ಬಸವಣ್ಣ ಗುರುವಿಲ್ಲದ ಗುಡ್ಡ

ಬಸವಣ್ಣ ಗುರುವಿಲ್ಲದ ಗುಡ್ಡ

ಹಲವು ಸಾಹಿತಿಗಳು ಸಂಶೋಧಕರು ಅದರಲ್ಲೂ ಮುಖ್ಯವಾಗಿ ಸನಾತನ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಉಳ್ಳವರು .
ಬಸವಣ್ಣನವರಿಗೆ ಇಲ್ಲದ ಗುರುವನ್ನು ತಂದು ಖೊಟ್ಟಿ ಇತಿಹಾಸ ಸೃಷ್ಟಿಸುತ್ತಾರೆ.
ಅಂತಹ ಹಸಿ ಸುಳ್ಳು ಬಸವಣ್ಣನಿಗೆ ಜಾತವೇದ ಮುನಿ ಅಥವಾ ಈಶಾನ್ಯ ದೇವ ಎಂಬ ಗುರುವಿದ್ದರು ಎಂದು ಪ್ರತಿಪಾದಿಸಿ ಬಸವಣ್ಣನವರ ಪರಿಪೂರ್ಣ ಕ್ರಾಂತಿಗೆ ಕಪೋಲ ಕಲ್ಪಿತ ಆಚಾರ್ಯರಿಗೆ ಸಲ್ಲಿಸುವ ಕುಟಿಲ ಹುನ್ನಾರ ಎಂದು ಹೇಳಬಹುದು.

ಕೆಲವು ತರ್ಕ ಮತ್ತು ಕಾರಣಗಳನ್ನು ಹುಡುಕೋಣ

ಯಜ್ಞೋಪವೀತ ಜನಿವಾರ ಧಾರಣೆ ತಿರಸ್ಕರಿಸಿದ ಬ್ರಾಹ್ಮಣ ಕುಟುಂಬದಲ್ಲಿನ ಬಾಲಕ ಬಸವಣ್ಣನಿಗೆ ಅಂದಿನ ಗುರು ಕುಲ ಹೇಗೆ ಅಕ್ಷರಜ್ಞಾನ ಕೊಡುತ್ತಾರೆ.

ಕಾರಣ ಅಕ್ಷರ ಜ್ಞಾನವು ಕೇವಲ ಉಪನಯನ ಹೊಂದಿದ ವೈದಿಕ ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿತ್ತು. ಜನಿವಾರ ತಿರಸ್ಕರಿಸಿದ ಬಸವಣ್ಣವರು ವೈದಿಕರ ದೃಷ್ಟಿಯಲ್ಲಿ ಅಬ್ರಾಹ್ಮಣ ಎಂದು ಅರ್ಥ. ಅಥವಾ ಆತ ಅಸ್ಪ್ರಶ್ಯ .
ವೈದಿಕ ಸಂಸ್ಕಾರ ಇಲ್ಲದವ ಶೂದ್ರ . ಮೇಲಾಗಿ ಬಾಗೇವಾಡಿ ಊರಿನ ಅಗ್ರಹಾರದ ಗುರುಗಳ ತಂದೆ ತಾಯಿ ವಿರೋಧದ ನಡುವೆಯೇ ಇಂತಹ ಶಿಕ್ಷಣ ಜ್ಞಾನ ಅಥವಾ ಗುರುಕುಲ ಶಿಕ್ಷಣ ಹೇಗೆ ಸಿಗಬಲ್ಲದು ? ಹೀಗಾಗಿ ಇದೊಂದು ಶುದ್ಧ ಸುಳ್ಳು.
ಮತ್ತು ವೈದಿಕ ಶಿಕ್ಷಣ ಕಲಿತ ಬಸವಣ್ಣ ವೇದ ಆಗಮ ಹೇಗೆ ವಿರೋಧಿಸದನು . ಜಾನಪದ ಕವಿಗಳು ಹೇಳುವಂತೆ ವೇದಗಳ ಹುಸಿಯನ್ನು ಬಸವಣ್ಣ ಬಯಲು ಮಾಡಿದ ಎಂದು ಹೇಳುತ್ತಾರೆ
ಹೀಗಾಗಿ ಗುರುಕುಲದಲ್ಲಿ ಬಸವಣ್ಣನವರ ಅಕ್ಷರ ಅಭ್ಯಾಸ ನಡೆದಿಲ್ಲ.

ಹಾಗಾದರೆ ಬಸವಣ್ಣನವರಿಗೆ ಅಕ್ಷರ ಜ್ಞಾನ ಯಾರು ಕೊಟ್ಟಿರಬಹುದು
ಬಸವಣ್ಣನವರಿಗೆ ಒಬ್ಬ ಹಿರಿಯ ಅಕ್ಕ ಇದ್ದಳು ಅವಳು ಅಕ್ಕನಾಗಮ್ಮ ಬಸವಣ್ಣನವರಿಗಿಂತ ಹನ್ನೆರಡು ವರ್ಷ ಹಿರಿಯಳು. ಅವಳ ಪತಿ ಶಿವಸ್ವಾಮಿ ವೇದ ಆಗಮ ಶಾಸ್ತ್ರ ಓದಿದವ ಇವರಿಬ್ಬರ ಸಹಾಯದಿಂದ ಕೂಡಲ ಸಂಗಮದಲ್ಲಿ ಶಿಕ್ಷಣ ಅಕ್ಷರ ಜ್ಞಾನ ಅಭ್ಯಾಸ ನಡೆದಿದೆ

ಮೇಲಾಗಿ ಕೂಡಲ ಸಂಗಮ ಅಂದಿನ ಪ್ರಸಿದ್ಧ ನಾಥ ಪಂತದ ಕೇಂದ್ರ ಅಗ್ರಹಾರವಾಗಿತ್ತು. ಅಲ್ಲಿ ಆಧ್ಯಾತ್ಮಿಕ ಪ್ರಗತಿಪರ ಚಿಂತನೆಗಳು ನಡೆಯುತ್ತಿದ್ದವು. ಪುರುಷ ಮಹಿಳೆಯರಿಗೆ ಸಮಾನ ಅವಕಾಶ ಇತ್ತು. ಹೀಗಾಗಿ ಅಕ್ಕ ನಾಗಮ್ಮ ತನ್ನ ತಮ್ಮನನ್ನು ಕರೆದುಕೊಂಡು ನಾಥ ಪಂಥದ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದರು.
ಹೀಗಾಗಿ ಬಸವಣ್ಣನವರ ಮೂಲ ಪ್ರಗತಿಪರ ಚಿಂತನೆಗೆ ವೈಚಾರಿಕ ಮನೋಭಾವ ಹೆಚ್ಚಲು ಕಾರಣವಾಯಿತು.

ಯಾರು ಈ ಜಾತವೇದ ಮತ್ತು ಈಶಾನ್ಯ ಮುನಿ
ಬಸವಣ್ಣನವರ ಜೀವನ ಚರಿತ್ರೆ
ಹರಿಹರನ ರಗಳೆಗಳಿಂದ ಮುಂದೆ ಬಸವರಾಜ ದೇವರ ರಗಳೆ ಒಂದು ಮೂಲ ಆಕಾರವಾಗಿ ಪ್ರೌಢದೇವರಾಯನ ಕಾಲದ ಸಾಹಿತಿಗಳು ಸಂಕಲನಕಾರ ಕೃತಿಗಳಲ್ಲಿ ಇಂತಹ ಕಟ್ಟು ಕಥೆ ಪುರಾಣ ಹುಟ್ಟಿಕೊಂಡವು.ಅದರಲ್ಲಿ ಮುಖ್ಯ ಸಿಂಗಿರಾಜನ ಪುರಾಣ.
ಇದನ್ನೇ ಮುಖ್ಯ ಆಕರ ಮಾಡಿ
ಮುಂದೆ ಕೆಲ ಸಂಶೋಧಕರು ಸಾಹಿತಿಗಳು ಬಸವಣ್ಣನಿಗೆ ಜಾತವೇದ ಮುನಿ ಎಂಬ ಗುರು ಇದ್ದನು ಎಂದು ವಾದಿಸಿದ್ದು ದುರಂತ.

ಬಸವಣ್ಣ ತನ್ನ ಗುರುವಿನ ಉಲ್ಲೇಖ ಏಕೆ ಮಾಡಲಿಲ್ಲ

ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎಂಬ ಅತ್ಯಂತ ಮುಕ್ತ ವೈಚಾರಿಕ ಮನೋಭಾವದ ಬಸವಣ್ಣ ಅಂದಿನ ಸಂಪೂರ್ಣ ಗುಲಾಮಗಿರಿಯ ವೈದಿಕಶಾಹಿಯ ವಿರುದ್ಧ ಬಂಡೆದ್ದವನು. ತನ್ನ ಯಾವುದೇ ವಚನಗಳಲ್ಲಿ ಇಂತಹ ಗುರು ಎಂಬ ಸೂಕ್ಷ್ಮ ವಿಷಯ ವಿಚಾರ ಪ್ರಸ್ತಾಪ ಮಂಡಿಸಿಲ್ಲ.
ದಾಸಯ್ಯ ಕಕ್ಕಯ್ಯ ಹರಳಯ್ಯ ಚೆನ್ನಯ್ಯ ಮುಂತಾದ ತಳ ಸಮುದಾಯದ ಜನರನ್ನು ಗುರುತಿಸಿ ಅವರನ್ನು ತನ್ನ ವಚನಗಳಲ್ಲಿ ದಾಖಲಿಸಿದ ಬಸವಣ್ಣ ತನಗೆ ವಿದ್ಯೆ ಬುದ್ಧಿ ಅಕ್ಷರ ಜ್ಞಾನ ಶಿಕ್ಷಣ ನೀಡಿದ ತನ್ನ ಗುರುವಿನ ಬಗ್ಗೆ ಬರೆಯದೆ ಇರಲು ಸಾಧ್ಯವೇ?

ಜನಪದಿಗರ ಅಭಿಮತ
ಜಾನಪದ ಜಗತ್ತಿನ ಪ್ರಾಮಾಣಿಕ ಸಾಹಿತಿಗಳು ಕವಿಗಳು ಬಸವಣ್ಣ ಗುರುವಿಲ್ಲದ ಗುಡ್ಡ ಎಂದು ಹೇಳಿ ಸಂಸ್ಕೃತ ಭೂಯಿಸ್ಟ್ ಪೂರ್ವಗ್ರಹ ಪೀಡಿತ ಸುಳ್ಳನ್ನು ದಾಖಲಿಸುವ ಎಲ್ಲಾ ಕಾಲದ ಸಂಶೋಧಕರಿಗೆ ತಕ್ಕ ಉತ್ತರ ನೀಡಿದ್ದಾರೆ
ಗುಡ್ಡ ಇಲ್ಲಿ ಎತ್ತರದ ಬೆಟ್ಟ ಎಂದು ಒಂದು ಅರ್ಥವಾದರೆ.
ಹೇಗೆ ಗುಡ್ಡ ಸ್ವಯಂ ನಿರ್ಮಿತಗೊಂಡಿದೆ ಹಾಗೆ ಸೃಷ್ಟಿಯ ಶಿಷ್ಯ ಬಸವಣ್ಣ.
ಇನ್ನೊಂದು ಅರ್ಥದಲ್ಲಿ ಗುಡ್ಡ ಎಂದರೆ ಶಿಷ್ಯ .ಗೂರುವಿಲ್ಲದ ಶಿಷ್ಯ ಎಂದು ಅರ್ಥ.
ಕೆಲವರು ಅನಗತ್ಯವಾಗಿ ಬಸವಣ್ಣನವರಿಗೆ ಇಲ್ಲದ ಕಾಲ್ಪನಿಕ ವ್ಯಕ್ತಿಗಳ ಸಂಬಂಧವನ್ನು ಬಸವಣ್ಣನವರ ಗುರು ಎಂದು ಹೇಳುವುದು ಸಂಪೂರ್ಣ ತಪ್ಪು.
ಚರ್ಚೆಗೆ ಮುಕ್ತ ಅವಕಾಶವಿದೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Ph -9552002338


e-ಸುದ್ದಿ ಯಲ್ಲಿ ಪ್ರಕಟವಾಗುವ ಲೇಖನ, ಬರಹಗಳಿಗೆ ಲೇಖಕರೇ ಹೊಣೆಗಾರರು. ಚರ್ಚಿಸುವುದಿದ್ದರೆ ಲೇಖಕರೊಂದಿಗೆ ಮುಕ್ತವಾಗಿ ಚರ್ಚಿಸಬಹುದು

-ಸಂಪಾದಕ

Don`t copy text!