*ಅಕ್ಕನೆಡೆಗೆ- ವಚನ – 39 ವಾರದ ವಿಶೇಷ ಲೇಖನ
ಅಕ್ಕನ ಹುಡುಕಾಟದ ಪರಿ
ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂದ್ಯವ ನೆನೆವಂತೆ ನೆನೆವೆನಯ್ಯಾ
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ
ಕಂದಾ ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯಾ ಚೆನ್ನಮಲ್ಲಿಕಾರ್ಜುನ
ಅಕ್ಕಮಹಾದೇವಿ ಹುಟ್ಟಿನಿಂದಲೇ ವಿರಕ್ತಳು ಎನ್ನುವ ಭಾವ ಅವಳ ಅನೇಕ ವಚನಗಳ ಓದಿನಿಂದ ಗ್ರಹಿಕೆಗೆ ಬರುತ್ತದೆ. ಹಾಗಾಗಿ ಅವಳಿಗಿದ್ದ ಹುಡುಕಾಟ ಸದಾ ಅವಳನ್ನು ಜಾಗ್ರತಾವಸ್ಥೆಯಲ್ಲೇ ಇಟ್ಟಿರುತ್ತದೆ. ಆ ಬದುಕಿನ ಗಮ್ಯವನ್ನು ಪಡೆಯಲೆಂದೇ ಸಾಧನೆಯ ಪಥದಲ್ಲಿ ಸಾಗಿರುತ್ತಾಳೆ. ಆದರೂ ಆ ಮಾರ್ಗದಲ್ಲಿ ನಿಚ್ಚಳತೆ ಇಲ್ಲದೆ ಒದ್ದಾಡುವಾಗ, ಮೇಲಿನ ವಚನದಲ್ಲಿ ಹೇಳುವಂತೆ ಆಲೋಚಿಸಿ, ತನಗೆ ತಾನೇ ಸಾಂತ್ವನಗೊಳಿಸುವ ಪ್ರಯತ್ನ ಮಾಡಿದಂತಿದೆ.
ಅಕ್ಕನ ಭಾವನೆಯಲ್ಲಿ ತನ್ನ ಗಮ್ಯ ಏನು ಎನ್ನುವುದು ಮೊದಲೇ ತಿಳಿದವಳು. ಅದರ ಹಾದಿಯಲ್ಲಿ ಸಾಗಿರುವಾಗ ನಡೆಯುವ ಮನದ ಸಂಘರ್ಷಕ್ಕೆ ಅದ್ಭುತ ಪ್ರತಿಮೆಗಳ ಬಳಸುವ ಪರಿ ಅನನ್ಯ. ಕಾವ್ಯ ಕಟ್ಟುವ ಕಲೆ ಓದುಗನ್ನು ವಿಸ್ಮಯಗೊಳಿಸುತ್ತದೆ.
ಮೊದಲ ಸಾಲಿನಲ್ಲಿ ಕುಂಜರ ಎಂದರೆ ಆನೆ. ಕಾಡಿನಲ್ಲಿ ಸ್ವಚ್ಛಂದವಾಗಿ ಜೀವನ ಸಾಗಿಸುತ್ತಿದ್ದ ಆನೆಯನ್ನು, ಹಿಡಿದು ತಂದು ಬಂಧನದಲ್ಲಿ ಇಟ್ಟರೆ, ಆ ಆನೆ ತಾನು ಸ್ವತಂತ್ರವಾಗಿ ತಿರುಗಾಡುತ್ತಿದ್ದ ಬೆಟ್ಟ, ಗುಡ್ಡಗಳನ್ನು ನೆನೆಯುತ್ತದೆ. ಎರಡನೇ ಸಾಲಿನಲ್ಲಿ ಇನ್ನೊಂದು ಹೋಲಿಕೆ ಕೊಡುತ್ತಾಳೆ. ಮನುಷ್ಯ ಗಿಳಿಯನ್ನು ತಂದು ಪಂಜರದಲ್ಲಿ ಇಟ್ಟು ಸಾಕುತ್ತಾನೆ. ಆ ಗಿಳಿ ತಾನು ಅಗಲಿದ ಬಂಧುಗಳನ್ನು ನೆನೆದು ದುಃಖಿಸುತ್ತದೆ.
ಇಲ್ಲಿ ಎರಡೂ ಹೋಲಿಕೆಗಳನ್ನು ಕೊಟ್ಟಿರುವ ಅಕ್ಕ ಏನು ಹೇಳಲು ಹೊರಟಿದ್ದಾಳೆ? ಆನೆ ಮತ್ತು ಗಿಣಿಯ ಹೋಲಿಕೆಯ ಉದಾಹರಣೆಯಲ್ಲಿ ‘ಬಂಧನ’ ಶಬ್ದ ಎರಡೂ ಹೋಲಿಕೆಯಲ್ಲಿ ಮೂಡಿಬಂದಿದೆ. ಆನೆಗೆ ಅದರದೇ ಆದ ಬಂಧನ. ಗಿಳಿಗೂ ಅದರದೇ ಆದ ಬಂಧನ. ಅಕ್ಕನಿಗೆ ಯಾವ ಬಂಧನ ಕಾಡುತ್ತಿದೆ ಎನ್ನುವ ಪ್ರಶ್ನೆ ಮುಂದಿನ ಸಾಲಿನಲ್ಲಿ ಹುಟ್ಟುತ್ತದೆ. ಈ ಭವ ಬಂಧನದಿಂದ ಮುಕ್ತವಾಗಲು ಹಾತೊರೆಯುತ್ತಾಳೆ. ಅವಳು ಅನುಭಾವದ ಮೆಟ್ಟಿಲೇರುವ ಉತ್ಸಾಹ ಮತ್ತು ಸಿದ್ಧತೆಯಲ್ಲಿ ಇರುವವಳು.
ಮನುಷ್ಯನ ದೇಹ ಅರಿಷಡ್ವರ್ಗಗಳ ತೊಳಲಾಟದಲಿ ವಿಲಿವಿಲಿ ಒದ್ದಾಡುತ್ತಿರುತ್ತದೆ. ದೇಹದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಮನಸಿನ ಮೇಲೆ ಸವಾರಿ ಮಾಡುತ್ತವೆ. ಅವುಗಳಿಂದ ಮುಕ್ತಿ ಹೊಂದಿದರೂ ಗಮ್ಯ ಇನ್ನೂ ಅಗೋಚರವಾಗಿದೆ. ತಾನು ಚೆನ್ನಮಲ್ಲಿಕಾರ್ಜುನನಿಂದ ಅಗಲಿದ ಜೀವ. ಅವನಿಲ್ಲದೆ ಆನೆ, ಗಿಳಿಯಂತೆ ಅನಾಥಭಾವ ಕಾಡುತ್ತದೆ. ಅದಕ್ಕೆ ಪರಿಹಾರವನ್ನು ಅವನಿಂದಲೇ ನಿರೀಕ್ಷಿಸಿತ್ತಾಳೆ. ಆ ತಂದೆ ಈ ಮಗುವಿನ ಮೇಲೆ ಏಕೆ ದಯೆ ತೋರುತ್ತಿಲ್ಲ ಎನ್ನುವ ಪ್ರಶ್ನೆ ಅವಳನ್ನು ಬಾಧಿಸುತ್ತದೆ. ತಾನು ಆ ತಂದೆಯ ಒಲವಿನ ಕಂದ, ತನ್ನನ್ನು ಮಮತೆಯಿಂದ ತನ್ನತ್ತ ಸೆಳೆದುಕೊಳ್ಳಲಿ ಎಂದು ಅಪೇಕ್ಷಿಸುತ್ತಾಳೆ.
ಸಿಕಾ