ಅಕ್ಕನ ದಿಟ್ಟ ನಿಲುವು

ಅಕ್ಕನ ದಿಟ್ಟ ನಿಲುವು


ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯದ ಕ್ರಾಂತಿ ಜಗತ್ತಿನ ಯಾವ ದೇಶ ಧರ್ಮಗಳಲ್ಲಿ ಕಂಡು ಬರುವುದಿಲ್ಲ. ನೂರಾರು ಶರಣರು ಒಂದೆಡೆಗೆ ಒಂದೇ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ವಚನಗಳ ಮುಖಾಂತರ ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ, ನೈತಿಕ, ಮನೋವೈಜ್ಞಾನಿಕ, ಶೈಕ್ಷಣಿಕ, ವೈಜ್ಞಾನಿಕ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿರುವುದು ಸಾಮಾನ್ಯದ ಮಾತಲ್ಲ.

ಶರಣರ ವಚನಗಳೆಲ್ಲವೂ ಸರ್ವಕಾಲಿಕ ಸತ್ಯ ಮತ್ತು ನಿತ್ಯನೂತನ ಆಗಿರುತ್ತವೆ.ಕೆಲವು ವಚನಗಳು ಅರ್ಥೈಸಿಕೊಳ್ಳಲು ಅತೀ ಸರಳವೆಂದೆನಿಸಿದರೆ, ಇನ್ನು ಕೆಲವು ಕಠಿಣವೆನಿಸಿದರೆ ಬೆಡಗಿನ ವಚನಗಳು ಅತೀ ಕ್ಲಿಷ್ಟ ಎನಿಸುತ್ತವೆ.

ಚಿಲಿ ಮಿಲಿ ಎಂದೋದುವ ಗಿಳಿಗಳಿರಾ,ನೀವು ಕಾಣಿರೆ, ನೀವು ಕಾಣಿರೆ? ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ?ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಕೊಳನ ತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಗಿರಿಗಂಹ್ವರದೊಳಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಚೆನ್ನಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ನೀವು ಹೇಳಿರೆ?

ಮೇಲು ನೋಟಕ್ಕೆ ಈ ವಚನ ಅಕ್ಕಮಹಾದೇವಿ ಗಿಳಿ, ಕೋಗಿಲೆ, ದುಂಬಿಗಳಿಗೆ, ಹಂಸ, ನವಿಲುಗಳಿಗೆ ಚೆನ್ನಮಲ್ಲಿಕಾರ್ಜುನ ಎಲ್ಲಿರುವೆನೆಂದು ಕೇಳಿರುವ ಪ್ರಶ್ನೆಯಂತೆ ಸಾಮಾನ್ಯ ಅರ್ಥದಲ್ಲಿ ಕಂಡುಬರುತ್ತದೆ. ಅರಣ್ಯದ ಪಕ್ಷಿಗಳಿಗೆಲ್ಲ ಗೋಚರನಾಗಿ ನನಗೆ ಮಾತ್ರ ಅಗೋಚರನಾಗಿ ಕಷ್ಟ ಕೊಡುವುದು ನ್ಯಾಯವೇ ಚೆನ್ನಮ್ಮಲ್ಲಿಕಾರ್ಜುನ ಎಂದು ಸಾಮಾನ್ಯ ಅರ್ಥದಲ್ಲಿ ತಿಳಿದುಕೊಳ್ಳುತ್ತೇವೆ. ಆದರೆ ವಚನದಲ್ಲಿ ಅಕ್ಕನು ನೇರವಾಗಿ ಜನರನ್ನು ಮೌಢ್ಯರನ್ನಾಗಿಸಿದವರಿಗೆ ಹಾಕಿರುವ ಪ್ರಶ್ನೆ ಇದಾಗಿದೆ.

ಚಿಲಿಮಿಲಿ ಎಂದೋದುವ ಗಿಳಿಗಳಿರಾ
ವೇದ,ಶಾಸ್ತ್ರ, ಉಪನಿಷತ್ತುಗಳನ್ನು ತಲತಲಾಂತರದಿಂದ ಓದಿಕೊಂಡು ಬಂದಿರುವ ಪಂಡಿತರಿಗೆ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ಎಲ್ಲಿದ್ದಾನೆ ಎಂದು ಹೇಳಬಲ್ಲಿರಾ? ಎಂದು ಪ್ರಶ್ನಿಸುತ್ತಾಳೆ. ಕೇವಲ ಕಂಠಪಾಠ ಮಾಡಿ ವ್ಯರ್ಥ ಸಮಯ ಕಳೆಯುವವರಿಗಾಗಿ ಬುದ್ಧಿ ಮಾತು ಹೇಳುತ್ತಾಳೆ.

ಸರವೆತ್ತಿ ಪಾಡುವ ಕೋಗಿಲೆಗಳಿರಾ
ದೇವರ ಕೀರ್ತನೆ, ಭಜನೆ,  ಕಥೆಗಳನ್ನು ಹಾಡುಗಳ ಮುಖಾಂತರ ಹೇಳುತ್ತಾ ಜನರಲ್ಲಿ ಅಜ್ಞಾನ ತುಂಬುತ್ತಿರುವವರಿಗೆ ಚೆನ್ನಮಲ್ಲಿಕಾರ್ಜುನ ಎಲ್ಲಿದ್ದಾನೆ ಎಂದು ಹೇಳಬಲ್ಲಿರಾ ಎಂದು ಪ್ರಶ್ನಿಸುತ್ತಾಳೆ.ಇಲ್ಲಿ ದೇವರ ಸ್ತುತಿ ಪದ್ಯ, ಪ್ರಾರ್ಥನೆ ಮಾಡಿದರೇನು ಫಲ? ಹಾಡು ಆತ್ಮ ತೃಪ್ತಿಗೆ ವಿನಃ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಎರಗಿ ಬಂದಾಡುವ ತುಂಬಿಗಳಿರಾ
ವೇದ, ಶಾಸ್ತ್ರ, ಪುರಾಣ, ಉಪನಿಷತ್ತುಗಳನ್ನು ಓದಿಕೊಂಡು ವಾದ, ಚರ್ಚೆ, ಸವಾಲು ಎಸುಗುವ ಪಂಡಿತರಿಗೆ ಕೇಳಿದ ಪ್ರಶ್ನೆ ಇದಾಗಿದೆ. ವಾದ ಮಾಡುವ ಪಂಡಿತರು ತುಂಬಿ ಅಥವಾ ದುಂಬಿಗಳಂತೆ ಆಗಾಗ ಬಂದು ವಾದ ಮಾಡುತ್ತಾರೆ ವಿನಃ ದೃಢವಾಗಿ ನಿಲ್ಲಲಾರರು.ಅಲ್ಪಸ್ವಲ್ಪ ತಿಳಿದುಕೊಂಡದ್ದನ್ನು ಹೇಳುತ್ತಾರೆ.ಪ್ರತಿವಾದಿ ಪ್ರಬಲವಾದರೆ ಓಡಿ ಹೋಗುತ್ತಾರೆ.

ಕೊಳನ ತಡಿಯೊಳಾಡುವ ಹಂಸಗಳಿರಾ
ವೇದದ ಮಂತ್ರಘೋಷಗಳನ್ನು ಹೇಳುತ್ತಾ ಮಡಿ, ಮಡಿವಂತಿಕೆಯಿಂದ ಸದಾ ನೀರಿನಲ್ಲಿ ಸ್ನಾನ ಮಾಡುತ್ತಾ ಹೆಚ್ಚು ಸಮಯವನ್ನು ನೀರಿನಲ್ಲಿ ಕಳೆಯುವಂತಹ ಸಂನ್ಯಾಸಿಗಳಿಗೆ, ಅರ್ಚಕರಿಗೆ ಪ್ರಶ್ನೆ ಹಾಕುತ್ತಾಳೆ.ಇಲ್ಲಿ ಅಪ್ಪ ಬಸವಣ್ಣನವರ ವಚನ ನೆನಪಿಗೆ ಬರುತ್ತದೆ.
ಎಣಿಸು ಕಾಲ ಕಲ್ಲು ನೀರೊಳಗಿದ್ದಡೇನು? ನೆನೆದು ಮೃದುವಾಗಬಲ್ಲುದೆ? ಎಣಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ, ಮನದಲ್ಲಿ ಧೃಢವಿಲ್ಲದನ್ನಕ್ಕ? ಎನ್ನುವಂತೆ ಕೇವಲ ಮಡಿ ಮೈಲಿಗೆ ಎನ್ನುವ ಅರ್ಚಕರ ಕುರಿತು ಹೇಳಿದ್ದಾಳೆ

ಗಿರಿಗಂಹ್ವರದೊಳಾಡುವ ನವಿಲುಗಳಿರಾ
ದೇವರನ್ನು ಸಾಕ್ಷಾತ್ಕಿರಿಕೊಳ್ಳಲು ದೀರ್ಘಕಾಲದ ತಪಸ್ಸು ಮಾಡುವ ಋಷಿ, ಮುನಿಗಳಿಗೆ ಪ್ರಶ್ನಿಸುತ್ತಾಳೆ.
ಇಲ್ಲಿ ನವಿಲಿನ ಗರಿಗಳಂತೆ ಉದ್ದನೆಯ ಗಡ್ಡ, ಜಡೆ ಬಿಟ್ಟುಕೊಂಡು ತಪಸ್ಸು ಮಾಡುವವರಿಗಾಗಿ ತಾಯಿ ಪ್ರಶ್ನೆ ಕೇಳುತ್ತಾಳೆ.
ಈ ವಚನದಲ್ಲಿ ಅಕ್ಕಮಹಾದೇವಿಯು ಉಪಮೇಯ ಉಪಮಾನಗಳೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ದಿಟ್ಟವಾಗಿ ಢಾಂಬಿಕರನ್ನು ಪ್ರಶ್ನಿಸಿರುವುದು ಕಂಡುಬರುತ್ತದೆ.

-ರವೀಂದ್ರ. ಆರ್. ಪಟ್ಟಣ
ಮುಳಗುಂದ-ರಾಮದುರ್ಗ

Don`t copy text!