ಸಣ್ಣಕತೆ
ಶರೀಫನ ಸ್ಕೂಲು
ಅಲಾರಾಂ ಸದ್ದಿಗೆ ಸರಪರ ಎದ್ದು ಕುಳಿತ ಚೆನ್ನಿಗರಾಯನಿಗೆ ಕಣ್ಣು ತೆರೆಯಲಾಗುತ್ತಿಲ್ಲ. ವಾಯುವಿಹಾರಕ್ಕೆ ಹೋಗಲೇಬೇಕೆಂದು ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ಒಲ್ಲದ ಮನಸಿಲೇ ಎದ್ದು ಮುಖ ತೊಳೆದು ಮನೆಯಿಂದ ಹೊರ ಬಂದಾಗ ಬೀಸುವ ಶೀತಗಾಳಿಗೆ ಮೈ ನಡುಗಿತು. ರಾತ್ರಿ ಸುರಿದ ಮಳೆಯಿಂದಾಗಿ ಚಳಿ ಆವರಿಸಿತ್ತು. ಸುರುಪುರದ ವಾಡೆಯತ್ತ ಚೆನ್ನಿಗರಾಯ ಹೆಜ್ಜೆ ಹಾಕಿದ. ಚುಮುಚುಮು ಬೆಳಕಲ್ಲಿ ರಸ್ತೆಯ ಎರಡೂ ಬದಿಯ ಗುಲ್‌ಮೋಹರು ಗಿಡಗಳ ರಂಗು ಮುದ ನೀಡಿತು. ವಾಡೆಯ ಆ ತುದಿಯ ವರೆಗೆ ಹಳದಿ ಮಿಶ್ರಿತ ಕೆಂಪು ಸೀರೆಯಲ್ಲಿ ಚಿತ್ತಾರ ಬಿಡಿಸಿದಂತಿದೆ. ಬೀಸುವ ಗಾಳಿಗೆ ಅತ್ತಿತ್ತ ತಲೆದೂಗುವ ಕೊಂಬೆಗಳು ವಾಡೆ ಕಡೆ ಹೋಗುವವರಿಗೆ ಆತ್ಮೀಯ ಸ್ವಾಗತ ಕೋರುವಂತಿದೆ. ಕೆಂಪು ಸೀರೆಯ ನಡುವೆ ಕಪ್ಪು ಗೆರೆ ಗೀಚಿದಂತೆ ರಸ್ತೆ ಮಿನುಗುತ್ತಿದೆ. ಇಂತಹದ್ದೊಂದು ಸಹಜ ನಿಸರ್ಗ ಸೌಂದರ್ಯ ಸನಿಹದಲ್ಲಿದ್ದರೂ ಆಸ್ವಾದಿಸುವಲ್ಲಿ ಇಷ್ಟು ದಿನದ ಕಾಲಾಯಾಪನೆಗೆ ಪಿಚ್ಚೆನ್ನಿಸಿತು.
ಲೋಕೋಪಯೋಗಿ ಇಲಾಖೆಯಲ್ಲಿ ಚನ್ನಿಗರಾಯ ಡಿ ದರ್ಜೆ ನೌಕರ. ಕೈ, ಬಾಯಿ ಶುದ್ಧುಳ್ಳ ಮನುಷ್ಯ. ಮಿತಭಾಷಿ. ನೇರ, ನಿಷ್ಠುರ, ಪ್ರಾಮಾಣಿಕತೆಯೇ ಮುಳುವಾಗಿ ಮೇಲಧಿಕಾರಿಗಳ ಅವಕೃಪೆಗೆ ಒಳಗಾಗಿದ್ದ. ಅಧಿಕಾರಿ ಅವಕೃಪೆ, ಒತ್ತಡದ ನಡುವೆಯೂ ಸಾಹಿತ್ಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಭಿಲಾಷೆಯಿಂದ ಕಥೆ, ಕವಿತೆ ಬರೆಯಲಾರಂಭಿಸಿದ್ದ. ಇತ್ತೀಚೆಗೆ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನೂ ಗಿಟ್ಟಿಸಿಕೊಂಡು ಕಚೇರಿಯಲ್ಲಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದ. ಸಹೋದ್ಯೋಗಿ ಶ್ರೀಕಂಠನ ಸಲಹೆ ಮೇರೆಗೆ ಇದೇ ಮೊದಲ ಬಾರಿ ವಾಡೇ ಕಡೆ ಚೆನ್ನಿಗರಾಯ ಬಂದಿದ್ದ. ವಾಡೇ ಸುತ್ತಿ ಮಾರ್ಕೆಟ್‌ನತ್ತ ಹೆಜ್ಜೆ ಹಾಕುತ್ತಿದ್ದಂತೆ ಮಳೆಗಾಳಿ ಬಿರುಸುಗೊಂಡಿತು. ಆಸರೆಗಾಗಿ ರಸ್ತೆ ಪಕ್ಕದಲ್ಲಿದ್ದ ಸರಕಾರಿ ಶಾಲೆಯ ಕಾಂಪೌಂಡಿನೊಳಗೆ ನುಗ್ಗಿ ನಡುಗುತ್ತ ಕೈ ಕಟ್ಟಿ ನಿಂತ. ಶಾಲೆ ಪರಿಸರ ನೋಡುತ್ತಲೇ ಥಟ್ಟನೇ ಪಕ್ಕದ ಮನೆಯ ಶರೀಫನ ನೆನಪಾಯಿತು. ಅವನನ್ನು ಒಳ್ಳೆಯ ಶಾಲೆಗೆ ಸೇರಿಸುವುದಾಗಿ ಅವರವ್ವ ಫಾತೀಮಾಗೆ ನಿನ್ನೆ ಮಾತು ಕೊಟ್ಟಿದ್ದು ಮರೆತೇ ಹೋಗಿತ್ತು.
ಹರನಾಳಿಗೆ ಮೂಲಕ ಸುರಿಯುತ್ತಿದ್ದ ಮಳೆ ನೀರನ್ನೇ ದಿಟ್ಟಿಸುತ್ತಿದ್ದ ಚೆನ್ನಿಗರಾಯನಿಗೆ ಶರೀಫನ ಕುಟುಂಬದ ಚಿತ್ರಣ ಕಣ್ಣು ಮುಂದೆ ನಿಂತಿತು.
ಶರೀಫನ ಅಪ್ಪ ದಾದಾಪೀರ್ ರಿಕ್ಷಾ ಚಾಲಕ. ಮಕ್ಕಳಿರಲವ್ವ ಮನೆತುಂಬ ಎಂಬ ಮಾತನ್ನು ಅಕ್ಷರಶಃ ಪಾಲಿಸಿರುವ ದುಶ್ಚಟಗಳ ಸರದಾರ ದಾದಾಪೀರನಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರು. ನಾಲ್ಕನೆಯವನು ಆರೀಫ್, ಐದನೇಯವನೇ ಶರೀಫ್. ಇನ್ನಿಬ್ಬರು ಚಿಕ್ಕವರು. ಭೂಮಿಯೆಡೆ ಕೈ ಮಾಡದೇ ಆಕಾಶದೆಡೆ ಬಾಯಿ ತೆರೆಯುವ ದಾದಾಪೀರನಿಗೆ ತಾನು ದುಡಿದದ್ದು ಕುಡಿತಕ್ಕೂ ಸಾಲದು. ಕುಡಿಯಲು ಹಣ ಸಾಲದಾದಾಗ ಮನೆಯಲ್ಲಿ ಎಗರಾಡಿ, ಒದರಾಡಿ ಮಕ್ಕಳು, ಹೆಣ್ತಿ ದುಡಿದಿಟ್ಟ ಹಣಕ್ಕೆ ದುಂಬಾಲು ಬೀಳುವುದು ನಿತ್ಯದ ಜಾಯಮಾನ. ಹೆಂಡತಿ ಫಾತೀಮಾ, ಮೂವರು ಹೆಣ್ಣುಮಕ್ಕಳು ಗಾರೆ ಕೆಲಸಕ್ಕೆ ಹೋಗುತ್ತಾರೆ. ಆರೀಫನಿಗೆ ಓದು ನೈವೇದ್ಯವಾಗಿದ್ದರಿಂದ ಶಾಲೆ ಬಿಟ್ಟು ಗ್ಯಾರೇಜಿನಲ್ಲಿ ದುಡಿಯುತ್ತಿದ್ದಾನೆ. ಸಂಸಾರದ ಎಲ್ಲ ಹೊರೆ ಅವ್ವ ಫಾತೀಮಾಳ ಮೇಲೆಯೇ.
ಹಿರಿ ಮಗಳ ಮದುವೆ ಗೊತ್ತಾಗಿದೆ. ಎಲ್ಲವೂ ಸರಿಯಾಗಿದ್ದರೆ ಮನೆಯಲ್ಲಿ ಇಷ್ಟೊತ್ತಿಗೆ ಕಲ್ಯಾಣ ಕಾರ್ಯ ಮುಗಿಯಬೇಕಿತ್ತು. ಮದುವೆಗೆಂದು ದುಡಿದು ಕೂಡಿಟ್ಟಿದ್ದ ಹಣವನ್ನು ದಾದಾಪೀರ ದೋಚಿ ಜೂಜಾಡಿ ಬಂದು ರಾದ್ಧಾಂತವನ್ನೇ ಸೃಷ್ಟಿಸಿದ್ದ. ಹಣವಿಲ್ಲದೇ ಸದ್ಯ ಮದುವೆಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ದಾದಾಪೀರ್ ಮಾಡುವುದು ತಪ್ಪು ಎಂದು ಹೇಳಲು ಬಂದ ಸಂಬಂಧಿಗಳಿಗೆ, ‘ನಾನೇನ್ ಕಂಡೋರ್ ಮನಿಗೆ ಕನ್ನಾ ಹಾಕಿಲ್ಲ. ನನ್ ಮಕ್ಳು ದುಡಿದಿದ್ದು ತಗಂಡೀನಿ. ಖರ್ಚು ಮಾಡೋ ಹಕ್ಕು ನನಗೈತಿ. ಯಾ ನನ್ ಮಗಾ ಇದರಾಗ ತಲಿ ಹಾಕಬ್ಯಾಡ್ರಿ. ನಿಮ್ಮ ಗಂಗಾಳದಾಗ ಏಸು ನೊಣ ಸತ್ತು ಬಿದ್ದಾವೋ ? ನನ್ನ ಗಂಗಾಳದಾಗಿನ ನೊಣದ ಕತಿ ಹೇಳಾಕ ಬರಬ್ಯಾಡ್ರಿ’ ಎಂದು ಬಾಯಿಗೆ ಬಂದಂತೆ ಬಯ್ದು ಕಳುಹಿಸಿದ ಮೇಲೆ ಬಂಧುಗಳ್ಯಾರೂ ಮನೆಯತ್ತ ಸುಳಿಯುತ್ತಿಲ್ಲ ಎಂಬುದನ್ನು ಅದೊಂದು ದಿನ ವರ್ಣಿಸಿ ಕಣ್ಣೀರಿಟ್ಟಿದ್ದ ಫಾತೀಮಾ, ಚಿಂತೆಯ ಗೂಡಾಗಿದ್ದಳು.
ಗಂಡನ ಬಾನಗಡಿ ಅರಿತೇ ಫಾತಿಮಾ, ತಾವು ದುಡಿದಿದ್ದರಲ್ಲಿ ಮನೆ ಖರ್ಚಿಗೆ ಬಳಸಿ ಉಳಿದ ಅಲ್ಪಸ್ವಲ್ಪ ಹಣವನ್ನು ಚೆನ್ನಿಗರಾಯರ ಬಳಿ ಕೊಡುತ್ತಿದ್ದಳು.
ಶರೀಫ್ ಬುದ್ಧಿವಂತ ಹುಡುಗ. 7ನೇ ಇಯತ್ತೆ ಪಾಸಾಗಿದ್ದಾನೆ. ಬೆಳಗ್ಗೆ ಮಾರ್ಕೆಟ್‌ನಲ್ಲಿ ಅದೇನೋ ತರಕಾರಿ ಮಾರುವ ಕೆಲಸವಂತೆ. ಬೆಳಕು ಹರಿಯುವ ಮುನ್ನ ಎದ್ದ್ಹೋಗಿ ಶಾಲೆ ಹೊತ್ತಿಗೆ ಮನೆಗೆ ಬರ‌್ತಾನೆ. ಶಾಲೆ ಬಿಟ್ಟ ನಂತರ ರಾತ್ರಿ ಇಡ್ಲಿ ಬಂಡಿಯಲ್ಲಿ ಕೆಲಸ ಮಾಡ್ತಾನೆ. ದುಡಿದ ಹಣವನ್ನು ಪೋಲು ಮಾಡದೇ ಅವ್ವನ ಕೈಗಿಡುತ್ತಾನೆ.
ಆವತ್ತು ಚೆನ್ನಿಗರಾಯ ಕಚೇರಿಗೆ ಹೋಗುವ ಅವಸರದಲ್ಲಿ ಮನೆ ಗೇಟಿನ ಬಳಿ ಪ್ಯಾಂಟಿನ ಕಿಸೆಯಿಂದ ಕರವಸ್ತ್ರ ತೆಗೆಯುವಾಗ ಪಾಕೆಟ್ ಬಿದ್ದಿದ್ದು ಗೊತ್ತಿರಲಿಲ್ಲ. ಬಹುಶಃ ಕಳೆದಿರಬಹುದು ಎಂದು ಚೆನ್ನಿಗರಾಯ ಸುಮ್ಮನಾಗಿದ್ದ. ಆದರೆ, ಸಂಜೆ ಮನೆಗೆ ಬಂದಾಗ, ಶರೀಫ ಅದನ್ನು ಹೆಂಡತಿ ಬಳಿ ಕೊಟ್ಟಿದ್ದ. ಹಣವೂ ಜೋಪಾನವಾಗಿತ್ತು. ಅಂದಿನಿಂದ ಅವನ ಪ್ರಾಮಾಣಿಕತೆ, ಕಷ್ಟಸಹಿಷ್ಣುತೆ, ವಯಸ್ಸಿಗೆ ಮೀರಿದ ಅನುಭವ, ನಿದ್ದೆ ಬದಿಗಿಟ್ಟು ಸದ್ದಿಲ್ಲದೇ ಮನೆಯ ಯಜಮಾನನಂತೆ ದುಡಿಯುವ ಶರೀಫನ ಬಹುಮುಖ ಗುಣಲಕ್ಷಣ ಚೆನ್ನಿಗರಾಯನ ಅಂತಃಕರಣ ಕಲಕ್ಕಿತ್ತು. ಅಲ್ಲದೇ ಶರೀಫನಿಂದಾಗಿ ವಾರದಲ್ಲಿ ಮೂರ‌್ನಾಲ್ಕು ದಿನ ತಾಜಾ ತರಕಾರಿ ಉಚಿತವಾಗಿ ಸಿಗುತ್ತಿತ್ತು.
ಮಕ್ಕಳು ಹುಟ್ಟಿದರೆ ಇಂಥವನೇ ಹುಟ್ಟಲಿ ಎಂದು ಅದೆಷ್ಟೋ ಬಾರಿ ಚೆನ್ನಿಗರಾಯ ಕಲ್ಪಿಸಿಕೊಂಡಿದ್ದುಂಟು. ಸುಲಲಿತಾಳೊಂದಿಗೆ ಸಪ್ತಪದಿ ತುಳಿದು ಐದು ವರ್ಷಗಳಾದರೂ ಮಕ್ಕಳ ಭಾಗ್ಯ ಕಾಣದೇ ಚಿಂತೆಯಲ್ಲಿರುವ ಹೆಂಡತಿ, ಏಳೇಳು ಜನ್ಮಕ್ಕೂ ಈ ಕಷ್ಟ ಬ್ಯಾಡ ಎನ್ನುವ ಏಳು ಮಕ್ಕಳ ತಾಯಿ ಫಾತೀಮಾಳ ಕುಟುಂಬದ ಚಿತ್ರಣ ಚೆನ್ನಿಗರಾಯನನ್ನು ಒಮ್ಮೊಮ್ಮೆ ಚಿಂತೆಗೀಡು ಮಾಡುತ್ತಿತ್ತು. ಮಳೆ ನೀರು ಕಾಲಿಗೆ ಸೋಕಿ ತಣ್ಣಗಾದಾಗ ಚೆನ್ನಿಗರಾಯ ಆಲೋಚನೆಯಿಂದ ಹೊರಬಂದ. ಅದಾಗಲೇ ಮಳೆ ನಿಂತಿತ್ತು. ಕರವಸ್ತ್ರವನ್ನು ತಲೆ ಮೇಲೆ ಹಾಕಿಕೊಂಡು ಬಿರಬಿರನೇ ಹೊರಟ.
ಗಾಂಧಿನಗರ ಮಾರ್ಕೆಟ್ ಬಳಿ ಬಂದಾಗ ಮತ್ತೆ ಹನಿಯತೊಡಗಿತು. ತರಕಾರಿ, ಸೊಪ್ಪು ಹೊತ್ತು ಏಳೆಂಟು ಟಂಟಂಗಳು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಮಳೆಯಿಂದಾಗಿ ನೆಲ ಪಿಚಿಪಿಚಿ ಎನ್ನುತ್ತಿತ್ತು. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ಜನ ನಾಜೂಕಾಗಿ ನಡೆಯುತ್ತಿದ್ದರು. ಶರೀಫನ ನೆನಪಾಯಿತಾದರೂ ಸಂತೆ ಗದ್ದಲದಲ್ಲಿ ಹುಡುಕುವುದು ಕಷ್ಟ ಎನಿಸಿತು. ಅಲ್ಲದೇ ಮಳೆಯಿಂದಾಗಿ ಬಂದಿದ್ದಾನೋ ಇಲ್ಲವೋ ಎಂಬ ಅನುಮಾನವೂ ಮೂಡಿತು. ಚಳಿಗಾಳಿ ತಡೆಯದೇ ಚಹಾ ಕುಡಿದು ಹೋದರಾಯಿತು ಎಂದು ಹೋಟೆಲ್‌ನತ್ತ ಚೆನ್ನಿಗರಾಯ ಮುಖ ತಿರುಗಿಸಿದ.
‘ಏಯ್ ತಮ್ಮಾ, ಕೊಡದಿದ್ರ ಕೊಡು ಇಲ್ಲಾಂದ್ರ ಬಿಡು. ಹತ್ರೂಪಾಯಿ ಮ್ಯಾಲೆ ಹತ್ತು ಪೈಸಾ ಕೊಡಂಗಿಲ್ಲ’ ಕಡ್ಡಿ ತುಂಡಾಗುವಂತೆ ಮಹಿಳೆಯೊಬ್ಬಳು ಹೇಳಿದ್ದು ಕೇಳಿಸಿತು.
ತಿರುಗಿ ನೋಡಿದ ಚೆನ್ನಿಗರಾಯನ ಮುಖ ಅರಳಿತು. ಮಹಿಳೆ ಜತೆ ಶರೀಫ ಚೌಕಾಸಿ ನಡೆಸಿದ್ದ. ಕೂಗಬೇಕೆನಿಸಿತಾದರೂ ಶರೀಫ ಏನು ಮಾಡುತ್ತಾನೆ ನೋಡೋಣವೆಂದು ಸುಮ್ಮನೆ ಗಮನಿಸತೊಡಗಿದ. ‘ಮ್ಮೋ…ಪಾವ್ಕೇಜಿ ತಮಾಟಿ, ಅರ್ಧ ಕೇಜಿಗಿಂತ ಜಾಸ್ತಿ ಉಳ್ಳಾಗಡ್ಡಿ, ಪಾವ್ಕೇಜಿ ಬದ್ನಿಕಾಯಿ, ಮತ್ಯ ಆಲ್ಗಡ್ಡಿ ಜಗ್ಗಿ ಅದಾವ. ಮ್ಯಾಲೆ ಇವೀಸು ಮೆಣ್ಸಿನಕಾಯಿ. ಹತ್ರೂಪಾಯಿಗೆ ಯಾರ್ ಕೊಡ್ತಾರ? ಹೋಗ್ಲಿ ಹದ್ನೆಂಟು ರೂಪಾಯಿ ಕೊಡಮ್ಮ.’ ದೈನೇಸಿಯಿಂದ ಕೇಳಿದ ಶರೀಫ.
ಹೆಂಗಸಿನದು ಅರೆ ಮನಸು. ಶರೀಫನಿಗೆ ವ್ಯಾಪಾರ ಕುದುರಿಸುವ ಹಂಬಲ. ಹಾಗೂ ಹೀಗೂ ಆ ಹೆಂಗಸು ಹದಿನೈದು ರೂಪಾಯಿ ಶರೀಫನ ಕೈಗಿಟ್ಟು ತರಕಾರಿ ಪಡೆದಳು. ಶರೀಫ ಗೆಲುವಾಗಿದ್ದ. ಹೆಂಗಸು ಕೊಟ್ಟ ರೊಕ್ಕವನ್ನು ಜೋಪಾನವಾಗಿ ಬೊಕ್ಕಣಕ್ಕಿಳಿಸಿದ. ತನ್ನದೇ ಲೋಕದಲ್ಲಿ ಮೈಮರೆತು ‘ಹಳೆ ಪಾತ್ರೆ, ಹಳೆ ಕೆಬ್ಬಣ, ಹಳೆ ಪೇಪರ್ ಥರಾ ಹೋ……!’ ಎಂದು ಗುನುಗುತ್ತ ಖಾಲಿ ಚೀಲ ಗಿರಗಿರ ತಿರುಗಿಸುತ್ತ ಸಂತೆಯೊಳಗೆ ನುಸುಳಿದ. ಸಮೀಪದಲ್ಲೇ ಚೆನ್ನಿಗರಾಯ ನಿಂತದ್ದು ಶರೀಫನಿಗೆ ಗೊತ್ತಾಗಲಿಲ್ಲ.
ಚೆನ್ನಿಗರಾಯನಿಗೆ ಕುತೂಹಲ ತಡೆಯಲಾಗಲಿಲ್ಲ. ಶರೀಫನ ಕೆಲಸವೇನೆಂದು ತಿಳಿಯುವ ಹಂಬಲದಿಂದ ಅವನನ್ನು ಹಿಂಬಾಲಿಸಿದ. ಸಂತೆಯ ಒಂದು ಮಗ್ಗುಲಲ್ಲಿ ತರಕಾರಿ ತುಂಬಿದ ಎರಡು ಟೆಂಪೋಗಳು. ಒಂದು ಟೆಂಪೋದಿಂದ ತರಕಾರಿ ಇಳಿಸಿ ಹರಾಜು ನಡೆದಿತ್ತು. ವ್ಯಕ್ತಿಯೊಬ್ಬ ಕೂಗುತ್ತಿದ್ದರೆ ಹತ್ತಾರು ಜನ ಅವನ ಸುತ್ತುವರಿದಿದ್ದಾರೆ. ದಢೂತಿ ಹೆಂಗಸೊಬ್ಬಳು ಅಲ್ಲಿರುವ ತರಕಾರಿ ಪುಟ್ಟಿಗಳನ್ನು ರಿಕ್ಷಾದಲ್ಲಿ ಜೋಡಿಸುತ್ತಿದ್ದಾಳೆ. ಮತ್ತೊಂದು ಬಾಜು ತರಕಾರಿ ಚಿಲ್ಲರೆ ವ್ಯಾಪಾರ ಬಿರುಸಾಗಿ ಸಾಗಿದೆ. ಮಳೆಯಿಂದಾಗಿ ನೆಲವೆಲ್ಲ ರಾಡಿರಾಡಿಯಾಗಿ ಕಾಲಿಟ್ಟರೆ ಪಿಚಕ್ ಎನ್ನುತ್ತಿದೆ. ಶರೀಫ ರಿಕ್ಷಾ ಬಳಿ ನಿಂತಿದ್ದಾನೆ. ಜತೆಗೆ ಮೂರ‌್ನಾಲ್ಕು ಓರಗೆಯ ಮಕ್ಕಳಿದ್ದಾರೆ. ರಿಕ್ಷಾದಲ್ಲಿ ತರಕಾರಿ ಪುಟ್ಟಿ ಇಡುವಾಗ ನೆಲಕ್ಕೆ ಬಿದ್ದ ಬದನೆಕಾಯಿಯೊಂದನ್ನು ಪಡೆಯಲು ನಾಲ್ವರು ಮಕ್ಕಳು ಮುಗಿಬಿದ್ದರು.
‘ಏಯ್ ಸುವರ್ ಕೆ ಬಚ್ಚೆ, ಹೋಗ್ತಿರೋ ಒದಿಲೋ?’ ರಿಕ್ಷಾವಾಲನ ಗದರಿಕೆಗೆ ಮಕ್ಕಳು ಜಗ್ಗಲಿಲ್ಲ. ಬದನೆಕಾಯಿ ಪಡೆದ ಬಾಲಕ, ಕ್ರೀಡೆಯಲ್ಲಿ ಟ್ರೋಫಿ ಗೆದ್ದಂತೆ ಅಲ್ಲಿದ್ದ ಮಕ್ಕಳಿಗೆ ತೋರಿಸಿ ಬದನೆಗೊಂದು ಮುತ್ತು ಕೊಟ್ಟು ನಗುತ್ತ ತನ್ನ ಕೈಚೀಲಕ್ಕೆ ಸೇರಿಸಿದ.
ಸಂತೆ ಮಳಿಗೆಯೊಂದರ ಮುಂದೆ ನಿಂತಿದ್ದ ಯುವತಿಯೊಬ್ಬಳು ಗುಂಪಿನಲ್ಲಿನ ಬಾಲಕನೊಬ್ಬನನ್ನು ಕರೆದದ್ದು ಚೆಲುವರಾಯ ಗಮನಿಸಿದ. ಮಹಿಳೆ ಬಳಿ ಹೋದ ಬಾಲಕ, ಚೀಲದ ಬಾಯಗಲ ಮಾಡಿ ಒಳಗಿರುವ ತರಕಾರಿಗಳನ್ನು ತೋರಿಸಿದ. ಆಕೆಗೆ ಬೇಕಾದ ತರಕಾರಿ ಬಹುಶಃ ಅದರಲ್ಲಿರಲಿಲ್ಲ ಎನಿಸುತ್ತದೆ. ಬೇಡ ಎನ್ನುವಂತೆ ತಲೆ ಅಲ್ಲಾಡಿಸಿದಳು. ಏನನ್ನಿಸಿತೋ ಪುನಾ ಚೀಲ ಪಡೆದು ಒಳಗೆ ಕಣ್ಣಾಡಿಸಿದಳು. ಇಬ್ಬರಲ್ಲಿ ಚೌಕಾಸಿ ನಡೆದು ಕೊನೆಗೆ ಹೆಂಗಸು ಎಲ್ಲ ತರಕಾರಿಯನ್ನು ತನ್ನ ಚೀಲಕ್ಕೆ ಸುರುವಿಕೊಂಡು ಬಾಲಕನ ಕೈಗೆ ರೂಪಾಯಿ ನೀಡಿದಳು.
ಚೆನ್ನಿಗರಾಯನಿಗೆ ವಾಸ್ತವ ಸಂಗತಿ ಅರಿವಾಯಿತು. ಲಾರಿಯಿಂದ ಇಳಿಸುವಾಗ, ಸಾಗಿಸುವಾಗ, ತೂಕ ಹಾಕುವಾಗ, ಹೊತ್ತು ಸಾಗುವಾಗ ಬಿದ್ದ ತರಕಾರಿಯನ್ನು ಮಕ್ಕಳು ಹೆಕ್ಕಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಅಂತಹ ತರಕಾರಿ ಖರೀದಿಸಲೆಂದೇ ಜನ ಸಮುದಾಯವೊಂದಿದೆ. ಲಾಭ-ನಷ್ಟಗಳ ಲೆಕ್ಕ ಅಲ್ಲಿಲ್ಲ. ಸಿಕ್ಕಷ್ಟೇ ಶಿವ ಎನ್ನುವ ಸ್ವಭಾವ. ಗಗನಕ್ಕೇರುತ್ತಿರುವ ಬೆಲೆ, ಕುಸಿಯುತ್ತಿರುವ ಆದಾಯದಿಂದ ಅನಿವಾರ್ಯ ಬದುಕಿಗೆ ಮಾರ್ಗೋಪಾಯ ಇದು ಎಂದು ಭಾವಿಸಿ ಚೆನ್ನಿಗರಾಯ ಉಗುರು ಕಡಿಯುತ್ತ ನಿಂತ.
ಒಂದು ಟೆಂಪೋ ಖಾಲಿಯಾಗಿ ಮತ್ತೊಂದು ಟೆಂಪೋ ಸರತಿ. ಅದರ ಹಿಂದೆ ತರಕಾರಿ ಹೊತ್ತ ಮತ್ತೊಂದು ಟಂಟಂ ಬರುತ್ತಲೇ ಎಂಟ್ಹತ್ತು ಮಕ್ಕಳು ಸುತ್ತುವರಿದರು. ಗುಂಪಲ್ಲಿ ಶರೀಫ ಕಾಣಿಸಲಿಲ್ಲ. ಅತ್ತಿತ್ತ ಕಣ್ಣು ಹಾಯಿಸಿದರೂ ಅವನ ಸುಳಿವೇ ಇರಲಿಲ್ಲ. ಚಾಲಕ ಸೇರಿದಂತೆ ಟಂಟಂನಲ್ಲಿದ್ದ ಇಬ್ಬರು ಇಳಿದು ಹರಾಜು ಜಾಗದತ್ತ ನಡೆದರು. ಟಂಟಂ ಒಂದು ಬದಿ ಮೂರ‌್ನಾಲ್ಕು ಮಕ್ಕಳು, ತರಕಾರಿ ಚೀಲದ ಸಣ್ಣ ತೂತೊಂದನ್ನು ದೊಡ್ಡದಾಗಿಸಿ ಅದರಲ್ಲಿದ್ದ ಆಲೂಗಡ್ಡೆ ತೆಗೆಯುವ ಸಾಹಸ ನಡೆಸಿದ್ದರು. ಇನ್ನೇನು ತೆಗೆಯಬೇಕೆನ್ನುವಷ್ಟರಲ್ಲಿ ಚಾಲಕ ಬರುವುದನ್ನು ಕಂಡು ತಮಗೇನೂ ಗೊತ್ತಿಲ್ಲದವರಂತೆ ನಟಿಸುತ್ತ ಮೆಲ್ಲಗೆ ಕಾಲ್ಕಿತ್ತಿದರು.
ಅವರು ಅತ್ತ ಹೋಗುತ್ತಲೂ ಶರೀಫ ಗಾಡಿ ಬಳಿ ಬಂದ. ಚಾಲಕ ಟ್ರಾಲಿ ಬಿಚ್ಚಿ ಒಂದೊಂದೆ ಚೀಲ ಕೆಳಗಿಳಿಸತೊಡಗಿದ. ಚೀಲದಿಂದ ಆಲೂಗಡ್ಡೆಯೊಂದು ಪುಸುಗುವುದನ್ನು ಕಂಡ ಶರೀಫ ಅದನ್ನು ಎತ್ತಿಕೊಳ್ಳಲು ಮುಂದಾದ. ಗಮನಿಸಿದ ಚಾಲಕ, ‘ಕಳ್ಳ ಸೂಳೆಮಗನೇ, ಹೋಗ್ ಆಕಡೆ’ ಎಂದು ರೊಪ್ಪನೆ ಬೆನ್ನಿಗೆ ಚಪ್ಪರಿಸಿದ.
‘ಅಬ್ಬಾ…!’ ಎಂದು ಚೀರುತ್ತ ಶರೀಫ ಪಕ್ಕದ ಮಳಿಗೆಯತ್ತ ಸರಿದು ಮುಖ ಕಿವಿಚಿ ಬೆನ್ನು ನೀವಿಕೊಳ್ಳುತ್ತ ಚೀಲದ ಮೇಲೆ ಕುಳಿತ. ಈ ಸನ್ನಿವೇಶ ಕಂಡ ಚೆನ್ನಿಗರಾಯನಿಗೆ ಚೇಳು ಕುಟುಕಿದಂತಾಯಿತು. ಚೀಲ ಹರಿಯದಿರಲಿ ಎಂದು ಬೇಡುವ ಒಂದು ಜೀವ, ಚೀಲ ತೂತಾಗಿ ಒಂದಷ್ಟು ತರಕಾರಿ ನೆಲದ ಪಾಲಾದರೆ ಎಷ್ಟು ಚೆನ್ನ ಎಂದು ಬಯಸುವ ಮತ್ತೊಂದು ಜೀವ. ಎಂತಹ ವಿಪರ್ಯಾಸ. ನೋವು ತಡೆಯದೇ ವಿಷಣ್ಣನಾಗಿ ಚೀಲದ ಮೇಲೆ ಕುಳಿತ ಶರೀಫನ ಕಣ್ಣಾಲಿಗಳು ಹನಿಗೂಡಿದ್ದವು.
ಚೆನ್ನಿಗರಾಯನ ಕರುಳು ಹಿಚುಕಿದಂತಾಯಿತು. ಶರೀಫನಿಗೆ ಸಮಾಧಾನ ಹೇಳಬೇಕೋ ? ಮಾಡುತ್ತಿರುವುದು ತಪ್ಪು ಎಂದು ಸಮಜಾಯಿಷಿ ನೀಡಬೇಕೋ ? ತಿಳಿಯದೇ ಅಂತರ್ಮುಖಿಯಾದ. ಎದೆ ಭಾರವಾಗಿತ್ತು.
ಹ್ಯಾಪುಮೋರೆ ಹಾಕಿ ಕುಳಿತಿದ್ದ ಶರೀಫನನ್ನು ಏದ್ದೇಳುವಂತೆ ಕೈ ಸನ್ನೆ ಮಾಡಿದ ಕೂಲಿಯವನೊಬ್ಬ, ಚೀಲವನ್ನು ಎತ್ತಿಕೊಂಡು ತರಕಾರಿ ಹರಾಜು ನಡೆಯುತ್ತಿದ್ದ ಸ್ಥಳದತ್ತ ಹೊರಟ. ಅವನು ಹೊತ್ತಿದ್ದ ಚೀಲದಿಂದ ಆಲೂಗಡ್ಡೆಯೊಂದು ಪುಸುಗಿತು. ಅರಸಿದ ಬಳ್ಳಿ ಕಾಲಿಗೆ ಸಿಕ್ಕಂತಾಯಿತು. ನೋಡು ನೋಡುತ್ತಿದ್ದಂತೆ ಒಂದೇ ನೆಗೆತಕ್ಕೆ ಹಾರಿದ ಶರೀಫ, ಅದನ್ನು ಎತ್ತಿಕೊಂಡು ಚೀಲಕ್ಕೆ ಸೇರಿಸಿದ.
ಅದಾಗಲೇ ನೋವು ಮರೆಯಾಗಿತ್ತು. ಮನಸ್ಸು ಜಾಗೃತವಾಗಿತ್ತು. ಸಂಭ್ರಮ-ಸಂಕಟ ಎಲ್ಲ ಅನುಭವ ಆಹ್ವಾನಿಸುತ್ತ ಮತ್ತೆ ಚೀಲವನ್ನು ಅಲುಗಾಡಿಸುತ್ತ ಸಂತೆಯ ಸುತ್ತ ಒಮ್ಮೆ ಕಣ್ಣಾಡಿಸಿದ. ಸಂತೆಯೊಳಗೆ ಬರುತ್ತಿದ್ದ ಮತ್ತೊಂದು ಲಾರಿಯತ್ತ ಚಿತ್ತ ಹರಿಯಿತು. ಅದೆಲ್ಲೋ ಚದುರಿ ಹೋಗಿದ್ದ ಶರೀಫನ ಗೆಳೆಯರು ಮತ್ತೆ ಜಮಾಯಿಸಿದರು. ಚೆನ್ನಿಗರಾಯನಿಗೆ ಸಮಯ ಜಾರಿದ್ದೇ ಗೊತ್ತಾಗಲಿಲ್ಲ. ಶರೀಫನನ್ನು ಮಾತನಾಡಿಸುವ ಮನಸಾಗದೇ ಮನೆಯತ್ತ ಕಾಲು ಹಾಕಿದ. ಜೀವನದಲ್ಲಿ ವಿಶಿಷ್ಟ ಅನುಭವವಾಗಿತ್ತು.
ಅದೊಂದು ದಿನ ಶರೀಫನ ಬಗ್ಗೆ ಫಾತೀಮಾ ಹೇಳಿದ್ದು ನೆನಪಾಯಿತು. ‘ಸಾಹೇಬ್ರ ನಾವು ಹತ್ತು ಮಾತಾಡಿದ್ರ ಅಂವಾ ಒಂದು ಮಾತಾಡ್ತಾನ. ಅಂವಾ ಏನಾರ ಉತ್ತರ ಕೊಟ್ರ ವಳ್ಳಿ ಪ್ರಶ್ನೆ ಮಾಡುವಾಂಗ ಇರಾಂಗಿಲ್ರಿ. ಬದುಕು, ಬಾಳೇವು ಇಚಾರ ಬಂದ್ರ, ನೀವ್ಯಾಕ ಚಿಂತಿ ಮಾಡ್ತೀರಿ. ನಾನು ಚಲೋ ಓದಿ ದೊಡ್ ಆಫೀಸರ‌್ರಾಗಿ ನಿಮ್ಮನ್ ಚಂದಾಗಿ ನೋಡ್ಕಂತೀನಿ ಅಂತಾನ್ರಿ. ನಿಮ್ಮಂತೋರ್ ಹೊಟ್ಯಾಗ ಹುಟ್ಟಬೇಕಾದ ಕೂಸು ನಮ್ಮಂತೋರು ಹೊಟ್ಯಾಗ ಹುಟ್ಟೈತ್ರಿ. ಆತನ ಮಾತು ಕೇಳ್ತಿದ್ರ ಹಾಲು ಕುಡ್ದಂಗಾಗಿ ಆಯಾಸ ದೂರಾಗ್ತೈತಿ. ನಮ್ ಕಷ್ಟ ಸಾಯತನಕ ಇದ್ದದ್ದ. ಎಲ್ಡು ಸಣ್ಣ ಹುಡುಗರಿಗೆ ನಮ್ ಹುಸೇನ್‌ಪೀರ್ ಸಾಲಿ ಕಲಸ್ತಾನಂತ್ರಿ. ಏನಾರ ಇರ‌್ಲಿ, ಶರೀಫನ್ ನಿಮ್ ಉಡ್ಯಾಗ ಹಾಕ್ತೀನ್ರಿ. ಅವನಿಗೊಂದು ದಾರಿ ತೋರ‌್ಸೋ ಜವಾಬ್ದಾರಿ ನಿಮ್ಮದು ಸಾಹೇಬ್ರ. ಸಾಯತನಕ ನಿಮ್ಮ ಋಣ ಮರ‌್ಯಾಂಗಿಲ್ರಿ’ ಎಂದು ಕಣ್ಣೀರಿಟ್ಟಿದ್ದು ನೆನಪಿಗೆ ಬಂತು.
ಮನೆಗೆ ಬಂದು ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ ಫಲಾಹಾರ ಸೇವನೆಗೆ ಕುಳಿತಾಗ ಹೆಂಡತಿ, ಚಪಾತಿ ಆಲೂಗಡ್ಡೆ ಪಲ್ಲೆ ಮುಂದಿಟ್ಟಳು. ಪಲ್ಲೆ ನೋಡಿದ ಚೆನ್ನಿಗರಾಯನಿಗೆ ಕಸಿವಿಸಿಯಾಯಿತು.
ಆಲೂಗಡ್ಡೆ ಶರೀಫ ಕೊಟ್ಟಿದ್ದಾ? ಪ್ರಶ್ನಿಸಿದ.
‘ಹೌದು’ ಎಂದು ಅಡುಗೆ ಮನೆಯಿಂದಲೇ ಉತ್ತರ ಬಂತು. ಸಂತೆಯೊಳಗಿನ ವೃತ್ತಾಂತ ಹೆಂಡತಿಗೆ ಹೇಳಲು ಮನಸ್ಸಾಗಲಿಲ್ಲ. ಅವ್ಯಕ್ತ ವೇದನೆಯಿಂದ ಪಲ್ಯವನ್ನೇ ದಿಟ್ಟಿಸತೊಡಗಿದ. ರಜ್ಜಲ್ಲಿ ಬಿದ್ದ ತರಕಾರಿಯನ್ನು ಚೊಣ್ಣಕ್ಕೆ ಉಜ್ಜಿ ಉಜ್ಜಿ ಚೀಲಕ್ಕೆ ಸೇರಿಸುವುದು, ಏಟು ತಿಂದ ಶರೀಫನ ಜೋಲುಮೋರೆ, ಮಕ್ಕಳ ಸೆಣಸಾಟ ದೃಶ್ಯ ಕಣ್ಣ ಮುಂದೆ ಸುಳಿದು ಕರುಳಿನಲ್ಲಿ ಕತ್ತರಿ ಆಡಿಸಿದಂತಾಗಿ ತುಟಿ ಕಂಪಿಸಿತು. ಘಾಸಿಗೊಂಡ ಮನಸು ಸಂಕಟದಿಂದ ತೊಳಲಾಡುತ್ತಿತ್ತು. ಚಪಾತಿ ತುಣುಕಿನಿಂದ ಆಲೂಗಡ್ಡೆ ಪಲ್ಲೆಯನ್ನು ಅತ್ತಿಂದಿತ್ತ ಸರಿಸಾಡಿಸುತ್ತ ಚೆನ್ನಿಗರಾಯ ಆಲೋಚನೆಗೀಡಾದ. ಸಹ್ಯ-ಅಸಹ್ಯಗಳ ತಾಕಲಾಟದಲ್ಲಿ ಚಪಾತಿ ತಿನ್ನಲಾಗದೇ ತಟ್ಟೆಯನ್ನು ಮುಂದೆ ಸರಿಸಿದ. ಅನ್ನದ ಮೇಲೆ ಸೊಕ್ಕು ಎಂಬ ಭಾವನೆ ಮೂಡಿ ತಾಟನ್ನು ಮತ್ತೆ ಹತ್ತಿರ ಎಳೆದು ಕೊಂಡ. ಚಪಾತಿ ಬಾಯಿಗಿಡಲು ಹೋದರೆ ಶರೀಫನ ಕಳೆಗುಂದಿದ ಮುಖ ಕಣ್ಣೆದುರಿಗೆ ಧುತ್ತೆಂದು ನಿಲ್ಲುತ್ತಿತ್ತು. ಭಾವುಕನಾಗಿ ಕ್ಷಣ ಕಣ್ಣು ಮುಚ್ಚಿ ಕುಳಿತ.
ಸಾಹಿತ್ಯ, ಕವನ ಆಮೇಲೆ. ಶರೀಫನ ಹಸನು ಬದುಕಿಗೆ ದಾರಿ ಕಂಡುಕೊಳ್ಳಬೇಕು. ವರ್ತಮಾನದ ಸುಖಕ್ಕಾಗಿ ಶರೀಫನ ಪ್ರತಿಭೆ ಸಂತೆಯಲ್ಲಿ ಸುತ್ತಿ ಸುಳಿದು ಭವಿಷ್ಯದಲ್ಲಿ ಸತ್ತು ಹೋಗುವ ಮೊದಲು ಜ್ಞಾನದ ನೆಲೆ ಒದಗಿಸಬೇಕು. ಅದಕ್ಕಾಗಿ ಕವನ ಸ್ಪರ್ಧೆಯಲ್ಲಿ ಬಹುಮಾನ ರೂಪವಾಗಿ ಬರುವ ಹಣವನ್ನು ಶರೀಫನ ಓದಿಗೆ ಬಳಸಿದರಾಯಿತು ಎಂದು ನಿರ್ಧರಿಸಿದ ಚೆನ್ನಿಗರಾಯನ ಮನಸು, ನೀರಿಗೆ ಬಿದ್ದ ಸುಣ್ಣದ ಕಲ್ಲಿನಂತೆ ಅರಳಿ ಹೂವಾಗಿತ್ತು. ಚಪಾತಿ ತಿನ್ನುವ ಮನಸಾಗಲಿಲ್ಲ. ಲಗುಬಗನೆ ಎದ್ದು, ಬಟ್ಟೆ ಧರಿಸಿದ. ‘ಲೇ, ಲಲಿತಾ ಆಫೀಸಿಗ್ಹೋಗಿ ಇವತ್ತು ರಜೆ ಹಾಕಿ ಬರ‌್ತೀನಿ’ ಎಂದು ಉತ್ತರಕ್ಕೆ ಕಾಯದೇ ಕಚೇರಿಯತ್ತ ದೌಡಾಯಿಸಿದ.
ಹರಕೆಯ ಫಲವೋ ಏನೋ, ಕರುಳಕುಡಿ ಆಗಮನದ ಸಿಹಿಸುದ್ದಿ ಗಂಡನಿಗೆ ಹೇಗೆ ಹೇಳಬೇಕೆಂದು ತೋಚದೇ ನಾಚಿ ನೀರಾಗಿ ಅಡುಗೆ ಮನೆ ಸೇರಿದ್ದ ಸುಲಲಿತಾ, ‘ರೀ ಇಲ್ಲಿ ಕೇಳಿ’ ಎಂದು ಕೂಗುತ್ತ ಬಾಗಿಲ ಬಳಿ ಬರುವಷ್ಟರಲ್ಲಿ ಚೆನ್ನಿಗರಾಯ ಅಷ್ಟು ದೂರ ಹೋಗಿದ್ದ. ಮನೆ ಮುಂದೆ ಹಾದು ಶಾಲೆಗೆ ಹೋಗುತ್ತಿದ್ದ ಮುದ್ದು ಪುಟಾಣಿಗಳನ್ನು ಎವೆಯಿಕ್ಕದೇ ನೋಡುತ್ತ ಹಸನ್ಮುಖಿಯಾಗಿ ನಿಂತ ಸುಲಲಿತಾ, ಬಾಗಿಲ ಮೇಲೆ ಬೆರಳಿನಿಂದ ಚಿತ್ತಾರ ಬಿಡಿಸತೊಡಗಿದಳು.
ಹೊಕ್ರಾಣಿ ವೀರೇಶ ಸೌದ್ರಿ
ತಾ. ಮಸ್ಕಿ
ಜಿ. ರಾಯಚೂರು
ಮೊ.ನಂ. 9632053791
(ಗುವಿವಿ ರಾಜಪುರೋಹಿತ ದತ್ತಿ ಸ್ಮಾರಕ ರಾಜ್ಯ ಮಟ್ಟದ ಕಥಾ ಸ್ಪರ್ಧೆ ಯಲ್ಲಿ ಚಿನ್ನದ ಪದಕ ವಿಜೇತ ಕಥೆ.)