ವೇಷ ಡಂಬಕರ
ಕಳ್ಳಗಂಜಿ ಕಾಡ ಹೊಕ್ಕೊಡೆ ಹುಲಿ ತಿಂಬುದ ಮಾಣ್ಬುದೆ?
ಹುಲಿಗಂಜಿ ಹುತ್ತವ ಹೊಕ್ಕೊಡೆ, ಸರ್ಪವ ತಿಂಬುದ ಮಾಣ್ಬುದೆ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಣ್ಬುದೆ?
ಇಂತೀ ಮೃತ್ಯುವಿನ ಬಾಯ ತುತ್ತಾದ ವೇಷ ಡಂಭಕರನೇನೆಂಬೆ ಗುಹೇಶ್ವರಾ?
-ಅಲ್ಲಮ ಪ್ರಭುಗಳು
ಕಳ್ಳಗಂಜಿ ಕಾಡ ಹೊಕ್ಕೊಡೆ ಹುಲಿ ತಿಂಬುದ ಮಾಣ್ಬುದೆ?
ಮೊದಲಿನ ಕಾಲದಲ್ಲಿ ಸಂತೆಗೆ ಹೋಗಿ ಬರುವ ಜನರು ತಮ್ಮ ಸಂತೆ ಸಾಮಗ್ರಿಗಳನ್ನು ಹೊತ್ತು ಕೊಂಡು ತಮ್ಮ ತಮ್ಮ ಮನೆಗೆ ಹೋಗುವ ಕಾಲು ದಾರಿಯಲ್ಲಿ ಕಳ್ಳರು ಅವರ ಸಾಮಗ್ರಿಗಳನ್ನು ದೋಚಿಕೊಂಡು ಹೋಗುತ್ತಿದ್ದರು .
ಸಂತೆಯ ಸಾಮಗ್ರಿಗಳು ಭವಿಯ ಆಶೆ ಆಮಿಷಗಳು ವಿಷಯಾದಿಗಳು.ಎನ್ನುವದಕ್ಕೆ ಸಾಂಕೇತಿಕವಾಗಿ ಅವುಗಳನ್ನು ಕಸಿದುಕೊಂಡು ಹೋಗುವ ಭೀತಿ ಇನ್ನೊಂದುಕಡೆಗೆ ,ಆ ಕಳ್ಳ ಪುರೋಹಿತ ಪೂಜಾರಿಯಾಗಿರಬಹುದು.
ವಸ್ತು ಪದಾರ್ಥಗಳ ಮೇಲಿನ ವ್ಯಾಮೋಹವನ್ನು ಮನದಲ್ಲಿಟ್ಟುಕೊಂಡು ಪ್ರಾಪಂಚಿಕ ಬದುಕಿಗೆ ಬಳಲುವ ಹಪ ಹಪಿಸುವ ಭವಿ ತನ್ನಲ್ಲಿರುವ ಆಸ್ತಿ ಪದಾರ್ಥಗಳು ಎಲ್ಲಿ ಕಳ್ಳರು ಕಸಿದುಕೊಳ್ಳುವರು ಎಂಬ ಭೀತಿಯಲ್ಲಿ ಆತನು ಕಾಡು ಹೊಕ್ಕು ಮನೆಯನ್ನು ತಲುಪುಬೇಕೆಂದರೆ ಅಲ್ಲಿ ಅವನನ್ನು ಹುಲಿಯು ತಿನ್ನದೇ ಇರುವುದೇ ? ವಿಷಯಾದಿಗಳ ಆಮಿಷಕ್ಕೆ ಒಳಗಾದವನು .ಕಳ್ಳನಿಗೆ ಹೆದರಿ ಕಾಡು ಹೊಕ್ಕರೆ ಅಲ್ಲಿಯೂ ಸಾವಿನ ಭೀತಿ ಇದೆ ಎನ್ನುವದರ ಜೊತೆಗೆ ಕಳ್ಳ ವಸ್ತು ಮತ್ತು ಪದಾರ್ಥಗಳನ್ನು ಮಾತ್ರ ದೋಚಬಲ್ಲ ಆದರೆ ಹುಲಿಯಂತಹ ಕಾಡು ಪ್ರಾಣಿಗಳು ಮನುಷ್ಯನ ಜೀವವನ್ನೇ ಹೊಡೆಯಬಹುದೆಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಅಲ್ಲಮರು.
ಹುಲಿಗಂಜಿ ಹುತ್ತವ ಹೊಕ್ಕೊಡೆ, ಸರ್ಪವ ತಿಂಬುದ ಮಾಣ್ಬುದೆ?
ಹುಲಿಯು ಕೊಲ್ಲಬಹುದೆಂದು ಹುಲಿಯಿಂದ ಮರೆಯಾಗಲು ಹಾವಿನ ಹುತ್ತವ ಹೊಕ್ಕು ಬಚ್ಚಿಟ್ಟುಕೊಂಡರೆ ಅಲ್ಲಿರುವ ಹಾವುಗಳು ಇವನನ್ನು ಕಚ್ಚದೇ ಇರಲು ಸಾಧ್ಯವೇ ? ಹುಲಿಯು ಕೊಲ್ಲವುದೆಂದು ಮಣ್ಣಿನ ಹುತ್ತಿನ ಆಶ್ರಯ ಪಡೆದರೆ ಅಲ್ಲಿರುವ ಸರ್ಪಗಳು ಮನುಷ್ಯನನ್ನು ಕೊಲ್ಲದೆ ಕಚ್ಚದೇ ಇರಲಾರವು. ವಿಷಯು ಆಮಿಷ ಪ್ರಾಪಂಚಿಕ ಬೇಡಿಕೆ ಹೊತ್ತ ಮನುಷ್ಯನನ್ನು ವಿಷಯಾದಿಗಳೇ ಕಾಡುತ್ತವೆ..ಎನ್ನುವುದು ಅಲ್ಲಮರ ಸ್ಪಷ್ಟಅಭಿಪ್ರಾಯವಾಗಿದೆ.
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಣ್ಬುದೆ?
ಪ್ರಾಪಂಚಿಕ ಜಗತ್ತಿನಲ್ಲಿ ಎಲ್ಲ ತಪ್ಪುಗಳನ್ನು ಎಸಗಿ ವಿಲಾಸಿ ಜೀವನ ನಡೆಸಿ ವಾಮ ಮಾರ್ಗದಲ್ಲಿ ಗಳಿಕೆ ಮಾಡಿ ಸಮಯಕ್ಕೆ ತಕ್ಕಂತೆ ಕಾಲಕ್ಕೆ ಅಂಜಿ ತಾವು ಸದ್ಭಕ್ತರು ಸಾಚಾಗಳು ಎಂದೆನಿಸಿಕೊಳ್ಳಲು ಭಕ್ತನ ಪಾತ್ರ ವಹಿಸಿದರೆ ತಾವು ಮಾಡಿದ ಹಿಂದಿನ ಅನೇಕ ಕರ್ಮಠ ಕಾರ್ಯಗಳು ವ್ಯಕ್ತಿಯನ್ನು ತಿನ್ನದೇ ಇಲ್ಲವೇ ? ಎಂದೆನ್ನುತ್ತಾರೆ. ಅನೇಕ ಭ್ರಷ್ಟ ರಾಜಕಾರಣಿಗಳು ಗಣಿ ದೊರೆಗಳು ಹೆಂಡದ ದೊರೆಗಳು ಭೂ ಮಾಫಿಯಾಗಳು ಆನೇಕ ಆಕ್ರಮಗಳನ್ನು ಮಾಡಿ ಜನರಲ್ಲಿ ತಾವು ಮತ್ತೆ ಶ್ರೇಷ್ಠತೆ ಜೇಷ್ಠತೆಯನ್ನು ಸಾಧಿಸಲು ದಾಸೋಹಿಗಳು ದಾನಿಗಳು ಭಕ್ತರು ಎಂದು ವೇಷ ಹಾಕಲು ಮಠಗಳಿಗೆ ದೇವಸ್ಥಾನಕ್ಕೆ ಹಣ ಕನಕ ನೀಡುತ್ತಾರೆ .ಆದರೆ ತಾವು ಮಾಡಿದ ಆಕ್ರಮಗಳ ವಿಚಾರಣೆ ನ್ಯಾಯಾಲಯದ ಮುಂದೆ ಬಂದಾಗ ಅವರನ್ನು ಬಂಧಿಸಿ ಶಿಕ್ಷಿಸಿ ಕೋರ್ಟ್ ಗೆ ಎಳೆದೊಯ್ಯುತ್ತಾರೆ.ತಾವು ಕೋಟಿ ಕೋಟಿ ಹಣದಲ್ಲಿ ದೇವರಿಗೆ ಬೆಳ್ಳಿ ಬಂಗಾರ ಕಿರೀಟ ಮಾಡಿಸಿಕೊಟ್ಟು ಸಾಂಧರ್ಭಿಕ ತಕ್ಕಂತೆ ಭಕ್ತರೆನಿಸಿಕೊಳ್ಳುವ ದಾನಿ ದಾಸೋಹಿಗಳಾದ ಆಕ್ರಮಕಾರರು ತಾವು ಮಾಡಿದ ಕರ್ಮ ಕಾಂಡವು ಅವರನ್ನು ಶಿಕ್ಷೆಗೆ ಗುರಿ ಮಾಡದೇ ಬಿಡಲಾಗದು ಅದುವೇ ಕರ್ಮವು ಅವರನ್ನು ತಿನ್ನುತ್ತದೆ. ಅಪಮಾನ ಆತಂಕ ಮರ್ಯಾದೆ ಕಳೆದುಕೊಳ್ಳುವ ಭೀತಿಯನು ಭಕ್ತರ ಪಾತ್ರ ವಹಿಸಿದವರು ಎದುರಿಸಬೇಕಾಗುತ್ತದೆ.
ಇಂತೀ ಮೃತ್ಯುವಿನ ಬಾಯ ತುತ್ತಾದ ವೇಷ ಡಂಭಕರನೇನೆಂಬೆ ಗುಹೇಶ್ವರಾ?
ಹೀಗೆ ಪ್ರಾಪಂಚಿಕ ಆಶೆ ಆಮಿಷದ ಒಡಲಿಗೆ ಬಳಲುವ ಮತ್ತು ಮೃತ್ಯುವಿನ ಬಾಯಿಗೆ ತುತ್ತಾಗುವ ಭವಿಗಳು ಭಕ್ತರ ವೇಷ ಹಾಕಿಕೊಳ್ಳುವ ಡಂಬಕರು. ಇಂತಹ ವೇಷಧಾರಿಗಳನ್ನು ಕಪಟ ನಾಟಕ ಮಾಡುವ ಪಾತ್ರಧಾರಿಗಳನ್ನು ನಂಬಲಾಗದು.
ಸಾವಿಗೆ ಭಯ ಪಡುವ ವಿಷಯಾದಿ ವ್ಯಾಮೋಹಕ್ಕೊಳಗಾಗುವ ಸಾವಿನಾ ದವಡೆಗೆ ಸಿಲುಕುವ ಭೀತಿ ಇರುವವರು ಪಾರಮಾರ್ಥಿಕ ಮೌಲ್ಯಗಳನ್ನು ಹೇಗೆ ಅರಿಯಬಲ್ಲರು.? ಆಧ್ಯಾತ್ಮಿಕ ನಿಷ್ಪತ್ತಿಯ ಉದಾತ್ತ ಅನುಭಾವ . ವಿಷಯಾದಿಗಳನ್ನು ಹೊರತು ಪಡಿಸಿ ಸುಂದರ ಸ್ವಚ್ಛ ಮುಕ್ತ ಬದುಕನು ಕಲ್ಪಿಸುವ ಸಾಧನ . ನಡೆನುಡಿಯಲಿ ಏಕತೆ ಸಮನ್ವಯತೆ ಇರದ ವೇಷ ಡಂಭಕರನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ ಅಲ್ಲಮ ಪ್ರಭುಗಳು.
–ಡಾ.ಶಶಿಕಾಂತ.ಪಟ್ಟಣ ರಾಮದುರ್ಗ