ಸತ್ಯದ ಬೀಜದಲ್ಲಿ ಅಸತ್ಯದ ಆವರಣ
ಜ್ಞಾನದ ಬಲದಿಂದ | ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ | ತಮಂದದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ | ಅವಲೋಹದ ಕೇಡು ನೋಡಯ್ಯ
ಕೂಡಲ ಸಂಗನ | ಶರಣರ ಅನುಭಾವದಿಂದ
ಎನ್ನ ಮನದ | ಕೇಡು ನೋಡಯ್ಯ |
-ಬಸವಣ್ಣ
ಬಸವಣ್ಣನವರ ಈ ವಚನ ಜ್ಞಾನದ ಸಂವಾದಕ್ಕೆ ಮನುಷ್ಯ ಧರ್ಮದ ಮೌಲ್ಯಗಳು ಇಲ್ಲಿ ಮುಖಾಮುಖಿಯಾಗುತ್ತವೆ. ಜ್ಞಾನದ ವಿಶೇಷತೆ ಅಜ್ಞಾನದ ಪರಮಾವದಿ ಪ್ರಧಾನವಾಗಿ ನಿರ್ದೇಶಿಸುತ್ತವೆ. ನಮ್ಮ ಸಮಾಜದ ಎಲ್ಲಾ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಉತ್ತರವಿದೆ. ಭಕ್ತಿ ಶ್ರದ್ಧೆ ಜ್ಞಾನ ಧರ್ಮ ಆತ್ಮವಿಶ್ವಾಸಗಳು ಒಂದು ಆರೋಗ್ಯಯುತ ಸಮಾಜವನ್ನು ಕಟ್ಟಲು ಸಹಾಯವಾಗುತ್ತವೆ.
12ನೇ ಶತಮಾನದಲ್ಲಿ ಆಳವಾಗಿ ಬೇರೂರಿದ್ದ ಜ್ಞಾನ ಅಜ್ಞಾನಗಳ ತಿಕ್ಕಾಟದಲ್ಲಿ ತಾತ್ವಿಕ ಪರಿವರ್ತನೆಯನ್ನು ಪವಿತ್ರಿಕರಿಸುವುದಾಗಿದೆ. ಅಕ್ಕಮಹಾದೇವಿ ಹೇಳುವಂತೆ ಭಾನುವಿನಂತಿರುವುದು ಜ್ಞಾನ. ಬಾನುವಿನ ಕಿರಣದಂತಿರಬೇಕು ಭಕ್ತಿ ಎಂದು ಹೇಳುವುದನ್ನು ನೋಡಿದರೆ ಅಜ್ಞಾನ ಮತ್ತು ಸುಜ್ಞಾನಗಳನ್ನು ವಿಶಿಷ್ಟವಾಗಿ ಪ್ರತಿಕ್ರಿಯಿಸಿ ಯಶಸ್ಸನ್ನು ಪಡೆದವರು ಶರಣರಾಗಿದ್ದರು. ಆದರೆ ಇದೇ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಾಗ ಜ್ಞಾನವಂತ ಸಮಾಜ ಬೆಚ್ಚಿ ಬೀಳುವಂತೆ ಮಾಡಿದ್ದಲ್ಲದೆ ಧಾರ್ಮಿಕ ಸಮಕಾಲೀನರಿಗೆ ಭಕ್ತಿಯ ಪಯಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸರ್ವಜ್ಞ ಹೇಳುವಂತೆ “ವಿದ್ಯೆ ಕಲಿಸದಾ ತಂದೆ ಬುದ್ಧಿ ಹೇಳದ ಗುರು ಬಿದ್ದಿರಲು ಬಂದು ನೋಡದ ತಾಯಿ ಶುದ್ಧಸತ್ಯದ ಬೀಜದಲ್ಲಿ ಅಸತ್ಯದ ಆವರಣ ವೈರಿಗಳು ಸರ್ವಜ್ಞ” ಇವೆಲ್ಲ ಜ್ಞಾನ ಮಾರ್ಗದ ಸಂಸಾರಿಕ ಜೀವನದ ಪಯಣಗಳಾಗಿ ಮುಖಾಮುಖಿಯಾಗುತ್ತವೆ.
ನಮ್ಮ ಸಮಾಜದಲ್ಲಿ ಮಾತಿಗೂ ಪ್ರಮಾಣಗಳಿಗೂ ನಿಲುಕದ ಅಕ್ಷರವನ್ನು ಉಪಾಸನೆ ಮಾಡುವ ಜ್ಞಾನಿಗಳೇ ಶ್ರೇಷ್ಠರು ಎಂಬ ವಾದವಿದೆ. ಇದೊಂದು ತೆರನಾಗಿ ಜ್ಞಾನ ಮತ್ತು ಅಜ್ಞಾನವನ್ನು ಮುಕ್ತವಾಗಿ ಪ್ರೇರೇಪಿಸುತ್ತದೆ. ಅಕ್ಷರ ಬಲ್ಲ ಜ್ಞಾನಿಗಳು ಸಕಲ ಜೀವಾತ್ಮರಿಗೆ ಹಿತವನ್ನು ಬಯಸುವವರು. ದುಃಖಿಗಳಿಗೆ ಕರುಣೆ ವ್ಯಕ್ತಪಡಿಸುವವರಾಗಿದ್ದಾರೆ. ಇದೊಂದು ರೀತಿಯಲ್ಲಿ ಜ್ಞಾನದ ಗುರು ಉಪದೇಶ ನೀಡಿ ಅಜ್ಞಾನವೆಂಬ ಶಿಷ್ಯನನ್ನು ಸರಿಪಡಿಸುವ ಸಂರಕ್ಷಕ ಆಗಿದ್ದಾನೆ.
ಅಜ್ಞಾನವೆಂದರೆ ಜ್ಞಾನವಿಲ್ಲವೆಂದಲ್ಲ. ಜ್ಞಾನಕ್ಕೆ ಮಿತಿ ಇದೆ. ಸಂಕುಚಿತ ಜ್ಞಾನವೇ ಅಜ್ಞಾನ. ವಚನಕಾರರು ಕಂಡುಕೊಂಡಂತೆ ನಮ್ಮ ಸದಾಚಾರ ಗುಣಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇದ್ದಾಗ ಸಂಕೋಚ ಉಂಟಾಗುತ್ತದೆ. ಇದೇ ಅಜ್ಞಾನ.
ತಮ ಅಜ್ಞಾನದ ಪರಮಾವಧಿ ಆಲಸ್ಯ ಜಡತ್ವಗಳು ಅಂಧಕಾರಗಳಾಗಿವೆ. ಚಿಕ್ಕದಾದ ಜ್ಯೋತಿ ಹೊರಗಿನ ಕತ್ತಲನ್ನು ದೂರ ಮಾಡಿದರೂ ನಮ್ಮೊಳಗಿರುವ ಅಂಧಕಾರ ಅಜ್ಞಾನಗಳು ಅಹಂಕಾರದ ಸ್ಪರ್ಶಗಳಾಗುತ್ತವೆ. ತಮಂದವನ್ನು ಹೋಗಲಾಡಿಸಬೇಕಾದರೆ ಮನಸ್ಸಿನ ಸಂಕಲ್ಪ ನಮ್ಮ ಆಲೋಚನೆ ಜ್ಞಾನೋತ್ಪತ್ತಿಗೆ ಕಾರಣವಾಗುತ್ತವೆ. ಇವು ನಮ್ಮೊಂದಿಗೆ ಆತ್ಮ ವ್ಯಾಖ್ಯೆಗಳಾಗಿ ಭಾಗಿಯಾಗುತ್ತವೆ.
ಜ್ಯೋತಿಯ ಬಲದಿಂದ ತಮಂಧದ ಕೇಡು ಎಂದಾಗ ಜ್ಯೋತಿ ರತ್ನದ ದೀಪವಾದರೂ ಕೆಲವು ಸಲ ತಮಂಧತೆಯನ್ನು ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಬಸವಣ್ಣನವರ ಈ ವಚನ ಶರಣ ಸಾಹಿತ್ಯವನ್ನು ಆತ್ಮಿಕರಿಸಿಕೊಂಡು ಅಪ್ಪಿಕೊಳ್ಳುವಂತೆ ಮಾಡಿದ್ದಾಗಿದೆ. ನಮ್ಮೊಳಗಿನ ಬೆಳಕು ಆತ್ಮ ಜ್ಯೋತಿಯ ಸಾಮರಸ್ಯವಾಗಬೇಕೆಂಬುದನ್ನು ಸ್ಪಷ್ಟಪಡಿಸುತ್ತಾನೆ ಅಣ್ಣ.
ಈ ವಚನದ ವಿನಮ್ರ ವಿಸ್ತಾರತೆ ಸತ್ಯ ಅಸತ್ಯಗಳ ತೌಲನಿಕತೆಯಲ್ಲಿ ನಮ್ಮನ್ನು ಸೆಳೆಯುತ್ತದೆ. ಜ್ಞಾನ ಅಜ್ಞಾನದ ಸತ್ಯ ಅಸತ್ಯಗಳ ತರ್ಕಗಳು ನಮ್ಮನ್ನು ಸದಾ ಎಚ್ಚರಿಸುವ ಚೈತನ್ಯ ಮಾಯವಾದ ವ್ಯವಹಾರವಾಗಿದೆ. ಸತ್ಯ ಮಾನವೀಯ ಧರ್ಮ. ಅಣ್ಣನವರು ಹೇಳುವಂತೆ “ಅಯ್ಯಾ ನೀನು ನಿರಾಕಾರನಾಗಿದ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ” ಸತ್ಯವನ್ನು ದೇವರೆಂದು ಸ್ವೀಕರಿಸುವ ಅರ್ಹತೆಯನ್ನು ನಾವು ಹೊಂದಿರಬೇಕು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಸತ್ಯ ಸದಾ ಜೀವಂತ ಶಾಶ್ವತವಾಗಿರುತ್ತದೆ. ಅಸತ್ಯ ನಮ್ಮನ್ನು ಹೇಡಿಯನ್ನಾಗಿಸಿ ಕಹಿ ಅನುಭವವನ್ನು ನೀಡುತದೆ. ಸತ್ಯ ಅಸತ್ಯಗಳು ಒಂದು ಇನ್ನೊಂದರೊಳಗೆ ಸೇರಿ ನಮ್ಮ ಮನಃಸಾಕ್ಷಿಯನ್ನು ಪ್ರೇರೇಪಿಸುತ್ತದೆ.
ಬಸವಣ್ಣನವರ ಪ್ರಮುಖ ಆಶಯ ಮನುಷ್ಯ ಸ್ವಭಾವವನ್ನು ಜ್ಞಾನೇಂದ್ರಿಯಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ಪವಿತ್ರಿಕರಿಸಿಕೊಳ್ಳುವುದಾಗಿದೆ. ಇದೊಂದು ರೀತಿಯಲ್ಲಿ ಆಧ್ಯಾತ್ಮಿಕ ಪಥಕ್ಕೆ ನಮ್ಮನ್ನು ತೆರೆದುಕೊಳ್ಳುವ ಸಾಮಾಜಿಕ ಸಂಸ್ಕಾರವಾಗಿದೆ. “ಪರುಷದ ಬಲದಿಂದ ಅವಲೋಕದ ಕೇಡು ನೋಡಯ್ಯ” ಪರುಷದ ಗುಣಧರ್ಮ ಲೋಹವನ್ನು ಚಿನ್ನವಾಗಿಸವ ಶಕ್ತಿ ಇದೆ.
ಬಸವಣ್ಣನವರ ಈ ವಚನ ಜ್ಞಾನಕ್ಕೆ ಚಿನ್ನದ ಸ್ಪರ್ಶ ನೀಡುವ ಅಸತ್ಯವೆಂಬ ಕಳ್ಳ ಮನಸ್ಸನ್ನು ಪವಿತ್ರಗೊಳಿಸುವ ಅನುಸಂಧಾನಗಳಾಗಿವೆ.