ಕಾಣಬಾರದ ಲಿಂಗವು
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ
ಎನಗಿದು ಸೋಜಿಗ ಎನಗಿದು ಸೋಜಿಗ
ಅಹುದೆನಲಮ್ಮೆನು ಅಲ್ಲೆನಲಮ್ಮೆನು
ಗುಹೇಶ್ವರ ಲಿಂಗವು ನಿರಾಳ ನಿರಾಕಾರ ಬಯಲು.
-ಅಲ್ಲಮ ಪ್ರಭುಗಳು
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ
ಲಿಂಗವೆನ್ನುವುದು ಜ್ಞಾನ ಸಮಷ್ಟಿಯ ಭಾವ ಕಾಣಲಾಗದ ಆನುಪಮ ಅವಿರಳ ಅವ್ಯಕ್ತ ಪ್ರಜ್ಞೆ. ಅದು ಕಾಣಲಾಗದು ಕೇವಲ ಭಕ್ತನ ಮನುಷ್ಯನ ಅರಿವಿಗೆ ಬರುವ ಸೂಕ್ಷ್ಮ ಭಾವ .
ಅಂತಹ ಸ್ವಾನುಭಾವದ ಜ್ಞಾನ ಅರಿವಿನ ಕುರುಹು ಲಿಂಗವಾಗಿ ಕರಸ್ಥಲಕ್ಕೆ ಬಂದಡೆ . ಇಲ್ಲಿ ಕಾರಣ ತತ್ವವವು ಸೂಕ್ಶ್ಮ ತತ್ವವನ್ನು ಹೊತ್ತುಕೊಂಡು ಸ್ಥಾವರ ಅಥವಾ ಸ್ಥೂಲ ಲಿಂಗವಾಗುತ್ತದೆ . ಕಾರಣ ಸೂಕ್ಷ್ಮತೆಯ ಸಂಕೇತವಾಗಿ ಅರಿವಿನ ಕುರುಹಾಗಿ ಲಿಂಗವು ಕರಸ್ಥಲಕ್ಕೆ ಬಂದಿತು ಎಂದೆನ್ನುತ್ತಾರೆ ಅಲ್ಲಮರು.
ಎನಗಿದು ಸೋಜಿಗ ಎನಗಿದು ಸೋಜಿಗ
ಎನಗಿದು ಸೋಜಿಗ ಎನಗಿದು ಸೋಜಿಗ ತಮಗೆ ಲಿಂಗವೂ ಕೂಡಾ ಸ್ಥಾವರವಾಗುತ್ತದೆ ಜಡವಾಗುತ್ತದೆ ಲಿಂಗವೆಂಬ ಪ್ರಜ್ಞೆ ಅಂತರಂಗದಲ್ಲಿ ನಿರಂತರವಾಗಿ ಅನುಸಂಧಾನ ಮಾಡುವಾಗ ಹೊರಗಿನ ಕರಸ್ಥಲದ ಲಿಂಗವು ಬೇಕೇ ? ಎಂದು ಪ್ರಶ್ನಿಸುತ್ತಾ ನನಗೆ ಇದು ಸೋಜಿಗವೆನಿಸುತ್ತದೆ. ಅಲ್ಲಮರ ಇನ್ನೊಂದು ವಚನದಲ್ಲಿ ಹೊಟ್ಟೆಯೊಗರದ ಮೇಲೆ ಕಲ್ಲು ಕಟ್ಟಿದಡೆ ಅದು ಲಿಂಗವೇ ಕಟ್ಟಿದಾತ ಗುರುವೇ ಕಟ್ಟಿಸಿಕೊಂಡಾತ ಶಿಷ್ಯನೇ ? ಅಂದರಷ್ಟೇ ಲಿಂಗ ದೀಕ್ಷೆ ಷೋಡಶೋಪಚಾರಕ್ಕೆ ಮತ್ತೆ ಹತ್ತಿರವಾಗುವ ಆಚರಣೆಗಳನ್ನು ಅಲ್ಲಮರು ಸಂಪೂರ್ಣ ಅಲ್ಲಗಳೆದಿದ್ದಾರೆ. ಶರಣರು ಪ್ರಗತಿಪರರು ತಮ್ಮ ಕಾಲ ಘಟ್ಟದಲ್ಲೂ ಇಂತಹ ಚರ್ಚೆಗೆ ಮುಂದಾಗಿದ್ದರು.
ಅಹುದೆನಲಮ್ಮೆನು ಅಲ್ಲೆನಲಮ್ಮೆನು
ಇಷ್ಟಲಿಂಗವು ಅಪ್ರಮೇಯ ಅಪ್ರಮಾಣ ಅಪ್ರತಿಮ ಅಗೋಚರ ಅಗಮ್ಯ ಹೀಗೆ ಲಿಂಗ ಭಾವವನ್ನು ಶರಣರು ಮಹಾಗುರು ಬಸವಣ್ಣನವರು ಹೇಳಿ ಒಪ್ಪಿಕೊಂಡಾಗ ಈ ಸ್ಥೂಲಗುಣ ಸಹಿತ ಇಂದ್ರಿಯ ವ್ಯವಹಾರಕ್ಕೆ ಒಳಪಡುವ ಲಿಂಗ ಕ್ರಿಯೆ ಲಿಂಗಾನುಭಾವವನ್ನು ಅಹುದು ಎಂದೆನ್ನಲಾಗದು ಅಥವಾ ಅಲ್ಲವೆಂದೆನ್ನಲಾಗದು.
ಅಲ್ಲಮರು ಬಸವಣ್ಣನವರು ಸೃಷ್ಟಿಸಿದ ಇಷ್ಟಲಿಂಗದ ಉದ್ದೇಶದಿಂದ ಲಿಂಗವನ್ನು ಒಪ್ಪಿಕೊಂಡರೂ ಸಹಿತ ಅದು ಆಚರಣೆಗೆ ಬಾಹ್ಯ ಆಡಂಭರಕ್ಕೆ ಸಿಲುಕಿದಾಗ ಅದು ತನ್ನ ಮೂಲ ಉದ್ದೇಶ ಹಾಗು ಸಾರ್ಥಕತೆಯನ್ನು ಕಳೆದುಕೊಳ್ಳುತ್ತದೆ ಎಂದೆನ್ನುವ ಅಲ್ಲಮರು ಒಮ್ಮೊಮ್ಮೆ ಕರಸ್ಥಲಕ್ಕೆ ಲಿಂಗವಾಗಿ ಬರುವ ಪ್ರಕ್ರಿಯೆಯನ್ನುಒಪ್ಪುವದಿಲ್ಲ ಅಲ್ಲಗಳೆಯುವರು .
ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ ! ಅರಿವು ಅನುಭವಿಸಿ ಅರಿಯದಂತಿರಬೇಕು ಅದನ್ನು ಮತ್ತೆ ಮತ್ತೆ ಅರಿಯಲು ಹೋದಾಗ ಅದು ಹೊರಗಿನ ಜಗತ್ತಿಗೆ ಕರಸ್ಥಲದ ಲಿಂಗವಾಗುತ್ತದೆ ಇಂತಹ ನಿಲುವನ್ನು ಅಲ್ಲಮರು ಸಾರಾಸಗಟಾಗಿ ಒಪ್ಪುವದಿಲ್ಲ. ಲಿಂಗಯೋಗದ ಆಶಯವನ್ನು ತುಂಬಿದ ಮನದಿಂದ ಬರಮಾಡಿಕೊಳ್ಳುವ ಅಲ್ಲಮರು ಅದರ ಜೊತೆಗೆ ಜೋತು ಬಿದ್ದು ಕಾಯಕ್ಕೆ ಲಿಂಗವಾಗಿ ಕಾಯಕ ಮರೆಯುವದನ್ನು ಅರಿವಿನ ಅನುಸಂಧಾನವನ್ನು ಮಾಡದಿದ್ದರೆ ಲಿಂಗವು ಕಲ್ಲಾಗುತ್ತದೆ ಅದನ್ನು ಒಪ್ಪಿಕೊಳ್ಳಲಾಗುವದಿಲ್ಲ ಎಂದಿದ್ದಾರೆ.
ಕಾಣದ ವಸ್ತು, ವಿಷಯ ಅನುಭವ ಕೈಗೆ ಬರುವುದು ಎಷ್ಟು ಸೋಜಿಗವೋ ಅಷ್ಟೇ ಅದನ್ನು ನಿರಾಕಾರ ತತ್ವದಲ್ಲಿ ನೋಡಬೇಕೆನ್ನುವುದು ಅಲ್ಲಮರ ಹಂಬಲ. ಲಿಂಗವೆಂಬುದು ಅಂತರಂಗ ಬಹಿರಂಗ ಶುಚಿಗೊಳಿಸುವ ಸಾಧನವಾಗಿದೆ. ಇಂದ್ರಿಯ ಚಪಲತೆಯನ್ನು ನಿಗ್ರಹಿಸುವ ತನ್ನೊಳಗಿರುವ ಅಗಾಧವಾದ ಜಂಗಮಚೇತನವನ್ನು ಗಟ್ಟಿಗೊಳಿಸುವ ವ್ಯವಧಾನ . ಆಧ್ಯಾತ್ಮಿಕ ಸಾಧನೆ ಮಾಡುವವನಿಗೆ ಲಿಂಗವು ನಿರಾಕಾರ ನಿರಾಳ ಮತ್ತು ಬಯಲು. ನಿರಾಳವೆಂಬ ಕೂಸಿಂಗೆ ಬೆಣ್ಣಿಯನಿಕ್ಕಿ ಹೆಸರನ್ನಿಟ್ಟವರಾರು ಅಕಟಕಟಾ ಅದು ಶಬ್ದದ ಲಜ್ಜೆ ನೋಡಾ ಎಂದಿದ್ದಾರೆ ಅಲ್ಲಮರು .ಇದು ಜಗತ್ತಿನ ಅತ್ಯಂತ ಉತ್ಕೃಷ್ಟವಾದ ಅದಾತ್ತೀಕರಣದ ( Sublimation )ಅನುಭಾವವು.
ಕರಸ್ಥಲದ ಇಷ್ಟಲಿಂಗವನ್ನು ಸಂಪೂರ್ಣವಾಗಿ ತಿರಸ್ಕರಿಸದೆ ಅದರ ಹಿಂದಿನ ಆಶಯಕ್ಕೆ ಮುಖ ಮಾಡಲು ಭಕ್ತನಿಗೆ ಸೂಚಿಸಿದಂತಿದೆ ಈ ವಚನ .
–ಡಾ ಶಶಿಕಾಂತ ಪಟ್ಟಣ ರಾಮದುರ್ಗ