ಕೋರ್ಟ್ ಮೂಲಕ ಧರ್ಮ ಮಾನ್ಯತೆ -ತಪ್ಪು ನಿರ್ಧಾರ.

ಕೋರ್ಟ್ ಮೂಲಕ ಧರ್ಮ ಮಾನ್ಯತೆ -ತಪ್ಪು ನಿರ್ಧಾರ.
ಲಿಂಗಾಯತ ಧರ್ಮದ ಮಾನ್ಯತೆ ಈಗ ದೇಶದ ತುಂಬೆಲ್ಲ ಸುದ್ಧಿಯಾದ ಸಂಗತಿ. ಅತ್ಯಂತ ನೋವಿನ ಸಂಗತಿಯೆಂದರೆ ಭಾರತ ಜನ್ಯ ಸಿಖ್ ಜೈನ ಬೌದ್ಧ ಧರ್ಮ ಗಳಿಗಿಂತ ಪ್ರಬಲ ಸನಾತನ ವಿರೋಧಿ ವಿದ್ರೋಹಿ ಚಳುವಳಿ ಸಾಹಿತ್ಯ ಹೊತ್ತು ಅವೈದಿಕ ಮತ್ತು ಹಿಂದುಯೇತರ ಧರ್ಮವೆಂದರೆ ಬಸವಣ್ಣನವರು ಮತ್ತು ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮವು.ಕರ್ನಾಟಕ ಸರಕಾರವು ನೇಮಿಸಿದ ನ್ಯಾಯಮೂರ್ತಿ ನಾಗಮೋಹನದಾಸ ವರದಿಯ ಶಿಫಾರಸ್ಸನ್ನು ಕೇಂದ್ರ ಸರಕಾರದ ಅಲ್ಪ ಸಂಖ್ಯಾತ ಇಲಾಖೆ ತಿರಸ್ಕರಿಸಿದೆ. ಇದು ಕರ್ನಾಟಕ ಸರಕಾರಕ್ಕೆ ಮತ್ತು ಲಿಂಗಾಯತ ಧರ್ಮಿಯರಿಗೆ ಮಾಡಿದ ಘೋರ ಅಪಮಾನ .

ನ್ಯಾಯಮೂರ್ತಿ ನಾಗಮೋಹನದಾಸ ಮತ್ತು ಹಿಂದಿನ ಹಿಂದುಳಿದ ಆಯೋಗ ಅಧ್ಯಕ್ಷರು ಡಾ ದ್ವಾರಕಾನಾಥ ಮತ್ತು ನುರಿತ ಸಂಶೋಧಕರು ಹಿರಿಯ ಸಾಹಿತಿಗಳು ತಜ್ಞರನೊಳಗೊಂಡ ಸಮಿತಿಯು ಕರ್ನಾಟಕ ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಕರ್ನಾಟಕ ಸರಕಾರವು ತನ್ನ ಸಚಿವ ಸಂಪುಟದಲ್ಲಿ ಚರ್ಚಿಸಿ ಒಮ್ಮತದಿಂದ ಕೇಂದ್ರ ಸರಕಾರಕ್ಕೆ ಅಲ್ಪ ಸಂಖ್ಯಾತ ಮಾನ್ಯತೆಗಾಗಿ ಶಿಫಾರಸನ್ನು ಮಾಡಿತ್ತು.
ಇದು ನ್ಯಾಯಾಂಗ ಮತ್ತು ಸಂವಿಧಾನವು ನೀಡಿದ ಧಾರ್ಮಿಕ ಹಕ್ಕಿನ ಅರ್ಥಪೂರ್ಣ ಚಲಾವಣೆ.

ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಹಕ್ಕು ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿದೆ.ಹಿಂದಿನ ಸರಕಾರದ ರಾಜಕೀಯ ಲೆಕ್ಕಾಚಾರವೇನೆ ಆಗಿರಲಿ ಸಮಾಜವಾದಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಬೇಕೆನ್ನುವ ಉದ್ದೇಶವನ್ನು ಹೊಂದಿತ್ತು. ಅದನ್ನು ಹಿಂದಿನ ಸರಕಾರವು ವ್ಯವಸ್ಥಿತವಾಗಿ ಸಂವಿಧಾನಿಕವಾಗಿ ಸಮಿತಿ ರಚಿಸಿ ವರದಿಯನ್ನು ಪಡೆದು ತನ್ನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಅಂಗೀಕಾರಗೊಳಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸನ್ನು ಮಾಡಿತ್ತು.ಇದನ್ನು ಪರಿಶೀಲಿಸದೆ ಎಂಟು ತಿಂಗಳು ತನ್ನ ಕಡತದಲ್ಲಿ ಮುಚ್ಚಿಟ್ಟು ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ತೀವ್ರವಾಗುವ ಸಂದರ್ಭದಲ್ಲಿ ಅದನ್ನು ತಿರಸ್ಕರಿಸಿ ನ್ಯಾಯಾಂಗ ಶಾಸಕಾಂಗ ಮತ್ತು ಸಂವಿಧಾನದ ಪಾವಿತ್ರತೆಗೆ ಅಪಮಾನ ಮಾಡಿದ ಕೇಂದ್ರ ಸರಕಾರದ ಧೋರಣೆಯು ಖಂಡನಾರ್ಹವಾಗಿದೆ.

ಇದರ ಬೆನ್ನಲ್ಲೇ ಕೆಲ ಲಿಂಗಾಯತ ಮುಖಂಡರು ಲಿಂಗಾಯತ ಧರ್ಮ ಮಾನ್ಯತೆಯನ್ನು ಕೋರ್ಟ್ ಮೂಲಕ ಪಡೆಯುವದಾಗಿ ಮತ್ತೆ ಲಿಂಗಾಯತರನ್ನುತಪ್ಪು ದಾರಿಗೆ ತಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಲಿಂಗಾಯತರು ಬಸವಾಭಿಮಾನಿಗಳು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿ ಸಂಯಮ ಸಮಾಧಾನದಿಂದ ಮುಂದಿನ ಆಗುಹೋಗುಗಳ ಬಗ್ಗೆ ಎಲ್ಲಾ ಲಿಂಗಾಯತ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಸಂವಿಧಾನಿಕ ಹೋರಾಟವನ್ನು ಮುಂದುವರೆಸಬೇಕು.

ಕೋರ್ಟ್ ಗೆ ಏಕೆ ಹೋಗಬೇಕು ?
ಲಿಂಗಾಯತ ಚಳುವಳಿಯ ಹೋರಾಟದ ರೂಪರೇಷೆ ರೂಪಿಸುವಲ್ಲಿ ಒಮ್ಮತ ಕಂಡು ಬಂದಿಲ್ಲ. ಹಿಂದಿನ ಕರ್ನಾಟಕ ಸರಕಾರವು ಕನ್ನಡಿಗರ ಬಸವಾಭಿಮಾನಿಗಳ ಅಸ್ಮಿತೆ ಕಾಪಾಡುವ ಮನೋಭೂಮಿಕೆಗೆ ಎಳ್ಳು ನೀರು ಬಿಡುವಂತಾಗಬಾರದು. ಧಾರ್ಮಿಕ ಮಾನ್ಯತೆಗೂ ಕೋರ್ಟ್ ಗೂ ಯಾವ ಸಂಬಂಧವು.?
ಸ್ವಾಮಿ ನಾರಾಯಣ್ ಪಂಥದವರು, ವಾರಕರಿ ಪಂಥ ,ಬ್ರಹ್ಮ ಸಮಾಜ ,ಪ್ರಾರ್ಥನಾ ಸಮಾಜ ,ಚೈತನ್ಯ ಪಂಥದವರು ರಾಮಕೃಷ್ಣ ಮಿಷನ್,ಅಷ್ಟೇ ಯಾಕೆ ಇತ್ತೀಚಿಗೆ ಬ್ರಹ್ಮ ಕುಮಾರಿ ಸಂಸ್ಥೆಯವರು ತಮ್ಮ ಅಸ್ಮಿತೆಯ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ ಅವು ಯಾವು ಸಫಲಗೊಳ್ಳಲಿಲ್ಲ.
ಡಾ ಮಾತೆ ಮಹಾದೇವಿಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸ್ವತಂತ್ರ ಧರ್ಮ ಮಾನ್ಯತೆಗೆ ಹೂಡಿದ ದಾವೆಯಲ್ಲಿ ,ನ್ಯಾಯಮೂರ್ತಿಗಳು ಧಾರ್ಮಿಕ ವಿಷಯಗಳು ಸಂವಿಧಾನಿಕ ನ್ಯಾಯಾಂಗ ವ್ಯವಸ್ಥೆಗೆ ಬರುತ್ತವೆ *( Constitutional court )* ಹೊರತು ಕಾನೂನಾತ್ಮಕ ನ್ಯಾಯಾಲಯಕ್ಕೆ *(Judiciary Court )* ಅಲ್ಲವೆಂಬ ಸ್ಪಷ್ಟ ಅಭಿಮತಕ್ಕೆ ಬಂದು ಅಂತಹ ಮಾರ್ಗವನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಇಂತಹ ಹಲವು ಪ್ರಯತ್ನಗಳು ಈಗಾಗಲೇ ದೇಶದ ಬೇರೆ ಬೇರೆ ಭಾಗದಿಂದ ನಡೆದಿವೆ.

2002 ರಲ್ಲಿ ಬಾಳ ಪಾಟೀಲ ಅವರು ಜೈನ ಧರ್ಮಮಾನ್ಯತೆಗಾಗಿ ಕೋರ್ಟ್ ಮೆಟ್ಟಿಲು ಏರಿದಾಗ ನ್ಯಾಯಮೂರ್ತಿ ಎಂ ಏನ್ ವೆಂಕಟಾಚಲಯ್ಯನವರು 2005 ರಲ್ಲಿ ಪೂರ್ಣ ಪೀಠದ ಆದೇಶವನ್ನು ಮಾಡಿದ್ದಾರೆ. ಅಲ್ಲಿಯೂ ಕೂಡ ಅವರು ಧಾರ್ಮಿಕ ಮಾನ್ಯತೆ ಮತ್ತುಅಲ್ಪ ಸಂಖ್ಯಾತ ಸ್ಥಾನಮಾನ ಆಯಾ ರಾಜ್ಯಗಳಿಗೆ ಬಿಟ್ಟ ವಿಷಯವಾಗಿದೆ. ಆಯಾ ರಾಜ್ಯ ಸರಕಾರಗಳು ಧಾರ್ಮಿಕ ಅಲ್ಪ ಸಂಖ್ಯಾತ ಸ್ಥಾನಮಾನವನ್ನು ಭಾಷ ಅಲ್ಪ ಸಂಖ್ಯಾತ ಸ್ಥಾನಮಾನ ನಿರ್ಧರಿಸುವ ಮಾನದಂಡವನ್ನು ಅನುಸರಿಸಬೇಕು ಎಂದು ಹೇಳುತ್ತಾ ಸಂವಿಧಾನಾತ್ಮಕವಾದ ನಡೆಗೆ ಅವರು ಸೂಚಿಸಿದರು.(2005 ).
ವಸ್ತು ಸ್ಥಿತಿ ಹೀಗಿರುವಾಗ ಲಿಂಗಾಯತ ಮುಖಂಡರು ಸಾರಾಸಾರ ಚರ್ಚಿಸಿದೆ ಮತ್ತೆ ಕೋರ್ಟ್ ಮೆಟ್ಟಿಲು ಏರಿ ಹಿನ್ನೆಡೆ ಅನುಭವಿಸುವಂತಾಗಬಾರದು.

ಹಾಗಿದ್ದರೆ ಮುಂದಿನ ನಡೆ ಏನು ?
ಕರ್ನಾಟಕ ಸರಕಾರವು ತನ್ನ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿದ್ದು ಕೇಂದ್ರ ಸರಕಾರದ ಅಲ್ಪ ಸಂಖ್ಯಾತ ಆಯೋಗವು ಇದನ್ನು ತಿರಸ್ಕರಿಸಿದೆ. 2018 ನವೆಂಬರ್ 12 ರ ಪತ್ರದನ್ವಯ ಕೇಂದ್ರ ಸರಕಾರದ ಅಲ್ಪ ಸಂಖ್ಯಾತ ಆಯೋಗಕೆ ಕರ್ನಾಟಕ ಸರಕಾರವು ಶಿಫಾರಸ್ ಮಾಡಿದ್ದನ್ನು ಒಪ್ಪದೇ ತಿರಸ್ಕರಿಸಿದೆ. ಇದನ್ನು ಯಾವುದೇ ಭಾಷೆಯಲ್ಲಿಬರೆದಿರಲಿ . ತಿರಸ್ಕೃತ ಪತ್ರವು ಕರ್ನಾಟಕ ಅಲ್ಪ ಸಂಖ್ಯಾತ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಬಂದಿರುತ್ತದೆ. ಈಗ ಕರ್ನಾಟಕ ಸರಕಾರವು ತಾನು ಸಂವಿಧಾನಿಕ ಸಲ್ಲಿಸಿದ ಶಿಫಾರಸನ್ನು ಕೇಂದ್ರ ತಳ್ಳಿ ಹಾಕಿದ್ದನು ಅದು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಬಹುಸಂಖ್ಯಾತ ಲಿಂಗಾಯತ ಧರ್ಮಿಯರಿಗೆ ನ್ಯಾಯ ಒದಗಿಸಿಕೊಡಬೇಕು . ಸರಕಾರವು ಹಿಂದಿನ ಸರಕಾರದ ಮತ್ತು ಹಿಂದಿನ ಸಚಿವ ಸಂಪುಟದಲ್ಲಿ ಒಮ್ಮತದಿಂದ ಕೈಗೊಂಡ ನಿರ್ಣಯವನ್ನು ಇಂದಿನ ಸರಕಾರವೂ ಒಪ್ಪಲೇ ಬೇಕು.ಹೀಗಾಗಿ ಲಿಂಗಾಯತ ಧರ್ಮಿಯರು ಇಂದಿನ ಸರಕಾರದ ಮೇಲೆ ಶಾಸಕರ ಮಂತ್ರಿಗಳ ಮೂಲಕ ಒತ್ತಡ ಹಾಕಿ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ತಿರಸ್ಕೃತಗೊಂಡ ವರದಿಗೆ ಮೇಲ್ಮನವಿ ಸಲ್ಲಿಸಿ ನ್ಯಾಯ ಒದಗಿಸಲು ಮುಂದಾಗಬೇಕು.

ಭಾವನಾತ್ಮಕವಾಗಿ ಧಾರ್ಮಿಕದಂಥ ಸೂಕ್ಷ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ಪ್ರಚೋದನೆಗೆ ಒಳಪಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ದೃಶ್ಯ ಮಾಧ್ಯಮ ಪತ್ರಿಕಾ ಮಾಧ್ಯಮಗಳಲ್ಲಿ ವಾದ ವಿವಾದ ಹುಟ್ಟಿಸುವ ಹೇಳಿಕೆ ನೀಡದೆ, ಚರ್ಚಿಸದೆ ಲಿಂಗಾಯತರು ಸಂಪೂರ್ಣ ಪ್ರಮಾಣದಲ್ಲಿ ಸಂವಿಧಾನಾತ್ಮಕವಾಗಿ ಕಾರ್ಯಕ್ಷಮತೆಯನ್ನು ಹೊಂದಬೇಕು.ಇದು ನನ್ನಂತಹ ಅನೇಕರ ಅಭಿಪ್ರಾಯವಾಗಿದೆ,

ನಮಗೆ ಲಿಂಗಾಯತ ಧರ್ಮ ಮಾನ್ಯತೆ ಅಲ್ಪ ಸಂಖ್ಯಾತ ಸ್ಥಾನಮಾನ ಮುಖ್ಯವಾಗಿದೆ ರಾಜಕಾರಣ ಅದು ವ್ಯಕ್ತಿಗತ .ಒಂದು ಧರ್ಮವನ್ನು ಇಂತಹ ವಿಷಯಕ್ಕೆ ಬಳಸುವುದು ಸಂಪೂರ್ಣ ತಪ್ಪು.
ಲಿಂಗಾಯತ ಧರ್ಮ ಮಾನ್ಯತೆಯ ವಿಷಯವು ಸಂಪೂರ್ಣ ಸಂವಿಧಾನಿಕ ಮತ್ತು ಪಕ್ಷಾತೀತವಾಗಿರಲಿ . ಧರ್ಮ ಮಾನ್ಯತೆಯ ಹೋರಾಟವು ಲಿಂಗಾಯತ ವಿರುದ್ಧ ವೀರಶೈವವಾಗಲಿ ಅಥವಾ ಕಾಂಗ್ರೆಸ್ಸು ವಿರುದ್ಧ ಬಿಜೆಪಿಯಾಗಲಿ ಆಗಬಾರದು. ಅವರರವರ ಧಾರ್ಮಿಕ ಹಕ್ಕಿಗೆ ಅವರು ಹೋರಾಡಲಿ . ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಾನ್ಯತೆಗೆ ಯಾರೊಬ್ಬರ ಅಡ್ಡಿ ಕಾರಣವಾಗಬಾರದು. ತಜ್ಞರು ಧಾರ್ಮಿಕ ಮಾನ್ಯತೆಗೆ ಹೊರಡುವ ಮುಖಂಡರು ಇಂತಹ ಸೂಕ್ಷತೆಯನು ಅರಿತು ಮುಂದುವರೆದರೆ ಖಂಡಿತ ನ್ಯಾಯ ಸಿಗುತ್ತದೆ.

ಜಗವು ಕಂಡ ಶ್ರೇಷ್ಠ ಸಮಾಜವಾದಿ ಚಿಂತಕ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಕಳೆದ 900 ವರ್ಷಗಳಿಂದ ಅಡಿ ಅಡಚಣಿಗಳಿವೆ ಕಾರಣ ಇದು ಜಗತ್ತಿನ ಸರ್ವ ಶ್ರೇಷ್ಠ ವಿಚಾರಧಾರೆ ಹೊಂದಿದ ವಿದ್ರೋಹಿ ಸಾಹಿತ್ಯದ ಬಂಡಾಯ ಧರ್ಮವಾಗಿದೆ .ಲಿಂಗಾಯತ ಎಂದೆನ್ನುವುದು ಆಂದೋಲನ ಮತ್ತು ಚಳುವಳಿ ಎಂಬ ಅರ್ಥದಲ್ಲಿ ತೆಗೆದುಕೊಂಡರೆ ಲಿಂಗಾಯತ ಧರ್ಮ ಮಾನ್ಯತೆ ಅಷ್ಟೇ ಏಕೆ ಅವುಗಳಲ್ಲಿನ ತತ್ವಗಳು ವಿಶ್ವ ಮಾನ್ಯವೆನಿಸುತ್ತವೆ.
ಜನಪರ ಹೋರಾಟವನ್ನು ರೂಪಿಸಿ ನ್ಯಾಯವನ್ನು ಪಡೆಯುವುದು ಈಗ ನಮ್ಮ ಮುಂದಿರವ ಆಯ್ಕೆ ಮಾತ್ರ. ಸತ್ಯ ಮೇವ ಜಯತೆ ,ಸೋತಿದ್ದೇವೆ ಆದರೆ ನಮ್ಮ ಹೋರಾಟದ ಕಿಚ್ಚು ಸತ್ತಿಲ್ಲ.

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ -9552002338

One thought on “ಕೋರ್ಟ್ ಮೂಲಕ ಧರ್ಮ ಮಾನ್ಯತೆ -ತಪ್ಪು ನಿರ್ಧಾರ.

  1. Very Good article, some JLM office bearers misguiding the society, saying that CENTRAL GOVT NOT REJECTED, it’s absolutely shows that they favouring the Central Government. It’s REJECTED REJECTED & REJECTED. So as per your guidance, we should fight to resubmit the appeal to the Central Government. All party leaders unitedly must fight to convince Central Government for approval. Thanks 🙏

Comments are closed.

Don`t copy text!