ವೈರಾಗ್ಯ ನಿಧಿ ಮಹಾದೇವಿಯಕ್ಕ

ವೈರಾಗ್ಯ ನಿಧಿ ಮಹಾದೇವಿಯಕ್ಕ

ಮಹಾದೇವಿಯಕ್ಕ ಹುಟ್ಟಿದುದು ಕ್ರಿ. ಶ. 1150 ರ ಸುಮಾರಿಗೆ ಈಗಿನ ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ. ತಂದೆ ನಿರ್ಮಲ ಶೆಟ್ಟಿ ತಾಯಿ ಸುಮತಿ. ಆಕೆ ಎಲ್ಲರಂತೆ ಜನಿಸಿದರೂ ಎಲ್ಲರಂತೆ ಬೆಳೆಯಲಿಲ್ಲ, ಎಲ್ಲರಂತೆ ಬಾಳಲಿಲ್ಲ. ಅಸಾಮಾನ್ಯಳಂತೆ ಬೆಳೆದು ಪರಿಪೂರ್ಣಳಂತೆ ಬದುಕಿದಳು. ಆಕೆ ಒಟ್ಟು ಜೀವಿಸಿದುದು ಕೇವಲ 20 ವರ್ಷ ಮಾತ್ರವಾದರೂ 2000 ವರ್ಷಗಳಲ್ಲಿ ಸಾಧಿಸಲಾರದುದನ್ನು ಸಾಧಿಸಿ ಅದೇನು ಹೆಣ್ಣೋ ಜಗದ ಕಣ್ಣೋ ಎಂಬಂತೆ ಮಿಂಚಿ -ಕೋರೈಸಿ ಕಣ್ಮರೆಯಾದಳು.

ಆಶೆಯೇ ನೀನು ನಿಲ್ಲು ನಿಲ್ಲು, ಹಸಿವೇ ನೀನು ನಿಲ್ಲು ನಿಲ್ಲು , ತೃಷೆಯೇ ನೀನು ನಿಲ್ಲು ನಿಲ್ಲು , ಎಂದು ಮಾನವನ ಅಧ:ಪತನದ ಅಂಶಗಳನ್ನೆಲ್ಲ ಹೊಸಕಿ ಹಾಕಿದ ಮಹದೇವಿಯಕ್ಕಳ ಮುಂದೆ ಶರಣಸತಿ – ಲಿಂಗಪತಿಯೆಂಬ ಲಿಂಗಾಯತ ಧರ್ಮ ದೊಡ್ಡ ಸಾಧ್ಯತೆಯನ್ನು ತೆರೆದುಕೊಟ್ಟಿತ್ತು. ಇಹಕ್ಕೊಬ್ಬ ಗಂಡ – ಪರಕ್ಕೊಬ್ಬ ಗಂಡ ಅಥವಾ ಲೌಕಿಕಕ್ಕೊಬ್ಬ ಗಂಡ , ಪಾರಮಾರ್ಥಿಕಕ್ಕೊಬ್ಬ ಗಂಡ ಎಂಬ ದ್ವಂದ್ವ ಬೇಡವೇ ಬೇಡ ಎಂದು ಗಂಡನೆಂಬುವನು ಇರಲೇಬೇಕಾಗಿದ್ದರೆ ಶಿವನೇ ಗಂಡನಾಗಿರಲಿ ಎಂದು ಆರಿಸಿಕೊಂಡಳು.

ದೇವ ಸಾಕ್ಷಾತ್ಕಾರಕ್ಕೆ ಸಂಸಾರ ಅಡ್ಡ ಬರಲಾರದೆಂಬ ಮಾತಿಗೆ ಆಕೆಯ ಸ್ಪಷ್ಟ ಉತ್ತರವೆಂದರೆ ” ಬಿಲ್ವ – ಬೆಳವಲಕಾಯಿಗಳನ್ನು ಏಕಕಾಲಕ್ಕೆ ಹಿಡಿಯಲಾಗುವುದಿಲ್ಲ “ ಎಂಬುದು. ವೈರಾಗ್ಯ ಜೀವನ ಹೆಣ್ಣಿಗೆ ಸಾಧ್ಯವಾಗುವುದೇ ಎಂಬ ಪ್ರಶ್ನೆಗೆ ಸಾವ , ಕೆಡುವ , ಕಾಡುವ , ಬೇಡುವ ಗಂಡನೊಡನೆ ಸಂಸಾರ ಮಾಡುವುದಕ್ಕಿಂತ ಸಾವಿಲ್ಲದ , ಕೇಡಿಲ್ಲದ , ಭವವಿಲ್ಲದ , ಭಯವಿಲ್ಲದ ಸರ್ವಸಮರ್ಥ ಗಂಡನನ್ನೇ ಆರಿಸಿಕೊಳ್ಳುವುದು ವಿಹಿತವಲ್ಲವೇ ? ಎಂದು ಮರುಪ್ರಶ್ನೆ ಹಾಕಿದಳು. ಹೆಣ್ಣು ಒಬ್ಬಂಟಿಯಾಗಿ ಬಾಳುವುದು ಸಾಧ್ಯವಿಲ್ಲವೆಂಬುವರ ಮಾತಿಗೆ ಅಕ್ಕನ ಉತ್ತರವೆಂದರೆ ” ಗಂಡು ಬಾಳಬಹುದಾದರೆ ಹೆಣ್ಣು ಬಾಳುವುದು ಅಸಾಧ್ಯದ ಮಾತೇ ? ಹೆಣ್ಣು ಗಂಡಿಗೆ ಮಾಯೆಯಾದರೆ ಗಂಡು ಹೆಣ್ಣಿಗೆ ಮಾಯೆ. ದೇಹದಲ್ಲಿರುವ ಆತ್ಮ ಅದು ಹೆಣ್ಣೂ ಅಲ್ಲ ; ಗಂಡೂ ಅಲ್ಲ “

ಕೌಶಿಕ ರಾಜನ ಬಂಧನದಿಂದ ಬಿಡಿಸಿಕೊಂಡು ಉಡುತಡಿಯನ್ನು ಬಿಟ್ಟ ಮಹಾದೇವಿಯಕ್ಕ ಸಾರ್ವಜನಿಕ ಕಷ್ಟ ಕೋಟಲೆಗಳನ್ನು ಸಹಿಸಿ ಕಲ್ಯಾಣದ ಹೊರವಲಯದಲ್ಲಿ ಕಿನ್ನರ ಬೊಮ್ಮಯ್ಯನ ಹಲವು ರೀತಿಯ ಪರೀಕ್ಷೆಯನ್ನು ಗೆದ್ದು, ತಾನೇ ಕಿನ್ನರಣ್ಣನಿಗೆ ಪರಬ್ರಹ್ಮಕ್ಕೆ ಬೆನ್ನು ಕೊಡದಿರುವ ಧೈರ್ಯವನ್ನು ತುಂಬಿ, ಅನುಭವ ಮಂಟಪ ಪ್ರವೇಸಿಸುತ್ತಾಳೆ. ಈಗಾಗಲೇ ಸರ್ವಶರಣರು ಮಹಾದೇವಿಯಕ್ಕನ ಆಧಾತ್ಮಿಕ ಎತ್ತರದಿಂದ ಸುಪರಿಚಿತರಿರುತ್ತಾರೆ. ಮಡಿವಾಳ ಮಾಚಯ್ಯ ನಡೆಯಲು ಹಾಸಿದ ಹಡದಿಯನ್ನು ರಕ್ಷಣೆಯ ವಸ್ತ್ರವೆಂದು ಹೊದೆದುಕೊಳ್ಳುತ್ತಾಳೆ. ಶೂನ್ಯ ಪೀಠಾಧೀಶ ಅಲ್ಲಮ ಪ್ರಭುವಿನ ಪರೀಕ್ಷಾತ್ಮಕ ತೀಕ್ಷ್ಣ ಪ್ರಶ್ನೆಗಳಿಗೆಲ್ಲ ಸಮರ್ಪಕ ಸಮಾಧಾನದ ಉತ್ತರ ನೀಡಿ ” ತನು ಗುಣ ನಾಸ್ತಿಯಾಗಿ ಲಿಂಗ ಸಂಗಿಯಾದಳು, ಮನಗುಣ ನಾಸ್ತಿಯಾಗಿ ಅರಿವು ಸಂಗಿಯಾದಳು ” ಎಂದು ಮನದುಂಬಿ ಹೊಗಳಿಸಿಕೊಳ್ಳುತ್ತಾಳೆ. ಬಸವಾದಿ ಪ್ರಮಥರೆಲ್ಲರೂ ಅಕ್ಕ ಸ್ವಯಂಲಿಂಗವಾದ ಪರಿ ಕಂಡು ಬೆಕ್ಕಸ ಬೆರಗಾಗುತ್ತಾರೆ. ಅಕ್ಕ ಕೆಲ ಕಾಲ ಕಲ್ಯಾಣದಲ್ಲಿ ತಂಗಿ , ಶರಣರ ಸಂಗಸುಖವನ್ನು ಅನುಭವಿಸಿ ಪ್ರಭುವಿನ ದಿವ್ಯಾದೇಶ ಪ್ರಕಾರ ತ್ರಿಕೂಟ ಗಿರಿಯೊಳಗಿನ ಕದಳಿಗೆ ತೆರಳುತ್ತಾಳೆ. ಅಲ್ಲಿ ” ಲಿಂಗವನ್ನೆ , ಲಿಂಗೈಕ್ಯವನ್ನೆ , ಸಂಗವನ್ನೆ , ನಿಸ್ಸಂಗವನ್ನೆ ” ಎಂದು ಲಿಂಗದಲ್ಲಿ ಒಂದಾಗುತ್ತಾಳೆ.

ಕನ್ನಡ ಸಾಹಿತ್ಯಕ್ಕೆ ಮಹಾದೇವಿಯಕ್ಕನ ಕೊಡುಗೆ ಅಪ್ರತಿಮವಾದುದಾಗಿದೆ. ಬಹಳ ಸುಂದರವಾದ ವಚನಗಳನ್ನಲ್ಲದೆ ಕೆಲವು ಸ್ವರ ವಚನಗಳನ್ನೂ ಬರೆದಿದ್ದಾಳೆ. ಇಲ್ಲಿಯವರೆಗೆ 354 ವಚನಗಳು ಲಭ್ಯವಾಗಿವೆ. ಆಕೆಯ ವಚನಾಂಕಿತ…. ” ಚೆನ್ನಮಲ್ಲಿಕಾರ್ಜುನ “

ವಚನ ವಿಶ್ಲೇಷಣೆ

ಈಳೆ ,ನಿಂಬೆ, ಮಾವು, ಮಾದಲಕ್ಕೆ ಹುಳಿ ನೀರ ನೆರೆದವರಾರಯ್ಯ ?
ಕಬ್ಬು , ಬಾಳೆ , ಹಲಸು , ನಾರಿವಾಳಕ್ಕೆ ಸಿಹಿನೀರ ನೆರೆದವರಾರಯ್ಯ ?
ಕಳೆವೆ , ಶಾವಿ, ಜೋಳ , ನವಣೆಗೆ ಓಗರದುದಕವ ನೆರೆದವರಾರಯ್ಯ ?
ಮರುಗ , ಮಲ್ಲಿಗೆ, ಪಚ್ಛೆ , ಕೇದಗೆಗೆ ಪರಿಮಳದುದಕವ ನೆರೆದವರಾರಯ್ಯ ?
ಇಂತೀ ಜಲವು ಒಂದೆ, ನೆಲವು ಒಂದೆ, ವಾಯು ಒಂದೆ, ಆಕಾಶ ಒಂದೆ ,
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ತನ್ನ ಪರಿ ಬೇರಾಗಿಹ ಹಾಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜನ0ಗಳ ಕೂಡಿರ್ದರೂ ತನ್ನ ಪರಿ ಬೇರಾಗಿಹನು.

ಮಹಾದೇವಿಯಕ್ಕನವರ ಈ ವಚನ ಬಹಳ ಸುಪ್ರಸಿದ್ಧವಾಗಿದೆ.
ತನ್ನ ಸುತ್ತಮುತ್ತಲಿನ ತರುಮರಗಳ ಬಗ್ಗೆ ಮತ್ತು ಬಿತ್ತು – ಬೆಳೆಗಳ ಬಗ್ಗೆ ಮಹಾದೇವಿಯಕ್ಕನವರು ಎಷ್ಟೊಂದು ಆಳವಾದ ಚಿಂತನೆಯನ್ನು ನಡೆಸಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತದೆ. ಇಂತಹ ವಿಚಾರ ಪ್ರಖರತೆಯ ಸುಳುಹು ಹಿಂದಿನ ಯಾವ ಒಬ್ಬ ಮಹಾನ್ ಕವಿಯಲ್ಲೂ , ಮಹಾನ್ ಅನುಭಾವಿಯಲ್ಲೂ ಸುಳಿದಿಲ್ಲ, ಅಂಥದು ಕವಿ – ಸಹೃದಯದ ಮಹಾದೇವಿಯಕ್ಕನಿಗೆ ಮಾತ್ರ ಹೊಳೆದಿದೆ.

ನಿಜವಾಗಿಯೂ ಕಿತ್ತಳೆ, ನಿಂಬೆ, ಮಾವು , ಕಣ್ಣಿ ಕಾಯಿಗಳಿಗೆ ಹುಳಿ ನೀರುಗಳನ್ನು ಯಾರು ಹಾಕುತ್ತಾರೆ ? ಈ ಕಾಯಿಗಳಲ್ಲಿ ಅಷ್ಟು ಹುಳಿ ಎಲ್ಲಿಂದ ಬರುತ್ತದೆ ? ಅಥವಾ ಹುಣಿಸೆ ಹುಳಿ ನೀರನ್ನು ಹಾಕಿ ಯಾವುದಾದರೂ ಕಾಯಿಯನ್ನು ಹುಳಿಗೊಳಿಸಬಹುದೇ ? ಯಾವ ನೀರು ಹಾಕಿದರೂ ನಿಂಬೆ ನಿಂಬೆಯೇ , ಮಾವು ಮಾವೇ ?
ಇದೇ ರೀತಿ ಕಬ್ಬು ಬಾಳೆ ಗಿಡಗಳಿಗೆ ಸಿಹಿನೀರನ್ನು ಹನಿಸುವುದು0ಟೇ? ಕಬ್ಬು ಅಷ್ಟು ಸಿಹಿಯಾಗಿರಲು ದೇವರು ಸಕ್ಕರೆಯನ್ನು ಎಲ್ಲಿಂದ ತಂದಿರಬೇಕು ಎಂದು ಸೋಜಿಗವಾಗುತ್ತದೆ.

ಹೀಗೆಯೇ ಕಳವೆ , ಶಾವಿ , ನವಣೆ , ಜೋಳಗಳಿಗೆ ಯಾರೂ ಹಿಟ್ಟು ನೀರುಗಳನ್ನು ಹಾಕುವುದಿಲ್ಲ. ಅವುಗಳಿಂದ ಹಿಟ್ಟೇ ತಯಾರಾಗುತ್ತದೆ. ಪಿಷ್ಟ ದವಸ ಧಾನ್ಯಗಳೇ ಬೇರೆ, ತೈಲ ಬೀಜಕಾಳುಗಳೇ ಬೇರೆ, ಒಂದನ್ನು ಬಿತ್ತಿ ಮತ್ತೊಂದನ್ನು ಪಡೆಯಲಾಗುವುದಿಲ್ಲ. ಮರುಗ , ಮಲ್ಲಿಗೆ , ಕೇದಗೆಗಳಿಗೆ ಸುವಾಸನೆಯ ನೀರನ್ನು ಯಾರೂ ಹಾಕುವುದಿಲ್ಲ. ಮಲ್ಲಿಗೆಗೆ ಗಂಧದೆಣ್ಣೆಯನ್ನು ಸುರುವಿ ಮೈಸೂರು ಮಲ್ಲಿಗೆಯನ್ನಾಗಿ ಮಾಡಲಾಗುವುದಿಲ್ಲ. ನೆಲ ಒಂದೇ ಆಗಿದ್ದರೂ , ಜಲ ಒಂದೇ ಆಗಿದ್ದರೂ , ಆಕಾಶ ಒಂದೇ ಆಗಿದ್ದರೂ , ವಾಯು ಒಂದೇ ಆಗಿದ್ದರೂ ಪರಮಾತ್ಮ ಸೃಷ್ಟಿಯ ಆಯಾ ಬೀಜಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಂತೆ , ಪ್ರತಿಯೊಬ್ಬರೂ ಪರಮಾತ್ಮನ ಭಕ್ತರೇ ಆಗಿದ್ದರೂ ತಮ್ಮ ತಮ್ಮ ಗುಣಧರ್ಮಗಳಿಗನುಗುಣವಾಗಿಯೇ ವರ್ತನೆ ಮಾಡುವರು. ಶಿವಭಕ್ತರೆಲ್ಲರೂ ಸಮಾನರೆಂದು ಹೇಳಿಕೊಂಡರೂ ಎಲ್ಲರ ಆಚಾರ -ವಿಚಾರಗಳು ಒಂದೇ ಆಗಿರುವುದಿಲ್ಲ.

ಅನುಭಾವಿ ಕವಿಯಿತ್ರಿ ಮಹಾದೇವಿಯಕ್ಕನವರು ಹೇಳುವ ತಾತ್ಪರ್ಯವಿಷ್ಟೇ.. ದೇವರು ನೀರಿನಂತೆ ತಾನು ಪ್ರತ್ಯೇಕವಾಗಿಯೇ ಇದ್ದು, ಆಲಿಪ್ತವಾಗಿಯೇ ಇದ್ದು ಅವರವರ ಸಂಸ್ಕಾರ, ಅವರವರ ಸಂಸ್ಕೃತಿ , ಅವರ ಪ್ರಯತ್ನ , ಪರಿಸರ , ಭಕ್ತಿಗನುಗುಣವಾಗಿ ಬೆಳೆಯಲವಕಾಶ ಕೊಟ್ಟಿರುತ್ತಾನೆ. ಒಂದೇ ನೀರು , ಒಂದು ಜಾಗದಲ್ಲಿ ಸಿಹಿಯಾಗಿರುತ್ತದೆ. ಒಂದು ಜಾಗದಲ್ಲಿ ಉಪ್ಪಾಗಿರುತ್ತದೆ. ಮತ್ತೊಂದೆಡೆ ಸೌಳಾಗಿರುತ್ತದೆ. ಇದೆಲ್ಲ ಆ ನೀರು ಕೂಡಿದ ದ್ರವ್ಯಗಳ ಪರಿಣಾಮವೇ ಹೊರತು ನೀರಿನ ದೋಷವಲ್ಲ. ಹಾಗೆ ಪರಮಾತ್ಮನು ಎಲ್ಲ ಜನ0ಗಳಲ್ಲಿ ಇದ್ದರೂ ತಾನು ತನ್ನ0ತೆ, ಅವರು ಅವರಂತೆ. ಕಳ್ಳರಲ್ಲಿಯೂ ಪರಮಾತ್ಮ ಇದ್ದಾನೆ, ಸುಳ್ಳರಲ್ಲಿಯೂ ಪರಮಾತ್ಮ ಇದ್ದಾನೆ., ಸತ್ಯವ0ತರಲ್ಲಿಯೂ ಪರಮಾತ್ಮ ಇದ್ದಾನೆ, ಮಹಾತ್ಮರಲ್ಲಿಯೂ ಪರಮಾತ್ಮ ಇದ್ದಾನೆ ; ಆದರೂ ಅವರು ಸುಳ್ಳರೇಕಾದರು ? ಇವರು ಸತ್ಯವಂತರೇಕಾದರು ಎಂಬ ಪ್ರಶ್ನೆಗಳಿಗೆ ನಾವು ನಿಂಬೆ ಹುಳಿಯೇಕಾಯಿತು? ಕೇದಗೆ ಸುವಾಸಿತವೇಕಾಯಿತು ಎಂದು ಕೇಳಬೇಕಾಗುತ್ತದೆ.

ಒಟ್ಟಿನಲ್ಲಿ ಶುದ್ಧಸ್ವರೂಪಿ, ಅಗ್ನಿಸ್ವರೂಪಿ , ಜ್ಞಾನಸ್ವರೂಪಿ ಜಂಗಮದೊಡನಾಡಿ ತನ್ನ ಭವಾದಿ ಭವಗಳು ಹಿಂಗಿ ಹೋದವೆಂಬುದು ಮಹಾದೇವಿಯಕ್ಕನವರ ತಿಳುವಳಿಕೆ. ತ್ಯಾಗ -ತಪಸ್ಸುಗಳಿಂದ ಸ್ವರ್ಗ ಸುಖ ಪಡೆಯಬಹುದು, ಸಾಯುಜ್ಯ, ಸಾನಿದ್ಯ , ಸಾಲೋಕ್ಯ ಪದವಿ ಪುರಸ್ಕಾರ ಪಡೆಯಬಹುದು, ಇವು ದೊಡ್ಡ ಮಾತಲ್ಲ . ಆದರೆ ಇಹಲೋಕದಲ್ಲಿ ಇದ್ದೂ ಇಲ್ಲದಂತೆ , ನಿರ್ದೇಹಿಯಾಗಿ , ನಿರ್ಮೋಹಿಯಾಗಿ , ಜೀವನ್ಮುಕ್ತಿ ಗಳಿಸುವುದು ಜಂಗಮದ ಅನುಗ್ರಹದಿಂದ ಮಾತ್ರ ಸಾಧ್ಯ ಎಂಬುದು ಶಿವ ಶರಣೆ ಮಹಾದೇವಿಯಕ್ಕನವರ ನಂಬಿಕೆ.

ಸುಧಾ ಪಾಟೀಲ್
ಬೆಳಗಾವಿ

Don`t copy text!