ರಾಮ ರಾಜಕಾರಣ ವರ್ಸಸ್ ಬಸವ ರಾಜಕಾರಣ

ರಾಮ ರಾಜಕಾರಣ ವರ್ಸಸ್ ಬಸವ ರಾಜಕಾರಣ

ಲೋಕಸಭೆ ಚುನಾವಣೆಗಳು ಇನ್ನೇನು ಒಂದೆರಡು ತಿಂಗಳಲ್ಲಿ ಘೋಷಣೆಯಾಗುವ ಸನಿಹದ ಸೂಕ್ಷ್ಮ ಸಂದರ್ಭದಲ್ಲಿದ್ದೇವೆ. ಸಹಜವಾಗಿ ಎಂಬಂತೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಒಳಹಾದಿಯ ‘ಒಳಹೇತು’ ಹುನ್ನಾರಗಳನ್ನು ಹುಡುಕಿ, ಹುಡುಕಿ ಕ್ರಿಯೆಗೊಳ್ಳುತ್ತಲಿವೆ. ಅದಕ್ಕಾಗಿ ಜಾತಿ, ಮತ, ಗೋತ್ರ, ಕುಲ, ಒಳಕುಲ, ಧರ್ಮದ ಎಲ್ಲ ಒಳದಾರಿಗಳನ್ನು ಶೋಧಿಸಿ ತಮ್ಮ ‘ಬೇಳೆಕಾಳು’ ಬೇಯಿಸಿ ಕೊಳ್ಳಲು ಎಲ್ಲ ಬಗೆಯ ಶಕ್ತಿ ಹಾಗೂ ಯುಕ್ತಿಗಳನ್ನು ಬಳಸಿಕೊಳ್ಳುವುದು ಸಹಿತ ಹೊಸದೇನಲ್ಲ.

ಪ್ರತಿಯೊಂದು ಸಾರ್ವತ್ರಿಕ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಸವಾಲೇ ಆಗಿರುತ್ತವೆ. ಪ್ರತಿಬಾರಿಯೂ ಗೆಲುವಿಗಾಗಿ ಒಂದೊಂದು ಬಗೆಯ ಹೊಸ ತಂತ್ರಗಳನ್ನು ಹುಡುಕಿ ಕೊಂಡಿರುತ್ತವೆ. ಜನರ ಗಮನವನ್ನು ಗಂಭೀರವಾಗಿ ಸೆಳೆದಿಡುವ ‘ಇಶ್ಯು’ಗಳನ್ನು ಮುಂದಿಟ್ಟುಕೊಂಡಿರುತ್ತವೆ. ಅದಕ್ಕಾಗಿ ತಿಂಗಳು, ವರುಷಗಟ್ಟಲೇ ಮೊದಲೇ ತಯಾರಿ ನಡೆಸಿಕೊಂಡಿರುತ್ತವೆ. ಅದಕ್ಕೆಂದೇ ತರಹೇವಾರಿ ತಾಲೀಮು ಮಾಡುತ್ತವೆ. ಜನರ ಭಾವನೆಗಳನ್ನು ತೀವ್ರವಾಗಿ ಸೆಳೆಯಲು ಒಮ್ಮೊಮ್ಮೆ ಹೇಸಿ ಕೆಲಸಕ್ಕೂ ಕೈ ಹಾಕಲು ಹಿಂಜರಿಯುವುದಿಲ್ಲ. ಜನರ ಭಾವಭಿತ್ತಿಯಲ್ಲಿ ಅಚ್ಚೊತ್ತುವ ತಂತ್ರ ಮತ್ತು ಕುತಂತ್ರಗಳಿಗೆ ಕಲಾಯಿ ಮಾಡುವ ಕಲಾತ್ಮಕತೆಯನ್ನು ಕರತಲಾಮಲಕ ಮಾಡಿಕೊಂಡಿರುತ್ತವೆ. ಸಮೂಹ ಮಾಧ್ಯಮಗಳೇ ಮುರಕೊಂಡು ಬಿದ್ದು ತಮ್ಮ ಅಜೆಂಡಾಗಳನ್ನು ಝಳಪಿಸುವ ಮತ್ತು ಹೊಳಪಿಸುವ ಕುಸುರಿಕಲೆ ರಾಜಕೀಯ ಪಕ್ಷಗಳಿಗೆ ಮನಾಮನಿಸಿದೆ.

ಅದನ್ನೆಲ್ಲ ತುಂಬಾ ಹುಶೇರಿತನದಿಂದಲೇ ಜಾಗ್ರತೆ ವಹಿಸಿ, ಬಳಕೆ ಮಾಡುವ ಅವುಗಳ ಯುಕ್ತಿಪಾರಮ್ಯ ಹಿಮ್ಮೆಟ್ಟುವ ಹಿಕಮತ್ತು ಬೇರೊಬ್ಬರಿಗೆ ದುಃಸಾಧ್ಯ. ಜನರ ಮನಗಳನ್ನು ಮತಗಳಾಗಿಸುವ ಕಲೆ ರಾಜಕೀಯ ಪಕ್ಷಗಳಿಗೆ ಸಿದ್ಧಿಸಿದೆ. ಮತ ಸೆಳೆತದ ಸಾರ್ವತ್ರಿಕ ತಂತ್ರಗಳ ಹುಡುಕಾಟಕ್ಕೆ ಅವು ಜಾತಿ, ಕುಲ, ಧರ್ಮಗಳಂತಹ ಸೂಕ್ಷ್ಮ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಗುಟ್ಟಾದ ಸಂಗತಿಯೇನಲ್ಲ. ವಾಸ್ತವವಾಗಿ ಅದು ಸಂವಿಧಾನವಿರೋಧಿ ಕ್ರಿಯೆಯೇ ಆಗಿದ್ದರೂ ಕಾನೂನಿನ ಕೈಯಲ್ಲಿ ಸಿಕ್ಕಿಬೀಳದ ಹಾಗೆ ಕುಶಲ ತಂತ್ರಗಳು ಅಲ್ಲಿ ಕೆಲಸ ಮಾಡುತ್ತವೆ. ಏಕೆಂದರೆ ಧರ್ಮಾಚರಣೆಗಳಂತಹ ಅನೇಕ ವಿಷಯಗಳು ಗೆಲುವಿಗೆ ದುರ್ಬಳಕೆ ಆಗುತ್ತವೆ. ಅದಕ್ಕೆ ‌ಮಂದಿರ, ಮಸೀದೆ, ಚರ್ಚುಗಳು ಹೊರತಾಗಿರಬೇಕು.

ಆದರೆ ಕಾನೂನಿನ ಕತ್ತರಿಯಲ್ಲಿ ಸಿಕ್ಕಿಬೀಳದ ಬಳಕೆಯ ಜಾಣನಡೆ ಅವರದಾಗಿರುತ್ತದೆ. ಅಷ್ಟಕ್ಕೂ ಸಿಕ್ಕಿ ಬಿದ್ದರೂ ಅಂತಹ ದೂರು, ಫಿರ್ಯಾದುಗಳು ಕೋರ್ಟು ಕಚೇರಿಗಳಲ್ಲಿ ಬಗೆ ಹರಿಯಲು ವರುಷಗಳೇ ಕಳೆದು ಹೋಗುತ್ತವೆ. ಒಮ್ಮೊಮ್ಮೆ ಗೆದ್ದ ಅಭ್ಯರ್ಥಿ ವಿರುದ್ಧದ ಕೇಸು ಖಟ್ಲೆಗಳು ಗೆದ್ದವನ ಅವಧಿ ಮುಗಿಯುವ ಹಂತ ಇಲ್ಲವೇ ಮುಗಿದ ಮೇಲೆ ತೀರ್ಪುಗಳು ಬಂದಿರುವ ನಿದರ್ಶನಗಳಿವೆ. ಹೀಗಾಗಿ ಚುನಾವಣೆಗಳನ್ನು ಎದುರಿಸುವ ರಾಜಕಾರಣಿ ಮತ್ತು ರಾಜಕೀಯ ಪಕ್ಷಗಳಿಗೆ ಕಾನೂನು ಕಟ್ಟಳೆಗಳ ಬಗ್ಗೆ ಎಳ್ಳರ್ಧ ಕಾಳಿನಷ್ಟು ಭಯವಿಲ್ಲ. ಭಯವಿಲ್ಲದವರಿಗೆ ಕಾನೂನನ್ನು ಗೌರವಿಸುವ ಮತ್ತು ಕಾನೂನು ಪ್ರೀತಿಸುವ ಮಾತೆಲ್ಲಿ ಬಂತು.?ಅವರ ಪಾಲಿಗೆ ಅದೊಂದು ಕಾಟಾಚಾರದ ಶಿಷ್ಟಾಚಾರದಂತೆ ಪಾಲನೆ ಆಗುತ್ತಿರುತ್ತದಷ್ಟೇ.

ಚುನಾವಣಾ ಆಯೋಗದ ಸೂಕ್ಷ್ಮತೆಗಳನ್ನು ಮೀರುವಂತಹ ಯಾಮಾರಿಕೆಯ ಸೂಕ್ಷ್ಮನಡೆಗಳು ಘಟಿಸುವುದನ್ನು ಅಲ್ಲಗಳೆಯಲಾಗದು. ಅಷ್ಟಕ್ಕೂ ಚುನಾವಣಾ ಆಯೋಗದ ಕೆಲಸವೆಂದರೆ ” ಚುನಾವಣೆ ಘೋಷಣೆಯಾದ ಮತ್ತು ಚುನಾವಣೆಗಳು ಮುಗಿಯುವತನಕ ” ಎಂಬ ಸ್ಥಾಪಿತ ಹಿತಾಸಕ್ತಿಗಳು ಸಾರ್ವತ್ರೀಕರಣಗೊಂಡಿವೆ. ಬಾಕಿ ದಿನಗಳಲ್ಲಿ ಅವು ಕೆಲಸಗೇಡಿ ಸಂಸ್ಥೆಗಳು ಎಂಬ ಅಘೋಷಿತ ಭಾವನೆಗಳು ಗಾಢವಾಗಿ ಮೂಡಿ ಬಿಟ್ಟಿವೆ. ಹೀಗೆ ಇಂತಹ ಹತ್ತು ಹಲವು ಭ್ರಮೆ ಮತ್ತು ವಾಸ್ತವಗಳ ತಾಕಲಾಟಗಳಲ್ಲಿ ಮತ್ತೊಂದು ಚುನಾವಣೆಯೇ ಬಂದು ಬಿಟ್ಟಿರುತ್ತದೆ. ನಮ್ಮ ಆಲೋಚನಾ ಲಹರಿ ಮತ್ತೆ ಚಿಂತನೆಗೆ ತೊಡಗುತ್ತದಷ್ಟೆ. ಹೀಗೆ ಆಡಾಡ್ತಾ ದಶಕಗಳು ಉರುಳುತ್ತಲೇ ಹೋಗುತ್ತವೆ. ಪ್ರಾಯಶಃ ಅಂತಹದ್ದೊಂದು ತೀಕ್ಷ್ಣ ಕಾಲದಂಚಿನ ನೆಲೆಯಲ್ಲಿ ಭಾರತ ನಿಂತಂತಿದೆ. ಕರ್ನಾಟಕ ಅದಕ್ಕೆ ಹೊರತೇನು ಅಲ್ಲ. ಬನ್ನಿ ವರ್ತಮಾನ ಗಮನಿಸೋಣ.

ಶೇಕಡಾ ಐವತ್ತರಷ್ಟು ಸಿದ್ಧಗೊಂಡಿರುವ ಮತ್ತು ಇದೇ ೨೦೨೪ ರ ಡಿಸೆಂಬರ್ ಅಂತ್ಯದವರೆಗೆ ಪೂರ್ಣಗೊಳ್ಳಲಿರುವ, ಇನ್ನೂ ಪೂರ್ಣ ಪ್ರಮಾಣದ ಗೋಪುರವೇ ರೂಪುಗೊಳ್ಳದಿರುವ ಅಯೋಧ್ಯೆಯ ರಾಮಮಂದಿರವನ್ನು ಉದ್ಘಾಟಿಸುವ ಅತ್ಯವಸರದ ಹಿಂದಿನ ಉದ್ದೇಶ ಕಣ್ಮುಂದಿರುವ ಲೋಕಸಭಾ ಚುನಾವಣೆ. ಇದು ಯಾರಾದರೂ ಅರಿಯಬಹುದಾದ ಒಳಮರ್ಮ ಸತ್ಯ. ಮುಖ್ಯವಾಗಿ ದೇಶದ ಆದರಣೀಯ ರಾಷ್ಟ್ರಪತಿ ಅವರನ್ನೇ ಹೊರಗಿಟ್ಟು ಮೋದಿ ಯಜಮಾನಿಕೆಯಲ್ಲಿ ಜರುಗಿದ ಈ ಕಾರ್ಯಕ್ರಮದ ಸಿಂಧುತ್ವ ಅನೇಕರ ಪಾಲಿಗೆ ಪ್ರಶ್ನಾರ್ಹವೇ ಆಗಿದೆ.

ಹೀಗೆ ಅರ್ಧಮರ್ಧ ಸಿದ್ಧಗೊಂಡಿರುವ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಸೂಕ್ತವೇ.? ಆ ಕುರಿತು ನಾಲ್ವರು ಶಂಕರಾಚಾರ್ಯರು ಅಪಸ್ವರ ಎತ್ತಿರುವ ದೊಡ್ಡಸುದ್ದಿಯೇ ಎದುರಿಗಿದೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿಯ ಚುನಾವಣಾ ರಾಜಕೀಯದ ಒಳ ಹುನ್ನಾರಗಳನ್ನು ಬಯಲು ಗೊಳಿಸಿದೆ. ಆದರೆ ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ಅದು ಜನರ ಅಗತ್ಯ ಎಂಬಂತೆ ನಿರೂಪಿಸುವಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದೆಷ್ಟು ಪ್ರಮಾಣದಲ್ಲಿ ಎಂದರೆ ಮೋದಿ ಇಲ್ಲದೇ ರಾಮಮಂದಿರದ ನಿರ್ಮಾಣ ಸಾಧ್ಯವೇ ಇರಲಿಲ್ಲ. ದೇಶ ಮತ್ತು ಹಿಂದೂಧರ್ಮ ರಕ್ಷಣೆಗೆ ಮತ್ತೆ ಮತ್ತೆ ಮೋದಿಯ ಅನಿವಾರ್ಯತೆ ಇದೆಯೆಂಬ ವಾತಾವರಣ ನಿರ್ಮಿಸಲಾಗಿದೆ. ತನ್ಮೂಲಕ ಕೇಂದ್ರದ ಎಲ್ಲ ಸೋಲುಗಳು ಮುಂಡಾ ಮೋಚುತ್ತವೆ. ಅಧಿಕಾರ ರಾಜಕೀಯದ ಪ್ರಹಸನ ಇದಕ್ಕಿಂತ ಇನ್ನೇನು ಬೇಕು.?

ಕಾಂಗ್ರೆಸ್ಸಿನಿಂದ ಈ ಎಲ್ಲ ಅಪಸವ್ಯಗಳಿಗೆ ಪರ್ಯಾಯ ರಾಜಕೀಯ ಸೂತ್ರ ರೂಪಿಸಲು ದುಃಸಾಧ್ಯ. ಅದನ್ನು ವಿರೋಧಿಸುವುದೆಂದರೆ ರಾಮನನ್ನು ವಿರೋಧಿಸುವ ದುಸ್ಸಾಹಸ ಎಂಬ ಅಳುಕು. ಬಹುಶಃ ಅದಕ್ಕೆಂದೇ ಸಿದ್ಧರಾಮಯ್ಯನವರು ಸಹಿತ ‘ಜೈಶ್ರೀರಾಮ’ ಘೋಷಣೆ ಕೂಗ ತೊಡಗಿದ್ದಾರೆ. ಇಂತಹ ಮುಜುಗರದ ನಡುವೆ ರಾಮ ಮತ್ತು ರಾಮಮಂದಿರ ಹಾಗೂ ಆಂಜನೇಯನ ಕುರಿತು ಲೋಕಸಮ್ಮತಿಯ ಸಕಾರಾತ್ಮಕ ನಿಲುವುಗಳ ಪ್ರತಿಪಾದನೆ. ಕರ್ನಾಟಕದಲ್ಲೂ ಅಯೋಧ್ಯೆ ಮಾದರಿಯ ರಾಮಮಂದಿರ ನಿರ್ಮಾಣದ ಚರ್ಚೆಗಳು ಕೂಡಾ ಮುನ್ನೆಲೆಗೆ ಬಂದಿವೆ. ರಾಮ ತನ್ನ ಹದಿನಾಲ್ಕು ವರ್ಷ ವನವಾಸದ ನಾಲ್ಕು‌ ವರ್ಷ ರಾಮಬೆಟ್ಟದಲ್ಲಿ ಕಳೆದನೆಂಬ ಮಾತುಗಳು. ಹೀಗೆ ರಾಮಬೆಟ್ಟ ಮತ್ತು ಹನುಮನ ಜನ್ಮಭೂಮಿ ಅಂಜನಾದ್ರಿ ಬೆಟ್ಟಗಳು ರಾಜಕೀಯ ದಾಳಗಳಾಗುತ್ತಿವೆ.

ಈ ನಡುವೆ ” ಸುಮ್ಮನಿರಬೇಕು ಶರಣನಾದ ಮೇಲೆ ಮತ್ತು ಶಿವನಾದ ಮೇಲೆ ” ಎಂದು ಸುಮ್ಮನಿರದೇ ಕರ್ನಾಟಕದ ಕೆಲವು ಮಠಾಧೀಶರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿಮಾಡಿ ಸಲ್ಲಿಸಿರುವ ಮನವಿಗೆ ಅವರ ಮಂತ್ರಿಮಂಡಲ ಕೂಡಲೇ ಸ್ಪಂದಿಸಿ ಬಸವಣ್ಣನನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿರುವುದು ಸ್ವೀಕಾರ ಮತ್ತು ಸ್ವಾಗತಾರ್ಹ ನಿರ್ಣಯ. ಆಫ್ಕೋರ್ಸ್ ಬಸವಣ್ಣ ಜಾಗತಿಕ ಮಟ್ಟದ ಸಾಂಸ್ಕೃತಿಕ ನಾಯಕ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ತಲಸ್ಪರ್ಶಿಯಾಗಿ ಅವಲೋಕಿಸುವುದಾದರೆ ಪ್ರಸ್ತುತ ಲಿಂಗಾಯತ ಎಂಬುದು “ಮಾಜೀ ಧರ್ಮ ಹಾಲೀ ಜಾತಿ” ಎಂದೇ ಗುರುತಿಸುವಂತಿದೆ.

ಅದೇನೇ ಇರಲಿ, ಧರ್ಮ ಮತ್ತು ರಾಜಕಾರಣದ ಹೊಕ್ಕು ಬಳಕೆ ತುಂಬಾ ಸ್ಪಷ್ಟವಾಗಿ ಗೋಚರ. ಧರ್ಮ ಮತ್ತು ರಾಜಕಾರಣ ಅವೆರಡರ ನಡುವಣ ‘ಗೆರೆ’ ದಿನೇ ದಿನೇ ತೆಳುವಾಗತೊಡಗಿದೆ. ತನ್ಮೂಲಕ ಬಹುತ್ವದ ಮತ್ತು ಐಕ್ಯತೆಯ ಬದುಕಿಗೆ ಧಕ್ಕೆ ಉಂಟಾಗುತ್ತಿದೆ. ಕರ್ನಾಟಕದ ಬಹುಪಾಲು ಬಸವಭಕ್ತರು ರಾಮಭಕ್ತರೆಂಬುದನ್ನು ನಿರಾಕರಿಸಲಾಗದು. ಇದು ಅಸಲಿ ಮತ್ತು ನಕಲಿ ಭಕ್ತರ ಭಯಂಕರ ಪೈಪೋಟಿಯೇ ಆಗಿದೆ. ಪರಾಕಾಷ್ಠೆ ಮೀರಿ ಮೋದಿಯನ್ನು ರಾಮನೆಂತಲೂ ಯೋಗಿಯನ್ನು ಲಕ್ಷ್ಮಣನೆಂತಲೂ ಸೋದರಿಕೆ ಆವಾಹಿಸಿಕೊಂಡ ಕೆಲವು ಭಕ್ತರ ಆಟಾಟೋಪ. ಒಟ್ಟಿನಲ್ಲಿ ರಿಲಿಜಿಯಸ್ ಹಿಪಾಕ್ರಸಿ ಸಮೂಹ ಸನ್ನಿಯಾಗಿ ದೇಶವನ್ನೇ ಆವರಿಸಿದೆ.

ಕರ್ನಾಟಕದಲ್ಲಿ ರಾಮ ರಾಜಕೀಯ ಮತ್ತು ಬಸವರಾಜಕಾರಣದ ಮುಸುಕಿನ ಪಂದ್ಯಾಟ. ರಾಮ ಮತ್ತು ಬಸವನ ಆಯ್ಕೆ ಗುದ್ದಾಟದ ಗೊಂದಲ. ಕೆಲವರದು ಕರ್ನಾಟಕಕ್ಕೆ ಬಸವಣ್ಣ, ಭಾರತಕ್ಕೆ ರಾಮನೆಂಬ ಡ್ಯುಯೆಲ್ ರೋಲ್. ಹೀಗಾಗಿ ಸಾಮರಸ್ಯ ಮತ್ತು ಸಮ್ಯಕ್ ಜ್ಞಾನದ ಶಾಂತಿಯ ತೋಟದಲ್ಲೆಲ್ಲ ಮಂಜು ಮಸುಕಿನ ಸೋಂಕು. ಕಪಾಲಿ ಬೆಟ್ಟದ ಉದ್ದೇಶಿತ ಏಸುಕ್ರಿಸ್ತ ಮಂದಿರ ಸ್ಥಾಪನೆ. ಎಲ್ಲವೂ ಮತಾಂಧತೆಯ ರಾಜಕೀಯ ಹುನ್ನಾರಗಳೇ ಹೌದು. ರಾಮಭೆಟ್ಟ ಅಂಜನಾದ್ರಿ ಬೆಟ್ಟಗಳು ರಾಜಕೀಯ ಅಸ್ತ್ರಗಳಾಗುತ್ತಿರುವುದು ಐತಿಹಾಸಿಕ ಮತ್ತು ಪೌರಾಣಿಕ ದುರಂತ.

ಮೋದಿ, ರಾಮನಿಗಾಗಿ ತಣ್ಣೀರು ಜಳಕ ಮಾಡುವುದು, ಎಳನೀರು ಹೊರತು ಮತ್ತೇನನು ಸೇವಿಸದೇ ಹನ್ನೊಂದು ದಿನದ ಉಪವಾಸ ವೃತ ಮಾಡಿದರಂತೆ. ಇಂತಹ ಹತ್ತಾರು ಕಲರ್ಫುಲ್ ಕತೆಗಳ ಮೇಲೋಗರ.

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ/
ಒಮ್ಮೆ ಒಡಲುಗೊಂಡು ನೋಡಾ ರಾಮನಾಥ//

ದಾಸಿಮಯ್ಯನ ವಚನ ನೆನಪಾಗುತ್ತಿದೆ. ವಚನದ ನೆಲದಲ್ಲೂ ಮತ್ತು ದೇಶದ ಎಲ್ಲರಿಗೂ ಸನಾತನ ಭಕುತಿಯ ಸಾಂಕ್ರಾಮಿಕ ಪ್ರೀತಿಯ ಪರಾಕಾಷ್ಠೆ‌ ಮುಗಿಲೆತ್ತರ ಮುಟ್ಟುತ್ತಲಿದೆ. ಸ್ವರ್ಗವೇ ಧರೆಗಿಳಿದಂತೆ ಸರಯೂ ನದಿಯ ತಟದಲ್ಲಿ ಗಂಗೆಯನ್ನೇ ಮೀರಿಸಿದ ಮಾಧ್ಯಮಗಳ ಭಯಂಕರ ಗಂಗಾರತಿಗಳು.

ಭಾರತದ ಸಮಗ್ರ ಸೆಲೆಬ್ರಿಟಿ ಜಗತ್ತೇ ಅಯೋಧ್ಯೆಯಲ್ಲೇ ಝಾಂಡಾ ಹೂಡಿತ್ತು. ಕನ್ನಡದ ಮೊದಲ ಪ್ರಧಾನಿಗಳೇ ಕುಟುಂಬ ಸಮೇತ ಅಲ್ಲೇ ಠಿಕಾಣಿ ಹೂಡಿ ಬಿಟ್ಟರೆಂದರೆ ಧರ್ಮ ರಾಜಕಾರಣದ ಮೇಲಾಟ ಹೇಗೆ ಚುಳುಕಾಗಿತ್ತೆಂಬುದನ್ನು ಮತ್ತೆ ಬಿಡಿಸಿ ಬಿಡಿಸಿ ಹೇಳಬೇಕಾಗಿಲ್ಲ. ಬಹುತೇಕ ಮಾಧ್ಯಮಗಳು ಕೇಸರಿಯನ್ನೇ ತೊಟ್ಟು ಅಯೋಧ್ಯೆಯಲ್ಲೇ ವಾರ ಪರ್ಯಂತರ ಬೀಡು ಬಿಟ್ಟಿದ್ದವು. ಕೆಲವು‌ ಪತ್ರಕರ್ತರಂತೂ ತಲೆಗೆ ಸುತ್ತಿಕೊಂಡ ಅದೇ ಅಮಲಿನಲ್ಲಿದ್ದಾರೆ. ತನ್ನ ಹೆಸರಿನ ಹಿಂದೆ ಆರ್ ಎಂಬ ಹೆಸರು ಅಂಟಿಸಿಕೊಂಡಿರುವ ಕರುನಾಡ ಟೀವಿಯೊಂದು ಆರನ್ನು “ರಾಮ” ಎನ್ನುವಂತೆ ಕ್ಷಣ ಕ್ಷಣಕೂ ಸಾಬೀತು ಪಡಿಸುತ್ತಲೇ ತನ್ನ ಮೈ ಮನಸುಗಳ ತುಂಬಾ ಜೈಕಾರಗಳ ಜಪದಲ್ಲೇ ಮುಳುಗಿತ್ತು.


ಮಲ್ಲಿಕಾರ್ಜುನ ಕಡಕೋಳ
‌ 9341010712

Don`t copy text!