ಅಂತರಂಗದ ಅರಿವು ೧೯
ಭಕ್ತಿಯೆಂಬ ಹರಿಗೆಯ ಹಿಡಿದು
ಅಂದ ಚಂದದ ಬಣ್ಣವ ಹೊದ್ದು
ಹರನ ಶರಣರೆಂಬ ಅಣ್ಣಗಳೆಲ್ಲರು
ಶರಣಂಗಳೆಂಬ ಉರವಣಿಯ ಅಂಬಿಗಾರದೆ
ಭಕ್ತಿಯೆಂಬ ಹರಿಗೆಯ ಹಿಡಿದು
ಮುಕ್ತಿಯೆಂಬ ಗ್ರಾಮವ ಮುತ್ತಿಕಾದಿ
ಸತ್ತರೆಲ್ಲರು ರುದ್ರನ ಶೂಲದ ಘಾಯದಲ್ಲಿ
ಎನಗೆ ಹೊದ್ದಿಗೆ ಯಾವುದೋ ನಿ:ಕಳಂಕ ಮಲ್ಲಿಕಾರ್ಜುನ
– ಮೋಳಿಗೆ ಮಾರಯ್ಯ.
ತಮ್ಮ ವೇಶಭೂಷಣ, ಲಾಂಛನಗಳಿಂದ ಹರನ ಶರಣರೆನ್ನುವಂತ ಜನರು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಕರಣಂಗಳೆಂಬ ಬಾಣಗಳ ರಭಿಸವಾದ ಹೊಡೆತವನ್ನು ತಡೆದುಕೊಳ್ಳಲಾಗದೆ ಅವುಗಳನ್ನು ಜಯಸಲಾಗದೆ ಬರಿದೆ ವೇಶಭೂಷಣಗಳಿಂದ ತಮ್ಮನ್ನು ಶಿವ ಭಕ್ತರೆಂದು ತೋರಿಸಿಕೊಳ್ಳುವ ಜನರು ಭಕ್ತಿಯನ್ನುವುದನ್ನು ಗುರಾಣಿಯನ್ನಾಗಿ ಮಾಡಿಕೊಂಡು ಮುಕ್ತಿಯನ್ನುವ ಗ್ರಾಮವನ್ನು ಮುತ್ತಿಗೆ ಹಾಕಿ ಯುದ್ಧಮಾಡಿ ಯುದ್ಧವನ್ನು ಜಯಿಸದೇ ರುದ್ರನು ಹಿಡಿದ ತ್ರಿಶೂಲದ ಗಾಯದಿಂದ ಸತ್ತರು. ಇನ್ನು ನಾನು ಯಾವ ರಕ್ಷಣ ಕವಚವನ್ನು ಹಿಡಿದುಕೊಳ್ಳಲಿ ಎಂದು ಮೋಳಿಗೆ ಮಾರಯ್ಯ ತನ್ನ ಆರಾಧ್ಯ ದೈವವಾದ ನಿ:ಕಳಂಕ ಮಲ್ಲಿಕಾರ್ಜುನನಲ್ಲಿ ಬಿನ್ನವಿಸಿಕೊಳ್ಳುತ್ತಾನೆ.
ಶರಣನೆಂದು ಸೋಗು ಹಾಕಿಕೊಂಡವರೆಲ್ಲರು ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಮನದ ವೈರಿಗಳನ್ನು ಗೆಲ್ಲಲಾಗದವನನ್ನು, ಡಾಂಬಿಕನನ್ನು ಶಿವನ ತ್ರಿಶೂಲವೆ ಘಾಸಿಗೊಳಿಸುತ್ತದೆ. ಆದ್ದರಿಂದ ಡಾಂಬಿಕ ಭಕ್ತಿ ಸಲ್ಲದು ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.