ಸಂಗ್ರಾಮ ಸಾಹಸಿ ಗಂಗಾ0ಬಿಕೆ
ಶರಣೆ ಗಂಗಾ0ಬಿಕೆ ಮಹಾನುಭಾವ ಬಸವಣ್ಣನವರ ಹಿರಿಯ ಪತ್ನಿಯಾಗಿರು ವುದರಿಂದ ಆಕೆಯ ಕಾಲ, ದೇಶ
ಮೊದಲಾದವುಗಳ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲವೆನಿಸುತ್ತದೆ. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರ ದಾಸೋಹ ಕಾರ್ಯ ದೊಡ್ಡ ಪ್ರಮಾಣದಲ್ಲಿ ಪ್ರಥಮ ಬಾರಿಗೆ ಬಸವಣ್ಣನವರಿಂದಲೇ ನಡೆದಿರುವುದರಿಂದ ಅದನ್ನುಭಕ್ತಿ -ನಿಷ್ಠೆಗಳಿಂದ ಆಗು ಮಾಡಿದಅವರ
ಪತ್ನಿ ಗಂಗಾ0ಬಿಕೆಯೇ ದಾಸೋಹದ ಗಂಗೋತ್ರಿ ಎಂದು ಭಾವಿಸಬೇಕಾಗುತ್ತದೆ. ಒಬ್ಬ ಮಂತ್ರಿಯಮಗಳಾಗಿಯೂ
ರಾಜ ವೈಭವದಲ್ಲಿ ಬಾಲ್ಯವನ್ನು ಕಳೆದವಳಾಗಿಯೂ ಮುಂದೆ ವೈವಾಹಿಕ ಜೀವನದಲ್ಲಿಯೂ ಮಂತ್ರಿ ಪತಿಯನ್ನೇ ಪಡೆದಿದ್ದರೂ ಹಸಿದವರಿಗುಣಬಡಿಸುವ
ಸೇವಾ ಕಾರ್ಯವನ್ನು ತತ್ಪರತೆಯಿಂದ ಸಾಗಿಸಿದ್ದುದು ಗಂಗಾoಬಿಕೆಯ ವಾತ್ಸಲ್ಯಪೂರ್ಣ ವ್ಯಕ್ತಿತ್ವವೆಂದು ನಂಬ ಬೇಕಾಗುತ್ತದೆ.
ಗಂಗಾ0ಬಿಕೆ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದು ಕೊಂಡು ತಂದೆ ಬಲದೇವರಸ ಮತ್ತು ದೊಡ್ಡಪ್ಪ-ದೊಡ್ಡಮ್ಮ ಸಿದ್ಧರಸ-ಪದ್ಮಮ್ಮರ ಪ್ರೀತಿಯ ಆರೈಕೆಯಲ್ಲಿಬೆಳೆದಳು. ತನ್ನ ಮಗಳ ಮೇಲಿನ ವಿಶೇಷ ಮಮತೆಯಿಂದ ಬಲದೇವರಸ ಎರಡನೆಯ ವಿವಾಹವನ್ನೇ ಮಾಡಿಕೊಳ್ಳಲಿಲ್ಲ. ತನ್ನ ಏಕಮಾತ್ರ ಪುತ್ರಿ ಗಂಗಾಬಿಕೆಯೇ ತನಗೆ ಹೆಣ್ಣು ಸಂತಾನವೂ ಹೌದು, ಗಂಡು ಸಂತಾನವೂ
ಹೌದು ಎಂದು ಸರಿಯಾದ ಅಕ್ಷರಾಭ್ಯಾಸ , ತಕ್ಕದಾದ ಶಸ್ತ್ರವಿದ್ಯೆ, ಅಗತ್ಯವಾದ ಅಶ್ವಾರೋಹಣ ಮೊದಲಾದ ಯುದ್ಧ ಕಲೆಯನ್ನೂ ಕಲಿಸಿದನು.
ದೊಡ್ಡಮ್ಮ ಪದ್ಮಮ್ಮಳಿಗೆ ಇನ್ನೂ ನೀಲಾ0ಬಿಕೆ ಹುಟ್ಟಿರದಿದ್ದರಿಂದ ಮಾತೃಪ್ರೇಮವನ್ನೆಲ್ಲ ಅವಳು ತನ್ನ ನೆಗೆಣ್ಣಿಯ ಮಗಳಾದ ಗಂಗಮ್ಮಳ ಮೇಲೆಯೇ ಹರಿಯಿಸಿದ್ದಳು.
ಗಂಗಮ್ಮಳು ಒಂದೆರಡು ವರ್ಷ ತನ್ನ ಮಡಿಲಲ್ಲಿ ಆಡಿದ ಬಳಿಕವೇ ತಾನು ಗರ್ಭಧರಿಸಿದ್ದರಿಂದ ಪದ್ಮಮ್ಮಳು ಆಕೆಯ ಕಾಲ್ಗುಣದಿಂದ ಧನ್ಯತೆಯನ್ನನುಭವಿಸಿ ಎಲ್ಲಿಲ್ಲದ
ಪ್ರೀತಿವಾತ್ಸಲ್ಯಗಳನ್ನು ಗಂಗಾ0ಬಿಕೆಯ ಮೇಲೆ ತೋರುತ್ತಿದ್ದಳು. ಹೀಗಾಗಿ ಗಂಗಾ0ಬಿಕೆ ಮತ್ತು ನೀಲಾ0ಬಿಕೆ ದೊಡ್ಡವರಾಗುವವರೆಗೆ ಎರಡು ದೇಹ ಮತ್ತು ಒಂದು ಆತ್ಮ ಎಂಬ0ತೆ ಆಟವಾಡಿಕೊಂಡಿದ್ದರು. ಒಬ್ಬರಿಗೆ ನೋವಾದರೆ
ಇನ್ನೊಬ್ಬರ ಕಣ್ಣುಗಳಲ್ಲಿ ಅಶ್ರುಗಳು ಸುರಿಯುತ್ತಿದ್ದವು
ಗಂಗಾ0ಬಿಕೆಗೆ ವಿವಾಹಯೋಗ್ಯ ವಯಸ್ಸು ಪ್ರಾಪ್ತವಾದ ಕೂಡಲೇ ಬಲದೇವರಸರಿಗೆ ಮೊದಲು ನೆನಪಿಗೆ ಬಂದ ವರನೆಂದರೆ ತಮ್ಮ ಏಕಮಾತ್ರ ತಂಗಿ ಮಾದಲಾ0ಬಿಕೆಯಹಿರಿಯ ಸುಪುತ್ರ ಬಸವರಸನೇ ಉಪನಯನ
ಸಮಾರಂಭಕ್ಕೆ ಬಾಗೇವಾಡಿಗೆ ಹೋದಾಗ ಬಸವಣ್ಣನ ತರ್ಕ-ನಿರ್ಭಿಡೆಯ ಪ್ರಖರ ವಿಚಾರಧಾರೆಗೆ ಮಾರುಹೋದ ಬಲದೇವರಸ ಕೂಡಲಸಂಗಮದಲ್ಲಿನ ಆತನ ವಿದ್ಯಾರ್ಥಿ ಜೀವನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.
ಬಸವಣ್ಣನ ಭಕ್ತಿ, ಜ್ಞಾನ, ಚಿಂತನ, ಆಧ್ಯಾತ್ಮಿಕತೆಗಳು ಅತ್ಯಂತ ಅಭಿಮಾನ ಮೂಡಿಸಿದ್ದವು. ಮನೆತನದ ಗುರು ಈಶಾನ್ಯ ಗುರುಗಳು ಮತ್ತು ವಿದ್ಯಾಗುರು ಜಾತವೇದ ಮುನಿಗಳನ್ನು ಮೊದಲು ಸಂಪರ್ಕಿಸಿ ಬಸವಣ್ಣನನ್ನು ಮನೆ ಅಳಿಯನನ್ನಾಗಿ ಒಪ್ಪಿಸುವಲ್ಲಿ ಯಶಸ್ವಿಯಾದನು.
ಹಿರಿಯರಾದ ಸಿದ್ಧರಸರು ಮತ್ತು ಸ್ವತಃ ದೊರೆ ಬಿಜ್ಜಳ ಸಡಗರದಿಂದ ಓಡಾಡಿ ವಿವಾಹವನ್ನು ‘ ನ ಭೂತೋ ನ ಭವಿಷ್ಯತೆ ‘ ಎಂಬಂತೆ ನೆರವೇರಿಸಿದರು.
ಮಂಗಳವಾಡದಲ್ಲಿಯೇ ಬಸವಣ್ಣನವರು ತಮ್ಮ ಸ್ವತ0ತ್ರ ಪ್ರವೃತ್ತಿಯನ್ನು ಪ್ರಕಟಿಸದೆ ಬಿಡಲಿಲ್ಲ. ಉಂಡುಟ್ಟು ವಿಲಾಸದಿಂದ ಮಂತ್ರಿ ಮಾವನ ಮನೆಯಲ್ಲಿರಲು ತಯಾರಾಗಲಿಲ್ಲ. ಬಸವಣ್ಣನ ಇಂಗಿತ ತಿಳಿದ ರಾಜ್ಯಾಧಿಕಾರಿ ಸೊಡ್ದಳ ಬಾಚರಸರು ಲೆಕ್ಕ ವಿಭಾಗದಲ್ಲಿ ಹುದ್ದೆಯೊಂದನ್ನು ಸೃಷ್ಟಿಸಿ ಬಸವಣ್ಣನವರಿಗೆ ಆದಾಯ ಮೂಲ ಕಲ್ಪಿಸಿಕೊಟ್ಟರು. ತನ್ನ ಪತಿಯ ಪ್ರತ್ಯೇಕ ಮನೆಯಲ್ಲಿಯೇ
ಗಂಗಾ0ಬಿಕೆಯ ದಾಸೋಹಕಾರ್ಯ ಆರಂಭವಾಯಿತು.
ಮುಂದೆ ನಾಲ್ಕೈದು ವರ್ಷಗಳಲ್ಲಿಯೇ ಬಿಜ್ಜಳ
ಮಂಗಳವಾಡದಲ್ಲಿರುವಾಗಲೇನೇ ಸಿದ್ಧರಸರು ಮತ್ತು ಬಲದೇವರಸರು ಪರ0ಧಾಮಗೈದರು. ಸಿದ್ಧರಸರ ಪತ್ನಿ ಪದ್ಮಮ್ಮ ಮತ್ತು ಮಗಳು ನೀಲಾ0ಬಿಕೆಯನ್ನು ಬೇರೆ ಮನೆಯಲ್ಲಿ ವ್ಯವಸ್ಥೆ ಮಾಡದೆ ಬಿಜ್ಜಳ ತನ್ನ ಅರಮನೆಯಲ್ಲಿಯೇ ಇರಿಸಿಕೊಂಡಿದ್ದನು.
ಸೋದರತ್ತೆ ಪದ್ಮಮ್ಮಮತ್ತು ಚಕ್ರವರ್ತಿ ಬಿಜ್ಜಳನಜಂಟಿ ಹಿತವಚನಗಳಿಗೆ ಕಟ್ಟು ಬಿದ್ದು ಬಸವಣ್ಣನವರು ನೀಲಾ0ಬಿಕೆಯನ್ನೂ ವರಿಸಬೇಕಾಯಿತು. ಪದ್ಮಮ್ಮಳ ತ್ಯಾಗ-ಮಮತಾ ಜೀವನದಿಂದ ಬಸವಣ್ಣನವರು ಬಹಳ
ಪ್ರಭಾವಿತರಾಗಿದ್ದರು. ಇದರಿಂದ ಗಂಗಾ0ಬಿಕೆಗೆ ಅಧಿಕ ಖುಷಿಯೇ ಆಗಿತ್ತು.
ಕಲ್ಯಾಣ ಕ್ರಾಂತಿಯ ನಂತರ ತನಗೆ ಯುದ್ಧಕಲೆ ಗೊತ್ತಿದ್ದುದರಿಂದ ಗಂಗಾ0ಬಿಕೆ ವಚನ ಸಾಹಿತ್ಯ ರಕ್ಷಣೆಯ ಶರಣ ಸೇನೆಯೊಡನೆ ಕೂಡಿಕೊಂಡಳು.
ಈಗಿನ ಧಾರವಾಡ ಸಮೀಪದ ಕಾದರವಳ್ಳಿಯ ಹತ್ತಿರ ವೀರತನದಿಂದ ಕಾದಾಡಿ ವೀರಸ್ವರ್ಗವನ್ನು ಪಡೆದಳು. ಗಂಗಾ0ಬಿಕೆಯ
ಸಮಾಧಿ ಘಟಪ್ರಭಾ ನದಿಯ ದಂಡೆಯ ಮೇಲಿದೆ. ಘಟಪ್ರಭಾ ನೀರು ಸಂಗಮ ಮತ್ತು ತಂಗಡಿಗೆಯನ್ನುಸೇರುತ್ತದೆ.ಗಂಗಾ0ಬಿಕೆಯಹೆಸರಿನಲ್ಲಿ ಕೇವಲಒಂಬತ್ತು ವಚನಗಳು ಸಿಕ್ಕಿವೆ. ಆಕೆಯವಚನಾ0ಕಿತ “ಗಂಗಾಪ್ರಿಯ
ಕೂಡಲಸಂಗಮದೇವ”
ವಚನ ವಿಶ್ಲೇಷಣೆ
ಪತಿಯಾಜ್ಞೆಯಲ್ಲಿ ಚರಿಪ ಸತಿಗೇಕೆ ಪ್ರತಿಜ್ಞೆಯು
ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ
ಇವಳ ಲಿಂಗ ನಿಷ್ಠೆ ಇವಳಿಗೆ
ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ
ಗಂಗಾಪ್ರಿಯ ಕೂಡಲ ಸಂಗಮದೇವ !
ಪ್ರಸ್ತುತ ವಚನದಲ್ಲಿ ತನ್ನ ತಂಗಿ ನೀಲಾ0ಬಿಕೆಗಿಂತ ಭಿನ್ನವಾದ ನಿಲುವನ್ನು ತಾನು ತಾಳಿದ ವಿಚಾರವನ್ನು ಗಂಗಾ0ಬಿಕೆ ಪ್ರಸ್ತಾಪಿಸುತ್ತಿದ್ದಾಳೆ. ಗಂಗಾ0ಬಿಕೆ ಬಹಳ ಸೌಮ್ಯ ಸ್ವಭಾವದವಳು. ಪತಿಯಾಜ್ಞಾಧಾರಕಳು. ಹೆಚ್ಚು ಜಂಜಾಟಗಳಲ್ಲಿ ತೊಡಗಿಸಿಕೊಂಡವಳಲ್ಲ. ಹುತ್ತುಹಾವಿಗೆ ಚೆಂದ, ಮುತ್ತು ಮೂಗಿಗೆ ಚೆಂದ, ಸತಿಗೆ ಪಾತಿವೃತ್ಯವೇ
ಚೆಂದ ಎನ್ನುವಂತೆ ಪತಿಯನುಸರಣೆಯಾಗಿಹೋಗುವುದರಲ್ಲಿಯೇ ನೆಮ್ಮದಿಯನ್ನುಕಂಡವಳು. ಮಹಾಮನೆಯಲ್ಲಿ
ದಾಸೋಹ ಕಾರ್ಯವನ್ನು ನಿಭಾಯಿಸಬೇಕು ಎಂದು ಆಜ್ಞೆಯಾದರೆ ಅದರಲ್ಲಿಯೇ ಸಂತೃಪ್ತಳು. ಅನುಭವ ಮಂಟಪದ ಗೋಷ್ಠಿಯಲ್ಲಿ ಭಾಗವಹಿಸಬಹುದುಎಂದು
ತಿಳಿಸಿದಾಗಲೇ ಆ ಕಡೆ ಅಭಿರುಚಿ ತೋರುವವಳು. ಒಟ್ಟಿನಲ್ಲಿ ಪತಿಗೆ ಅನುಕೂಲೆಯಾಗಿ ಹೋಗಬೇಕೆಂಬುದೇ
ಗಂಗಾ0ಬಿಕೆಯರ ಜೀವನಧ್ಯೇಯ.
ಬಸವಣ್ಣನವರು ಕೂಡಲಸಂಗಮಕ್ಕೆ ಬರಬೇಕೆಂದು ನಿರೂಪ ಕಳಿಸಿದಾಗ ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ ಎಂದು ತಮ್ಮ ಲಿಂಗ ನಿಷ್ಠೆಯನ್ನು ತೋರಿದ ನೀಲಾ0ಬಿಕೆಯರ ನಿಲುವು ಗಂಗಾ0ಬಿಕೆಯರಿಗೆ ಒಪ್ಪಿಗೆಯಾಗುವುದಿಲ್ಲ.
ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವ0ಗೆ ಎಂದು ಹಿರಿಯರು ಹೇಳಿರುವಾಗ ಪತಿಯಾಜ್ಞೆಯನ್ನು ಮೀರುವುದು ವಿಹಿತವೇ ಎಂಬ ಪ್ರಶ್ನೆ ಗಂಗಾ0ಬಿಕೆಯವರದು.
ಗಂಗಾ0ಬಿಕೆಯರ ಬಾಳ ನೀತಿಯೇನೆ0ದರೆ ಸತಿಗೆ
ಪತಿಯಾಜ್ಞೆಯನ್ನು ಪಾಲಿಸುವುದೇ ಪ್ರತಿಜ್ಞೆಯಾಗಿರಬೇಕು. ಹೆಣ್ಣಿಗೆ ಬೇರೆ ಬೇರೆ ಪ್ರತಿಜ್ಞೆಯಿದ್ದರೆ, ಬೇರೆ ಬೇರೆ ವೃತಗಳಿದ್ದರೆ, ಅವು ಪತಿಯ ಪ್ರತಿಜ್ಞೆಗಳಿಂದ ಘರ್ಷಿಸುತ್ತಿದ್ದರೆ ಅಂಥ ಪ್ರತಿಜ್ಞೆಯನ್ನು ಪತಿಕರಿಸುವುದು ಯಾತನೆಯ ವಿಷಯವಾಗುತ್ತದೆ. ಎತ್ತು ಏರಿಗೆ ಎಳೆಯಿತು
ಕೋಣ ನೀರಿಗೆ ಎಳೆಯಿತು ಎಂಬಂತಾಗಬಾರದು
ಸದ್ಗೃಹಸ್ತರ ಸಂಸಾರ.
ಗಂಡ ಶಿವಲಿಂಗದೇವರ ಭಕ್ತನಾಗಿ ಹೆಂಡತಿ ಮಾರಿ ಮಸಣೆಯ ಭಕ್ತೆಯಾದರೆ ಭಾಂಢ ಭಾಜನ ಶುದ್ಧವಿಲ್ಲದಂತಾಗುತ್ತದೆಯೆಂದು ಸ್ವತಃ
ಬಸವಣ್ಣನವರೇ ಹೇಳಿಲ್ಲವೆ? ಬಸವಣ್ಣನವರು ಯಾವ ವಿಚಾರಗಳಿ0ದ, ಯಾವ ದೂರಾಲೋಚನೆಯಿಂದ ಕರೆಯ ಕಳುಹಿರುವರೋ ಅವರಿಗೆ ಗೊತ್ತು. ಅವರ
ನಿಲುವಿನಿಂದ ಬೇರೆ ನಿಲುವು ತಳೆಯುವುದು ಯೋಗ್ಯ ನಿರ್ಧಾರವಲ್ಲವೆಂಬುದು ಗಂಗಮ್ಮನವರ ಅನಿಸಿಕೆ. ಲಿಂಗ ನಿಷ್ಠೆ ಪ್ರತಿಜ್ಞೆ ಅವಳದಾದರೆ ಪತಿಯಾಜ್ಞೆ ಪಾಲನೆಯ ಪ್ರತಿಜ್ಞೆ ತನ್ನದೆಂದು ಸ್ಪಷ್ಟವಾಗಿಯೇ ಸಾರಿರುವರು.
ಮಹಾತಾಯಿ ಗಂಗಾ0ಬಿಕೆಯರ ಈ ವಚನದ ತಾತ್ಪರ್ಯವಿಷ್ಟೆ. ಹೆಂಡತಿ -ಗಂಡನೊಡನೆ ಅಥವಾ ಗಂಡ-ಹೆಂಡತಿಯೊಡನೆ ವಿಚಾರಧಾರೆಗಳನ್ನು ಹೊಂದಿಸಿಕೊಂಡು
ಹೋಗಬೇಕು. ಪರಸ್ಪರರು ವಿರುದ್ದ ಈಸಿದರೆ ಸಂಸಾರ ಸಸಾರವಾಗುವುದಿಲ್ಲ. ಪತಿಯಾಜ್ಞೆ ಪಾಲನೆಯ ಪ್ರತಿಜ್ಞೆಯೇ ಎಲ್ಲ ಪ್ರತಿಜ್ಞೆಗಳಿಗಿಂತ ಶ್ರೇಷ್ಠವಾದುದು.ಆತ್ಮ ಪ್ರತಿಷ್ಠೆಯಿಂದ ವೈಯಕ್ತಿಕ ಪ್ರತಿಜ್ಞೆ ಕೈಕೊಂಡು ಅದರ ಪತಿಕರದಲ್ಲಿ ಯಾತನೆ ಪಡುವುದರಲ್ಲಿ ಏನೇನೂ ಹುರುಳಿಲ್ಲ. ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ ಇದ್ದರೇನೋ ಶಿವ
ಶಿವಾ ಹೋದರೇನೋ ಶಿವ ಶಿವಾ !
–ಸುಧಾ ಪಾಟೀಲ್
ಬೆಳಗಾವಿ