ಜಗವ ಗೆಲ್ಲುವ ಉಪಾಯ

ಅಕ್ಕನೆಡೆಗೆ-ವಚನ – 49

ಜಗವ ಗೆಲ್ಲುವ ಉಪಾಯ

ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆವುದಯ್ಯಾ ಎಂದಡೆ
ಬಾಳೆ ಬೆಳೆವುದಯ್ಯಾ ಎನ್ನಬೇಕು
ಓರೆಗಲ್ಲ ನುಗ್ಗುಗುಟ್ಟಿ ಮೆಲಬಹುದಯ್ಯಾ ಎಂದಡೆ
ಇದು ಅತ್ಯಂತ ಮೃದು ಮೆಲಬಹುದಯ್ಯಾ ಎನಬೇಕು
ಸಿಕ್ಕದ ಠಾವಿನಲ್ಲಿ ಉಚಿತವೆಂದು ನುಡಿವುದೆ ಕಾರಣ
ಚೆನ್ನಮಲ್ಲಿಕಾರ್ಜುನಯ್ಯಾ ಮರ್ತ್ಯಕ್ಕೆ ಬಂದುದಕ್ಕಿದೆ ಗೆಲುವು

ನಾವು ಜೀವನದಲ್ಲಿ ಯಾವುದಾದರೂ ಒಂದು ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗುತ್ತಿರುತ್ತೇವೆ. ಆ ಹಾದಿ ಖಂಡಿತ ಸುಲಭ ಆಗಿರುವುದಿಲ್ಲ. ನಮ್ಮ ಪಾಡಿಗೆ ನಾವು ಮೌನವಾಗಿ ಮುಂದೆ ಸಾಗಿದ್ದರೆ, ಸುತ್ತಮುತ್ತಲಿನ ಎಲ್ಲರೂ ತಮಗೆ ತಿಳಿದಂತೆ ತಮ್ಮ ತಮ್ಮ ಸಲಹೆ ಕೊಡುತ್ತಾರೆ. ಆದರೆ ನಮಗೆ ನಮ್ಮ ದಾರಿ ಮುಖ್ಯ ಎನ್ನುವುದು ಗಮನದಲ್ಲಿರಬೇಕು. ನಮ್ಮ ಆಯ್ಕೆ ಯಾವುದು? ಅದರ ಗುರಿ, ಗಮ್ಯ ಏನು? ಇವುಗಳ ಒಂದು ಸ್ಪಷ್ಟ ಚಿತ್ರಣವಿರುತ್ತದೆ. ಅಂತಹ ಸಮಯದಲ್ಲಿ ನಾವು ಬೇರೆಯವರ ಮಾತುಗಳಿಗೆ ಕಿವಿಗೊಡುವುದು, ಅನವಶ್ಯಕ ಚರ್ಚೆಗೆ ಎಡೆ ಮಾಡಿಕೊಳ್ಳುವುದು ಅರ್ಥಹೀನ. ನಮ್ಮ ಧ್ಯೇಯ, ಧೋರಣೆಗೆ ಅಚಲವಾಗಿದ್ದು, ಬದ್ಧತೆಯಿಂದ ಬದುಕುವ ಅಗತ್ಯವಿದೆ ಎಂದು ಅಕ್ಕ ಹೇಳುತ್ತಾಳೆ.

ಮೇಲಿನ ವಚನದಲ್ಲಿ, ಯಾರಾದರೂ ಶಿಖರದ ಮೇಲೆ ಬಾಳೆ ಬೆಳೆಯುತ್ತದೆ ಎಂದರೆ, ಹೌದು ಬೆಳೆಯುತ್ತದೆ ಎಂದು ಹೇಳಬೇಕು. ಕಲ್ಲನ್ನು ಕುಟ್ಟಿ ತಿನ್ನಬಹುದು ಎಂದರೆ, ನಿಜ ಈ ಕಲ್ಲು ತುಂಬಾ ಮೃದುವಾಗಿದೆ, ತಿನ್ನಬಹುದು ಎನ್ನಬೇಕು. ಸಮಾಜದಲ್ಲಿ ಎಲ್ಲಾ ತರಹದ ಜನರಿರುತ್ತಾರೆ. ಅವರಲ್ಲಿ ಮೂರ್ಖರು ಎದುರಾದಾಗ ಅನವಶ್ಯಕ ಸಮಯ ಹಾಳು ಮಾಡುತ್ತಾರೆ. ಆ ಕಾರಣಕ್ಕಾಗಿ ಅವರು ಮಾಡುವ ವಾದಕ್ಕೆ ಹೂಂ ಎಂದು ಮುಂದೆ ಸಾಗಿದರೆ, ನಮ್ಮ ಬೆಲೆಬಾಳುವ ಹೊತ್ತು ಜಾರಿ ಹೋಗುವುದಿಲ್ಲ.

ಸಾಧನೆಯ ಮಾರ್ಗ ಯಾವತ್ತೂ ಕಲ್ಲುಮುಳ್ಳುಗಳಿಂದ ಕೂಡಿರುತ್ತದೆ. ಜಾಣತನದಿಂದ ಪಾರಾಗುತ್ತ ಗಮ್ಯದ ಕಡೆಗೆ ಸಾಗುವ ಮೂಲ ಉದ್ದೇಶ ನಮ್ಮದಾಗಬೇಕು. ಈ ದೃಷ್ಟಿಯಿಂದ ಅಕ್ಕನ ಬದುಕನ್ನು ಗಮನಿಸಿದರೆ, ಅವಳ ಅನುಭಾವದ ಹಾದಿ ಹೇಗಿತ್ತೆಂದು ಊಹಿಸಬಹುದು. ಅವಳ ಆಂತರಿಕ ಪಯಣಕ್ಕಿಂತ ಮೊದಲು ಸಾಮಾಜಿಕವಾಗಿ ಬಂದಂತಹ ಅನೇಕ ಅಡೆತಡೆ, ಅಡ್ಡಿ ಆತಂಕಗಳ ಕಲ್ಪನೆ ಮಾಡಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಈ ಜಗವ ಗೆಲ್ಲುವ ಉಪಾಯವನ್ನು ಅಕ್ಕ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾಳೆ. ಹಾಗೆಯೇ ನಮ್ಮನ್ನು ಎಚ್ಚರಿಸಲೆಂದೇ ಈ ವಚನ ಹೀಗೆ ಹೇಳಿದ್ದಾಳೆ.

ಪ್ರಕೃತಿಯಲ್ಲಿ ಇರುವುದನ್ನೇ ಪ್ರತಿಮೆಗಳಾಗಿ ಬಳಸುವ ಅಕ್ಕನ ಕಾವ್ಯಶಕ್ತಿ ಅನನ್ಯ. ಬೆಟ್ಟ, ಗುಡ್ಡ, ಬಾಳೆ, ಓರೆಗಲ್ಲು ಇಂತಹ ನಾಲ್ಕಾರು ವಸ್ತುಗಳನ್ನು ಬಳಸಿ ಈ ಜಗದ ಜಂಜಡವನ್ನು ಬಿಡಿಸಿಕೊಳ್ಳುವ ಜಾಣತನವನ್ನು ಹೇಳಿಕೊಟ್ಟಿದ್ದಾಳೆ.

ಸಿಕಾ

Don`t copy text!