ಸಮಯೋಚಿತ ಲಿಂಗಪೂಜೆ – ಸಾಂದರ್ಭಿಕ ಜಂಗಮ ಸೇವೆ–ಬಸವಣ್ಣನ ಆಶಯ.
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು .
ಮಾಡಿದಡೆ ಮಾಡಲಿ ,ಮಾಡಿದಡೆ ತಪ್ಪೇನು ?
ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡಿಕಿದಡೆ ,
ಅದು ಪ್ರಸಾದವಲ್ಲ ಕಿಲ್ಬಿಷ .
ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ
ಪ್ರಸಾದಕ್ಕೆ ಕೈದೆಗೆದೆಡೆ ,ಅದು ಲಿಂಗಕ್ಕೆ ಬೋನ
ಇದು ಕಾರಣ ,ಕೂಡಲ ಸಂಗಮದೇವಾ,
ಇಂತಪ್ಪ ಸದಾಚಾರಿಗಳನೆನಗೆ ತೋರ
–ಬಸವಣ್ಣ
ಸ.ವ.ಸ 0-1-ಪುಟ 97 ವಚನ ಸಂಖ್ಯೆ -400.
ಬಸವಣ್ಣ ಒಬ್ಬ ಸಮತಾವಾದಿ ಜಗತ್ತಿಗೆ ಅನೇಕ ಹೊಸ ವಿಷಯಗಳನ್ನು ನೀಡಿದ ಮಹಾತ್ಮ .ಅತ್ಯಂತ ವೈಜ್ಞಾನಿಕ ವೈಚಾರಿಕ ವಿಷಯಗಳನ್ನೊಳಗೊಂಡ ಅವರ ಸತ್ಯದ ಪ್ರತಿಪಾದನೆ ಪ್ರಾಯಶ ನಮಗೆ ಅರ್ಥವಾದರೂ ಅನುಸರಿಸಲಾಗದ ದುರಂತಕ್ಕೆ ನಮ್ಮನ್ನೇ ಒಡ್ಡಿಕೊಂಡಿದ್ದೇವೆ.
ಬಸವಣ್ಣನವರ ಶರಣರ ವಿಚಾರಗಳು ಸಾರ್ವಕಾಲಿಕ ಸಮಾಜ ಒಪ್ಪುವ ಸರಳ ಸಹಜ ತತ್ವಗಳು.
ಬಸವಣ್ಣನವರು ಅಂದಿನ ಸನಾತನ ಜಿಡ್ಡುತನ ಕರ್ಮಠತನ ಸುಲಿಗೆ ಶೋಷಣೆಗೆ ಬೇಸತ್ತು ಹೊಸ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಲು ಲಿಂಗ ತತ್ವವನ್ನು ಕಂಡು ಕೊಂಡರು.ಲಿಂಗ ಇದು ಸಕಲ ವಿಸ್ತಾರದ ರೂಪ . ವಿಶ್ವದ ಅನಂತತೆಯ ಪ್ರತೀಕ ,ಬಯಲಿನ ದರ್ಪಣದ ಬಟ್ಟಲು.ಸಕಲ ಜೀವಾತ್ಮಜರ ಚರಾಚರ ಚೈತನ್ಯ ಬಿಂದು. ಸಮಾನತೆಯ ಗಟ್ಟಿ ಮುಟ್ಟಾದ ಸಂಕೇತ ಎಲ್ಲರನ್ನು ಒಂದುಗೂಡಿಸುವ ಭಾವ ಲಿಂಗದ ಕೊಂಡಿ.
ಇಷ್ಟಲಿಂಗದ ಜನಕ ಮಹಾ ಕ್ರಾಂತಿಕಾರಿ ಬಸವಣ್ಣನವರು. ಗುಡಿ ಗುಂಡಾರ ಮಠ ಆಶ್ರಮದ ಮೊರೆ ಹೋಗಿ, ಸುಲಿಗೆಗೆ ವಂಚನೆಗೆ ಬಲಿಯಾಗುವ ಮತ್ತು ಉಚ್ಚ ನೀಚ ನೀತಿಯಿಂದ ದಾಸ್ಯತ್ವಕ್ಕೆ ಒಳಗಾಗುವ ಕರ್ಮ ನೋವು ತಡೆಯಲೆಂದೆ ಬಸವಣ್ಣನವರು ಇಷ್ಟಲಿಂಗವನ್ನು ಜನತೆಗೆ ಕೊಟ್ಟರು. ದೇವರನ್ನು ಹುಡುಕಿಕೊಂಡು ಹೋಗುವ ಬದಲು ನಿರಾಕಾರದ ದೇವರನ್ನು ಸಾಕಾರ ರೂಪದಲ್ಲಿ ಪಡೆದು ಮತ್ತೆ ನಿರಾಕಾರದ ತತ್ವಕ್ಕೆ ಸಾಗುವ ಆಧ್ಯಾತ್ಮಿಕ ಪಯಣವೇ ಲಿಂಗ ತತ್ವವಾಗಿದೆ.
ಬಸವಣ್ಣನವರೇ ಹೇಳುವಂತೆ
“ಲಿಂಗವನರಿಯದೆ ಏನನ್ನರಿದರೂ ಫಲವಿಲ್ಲ .ಲಿಂಗವನರಿತ ಬಳಿಕ ಮತ್ತೇನನ್ನು ಅರಿತರು ಫಲವಿಲ್ಲ.”
ಲಿಂಗ ತತ್ವ – ಇದು ಸಮಷ್ಟಿಯ ಅಭಿವೃದ್ಧಿ ,ಜೈವಿಕ ವಿಕಾಸ ಸಕಲ ಪ್ರಾಣಿ ಪಕ್ಷಿ ಮನುಷ್ಯರ ಜೀವಿಗಳ ಯೋಗ ಕ್ಷೇಮ ,ನೆಲ ಜಲ ಪರಿಸರದ ಕಾಳಜಿ.
ಇದನ್ನು ಬಸವಣ್ಣ ಹೀಗೆ ಹೇಳಿದ್ದಾರೆ.
“ಲಿಂಗವ ಪೂಜಿಸಿ ಫಲವೇನು ಸಮರತಿ ಸಮಕಳೆ ಸಮಸುಖವ ಅರಿಯದನ್ನಕ್ಕ ,ಕೂಡಲ ಸಂಗಮದೇವನ ಪೂಜಿಸಿ ನದಿಯೊಳಗೆ ನದಿಯ ಬೆರೆಸಿದಂತಾಯಿತ್ತು.”
ಭೂಮಿಯ ಮೇಲೆ ನದಿಯ ಹರಿಸಿದರೆ ಅಲ್ಲಿ ಸಸ್ಯ ಮರ ಗಿಡ ಬೆಳೆದು ಪ್ರಾಣಿ ಪಕ್ಷಿ ಫಲವನ್ನುಂಡು ಸಂತೋಷವಾಗಿ ಕಾಲ ಕಳೆಯಬಹುದು. ಫಲವತ್ತಾದ ಭೂಮಿಯಲ್ಲಿ ಉತ್ತಮ ಬೆಳೆಹಣ್ಣು ಹಂಪಲ ತರಕಾರಿ ಬೆಳೆಯ ಬಹುದು ಇದರಿಂದ ಇಡೀ ಮಾನವ ಕುಲದ ಜೊತೆಗೆ ಸಮಗ್ರ ಸಮಷ್ಟಿ ಆರೋಗ್ಯದಿಂದರುವುದು .
ಬವಣ್ಣನವರು ತುಂಬಾ ಪ್ರಾಯೋಗಿಕ ಮನಸಿನವರು .ಇಷ್ಟಲಿಂಗದ ಜೊತೆಗೆ ಕಾಯಕ ಮತ್ತು ದಾಸೋಹದ ತತ್ವಗಳ ಕಡ್ದಾಯತನವನ್ನು ಸೂಚಿಸಿದರು.
ಅವರಿಗೆ ದೈವಾರಾಧನೆಗಿಂತ ಶ್ರಮವಹಿಸಿ ದುಡಿಯಬೇಕು ಮತ್ತು ಹಸಿದ ಬಂದ ಜಂಗಮನಿಗೆ ಭಕ್ತಿನಿಗೆ ಪ್ರಸಾದವ ಮಾಡಿಸಬೇಕು.
ದೈಹಿಕ ಶ್ರಮವೇ ಪೂಜೆ ಜಂಗಮ ಸಮಾಜಕ್ಕೆ ದುಡಿದು ಪ್ರಸನ್ನತೆ ತೋರುವ ಭಾವವೇ ಪ್ರಸಾದ .
.ಮೇಲಿನ ವಚನವನ್ನು ಅರ್ಥೈಸಲು ಪ್ರಯತ್ನಿಸೋಣ
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು
ಭಕ್ತನು ತನಗೆ ಸ್ಮಯವಾಕಾಶ ಸಿಕ್ಕಾಗ ಲಿಂಗ ಪೂಜೆ ಮಾಡುತ್ತಿರುವನು , ಅನೇಕ ಕಡೆ ಲಿಂಗ ಪೂಜೆ ಸದಾಚಾರದ ಒಂದು ಅಂಗ ಆದರೆ ಅದಕ್ಕೆ ಕಟ್ಟಳೆ ಕಡ್ಡಾಯ ನಿಯಮ ನೀತಿ ರೀತಿಗಳ ಹೇರುವಿಕೆಯಿಲ್ಲ , ಕಾಯಕ ಮಾಡಿ ಸ್ನಾನ ಮಾಡಿ ಪ್ರಸನ್ನ ಭಾವದಿಂದ ಸಮಯ ಸಿಕ್ಕಾಗ ಪೂಜೆ ಮಾಡುವ ಭಕ್ತನ ನೆರವಿಗೆ ಬಸವಣ್ಣ ಬರುತ್ತಾರೆ.
ಲಿಂಗ ಪೂಜೆ ಸಂಪ್ರದಾಯದ ಕ್ರಿಯೆಯಲ್ಲ ಅದು ಅಂತರಂಗದ ನಿರಂತರ ವಿಕಾಸ ತುಡಿತ ಮಿಡಿತ . ಹೀಗಾಗಿ ಅಂದು ಯಾರೋ ಬಸವಣ್ಣನವರ ಮುಂದೆ ಒಬ್ಬ ಪ್ರಾಮಾಣಿಕ ಕಾಯಕ ನಿಷ್ಠ ಭಕ್ತನ ಲಿಂಗ ಪೂಜೆಯ ಬಗ್ಗೆ ಚಾಡಿ ಹೇಳಿರ ಬಹುದು. ಅದಕ್ಕೆ ಬಸವಣ್ಣನವರು ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು ಎಂದು ಭಕ್ತನ ಕಾರ್ಯವನ್ನು ಈ ಕೆಳಗಿನಂತೆ ಸಮರ್ಥಿಸಿಕೊಳ್ಳುತ್ತಾರೆ.
ಮಾಡಿದಡೆ ಮಾಡಲಿ ,ಮಾಡಿದಡೆ ತಪ್ಪೇನು ?
ಒಂದು ವೇಳೆ ಭಕ್ತ ತನ್ನ ಕಾಯಕ ದಾಸೋಹ ದುಡಿಮೆ ಶ್ರಮಕ್ಕೆ ಆದ್ಯತೆ ಕೊಟ್ಟು ತನಗೆ ಸಮಯ ಸಿಕ್ಕಾಗ ಪೂಜೆ ಮಾಡಿದಡೆ ಮಾಡಲಿ ಬಿಡಿ ,ಹಾಗೆ ಮಾಡಿದಲ್ಲಿ ತಪ್ಪೇನು ಎಂದು ಸಹಜವಾಗಿ ಪ್ರಶ್ನಿಸುತ್ತಾರೆ. ಬಸವಣ್ಣನವರು ಕಾಯಕ ಶ್ರಮ ದುಡಿಮೆಗೆ ಜಂಗಮ ದಾಸೋಹಕ್ಕೆ ಸಂಸ್ಥಿಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.ಹೀಗಾಗಿ ಭಕ್ತನ ತಡವಾದ ಸಮಯ ಸಿಕ್ಕಾಗ ಮಾಡಿಕೊಳ್ಳುವ ಲಿಂಗ ಪೂಜೆಯಲ್ಲಿ ಏನು ತಪ್ಪಿಲ್ಲ.ಒಂದು ಕಡೆಗೆ “ಹೊತ್ತಾರೆ ಎದ್ದು ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ ಎಂದು ಹೇಳುವ ಉದ್ಧೇಶವೇನಿರಬಹುದು?“. ಇಲ್ಲಿ ಲಿಂಗ ಪೂಜೆ ಸಮಾಜಿಕ ಜವಾಬ್ದಾರಿ ಕಳಕಳಿ . “ಹೋತು ಹೋಗದ ಮುನ್ನ ಮೃತ್ಯು ಮುಟ್ಟದ ಮುನ್ನ ತೊತ್ತು ಕೆಲಸವ ಮಾಡು “ಎಂದು ಹೇಳಿ ಅಲ್ಲಿಯೂ ಕಾಯಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಬಸವಣ್ಣನವರು.
ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡಿಕಿದಡೆ ,ಅದು ಪ್ರಸಾದವಲ್ಲ ಕ್ಲಿಷ್ಟ
ಲಿಂಗ ಪೂಜಾ ನಿಷ್ಠರು ಪ್ರಸಾದ ದಾಸೋಹ ಪ್ರಿಯರಾಗಿ ಜಂಗಮ ಸೇವೆ ಮಾಡಬೇಕು.ಯಾರಾದರೂ ಭಕ್ತನ ಮನೆಗೆ ಏನಾದರೂ ನೆರವಿಗೆ ಸಹಾಯ ಕೇಳಿ ಬಂದಾಗ ,ಭಕ್ತ ಮುಖ ಕಿವುಚಿಕೊಂಡು ತನಗಾಗದು ಎಂದು ತಮ್ಮ ಆದ್ಯ ಜವಾಬ್ದಾರಿಯಿಂದ ಪಲಾಯನವಾಗುವದನ್ನು ಬಸವಣ್ಣ ಖಂಡಿಸಿದ್ದಾರೆ.
ಸಮಾಜದ ಜಂಗಮದ ಸೇವೆಯಲ್ಲಿ ನೆರವಿನ ಹಸಿವಿನ ಸಹಾಯಕ್ಕೆ ಬಂದಲ್ಲಿ ಅವರನ್ನು ಸ್ವಾಗತಿಸಿ ಅವರ ನೆರವಿಗೆ ಹೋಗುವುದು ಆದ್ಯ ಕರ್ತವ್ಯ ಹಾಗೆ ಮಾಡದಿದ್ದಡೆ ತಮ್ಮ ಕರ್ತವ್ಯ ಲೋಪ ಮಾಡಿದಡೆ ಉಣ್ಣುವ ಅನ್ನದಲ್ಲಿ ಕಿಲ್ಬಿಷ (Corrosion ) ಅಂದರೆ ಅಂದಿನ ಹಿಟ್ಟಾಅಲೆ ತಟ್ಟೆಯಲ್ಲಿ ಉಣ್ಣಲು ಕುಳಿತಾಗ
ರಾಸಾಯನಿಕ ಕ್ರಿಯೆಯಿಂದ ಆಹಾರ ಕಿಲುಬುತ್ತಿತ್ತು ,ಸಮಾಜ ಜಂಗಮ ಸೇವೆ ಕಡೆಗಣಿಸಿದಲ್ಲಿ ಆಹಾರ ಕಿಲುಬುಗೊಂಡು ವಿಷವಾಗುವುದು ಎಂದು ಬಸವಣ್ಣ ಎಚ್ಚರಿಸಿದ್ದಾರೆ.
ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ,ಪ್ರಸಾದಕ್ಕೆ ಕೈದೆಗೆದೆಡೆ ,ಅದು ಲಿಂಗಕ್ಕೆ ಬೋನ
ಸಮಯ ಸಿಕ್ಕಾಗ ಲಿಂಗ ಪೂಜೆ ಮಾಡುವ ಸಮಯೋಚಿತ ಸಂದರ್ಭದಲ್ಲಿಯೂ ಯಾರಾದರೂ ನೆರವಿಗೆ ,ಸಹಾಯಕ್ಕೆ ,ಹಸಿವಿನ ನೋವುನಿಂದ ಬಂದರೆ ಅಂತವರಿಗೆ ಸಹಾಯ ಮಾಡಿ ನೆರವಿಗೆ ಬಂದು ಅವರ ಹಸಿವನ್ನು ನೀಗಿಸಿದರೆ ,ಅಂತಹ ಪುಣ್ಯದ ಕಾರ್ಯವೇ ಲಿಂಗಕ್ಕೆ ಎಡೆ ಹಿಡಿದಂತೆ ಲಿಂಗಕ್ಕೆ ಬೋನ .
ಬಡವರಿಗೆ ನಿರಾಶ್ರಿತರಿಗೆ ನೆರವಿಗೆ ಸಹಾಯ ಕೇಳಿ ಬಂದಾಗ ಸಮಾಜದ ಜಂಗಮದ ಕೂಗನ್ನು ಶಬ್ದವ ಕೇಳಿ,ಪ್ರಸಾದಕ್ಕೆ ಕೈದೆಗೆದೆಡೆ -ಸಹಾಯಕ್ಕೆ ಮುಂದೆ ಬಂದಾಗಲೆ ಲಿಂಗದೇವರು ಸಂತೃಪ್ತಿಯಾಗುವುದು .ಇದುವೆ ನಿಜವಾದ ಲಿಂಗತತ್ವವಾಗಿದೆ.
ಇದು ಕಾರಣ ,ಕೂಡಲ ಸಂಗಮದೇವಾ,ಇಂತಪ್ಪ ಸದಾಚಾರಿಗಳನೆನಗೆ ತೋರ
ಇಂತಹ ಒಳ್ಳೆಯ ತತ್ವ ನಿಷ್ಠರ ಭಕ್ತರನ್ನು ನನಗೆ ತೋರು ಎಂದು ಬಸವಣ್ಣನವರು ಬಿನೈಸುತ್ತಾರೆ. ಇದು ಕಾರಣ ಇದುವೆ ಸದಾಚಾರವಾಗಿದೆ ಎನ್ನುವುದು ಬಸವಣ್ಣನವರ ಸ್ಪಷ್ಟ ಅಭಿಪ್ರಾಯವಾಗಿದೆ.
ಇಲ್ಲಿ ಜಂಗಮ ತತ್ವಲಕ್ಕೆ ಆದ್ಯತೆ ನೀಡಿದ ಬಸವಣ್ಣನವರಿಗೆ ಲಿಂಗವೆಂಬುದು ಒಂದು ಹಂತದಲ್ಲಿ ಸ್ಥಾವರವಾಗಿ ಕಾಡುತ್ತದೆ ಅದರ ಪೂರಕ ಜಂಗಮ ಸೇವೆಯೇ ಲಿಂಗ ಪೂಜೆ ಎಂದಿದ್ದಾರೆ .ಇಂತಹ ಸುಂದರ ಸಮತಾವಾದದ ತತ್ವ ಇಲ್ಲಿ ಕಾಣಬಹುದು.
–ಡಾ.ಶಶಿಕಾಂತ.ಪಟ್ಟಣ -ಪೂನಾ