ನಾ ಓದಿದ ಪುಸ್ತಕ – ಪುಸ್ತಕ ಪರಿಚಯ
ದ್ವೀದಳ
(ಕಾದಂಬರಿ)
ಕೃತಿಕಾರರು – ಲಾವಣ್ಯ ಪ್ರಭೆ
ಕಾದಂಬರಿ ಪಿತಾಮಹಿ, ಒಂದೇ ದಿನದಲ್ಲಿ ನಾಲ್ಕಾರು ಕಾದಂಬರಿಗಳ ಕಂತುಗಳನ್ನು ಸರಾಗವಾಗಿ ಪ್ರಕಟಿಸುವ ಪ್ರಬುದ್ಧ ಸಾಹಿತಿ, ಪ್ರತಿಲಿಪಿಯ ಹೆಸರಾಂತ ಬರಹಗಾರ್ತಿ, ಇದ್ದದ್ದನ್ನು ಇದ್ದಂತೆ ಬರಹ ಮುಖೇನ ಹೇಳುವ ದಿಟ್ಟ, ನಿಷ್ಕಲ್ಮಶ ಸಹೃದಯಿ. “ಲಾವಣ್ಯ ಪ್ರಭೆ” ಕಾವ್ಯನಾಮಾಂಕಿತದಿಂದ ಕಾದಂಬರಿಗಳಿಂದ ನಮ್ಮನ್ನೆಲ್ಲ ರಂಜಿಸಿ, ಭಾವಪರವಶರನ್ನಾಗಿಸಿ, ತಾರ್ಕಿಕ ವಿಚಾರಕ್ಕೆ ದೂಡಿ, ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುತ್ತಿರುವ ನನ್ನ ನೆಚ್ಚಿನ ಬರಹಾರ್ತಿ ಇಂದಿರೆ.
ಅವ್ಯಕ್ತ ಪ್ರಕಾಶನದಿಂದ ಮೊದಲ ಮುದ್ರಣಗೊಂಡ ಕೆಲವೇ ದಿನಗಳಲ್ಲಿ ಮರುಮುದ್ರಣಗೊಳ್ಳುತ್ತಿರುವ ಇವರ ಎರಡು ಕಾದಂಬರಿಗಳನ್ನೊಳಗೊಂಡ “ದ್ವಿದಳ” ಕೃತಿ ಅನೇಕರ ಕಣ್ಮನಗಳನ್ನು ಸೆಳೆಯುತ್ತಿದೆ, ತುಂಬಿಕೊಳ್ಳುತ್ತಿದೆ. ಎರಡೂ ಕಾದಂಬರಿಗಳನ್ನು ಓದುತ್ತಾ ಕುಳಿತರೆ ಸಮಯ ಸರಿದದ್ದು ಗೊತ್ತಾಗೋದಿಲ್ಲ. ಪುಟಗಳನ್ನು ಅರಿವಿಲ್ಲದೇ ತಿರುವುತ್ತೇವೆ. ಅಷ್ಟು ತಲ್ಲೀನಗೊಳಿಸಿಕೊಳ್ಳುವಂತಹ ದ್ವಿದಳಗಳು, “ಧವಳ ಕನ್ಯೆ” ಮತ್ತು “ಮರೀಚಿಕೆ”. ಇವುಗಳ ಕಾದಂಬರಿ ಓದಿದ ಹೆಂಗಸರಿಗೆ ಖಂಡಿತ ಬದುಕಿಗೆ ಉತ್ತೇಜನ ಸಿಗುತ್ತದೆ. ಸಕಲ ಪರಿಹಾರಗಳಿದ್ದೂ ಪೇಚಾಡುವ, ಗೊಣಗುವ, ಜಗತ್ತಿನ ಅಷ್ಟೂ ಕಷ್ಟಗಳು ನನಗೇ ಇವೆ ಎಂದು ಗೋಗರೆಯುವುವವರಿಗೆ ಈ ಕಾದಂಬರಿ ಸ್ಪೂರ್ತಿ ಮತ್ತು ದಾರಿಯಾಗುತ್ತದೆ. ಅಂತಹ ಕಾದಂಬರಿಗಳ ತುಸು ಪರಿಚಯ ತಮ್ಮ ಮುಂದೆ ಹಂಚಿಕೊಳ್ಳಲು ನನಗೆ ಖುಷಿ ಮತ್ತು ತೃಪ್ತಿ.
ಈ ಕೃತಿಯ ಮೊದಲ ಕಾದಂಬರಿಯಾದ “ಧವಳ ಕನ್ಯೆ”, ಓರ್ವ ಹೆಣ್ಣಿನ ಭಯಾನಕ ಬದುಕು ಪ್ರೇಮಮಯವಾದ, ಪ್ರೇಮಮಯವಾದ ಎನ್ನುವುದಕ್ಕಿಂತಲೂ, ಆಕೆಯೇ ತನ್ನ ಬದುಕನ್ನು, ತನ್ನ ಸುಗುಣಗಳ ಮೂಲಕ, ತಾಳ್ಮೆ, ಸಹನೆ, ಸನ್ನಡತೆ, ನೋಯಿಸಿದವರಿಗೂ ನಲ್ಮೆಯನ್ನು ತೋರುವ ಔದಾರ್ಯದಿಂದ ಪ್ರೇಮಮಯವಾಗಿಸಿಕೊಂಡ ಮಹಾನ್ ಕಾವ್ಯ, ಎಲ್ಲಿಯೂ ನೀರಸ ಅನಿಸದೆ ಪ್ರತಿ ಹಂತದಲ್ಲೂ ಕುತೂಹಲ ಉಳಿಸಿಕೊಂಡು, ಮುಂದಿನ ಸಾಲುಗಳ ಕುರಿತಾಗಿ ಕಾತುರತೆಯನ್ನು ಹುಟ್ಟಿಸಿಕೊಂಡು ಸಾಗುವ ಕಾದಂಬರಿಗಾರ್ತಿ ಕಥಾ ನಾಯಕಿಯ ಸ್ವಭಾವವನ್ನು ಮೃದುವಾಗಿಯೇ ಬಲಶಾಲಿಯಾಗಿಸಿದ್ದಾರೆ.
ಇದರಲ್ಲಿ ನಾಲ್ಕು ಪ್ರಮುಖ ಹೆಣ್ಣುಗಳ ಪಾತ್ರಗಳು ಬರುತ್ತವೆ. ಈ ನಾಲ್ಕು ಹೆಣ್ಣುಗಳ ವ್ಯಕ್ತಿತ್ವ ನಾಲ್ಕು ದಿಕ್ಕುಗಳನ್ನೇ ತೋರಿಸುತ್ತವೆ. ಮನುಷ್ಯನ ಸುತ್ತಲಿನ ವಾತಾವರಣ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಎಂಬುದು ಸತ್ಯವಾದರೂ, ಒಂದು ಸಮಯದಲ್ಲಿ ಈ ಅಹಂಕಾರ ಅನ್ನೋ ಪ್ರೇತ ಮೈಗೆ ಹೊಕ್ಕಿಕೊಂಡರೆ ಅವರ ಗುಣಗಳೆಲ್ಲ ವಿರುದ್ಧವಾಗಿಬಿಡುತ್ತವೆ. ಒಳ್ಳೆಯತನದ ಸೋಗು ಹಾಕಿಕೊಂಡು ಅಂತರಾಳದಲ್ಲಿ ಕ್ರೌರ್ಯ, ವ್ಯಭಿಚಾರಿ ಮನಸ್ಥಿತಿಯನ್ನು ತುಂಬಿಕೊಂಡು ಕೆಟ್ಟದ್ದನ್ನು ಸಾಧಿಸುತ್ತಾ ಸಾಗುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯೇ ಕಥಾ ನಾಯಕ ಸುಧಾಂಶುವಿನ ತಾಯಿ “ಡಾ.ಗಾಯತ್ರಿ” ಪಾತ್ರ. ತನ್ನ ಮಗ ತೊನ್ನಿರುವ ಹುಡುಗಿಯನ್ನು ಪ್ರೀತಿಸುತ್ತಿರುವುದನ್ನು ನೋಡಿ ಅವನನ್ನು ಒಂದು ಕಡೆಯಿಂದ ಧನಾತ್ಮಕವಾಗಿ ವಿಶಾಲ ಹೃದಯದವಳೆಂಬಂತೆ ನಟಿಸಿ, ಒಳಗೊಳಗೇ ಪ್ರಿತಿಗೆ ತಿಲಾಂಜಲಿ ಇಡಲು ಹೊರಟ ಕಪಟಿ.
ಇಂತಹ ಹೆಣ್ಣನ್ನೂ ಕಥೆಯ ಕೊನೆಕೊನೆಯಲ್ಲಿ ಆದರಿಸಿ ಪ್ರೇಮ ತೋರಿದ ಮತ್ತೊಂದು ಪಾತ್ರ ಕಥಾ ನಾಯಕಿ ಶ್ರೀಮಾಳ ತಾಯಿ “ಜಾನಕಿ”ಯದು. ಗಂಡನನ್ನು ಕಳೆದುಕೊಂಡು ಒಂಟಿಯಾಗಿ ನೊಂದು, ಬವಣೆಯಲ್ಲಿ ಬೆಂದು ಮುಂದೆ ನಿಂತು ಮಗಳನ್ನು ಬದುಕಿನ ಉತ್ತುಂಗ ಸ್ಥಿತಿಗೆ ತಲುಪುವಂತೆ ಮಾಡಿದ ಧೀರೆ.
ಗಂಡ(ಸೇಸಪ್ಪ)ನಿಗೆ ಏನಿದ್ದರೂ ಸೋದರ ಸೊಸೆ “ಶ್ರೀಮಾ”ಳನ್ನೇ ಮನೆ ಬೆಳಗಿಸುವ ಸೊಸೆಯನ್ನಾಗಿಸಿಕೊಳ್ಳುತ್ತೇನೆ ಎಂದು ಮಾತು ಕೊಟ್ಟು, ಮದುವೆ ಸಂದರ್ಭ ಬಂದಾಗ ಶ್ರಿಮಂತಿಕೆಯ ದುರಾಸೆಯಿಂದ ಶ್ರೀಮಾಳನ್ನು ಮಗ “ಮಿಥುನ್” ನಿಂದ ದೂರ ಮಾಡಿ, ಸಿರಿವಂತ ಸೊಸೆಯನ್ನು ತಂದು “ಮಾಡಿದ್ದುಣ್ಣೋ ಮಹರಾಯ” ಎನ್ನುವಂತೆ ಅತ್ಯಂತ ಹೀನಾಯ ಸ್ಥಿತಿಯನ್ನು ಅನುಭವಿಸಿ ಕಡೆಗೆ ಸೋದರ ಸೊಸೆಯೇ ಗತಿ ಎಂಬಂತೆ ಅವಳಿಂದ ಸಹಾಯ ಪಡೆದ ನತದೃಷ್ಟೆ, ಒಂದು ಕಾಲದ ದುರಹಂಕಾರಿ. ಇವರ ಕಪಟಕ್ಕೆ ಬಲಿಯಾದದ್ದು ಮಾತ್ರ ಇವರ ಸಂಭಾವಿತ, ಸಹೃದಯಿ, ಶ್ರೀಮಾಳೇ ನನ್ನ ಮುದ್ದು ಮಡದಿ ಎಂದು ನಂಬಿದ್ದ “ಮಿಥುನ್”.
ಈ ಮಿಥುನ್ ನ ಜಾಗವನ್ನು ಅಲಂಕರಿಸಿದ ಕಥಾ ನಾಯಕ “ಸುಧಾಂಶು”, ತಾನೇ ಶ್ರೀಮಾಳ ಬೆನ್ನು ಬಿದ್ದು ಪ್ರೇಮಿಸಿ ಒಂದು ಹಂತದಲ್ಲಿ ತಾಯಿಯ ಕುತಂತ್ರದಿಂದ ಶ್ರಿಮಾಳನ್ನೇ ಅನುಮಾನಿಸಿ, ತ್ಯಜಿಸಿ ನಂತರ ಅಪಘಾತದಿಂದ ಕೋಮಾಗೆ ಹೋಗಿ ಅದೇ ಶ್ರಿಮಾಳ ದಯೆಯಿಂದ, ತ್ಯಾಗ, ಸೇವೆಯಿಂದ ಮರಳಿ ಬದುಕುಳಿದು ಶ್ರೀಮಾಳೊಂದಿಗೆ ದಾಂಪತ್ಯ ಶುರುಮಾಡುತ್ತಾನೆ. ಮುಂದೆ ಈ ಮುದ್ದು ಮಡದಿ ವರ್ಜ್ಯವೆನಿಸಿ ಬೇರೊಬ್ಬಳನ್ನು ಮೋಹಿಸಿ ಅವಳಿಂದ ವಂಚನೆಗೊಂಡು ತನ್ನ ಇಡೀ ಆಸ್ತಿಯನ್ನೇ ಕಳೆದುಕೊಂಡು ಬೀದಿಗೆ ಬಂದು, ಕುಡಿತಕ್ಕೆ ಬಲಿಯಾಗಿ ಮತ್ತೇ ಅದೇ ಶ್ರೀಮಾಳಿಂದ ಆರೈಕೆಗೊಂಡು ಮನುಷ್ಯನಾಗುವ ಸುಧಾಂಶು ಮತ್ತೆ ಬದುಕಿನಲ್ಲಿ ನೆಲೆ ಕಾಣುತ್ತಾನೆ.
ಯಾರು ಎಷ್ಟೇ ಮೋಸ ಮಾಡಿದರೂ, ದ್ವೇಷ ಕಾರಿದರೂ, ದ್ರೋಹ ಮಾಡಿದರೂ ಅವರಿಗೆಲ್ಲ ಒಳಿತನ್ನು ಬಯಸಿದ “ಶ್ರೀಮಾ”ಳ ಪಾತ್ರ ಓದಿನುದ್ದಕ್ಕೂ, ನಮ್ಮ ಬದುಕಿನುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ತೊನ್ನಿದೆ ಎಂಬುದನ್ನೇ ನೆಪವಾಗಿಸಿಕೊಂಡು ದೂರ ಮಾಡುವ ಸಮಾಜ, ಜನರ ನಡುವೆ, ತೊನ್ನಿರುವವರು ಹಿಂಜರಿತಕ್ಕೆ ಬಲಿಯಾಗಿ ತಮ್ಮ ಬದುಕಿನ ಭರವಸೆಯನ್ನು ಕ್ಷೀಣಗೊಳಿಸಿಕೊಳ್ಳುತ್ತಾರೆ. ಇಂತಹ ದುರ್ಗಮ ಬದುಕಿನ ದಾರಿಯಲ್ಲಿ ಈ “ಶ್ರೀಮಾ” ವ್ಯತಿರಿಕ್ತವಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುವುದು ಸಮಾಜಕ್ಕೆ ಮಾದರಿಯಾಗುತ್ತದೆ. ತೊನ್ನು ದೇಹಕ್ಕೇ ಹೊರತು ಮನಸಿಗಲ್ಲ, ಆತ್ಮವಿಶ್ವಾಸಕ್ಕಲ್ಲ ಎಂದು ಸಾಬೀತು ಮಾಡಿದ “ಧವಳ ಕನ್ಯೆ” ಶುಭ್ರ ಬಿಳಿ ಬಣ್ಣದಂತೆ, ಕಳಂಕ ರಹಿತಳಾಗಿ ಎಲ್ಲರನ್ನೂ ಸಲಹುತ್ತ, ತಿದ್ದುತ್ತ ತನ್ನ ಸುತ್ತಲಿನ ವಾತಾವರಣವನ್ನು ಹಸನಾಗಿಸುತ್ತಾಳೆ. ಎಲ್ಲರಿಗೂ ಖುಷಿ ನೀಡಿ ತಾನು ನೆಮ್ಮದಿ ಪಡೆಯುತ್ತಾಳೆ. ಓದುಗನ ಮನಸನ್ನೂ ಆವರಿಸಿಕೊಳ್ಳುತ್ತಾಳೆ.
* ತ್ಯಾಗ ಎನ್ನೋದು ಹೆಣ್ಣಿಗೇ ಸ್ವಂತ ಅನ್ಸುತ್ತೆ. ತಾನು ಪರರಿಂದ ಎಷ್ಟೇ ನೋವು ಅನುಭವಿಸಿದರೂ ಅಂತ್ಯಕ್ಕೆ ಎಲ್ಲರನ್ನೂ ಕ್ಷಮಿಸಿ ತ್ಯಾಗಮಯಿ ಆಗಿಬಿಡುತ್ತಾಳೆ. ಅಂತಹ ಭೂಮಿ ತೂಕದ ಹೆಣ್ಣಿನ ಕಥಾ ವಸ್ತು ಹೊಂದಿದ ಕಾದಂಬರಿ “ಮರೀಚಿಕೆ”. ಹುಚ್ಚಿ ತುಂಬು ಗರ್ಭಿಣಿಯ ಸ್ಥಿತಿಯಲ್ಲಿ ಸಿಕ್ಕ ಪರಿ(ಪಾರಿಜಾತ) ಸಿಕ್ಕದ್ದು ಸಮಾಜ ಮುಖಿ ಲಾಯರ್ ನಿರ್ಮಲಾ ಕೈಗೆ. ಹೀಗೆ ನಿರ್ಮಲಾ ಕೈಗೆ ಹುಚ್ಚಿಯಾಗಿ ನಿಸ್ಸಹಾಯಕ ಸ್ಥಿತಿಯಲ್ಲಿ ಸಿಕ್ಕ ಪರಿ ಮುಂದೆ ಅನೇಕ ದಮನಿತರಿಗೆ ನೆರಳಾಗಿ ನಿಲ್ಲುವಷ್ಟು ಎತ್ತರಕ್ಕೆ ಬೆಳೆಯುತ್ತಾಳೆಂದರೆ ಅದು ಸಹೋದರಿ ಲಾವಣ್ಯ ಪ್ರಭೆಯ ಕಥೆ ಕಟ್ಟುವ ಹಿರಿಮೆಯೇ ಸರಿ. ನಿರ್ಮಲಾಳಿಂದ ಗೈನಕಾಲಜಿಸ್ಟ್ ಪಂಕಜ ಕೈಗೆ, ಅಲ್ಲಿಂದ ಮೆಂಟಲ್ ಸರ್ಜನ್ ರವೀಶ್ ಕೈಗೆ ಹಸ್ತಾಂತರವಾಗುತ್ತಾಳೆ.
ರವೀಶ್ ಮತ್ತು ತನೀಷಾ ದಂಪತಿಗಳಿಗೆ ಹಾಸಿ ಹೊದ್ದುಕೊಳ್ಳುವಷ್ಟು ಸಂಪತ್ತಿದ್ದರೂ ಮಗು ಇಲ್ಲದ ಕೊರತೆ ಕಾಡುತ್ತಿರುತ್ತದೆ. ಈ ಕಾರಣಕ್ಕೆ ಮಗು ಪಡೆಯಲೆಂದು ಬಂದ ರವೀಶ್ ಪತ್ನಿಗೆ ಆ ಮಾನಸಿಕ ಅಸ್ವಸ್ಥೆಯ ಮಗು ಸಿಕ್ಕರೆ, ರವೀಶ್ ಗೆ ಪರಿ ಸಿಗುತ್ತಾಳೆ. ಪರಿ ಹೇಸರನ್ನು ಮೊದಲು ಉದ್ಗರಿಸಿದ್ದೇ ರವೀಶ್, ಆಕೆಯ ಮಗುವಿಗೂ ಪರೀಕ್ಷಿತ್ ಎಂದು ರವೀಶ್ ನಾಮಕರಣ ಮಾಡುತ್ತಾನೆ. ಈ ಪರಿ ರವೀಶ್ ಗೆ ಹೇಗೆ ಪರಿಚಯ, ಇವಳ ಈ ಸ್ಥಿತಿಗೆ ರವೀಶನೇ ಕಾರಣನಾ? ಅಥವಾ ಮತ್ತೇನಾದರೂ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಪಾರಿಜಾತ ಸಿಕ್ಕಿ ಹಾಕಿಕೊಂಡಿದ್ದಳೇ ? ಇವಳು ಹೇಗೆ ಮಾನಸಿಕ ಅಸ್ವಸ್ಥಳ ಹಣೆ ಪಟ್ಟಿಯಿಂದ ಕಳಚಿಕೊಂಡು; ಈಕೆಯನ್ನು ಅಲ್ಲಗಳೆದವರೇ ಇವಳ ಮುಂದೆ ತಲೆಬಾಗುವಂತೆ ಬೆಳೆಯುತ್ತಾಳೆ? ಇದಕ್ಕೆಲ್ಲ ಪೂರಕವಾಗಿ ಜೊತೆ ನಿಂತವರು ಯಾರು? ಅವಳನ್ನು ಹುಚ್ಚಿ ಸ್ಥಿತಿಯಲ್ಲೇ ಮುಂದುವರೆಯಲಿ ಎಂದು ಸಂಚು ರೂಪಿಸಿದವರು ಯಾರು? ಇದರ ಮಧ್ಯೆ ರವೀಶ ಮತ್ತು ಪರಿಯ ಪ್ರೇಮ ಪ್ರಸಂಗ, ನಂತರ ದೂರವಾದದ್ದು, ಮಾನಸಿಕ ತಜ್ಞನೇ ಮಾನಸಿಕ ಅಸ್ವಸ್ಥನಂತೆ ಆದದ್ದು, ಎಲ್ಲವನ್ನೂ ಲಾವಣ್ಯ ಪ್ರಭೆಯವರು ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ನಡುವೆ ಲಾಯರ್ ನಿರ್ಮಲಳ ಪಾತ್ರ, ಅವರ ಕೌಟುಂಬಿಕ ಹಿನ್ನೆಲೆ, ನಿರ್ಮಲ ದಂಪತಿಗಳಿಗೆ ಪರಿ ಮಗಳಾಗಿ ಉಳಿದದ್ದು ಎಲ್ಲವೂ ಕಾದಂಬರಿ ಓದಿ ಮುಗಿದರೂ ದೃಶ್ಯಾವಳಿಗಳಾಗಿ ಕಣ್ಣ ಮುಂದೆ ಬಿತ್ತರವಾಗುತ್ತಲೇ ಇರುತ್ತವೆ. ಅಷ್ಟು ಆಪ್ತವಾಗಿ ಬರಹ ರೂಪ ತಾಳಿದೆ. ಕೊನೆಯಲ್ಲಿ ಪರಿಯನ್ನೇ ರವೀಶ್ ವಿವಾಹವಾಗುವ ಹಂತಕ್ಕೆ ಕಥೆ ತಲುಪುತ್ತದೆ. ಇದಕ್ಕೆ ರವೀಶನ ಪತ್ನಿ ಒಪ್ಪುತ್ತಾಳಾ? ಪರಿ ಗುಣಮುಖವಾದ ನಂತರ ಮಗನನ್ನು ತನ್ನ ಸುಪರ್ದಿಗೆ ಪಡೆಯುತ್ತಾಳಾ? ಅಷ್ಟಕ್ಕೂ ಆ ಮುಗುವಿನ ಹುಟ್ಟಿಗೆ ಕಾರಣರಾದವರು ಯಾರು? ಅವರಿಗೆ ಶಿಕ್ಷೆಯಾಗುತ್ತದೆಯೇ? ಅಥವಾ … ?? ಏನಾಗುತ್ತದೆ? ಎಂಬುದೇ ಕಥೆಯ ತಿರುವು. ರವೀಶನ ಪ್ರೀತಿಯ ಪರಿ “ಮರೀಚಿಕೆ”ಯಾಗಿ ಏಕೆ ಉಳಿಯುತ್ತಾಳೆಂದು ಕಾದಂಬರಿಯನ್ನು ಓದಿದವರಿಗೆ ಮನದಟ್ಟಾಗುತ್ತದೆ.
ಒಂದು ಮನೆಗೆಲಸದ ಪರಿ ನ್ಯಾಯವಾದಿಯಾಗಿ ಕಣ್ಣ ಮುಂದೆಯೇ ಬೆಳೆಯುತ್ತಾಳೆಂದರೆ ಅವಳ ಪರಿಶ್ರಮ ಅನನ್ಯವಾದುದು, ಅಗಮ್ಯವಾದುದು. ನ್ಯಾಯವಾದಿಯಾಗಿ ತನ್ನನ್ನು ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ವಿಧಿಸಿ, ತನ್ನನ್ನು ದಯನೀಯ ಸ್ಥಿತಿಗೆ ದೂಡಿದವರನ್ನು ಕ್ಷಮಿಸಿ ಮತ್ತೆ ಬದುಕು ನೀಡಿ, ತಾನು ಹೆತ್ತ ಮಗುವನ್ನೇ ತ್ಯಾಗ ಮಾಡಿದ ಪರಿಯ ಬದುಕಿನ ಪರಿ ಅವಲೋಕನಕ್ಕೆ ಮಿರಿದ್ದು, ಹೊಗಳಿಕೆಗೆ ಮೀರಿದ್ದು. ತನ್ನ ಮಗನಿಗೆ ನಾನೇ ನಿನ್ನ ತಾಯಿ ಎಂದು ಹೇಳುವ ಕೊನೆಯ ಅವಕಾಶ ಸಿಕ್ಕರೂ, (ಹೇಳಿದರೂ ಯಾರು ಏನು ಮಾಡಿಕೊಳ್ಳುತ್ತಿರಲಿಲ್ಲ) ಅಂತಹ ಸ್ಥಿತಿಯಲ್ಲೂ ಮನಸಿನ ಸ್ಥಿಮಿತವನ್ನು ಕಳೆದುಕೊಳ್ಳದೆ ಸಾಗುವುದು ಓದುಗನಲ್ಲೂ ತಾಳ್ಮೆ, ತ್ಯಾಗ ಭಾವ ಮೂಡಿಸುತ್ತದೆ. ತನ್ನನ್ನು ಅತಿವವಾಗಿ ಪ್ರೀತಿಸುತ್ತಿದ್ದ ಮತ್ತು ಹುಚ್ಚಿ ಪಟ್ಟದಿಂದ ಕೆಳಗಿಳಿಸಿದ ರವೀಶನಿಗೆ ಮರೀಚಿಕೆಯಾಗಿಯೇ ಉಳಿಯುತ್ತಾಳೆ. ತನ್ನ ಹೀನಾಯ ಸ್ಥಿತಿಯಲ್ಲಿ ಆರೈಕೆ ಮಾಡಿದ ತಂದೆ ತಾಯಿಯೊಂದಿಗೆ ನ್ಯಾಯವಾದಿ ಹುದ್ದೆ ನಿರ್ವಹಿಸುತ್ತ ದೀನ, ದಮನಿತರ ಸೇವೆಗೈಯ್ಯುತ್ತ ಜೀವನ ಸವೆಸಿ ಮಾದರಿಯಾಗುತ್ತಾಳೆ. ಓದುಗನ ಮನದಲ್ಲೂ ಸ್ಥಾನ ಪಡೆಯುತ್ತಾಳೆ.
ಈ ಎರಡೂ ಕಾದಂಬರಿಗಳು ಒಂದು ಹಂತದಲ್ಲಿ ಹೆಣ್ಣೇ ಹೆಣ್ಣಿಗೆ ಶತೃ ಎಂಬ ಮಾತನ್ನು ಸಾಬೀತುಗೊಳಿಸಿದರೆ, ಮತ್ತೊಂದೆಡೆ ಆದರ್ಶ, ಮಾದರಿ ಜೀವನ ಎಂಬುದು ಕೇವಲ ಪ್ರವಚನ ಭಾಷಣಕ್ಕೆ ಸೀಮಿತ ಎಂದು ತೋರಿಸುವ ಪ್ರಸ್ತುತ ಸಮಾಜದ ಘಾತುಕ ಮನಸುಗಳ ಕನ್ನಡಿಯಂತಾಗಿವೆ.
“ದ್ವಿದಳ”, ಎರಡು ಕಣ್ಣುಗಳು, ಎರಡು ಲಿಂಗಗಳು, ಎರಡು ಮನಸುಗಳು, ಎರಡು ವಿಚಾರಗಳು, ಎರಡು ನಾಲಿಗೆಗಳು, ಎರಡು ಮುಖಗಳು ಹೀಗೆ ವಿಭಿನ್ನವಾಗಿ ಎರಡುಗಳನ್ನು ಈ ಎರಡು ಕಾದಂಬರಿಗಳು ಪ್ರದರ್ಶಿಸುತ್ತವೆ.
ಓದು, ಮನಸಿಗೆ ಮುದ ನೀಡುವುದರ ಜೊತೆಗೆ ಬದುಕನ್ನು ಬದಲಿಸಿದರೆ ಬರೆದವರಿಗೂ ತೃಪ್ತಿ. ಅಂತಹ ತೃಪ್ತಿ ನೀಡುವ ಅದೇಷ್ಟೋ ಕಾದಂಬರಿಗಳನ್ನು ನೀಡಿದ ಸಹೋದರಿ “ಲಾವಣ್ಯ ಪ್ರಭೆ” ಓದುಗರ ಮೇಲೆ ಪ್ರಭಾವ ಬೀರುತ್ತಲೇ ಇದ್ದಾರೆ. ಅವರು ತಮ್ಮ ಬರಹ ಲಾವಣ್ಯದಿಂದ ಓದುಗ ಪ್ರಭಾವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.
ಓದುಗ ಬಂಧುಗಳು ಖಂಡಿತವಾಗಿ “ಅವ್ಯಕ್ತ ಪ್ರಕಾಶನದಿಂದ ಹೊರಬಂದ ಈ ಲಾವಣ್ಯ ಪ್ರಭೆಯವರ ಚೊಚ್ಚಲ ಕೃತಿಯಾದ “ದ್ವಿದಳ” ಕೃತಿಯನ್ನು ಓದಲೇ ಬೇಕು ಅನಿಸುತ್ತದೆ. ಎಲ್ಲರೂ ಕೊಂಡು ಓದಿ, ಕೃತಿಕಾರರಿಗೆ ಹಾಗೂ ಪ್ರಕಾಶಕರಿಗೆ ಬೆಂಬಲಿಸುತ್ತೀರಿ ಎಂದು ಭಾವಿಸುತ್ತ ನನ್ನ ಓದಿನ ಪ್ರತಿಬಿಂಬದ ಕಿರು ನುಡಿಗಳಿಗೆ ವಿರಾಮ ನೀಡುತ್ತೇನೆ.
-ವರದೇಂದ್ರ ಕೆ ಮಸ್ಕಿ
9945253030
ಕೃತಿಗಳಿಗಾಗಿ ಸಂಪರ್ಕಿಸಿ
– ಲಾವಣ್ಯ ಪ್ರಭೆ
77605 17504