ಕನ್ನಡದಲ್ಲಿ ಕಲಿಸಿದ ಶಿಕ್ಷಕನಿಗೆ ಜಾಗತಿಕ ಪ್ರಶಸ್ತಿ
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್‌ಸಿಂಹ ದಿಸಾಳೆ ಅವರು ಪ್ರತಿಷ್ಠಿತ ‘ಗ್ಲೋಬಲ್ ಟೀಚರ್ ಪ್ರೈಜ್’ಗೆ ಪಾತ್ರರಾಗಿದ್ದಾರೆ. ಅಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕವನ್ನು ಮರುವಿನ್ಯಾಸ ಮಾಡಿದೆ ಹಿರಿಮೆಯನ್ನು ದಿಸಾಳೆ ಹೊಂದಿದ್ದಾರೆ.
ದಿಸಾಳೆ (೩೨) ಅವರು ಸೊಲ್ಲಾಪುರದ ಪರಿತೆವಾಡಿ ಪ್ರಾಥಮಿಕ ಶಾಲೆಯ ಶಿಕ್ಷಕ.
‘ನನಗೆ ಬಹಳ ಸಂತಸವಾಗಿದೆ. ಇದು ನನಗೆ ಮತ್ತು ಭಾರತಕ್ಕೆ ಬಹುದೊಡ್ಡ ಗೌರವ’ ಎಂದು ದಿಸಾಳೆ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ವರ್ಚುವಲ್ ಆಗಿ ಪ್ರಶಸ್ತಿ ಘೋಷಣೆಯಾದ ಬಳಿಕ ‘ಪ್ರಜಾವಾಣಿ’ ಜತೆಗೆ ಅವರು ಮಾತನಾಡಿದರು.
‘ಈ ಪ್ರಶಸ್ತಿಯಿಂದಾದ ಒಂದು ಬಹುದೊಡ್ಡ ಪ್ರಯೋಜನ ಎಂದರೆ, ಸರ್ಕಾರಿ ಶಾಲಾ ವ್ಯವಸ್ಥೆಯ ಬಗ್ಗೆ ನಮ್ಮ ವಿಶ್ವಾಸ ಹೆಚ್ಚಾಗುತ್ತದೆ. ಶಿಕ್ಷಕರು ಎಂದರೆ ಅವರು ಬದಲಾವಣೆಯ ಹರಿಕಾರರಾಗಿದ್ದವರು, ಬದಲಾವಣೆಯ ಹರಿಕಾರರಾಗಿ ಈಗ ಮತ್ತು ಮಂದೆಯೂ ಇರುವವರು’ ಎಂದು ದಿಸಾಳೆ ಹೇಳಿದ್ದಾರೆ.
ವರ್ಕಿ ಫೌಂಡೇಶನ್ ನೀಡುವ ಈ ಪ್ರಶಸ್ತಿಯ ಜತೆಗೆ ೧೦ ಲಕ್ಷ ಡಾಲರ್ (ಸುಮಾರು ₹ ೭ .೨೭ ಕೋಟಿ) ನಗದು ಕೂಡ ಇದೆ. ಪ್ರಶಸ್ತಿ ಮೊತ್ತದ ಅರ್ಧ ಭಾಗವನ್ನು ಅಂತಿಮ ಸುತ್ತಿಗೆ ಆಯ್ಕೆಯಾದ ೧೦ ಅಭ್ಯರ್ಥಿಗಳಿಗೆ ಹಂಚುವುದಾಗಿ ದಿಸಾಳೆ ಹೇಳಿದ್ದಾರೆ. ಗ್ಲೋಬಲ್ ಟೀಚರ್ ಪ್ರೈಜ್‌ನ ಇತಿಹಾಸದಲ್ಲಿ ಹೀಗೆ ಪ್ರಶಸ್ತಿ ಮೊತ್ತವನ್ನು ಹಂಚಿಕೊಂಡದ್ದು ಇದೇ ಮೊದಲು.
ಪ್ರಶಸ್ತಿಗಾಗಿ ೧೪೦ ದೇಶಗಳ ೧೨ ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು.
ದಿಸಾಳೆ ಅವರು ಮೊದಲು ಪಾಠ ಮಾಡಿದ್ದು ದನಗಳ ಹಟ್ಟಿಯ ಸಮೀಪ ಇದ್ದ ಶಿಥಿಲಗೊಂಡಿದ್ದ ಶಾಲೆಯೊಂದರಲ್ಲಿ. ಅಲ್ಲಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಪಠ್ಯಕ್ರಮವು ಮರಾಠಿಯಲ್ಲಿಯೇ ಇತ್ತು. ಆದರೆ, ಕರ್ನಾಟಕದ ಗಡಿ ಭಾಗದ ಆ ವಿದ್ಯಾರ್ಥಿಗಳಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹಾಗಾಗಿ, ವಿದ್ಯಾರ್ಥಿಗಳಿಗೆ ಕಲಿಕೆಯೇ ಆಗುತ್ತಿರಲಿಲ್ಲ.
ಭಾರಿ ಪ್ರಯತ್ನದ ಅನಂತರ ದಿಸಾಳೆ ಅವರೇ ಕನ್ನಡ ಕಲಿತರು. ಒಂದರಿಂದ ೪ನೇ ತರಗತಿವರೆಗಿನ ಎಲ್ಲ ಪಠ್ಯ ಪುಸ್ತಕಗಳನ್ನು ಮರುವಿನ್ಯಾಸ ಮಾಡಿದರು. ಹಾಡುಗಳನ್ನು ಧ್ವನಿಮುದ್ರಿಸಿ ಅವುಗಳಿಗೆ ಕ್ಯೂಆರ್ ಕೋಡ್‌ಗಳನ್ನು ಅಳ
ವಡಿಸಿದರು. ಬೋಧನೆಯ ವಿಡಿಯೊ ಮಾಡಿ ಅವುಗಳನ್ನೂ ಕ್ಯೂಆರ್ ಕೋಡ್‌ಗೆ ಅಳವಡಿಸಿದರು. ಅಸೈನ್‌ಮೆಂಟ್‌ಗಳು ಕನ್ನಡದಲ್ಲೇ ಆದವು.
‘ದಿಸಾಳೆ ಅವರ ಪ್ರಯತ್ನಕ್ಕೆ ಸಿಕ್ಕ ಫಲ ಅಸಾಧಾರಣವಾಗಿತ್ತು. ಈಗ ಈ ಗ್ರಾಮದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಕ್ರಮವೇ ಇಲ್ಲ. ಹೆಣ್ಣು ಮಕ್ಕಳ ಹಾಜರಾತಿ ಶೇಕಡ ನೂರು. ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗಳಲ್ಲಿ ಈ ಶಾಲೆಯ ಶೇ ೮೫ರಷ್ಟು ವಿದ್ಯಾರ್ಥಿಗಳು ಎ ಗ್ರೇಡ್‌ನಲ್ಲಿ ಉತ್ತೀರ್ಣ ಆಗಿದ್ದಾರೆ. ಹಾಗಾಗಿ, ಈ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಗ್ರಾಮದ ಒಬ್ಬಳು ಯುವತಿ ಈಗ ಪದವೀಧರೆ. ರಂಜಿತ್‌ಸಿಂಹ ಇಲ್ಲಿಗೆ ಬರುವ ಮೊದಲು ಇದು ಊಹಿಸಲೂ ಆಗದ ವಿಷಯವಾಗಿತ್ತು’ ಎಂದು ಗ್ಲೋಬಲ್ ಟೀಚರ್ ಪ್ರೈಜ್‌ನ ವೆಬ್‌ಸೈಟ್ ಹೇಳುತ್ತಿದೆ.
ದಿಸಾಳೆ ಅವರಿಗೆ ೨೦೧೬ರಲ್ಲಿ ನಾವೀನ್ಯತೆ ಸಂಶೋಧಕ ಮತ್ತು ೨೦೧೮ರಲ್ಲಿ ರಾಷ್ಟ್ರೀಯ ನಾವೀನ್ಯತೆ ಸಂಶೋಧಕ ಪ್ರಶಸ್ತಿಗಳೂ ಸಿಕ್ಕಿವೆ. ಮೈಕ್ರೊಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸತ್ಯ ನಾದೆಲ್ಲ ಅವರ ಪುಸ್ತಕ ‘ಹಿಟ್ ಪ್ರೆಶ್’ನಲ್ಲಿಯೂ ದಿಸಾಳೆ ಅವರ ಕೆಲಸದ ಉಲ್ಲೇಖ ಇದೆ.
ಸೌಜನ್ಯ : ಪ್ರಜಾವಾಣಿ