನಬಸವಣ್ಣ, ಅಲ್ಲಮರು, ಅಕ್ಕಮಹಾದೇವಿಯವರು ವಿಮರ್ಶಿಸುತ್ತಿದ್ದರು. ಹೀಗೆ ಚರ್ಚಿಸಲ್ಪಟ್ಟ ಪರಾಮರ್ಶಿತ ಓಲೆಗಳಿಗೆ ವಚನಗಳೆಂದು ಮುದ್ರೆ ಬೀಳುತ್ತಿತ್ತು. ಅನಂತರ ಸುಪ್ರಭಾತ ಸಮಯದಲ್ಲಿ ಆ ವಚನಗಳ ಚಿಂತನ-ಮಂಥನ ನಡೆಯುತ್ತಿತ್ತು. ಹೀಗೆ ಮಂಥನದಲ್ಲಿ ಒಪ್ಪಿಗೆ ಪಡೆದ ವಚನಗಳನ್ನು ಶಾಂತರಸರಿಗೆ ಒಪ್ಪಿಸಲಾಗುತ್ತಿತ್ತು. ಅವರು ಅವುಗಳನ್ನು ಜೋಕೆಯಿಂದ ಸಂರಕ್ಷಿಸುತ್ತಿದ್ದರು. ಅಷ್ಟೇ ಅಲ್ಲ ಅವುಗಳ ಅಧ್ಯಯನ ಮಾಡಬೇಕೆನ್ನುವವರಿಗೆ ಓದಲು ಕೊಡುತ್ತಿದ್ದರು. ಶರಣರು ತಮ್ಮ ಅವಲೋಕನಕ್ಕೆ ಬೇಕೆಂದರೆ ಶಾಂತರಸರು ಅಂತಹ ವಚನಗಳನ್ನು ಪ್ರತಿ ಮಾಡಿಸಿ ಒದಗಿಸುತ್ತಿದ್ದರು. ಅಂದರೆ ಇಂದಿನ ಮುದ್ರಣಾಲಯಗಳು ನಿರ್ವಹಿಸುತ್ತಿರುವ ಕಾರ್ಯವನ್ನು ಅಂದು ವಚನ ಭಂಡಾರಿ ಶಾಂತರಸರು ತಮ್ಮ ಸಿಬ್ಬಂದಿಯೊಂದಿಗೆ ನಿರ್ವಹಿಸುತ್ತಿದ್ದರು.

ಓಲೆ ಕಾಯಕದ ರಾಮಯ್ಯ ಮತ್ತು ಶಾಂತಯ್ಯ ಇವರುಗಳ ಹೆಸರುಗಳೂ ಶಾಂತರಸರೊಂದಿಗೆ ಕೇಳಿ ಬರುತ್ತವೆ.
ಈ ವಚನ ಭಂಡಾರದ ಬಗ್ಗೆ ವಚನ ಪಿತಾಮಹ ಪ.ಘು.ಹಳಕಟ್ಟಿ ಅವರು ಪ್ರಕಟಿಸಿರುವ,” ಕಾಲಜ್ಞಾನದ ವಚನಗಳು” ಗ್ರಂಥದಲ್ಲಿ ಅನೇಕ ಉಲ್ಲೇಖಗಳು ಸಿಗುತ್ತವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಕೊಡಲಾಗಿದೆ:
ನಮ್ಮ ಶಿವಶರಣರು ಮರ್ತ್ಯಕ್ಕೆ ಬಂದು ವಚನಗಳ
ಹಾಡಿ, ಹಾಡಿ ಕೊಂಡಾಡಿದರೈಯ್ಯ
ಪ್ರಭುದೇವರು. ಮುಖ್ಯರಾದ 220 ಅಮರ ಗಣಂಗಳು ತಮ್ಮ ವಚನ ಭಂಡಾರ ನಿಕ್ಷೇಪಿಸಿದರಯ್ಯ.
ನೀವು ಬಾಹಂದಿ ನಿಮ್ಮ ವಚನ ಭಂಡಾರದಲ್ಲಿಹ ವಚನಗಳು ತೆಗೆದು ಅವು ಮರ್ತ್ಯದಲ್ಲಿ ಹರಿದಾವು
ದಿಕ್ಕು ದಿಕ್ಕಿನಲ್ಲಿ ಕೊಂಡಾಡಿಸಿಕೊಂಡು ಮೆರೆದಾವು.
ಪುರಾತನರ ವಚನ ಭಂಡಾರವು ತೆಗೆದೋದಿಸುವ
ಆ ಕಾಲ ಈಗಲೇ ಬಂದಿದೆ ನಮ್ಮ ಆದ್ಯರ ವಚನ
ಭಂಡಾರವನ್ನು ಪ್ರಭುದೇವರು ಮುಖ್ಯವಾದ
ಅಸಂಖ್ಯಾತ ಪುರಾತನರು ಹೇಳಿ,ಕೇಳಿ ಕೊಂಡಾಡಿದರು.
ವಚನ ಭಂಡಾರಿ ಶಾಂತರಸರು ‘ಅಲೇಖನಾಥ ಶೂನ್ಯ ಕಲ್ಲಿನೊಳಗಾದ’ ಎಂಬ ಅಂಕಿತದಲ್ಲಿ ಬರೆದ 65 ವಚನಗಳು ಸದ್ಯಕ್ಕೆ ಉಪಲಬ್ದವಿವೆ. ಅವರ ವಚನಗಳಲ್ಲಿ ಹೊಸತನ ಕಂಡುಬರುವುದಿಲ್ಲ. ಕೆಲವು ವಚನಗಳಲ್ಲಿ ಖಚಿತತೆ ಇದ್ದರೂ ಅರ್ಥಕ್ಲಿಷ್ಟತೆ ಎದ್ದು ಕಾಣುತ್ತದೆ. ಇವರ ಬಹು ಪಾಲು ವಚನಗಳು ಬೆಡಗಿನ ವಚನಗಳೇ ಆಗಿವೆ.
ಹಾಗೂ ಕಲ್ಯಾಣದ ಕೊನೆಯ ವಿವರಗಳು ಇವರ ವಚನಗಳಲ್ಲಿ ಸಿಗುತ್ತವೆ.
ವಿರುದ್ಧ ಅಂಶಗಳನ್ನು ಹೋಲಿಸುತ್ತಾ ತತ್ವ ನಿರೂಪಣೆ ಮಾಡುವ ಶಾಂತರಸರ ಕೌಶಲ್ಯಕ್ಕೆ ಉದಾಹರಣೆಯಾಗಿ ಈ ವಚನವನ್ನು ನೋಡಬಹುದು.

ಮಲವ ತೊಳೆಯಬಹುದಲ್ಲದೆ
ಅಮಲವವ ತೊಳೆಯಬಹುದೇ ಅಯ್ಯಾ? …….
ರಣದ ಪಂಥವ ಹೇಳಬಹುದಲ್ಲದೆ ಕಾದಬಹುದೇ ಅಯ್ಯ?
ಶಾಂತರಸರ ಕೆಲವೇ ವಚನಗಳು ಮಾತ್ರ ಸತ್ವ ಹಾಗೂ ಕಾವ್ಯಾರ್ಥಕತೆಯಿಂದ ಕೂಡಿರುವುದನ್ನು ಗಮನಿಸಬಹುದಾಗಿದೆ.
‘ಹುಟ್ಟಿಸುವವ ಪೃಥ್ವಿಗೆ ಹಂಗಾದ ಬೆಳೆಸುವವ ಅಪ್ಪುವಿಗೆ ಹಂಗಾದ.
ಕೂಯಿಸುವವ ಕಾಲಗೆ ಹಂಗಾದ
ನಿನ್ನ ನರಿತೆಹೇನಂಬವ ಶಿಲೆಗೆ ಹಂಗಾದ.
ಇವರೆಲ್ಲರ ಹಂಗಿಗೆ ಹರುವ ಕೇಳಿಹ ರಂದಂಜಿ,
ಅಲೇಕಮಯನಾದ ಶೂನ್ಯ ಕಲ್ಲಿನ ಮರೆಯಾದೆಯಾ?’
ಶೈವ ಬ್ರಾಹ್ಮಣರಾಗಿದ್ದ ಶಾಂತರಸರು ಬಸವಣ್ಣನವರ ಸೂಚನೆಯಂತೆ ಲಿಂಗವನ್ನು ಧರಿಸಿದರೂ ಜನಿವಾರವನ್ನು ತ್ಯಜಿಸಲು ಮತ್ತು ಸಂಬಂಧ ಬೆಳೆಸುವಾಗ , ಬ್ರಾಹ್ಮಣರನ್ನು ಕೈ ಬಿಡಲು ಮನಸ್ಸು ಒಪ್ಪುತ್ತಿಲ್ಲವೆಂಬ ಮನಸ್ಸಿನ ತಾಕಲಾಟವನ್ನು, ಒಳತೋಟಿಯನ್ನು ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿಕೊಂಡಿದ್ದಾರೆ.
ಶಿವ ಶಿವ ಎಲ್ಲರುಂಟಾದುದ ಹೇಳಿ
ಇಲ್ಲದ ಬೈಲಿಂಗೆ ಮನವನಿಕ್ಕಿದರು
ಬಸವಣ್ಣನ ಕರುಣೆಯಿಂದ ಕಟ್ಟಿದ ಲಿಂಗಕ್ಕೆ
ಹುಟ್ಟು ಮೆಟ್ಟನರಿಯೆ ಕೊಟ್ಟಾತ ಹೇಳುವುದಿಲ್ಲ
ಕಟ್ಟಿಕೋ ಎಂದಾತ ಈ ಬಟ್ಟೆಯಲ್ಲಿರೂ ಎಂದುದಿಲ್ಲ
ಕಡ್ಡಾಯಕ್ಕೆ ಕಟ್ಟುವ ಈ ಒಡ್ಡುಗಲ್ಲಿನ ಮುರಿಯೇ
ಎನಗೋಂದು ಬುದ್ಧಿಯ ಹೇಳಾ
ಅಲೇಖನಾದ ಶೂನ್ಯ ಕಲ್ಲಿನೊಳಗೆ ಏಕಾದೆಯಯ್ಯ?
ಇನ್ನೆಲ್ಲರ ಕೇಳುವುದಕ್ಕೆ ಕುಲ ಚಲ ಮಲದೇಹಿಕರು ಬಿಡರೆನ್ನ
ಎದೆಯಲ್ಲಿ ಕಟ್ಟಿದ ಎಳೆ ಆಸೆಯ ಬಿಡದು
ಕೊಡುವಲ್ಲಿ ಕೊಂಬಲ್ಲಿ ದ್ವಿಜ ರೋಡಗೂಡುವುದು ಬಿಡದು
ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಅಡಿ ಎಡಲಮ್ಮದೇ ಕಟ್ಟಿದೆ.’
ಅವರ ಇನ್ನೊಂದು ವಚನವನ್ನು ನೋಡೋಣ-
ವೃಕ್ಷ ಬೀಜದೊಳಡಗಿ
ಬೀಜ ವೃಕ್ಷದೊಳಡಗಿ
ಉಭಯವಿದ್ದು ಫಲವೇನು?
ಆದಿಧರೆ ಇದ್ದಲ್ಲಿ ಉಭಯ ನಾಮವಿಲ್ಲ.
ಅರಿವಿನ ಅರಿಕೆ , ಕುರುಹಿನ ಪೂಜೆ
ನೆರಿಗೆಯಾಗಬೇಕೆ? ಅಲೇಖನಾದ ಶೂನ್ಯ ಬಲುಗಲ್ಲಿನ
ನೆಲೆಯ ದಾಂಟಿದೆಯಲ್ಲ.
ಶಾಂತರಸರ ಅಂಕಿತನಾಮ” ಅಲೇಖನಾಥ ಶೂನ್ಯ”- ವಚನ ಗಳನ್ನು ಅಭ್ಯಸಿಸುವವರನ್ನು ಚಿಂತನೆಗೆ ತೊಡಗಿಸುತ್ತದೆ. ಕಲ್ಲಿನೊಳಗಾದವನೇ, ಕಲ್ಲಿನೊಳಗಾದ ಕಲ್ಲಿನಾಥ!ಕಲ್ಲಿನೊಳಗೆ ಎಲ್ಲ.- ಹೀಗೆ ಕಲ್ಲು ಅವರ ವಚನಗಳ ಅವಿಭಾಜ್ಯ ಅಂಗವಾಗಿ ಹರಿದು ಬರುತ್ತದೆ.
ಶೂನ್ಯ ನಮಗೆಲ್ಲಾ ಗೊತ್ತು, ಏನೂ ಇಲ್ಲದ ಆರಂಭದ ಸ್ಥಿತಿಯಿಂದ ಬಯಲಿನೊಳಗೆ ಬಂದು ನಿಲ್ಲುವ ಶೂನ್ಯ ಸಂಪಾದನೆಯ ಈ ಆಲೇಖದಲ್ಲಿ ಇನ್ನಷ್ಟು ಜಿಜ್ಞಾಸೆ ನಡೆಯಬೇಕು. ಶೂನ್ಯ ತತ್ವವನ್ನೇ ಪ್ರತಿಪಾದಿಸಲು ಶಾಂತರಸರು ಕಲ್ಲನ್ನು ಬಳಸಿರಬಹುದು ಎಂಬ ಶಂಕೆಯು ಮೂಡುತ್ತದೆ.
ವಚನ ಭಂಡಾರಿಯಾದ ಶಾಂತರಸರ ಮುಂದೆ ಎಲ್ಲ ವಚನಗಳು, ಶೈವ ಸಾಹಿತ್ಯವು ಅವರ ಕಣ್ಮುಂದೆ ಬರುತ್ತಿದ್ದುದರಿಂದ ಅವರು ಅವುಗಳನ್ನು ಕೂಲಂಕುಶವಾಗಿ ಪರಾಮರ್ಶಿಸುತ್ತಿದ್ದರು. ಶಾಂತರಸರು ವಚನ ಚಳುವಳಿಯ ಮಹಾಪ್ರಭೆ ಎಂದೇ ಹೇಳಬಹುದು. ಹೀಗೆ ಬಹಳಷ್ಟು ಮುನ್ನಲೆಗೆ ಬಾರದೆ ನೆಲದ ಮರೆಯ ನಿಧಾನದಂತೆ ಬದುಕಿದರು.
ವಚನ ಸಾಹಿತ್ಯ ಸಂಸ್ಕೃತಿಯ ಪ್ರಸಾರ ಹಾಗೂ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು ಎಂದು ಹೇಳಿದರೆ ತಪ್ಪಾಗಲಾರದು.

ಪ್ರೊಫೆಸರ್ ಶಾರದಾ ಎಸ್ ಪಾಟೀಲ ಬಾದಾಮಿ.

Don`t copy text!