ಅಕ್ಕನೆಡೆಗೆ- ವಚನ – 41
ಶರಣಾಗತ ಭಾವದೊಂದಿಗೆ
ಎನ್ನ ನಾಲಗೆಗೆ ಬಪ್ಪರುಚಿ ನಿಮರ್ಗಪಿತ
ಎನ್ನ ನಾಸಿಕಕೆ ಬಪ್ಪಪರಿಮಳ ನಿಮರ್ಗಪಿತ
ಎನ್ನ ಕಾಯಕ್ಕೆ ಬಪ್ಪ ಸುಖ ನಿಮರ್ಗಪಿತ
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮಗರ್ಪಿಸದ ಮುನ್ನ ಮುಟ್ಟಲ್ಲಮ್ಮೆನಯ್ಯಾ
ಅಕ್ಕಮಹಾದೇವಿಯ ವಚನಗಳ ಆಳ ಅಧ್ಯಯನ ಮಾಡಿದಂತೆಲ್ಲಾ ಅವಳ ಹಸಿವು, ಹುಡುಕಾಟ, ಗಮ್ಯ, ಪರಿಪೂರ್ಣತೆ, ನಿವೇದನೆ, ಆತ್ಮಸಾಕ್ಷಿ ಮುಂತಾದವುಗಳೆಲ್ಲಾ ಅನಾವರಣವಾಗುತ್ತ ಹೋಗುತ್ತದೆ. ಮೇಲಿನ ವಚನವನ್ನು ಇಡಿಯಾಗಿ ಅವಲೋಕಿಸಿದರೆ, ಅಲ್ಲಿ “ಸಮರ್ಪಣಾಭಾವ” ಇರುವುದನ್ನು ಅಮೂಲಾಗ್ರವಾಗಿ ಗ್ರಹಿಸುತ್ತವೆ. ಎಲ್ಲವನ್ನೂ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿಸುತ್ತಾಳೆ.
ಅಕ್ಕ ತನ್ನ ನಾಲಿಗೆಗೆ ಬರುವ ರುಚಿ, ಮೂಗಿಗೆ ಬರುವ ಸುವಾಸನೆ, ದೇಹಕ್ಕೆ ಬರುವ ಸುಖ, ಎಲ್ಲವೂ ಮೊದಲು ಅವನಿಗೆ ಅರ್ಪಿತ ಎಂದು ಹೇಳುವ ಭಾವ ಇಲ್ಲಿದೆ. ಯಾವತ್ತೂ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿಸದೆ ತಾನು ಎನನ್ನೂ ಮುಟ್ಟುವುದಿಲ್ಲ ಎಂದು ದೃಢವಾಗಿ ಸಂಕಲ್ಪಿಸಿ ಹೇಳುತ್ತಾಳೆ.
ಒಟ್ಟಾರೆ ತನ್ನ ದೇಹ. ಮನಸು ಮತ್ತು ಭಾವನೆಗಳು, ಅನುಭವಿಸುವ ಪ್ರತಿಯೊಂದನ್ನೂ ಅರ್ಪಿಸುವುದೆಂದರೆ ವ್ಯಕ್ತಿ ತನ್ನನ್ನು ತಾನು ಶರಣಾಗತಗೊಳಿಸುವುದು. ಅಂದರೆ ತನ್ನನ್ನು ತಾನು ಬಿಟ್ಟುಬಿಡುವುದು ಎಂದರ್ಥ. ಹಾಗೆ ಬಿಟ್ಟುಕೊಡುವುದರೊಂದಿಗೆ ಎದುರಿಗಿದ್ದವರಿಗೆ ಒಪ್ಪಿಸುವುದು ಎಂದಾಗುತ್ತದೆ.
ಅಕ್ಕನಿಗೆ ಇಷ್ಟೊಂದು ನಿಷ್ಠೆಯಿಂದ, ಆತ್ಮವಿಶ್ವಾಸದಿಂದ, ಸಮರ್ಣಾಭಾವದಿಂದ ಶರಣಾಗತಳಾಗಲು ಹೇಗೆ ಸಾಧ್ಯ? ಎಂದು ಆಲೋಚಿದರೆ, ಅಕ್ಕನದೇ ಇನ್ನೊಂದು ವಚನ ಸಾಕ್ಷಿ. ಅವಳಲ್ಲಿ ಸಮರ್ಪಣಾಭಾವ ಮೂಡುವುದಕ್ಕೆ ಮುಂಚಿತವಾಗಿ ಮಾಡಿದ್ದು ಈ ಕೆಳಗಿನ ವಚನದಿಂದ ತಿಳಿದುಬರುತ್ತದೆ.
ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ
ಮಾಡಿಯೂ ಮಾಡದಂತಿಪ್ಪೆ ನೋಡಾ
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ!
ಪೂರಕವಾದ ಮೇಲಿನ ವಚನದಿಂದ ಅಕ್ಕನ ಇರುವಿಕೆ ತಿಳಿಯುತ್ತದೆ. ಅವಳ ದೈನಂದಿನ ಕ್ರಿಯೆಯನ್ನು ಗ್ರಹಿಸಬಹುದು. ಶರಣರನ್ನು ಸೇರಿದ ನಂತರ ಅವಳಿಗೆ ಒಲಿದ ಲಿಂಗಪೂಜೆ ವಿಧಾನ, ಲಿಂಗವನ್ನು ಪ್ರೀತಿಸುವ ಬಗೆ, ಲಿಂಗದಲ್ಲೇ ಮೈಮರೆಯುವ ಕಲೆ, ಲಿಂಗವೇ ತಾನಾಗುವ ಗಮ್ಯ ಎಲ್ಲವೂ ಅವಿನಾಭಾವ, ಅನನ್ಯ. ಇದೆಲ್ಲದರ ಫಲಶ್ರುತಿಯೇ ಲಿಂಗಾಂಗ ಸಾಮರಸ್ಯ!
ಈ ವಚನದಂತೆಯೇ ಇರುವ ಅಮುಗೆ ರಾಯಮ್ಮನ ವಚನ ಬಹಳ ನೇರವಾಗಿದೆ.
‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲಲೊಳಗಿನ ಮುಳ್ಳ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು’
ಒಟ್ಟಾರೆ ಹೇಳಬೇಕೆಂದರೆ, ನನ್ನೊಳಗಿನ ನಾನು ಅಳಿಯುವ ಪ್ರಕ್ರಿಯೆಯನ್ನು ಈ ವಚನ ಬಿಂಬಿಸುತ್ತದೆ. ಅಕ್ಕ ವೈಯಕ್ತಿಕ ನೆಲೆಯಲ್ಲಿ, ಬಹಳ ಸಮಾಧಾನಕರವಾಗಿ, ಕಾವ್ಯಾತ್ಮಕವಾಗಿ ಮಾಡಿರುವ ಸುಂದರ ನಿರೂಪಣೆ. ಅಕ್ಕನ ಇಂತಹ ವಚನಗಳು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ವ್ಯಕ್ತಿತ್ವ ವಿಕಾಸವಾಗುವಂತೆ ಪರಿಣಾಮ ಬೀರುತ್ತವೆ.
‘ನಾನು‘ ಎನ್ನುವ ಅಹಂಭಾವ ಅಳಿಯಬೇಕಾದರೆ, ಮೊದಲ ಹಂತದಲ್ಲಿ ಅರಿಷಡ್ವರ್ಗಗಳನ್ನು ಮೀರಿ ಬೆಳೆಯ ಬೇಕಾಗುತ್ತದೆ. ಪ್ರಾಥಮಿಕವಾಗಿ ಮನುಷ್ಯನನ್ನು ಕಾಡುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಇನ್ನಿಲ್ಲದಂತೆ ಆಕ್ರಮಿಸಿರುತ್ತವೆ. ಅವುಗಳಿಂದ ಬಿಡುಗಡೆ ಹೊಂದುವುದು ಅಕ್ಕನಿಗೂ ಸುಲಭವಿರಲಿಲ್ಲ, ಇನ್ನೂ ಸಾಮಾನ್ಯರಾದ ನಾವು ಬಹಳ ದೂರ ಇದ್ದೇವೆ. ಶರಣ ಸಾಹಿತ್ಯದ ಓದು, ಬರಹ, ಅರಿಯುವಿಕೆ, ಅಳವಡಿಕೆ ನಮ್ಮ ಜೀವನ ಶೈಲಿಯ ಮಟ್ಟವನ್ನು ಕಿಂಚಿತ್ತಾದರೂ ಎತ್ತರಿಸಬಹುದು. ಬನ್ನಿ ಪ್ರಯತ್ನಿಸೋಣ…
ಸಿಕಾ