ಶರಣರ ವಚನಗಳಲ್ಲಿ ಸಮ ಸಮಾಜದ ಪರಿಕಲ್ಪನೆ.

ಶರಣರ ವಚನಗಳಲ್ಲಿ ಸಮ ಸಮಾಜದ ಪರಿಕಲ್ಪನೆ.

ಭಕ್ತಿ ಶುಭಾಶಯವ ನುಡಿವೆ ನುಡಿದಂತೆ ನಡೆವೆ
ನಡೆದಂತೆ ನುಡಿವೆ ನುಡಿಯೊಳಗಣ ನಡೆಯ ಪೂರೈಸುವೆ
ನಡೆಯೊಳಗಣ ನುಡಿಯ ಪೂರೈಸುವೆ ಮೇಲೆ ತೂಗುವ
ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ ಒಂದು ಜವೆ
ಕೊರತೆಯಾದಲ್ಲಿ ಎನ್ನನದ್ದಿ ನೀನೆದ್ದು ಹೋಗಾ
ಕೂಡಲಸಂಗಮದೇವಾ

ಭಾರತವು ಬಹು ಸಂಸ್ಕೃತಿಯ ಸಂಗಮ. ಅನೇಕ ಭಾಷೆಗಳಲ್ಲಿ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳು ಜನ್ಮ ತಾಳಿ ಪ್ರಪಂಚವನ್ನು ಬೆಳಗುವ ಕಾರ್ಯ ಮಾಡಿವೆ. ಪ್ರಬುದ್ಧವಾದ ಮತ್ತು ಸತ್ವ ಪೂರ್ಣವಾದ ಸಂದೇಶಗಳಿಂದ ಅವು ಮಾನವ ಕುಲವನ್ನ ಅಂದಿನಿಂದ ಇಂದಿನವರೆಗೂ ಕೈ ಹಿಡಿದು ನಡೆಸುತ್ತಿವೆ.

ಕನ್ನಡಿಗರದೇ ಧರ್ಮ, ಕನ್ನಡದ ಸ್ವಂತ ಸಾಹಿತ್ಯ ಪ್ರಕಾರ, ಗದ್ಯ ಮತ್ತು ಪದ್ಯ ಎರಡು ಲಕ್ಷಣಗಳನ್ನು ಹೊಂದಿರುವ ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿ. ಸಾಹಿತ್ಯಕ್ಕೆ ಸಾಹಿತ್ಯದಂತೆಯೂ, ಶಾಸ್ತ್ರಕ್ಕೆ ಶಾಸ್ತ್ರದಂತೆಯೂ ತೋರುವ ಬಸವಾದಿ ಶರಣರ ಅನುಭವದ ಅಭಿವ್ಯಕ್ತಿಯನ್ನ ಶರಣ ಸಾಹಿತ್ಯ ಎಂತಲೂ ವಚನ ಸಾಹಿತ್ಯ ಅಂತಲೂ ಕರೆಯುವರು.

ವಚನ ಸಾಹಿತ್ಯವು ಕಾಡು ದಾರಿಯಲ್ಲಿ ಕೈಹಿಡಿದು ನಡೆಸುವ ದಾರಿ ದೀವಿಗೆಯಂತೆ, ಮಾನವ ಕುಲದ ಆಂತರಿಕ ಮತ್ತು ಬೌದ್ಧಿಕ ಬದುಕಿನ ಜೊತೆಗಾರನಿದ್ದಂತೆ. 12ನೇ ಶತಮಾನದಲ್ಲಿ ಸೃಷ್ಟಿಯಾದ ಈ ಸಾಹಿತ್ಯ ಪ್ರಕಾರ ಸಾಹಿತ್ಯಕ್ಕಾಗಿ ಸೃಷ್ಟಿಯಾದುದಲ್ಲ ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗಾಗಿ. ತನ್ಮೂಲಕ ಶತ ಶತಮಾನಗಳೇ ಕಳೆದರೂ ಶರಣಸಾಹಿತ್ಯ ತನ್ನ ಪ್ರಭಾವವನ್ನು ಇನ್ನೂ ಬೀರುತ್ತಲೆ ಇದೆ.

ಸರಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ವಚನಗಳು 30 ಕ್ಕಿಂತಲೂ ಹೆಚ್ಚು ಭಾಷೆಯಲ್ಲಿ ಅನುವಾದ ಗೊಂಡಿರುವುದು ವಚನ ಸಾಹಿತ್ಯದ ಪ್ರಖರತೆ, ಪ್ರಸ್ತುತತೆಗೆ ಪ್ರಾಮುಖ್ಯತೆಗೆಸಾಕ್ಷಿಗಿದೆ . ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇದನ್ನು ಸ್ವತಂತ್ರ ಯುಗವೆಂತಲೂ ಬಸವಯುಗ ವೆಂತಲೂ ಕರೆಯುವರು. ಅಂದು ರಾಜಸತ್ತೆ, ಪುರುಷ ಸತ್ತೆ ಮತ್ತು ಮತ ಸತ್ತೆಗಳು ಸಮಾಜವನ್ನು ನಿಯಂತ್ರಿಸುವ ಶಕ್ತಿ ಗಳಾಗಿದ್ದವು. ರಾಜರುಗಳು ಪೋಷಣೆ ಹೆಸರಿನಲ್ಲಿ ಪ್ರಜೆಗಳ ಸಂಪತ್ತನ್ನು ದೋಚುತಿದ್ದರು , ಮತಗಳ ಹೆಸರಿನಲ್ಲಿ ಧರ್ಮಗಳ ಮುಖಂಡರು ಭಕ್ತರನ್ನು ಶೋಷಿಸುತ್ತಿದ್ದರು , ಪುರುಷ ಸತ್ತೆಯ ಹೆಸರಿನಲ್ಲಿ ಪುರುಷವರ್ಗ ಸ್ತ್ರೀ ವರ್ಗವನ್ನು ತುಳಿಯುತ್ತಿದ್ದರು. ಹೀಗೆ ರಾಜವರ್ಗ-ಪ್ರಜಾ ವರ್ಗ, ಪುರೋಹಿತ ವರ್ಗ – ಭಕ್ತವರ್ಗ , ಪುರುಷ ವರ್ಗ ಸ್ತ್ರೀ ವರ್ಗ ಮತ್ತು ಮೇಲ್ವರ್ಗ-ಕೆಳ ವರ್ಗಗಳಿಂದ ಸಮಾಜ ಒಡೆದು ಹೋಗಿತ್ತು,

ಬಸವಾದಿ ಶರಣ ಕಾಲವು ಹೊಸಬಗೆಯ ಆಧ್ಯಾತ್ಮಿಕ ತೇಜಸ್ಸು, ಧಾರ್ಮಿಕ ಶ್ರದ್ಧೆ, ಪ್ರಯೋಗ ಮತ್ತು ಚಿಕಿತ್ಸಕ ಬುದ್ಧಿಗಳಿಂದ ಕೂಡಿದ್ದ ಸಂಕ್ರಮಣ ಕಾಲ. ಪಂಡಿತ ಕವಿಗಳ ಜೊತೆಗೆ ಅನೇಕ ಆಧ್ಯಾತ್ಮಿಗಳು ಅನುಭಾವಿಗಳು, ಶರಣರು ಸಾಹಿತ್ಯ ನಿರ್ಮಾತೃ ಗಳಾದರು. ಈ ಹೊಸ ನಿರ್ಮಾತೃಗಳ ನೆರವಿಗೆ ಭಕ್ತಿ ಭಂಡಾರಿಯೂ ಯುಗಪುರುಷನೂ ಆದ ಬಸವಣ್ಣನು ಮುಂದಾಳುವಾದನು. ಸಮಾಜದಲ್ಲಿರುವ ಎಲ್ಲಾ ಭಿನ್ನತೆಗಳನ್ನು ತೊಡೆದು ಹಾಕಲೆಂದೆ ಶರಣ ಸಂಕುಲವನ್ನ ಕಟ್ಟಿ ಸಂಘಟಿಸಿದನು.
ಕುವೆಂಪು ಅವರು ಹೇಳುವಂತೆ ಶರಣರು ಎಂದರೆ ಯಾರು?
ಇವರು ಕುಂಚ ಕೈಯಾಗಿ ವಸ್ತ್ರ ಪಟಕ್ಕೆ ಬಣ್ಣ ಬಳಿದವರಲ್ಲ
ಅವರು ಪೊರಕೆ ಹಿಡಿದು ಗುಡಿಸುವ,ಗುದ್ದಲಿ ಹಿಡಿದು ಅಗೆಯುವ, ನೀರು ಹೋಯ್ದು ಶುಚಿಗೊಳಿಸುವ ಗೊಬ್ಬರ ಹಾಕಿ ಬೆಳೆಸುವ, ಕಳೆ ಕಿತ್ತು ಹಸನು ಮಾಡುವ, ಬೇಲಿ ಕಟ್ಟಿ ಕಾಯುವ , ಅಬ್ಬರಸಿ ಹಕ್ಕಿ ಮಿಗಗಳನ್ನೆಬ್ಬಿಸಿ ಪೈರನ್ನು ರಕ್ಷಿಸುವ ಮಾನವ ಹೃದಯದ ದೇವ ಪಿತರಂತೆ ಕರ್ಮಯೋಗಿಗಳು.
ಸಮಾಜದ ಅಸಮಾನತೆಗೆ ಬಹುದೊಡ್ಡ ಕಾರಣವಾಗಿದ್ದ ಜಾತಿ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸಿದ ಶರಣರು ಹೆಚ್ಚು ಕಡಿಮೆ ಎಲ್ಲಾ ವಚನಕಾರರು ಕುಲ ಜಾತಿ ಅಸ್ಪೃಶ್ಯತೆ ಕುರಿತು ಅತ್ಯಂತ ಕಳಕಳಿಯಿಂದ ಪ್ರಾಮಾಣಿಕತೆಯಿಂದ ಪ್ರತಿಕ್ರಿಯಿಸಿದ್ದಾರೆ.
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ
ಹಾರವನಾದ ಕರ್ಣದಲಿ ಜನಿಸಿದವರುಂಟೆ
ಜಗದೊಳಗೆ? ಎಂದು ಪ್ರಶ್ನಿಸುವ ಬಸವಾದಿ ಶರಣರು
ಜಾತಿ ಎಂಬುದು ಉದ್ಯೋಗ ಆಧಾರಿತ ವಾಗಿದ್ದೆ ಹೊರತು ಅದು ಹುಟ್ಟಿನಿಂದ ಬರುವಂತದ್ದಲ್ಲ ಎಂದು ಸಾರಿದ ಶರಣರು ಜನರಿಗೆ ಲಿಂಗ ದೀಕ್ಷೆಯನ್ನು ಕೊಟ್ಟ ದಾಸಿಪುತ್ರನಾಗಲಿ ವೇಶ್ಯಾ ಪುತ್ರನಾಗಲಲಿ ಶಿವ ದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ… ಎಂದ ಶರಣರು
ಕೊಲ್ಲುವವನೇ ಮಾದಿಗ ಹೊಲಸು ತಿಂಬುವನೆ
ಹೊಲೆಯ! ಕುಲವೇನೋ ಆವಂದಿರು ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ
ಸಂಗನ ಶರಣರೆ ಕುಲಜರು
(ಬಸವಣ್ಣ )
ಅಸ್ಪೃಶ್ಯತೆ ಯನ್ನ ತೊಲಗಿಸಲು ಸಮಾಜದಲ್ಲಿ ಸಮ-ಸಮಾನತೆಯನ್ನು ಬೀರಲು ಹೊಲೆ ಮಾದಿಗರ ಘನತೆಯನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಶರಣರು ಮಾಡಿದರು.
ಅಪ್ಪನು ನಮ್ಮ ಮಾದರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಯ್ಯ
ಚಿಕ್ಕಯ್ಯನೆಮ್ಮಯ ನಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನ ನೇತಕ್ಕಯರಿ ಕೂಡಲಸಂಗಯ್ಯ ಎನ್ನುತ್ತಾರೆ ಬಸವಣ್ಣನವರು.
ಪುಣ್ಯಸ್ತ್ರೀ ಕಾಳವ್ವೆಯ 12 ವಚನಗಳು ದೊರಕಿವೆ ಬಹಳ ಪ್ರಮುಖವಾಗಿ ಆಕೆ ವಚನಗಳು ಜಾತಿ,ಅಸಮಾನತೆ, ಕಾಯಕ ಮತ್ತು ಡಾಂಬಿಕ ಭಕ್ತಿಯನ್ನು ಕುರಿತು ಬಹಳ ಸೂಕ್ಷ್ಮವಾಗಿ ಹೇಳಿರುವುದನ್ನ ನಾವು ಗಮನಿಸಬಹುದು ಪ್ರಸ್ತುತ ಈ ವಚನ ಕಾಳವ್ವೆಯ ಬಹುದೊಡ್ಡ ಸಾಮಾಜಿಕ ಪ್ರಜ್ಞೆಯನ್ನು ಸ್ಪಷ್ಟಪಡಿಸುತ್ತದೆ.
ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ
ಕುಲಜ ಕುಲಜರೆಂದೆಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ
ಮಾದಿಗ ಕೀಳು ಜಾತಿಯೆಂಬರು,
ಅವರೆಂತು ಕೀಳು ಜಾತಿ ಯಾದರೊ?
ಜಾತಿಗಳು ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ
ಶೋಭಿತವಾಯಿತು
ಅದೆಂತೆಂದಡೆ:
ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು
ಸಿದ್ದಲಿಕೆಯ ತುಪ್ಪವನ್ನು, ಸಗ್ಗಳೆಯ ನೀರನು
ಶುದ್ಧ ವೆಂದು ಕುಡಿವ ಬುದ್ಧಿಗೆಡಿ ವಿಪ್ರರಿಗೆ
ನಾಯಕ ನರಕ ತಪ್ಪದಯ್ಯಾ
ಉರಿಲಿಂಗ ಪೆದ್ದಿಗಳರವಲ್ಲನೊವ್ವ “
ಬಸವ ಯುಗದ ವಚನ ಮಹಾಸಂಪುಟ (1) ಪುಟ ಸಂ. 862
ಜಾತಿ ಪದ್ಧತಿ ವ್ಯವಸ್ಥೆಗೆ ಮೂಲ ಕಾರಣವಾದ ಪುರೋಹಿತಶಾಹಿಯನ್ನ ಹರಿತವಾದ ಮಾತುಗಳಿಂದ ಜರಿದಿರುವ ಶರಣೆಯ ಈ ವಚನದಲ್ಲಿ ಸಮ ಸಮಾಜದ ಪರಿಕಲ್ಪನೆ ಎದ್ದು ಕಾಣುತ್ತದೆ. ಊರ ಒಳಗಣ ಬಯಲು ಊರ ಹೊರಗಣ ಬಯಲೆಂದುಂಟೆ? ಎಂದು ಪ್ರಶ್ನಿಸುವ ಶರಣರು ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲ ಒಂದೇ ಶೌಚ ಆಚಮನಕ್ಕೆ ಎಂದು ಹೇಳಿದರು…
ವ್ಯಾಸ ಬೋವಿತೆಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು ಕುಲವ ನರಸದಿರಿಂಭೋ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ ಕೌಂಡಿಣ್ಯ ಎಂಬ ಋಷಿ ಮೂರು ಭುವನವರಿಯೆ ನಾವಿದ ಕಾಣೆಭೋ! ನಮ್ಮ ಕೂಡಲಸಂಗನ ವಚನವಿಂತೆಂದು:
ಶ್ವಪಚೋಪಿಯಾದಡೇನು, ಶಿವಭಕ್ತನೇ ಕುಲಜಂಭೋ! ಎಂಬ ವಚನವನ್ನ ಬರೆಯೋ ಮೂಲಕ ತಪ್ತರ್ಷಿಗಳ ಕುಲದ ಮೂಲವನ್ನು ಹೇಳಿದರು.
ಹೊಲೆಗಂಡಲ್ಲದೆ ಪಿಂಡದ ನೆಲೆಗೆ ಆಶ್ರಯವಿಲ್ಲ
ಜಲ ಬಿಂದುವಿನ ವ್ಯವಹಾರ ಒಂದೇ
ಆಸೆಯ ಅಮಿಷ ರೋಷ ಹರುಷ ವಿಷಯಾದಿಗಳೆಲ್ಲ
ಒಂದೆ ಎನನೊದಿ, ಏನ ಕೇಳಿ, ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ
ಸಪ್ತ ದಾತು ಸಮಂ ಪಿಂಡಮ್ ಸಮಯೋನಿ ಸಮುದ್ಭವo
ಆತ್ಮ ಜೀವ ಸಮಾಯುಕ್ತ0 ವರ್ಣನಾ0 ಕಿಂ ಪ್ರಯೋಜನಂ?
ಎನ್ನುವ ಮೂಲಕ ನೆಲ ಒಂದೆ ಹೊಲಗೇರಿ ಮತ್ತು ಶಿವಾಲಯಕ್ಕೆ ,ಜಲ ಒಂದೆ ಶೌಚ ಆಚಮನಕ್ಕೆ ಹೀಗಿರುವಾಗ ಮಾನವ ಕುಲವೆಲ್ಲ ಸಮಾನವಾದದ್ದು ಎಂದಿದ್ದಾರೆ

ದಯವಿಲ್ಲದ ಧರ್ಮ ಯಾವುದು… ಎಂದು ಪ್ರಶ್ನಿಸುವ ಮೂಲಕ ಹಿಂಸೆಯನ್ನು ಮಾಡುವವರೇ ಕೀಳು ಕುಲದವರೆಂದು ಘಟ್ಟಿತನದಿಂದ ಹೇಳುವ ಮೂಲಕ ಸಮ ಸಮಾಜದ ಪರಿಕಲ್ಪನೆಯನ್ನು ತಂದರು.
ಸ್ರಿಸಮಾನತೆಯ ಅಂಶವು ಶರಣ ಆಂದೋಲನವೆಂಬ ದೊಡ್ಡ ರುಕ್ಷದ ಫಲಪ್ರದಾಯಕ ಹಣ್ಣು ಎಂಬುದು ನನ್ನ ಅಭಿಪ್ರಾಯ ಏಕೆಂದರೆ ನಮ್ಮ ದೇಶದಲ್ಲಿ ಅಲ್ಲ ಪಾಶ್ಚತ್ಯ ದೇಶದಲ್ಲಿ ಕೂಡ ಸ್ತ್ರೀ ಸಮಾನತೆ ಹೋರಾಟಗಳು ಸ್ತ್ರೀವಾದ ಹುಟ್ಟಿಕೊಂಡಿದ್ದು 19ನೇ ಶತಮಾನದ ಮಧ್ಯದಲ್ಲಿ “ಸಿಮೋನ್ ದಿ ಬುವಾ “ಎಂಬ ಸ್ತ್ರೀ ವಾದಿ ಚಿಂತಕಿ ತನ್ನ ” ದಿ ಸೆಕೆಂಡ್ ಸೆಕ್ಸ್” ಎಂಬ ಜಗತ್ಪ್ರಸಿದ್ದವಾದ ಸ್ತ್ರೀ ವಾದಿ ಕೃತಿಯಲ್ಲಿ ಪ್ರಪಂಚದ ಎಲ್ಲ ಹೆಣ್ಣು ಮಕ್ಕಳು ದ್ವಿತೀಯ ದರ್ಜೆಯ ಪ್ರಜೆ ಎಂದು ಹೇಳುತ್ತಾಳೆ.
” ಜ್ಞಾನವು ಪುರುಷನ ಗೌರವವನ್ನು ಹೆಚ್ಚಿಸಿದರೆ
ಅಜ್ಞಾನವು ಸ್ತ್ರೀಯರ ಸೌಂದರ್ಯವನ್ನು ಹೆಚ್ಚಿಸುವುದು” ಎಂಬ ಚೀನಿಯರ ಪ್ರಾಚೀನ ಗಾದೆ ಸ್ತ್ರೀಯರು ಜ್ಞಾನವಂತರಾಗುವುದೇ ಅಪರಾಧ ಗೌರವಕ್ಕೆ ಕುಂದು ಎಂಬ ಅಭಿಪ್ರಾಯವನ್ನು ಹೇಳುತ್ತದೆ ಆದರೆ ಬಸವಾದಿ ಶರಣರು ಕಟ್ಟಿದ ಪ್ರಪಂಚದ ಮೊದಲ ಸಂಸತ್ಆದ ಅನುಭವ ಮಂಟಪವೆಂಬ ಮಹಾ ಮನೆಯಲ್ಲಿ ವೈರಾಗ್ಯದ ತವನಿಧಿ “ಅಕ್ಕಮಹಾದೇವಿ” ಯಿಂದ ಹಿಡಿದು “ನಿರ್ಲಜ್ಜೇಶ್ವರ” ಎಂಬ ಅಂಕಿತದಿಂದ ವಚನ ರಚಿಸಿದ “ಸೂಳೆ ಸಂಕವ್ವೆ”ಗೂ ಪ್ರವೇಶವಿತ್ತು. ಹೆಣ್ಣು ಮಾಯೆ,ಮಣ್ಣು ಮಾಯೆ, ಹೊನ್ನು ಮಾಯೆ ಎಂದು ಹೆಣ್ಣನ್ನು ಮಾಯೆಗಳ ಲೆಕ್ಕದಲ್ಲಿಸ್ತ್ರೀ ಕುಲವನ್ನು ಸೇರಿಸಿದ್ದ ಅಜ್ಞಾನಿಗಳ ವಿಚಾರವನ್ನು ಬುಡಮೇಲು ಮಾಡಿದ ಶರಣರು
ತಾಮಾಡಿದ ಹೆಣ್ಣು ತನ್ನ ತಲೆಯ ನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಷಿಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ
( ಸಿದ್ದರಾಮ )
ನಮ್ಮ ಭಾರತ ಸಂವಿಧಾನದ ಪರಿಚ್ಛೇದ 15 ಉಪವಿಧಿ (1) ಹೇಳುವ ಲಿಂಗ ಸಮಾನತೆಯನ್ನು 12ನೇ ಶತಮಾನದ ನಮ್ಮ ಕನ್ನಡದ ಶರಣರು ಹೆಣ್ಣಿನ ಸ್ಥಾನಮಾನವನ್ನು ದೈವತ್ವಕ್ಕೆ ಏರಿಸಿದ ಶರಣರು ಗಂಡಿನ ಮನದ ಮುಂದಿನ ಆಸೆಯನ್ನೇ ಮಾಯೆ ಎಂದರು. ಅಮ್ಮ, ಅಕ್ಕ, ಅವ್ವ,ಶರಣೆ, ಪುಣ್ಯ ಸ್ತ್ರೀಮುಂತಾದ ಗೌರವ ಯುತ ಪದಗಳನ್ನು ಶರಣ ಸತಿ ಲಿಂಗಪತಿ ಎಂಬಂತೆ ಎಮ್ಮವರು ಬೆಸೆಗೊಂಡರೆ ಶುಭ ಲಗ್ನವೆನಿರಯ್ಯ, ಹರನೇ ನನಗೆ ಗಂಡನಾಗಬೇಕೆಂದು ಅನಂತಕಾಲ ತಪ್ಪಿಸಿದ್ದೆ ನೋಡಾ ಮುಂತಾದ ದಿವ್ಯ ಸಾಲುಗಳನ್ನು ಹೇಳುವ ಮೂಲಕ ಸ್ತ್ರೀ ಸಮಾನತೆಯನ್ನು ಶ್ರೀ ಸ್ವಾತಂತ್ರ್ಯದ ಆಯ್ಕೆಯನ್ನು ತನ್ಮೂಲಕ ನೀಡಿದ ಶರಣರು ಸ್ತ್ರೀ ಕುಲದಘನತೆಯನ್ನ ಗಗನದೆತ್ತರಕ್ಕೆರಿಸಿದರು.
ವರ್ಣಾಶ್ರಮವನ್ನು ಕಟುವಾಗಿ ವಿರೋಧಿಸುವ ಶರಣರು ತ್ರಿ ಸಮಾನತೆಯನ್ನು ಗೌರವಿಸಿದರು. ವಿಶ್ವಕ್ಕೆ ಶರಣ ಕ್ರಾಂತಿಯ ಬಹು ದೊಡ್ಡ ಕೊಡುಗೆ ಎಂದರೆ ಅದು ಕಾಯಕ, ಪ್ರಸಾದ ಮತ್ತು ದಾಸೋಹ ತತ್ವಗಳು ಅರ್ಥಶಾಸ್ತ್ರದ ಹಿನ್ನೆಲೆಯಲ್ಲಿ ಈ ಮೂರು ಪದಗಳನ್ನು ವಿಶ್ಲೇಷಿಸಿದಾಗ
ಕಾಯಕ : ಯೋಗ್ಯ ರೀತಿಯಲ್ಲಿ ಉತ್ಪಾದನೆ
ಪ್ರಸಾದ : ಯೋಗ್ಯರೀತಿಯ ವಸ್ತುಗಳ ಬಳಕೆ
ದಾಸೋಹ : ಯೋಗ್ಯರಿಗೆ ವಸ್ತುಗಳ ವಿತರಣೆ
ಕಾಯಕವನ್ನೇ ಕೈಲಾಸ ಮಾಡಿಕೊಂಡು ದೇಹವನ್ನೇ ದೇವಾಲಯ ಮಾಡಿದ ಶರಣರು ಸಂಗ್ರಹಣ ಬುದ್ಧಿಯನ್ನ ವಿರೋಧಿಸಿದರು
ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗೆ ಉಂಟೆ ಅಯ್ಯಾ
ಈಸಕ್ಕಿ ಯಾಸೆ ನಿಮಗೆಕೆ ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕ ದೂರ ಎನ್ನುವ ಆಯ್ದಕ್ಕಿ ಲಕ್ಕಮ್ಮ
ಲಂಚ ವಂಚನಕ್ಕೆ ಕಾಯನಾದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದಡೆ
ನಿಮ್ಮ ನಿಮ್ಮ ಪ್ರಥಮರಾಣೆ
ನೀನಾಗಲೇ ಎನ್ನ ನರಕದಲ್ಲದ್ದಿ ನೀನೆದ್ದು ಹೋಗಾ ಶಂಬುಜಕ್ಕೆ ಶ್ವರಾ ಎಂದು ಹೇಳುವ ಶರಣೆ ಸತ್ಯಕ್ಕ ನೈತಿಕ ಮೌಲ್ಯದ ರೂವಾರಿಗಳಂತಿದ್ದಾರೆ ಶರಣರು ಸೂಕ್ಷ್ಮವಾಗಿ ಸೂಕ್ತವಾಗಿ ಕೆಲವೊಮ್ಮೆ ನೇರವಾಗಿ ಉದ್ಘೋಷಿಸಿದ ನೈತಿಕ ಮೌಲ್ಯಗಳು ಮಾನವ ಜೀವಿಯು ವಿಶ್ವಮಾನವನಾಗಲು ಬೇಕಾದ ಅರ್ಹತೆಯನ್ನು ಈ ವಚನ ಸಾಹಿತ್ಯದಲ್ಲಿ ಕಾಣಬಹುದು.
ಏಕದೇವಪಾಸನೆ, ದೇವಾಲಯ ಸಂಸ್ಕೃತಿಯ ವಿರೋಧ ಶರಣರ ದಿಟ್ಟ ನಡೆಗಳಲ್ಲಿ ಒಂದು ದೇವರನ್ನ ಶಿಲೆಯಲ್ಲಿ ನೋಡದೆ ಮಾನವನ ಹೃದಯದಲ್ಲಿ ನೋಡಿದ ಶರಣರು
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸ ಎಂದರು
ದೇವಸ್ಥಾನಕ್ಕೆ ಪ್ರವೇಶ ಎಲ್ಲರಿಗೂ ನಿಷಿದ್ಧವಾಗಿದ್ದ ಆ ಕಾಲದಲ್ಲಿ ದೇವರನ್ನೇ ದೇಹ ದೇವಾಲಯದಿಂದ ಹೊರ ತಂದ ಅವರು ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎಂದು ಕೇಳಿದರು .
ವಿಶ್ವತೋಮುಖ ವಿಶ್ವತೋ ಚಕ್ಶು ವಿಶ್ವತೋಬಾಹು ವಿಶ್ವತಃ ಪಾದವನ್ನು ಕಲ್ಪಿಸಿದ ಅವರು ಜಗದಗಲ ಮಿಗೆ ಅಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ ಅಪ್ರತಿಮ ಅಗೋಚರವಾದ ದೈವವನ್ನು ಇಷ್ಟ ಲಿಂಗವನ್ನಾಗಿಸಿ ಕೊಂಡು ಧಾರ್ಮಿಕ ಕ್ಷೇತ್ರಕ್ಕೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಾರ್ಮಿಕ ಇತಿಹಾಸಕ್ಕೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ಸಮ ಸಮಾಜದ ಸಮತಾ ದೇಹದ ಬೀಜವನ್ನು ಅಂದು ನೆಟ್ಟರು. ಆ ಬೀಜ ಇಂದು ವೃಕ್ಷವಾಗಿ ಬೆಳೆದು ಭಾರತದ ಸಂವಿಧಾನದ ಆಶಯಗಳೊಂದಿಗೆ ಬೆರೆತು ಜನಮಾನಸವನ್ನ ಆಳುತ್ತಿದೆ.
ಕೊನೆಯ ಮಾತುಗಳು
ನುಡಿದಂತೆ ನಡೆದು ನಡೆದಂತೆ ನುಡಿದು ನಡೆಯಲಿ ನುಡಿಯನ್ನ ನುಡಿಯಲ್ಲಿ ನಡೆಯನ್ನ ಪೂರೈಸಿದವರು ಶರಣರು.
ಸಮಾಜದಲ್ಲಿ ಪುರುಷ ಸ್ತ್ರೀ ಪ್ರಭು ಪ್ರಜೆ ಬ್ರಾಹ್ಮಣ ಶೂದ್ರ ರಲ್ಲಿ ಸಮಾನತೆ ಸಾಧ್ಯವಿಲ್ಲ ಎಂಬ ಭೇದ ಸಂಸ್ಕೃತಿ ನಿರ್ಮಾಣವಾಗಿತ್ತು ಬಸವಾದಿ ಶರಣರ ಕ್ರಾಂತಿಯಿಂದ ಇಂದು ಶೂದ್ರನಿಗೂ ದೇವನಾಗುವ ಅರ್ಹತೆ ಇದೆ, ಪ್ರಜೆಯು ಪ್ರಭುವಾಗುವ ಕಾಲ ಕೂಡಿಬಂದಿದೆ. ಸ್ತ್ರೀ ಪುರುಷನಷ್ಟೇ ಸಮಾನಳಾಗಿದ್ದಾಳೆ ಶೂದ್ರನಿಗೂ ಬ್ರಾಹ್ಮಣನಷ್ಟು ಅಧಿಕಾರವಿದೆ. ಶರಣರ ಶ್ರಮದ ಜ್ಞಾನದ ಹೋರಾಟದ ಫಲ ಹೊಸ ಸಮಾಜವನ್ನು ಸೃಷ್ಟಿಯಾಗಿದೆ ಬುದ್ಧ ಬಸವರು ಹೇಳಿದ ನೀತಿಗಳನ್ನ ನೈತಿಕ ಮೌಲ್ಯಗಳನ್ನು ಸಮಾನತೆಯ ಬಿಂಬಗಳನ್ನ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಾರಿಗೊಳಿಸಿದ್ದಾರೆ. ತತ್ತಲವಾಗಿ ಎಲ್ಲರೂ ಸ್ವತಂತ್ರರು ಎಲ್ಲರೂ ಸಮಾನರು ಎಲ್ಲರೂ ಸಹೋದರರೆಂಬ ತತ್ವ ಅನುಷ್ಠಾನಕ್ಕೆ ಬಂದಿದೆ. ಡಾಕ್ಟರ್ ಎಂ ಎಂ ಕಲ್ಬುರ್ಗಿ ಅವರು ಹೇಳುವಂತೆ ಮೂಲತಹ ವಚನ ನಿಧಿ ಜನರಿಂದ ಜನರಿಗಾಗಿ ಹುಟ್ಟಿ ಜನರ ಮಧ್ಯದಲ್ಲಿ ಬೆಳೆದ ಸಾಹಿತ್ಯ. ಮನುಕುಲದ ಉದ್ದಾರಕ್ಕಾಗಿ ಹುಟ್ಟಿದ ಈ ಶರಣ ಸಾಹಿತ್ಯ ಸಾಹಿತ್ಯ ಸಮ ಸಮಾಜದ ಮೂಲ ಬೇರುಗಳು.

ಪ್ರೊ. ಭುವನೇಶ್ವರಿ ಟೊoಗಳೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಶ್ರೀ ಎಸ್. ಆರ್. ಎನ್. ಕಲಾ ಹಾಗೂ ಶ್ರೀ ಎಮ್. ಬಿ. ಎಸ್. ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟ.

Don`t copy text!