ಬಬಲೇಶ್ವರ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಒಂದು ಗುರು ಮಠವಿದೆ. ಈ ಮಠದ ಪೀಠ ಪರಂಪರೆ ಅದ್ಭುತವಾಗಿದೆ. ಪೂಜ್ಯರಾದ ಗುರುಪಾದ ಸ್ವಾಮಿ ಅವರು ಊರಿಗೆ ಬರಗಾಲ ಬಿದ್ದಾಗ ಮಠದ ಎಲ್ಲ ಉಗ್ರಾಣಗಳನ್ನು ತೆಗೆದು ಎಲ್ಲ ಕಾಳು ಕಡಿಗಳನ್ನು ಹೊರಗೆ ಇಟ್ಟು, ಕಷ್ಟದಲ್ಲಿದ್ದ ಭಕ್ತರಿಗೆ ನೀಡಿ ಪೂರ್ತಿಯಾಗಿ ಮಠದ ಉಗ್ರಾಣಗಳನ್ನು ಖಾಲಿ ಮಾಡಿಕೊಳ್ಳುತ್ತಿದ್ದ ಅಪರೂಪದ ಪರಂಪರೆ ಈ ಮಠದ್ದು ಎಂಬುದನ್ನು ಚರಿತ್ರೆಯ ಪುಟದಲ್ಲಿ ಕಾಣಬಹುದಾಗಿದೆ.
ವಚನ ಪಿತಾಮಹ ಹಳಕಟ್ಟಿ, ಹಲಸಂಗಿ ಚೆನ್ನಮಲ್ಲಪ್ಪ ನವರಿಗೆ, ಮತ್ತು ಹಲಸಂಗಿಯ ಮಧುರಚೆನ್ನರವರಿಗೆ ಸಹಾಯ ಹಸ್ತ ನೀಡಿ ಅವರ ಸಾಹಿತ್ಯ ಸಮೃದ್ಧಿಗೆ ಬದುಕಿನ ಸ್ವಾಸ್ಥೆಗೆ ನೀರೆರೆದು ಬಳಸಿದ ಮಠವಿದು. ರಾಜ್ಯ ಮಟ್ಟದ ಸಾಹಿತ್ಯ, ಸಂಗೀತ ಶಿಕ್ಷಣ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಠವಿದು. ದೆವ್ವ ಭೂತ ಮೈಯಲ್ಲಿ ದೇವರು ಬರುವುದು ಮೊದಲಾದ ಮೋಸದ ಮೂಢನಂಬಿಕೆಗಳ ಮೂಲೋತ್ಪಾಟನೆ ಮಾಡಿ, ವೈಜ್ಞಾನಿಕ ದೃಷ್ಠಿ ಪರಂಪರೆಯನ್ನು ಬಳಸಿದ ಮಠವಿದು. ಸ್ವಾಮಿಗಳ ಅಡ್ಡ ಪಲ್ಲಕ್ಕಿ ಆಡಂಬರದ ಮೆರವಣೆಗೆ ಆಸ್ಪದವೀಯದ ಈ ಮಠದ ವೇದಿಕೆಯಲ್ಲಿ ತೀವ್ರವಾಗಿ ಖಂಡಿಸಿದ ಕ್ರಾಂತಿಕಾರಿ ಪರಂಪರೆಯನ್ನು ಪ್ರತಿಷ್ಠಾಪಿಸಿದ ಮಠವಿದು.
ಈ ಭಾಗದಲ್ಲಿ ಪ್ರಸಿದ್ಧವಾದ ಗುರು ಮಠದಲ್ಲಿ ಶಾಂತವೀರ ಶಿವಯೋಗಿಗಳು ಮೂಲ ಪುರುಷರು. ಶಾಂತವೀರ ಪಟ್ಟಾಧ್ಯಕ್ಷರು ಈ ಪೀಠದ 6 ನೇಯ ಗುರುಗಳು.
ಮೊದಲನೇಯವರು ಶಾಂತವೀರ ಶಿವಯೋಗಿಗಳು ಎರಡನೇಯವರು ಗುರುಪಾದ ಶಿವಯೋಗಿಗಳು ಮೂರನೇಯವರು ರಾಚೂಟೇಶ್ವರ ಸ್ವಾಮಿಗಳು ನಾಲ್ಕನೇಯವರು ಶಾಂತವೀರ ಸ್ವಾಮಿಜೀ ಐದನೇಯವರು ಶಾಂತವೀರ ಶಿವಯೋಗಿಗಳು ಆರನೇಯವರು ಶಾಂತವೀರ ಶಿವಯೋಗಿಗಳು.
ಈ ಲೇಖನದಲ್ಲಿ 6 ನೇಯ ಪೀಠಾಧೀಶರಾದ ಶಾಂತವೀರ ಶಿವಯೋಗಿಗಳ ಜೀವನ ಮತ್ತು ಕಾಯಕ ದಾಸೋಹದ ಸಮಾಜಮುಖಿ ಕಾರ್ಯಗಳ ಕುರಿತು ವಿವರಿಸುವ ಪ್ರಯತ್ನ ಮಾಡುವೆ. ಈ ವಿಷಯದ ಕುರಿತು ಪ್ರಮುಖ ಆರು ಪುಸ್ತಕಗಳು ಆಕರ ಪುಸ್ತಕಗಳಾಗಿವೆ. ಅವುಗಳೆಂದರೆ,
1. ಬಬಲೇಶ್ವರ ಶಿವಯೋಗಿಗಳು (1976) ಎಂಬ ಗ್ರಂಥದಲ್ಲಿ ಅನೇಕ ಮಾಹಿತಿ ಸಿಗುತ್ತದೆ ಆದರೆ ಈ ಪುಸ್ತಕ ಯಾರು ಬರೆದರೆಂಬ ಮಾಹಿತಿ ಇಲ್ಲ ಆದರೆ ಅದರಲ್ಲಿ ಬಬಲೇಶ್ವರ ಶಿವಯೋಗಿಗಳ ಪ್ರಕಾಶನ ಸಮಿತಿಯ ಪರವಾಗಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ ಎಂಬುದನ್ನು ಗಮನಿಸಬಹುದು. ಇದಕ್ಕೆ ಮಾಜಿ ಉಪರಾಷ್ಟ್ರಪತಿ ಬಿ ಡಿ ಜತ್ತಿಯವರು ಈ ಪುಸ್ತಕಕ್ಕೆ ಸುಂದರವಾದ ಮುನ್ನುಡಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಡಾ ಜಯಚನಿ ಅವರ ಲೇಖನವೂ ಇದರಲ್ಲಿದೆ. ಹೀಗೆ ಇದು ಸುಂದರ ಸಮಗ್ರವಾದ ಪುಸ್ತಕವಾಗಿದೆ.
2. ಶ್ರೀ ಶಾಂತವೀರರ ಸಾನಿಧ್ಯದಲ್ಲಿ ಕಂಡದ್ದು ಮತ್ತು ಉಂಡದ್ದು ಎಂಬ ಸಂಪಾದಿತ ಕೃತಿಯನ್ನು ಪ್ರೊ ಎಸ್ ಎಸ್ ಕಬ್ಬಿನ್, ಶ್ರೀ ವ್ಹಿ ಎಂ ಪಾಟೀಲ, ಮತ್ತು ಪ್ರಿನ್ಸಿಪಲ್ ಬಾಗಾದಿ ಅವರು ಪೂಜ್ಯರ ಒಡನಾಡಿಗಳಿಂದ, ಭಕ್ತಾದಿಗಳಿಂದ ಬರೆಯಿಸಿದ ಲೇಖನಗಳ ಮೊತ್ತ ಇದರಲ್ಲಿವೆ. ಇದು 1998 ರಲ್ಲಿ ಇದು ಪ್ರಕಟವಾಗಿದೆ.
3. ಬಬಲೇಶ್ವರದ ಶಾಂತವೀರ ಪಟ್ಟಾಧ್ಯಕ್ಷರು ಎಂಬ ಡಾ ಚೆನ್ನಪ್ಪ ಕಟ್ಟಿ ಅವರು ಬರೆದ ಕೃತಿಯು 2002 ರಲ್ಲಿ ಸಿಂದಗಿಯ ಸಾರಂಗಮಠದ ಪೂಜ್ಯ ಶ್ರೀ ಚನ್ನವೀರ ಸ್ವಾಮಿಜೀ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ ಪೂಜ್ಯರ ಬದುಕನ್ನು ಪರಿಚಯಿಸುವ, ಅರ್ಥೈಸುವ ಅತ್ಯುತ್ತಮವಾದ 60 ಪುಟಗಳ ಪುಸ್ತಕ ಇದಾಗಿದೆ.
4. ಫ ಗು ಸಿದ್ಧಾಪೂರ ಅವರು ಕುಸುಮ ಷಟ್ಪದಿಯಲ್ಲಿ “ಬಬಲೇಶ್ವರದ ಹಿರಿಮೆ ಗರಿಮೆ” ಎಂಬ ಕೃತಿಯನ್ನು ರಚಿಸಿದ್ದು, ಗುರುಪಾದಸ್ವಾಮಿಯಿಂದ ಇತ್ತೀಚಿನ ಸ್ವಾಮೀಜೀಯವರೆಗೆ ದೀರ್ಘವಾದ ಕಾವ್ಯವನ್ನು, ಕಥನವನ್ನು ಕಟ್ಟಿಕೊಟ್ಟಿದ್ದಾರೆ.
5. ಮಹಾದೇವ – ಅಭಿನಂದನಾ ಗ್ರಂಥ – ಪ್ರಧಾನ ಸಂಪಾದಕರು ಶ್ರೀ ಫ ಗು ಸಿದ್ಧಾಪುರ ಮತ್ತು ಶ್ರೀ ಸುಭಾಸ ಯಾದವಾಡ
6. ಸಾಪ್ತಾಹಿಕ ಅಧ್ಯಾತ್ಮ ಸಾಧನಾ ಯೋಗ – ಬಬಲೇಶ್ವರ ಬೆಳಕು – ಸಂಗ್ರಾಹಕರು ವ ಪ್ರಕಾಶಕರು – ಶ್ರೀ ಭೀಮ ಢವಳಗಿ
ಈ ಮೇಲಿನ ಎಲ್ಲ ಗ್ರಂಥಗಳು ಬಬಲೇಶ್ವರದ ಶ್ರೀ ಶಾಂತವೀರ ಶಿವಯೋಗಿಗಳ ಬಗ್ಗೆ ವಿವರವಾದ ಮಾಹಿತಿ ಕಲೆಹಾಕಲು ಸಹಾಯಕವಾಗಿವೆ.
ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳ ಪೂರ್ವಾಶ್ರಮದ ಊರು ಕುಂದಗೋಳ ತಾಲೂಕಿನ ತರಲಘಟ್ಟ ಎಂಬುದಾಗಿತ್ತು. ಇವರು ಶಿವಜಾತ ಮನೆತನದಲ್ಲಿ ಶರಣ ದಂಪತಿಗಳಾದ ಸಿದ್ಧಲಿಂಗ ಶರಣರು ಮತ್ತು ಚೆನ್ನಬಸಮ್ಮ ಅವರಿಗೆ 4 ನೇಯ ಪುತ್ರರಾಗಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ರುದ್ರ ಎಂಬುದಾಗಿತ್ತು. ರುದ್ರ ಎಂಬ ಹೆಸರು ಬರಲು ಕಾರಣವೇನೆಂದರೆ, ತರಲಘಟ್ಟದಲ್ಲಿ ವೀರಭದ್ರೇಶ್ವರ ಸ್ವಾಮೀಜೀ ಗುಡಿ ಇತ್ತು ಅಲ್ಲಿ ಹಲವಾರು ಆಚರಣೆಗಳು ಇರುವದರಿಂದ ಮತ್ತು ಅದು ಆಭಾಗದ ಹಾಗೂ ಊರಿನ ದೈವವಾಗಿರುವದರಿಂದ ಆ ವೀರಬದ್ರನನ್ನು ರುದ್ರನ ಹೆಸರಿನಿಂದ ಕರೆಯುತ್ತಿದ್ದುದರಿಂದ ರುದ್ರ ಎಂಬ ಹೆಸರನ್ನು ಇಡಲಾಗಿತ್ತು.
ರುದ್ರನಿಗೆ ಬಾಲ್ಯದಲ್ಲಿಯೇ ದೈವದ ಬಗ್ಗೆ ದೇವರ ಬಗ್ಗೆ ವಿಶಿಷ್ಟವಾದ ಆಕರ್ಷಣೆ ಇತ್ತು. ಆ ಊರಲ್ಲಿ ಒಬ್ಬರು ಕುಂಟಯ್ಯ ಅಜ್ಜ ಎಂಬುವವರಿದ್ದರು. ಅವರು ಲಿಂಗೈಕ್ಯರಾಗಿ ಹೋದ ನಂತರ ಅಲ್ಲಿ ಅವರ ಹೆಸರಿನಲ್ಲಿ ಒಂದು ಮಠ ಸ್ಥಾಪನೆ ಆಗಿತ್ತು. ಆ ಮಠಕ್ಕೆ ಊರಿನ ಎಲ್ಲ ಜನ ಅತ್ಯಂತ ಭಕ್ತಿಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ಅದರಂತೆ ರುದ್ರಯ್ಯ ಊರಿನ ಜನರಕ್ಕಿಂತ ಹೆಚ್ಚು ಆ ಮಠದ ಸಂಪರ್ಕ ಹೊಂದಿದ್ದರು. ಆ ಮಠದಲ್ಲಿ ಆಧ್ಯಾತ್ಮದ ಸಾಧನೆ ಮಾಡುತ್ತಿದ್ದರು. ಧ್ಯಾನದಲ್ಲಿ ನಿರತರಾಗುತ್ತಿದ್ದರು. ಒಂದು ರೀತಿ ಅದು ಆಧ್ಯಾತ್ಮದ ಆಕರ್ಷಣೆಯ ಕೇಂದ್ರವಾಗಿತ್ತು. ರುದ್ರ ಬಾಲಕ ತನ್ನ ಪ್ರಾಥಮಿಕ ಶಾಲೆಯನ್ನು ಅಂದರೆ ಐದನೇಯ ತರಗತಿಯವರೆಗೆ ಶಾಲೆಯನ್ನು ಸ್ಥಳೀಯವಾಗಿ ತನ್ನ ಊರಲ್ಲಿಯೇ ಶಿಕ್ಷಣ ಪೂರೈಸುತ್ತಾರೆ. ತದನಂತರ ಮುಂದಿನ ಶಿಕ್ಷಣ ಆ ಊರಲ್ಲಿ ಇರಲಿಲ್ಲ ಹಾಗೂ ಕೃಷಿ ಮಾಡುವ ಶಕ್ತಿಯೂ ಆ ಬಾಲಕನಿಗೆ ಇರಲಿಲ್ಲ ಹಾಗಾಗಿ ಆ ಬಾಲಕ ಆದ್ಯಾತ್ಮದ ಅರಿವಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಪ್ರಾರಂಭಿಸಿದನು. ಆಗ ಆ ಬಾಲಕ ಬಬಲೇಶ್ವರಕ್ಕೆ ಬರುವ ಪ್ರಸಂಗ ಒಂದು ಜರುಗಿತು. ಅದೇನೆಂದರೆ,
1903 ರಲ್ಲಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರಕ್ಕಿಂತ ಹಿಂದಿನ ಪಟ್ಟಾಧ್ಯಕ್ಷರಾದ ಶಾಂತವೀರ ಪಟ್ಟಾಧ್ಯಕ್ಷ್ಯ ಸ್ವಾಮೀಜೀಯವರು ಮಂಟೂರದಲ್ಲಿ 770 ಮಂಟಪಗಳ ಪೂಜೆಯನ್ನು ಪೂರೈಸಿಕೊಂಡು, ತರಲಘಟ್ಟದ ಶಿವಜಾತ ಎಂಬ ಶರಣದಂಪತಿಗಳ ಮನೆಗೆ ಬರುತ್ತಾರೆ. ಆ ದಂಪತಿಗಳ ಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸಿದ ನಂತರ ಬಿಳ್ಕೋಡುವ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜೀ ಯವರಿಗೆ ಶರಣ ದಂಪತಿಗಳು ಕಾಣಿಕೆಯನ್ನು ನೀಡಲು ಹೊದಾಗ, ಸ್ವಾಮೀಜೀ ಯವರು ತಮಗೆ ಈ ರೀತಿಯ ಭೌತಿಗ ಕಾಣಿಕೆಯನ್ನು ಬೇಡ ಎಂದೂ ತಮಗೆ ವಿಶೇಷವಾದ ಕಾಣಿಕೆ ಬೇಕೆಂದೂ ಕೇಳಿದರು. ಆಗ ಏನು ಹೇಳಿ ಬುದ್ಧೀ, ನಾವು ಕೊಡಲು ಸಿದ್ಧರಿದ್ದೇವೆ ಎಂದು ಹೇಳಿದಾಗ, ನಿಮ್ಮ ಮನೆಯಲ್ಲಿರುವ ರುದ್ರ ಎಂಬ ಮಗುವಿನಲ್ಲಿ ಗುರು ಆಗುವ ಎಲ್ಲ ಲಕ್ಷಣಗಳಿದ್ದು, ಆ ಮಗುವನ್ನು ನಮ್ಮ ಮಠಕ್ಕೆ ನೀಡಬೇಕು ಎಂದು ಕೇಳಿಕೊಂಡರು. ಆಗ ದಂಪತಿಗಳು ಅದಕ್ಕೆ ಒಪ್ಪಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರಿಗೆ ಮಗುವನ್ನು ನೀಡಿದರು ಅಂದೇ ರುದ್ರರು ಪೂಜ್ಯರೊಂದಿಗೆ ಕುದುರೆಯ ಮೇಲೆ ಕುಳಿತುಕೊಂಡು ಬಬಲೇಶ್ವರಕ್ಕೆ ಬಂದರು. ತದನಂತರ ಅತ್ಯಂತ ನಿಷ್ಠೆಯಿಂದ ಆ ಮಗು ಪೂಜ್ಯ ಸೇವೆಯನ್ನು ಎರಡು ವರ್ಷಗಳ ಕಾಲ ಮಾಡಿದರು. ಆಗ ಪೂಜ್ಯರು ತಮ್ಮ ಭಕ್ತಾದಿಗಳನ್ನು ಕರೆದು ನನ್ನ ನಂತರ ಈ ಬಾಲಕನನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದಿದ್ದೇನೆ ಎಂದು ತಿಳಿಸಿದರು. ಆಗ ಭಕ್ತರು, ಪೂಜ್ಯರೇ ನಿಮ್ಮ ಆಯ್ಕೆ ಯಾವಾಗಲೂ ಸರಿಯಾಗಿಯೇ ಇರುತ್ತದೆ ಅದಕ್ಕೆ ನಮ್ಮ ಒಪ್ಪಿಗೆ ಇದೆ ಖಂಡಿತವಾಗಿಯೂ ನಾವು ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳೋಣ ಎಂದು ಒಪ್ಪಿಕೊಳ್ಳುತ್ತಾರೆ.
ನಂತರ ಎರಡು ಮೂರು ವರ್ಷಗಳಲ್ಲಿ ಪೂಜ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆ ಸಂದರ್ಭದಲ್ಲಿ ಪೂಜುರನ್ನು ಬೇಟಿಯಾಗಲು ಬೇರೆ ಬೇರೆ ಊರಿನಿಂದ ಅನೇಕ ಭಕ್ತಾದಿಗಳು ಬರುತ್ತಾರೆ. ಅದರಲ್ಲಿ ತರ್ಲಗಟ್ಟದಿಂದ ಸಹ ಅನೇಕ ಭಕ್ತಾಧಿಗಳು ಮತ್ತು ರುದ್ರ ಬಾಲಕನ ಕುಟುಂಬದ ಸದಸ್ಯರೂ ಸಹ ಬರುತ್ತಾರೆ. ಆಗ ರುದ್ರ ಬಾಲಕನ ಕುಟುಂಬದ ಸದಸ್ಯರು ತಮ್ಮ ಮಗು ಬಹಳ ದೂರದಲಿರುವುದನ್ನು ಗಮನಿಸಿ, ತಮ್ಮ ಮಗುವಿನ ಬಗ್ಗೆ ಪೂಜ್ಯರಿಗೆ ಹೇಳಿದರೆ ಏನು ತೊಂದರಯಾತ್ತದೆಯೋ ಎಂದು ಆಲೋಚಿಸಿ ಪೂಜ್ಯರ ಗಮನಕ್ಕೆ ತರದೇ, ಮಗುವನ್ನು ಕರೆದುಕೊಂಡು ತರ್ಲಗಟ್ಟಕ್ಕೆ ಕರೆದುಕೊಂಡು ಹೋಗುತ್ತಾರೆ. ಆಗ ಪೂಜ್ಯರಿಗೆ ತುಂಬಾ ಆಘಾತವಾಗುತ್ತದೆ. ಅತ್ಯಂತ ಪ್ರೀತಿ ಅಂತಕರಣದಿಂದ ಆ ಮಗುವನ್ನು ಕರೆತಂದಿದ್ದೆ, ಆದರೆ ಕಸಿದುಕೊಂಡು ಹೋದರಲ್ಲ ಎಂದು ಅತ್ಯಂತ ನೋವು ಅನುಭವಿಸಿಕೊಂಡರು. ಕೆಲವೇ ದಿನಗಳಲ್ಲಿ ಶಾಂತವೀರ ಶಿವಯೋಗಿ ಪೂಜ್ಯರು ಲಿಂಗೈಕ್ಯರಾಗುತ್ತಾರೆ. ಲಿಂಗೈಕ್ಯರಾಗುವ ಮುನ್ನ ಭಕ್ತರನ್ನು ಕರೆದು, ನೀವು ತರ್ಲಗಟ್ಟಕ್ಕೆ ಹೋಗಿ ಪಾಲಕರನ್ನು ಹಾಗೂ ಕುಟುಂಬದ ಸದಸ್ಯರನ್ನು ಮನ ಒಲಿಸಿ ರುದ್ರನನ್ನು ಕರೆದುತನ್ನಿ, ಅವರಿಂದ ತುಂಬಾ ಕೆಲಸಗಳು ಆಗಬೇಕಿದೆ ಅವರನ್ನು ಕರೆದು ತರಲೇಬೇಕು ಹಾಗೂ ಉತ್ತರಾಧಿಕಾರಿಯನ್ನಾಗಿ ಮಾಡಲೇಬೇಕು ಎಂದು ವಚನವನ್ನು ತೆಗೆದುಕೊಂಡರು.
ತದನಂತರ ಆಗಿನ ಶಾಂತವೀರ ಶಿವಯೋಗಿಗಳು ಲಿಂಗೈಕ್ಯರಾದರು. ಪೂಜ್ಯರ ಮಾತಿನಂತೆ ಊರಿನ ಜನ ಎಲ್ಲರೂ ಸೇರಿಕೊಂಡು ಹೋಗಿ, ರುದ್ರ ಎಂಬ ಬಾಲಕನನ್ನು ಬಬಲೇಶ್ವರಕ್ಕೆ ಕರೆದುಕೊಂಡು ಬರುತ್ತಾರೆ. ಬಬಲೇಶ್ವರಕ್ಕೆ ಬಂದನಂತರ 1905 ರಲ್ಲಿ ಪ್ರಥಮಬಾರಿಗೆ ಅಯ್ಯಾಚಾರದ ದೀಕ್ಷೆಯನ್ನು ಮಾಡುತ್ತಾರೆ. ಈ ಅಯ್ಯಾಚಾರವನ್ನು ಮಾಡಿದವರು ದೇವರ ಹಿಪ್ಪರಗಿಯ ಸಿದ್ಧರಾಮ ಶಿವಾಚಾರ್ಯರು . ಅದೇ ವರ್ಷದಲ್ಲಿ ಅಂದರೆ 1906 ರಲ್ಲಿ ಪಟ್ಟಾಧಿಕಾರವನ್ನು ಸಹ ಮಾಡುತ್ತಾರೆ. ಪಟ್ಟಾಧಿಕಾರಿಯನ್ನು ಮಾಡಿದವರು ಮನಗೂಳಿಯ ಪೂಜ್ಯ ಸಂಗನಬಸವ ಸ್ವಾಮಿಗಳು. ಪಟ್ಟಾಧಿಕಾರಿಯಾದ ನಂತರ ಬಾಲಕ ರುದ್ರರು ಷಟಸ್ಥಲ ಬ್ರಹ್ಮೀ ಶಾಂತವೀರ ಶಿವಾಚಾರ್ಯರು ಎಂಬ ಹೆಸರಿನಿಂದ ಗುರುಮಠದ ಆರನೇಯ ಪೀಠಾಧಿಪತಿಗಳಾಗಿ ತಮ್ಮ ಸೇವೆಯನ್ನು ಪ್ರಾರಂಭಿಸುತ್ತಾರೆ. ಅದಾದ ಒಂದು ವರ್ಷದಲ್ಲಿ ಅಂದರೆ 1907 ರಲ್ಲಿ ಬಿದರಿಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅನುಗ್ರಹ ಪಡೆದುಕೊಳ್ಳುತ್ತಾರೆ. ಆಗ ಶಿವಕುಮಾರ ಶಿವಾಚಾರ್ಯರಿಗೆ 20 ವರ್ಷ ವಯಸ್ಸಾಗಿತ್ತು. ಅಲ್ಲಿಂದ ಅವರ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ.
ಪೂಜ್ಯರು ಸ್ವತಃ ಅತ್ಯಂತ ಶಿಕ್ಷಣ ದಾಹಿಗಳಾಗಿದ್ದರಿಂದ ಹಾಗೂ ಶಿಕ್ಷಣಾಸಕ್ತರಾಗಿದ್ದುದರಿಂದ ಊರಿನ ಭಕ್ತರನ್ನು ಕರೆದು ನಮ್ಮೂರಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನೇಕೆ ಪ್ರಾರಂಭಿಸಬಾರದು ಎಂದು ಕೇಳುತ್ತಾರೆ. ಭಕ್ತರೆಲ್ಲರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಅದರಂತೆ ಬಬಲೇಶ್ವರದಲ್ಲಿ ಒಂದು ಸಂಸ್ಕೃತ ಪಾಠಶಾಲೆ ಪ್ರಾರಂಭವಾಗುತ್ತದೆ.
ಈ ಪಾಠಶಾಲೆಗೆ ಗುಳೇದಗುಡ್ಡದ ವೀರುಪಾಕ್ಷ ಶಾಸ್ತ್ರಿಗಳು, ಶಿವಣಗಿಯ ಮಲ್ಲಿಕಾರ್ಜುನ ಶಾಸ್ತ್ರೀಗಳು ಹಾಗೂ ಬೈಲಹೊಂಗಲದ ಗಂಗಾಧರ ಶಾಸ್ತ್ರೀಗಳು ಆಧ್ಯಾಪಕರಾಗಿ ಬಂದು, ಸರಿಸುಮಾರು 32 ಜನರಿಗೆ ಸಂಸ್ಕೃತದ ಬೋಧನೆಯನ್ನು ಮಾಡುತ್ತಾರೆ. ಸ್ವತಃ ಪೂಜ್ಯರು ಸಿದ್ಧಾಂತ ಶಿಖಾಮಣಿ, ಶ್ರೀಕರ ಭಾಷ್ಯ, ಶಿವಾದ್ವೈತ ಮಂಜರಿ ಅನುಭವ ಸೂತ್ರ ಮೊದಲಾದ ಶಿವಾದ್ವೈತ ಸದ್ಗಂಥಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದರು. ಅಂತಹ ಬೋಧನೆಯನ್ನು ಪಡೆದ ಈ ಸ್ಥಳ ತದನಂತರ ಅನೇಕರಿಗೆ ಆಕರ್ಷಣೆಯ ಸ್ಥಾನವಾಗಿ ಪರಿಣಮಿಸಿತು.
ಕೊಪ್ಪಳದ ಗವಿಮಠದ ಶಾಂತವೀರರು, ಸರ್ಪಭೂಷಣದ ಮಠದ ಮಹಾದೇವ ಸ್ವಾಮಿಗಳು ಈ ಸಂಸ್ಕೃತ ಪಾಠಶಾಲೆಯಲ್ಲಿ ಬಂದು ಅಧ್ಯಯನ ಮಾಡಿಕೊಂಡು ಹೋಗುತ್ತಾರೆ. ಈ ಪಾಠಶಾಲೆಯನ್ನು ಅಂತಹ ಆಕರ್ಷಣೆ ಕೇಂದ್ರವನ್ನಾಗಿ ಮಾಡಿದ ಕೀರ್ತಿ ಪೂಜ್ಯರಾದ ಶಾಂತವೀರ ಶಿವಾಚಾರ್ಯರಿಗೆ ಸಲ್ಲುತ್ತದೆ. ಆದರೆ ಅಲ್ಲಿಗೆ ಅವರ ಜ್ಞಾನ ದಾಹ ಅಲ್ಲಿಗೆ ನಿಲ್ಲುವದಿಲ್ಲ. ತದನಂತರ ಪೂಜ್ಯರಾದ ಶಾಂತವೀರ ಪಟ್ಟಧ್ಯಕ್ಷರು ಇನ್ನಷ್ಟು ಹೆಚ್ಚಿಗೆ ಕಲಿಯಲು ಕಮತಗಿಯ ಹುಚ್ಚಪ್ಪಯ್ಯ ಶಾಸ್ತ್ರೀ ಅವರ ಹತ್ತಿರ ವೇದಾಂತ ಶಾಸ್ತ್ರ ಮತ್ತು ವ್ಯಾಕರಣವನ್ನು ಒಂದೆರೆಡು ವರ್ಷ ಸತತ ಅಭ್ಯಾಸ ಮಾಡುತ್ತಾರೆ . ತದನಂತರ ಇನ್ನೂ ಹೆಚ್ಚಿನ ಶಿಕ್ಷಣ್ಕಾಗಿ ಅವರ 4-6 ಸಮವಯಸ್ಕ ಸ್ನೇಹಿತ ಸ್ವಾಮಿಗಳೊಂದಿಗೆ ಕಾಶಿಯತ್ತ ಪ್ರಯಾಣ ಮಾಡುತ್ತಾರೆ ಆದರೆ ಪ್ರಯಾಣದ ಮಧ್ಯದಲ್ಲಿ ಅವರ ಸ್ನೇಹಿತ ಸ್ವಾಮಿಯವರಿಗೆ ಅನಾರೋಗ್ಯ ಉಂಟಾದ ನಿಮಿತ್ಯ ಕಾಶಿಗೆ ಹೋಗದೇ ತಿರುಗಿ ಬಬಲೇಶ್ವರಕ್ಕೆ ಬರುತ್ತಾರೆ.
ಇವರ ಒಂದು ವಿಶೇಷ ಗುಣ ಏನೆಂದರೆ, ಗುರು ಮತ್ತು ವಿರಕ್ತ ಎನ್ನುವ ಯಾವುದೇ ಬೇಧಭಾವ ಇಟ್ಟುಕೊಳ್ಳದೇ ಅವರು ಒಂದು ರೀತಿಯಲ್ಲಿ ಹೊಸ ಮಾರ್ಗವನ್ನು ಮುಂದುವರೆಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ಅಥಣಿಯ ಶ್ರೀ ಮುರಗೇಂದ್ರ ಸ್ವಾಮಿಗಳ ಬಗ್ಗೆ ಅಪಾರವಾದಂತಹ ಶ್ರದ್ಧೆ ಕಾಳಜಿ ಸಕ್ಯ ಇತ್ತು. ಎಷ್ಟು ಸಕ್ಯ ಇತ್ತೆಂದರೆ ಅಥಣೆಯ ಶ್ರೀ ಮುರಗೇಂದ್ರ ಸ್ವಾಮಿಯವರು ತಮ್ಮ ಕೊರಳಲ್ಲಿದ್ದ ಏಕಮುಖ ರುದ್ರಾಕ್ಷಿಯನ್ನು ಕಾಣಿಕೆಯಾಗಿ ಶಾಂತವೀರ ಪಟ್ಟಾಧ್ಯಕ್ಷರಿಗೆ ಕೊಡುತ್ತಾರೆ. ಗುರು ವಿರಕ್ತರ ಒಡನಾಟ ಹೇಗಿತ್ತೆಂಬುದನ್ನು ನಾವು ಆಗಿನಿಂದ ಕಾಣಬಹುದಾಗಿತ್ತು. ಅದೇ ತೆರನಾಗಿ ಅಥಣಿಯಲ್ಲಿ 63 ಪುರಾತನರ ಮಂಟಪಪೂಜೆ ನಡೆದಾಗ ಬಬಲೇಶ್ವರದಿಂದ ಭಕ್ತರನ್ನು ಹಾಗೂ ಸುತ್ತಮುತ್ತಲಿನ ಭಕ್ತರನ್ನು ಮನ ಒಲಿಸಿ 30 ಚೀಲ ಗೋದಿ ಮತ್ತು ಮೂರು ಸಾವಿರ ರೂ ನಗದನ್ನು ಚಕ್ಕಡಿಯಲ್ಲಿ ತುಂಬಿ ಕಳಿಸಿಕೊಡುತ್ತಾರೆ.
1916 ರಲ್ಲಿ ಬಬಲೇಶ್ವರದ ಈ ಮಠದಲ್ಲಿ ಒಂದು ರೀತಿಯ ವಿಷಮ ವಾತಾವರಣ ಉಂಟಾಗುತ್ತದೆ. ಏಕೆ ಈ ಪರಿಸ್ಥಿತಿ ಉಂಟಾಯಿತು ಎಂಬುದನ್ನು ಯಾವ ಗ್ರಂಥದಲ್ಲಿಯೂ ತಿಳಿಸಿಲ್ಲ, ಆದರೆ ಅಲ್ಲಿಯ ಭಕ್ತರೊಂದಿಗಿನ ಪೂಜ್ಯರ ವೈಮನಸ್ಸಿನ ಕಾರಣದಿಂದ ಈ ರೀತಿ ಪರಿಸ್ಥಿತಿ ಉಂಟಾಯಿತು ಎಂದು ಎಲ್ಲ ಗ್ರಂಥಗಳಿಂದ ತಿಳಿದುಬರುತ್ತದೆ. ಪೂಜ್ಯರಿಗೆ ತಾವು ಮಠದಲ್ಲಿ ಇಲ್ಲ ಕಾರಾಗೃಹದಲ್ಲಿ ಇದ್ದಂತೆ ಅನುಭವ ಆಗುತ್ತಿದೆ ಮನಸ್ಸಿಗೆ ನೆಮ್ಮದಿ ಇಲ್ಲ ಎಂಬ ಪೂಜ್ಯರ ಭಾವವನ್ನು ಲೇಖಕರು ತಿಳಿಸುತ್ತಾರೆ. ಅಲ್ಲಿಯೇ ಸಮೀಪದಲ್ಲಿರುವ 10 ಕಿ ಮೀ ಅಂತರದಲ್ಲಿರುವ ಹರಳೇಶ್ವರ ಎಂಬ ಜಾಗೃತ ಸ್ಥಾನ ಇದೆ ತುಂಬಾ ಸುಂದರವಾದ ಪರಿಸರ, ನಿಸರ್ಗ ರಮಣೀಯವಾದ ಪರಿಸರ. ಅಲ್ಲಿಗೆ ರಾತ್ರಿ ಯಾರಿಗೂ ಹೇಳದೇ ಯಾವ ವಸ್ತುವನ್ನು ತೆಗೆದುಕೊಳ್ಳದೇ ಕೇವಲ ಪೂಜೆ ಪುನಸ್ಕಾರಕ್ಕೆ ಬೇಕಾದ ಪರಿಕರಗಳೊಂದಿಗೆ ಹರಳೇಶ್ವರ ಕ್ಷೇತ್ರಕ್ಕೆ ಹೋಗುತ್ತಾರೆ.
ಈ ಹರಳೇಶ್ವರ ಕ್ಷೇತ್ರ ಚಾರಿತ್ರಿಕವಾಗಿ ಬಹಳ ಮಹತ್ವದ್ದಾಗಿದೆ.. ಏಕೆಂದರೆ ಚೆನ್ನಬಸವಣ್ಣನವರು ಉಳವಿ ಕಡೆಗೆ ಹೋರಟಾಗ ಇಲ್ಲಿಯೇ ತಂಗಿದ್ದರು . ಅಲ್ಲಿಗೆ ಹೋಗಿ ಪೂಜಾ ಅನುಷ್ಠಾನಕ್ಕೆ ಕುಳಿತುಕೊಳ್ಳುತ್ತಾರೆ. ಆಗ ಭಕ್ತರು ಪೂಜ್ಯರ ಮನ ಒಲಿಸಿ ಮರಳಿ ಬಬಲೇಶ್ವರಕ್ಕೆ ಕರೆತರಬೇಕೆಂದು ಹೋಗುತ್ತಾರೆ. ಆದರೆ ಪೂಜ್ಯರು ತಾವು ಬಬಲೇಶ್ವರಕ್ಕೆ ಬರುತ್ತೇನೆ ಆದರೆ ಮಠದಲ್ಲಿ ತಂಗುವದಿಲ್ಲ ಎಂಬ ಕರಾರವನ್ನು ತಿಳಿಸಿದರು. ನೋಡಲು ಸೌಮ್ಯ ಸ್ವಭಾವದ ಅಂತರಂಗದಲ್ಲಿ ಅತ್ಯಂತ ನಿಷ್ಠುರ ಭಾವವನ್ನು ಹೊಂದಿರುವ ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರು ಅತ್ಯಂತ ವಿಶಿಷ್ಟವಾದ ನಿರ್ಣಯ ತಿಳಿಸಿದರು. ತಮಗೆ ಬೇರೆಯದೇ ಆದ ಒಂದು ಜಾಗವನ್ನು ಶಿವಯೋಗಕ್ಕೆ ಯೋಗ್ಯವಾದ ಪ್ರದೇಶವನ್ನು ನೀಡಿದರೆ ಖಂಡಿತವಾಗಿ ಬರುವೆ ಎಂದರು ಆಗ ಆ ಊರಿನ ಪಾಟೀಲ ಮನೆತನದವರು 1916 ರ ಸಮಯದಲ್ಲಿ 18 ಎಕರೆ ಜಾಗೆಯನ್ನು ನೀಡಿ ಶಿವಯೋಗ ಧ್ಯಾನ ಮಾಡಲು ಸುಂದರವಾದ ಅನುಕೂಲಕರವಾದ ಶಿವಪೂಜಾ ಮಂದಿರವನ್ನು ನಿರ್ಮಿಸಿಕೊಡುತ್ತಾರೆ.
ಪೂಜ್ಯರು ಸ್ವತಃ ಸಾಹಿತಿಗಳು ಮತ್ತು ಸಾಹಿತಿಗಳಿಗೆ ಪುರಸ್ಕಾರ ಮಾಡುವಂತಹ, ಪ್ರೋತ್ಸಾಹ ನೀಡುವಂತಹ ಸ್ವಭಾವದವರು. ಈಗಾಗಲೇ ನಾವು ತಿಳಿದಂತೆ ಪೂಜ್ಯರು ಸಂಸ್ಕೃತದಲ್ಲಿ ಅಪಾರ ಜ್ಞಾನವನ್ನು ಗಳಿಸಿದ್ದರು ಹಾಗೂ ಗುರು ವಿರಕ್ತರ ಯಾವುದೇ ಭೇದಭಾವವಿಲ್ಲದಂತೆ ಅವರು ನಡೆದುಕೊಳ್ಳುತ್ತಿದ್ದರು ಎಂಬುದನ್ನು ನೋಡಿದ್ದೇವೆ. ಅವರು ಬರೆದಿರುವ ಸಂಸ್ಕೃತದ ಅಷ್ಟಕಗಳು ಅಥಣಿಯ ಮುರಗೇಂದ್ರ ಶಿವಯೋಗಗಳು, ಬಿದರಿಯ ಕುಮಾರಸ್ವಾಮಿ, ಹಾನಗಲ್ ದ ಕುಮಾರಸ್ವಾಮಿಗಳು ಹಾಗೂ ತಮ್ಮ ಬಬಲೇಶ್ವರ ಪೀಠದ ಎರಡನೇಯ ಗುರುಪಾದ ಸ್ವಾಮಿಗಳ ಕುರಿತು ಇವೆ.
ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರ ಒಂದು ಕಣ್ಣು ಶಿವಾರಾಧನೆ ಇದ್ದರೆ ಇನ್ನೊಂದು ಕಣ್ಣು ಸಾಹಿತ್ಯ ಆರಾಧನೆಯದಾಗಿತ್ತು ಎನ್ನಬಹುದು.
ಹಲವಾರು ಸಾಹಿತಿಗಳಿಗೆ ಹಲವಾರು ರೀತಿಯ ಸಹಾಯ ಸಹಕಾರ ನೀಡುತ್ತಾ ಸದಾ ಪ್ರೇರಣೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಸತತವಾಗಿ ಮಾಡುತ್ತಿದ್ದರು. ಮಧುರಚೆನ್ನರು ಹಲಸಂಗಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡು ನವೋದಯ ಸಂದರ್ಭದ 4 ನೇಯ ಮಹತ್ವದ ಕೇಂದ್ರವಾಗಿ ಗುರುತಿಸಲು ಕಾರಣೀಭೂತರಾಗಿದ್ದ ಮಧುರ ಚೆನ್ನರು ಆಗಾಗ ಬಬಲೇಶ್ವರದ ಶಾಂತವೀರ ಪಟ್ಟಾಧ್ಯಕ್ಷರ ಮಠಕ್ಕೆ ಬರುತ್ತಿದ್ದರು ಅವರು ಹೇಳಿ ಕೇಳಿ ಬರುವಂತಹ ಪ್ರಸಂಗ ಇರಲಿಲ್ಲ . ಮಧುರ ಚೆನ್ನರಿಗೆ ಧ್ಯಾನ, ಆಧ್ಯಾತ್ಮದ ಒಲವು ಅಥವಾ ಏನಾದರೂ ತಿಳಿದುಕೊಳ್ಳಬೇಕಾಗಿತ್ತೆಂದರೆ ಅವರು ಮಠಕ್ಕೆ ಬರುತ್ತಿದ್ದರು ಹಾಗೂ ಆರಾರು ತಿಂಗಳವರೆಗೆ ಮಠದಲ್ಲಿಯೇ ಪೂಜ್ಯರೊಂದಿಗೆ ಇರುತ್ತಿದ್ದರು. ಸದಾ ಪೂಜ್ಯರು ಅವರಿಗೆ ಬೆಂಬಲಕೊಡುತ್ತಿದ್ದರು.
ವಚನ ಪಿತಾಮಹ ಡಾ ಗು ಹಳಕಟ್ಟಿಯವರು ಸಹ ಒಂದು ಸಾರಿ ವಚನ ಕಟ್ಟುಗಳನ್ನು ತೆಗೆದುಕೊಂಡು ಬಬಲೇಶ್ವರಕ್ಕೆ ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರ ಹತ್ತಿರ ಬರುತ್ತಾರೆ. ಪೂಜ್ಯರು ಅವರಿ ಉಭಯ ಕುಶಲೋಪಹರಿ ವಿಚಾರಿಸಿ, ಬರಲು ಕಾರಣವೇನು? ಎಂದು ಕೇಳಿದಾಗ, ನಾನು ತುಂಬಾ ಕಷ್ಟದಲ್ಲಿ ಇದ್ದೇನೆ, ಹಿತಚಿಂತಕ ಮುದ್ರಣಾಲಯದ ಕೆಲಸಗಾರರಿಗೆ ಸಂಬಳ ನೀಡಲು ಹಣ ಇಲ್ಲ ಆದ್ದರಿಂದ ಈ ಪುಸ್ತಕಗಳನ್ನು ತೆಗೆದುಕೊಂಡು ನನಗೊಂದಿಷ್ಟು ಹಣ ನೀಡಿದರೆ ತುಂಬಾ ಸಹಾಯವಾಗುತ್ತದೆ ಹಾಗೂ ವಚನ ವಾಂಘ್ಮಯ ಕೆಲಸ ಮುಂದುವರೆಸುತ್ತೇನೆ ಎಂದು ಅರಿಕೆ ಮಾಡಿಕೊಳ್ಳುತ್ತಾರೆ.
ಆಗ ಪೂಜ್ಯರು ಈ ಪುಸ್ತಕಗಳು ಅತ್ಯಂತ ಬೆಲೆ ಬಾಳುವಂತಹವು ಅವುಗಳನ್ನು ನೀವು ಬೇರೆ ಕಡೆ ಮಾರಾಟ ಮಾಡಿ ಅದರಿಂದ ಒಂದಿಷ್ಟು ಹಣ ಹೊಂದಿಸಿಕೊಳ್ಳಬಹುದು ನಾನು ನನ್ನ ಮಠದಿಂದ ಹಣ ಕೊಡುತ್ತೇನೆ ಎಂದು ಹೇಳಿ ಶಿವಪೂಜಾ ಮಠಕ್ಕೆ ಹೋಗಿ ಅಲ್ಲಿಯ ಕಬ್ಬಿಣದ ಟ್ರಂಕದಲ್ಲಿಯ 250 ರೂ ತಂದು ಕೊಟ್ಟರು. ಸದ್ಯದಲ್ಲಿ ಇಷ್ಟೇ ಇದೆ ಇದನ್ನು ತೆಗೆದುಕೊಂಡು ಪ್ರಕಟನೆ ಪ್ರಸಾರ ಮುಂದುವರೆಸಿ ಎಂದು ಹೇಳಿ ಪುಸ್ತಕ ಸಮೇತ ಕಳಿಸಿಕೊಟ್ಟರು.
ಅದಾದ ನಂತರ ಡಾ ಫ ಗು ಹಳಕಟ್ಟಿಯವರು ಮತ್ತೊಂದು ಸಾರಿ ಕಷ್ಟದಲ್ಲಿದ್ದಾಗ ಅವರು ಪೂಜ್ಯರಿಗೆ ಎಷ್ಟು ಸಾರಿ ಕೇಳುವುದು ಎಂಬ ಸಂಕೋಚದಿಂದ , ಅವರ ಕಡೆಗೆ ಹೋಗಲಿಲ್ಲ ಆದರೆ ಪೂಜ್ಯರಿಗೆ ಈ ಸಂಗತಿ ತಿಳಿದು, 4 ಚೀಲ ಜೋಳ 2 ಚೀಲ ಗೋಧಿ ಹಾಗೂ 350 ರೂ ನ್ನು ಭಕ್ತರ ಮೂಲಕ ಕೊಟ್ಟರು ಹಾಗೂ ಯಾವುದೇ ರೀತಿ ವಚನ ಪ್ರಸಾರಣ ಮತ್ತು ಪ್ರಸಾರದಲ್ಲಿ ಅಡಚಣೆ ಆಗಬಾರದೆಂದು ಬೆಂಬಲ ನೀಡಿದರು. ಮತ್ತೊಂದು ಸಲ ಹೀಗೆಯೇ 2 ಚೀಲ ಕಡ್ಲಿ ಹಾಗೂ 3 ಚೀಲ ತೊಗರಿಯನ್ನು ಸಹ ಕೊಟ್ಟರು ಎಂಬ ಘಟನೆಯನ್ನು ಬೇರೆ ಬೇರೆ ಆಕರ ಗ್ರಂಥಗಳಿಂದ ತಿಳಿಯುತ್ತದೆ.
ಇಷ್ಟೇ ಅಲ್ಲದೇ ಆಗಿನ ಸಂಧರ್ಭದಲ್ಲಿರುವ ದಿನಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳಿಗೆ ಹಣಕಾಸಿನ ನೆರವನ್ನು ಒದಗಿಸುತ್ತಿದ್ದರು, ಅನುಭಾವ, ನವಕರ್ನಾಟಕ, ಉದಯ, ವಿಶ್ವವಾಣಿ ಎಂಬ ಪತ್ರಿಕೆಗಳಿಗೆ ಹಣಕಾಸಿನ ನೆರವನ್ನು ನೀಡಿದ್ದನ್ನು ನೋಡಬಹುದು. ಹೀಗೆ ಈ ಮಠ ಸಮಾಜಮುಖಿಯಾಗಿ ಸದಾ ಕಾರ್ಯ ಮಾಡುತ್ತಿದ್ದರು.
ಪೂಜ್ಯರು ದೇಶ ಸೇವೆ ಈಶ ಸೇವೆಗಿಂತ ಮೇಲು ಎಂದು ನಂಬಿದವರು. 1942 ರಲ್ಲಿ ಮಹಾತ್ಮಾಗಾಂಧೀಜೀಯವರು ಕ್ವಿಟ್ ಇಂಡಿಯಾ ಗೆ ದೇಶ ಬಾಂಧವರಿಗೆ ಕರೆಕೊಟ್ಟಾಗ ವಿದ್ವಂಸಕ ಕಾರ್ಯದಲ್ಲಿ ತೊಡಗಿದ್ದವರನ್ನು ಬಂಧಿಬೇಕು ಅವಶ್ಯವೆನಿಸಿದರೆ ಗುಂಡಿಕ್ಕಬೇಕು ಎಂಬ ಆಜ್ಞೆ ಬ್ರಿಟೀಷ ಸರಕಾರ ಪೋಲಿಸರಿಗೆ ನೀಡಿದಾಗ ಭೂಗತರಾಗಿದ್ದ ಜಿಲ್ಲೆಯ ಪ್ರಮುಖ ಸ್ವಾತಂತ್ರ್ಯ ಯೋಧ ಶ್ರೀ ಚನಬಸಪ್ಪ ಅಂಬಲಿಯವರಿಗೆ ಮಠದಲ್ಲಿ ಅಡಗಿಸಿಕೊಳ್ಳಲು ಆಶ್ರಯ ನೀಡಿದರಲ್ಲದೇ, ಸ್ವಾತಂತ್ರ್ಯ ಯೋಧರನ್ನು ಹುರಿದುಂಬಿಸಲು ಊರ ಬಜಾರದಲ್ಲಿ ನಡೆದ ಸಭೆ ಅಧ್ಯಕ್ಷರಾಗಿ ಪ್ರೋತ್ಸಾಹಿಸಿದರೆಂಬುದು ಶ್ರೀಗಳ ಚರಿತ್ರೆಯಲ್ಲಿದೆ.
ಪೂಜ್ಯರು ಶಿಕ್ಷಣ ಪ್ರೇಮಿಗಳಾಗಿದ್ದರು ಹೀಗಾಗಿ 1961 ರ ಸುಮಾರಿಗೆ ಮಾಧ್ಯಮಿಕ ಶಿಕ್ಷಣಕ್ಕಾಗಿ ಶಾಲೆ ಸ್ಥಾಪನೆಗಾಗಿ ಮನ ಒಲಿಸುವ ಕಾರ್ಯ ಮಾಡುತ್ತಿರುವಾಗ, ಭಕ್ತರು ಒಪ್ಪಿ, ಶಾಲೆಗೆ ದೇಣೆಗೆ ಸಂಗ್ರಹಕ್ಕಾಗಿ ನೀವೂ ನಮ್ಮೊಂದಿಗೆ ಬನ್ನಿ ಶಾಲೆ ಪ್ರಾರಂಭಿಸೋಣ ಎಂದರು ಆಗ ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರು ನಾನು ಬೇಡುವವನಲ್ಲ, ನನಗೆ ಬೇಡಲು ಆಗುವುದಿಲ್ಲ. ಈಗಾಗಲೇ ನನಗೆ ಶಿವಪೂಜೆ ಮಂದಿರಕ್ಕಾಗಿ ನೀವು ನೀಡಿದ 18 ಎಕರೆ ಹೊಲದಲ್ಲಿ ಶಾಲೆಯನ್ನು ಕಟ್ಟಬಹುದು. ಶಿವಪೂಜೆಗಾಗಿ ಒಂದು ಮೂಲೆಯಲ್ಲಿರುವ ಪೂಜಾ ಮಂದಿರ ನನಗೆ ಸಾಕು ಎನ್ನುತ್ತಾ, ಶಾಲೆಯನ್ನು ಅಲ್ಲಿ ಪ್ರಾರಂಭಿಸಬಹುದು ಎಂದರು ಇದು ಭಕ್ತರಿಗೆ ದೊಡ್ಡ ಪ್ರೇರಣೆಯಾಯಿತು. ಎಲ್ಲ ಭಕ್ತರು ಸ್ವಯಂ ಪ್ರೇರಣೆಯಿಂದ ಅಪಾರವಾದ ದೇಣಿಗೆ ನೀಡಿ ಹಾಗೂ ಸಂಗ್ರಹಿಸಿ ಶಾಲೆ ಪ್ರಾರಂಭಿಸಿದರು. ಕ್ರಿ ಶ 1961 ರಲ್ಲಿ ಗ್ರಾಮಾಂತರ ವಿಧ್ಯಾವರ್ಧಕ ಸಂಘ ಎಂಬ ಶಿಕ್ಷಣ ಸಂಸ್ಥೆಯನ್ನು ಬಬಲೇಶ್ವರದಲ್ಲಿ ಸ್ಥಾಪಿಸಲಾಯಿತು.
ವಿಜಯಪುರ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳಲ್ಲಿ ದೊಡ್ಡದಾದ ಸಂಸ್ಥೆ “ ಶಿವಯೋಗ ಮಂದಿರ” ಇದನ್ನು ಸ್ಥಾಪಿಸಿದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳವರಿಗೆ ಶಿವಯೋಗ ಮಂದಿರ ನಿರ್ಮಾಣಕ್ಕಾಗಿ ಬಬಲೇಶ್ವರದ ಶಾಂತವೀರ ಪಟ್ಟಾದ್ಯಕ್ಷರು ಹಲಗಣಿ, ಕಾಖಂಡಕಿ, ಸಾರವಾಡ, ಅತಾಲಟ್ಟಿ ಮೊದಲಾದ ಗ್ರಾಮಗಳಲ್ಲಿ ಹಣ ಸಂಗ್ರಹಿಸಿ ಸಲ್ಲಿಸಿದರು.
ಪೂಜ್ಯರು ಸಂಘಟನಾ ಚತುರರಿದ್ದರು. ಹಾಗೂ ಸದಾ ಮೌನವಾಗಿಯೇ ಇರುತ್ತಿದ್ದರು. ಅಲ್ಲದೇ ಅಂತರಂಗದಲ್ಲಿ ತುಂಬಾ ನಿಷ್ಠುರರಾಗಿದ್ದರು. ಒಂದು ಸಾರಿ ಉತ್ತರಾಧಿಕಾರಿ ನೇಮಕ ಮಾಡುವ ಸಂದರ್ಭದಲ್ಲಿ. ಎಲ್ಲ ಭಕ್ತರನ್ನು ಕರೆದು ನಾನು 5 ಜನರ ಹೆಸರನ್ನು ಸೂಚಿಸುವೆ ಅದರಲ್ಲಿ ಒಬ್ಬರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬಹುದು ಅಥವಾ ನೀವು 5 ಜನರ ಹೆಸರನ್ನು ಸೂಚಿಸಿ ನಾನು ಒಬ್ಬರ ಹೆಸರನ್ನು ಸೂಚಿಸುವೆ ಎಂದಿದ್ದರು. ಹೀಗೆ ಬಹುತ್ವವನ್ನು ಗೌರವಿಸುತ್ತಲೇ, ಉತ್ತರಾಧಿಕಾರಿ ನೇಮಕ ಮಾಡುವ ನಿಷ್ಠುರವಾದ ನಿಲುವನ್ನು ಹೊಂದಿದ್ದರು.
ಇವರ ಸಂಘಟನಾ ಚತುರತೆಯನ್ನು ಗಮನಿಸಿದ ಬಂತನಾಳದ ಶಿವಯೋಗಿಗಳು 1963 ರಲ್ಲಿ 770 ಲಿಂಗ ಪ್ರತಿಷ್ಠಾಪನಾ ಮಾಡುವ ಸಂದರ್ಭದಲ್ಲಿ ಆ ಸಮಾರಂಭದ ಇಡೀ ಅಧ್ಯಕ್ಷ ಸ್ಥಾನವನ್ನು ಮತ್ತು ಅದಕ್ಕಿಂತ ಪೂರ್ವದಲ್ಲಿ 770 ಅಮರಗಣಂಗಳ ಮಂಟಪ ಪೂಜೆ ಮಾಡುವಾಗ ಅದರ ಕಾರ್ಯಕಾರಣೆ ಸಭೆಯ ಅಧ್ಯಕ್ಷರನ್ನಾಗಿ ಪೂಜ್ಯ ಶಾಂತವೀರ ಪಟ್ಟಾಧ್ಯಕ್ಷರನ್ನು ನೇಮಕ ಮಾಡಿದರು. ಅಲ್ಲಿ ಬಹಳ ಜನ ಪ್ರವಾಹ ಹರಿದು ಬರುತ್ತಿತ್ತು ಅವರಿಗೆ ಊಟ ವಸತಿ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿತ್ತು ಹಾಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕಾಗಿತ್ತು.
ಅಂತಹ ಜವಾಬ್ದಾರಿ ಕಾರ್ಯವನ್ನು ಪೂಜ್ಯರು ನಿಭಾಯಿಸುತ್ತಾರೆ ಎಂಬ ಬಲವಾದ ನಂಬಿಕೆ ಬಂತನಾಳ ಶಿವಯೋಗಿಗಳಿಗೆ ಇತ್ತು ಎಂಬುದನ್ನು ಕಾಣಬಹುದು.
ಪೂಜ್ಯರಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಪ್ರಜ್ಞೆ ಅತ್ಯಂತ ಪ್ರಕರವಾಗಿತ್ತು. ಭೂತ ಪ್ರೇತದ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಕೇವಲ ದುರ್ಬಲ ಮನಸ್ಸು ಇರುವವರಿಗೆ ಮಾತ್ರ ಭೂತ, ದೆವ್ವ ಕಾಣಿಸಿಕೊಳ್ಳುತ್ತವೆ ದೈರ್ಯಶಾಲಿಗಳಿಗೆ ಅವು ಕಾಣಿಸುವುದಿಲ್ಲ ಎಂದು ಭಕ್ತರಿಗೆ ತಿಳಿಹೇಳುತ್ತಿದ್ದರು.
ಒಂದು ಸಾರಿ ಒಬ್ಬ ಶಾಸ್ತ್ರಿಗಳು ಮಠಕ್ಕೆ ಬಂದಿದ್ದರು. ಶಾಸ್ತ್ರಿಗಳು ಪೂಜ್ಯರು ಭೂತ ದೆವ್ವ ನಂಬುವದಿಲ್ಲ ಭೂತ ದೇವ್ವದ ಪರಿಕಲ್ಪನೆಯನ್ನು ಹೇಗೆ ಮಾಡುವುದು ಎಂದು ಚಿಂತಿಸುತ್ತಿದ್ದರು. ಒಂದು ದಿನ ಊಟ ಮುಗಿಸಿ ಹೊರಗಡೆ ಕುಳಿತಾಗ ದೂರದಲ್ಲಿ ಉತ್ತರ ದಿಕ್ಕಿನಲ್ಲಿ ನಾಲ್ಕೈದು ಕೊಳ್ಳೆ ದೆವ್ವಗಳು ಕಾಣಿಸಿಕೊಂಡವು. ಅದನ್ನು ಗಮನಿಸಿದ ಶಾಸ್ತ್ರಿಗಳು ಪೂಜ್ಯರಿಗೆ ತೋರಿಸಿ ನೋಡಿ ಅಲ್ಲಿ ಕೊಳ್ಳೆ ದೆವ್ವಗಳು ಕುಣಿಯುತ್ತಿವೆ ನೀವು ದೆವ್ವ ಭೂತಗಳನ್ನು ನಂಬುವದಿಲ್ಲ. ಇದಕ್ಕೆ ಏನನ್ನುತ್ತೀರಿ ಎಂದರು. ಆಗ ಪೂಜ್ಯರು ಅವು ದೆವ್ವುಗಳಲ್ಲ ಎಂದರು. ಇಲ್ಲ ಅವು ಕುಣಿದಾಡುತ್ತಿವೆ ಅವು ಕೊಳ್ಳೆ ದೆವ್ವುಗಳೇ ಎಂದರು ಅದಕ್ಕೆ ಪೂಜ್ಯರು ಆಯಿತು ಈಗ ಮಲಗಿ ನಾಳೆ ನಿಮಗೆ ಕೊಳ್ಳೆ ದೆವ್ವ ತೋರಿಸುವೆ ಎಂದರು. ಅವರು ಮಲಗಿದ ನಂತರ ಉತ್ತರ ದಿಕ್ಕಿನೆಡೆಗೆ ಸಂಚಾರ ಮಾಡುತ್ತಾ ಹೋದರು. ಆ ಸ್ಥಳದಲ್ಲಿ ಅವರ ಕಾಲಿಗೆ ಎರಡು ಸಣ್ಣ ಸಣ್ಣ ಗುಂಡಕಲ್ಲುಗಳು ಬಡಿಯುತ್ತವೆ. ಅವುಗಳಿಗೆ ಬಟ್ಟೆಯನ್ನು ಕಟ್ಟಿ ಸುಟ್ಟಿರುವಂತಹದ್ದು ಇರುತ್ತದೆ ಅಲ್ಲಿ ಕುರಿಗಾರರ ಹಟ್ಟಿ ಇರುತ್ತದೆ ಅವರ ಮಕ್ಕಳು ರಾತ್ರಿ ಆ ಕಲ್ಲಿಗೆ ಬಟ್ಟೆ ಸುತ್ತಿ ಎಣ್ಣಿ ಹಾಕಿ ಚಿಮ್ಮಿಸುತ್ತಿದ್ದರು. ಇದರ ಬಗ್ಗೆ ಪೂಜ್ಯರು ಕುರಿಗಾರರಿಗೆ ಕೇಳಿದಾಗ, ಅದು ನಮ್ಮ ಮಕ್ಕಳು ಆಟವಾಡುತ್ತಿದ್ದರು ಎಂದು ತಿಳಿಸಿದನು. ಆಯಿತು ಇದು ಹೀಗೆಯೇ ಇರಲಿ ಎಂದು ಹೇಳಿ ಹೋದರು. ಮರುದಿನ ಆ ಶಾಸ್ತ್ರಿಜೀಯವರನ್ನು ಕರೆತಂದು ನಿಮ್ಮ ಕೊಳ್ಳೆ ದೆವ್ವಗಳು ಈಗ ಹೀಗೆ ಬಿದ್ದಿವೆ ನೋಡಿ ಎಂದು ಎಲ್ಲ ವಿಷಯ ವಿವರಿಸಿದರು ಹೀಗೆ ಅತ್ಯಂತ ವೈಜ್ಞಾನಿವಾದ ಆಲೋಚನೆಗಳನ್ನು ಪೂಜ್ಯರು ಹೊಂದಿದ್ದರು ಎಂಬುದಕ್ಕೆ ಇದು ನಿದರ್ಶನವಾಗಿದೆ.
ಪೂಜ್ಯರ ಇನ್ನೊಂದು ವಿಶೇಷತೆ ಎಂದರೆ ಅವರು ಎಂದೂ ಪಲ್ಲಕ್ಕಿ ಮೇಲೆ ಕುಳಿತುಕೊಳ್ಳುತ್ತಿರಲಿಲ್ಲ ಒಂದು ಸಾರಿ ಮನಗೂಳಿ ಕಾರ್ಯಕ್ರಮಕ್ಕೆ ಹೋಗಿದ್ದಾಗ, ಅವರು ಊರು ಸಮೀಪಿಸುತ್ತಿದ್ದಂತೆ ಒಂದು ಪಲ್ಲಕ್ಕಿ ಅವರಿಗಾಗಿ ವ್ಯವಸ್ಥೆ ಮಾಡಲಾಗಿತ್ತು ಆದರೆ ಪೂಜ್ಯರು ನಾನು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದಿಲ್ಲ ನರಮನುಷ್ನ ಮೇಲೆ ಮತ್ತೊಬ್ಬ ಮನುಷ್ಯ ಕುಳಿತುಕೊಳ್ಳುವುದನ್ನು ನಾನು ಒಪ್ಪುವದಿಲ್ಲ ಅಂದು ಹೇಳಿದರೂ ಸಹ ಭಕ್ತರು ಒಪ್ಪಿಕೊಳ್ಳದೇ, ಒತ್ತಾಯದಿಂದ ಅವರನ್ನು ಎತ್ತಿಕೊಂಡು ಹೋಗಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣೆಗೆ ಪ್ರಾರಂಭಿಸುತ್ತಾರೆ. ಆಶ್ಚರ್ಯ ಎಂದರೆ ಭಕ್ತರೆಲ್ಲ ಮೆರವಣೆಗೆಯಲ್ಲಿ ಹೊರಟರೆ ಪೂಜ್ಯರು ಇಡೀ ಪಲ್ಲಕ್ಕಿ ಒಳಗೆ ಬೆನ್ನು ಮೇಲೆ ಮಾಡಿ ಹೊಟ್ಟೆ ಕೆಳಗೆ ಮಾಡಿ ಮಲಗಿಕೊಂಡು ಬಿಡುತ್ತಾರೆ. ಅಂದರೆ ಒಂದು ರೀತಿಯ ಮೌನ ಪ್ರತಿಭಟನೆ ಎನ್ನಬಹುದು. ಭಕ್ತರು ತಿರುಗಿ ನೋಡಿ ತಮ್ಮಿಂದ ತಪ್ಪಾಯಿತು ಎಂದು ಹೇಳಿ ಪಲ್ಲಕ್ಕಿಂದ ಕೆಳಗೆ ಇಳಿಸಿದರು ನಂತರ ಪೂಜ್ಯರು ನೆಲದ ಮೇಲೆ ಕಾಲಿಟ್ಟು ನಿಜವಾದ ಜಾಗ ಇದು, ಇದರ ಮೇಲೆ ನಾನು ನಡೆಯಬೇಕು ಜನರ ಬೆನ್ನ ಮೇಲೆ ಹೆಗಲ ಮೇಲೆ ಅಲ್ಲ ಎಂದರು.
ಪೂಜ್ಯರ ಇನ್ನೊಂದು ದಿಟ್ಟ ನಿಲವು ಹೇಳಬೇಕೆಂದರೆ, ಹಲಗಲಿಯ ಡಾ ಬಾಳಾಸಾಹೇಬ ಸರನಾಯಕ ಎನ್ನುವವರು ವೈಧ್ಯಕೀಯ ಶಿಕ್ಷಣ ಕಲಿಯಲು ಆಸ್ಟ್ರೇಲಿಯಾಗೆ ಹೋಗಿರುತ್ತಾರೆ. ತಿರುಗಿ ಬರುವಾಗ ಆಸ್ಟ್ರೇಲಿಯಾದ ಕ್ರೈಸ್ತ ಮತದ ಯುವತಿಯನ್ನು ಕರೆದುಕೊಂಡು ಬರುತ್ತಾರೆ. ಆ ಯುವತಿ ಹಾಗೂ ಸರ್ ನಾಯಕರ ನಡುವೆ ಒಂದು ಕರಾರು ಆಗಿತ್ತು ಅದೇನೆಂದರೆ, ನಿಮ್ಮ ಕರ್ನಾಟಕದಲ್ಲಿ ನನಗೆ ಲಿಂಗದೀಕ್ಷೆಯನ್ನು ಕೊಡಿಸಿದರೆ ನಾನು ನಿಮ್ಮನ್ನು ವಿವಾಹವಾಗುತ್ತೇನೆ ಇಲ್ಲದಿದ್ದರೆ ನೀವು ನಮ್ಮ ಕ್ರೈಸ್ತಮತಕ್ಕೆ ಬರಬೇಕು ಆಗ ನಿಮ್ಮನ್ನು ವಿವಾಹವಾಗುತ್ತೇನೆ ಎಂದಿದ್ದರು. ಆಗ ಅವರು ಕರ್ನಾಟಕದ ತುಂಬೆಲ್ಲ ತಿರುಗಾಡಿದರು ಆದರೆ ಯಾರೂ ಲಿಂಗಧೀಕ್ಷೆ ಕೊಡಲು ಒಪ್ಪಲಿಲ್ಲ ಆಗ ಯಾರೋ ಒಬ್ಬರು ಅವರಿಗೆ ಶಾಂತವೀರ ಪಟ್ಟಾಧ್ಯಕರ ಕಡೆಗೆ ಹೋಗಲು ತಿಳಿಸಿದರು. ಅದಕ್ಕೆ ಅವರು ಬಬಲೇಶ್ವರದ ಶಾಂತವೀರ ಪಟ್ಟಾಧ್ಯಕ್ಷರ ಕಡೆಗೆ ಬಂದರು. ಆಗ ಪೂಜ್ಯರು ಲಿಂಗ ದೀಕ್ಷೆ ಕೊಡಲು ಒಪ್ಪಿದರು.ಮುಂದೋರಣೆಯ ನಿಲುವು ಅವರದಾಗಿತ್ತು. ಅದಕ್ಕೆ ಡಾ ಸರ್ ನಾಯಕರ್ ಅವರು ದೀಕ್ಷೆಗಾಗಿ ಎಷ್ಟು ಹಣ ನೀಡಬೇಕು ಎಂದು ಕೇಳಿದರು ಅದಕ್ಕೆ ಪೂಜ್ಯರು ದೀಕ್ಷೆಯನ್ನು ಮಾರಾಟ ಮಾಡಿಕೊಳ್ಳಲಾಗದು ಅದನ್ನು ನಾನು ಯಾವ ಕಾಲಕ್ಕೂ ಮಾರಾಟ ಮಾಡಲಾರೆ. ನೀವು ಅಲ್ಲಿಂದ ಒಬ್ಬ ಕ್ರೈಸ್ತ ಧರ್ಮದ ಮಹಿಳೆಯನ್ನು ಕರೆತಂದಿದ್ದೀರಿ, ನಾನು ನನ್ನ ಧರ್ಮದ ಆಚರಣೆಯ ಪ್ರಕಾರ ಅವರನ್ನು ಒಳಗೆ ಕರೆದುಕೊಂಡು ಲಿಂಗದೀಕ್ಷೆ ಮಾಡುವ ಕಾರ್ಯವನ್ನು ಈ ಮಠದಲ್ಲಿ ಕುಳಿತು ಮಾಡುವ ಕಾರ್ಯವಾಗಿದೆ ಎಂದರು. ಲಾಭ ಪಡೆಯುವ ಉದ್ಯೋಗ ಇದು ಅಲ್ಲ ಎಂದರು. ಮುಂದೆ ಬಿಜಾಪೂರದಲ್ಲಿಯ ಶೇಪರ್ಡ ಹಾಲ್ ದಲ್ಲಿ ಲಿಂಗ ದೀಕ್ಷೆ ಕೊಡುವ ಎಲ್ಲಕಾರ್ಯ ನಿರ್ವಹಿಸುವ ಸಿದ್ಧತೆ ಕಾರ್ಯ ನಡೆದಿರುತ್ತದೆ ಅಷ್ಟರಲ್ಲಿ ಇಳಕಲ್ ದಿಂದ ಬಂದ ಒಬ್ಬ ಜಂಗಮರು ಇದು ಧರ್ಮ ಸಮ್ಮತವಲ್ಲ ಎಂದು ತಕರಾರು ತೆಗೆಯುತ್ತಾರೆ ಅದಕ್ಕೆ ಪೂಜ್ಯರು ಉರಿಯ ಮೇಲೆ ಹುಲ್ಲುಕಡ್ಡಿ ಬಿದ್ದರೆ ಉರಿಗೆ ಏನಾದರೂ ಏನಾಗುತ್ತದೆಯೇ? ದೀಕ್ಷೆ ತೆಗೆದುಕೊಳ್ಳುವದರಿಂದ ನಮಗೇನು ಆಗುವದಿಲ್ಲ. ನಮ್ಮ ಧರ್ಮ ಹೇಗಿದೆ ಎಂದರೆ ಬೆಂಕಿಯ ಹಾಗೆ ಎಲ್ಲವನ್ನೂ ಶುಭ್ರವಾಗಿಸುವ ಶುದ್ಧಗೊಳಿಸುವ ಶಕ್ತಿ ನಮ್ಮ ಧರ್ಮಕ್ಕಿದೆ. ನೀವು ಬಿಟ್ಟರೆ ನಮ್ಮ ಧರ್ಮದ ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮೀಯನಾಗುತ್ತಾನೆ ಎಂದರು. ನೀವು ಒಂದಿಷ್ಟು ಆಧುನಿಕ ಆಲೋಚನೆ ಇಟ್ಟುಕೊಳ್ಳದಿದ್ದರೆ ಲಿಂಗಾಯತ ಧರ್ಮಕ್ಕೆ ಯಾವುದೇ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಸಾರುತ್ತಾರೆ. ಇಳಕಲ್ ದ ಜಂಗಮರು ಇವರ ಕಳಕಳಿಯನ್ನು ಅರಿತರು ಹಾಗೂ ಇವರ ಕಾರ್ಯಕ್ಕೆ ಸಮ್ಮತಿಸಿದರು. ಆ ಲಿಂಗ ದೀಕ್ಷೆ ಕಾರ್ಯ ಸಾಂಗ್ಯವಾಗಿ ನೆರವೇರಿತು.
ಪೂಜ್ಯರು ಮಮಕಾರ ರಹಿತರು. ಅವರು ಪೂರ್ವಾಶ್ರಮದ ಬಗ್ಗೆ ಎಳ್ಳಷ್ಟು ಮಮಕಾರ ಇಟ್ಟುಕೊಂಡಿರಲಿಲ್ಲ. ಒಂದು ಸಾರಿ ಅವರ ಪೂರ್ವಾಶ್ರಮದ ಸಹೋದರಿ ಬಸವಮ್ಮ ತನ್ನ ಅಣ್ಣ ದೊಡ್ಡ ಮಠದ ಪೀಠಾಧ್ಯಕ್ಷರು ಎಂದು ತಿಳಿದು ಬೇಟಿಯಾಗಲು ಬರುತ್ತಾರೆ. ಆಗ ಪೂಜ್ಯರು ಯಾವುದೇ ವಿಶೇಷ ಆತಿಥ್ಯ ಮಾಡಲಿಲ್ಲ. ಎಲ್ಲರ ಹಾಗೆ ಸರದಿಯಲ್ಲಿ ಬಂದು ಪೂಜ್ಯರಿಗೆ ನಮಸ್ಕರಿಸುತ್ತಾಳೆ. ಆದರೆ ಅಲ್ಲಿರುವ ಭಕ್ತನೊಬ್ಬ ಸಹೋದರಿಗೆ ಏನಾದರೂ ಮಠದಿಂದ ಕಾಣಿಕೆಯನ್ನು ನೀಡಲು ಪೂಜ್ಯರಿಗೆ ಮನವೊಲಿಸಬೇಕೆಂದಿದ್ದ. ಅದಕ್ಕೆ ಪೂಜ್ಯರು ಅವನಿಗೆ ಬೈಯ್ದು,ಅದು ನನ್ನ ಪೂರ್ವಾಶ್ರಮ ಅದಕ್ಕೂ ನನಗೂ ಏನೂ ಸಂಬಂಧವಿಲ್ಲ ಈಗ ಈ ಮಠವೇ ನನಗೆ ಕೇಂದ್ರ. ಈ ಮಠದ್ದನ್ನು ನನ್ನ ಪೂರ್ವಾಶ್ರಮದವರಿಗೆ ಹಂಚಲಾರೆ ಇದು ಅಂತಹ ಕೇಂದ್ರ ಅಲ್ಲ ಎಂದು ಹೇಳಿದರು. ಪ್ರಸಾದವಾಯಿತೇ ಎಂದು ಸಹೋದರಿಗೆ ಕೇಳಿದರು, ಆಗ ಆ ಸಹೋದರಿ ನನ್ನ ಅಣ್ಣನ ಹಾಗೆ ಇವರು ಮಾತನಾಡುತ್ತಿಲ್ಲ ಎಂದು ಆಶ್ಚರ್ಯವಾಯಿತು.ಅದಕ್ಕೆ ಇನ್ನೂ ಆಗಿಲ್ಲ ಎಂದು ಸಹೋದರಿ ಉತ್ತರಿಸಿದಳು. ಅದಕ್ಕೆ ಪೂಜ್ಯರು ಆಗಲಿ ತಾಯಿ ಪ್ರಸಾದ ಮುಗಿಸಿಕೊಳ್ಳಿ ಎಂದರು ಆಗ ಸಹೋದರಿಗೆ ತನ್ನ ಪೂರಾಶ್ರಮದ ಅಣ್ಣ ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂಬ ಅರಿವಾಯಿತು. ತಾನು ಈ ರೀತಿಯ ಆಶೆ ಇಟ್ಟುಕೊಂಡಿದ್ದು ತಪ್ಪು ಎಂಬ ಅರಿವಿನಿಂದ ಸಹೋದರಿ ಮರಳಿ ಹೋಗುತ್ತಾರೆ.
ಕ್ರಿ ಶ 1977 ರಲ್ಲಿ ಶ್ರೀ ಶಾಂತವೀರ ಮಹಾಸ್ವಾಮಿಗಳ 92 ನೇಯ ವರ್ಧಂತಿ ಉತ್ಸವ ಅದ್ದೂರಿಯಾಗಿ ಜರುಗಿತು. ಆಗ ಭಕ್ತರು ತಮ್ಮ ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳಿಗೆ ಅರ್ಪಿಸಿದ ಧನ ಕಾಣಿಕೆಯನ್ನು ಶ್ರೀಗಳು ತಮ್ಮ ಮಠಕ್ಕೆ ತೆಗೆದುಕೊಳ್ಳದೇ ಅದನ್ನು ಸರ್ವ ಭಕ್ತರ ಹಿತಕ್ಕಾಗಿ ವಿನಿಯೋಗವಾಗಬೇಕೆಂದು ಬಯಸಿದರು. ಆಗ “ ಶ್ರೀ ಶಾಂತವೀರ ಮಹಾಸ್ವಾಮಿಗಳ 92 ನೇ ವರ್ಧಂತಿ ಉತ್ಸವ ಸ್ಮಾರಕ ವಿಶ್ವಸ್ಥ ಮಂಡಳಿ” ಎಂಬ ಸಮಾಜ ಸೇವಾ ಸಂಸ್ಥೆ ರಚನೆಯಾಯಿತು. ಈ ಸಂಸ್ಥೆಯ ಮುಖಾಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಗೆ ಸ್ಕಾಲರ್ ಶಿಪ್ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
ಪೂಜ್ಯರಿಗೆ ವಯಸ್ಸು ಗತಿಸುತ್ತಾ ಬಂದಿತು 1552 ರಲ್ಲಿ ವಯೋಸಹಜವಾಗಿ ದೃಷ್ಠಿ ಮಂದವಾಗುತ್ತದೆ. ಕಣ್ಣು ಕಾಣದ ಸ್ಥಿತಿಗೆ ಬರುತ್ತದೆ. ಈ ಕಾರಣದಿಂದ 1957 ರಲ್ಲಿ ಎಡವಿ ಬೀಳುತ್ತಾರೆ. ತದನಂತರ 1963 ರಲ್ಲಿ ಮತ್ತೆ ಕಾಲು ಜಾರಿ ಎಡವಿ ಬೀಳುತ್ತಾರೆ. ಸೊಂಟಕ್ಕೆ ಪೆಟ್ಟು ಆಗುತ್ತದೆ. ಸಂಪೂರ್ಣವಾಗಿ ದೃಷ್ಠಿ ಮಂದವಾಗುತ್ತದೆ. ಆದರೆ ಅದನ್ನು ಎಂದೂ ಶಾಪ ಎಂದು ತಿಳಿಯಲಿಲ್ಲ
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.
ಎಂದು ನಮ್ಮ ಗುರುವೇ ಹೇಳಿದ್ದಾರೆ, ಬಸವಣ್ಣನವರೇ ಹೇಳಿದ್ದಾರೆ. ಅವರು ಕಣ್ಣುಇದ್ದುದ್ದಕ್ಕೆ ಅವರು ಹಾಗೆ ಹೇಳಿದ್ದಾರೆ. ಆದರೆ ನನಗೆ ದೇವರೇ ಅದನ್ನು ದಯಪಾಲಿಸಿದ್ದಾನೆ ಎಂಬ ಭಾವ ಹೊಂದಿರುತ್ತಾರೆ. ಹೀಗೆ ಬಂದಂತಹ ದೈಹಿಕ ತೊಂದರೆಯನ್ನು ಕೂಡ ಶಿವನ ಪ್ರಸಾದ ಎಂದು ಸ್ವೀಕಾರ ಮಾಡಿಕೊಂಡು ಬದುಕನ್ನು ನಡೆಸುತ್ತಾರೆ.
ಒಂದು ಸಾರಿ 1963 ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಸೊಲ್ಲಾಪೂರಕ್ಕೆ ಹೋಗಿರುತ್ತಾರೆ. ಅಲ್ಲಿಡಾ ಹಿರೇಮಠ ಎಂಬ ವೈದ್ಯರ ಮನೆಯಲ್ಲಿಯೇ ತಂಗಿ, ಚಿಕಿತ್ಸೆ, ಉಪಚಾರ ಪಡೆಯುತ್ತಿರುತ್ತಾರೆ. ಆಗ ಆ ವೈದ್ಯರ ಮಗ ಗುರುಕುಮಾರ ಎಂಬುವವನಿದ್ದನು. ಅವನು ತಮ್ಮ ಪೀಠಕ್ಕೆ ತುಂಬಾ ಯೋಗ್ಯ ಎಂದು ಪೂಜ್ಯರಿಗೆ ಅನಿಸಿತು. ಅವನನ್ನು ಪೀಠಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸುತ್ತಾರೆ. ತದನಂತರ ಮರಳಿ ತಮ್ಮ ಮಠಕ್ಕೆ ಪೂಜ್ಯರು ಬರುತ್ತಾರೆ. ನಂತರದಲ್ಲಿ ಕೆಲವೇ ತಿಂಗಳಲ್ಲಿ ಆ ವೈದ್ಯರು ತೀರಿಕೊಳ್ಳುತ್ತಾರೆ. ಅವರ ಶ್ರೀಮತಿಯವರು ನನಗೆ ಇದ್ದ ಒಬ್ಬನೇ ಮಗನನ್ನು ಮಠಕ್ಕೆ ಕೊಡಲು ಆಗುವುದಿಲ್ಲ ನನ್ನ ಯಜಮಾನರು ತೀರಿಕೊಂಡಿದ್ದಾರೆ. ನನಗೆ ತುಂಬಾ ಕಷ್ಟ ಆಗುತ್ತದೆ ನನಗೆ ನನ್ನ ಮಗನನ್ನು ದಯಪಾಲಿಸಿ ಪೂಜ್ಯರೇ ಎಂದು ಬೇಡಿಕೊಳ್ಳುತ್ತಾರೆ. ಆಗ ಪೂಜ್ಯರು ಆಯಿತು ನಿನಗೆ ಕಷ್ಟವಿದ್ದರೆ ಬೇಡ ಎಂದು ಹೇಳಿದರು. ನಂತರ ಶರಣರಾದ ಮುತ್ತಪ್ಪಾ ಸಂಕಣ್ಣವರ ಅವರ ಪುತ್ರ ಅರವಿಂದವರನ್ನು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಿಕೊಳ್ಳುತ್ತಾರೆ ಅವರು ವಿಜ್ಞಾನ ಪದವೀಧರರಾಗಿದ್ದರು. 1994 ರಲ್ಲಿ ಅವರಿಗೆ ಪಟ್ಟಾಧಿಕಾರ ಮಾಡುತ್ತಾರೆ. ತದನಂತರ ಶ್ರೀ ಮಹಾದೇವ ಶಿವಾಚಾರ್ಯರು ಎಂದು ನಾಮಕರಣ ಮಾಡುತ್ತಾರೆ. ಪ್ರಸ್ತುತ ಬಬಲೇಶ್ವರ ಮಠದ ಪೀಠಾಧಿಕಾರಿಗಳಾಗಿ ಸೇವೆ ನಿರ್ವಹಿಸುತ್ತಿದ್ದಾರೆ. 1979 ರಲ್ಲಿ ಪೂಜ್ಯರಿಗೆ ಗಂಟಲು ನೋವು ಉಂಟಾಗುತ್ತದೆ. ಅದಕ್ಕೆ ಭಕ್ತರು ಕ್ಯಾನ್ಸರ್ ಎಂದು ಹೆದರಿ ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಗೆ ಹೋಗಿ ಡಾ ಆರ್ ಬಿ ಪಾಟೀಲ ಅವರಿಗೆ ತೋರಿಸುತ್ತಾರೆ. ಆಗ ಡಾಕ್ಟರ್ ಕ್ಯಾನ್ಸರ್ ಇಲ್ಲ ಇದು ಬೇರೆ ತೊಂದರೆ ಎಂದು ತಿಳಿಸಿದಾಗ, ಭಕ್ತರು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ವಯೋಸಹಜತೆಯ ಕಾರಣದಿಂದ ಅನೇಕ ದೈಹಿಕ ಊನಗಳಿಂದ ನವೆಂಬರ್ 10, 1971 ರಲ್ಲಿ ರಂದು ಲಿಂಗೈಕ್ಯರಾಗುತ್ತಾರೆ. ಸಿದ್ಧಿಯ ಶ್ರೀಗಿರಿಯನ್ನೇರಿದ ಶ್ರೀಗಳ ಕಾಯ ಪಕ್ವವಾಗಿತ್ತು. ಪಕ್ವವಾದ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವ ಮುನ್ನ ಪರಶಿವ ತನಗೆಬೇಕೆಂದು ದಿನಾಂಕ 10-11-1979 ರಂದು ಎತ್ತಿಕೊಂಡ. ಬಬಲೇಶ್ವರದ ತಪೋ ಜ್ಯೋತಿ ನಂದಿದರೂ ಜ್ಞಾನಪ್ರಭೆ ಭಕ್ತರ ಮನದಾಳದಲ್ಲಿ ಇಂದಿಗೂ ಬೆಳಗುತ್ತಿದೆ.
ಹೀಗೆ ತರ್ಲಗಟ್ಟದ ಸಸಿ ಪುಣ್ಯಭೂಮಿ ಬಬಲೇಶ್ವರದಲ್ಲಿ ಮರವಾಗಿ ಬೆಳೆದು ಹಲವಾರು ಜನರಿಗೆ ನೆರಳಾಗಿ, ಸಮಾಜಮುಖಿ ಕಾರ್ಯಗಳನ್ನು ಮಾಡಿ ಅಪರೂಪದ ಮಠವನ್ನಾಗಿ ಬೆಳೆಸಿದ್ದನ್ನು ಕಾಣಬಹುದು.
ಇಬ್ಬರು ದಾರ್ಶನಿಕರು ಪೂಜ್ಯ ಶಾಂತವೀರ ಮಹಾಸ್ವಾಮಿಗಳನ್ನು ಕುರಿತು ವ್ಯಕ್ತಪಡಿಸಿದ ನುಡಿಮುತ್ತುಗಳನ್ನು ಇಲ್ಲಿ ಉಲೇಖಿಸಬಹುದು. ಅವುಗಳೆಂದರೆ,
1. ಕನ್ನಡ ಸಂಸ್ಕೃತ ಸಾಹಿತ್ಯ ಅಪ್ರತಿಮ ತಪಸ್ವಿ ವಿದ್ವಾಂಸ ಡಾ ಜಚನಿ ಅವರು ಹೇಳುವಂತೆ – “ನಾವು ಕನ್ನಡ ನಾಡನ್ನು ಸುತ್ತಿ ಸುಳಿದಿದ್ದೇವೆ. ಆದರೆ ಶಾಂತವೀರ ಶಿವಾಚಾರ್ಯರಷ್ಟು ಸುಸಂಸ್ಕೃತ ಸಾತ್ವಿಕ ಗುರುದೇವನನ್ನು ಕಾಣಲಿಲ್ಲ. ಜನತೆಯ ಕ್ಷೇಮಕ್ಕಾಗಿ ಅವರಷ್ಟು ಹೃದಯವಂತರನ್ನು ಕಾಣಲಿಲ್ಲ. ಈ ಭಾವಪೂರ್ವ ಸತ್ಯತೆಯನ್ನು ಅರಿಯಲು ಒಮ್ಮೆ ಬಬಲೇಶ್ವರಕ್ಕೆ ಹೋಗಿ ಅವರ ಪ್ರತ್ಯಕ್ಷ ದರ್ಶನ ಪಡೆಯಬೇಕು. ನಿಜಕ್ಕೂ ಅವರು ಬಬಲೇಶ್ವರದ ಬೆಳಕು. ಬರಿ ಹೃದಯರು ಭರಿತ ಹೃದಯದವರಾಗದೇ ಹಿಂದುರಗಲಾರರು” ಎಂದಿದ್ದಾರೆ.
2. ದಾರ್ಶನಿಕ ನಡೆದಾಡುವ ದೇವರೆಂದೆ ಪ್ರಸಿದ್ಧಿ ಪಡೆದ ಜ್ಞಾನ ಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳುವಂತೆ – “ ಶ್ರೀ ಶಾಂತವೀರ ಮಹಾಸ್ವಾಮಿಗಳು ಪೂಜ್ಯನೀಯರು ಪ್ರಾತಃ ಸ್ಮರಣೀಯರು. ಅವರು ಬದುಕು ಪವಿತ್ರ ಸ್ನೇಹ ಗಂಗೆ ನುಡಿ ಜೇನು ನಡೆ ನಿತ್ಯ ದೇವನೆಡೆಗೆ, ರಾಗ-ದ್ವೇಶಗಳನ್ನರಿಯದ ಅವರ ಅಂತರಂಗ ವಿರಾಗದನೆಲೆ, ವೈಜ್ಞಾನಿಕ ಒಲವು ಹಾಗೂ ಧರ್ಮಾನುಭೂತಿ ಅವರಲ್ಲಿ ಸಮ್ಮಿಲನ ಅವರ ಬಾಳೊಂದು ಪವಿತ್ರ ರಸಗಾಥೆ!
ಒಟ್ಟಾರೆಯಾಗಿ ಪೂಜ್ಯರಾದ ಶ್ರೀ ಶಾಂತವೀರ ಸ್ವಾಮಿಗಳು ಸಂಸ್ಕೃತ ಪಾಠಶಾಲೆಯನ್ನು ಹಾಗೂ ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿದವರಾಗಿ, ಹರಳೇಶ್ವರ ಕ್ಷೇತ್ರದ ಸಂಸ್ಥಾಪಕರಾಗಿ, ಶಿಕ್ಷಣ ಪ್ರೇಮಿಗಳಾಗಿ, ಸ್ತ್ರೀ ಕುಲೋದ್ದಾರಕರಾಗಿ, ಸ್ವಾತಂತ್ರ್ಯ ಯೋಧಕರಿಗೆ ಸಹಾಯಕಾರರಾಗಿ, BLDE ಸಂಸ್ಥೆಯ ಸ್ಥಾಪನೆಗೆ ಸಹಾಯಹಸ್ತ ಚಾಚಿದವರಾಗಿ, ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರಿಗೆ ನೆರವಾಗಿ, ಶಿವಯೋಗಮಂದಿರ ಬೆಳವಣೆಗೆಗೆ ಉದಾರ ಹಸ್ತ ಚಾಚಿದವರಾಗಿ ಹಾಗೂ ವೈಜ್ಞಾನಿಕ ಮನೋವೃತ್ತಿ ಮತ್ತು ಕ್ರಾಂತಿಕಾರಿ ಮನೋಭಾವ ಹೊಂದಿದವರಾಗಿ ಹೀಗೆ ಅದ್ಭುತವಾದ ಸಮಾಜಮುಖಿ ಕಾರ್ಯವನ್ನು ಮಾಡಿ, ಜನಸ್ತೋಮದಲ್ಲಿ ಚಿರಂತನವಾಗಿ ಪೂಜ್ಯರು ಉಳಿದಿದ್ದಾರೆ.
ಅಧ್ಯಾತ್ಮ ಎಂಬ ಹಿಟ್ಟಿನಲ್ಲಿ ಸದ್ಬಾವ ಎಂಬ ಬೆಲ್ಲವನ್ನು ಬೆರೆಸಿ ಬೋಧೆ ಎಂಬ ಅಡುಗೆ ಮಾಡಿ ಪರಮಾತ್ಮನ ಹಸಿವು ಇದ್ದವರಿಗೆ ಉಣಬಡಿಸಿದ ಸಂತರೇ ಶ್ರೀ ಶಾಂತವೀರ ಶಿವಾಚಾರ್ಯರು. ಹೀಗೆ ಇವರು ಶಾಂತರೂ ಹೌದು, ವೀರರೂ ಹೌದು, ಪ್ರಶಾಂತ ಹೃದಯ, ಗುರುವೆಂಬ ಗಡುವಿಕೆಯಿಲ್ಲ, ಹಿರಿತನದ ಹೆಮ್ಮೆ ಇಲ್ಲ, ಸರಿತನಕ್ಕೆ ಮನಸೋತವರಲ್ಲ, ತೊಂದರೆ ಹೇಳಿದವರಲ್ಲ, ಬಿಸಿಲನುಂಡು ಬೆಳದಿಂಗಳನು ಕೊಡುವ ಚಂದಿರವಂತೆ, ನೋವುಗಳನ್ನುಂಡು ನಲಿವು ನೀಡಿದ ಮಹಾನ್ ಗುರು ಆಗಿದ್ದಾರೆ.
–ಡಾ ದಾನಮ್ಮ ಚ ಝಳಕಿ, ಉಪಪ್ರಾಂಶುಪಾಲರು
ಕರ್ನಾಟಕ ಪಬ್ಲಿಕ ಶಾಲೆ,
ಕೆ ಕೆ ಕೊಪ್ಪ, ಬೆಳಗಾವಿ
ಆಧಾರ ಗ್ರಂಥಗಳು
1. ಬಬಲೇಶ್ವರ ಶಿವಯೋಗಿಗಳು (1976) – ಪ್ರಕಾಶನ ಸಮಿತಿ
2. ಶ್ರೀ ಶಾಂತವೀರರ ಸಾನಿಧ್ಯದಲ್ಲಿ ಕಂಡದ್ದು ಮತ್ತು ಉಂಡದ್ದು ಎಂಬ ಸಂಪಾದಿತ ಕೃತಿ – ಪ್ರೊ ಎಸ್ ಎಸ್ ಕಬ್ಬಿನ್, ಶ್ರೀ ವ್ಹಿ ಎಂ ಪಾಟೀಲ, ಮತ್ತು ಪ್ರಿನ್ಸಿಪಲ್ ಬಾಗಾದಿ
3. ಬಬಲೇಶ್ವರದ ಶಾಂತವೀರ ಪಟ್ಟಾಧ್ಯಕ್ಷರು – ಡಾ ಚೆನ್ನಪ್ಪ ಕಟ್ಟಿ
4. “ಬಬಲೇಶ್ವರದ ಹಿರಿಮೆ ಗರಿಮೆ” – ಫ ಗು ಸಿದ್ಧಾಪೂರ
5. ಮಹಾದೇವ – ಅಭಿನಂದನಾ ಗ್ರಂಥ – ಪ್ರಧಾನ ಸಂಪಾದಕರು ಶ್ರೀ ಫ ಗು ಸಿದ್ಧಾಪುರ ಮತ್ತು ಶ್ರೀ ಸುಭಾಸ ಯಾದವಾಡ
6. ಸಾಪ್ತಾಹಿಕ ಅಧ್ಯಾತ್ಮ ಸಾಧನಾ ಯೋಗ – ಬಬಲೇಶ್ವರ ಬೆಳಕು – ಸಂಗ್ರಾಹಕರು ವ ಪ್ರಕಾಶಕರು – ಶ್ರೀ ಭೀ ಮ ಢವಳಗಿ
7. https://www.youtube.com/watch?v=ZoGL7XUWFKA