ಸತ್ಯಕಾಮ ಜಾಬಾಲ

ವಾರದ ಅಂಕಣ

ಉಪನಿಷತ್ತಿನ ಕತೆಗಳು-೨

ಸತ್ಯಕಾಮ ಜಾಬಾಲ

 

ವಿದ್ಯೆ ಸರ್ವರಿಗೂ ಸಮ ಎಂದು ವೇದಕಾಲದಲ್ಲಿಯೇ ಇತ್ತು

ಉಪನಿಷತ್ತಿನ ಕಾಲದಲ್ಲಿ ಸತ್ಯಕಾಮನೆಂಬ ಬಾಲಕ ಇದ್ದನು. ಆಗ ವಿದ್ಯೆ ಎಂದರೆ ಅಧ್ಯಾತ್ಮ ವಿದ್ಯೆ ಅದರಲ್ಲಿಯೂ ಆತ್ಮ ಜ್ಞಾನಕ್ಕೆ ಅತ್ಯಂತ ಮಹತ್ವವಿತ್ತು. ಜ್ಞಾನಿಗಳ ಒಡನಾಟ ಹಾಗೂ ಅವರ ಸುತ್ತಮುತ್ತ ಇರುತ್ತಿದ್ದ ಬಾಲಕನಿಗೆ ಆತ್ಮಜ್ಞಾನ ಪಡೆಯಬೇಕೆಂಬ ಹಂಬಲ ಉಂಟಾಯಿತು. ಗುರುಗಳ ಬಳಿ ಹೋಗಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಉದ್ಧರಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ಗುರುಗಳಾದ ಹಾರಿದ್ರುಮತ ಗೌತಮರು ಬಾಲಕನೇ ನಿನ್ನ ತಾಯಿಯ ಬಳಿ ಹೋಗಿ ನಿನ್ನ ಗೋತ್ರವನ್ನು ತಿಳಿದು ಬಾ ಎಂದು ಕಲಿಸುತ್ತಾರೆ.

ತಾಯಿಯ ಬಳಿ ಬಂದ ಬಾಲಕನು ” ಅಮ್ಮ ನಾನು ಬ್ರಹ್ಮಚರ್ಯ ಪಾಲನೆ ಮಾಡುತ್ತ ಆತ್ಮಜ್ಞಾನ ಪಡೆಯುವ ಇಚ್ಛೆ ಹೊಂದಿದವನಾಗಿದ್ದೇನೆ. ಗುರುಗಳ ಬಳಿ ಕೇಳಿದಾಗ ಅವರು ನಿನ್ನ ಗೋತ್ರವನ್ನು ತಿಳಿದು ಬಾ ಎಂದು ಹೇಳಿದರು, ಅಮ್ಮ ನನ್ನದು ಯಾವ ಗೋತ್ರ ತಂದೆ ಯಾರು” ಎಂದು ಕೇಳುತ್ತಾನೆ. ಅದಕ್ಕೆ ತಾಯಿಯು “ಮಗನೆ ನಾನು ಜಾಬಾಲ ನೀನು ನನ್ನ ಮಗ ಸತ್ಯಕಾಮ ಇದಿಷ್ಟು ನನಗೆ ತಿಳಿದಿದೆ. ನಾನು ಬಡವಳು ಹಾಗೂ ವಯಸ್ಸಿನಲ್ಲಿ ಸಣ್ಣವಳು ಇದ್ದ ಕಾರಣ ಬಹಳಷ್ಟು ಜನರ ಸೇವೆಯನ್ನು ಮತ್ತು ಹಲವಾರು ಊರುಗಳನ್ನು ತಿರುಗಿ ಬಂದ ಕಾರಣದಿಂದ ನನಗೆ ನಿನ್ನ ತಂದೆಯ ಹೆಸರು ತಿಳಿದಿಲ್ಲ “ನಾನು ಜಾಬಾಲ ನೀನು ನನ್ನ ಮಗ ಸತ್ಯಕಾಮ ” ಯಾರೇ ನಿನ್ನ ಹೆಸರು ಕೇಳಿದರೂ “ಜಾಬಾಲ ಸತ್ಯಕಾಮ ” ಎಂದು ಹೇಳು” ಎಂದು ಹೇಳಿದಳು.

ತಾಯಿಯ ಮಾತಿಗೆ ಒಪ್ಪಿದ ಸತ್ಯಕಾಮನು ಗುರುಗಳ ಬಳಿಗೆ ಹೋಗಿ ತಾಯಿಯ ಬೋಧನೆಯನ್ನ ಚಾಚೂ ತಪ್ಪದೇ ಗುರುಗಳ ಮುಂದೆ ಒಪ್ಪಿಸಿದನು. ಬಾಲಕನ ಶ್ರದ್ಧೆ ಹಾಗೂ ನಿಷ್ಕಲ್ಮಶ ಭಾವನೆಗಳಿಗೆ ಒಲಿದು ಅವನಿಗೆ ವಿದ್ಯೆಯನ್ನು ನೀಡುವ ನಿರ್ಧಾರ ಮಾಡಲು ಸತ್ಯಕಾಮ ಜಾಬಾಲನ ಸತ್ಯ ನಿಷ್ಠೆ, ಶ್ರದ್ದೆಗಳಿಂದ ಪ್ರಭಾವಿತ ಅವನಿಗೆ ಸತ್ಯಕಾಮ ನಿನ್ನ ಸತ್ಯವಂತಿಕೆಗೆ ಪ್ರೀತನಾಗಿದ್ದೇನೆ, ನೀನು ಸತ್ಯವನ್ನು ಹೇಳಿದ ಕಾರಣ ನೀನು ಬ್ರಾಹ್ಮಣನೇ ಎಂದು ನಿನಗೆ ಬ್ರಹ್ಮಚರ್ಯದ ದೀಕ್ಷೆಯನ್ನು ಬ್ರಹ್ಮ ಜ್ಞಾನವನ್ನು ಕೊಡುವೆ “ಎಂದು ಹೇಳಿದರು.

 

ಆಗ ಹಾರಿದ್ರುಮ ಗೌತಮರು 400 ಸವಕಲು ಆಕಳು ಗಳನ್ನು ಆರಿಸಿ ಸತ್ಯಕಾಮನಿಗೆ ಕೊಟ್ಟು ಇಂದಿನಿಂದ ಈ ಆಕಳುಗಳ ಯೋಗಕ್ಷೇಮ ನಿನ್ನ ಜವಾಬ್ದಾರಿ, ಅವುಗಳನ್ನು ಸಾವಿರ ಸಂಖ್ಯೆಯಲ್ಲಿ ಮಾಡಿಕೊಂಡು ಬರಬೇಕು ಎಂದು ಆಜ್ಞಾಪಿಸಿದರು. ಗುರುಗಳ ಮಾತಿಗೆ ನಿಷ್ಠೆಯಿಂದ ಗೋವುಗಳ ಸೇವೆ ಮಾಡುತ್ತ ಅವುಗಳನ್ನು ಮೇಯಿಸ ತೊಡಗಿದನು. ಗೋವುಗಳ ಸಂಖ್ಯೆ 1000 ಆಗುವವರೆಗೂ ಆಶ್ರಮಕ್ಕೆ ಬರ ಬರದೆಂದು ನಿರ್ಣಯಮಾಡಿದನು.

ಕಾಡಿನಲ್ಲಿ ಗೋವುಗಳನ್ನ ಕಾಯುವ ಸಮಯದಲ್ಲಿ ದೊರೆತ ಏಕಾಂತ ಅವನನ್ನು ಸತ್ಯದ ಕುರಿತು ವಿಚಾರ ಮಾಡುವ ಕಾಯಕಕ್ಕೆ ಮೊದಲು ಮಾಡುವಂತೆ ಪ್ರೇರೆಪಿಸಿತು. ಮುಂಜಾನೆಯಿಂದ ಸಂಜೆಯವರೆಗೂ ಒಂದೇ ರೀತಿಯಲ್ಲಿ ಪ್ರಕಾಶಿಸುವ ನಾಲ್ಕು ದಿಕ್ಕುಗಳಲ್ಲಿ ನೋಡುತ್ತಿದ್ದವನಿಗೆ ಸತ್ಯ, ಬ್ರಹ್ಮ, ನಿಜ ವಸ್ತು, ಆದಿಶಕ್ತಿ ಇವುಗಳೇ ಇರಬೇಕು ಎಂಬ ಭಾವನೆ ಬರುತ್ತಿತ್ತು. ಇನ್ನೊಮ್ಮೆ ವಿಶಾಲವಾದ ಪೃಥ್ವಿ, ಅನಂತವಾದ ಆಕಾಶ ಇವುಗಳು ಸತ್ಯವೂ ಅನಂತವೂ ಇರಬಹುದು ಎನಿಸುತ್ತಿತ್ತು. ಮತ್ತೊಂದು ಸಲ ತೇಜಸ್ಸಿನ ಸೂರ್ಯ, ಪ್ರಶಾಂತವಾದ ಚಂದ್ರ, ಮಿಂಚಿ ಹೋಗುವ ವಿದ್ಯುತ್ತು ಇವುಗಳೇ ಸತ್ಯವಿರಬಹುದು ಎನಿಸುತ್ತದೆ. ಕಡೆಗೆ ಒಮ್ಮೆ ಸತ್ಯವೂ ಇವೆಲ್ಲವನ್ನೂ ಮೀರಿದ್ದು, ಸತ್ಯವು ಅವ್ಯಕ್ತವು, ಅಗೋಚರವು, ನಿರವಯವು ಎಂದು ತಿಳಿದನು. ಹೀಗೆ ಹತ್ತು ಹಲವು ವರ್ಷ ಸತ್ಯದ ಜ್ಞಾನದ ಹುಡುಕಾಟ ಮಾಡುತ್ತ ಆಕಳುಗಳು ಸಾವಿರ ಸಂಖ್ಯೆ ತಲುಪಿದಾಗ ಗುರುಗಳ ಬಳಿ ಆಶ್ರಮಕ್ಕೆ ತೆರಳಿದನು. ಗುರುಗಳಾದ ಹಾರಿದ್ರುಮ ಗೌತಮರು ಪ್ರಿಯ ಶಿಷ್ಯನನ್ನ ನೋಡಿ ಆನಂದ ಹೊಂದಿದರು. ಗುರುಗಳು ” ನನ್ನ ಆತ್ಮ ಸ್ವರೂಪನೇ, ಯಥಾರ್ಥ ನಾಮನಾದ ಸತ್ಯಕಾಮನೆ, ಈಗ ನೀನು ಸತ್ಯ ಜ್ಞಾನಿಯಂತೆ ಕಂಗೊಳಿಸು ತ್ತಿರುವಿ. ಕಾಡಿನಲ್ಲಿ ನಿನಗೆ ವಿದ್ಯೆ ಕಳಿಸಿದವರು ಯಾರು” ಎಂದು ಕೇಳಿದರು.

“ಗುರುಗಳೆ ಆ ಕಾಡಿನಲ್ಲಿ ನನಗೆ ವಿದ್ಯೆ ಕಲಿಸುವವರು ಯಾರೂ ಇರಲಿಲ್ಲ ಅಲ್ಪ ಸ್ವಲ್ಪ ಬ್ರಹ್ಮ ಚರ್ಯ ಪಾಲನೆಯಿಂದ ತಿಳಿದ ಜ್ಞಾನವಷ್ಟೇ” ಎಂದು ಹೇಳಿ ತನಗೆ ಬರುತ್ತಿದ್ದ ಅನುಮಾನವನ್ನೆಲ್ಲ ಪರಿಹರಿಸಿಕೊಂಡನು. ಗುರುಗಳ ಏಕಾಂತ ಅವರ ವಾತ್ಸಲ್ಯ ಹಾಗೂ ಅವರು ಕಲಿಸಿದ ವಿದ್ಯೆಯು ಸತ್ಯಕಾಮ ಜಾಬಾಲನನ್ನ ಜ್ಞಾನಿಯನ್ನಾಗಿ ಮಾಡಿತು. ಗುರುಗಳಿಂದ ಕಲಿತ ಜ್ಞಾನವನ್ನು ತನ್ನ ಶಿಷ್ಯರಿಗೆ ಕೊಡುವ ಸತ್ ಸಂಕಲ್ಪದೊಂದಿಗೆ ತನ್ನ ಗುರುಕುಲವಾಸ ಹಾಗೂ ವಿದ್ಯೆಯನ್ನು ಸಂಪೂರ್ಣಗೊಳಿಸಿ ಮನೆಗೆ ಹೊರಟನು.

ವೇದ ಕಾಲಿನ ಯುಗದಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ವಿದ್ಯೆ ದೊರೆಯುತ್ತಿರಲಿಲ್ಲ. ವಿದ್ಯಾರ್ಥಿಯ ಸತ್ಯ ನಿಷ್ಠೆ, ಕಲಿಯುವ ಆಸಕ್ತಿ ಮತ್ತು ಶ್ರಮ ಪಟ್ಟು ಕಲಿಯುವ ಯೋಗ್ಯತೆ ಅವರನ್ನು ವಿದ್ಯಾವಂತರನ್ನಾಗಿಯು ಜ್ಞಾನಿಯನ್ನಾಗಿಯೂ ಮಾಡುತ್ತಿತ್ತು.

 

 

 

 

 

 

 

 

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!