ಶ್ರೀಅಲ್ಲಮಪ್ರಭು.( ಗುರುಬಸವ ) ಸ್ವಾಮೀಜಿ ಲಿಂಗೈಕ್ಯ
ಚಿಕ್ಕೋಡಿ ತಾಲ್ಲೂಕಿನ ಚಿಂಚಣಿಯ ಶ್ರೀ ಸಿದ್ಧಸಂಸ್ಥಾನ ಮಠ ಹಾಗೂ ಶಿರೋಳ ಶ್ರೀ ತೋಂಟದಾರ್ಯ ಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಅಲ್ಲಮಪ್ರಭು ( ಗುರುಬಸವ ) ಸ್ವಾಮಿಗಳವರು ಭಾನುವಾರ ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ.
ಬಸವಣ್ಣ ಮತ್ತು ಕನ್ನಡದ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವಾಗಿದೆ.ಪರಮ ಪೂಜ್ಯರು ಲಿಂ.ಪರಮ ಪೂಜ್ಯ ಗದುಗಿನ ಜಗದ್ಗುರುಗಳವರ ಪರಮ ಶಿಷ್ಯರು. ಅವರ ಅಣತಿಯಂತೆಯೇ ಶಿರೋಳ ಶ್ರೀ ತೋಂಟದಾರ್ಯ ಮಠ ನಂತರದಲ್ಲಿ ಚಿಂಚಣಿಯ ಸಿದ್ಧ ಸಂಸ್ಥಾನ ಮಠಗಳ ನಿರಾಭಾರಿ ಅಧಿಕಾರ ವಹಿಸಿಕೊಂಡು, ಮರಾಠಿ ಗಡಿಭಾಗದ ಈ ಮಠವು ಬರೀ ನಮ್ಮ ಶರಣ ಪರಂಪರೆಯ ಮಠವಾಗದೇ ಕನ್ನಡ ಪೀಠವೂ ಆಗಬೇಕೆಂಬ ಪೂಜ್ಯ ಜಗದ್ಗುರುಗಳವರ ಆದೇಶದಂತೆ ಸುಮಾರು 35 ವರ್ಷಗಳಿಂದ ಅಲ್ಲಿ ಪ್ರತಿ ವರ್ಷ ನವೆಂಬರ ತಿಂಗಳಲ್ಲಿ ತಮ್ಮ ಮಠದ ಜಾತ್ರೆಯನ್ನು ಕನ್ನಡ ಜಾತ್ರೆಯನ್ನಾಗಿಸಿ,ಅದಕ್ಕಾಗಿ ವಿಶೇಷವಾಗಿ ಕನ್ನಡ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು,ಕನ್ನಡ ಕವಿತೆಗಳ ಸಾಲುಗಳು,ಕನ್ನಡ ಪರವಾದ ಘೋಷವಾಕ್ಯಗಳುಳ್ಳ ಕನ್ನಡ ತೇರನ್ನು ನಿರ್ಮಿಸಿ ,ಬೆಳಗಾವಿ ಜಿಲ್ಲೆಯ ಎಲ್ಲಾ ಜನಪ್ರತಿಗಳು ಕಡ್ಡಾಯವಾಗಿ ಜಾತ್ರೆಯಂದು ಆ ತೇರನ್ನೆಳೆಯಬೇಕೆಂಬ ನಿಯಮವನ್ನು ರೂಢಿಸಿ, ಕನ್ನಡದ ಘಟಾನುಘಟಿ ವಿದ್ವಾಂಸರನ್ನು ಆಹ್ವಾನಿಸಿ, ನೂರಾರು ಕನ್ನಡಪರವಾದ ಮಹತ್ವದ ಗ್ರಂಥಗಳನ್ನು ಪ್ರಕಟಿಸಿ,ಕನ್ನಡ ಜಾಗೃತಿಗಾಗಿ ನಿರಂತರವಾಗಿ ಕಾರ್ಯೋನ್ಮುಖರಾಗಿರುತ್ತಿದ್ದ ಪೂಜ್ಯರು ಕನ್ನಡ ಸ್ವಾಮಿಗಳವರೆಂದೇ ಹೆಸರಾಗಿದ್ದರು.
ಮರಾಠಿಗರಲ್ಲಿ ಭಾರೀ ಭಯ ಮತ್ತು ಸಂಚಲನವನ್ನುಂಟು ಮಾಡಿದ್ದರು. ಚಿಂಚಣಿಯ ಅವರ ಮಠದಲ್ಲಿ ಅವರು ಕೂಡುತ್ತಿದ್ದ ಸಿಂಹಾಸನವು ಧರ್ಮ ಲಾಂಛನವಾನವಾದ ಕಾವಿ ಮತ್ತು ಕನ್ನಡ ಪ್ರಜ್ಞೆಯ ಕನ್ನಡ ಧ್ವಜಗಳಿಂದಲೇ ಅಲಂಕೃತವಾಗಿರುತ್ತಿತ್ತು. ಅಷ್ಟೇ ಮಠದಲ್ಲಿ ಅವರು ಅಲ್ಲಮಪ್ರಭು ಪೀಠ ಮತ್ತು ಕನ್ನಡ ಪೀಠಗಳೆಂದು ಪ್ರತ್ಯೇಕ ಪೀಠಗಳನ್ನೇ ರೂಪಿಸಿ, ಹೆಚ್ಚಾಗಿ ಕನ್ನಡ ಪೀಠದಲ್ಲೇ ಕೊಡುತ್ತಿದ್ದರು.ಇನ್ನೂ ವಿಶೇಷವೆಂದರೆ ಪೂಜ್ಯ ಜಗದ್ಗುರುಗಳವರ ಆದೇಶದಂತೆ ಸಿಂಹಾಸನಕ್ಕೆ ಕ್ರೂರತೆಯ ಪ್ರತೀಕವಾದ ಸಿಂಹದ ಬದಲಿಗೆ ಸೌಮ್ಯತೆಯ ಮತ್ತು ಕಾಯಕದ ಪ್ರತೀಕವಾದ ನಂದಿಯನ್ನು ಅಳವಡಿಸಿದರು.
ಒಬ್ಬ ವಿರಕ್ತರಾಗಿ ಬಸವ ನಿಷ್ಠೆಯೊಂದಿಗೆ ಕನ್ನಡ ನಿಷ್ಠೆಯನ್ನು ಅಳವಡಿಸಿಕೊಂಡಿದ್ದ ಪೂಜ್ಯರು ವಿಶೇಷವಾದ ಚಿತ್ರಕಲೆ ಮತ್ತು ಬೋನ್ಸಾಯ್ ಮರಗಳನ್ನು ಬೆಳೆಸುವ ವಿಶೇಷ ಆಸಕ್ತಿಯನ್ನು ಗುರುಗಳವರಿದ ಪೂಜ್ಯ ಜಗದ್ಗುರುಗಳವರ ವಿಶೇಷ ಪ್ರೋತ್ಸಾಹದ ಮೇರೆಗೆ ಬೆಳಸಿಕೊಂಡಿದ್ದರು. ಬರೀ ಕನ್ನಡ ಜಾತ್ರೆಯನ್ನು ನೆರವೇರಿಸದೇ ಕನ್ನಡ ತಿಳುವಳಿಕೆ ಹಾಗೂ ಪ್ರಜ್ಞೆಯನ್ನು ತಲೆಮಾರುಗಳಿಗೆ ತಲುಪಿಸುವ,ದಾಖಲಿಸುವ ಘನೋದ್ದೇಶದಿಂದ ನೂರಾರು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಈಗ್ಗೆ ಎರಡು ವರ್ಷಗಳ ಹಿಂದೆ ಪೂಜ್ಯರಿಗೆ ಅರುವತ್ತು ತುಂಬಿದ ಹಾಗೂ ಚಿಂಚಣಿಯ ಮಠದ ಪೀಠಾರೋಹಣದ ರಜತ ಮಹೋತ್ಸವ ಅಂಗವಾಗಿ ಗುರುಗಳವರಾದ ಪ್ರೊ.ಚಂದ್ರಶೇಖರ ವಸ್ತ್ರದರವರ ಪ್ರಧಾನ ಸಂಪಾದಕತ್ವ ಮತ್ತು ಶ್ರೀ ಪ್ರಕಾಶ ಗಿರಿಮಲ್ಲನವರ ಶ್ರೀ ಶಿವನಗೌಡ ಅವರುಗಳ ಸಂಪಾದಕತ್ವದಲ್ಲಿ ಕನ್ನಡ ಪ್ರಭು ಎಂಬ ಗೌರವ ಗ್ರಂಥವನ್ನು ಪ್ರಕಟಿಸಲಾಗಿದೆ.
ಇದರಲ್ಲಿ ನಾನು ಹಿಂದೆಯೇ ಅವರ ಕುರಿತಾಗಿ ಬರೆದಿದ್ದ ‘ಕನ್ನಡ ತೇರನೆಳೆವ ಕನ್ನಡ ಕುಲಗುರು’ ಹಾಗೂ ಕನ್ನಡ ಸಾಹಿತ್ಯಕ್ಕೆ ‘ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ಕೊಡುಗೆ ‘ಎಂಬೆರಡು ಲೇಖನಗಳು ಪ್ರಕಟಗೊಂಡಿವೆ.
ಈಗ್ಗೆ ಮೂರು ವರ್ಷಗಳಿಂದ ಪೂಜ್ಯರೊಂದಿಗೆ ಅತ್ಯಂತ ಪ್ರೀತಿ ಭಕ್ತಿಯ ಒಡನಾಟ ಆರಂಭವಾಯಿತು. ಅವರು ದೂರವಾಣಿಯಲ್ಲಿ ಮಾತನಾಡುತ್ತಿದ್ದರೆ ನನಗೇನೋ ರೋಮಾಂಚನವಾಗುತ್ತಿತ್ತು.ಪೂಜ್ಯ ಲಿಂಗೈಕ್ಯ ಜಗದ್ಗುರುಗಳವರ ಕುರಿತಾದ ಕೆಲವು ಅನುಭವಾತ್ಮಕ ಸಂಗತಿಗಳನ್ನು ಲಿಂಗೈಕ್ಯ ಜಗದ್ಗುರುಗಳವರ ಧ್ವನಿಯ ಶೈಲಿಯಲ್ಲಿಯೇ ಹೇಳುತ್ತಿರುವಾಗ ಸ್ವತಃ ಪೂಜ್ಯ ಜಗದ್ಗುರುಗಳವರೇ ನನ್ನೊಂದಿಗೆ ಮಾತನಾಡುತ್ತಿದ್ದಾರೆ ಎಂದೆನಿಸುತ್ತಿತ್ತು. ಪದೇಪದೇ ಅವರೊಂದಿಗೆ ಮಾತನಾಡಬೇಕೆನಿಸುತ್ತಿತ್ತು. ಇತ್ತೀಚೆಗೆ ಬಹಳ ದಿನಗಳಿಂದ ಪೂಜ್ಯರೊಂದಿಗೆ ಮಾತನಾಡಿರಲಿಲ್ಲ, ಕಳೆದ ವಾರ ನೆನೆಸಿಕೊಂಡೆನಾದರೂ ಯಾಕೋ ಸುಮ್ಮನಾದೆ. ಆದರೆ ಅವರೀಗ ಶಾಶ್ವತವಾಗಿ ಎಲ್ಲರೊಂದಿಗೂ ಸುಮ್ಮನಾಗಿಬಿಟ್ಟರು. ನಾನೂ ಸೇರಿ ಅವರೊಂದಿಗೆ ಅತ್ಯಂತ ಭಕ್ತಿ ಪ್ರೀತಿಯ ಒಡನಾಡಿಗಳಾದ ಅನೇಕರಲ್ಲೀಗ ಶೂನ್ಯ ಆವರಿಸಿದೆ; ಮಾತೃಮಯಿಗಳಾಗಿದ್ದ ನಮ್ಮ ಪೂಜ್ಯ ಜಗದ್ಗುರುಗಳವರು ಅಗಲಿದಾಗಿನಿಂದಲೇ ಶೂನ್ಯದಲ್ಲೇ ಇದ್ದ ನಮಗೆಲ್ಲಾ ಧಿಡೀರಾಗಿ ಅಂಥದ್ದೇ ಮತ್ತೊಂದು ಆಘಾತವಾಗಿದೆ.
ಇಷ್ಟನ್ನು ಹೊರತಾಗಿ ಮತ್ತೇನನ್ನು ಹೇಳಲು ನಮ್ಮಿಂದಾಗದು. ಹೋಗಿ ಬನ್ನಿ ಪೂಜ್ಯರೇ…..ತಮಗೆ ಭಕ್ತಿ ಭಾವ ಪೂರ್ಣ ಶರಣಾಂಜಲಿಗಳು.🙏🏿🙏🏿🙏🏿🙏🏿🙏🏿🙏🏿
-ಕೆ.ಶಶಿಕಾಂತ. ಲಿಂಗಸೂಗೂರ