ಅಂತರಂಗದ ಬೆಳಕು

ಚಿತ್ ಜ್ಯೋತಿ ಪುಸ್ತಕ ಪರಿಚಯ

ಅಂತರಂಗದ ಬೆಳಕು

 

 

 

 

 

 

 

 

 

 

 

ಪುಸ್ತಕ : ಚಿತ್ ಜ್ಯೋತಿ

ಲೇಖಕರು- ಡಾ.ಸರ್ವಮಂಗಳ ಸಕ್ರಿ

ಪುಟಗಳು : ೧೨೮

ದರ: ೧೬೦-೦೦

ಪ್ರಕಾಶಕರು: ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ ಮಸ್ಕಿ

ಪುಸ್ತಕ ದೊರೆಯುವ ಸಂಪರ್ಕ : ವೀರೇಶ ಸೌದ್ರಿ, ಮಸ್ಕಿ

ಜಂಗಮವಾಣಿ -೯೪೪೮೮೦೫೦೬೭

ವಿಶ್ವ ಸಾಹಿತ್ಯಕ್ಕೆ ಕನ್ನಡದ ವಚನ ಸಾಹಿತ್ಯವು ನೀಡಿದ ಕೊಡುಗೆ ಅಮೂಲ್ಯವಾದುದು. ವಚನಗಳನ್ನು “ಕನ್ನಡದ ಉಪನಿಷತ್ತುಗಳು” ಎಂದಿರುವುದು ನಿಜಕ್ಕೂ ಅತಿಶಯೋಕ್ತಿಯಲ್ಲ. ವಚನ ಸಾಹಿತ್ಯ ಪರಂಪರೆ 12ನೇ ಶತಮಾನದಿಂದ ಇಂದಿನವರೆಗೂ ಕಾಲಕ್ಕನುಗುಣವಾಗಿ ಹರಿದು ಬರುತ್ತಿರುವುದು ಗಮನಾರ್ಹ ಸಂಗತಿ. ಪ್ರಸ್ತುತ ಸಾಹಿತ್ಯದ ಹತ್ತು ಹಲವು ನೋಟಗಳಲ್ಲಿ ಲೇಖನ ಪ್ರಕಾರವು ಅತ್ಯಂತ ಪ್ರಭಾವಿಯಾಗಿ ಬೆಳೆದಿರುವುದು, ಬೆಳೆಯುತ್ತಿರುವುದು ತುಂಬಾ ಸ್ವಾಗತಾರ್ಹ.

ಚಿತ್ ಜ್ಯೋತಿ ಇದೊಂದು ಶರಣ ಕಿರಣಗಳೊಂದಿಗೆ ಸಮಾಜದಲ್ಲಿ ಬೆಳಕು ಚೆಲ್ಲುವ ಜ್ಞಾನ ದೀವಿಗೆ.

ನಮ್ಮ ರಾಯಚೂರಿನ ಹಿರಿಯ ಸ್ತ್ರೀಬರಹಗಾರರಲ್ಲಿ ಒಬ್ಬರಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಅಸಾಮಾನ್ಯರಾಗಿ ಗುರುತಿಸಿಕೊಂಡಿರುವ ಡಾ. ಸರ್ವ ಮಂಗಳ ಸಕ್ರಿಯವರ ಚಿತ್ ಜ್ಯೋತಿ ಪುಸ್ತಕ ಇಂದು ನನ್ನ ಅರಿವಿನ ಬೆಳಕಿನಡಿ ವಿಮರ್ಶಾತ್ಮಕ ಬರಹದ ಸೌಭಾಗ್ಯ ನನ್ನದಾಗಿದೆ.

 

(ಲೇಖಕಿ -ಡಾ.ಸರ್ವಮಂಗಳ ಸಕ್ರಿ ರಾಯಚೂರು)

ಸಾಧನೆ ಎನ್ನುವುದು ಕೆಲವು ದಿನಗಳ ಪ್ರಯತ್ನವಲ್ಲ. ಅದು ನಿರಂತರ ಪರಿಶ್ರಮದ ಫಲ. ಏಳು-ಬೀಳುಗಳನ್ನು ಮೆಟ್ಟಿಲಾಗಿಸಿ ಬದುಕನ್ನು ಗಟ್ಟಿಗೊಳಿಸಿ ಸಾಹಿತ್ಯದ ನಿರಂತರ ಅಧ್ಯಯನಕ್ಕೆ ಡಾ. ಸರ್ವ ಮಂಗಳ ಸಕ್ರಿಯವರ ಸಾಧನೆಯ ಸಾಕ್ಷಿಯಾಗಿ ಇಂದು ಚಿತ್ ಜ್ಯೋತಿ ಓದುಗರ ಕೈಸೇರಿದೆ.

ಇನ್ನು ಜ್ಯೋತಿಯ ಅಕ್ಷರ ಕಿರಣಗಳಾಗಿ ಮೂಡಿ ಬಂದಿರುವ ಒಟ್ಟು 15 ಲೇಖನಗಳು ವಚನಕಾರರು ಮತ್ತು ವಚನಕಾರ್ತಿಯರನ್ನು ಕುರಿತ ಆಳವಾದ ಅಧ್ಯಯನದಿಂದ ಬರೆದ ಲೇಖನಗಳು. ಈ ಲೇಖನಗಳು ಓದುಗರ ಚಿತ್ತ ಬೆಳಗುವಲ್ಲಿ ಸಮರ್ಥವಾಗಿವೆ. ಶತಶತಮಾನಗಳಿಂದ ಸಾಧನೆ ಗೈಯುತ್ತಿದ್ದರೂ ಸ್ತ್ರೀಶಕ್ತಿ,, ಸ್ತ್ರೀ ಸಬಲೀಕರಣ, ಸ್ತ್ರೀಪರ ಆಲೋಚನೆಗಳಿಂದಲೇ ಲೇಖನಗಳು ಆರಂಭಗೊಂಡಿವೆ. ಸ್ತ್ರೀ ಸಮಾಜದ ಸೂಕ್ಷ್ಮ ವಿಚಾರಗಳನ್ನು ಸಂವೇದನಾ ದೃಷ್ಟಿಯಲ್ಲಿ ನೋಡುವುದರೊಂದಿಗೆ ಸ್ತ್ರೀ ಪರಿಕಲ್ಪನೆ ಹೇಗಿದೆ? ಹೇಗಿರಬೇಕು? ಇದಕ್ಕೆ ಶರಣೆಯರ ಸಾರ್ಥಕ ಬದುಕಿನ ಹಿನ್ನೆಲೆಯಲ್ಲಿ ಸ್ತ್ರೀ ಸಮಾನತೆ ಕಟ್ಟಿ ಕೊಡುವ ಪ್ರಯತ್ನ ಸಾರ್ಥಕವೆನಿಸಿದೆ.

“ಶರಣಸತಿ ಲಿಂಗಪತಿ”ಎನ್ನುವ ಸತಿಪತಿ ಭಾವ “ಹೆಣ್ಣು ಮಾಯೆಯಲ್ಲ” ಆಧ್ಯಾತ್ಮ ಪಥಕ್ಕೆ ಕಾಯಕ ಮತ್ತು ದಾಸೋಹ ತತ್ವಗಳು ಇಂದಿನ ಸಮಾಜಕ್ಕೆ ಶಕ್ತಿಯಾಗಿ ಸ್ಪೂರ್ತಿ ಆಗಬೇಕಿದೆ. ಎಂಬುದನ್ನು ಲೇಖಕರು ಒತ್ತಿ ಹೇಳಿದ್ದಾರೆ. “ಪ್ರಕೃತಿಯ ಆರಾಧಕಗಳು ಅಕ್ಕ”,”ಅಕ್ಕನ ಸಮರ್ಪಣಾ ಭಾವ”, “ಜಂಗಮಕ್ಕೆ ರುಚಿಯ ಸಲ್ಲಿಸುವೆ” ಈ ಮೂರು ಲೇಖನಗಳು ಅಕ್ಕಮಹಾದೇವಿಯ ವ್ಯಕ್ತಿತ್ವ ಅನಾವರಣಗೊಂಡಿದೆ.

ಸ್ತ್ರೀ ಸ್ವಾಭಿಮಾನ ಚಳುವಳಿಯ ಮೊದಲ ಹಕ್ಕು ಪ್ರತಿಪಾದಕಳಾಗಿ ಕಂಡುಬರುವ ಅಕ್ಕಮಹಾದೇವಿ “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯಾ” ಎನ್ನುವ ವಚನ ಇಲ್ಲಿ ಲೇಖಕರು ಪ್ರಕೃತಿಯ ಆರಾಧನೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದಿ ಬದುಕಿನ ತಿರುಳನ್ನು ಆಸ್ವಾದಿಸುವ ವಿಭಿನ್ನ ದೃಷ್ಟಿಯಲ್ಲಿ ಚಿತ್ರಿಸಿರುವುದು ವಿಶೇಷವಾಗಿದೆ.

ಇಲ್ಲಿ ವಚನಗಳೊಂದಿಗೆ ಹೊರಬಂದ ಭಾವನೆಗಳ ಗೀತಾತ್ಮಕತೆ ಮತ್ತು ನಿಸರ್ಗದ ತನ್ಮಯತೆಯ ಗೇಯತೆ ಲೇಖನವನ್ನು ಹೆಚ್ಚು ರಸವತ್ತಾಗಿಸಿದೆ. “ಲಿಂಗರೂಪ ಸವಿಸುವ ಜಂಗಮಕ್ಕೆ ರುಚಿಯ ಸಲ್ಲಿಸುವೆ” ಎನ್ನುವ ಅಕ್ಕನ ಮಾತು ಸರ್ವ ಮಂಗಳ ಸಕ್ರಿಯವರ ಬರಹದ ರುಚಿ ಹೆಚ್ಚಿಸಿದೆ. ಸೂತಕಗಳನ್ನು ನಿರಾಕರಿಸಿದ ಶರಣರು ಲೇಖನವು ಸಾಮಾಜಿಕ ಆಚರಣೆಯ ಹಿನ್ನೆಲೆಯಲ್ಲಿ ಅದರ ಆಳ ಅಗಲಗಳ ಮೇಲೆ ಬೆಳಕು ಚೆಲ್ಲುತ್ತಾ ಮೂಢರು ಕಂದಾಚಾರಿಗಳಿಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ. ಚಂದಿಮರಸನ ವೈಚಾರಿಕ ಪ್ರಜ್ಞೆ ಲೇಖನವು ಈ ಪುಸ್ತಕದ ವಿಶೇಷ ಲೇಖನವೆನಿಸಿದೆ. ಸಮಾಜದ ತೃತೀಯ ಲಿಂಗಿಗಳ ಬಗ್ಗೆ ಪ್ರಥಮವಾಗಿ ಮಾತನಾಡಿದ ಚಂದಿಮರಸ ಸಂಕುಚಿತ ಮನೋಭಾವದ ಸಮಾಜದ ನೂರಾರು ಮನಸ್ಸುಗಳಿಗೆ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ಲೇಖನ ಸಾಮಾಜಿಕ ಶಕ್ತಿಯಾಗಿದೆ. ಯುಗ ಪ್ರವರ್ತಕ ಬಸವಣ್ಣ ಜಗಜ್ಯೋತಿಯಾಗಿ, ಮಹಾತ್ಮನಾಗಿ, ಯುಗ ಪ್ರವರ್ತಕರಾಗಿ ಓದುಗರಿಗೆ ಬಸವ ಯುಗವನ್ನು ಮರು ಸೃಷ್ಟಿಸುತ್ತದೆ. ಮಾತ್ರವಲ್ಲ ಅಮೆರಿಕ, ಬ್ರಿಟನ್ ಪಾರ್ಲಿಮೆಂಟಿನಲ್ಲೂ ಬಸವ ಮಂತ್ರ ಮೊಳಗಿರುವುದನ್ನು ಲೇಖಕರು ಇಲ್ಲಿ ಸ್ಮರಿಸಿ ಬಸವಣ್ಣನವರನ್ನು ಯುಗ ಪ್ರವರ್ತಕರನ್ನಾಗಿಸಿದ್ದಾರೆ. ಗುರುವೆಂಬ ದಾರ್ಶನಿಕ ಅಜಗಣ್ಣ, “ರವಿಯೊಳಗೆ ಅಡಗಿದ ಪ್ರತಿಬಿಂಬದಂತೆ” ಲೇಖನದ ಶಿರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಸಾಕ್ಷಾತ್ ಶರಣೆ ಮುಕ್ತಾಯಕ್ಕಳ ಪ್ರತಿರೂಪವಾಗಿದೆ. ಮುಕ್ತಾಯಕ್ಕಳ ಆಧ್ಯಾತ್ಮಿಕ ಪಯಣದಲ್ಲಿ ಅಜಗಣ್ಣನನ್ನು ಗುರುವಾಗಿ ಅನುಭಾವದ ಆಳವನ್ನು ಸಾಕ್ಷಾತ್ಕರಿಸಿದ ಮುಕ್ತಾಯಕ್ಕಳ ಸಾಧನೆಯ ಪ್ರತಿರೂಪ ಈ ಲೇಖನದಲ್ಲಿ ಅನಾವರಣಗೊಂಡಿದೆ.

“ಸ್ತ್ರೀವಾದಿ ಶರಣೆ ಸತ್ಯಕ್ಕ” ಮೌನಕ್ರಾಂತಿಯ ಶರಣೆಯಾಗಿ ಸ್ತ್ರೀಯರಿಗೆ ಆದರ್ಶ ಮಾತ್ರವಲ್ಲ “ಲಂಚ ವಂಚನಕ್ಕೆ ಕೈಯಾನದ ಭಾಷೆ” ಎಂದು ಪ್ರಸ್ತುತ ದಿನಗಳಲ್ಲಿ ಅಣುಅಣುವಾಗಿ ಸಮಾಜವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರ ಲಂಚಗೊಳಿತನ ಪಿಡುಗನ್ನು ಹೋಗಲಾಡಿಸಲು ಸತ್ಯಕ್ಕ ನಾಯಕಿಯಾಗಿ ನಿಲ್ಲುತ್ತಾಳೆ. ಇನ್ನು ಚಾಮರಸನ ಪ್ರಭುಲಿಂಗಲೀಲೆ ಬಹು ವಿಸ್ತಾರವಾದ ಲೇಖನವಾಗಿದ್ದು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಡುಗನ್ನಡದ ಶ್ರೇಷ್ಠ ಕನ್ನಡ ಕೃತಿಗಳಲ್ಲಿ ಒಂದಾಗಿದೆ. ಚಾಮರಸ ವಿಜಯನಗರ ಅರಸರ ಕಾಲದ ಶ್ರೇಷ್ಠ ಕವಿಯಾಗಿದ್ದು ಅಲ್ಲಮ ಪ್ರಭುಗಳ ಸಾಕ್ಷಾತ್ಕಾರ ಈ ಕೃತಿಯಿಂದ ಸಾಧ್ಯವಾಗುತ್ತದೆ. ಈ ಪ್ರಭುಲಿಂಗಲೀಲೆ “ಸತ್ತವರ ಕಥೆಯಲ್ಲ, ಹೊತ್ತು ಹೋಗದೆ ಪುಂಡರು ಕೇಳುವ ಅಥವಾ ಮತಿಗಳ ಗೋಷ್ಟಿಯಲ್ಲ” ಎನ್ನುವ ಮಾತುಗಳೊಂದಿಗೆ ಆರಂಭಿಸುವ ಚಾಮರಸ ತನ್ನ ಕಾವ್ಯದ ಘನತೆಯನ್ನು ಎತ್ತಿ ಹಿಡಿದಿದ್ದಾನೆ. ಅಲ್ಲಮರ ವೈಚಾರಿಕ, ತಾತ್ವಿಕ ವಿಚಾರಗಳು ಕಾವ್ಯಾತ್ಮಕ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿರುವುದು ಅದನ್ನು ಓದುಗರಿಗೆ ಸರಳಗೊಳಿಸಿ ನೀಡಿರುವುದು ಸರ್ವ ಮಂಗಳ ಸಕ್ರಿಯವರಿಗೆ ಓದುಗರು ಋಣಿಯಾಗಲೇಬೇಕು.

ಒಟ್ಟಾರೆ ವಚನ ಸಾಹಿತ್ಯ ವಿಶ್ವ ಸಾಹಿತ್ಯದ ನೆಲೆಗೆ ಆಧಾರ. ಅಲ್ಲದೆ ಪ್ರತಿ ಜೀವಿಯ ಬದುಕಿಗೆ ತಳಹದಿ. ಅದಕ್ಕೆ ಶರಣರ ಅನುಭಾವಧಿ ಮೂಡಿದ ಜೀವ ದ್ರವ್ಯಗಳಾದ ವಚನಗಳು ಈ ಎಲ್ಲಾ ಲೇಖನಗಳ ಜೀವಾಳ. ಲೇಖಕರು ಸಾಹಿತ್ಯದ ನೆಲೆಯಲ್ಲಿ ಬದುಕಿನ ವಿವಿಧ ಆಯಾಮಗಳಿಗೆ ದಾರಿ ತೋರಿಸಿದ್ದಾರೆ. ಆಧುನಿಕ ಸಮಾಜ ಎದುರಿಸುತ್ತಿರುವ ಸಂಘರ್ಷಗಳಿಗೆ ಉತ್ತರವಾಗಿ ಬದುಕಿನ ಒಳನೋಟ ತೆರೆದಿದ್ದಾರೆ. ಸ್ತ್ರೀ ಪರ ಕಾಳಜಿ ಈ ತೃತೀಯ ಜೀವಾಳ ಎನ್ನುವಂತೆ ಲೇಖನಗಳು ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ಸಾಧನೆ ಸಮಸ್ಯೆಗಳ ಪರಿಹಾದ ದಿವ್ಯ ಔಷಧಿ ಗಳಾಗಿವೆ.

2024 ರಲ್ಲಿ ದೇವನಾಂಪ್ರಿಯ ಪ್ರಕಾಶನದಡಿ ಮುದ್ರಣಗೊಂಡ ಈ ಕೃತಿ ಚಿತ್ತಾಕರ್ಷಕ ಮುಖಪುಟ ಹೊಂದಿದೆ.ಲೇಖಕರು ತಮ್ಮ ಅಪಾರ ಜೀವನಾನುಭವಗಳ ಒಟ್ಟು ಮೊತ್ತವಾಗಿ ಈ ಕೃತಿ ಅಚ್ಚಾಗಿದೆ. ಶರಣರ ಸಮೃದ್ಧ ವಿಚಾರಗಳು ಮತ್ತೆ ಬೆಳೆಯಲಿ ಜೀವನಕ್ಕೆ ಅವರಚಿಂತನೆಗಳು ಸಾಕಾರಗೊಳ್ಳಲಿ. ಎನ್ನುವ ಸದಾಶಯ ಮತ್ತು ಮನದ ಮಿಡಿತ ಎದ್ದು ಕಾಣುತ್ತದೆ. ಲೇಖನಗಳಿಗೆ ನೀಡಿದ ಶೀರ್ಷಿಕೆಗಳು ಓದಲು ತುಂಬಾ ಕುತೂಹಲ ಹುಟ್ಟಿಸುತ್ತವೆ. ಪ್ರತಿ ಲೇಖನದ ಆರಂಭದಲ್ಲೂ ಶರಣರ ವಚನ ಮುತ್ತುಗಳು ಬರಹಕ್ಕೆ ಜೀವಕಳೆ ತುಂಬಿವೆ. ಹಿರಿಯ ಸಾಹಿತಿಗಳಾದ ವಿಜಯ ಕುಮಾಶ್ರೀರ ಕಮ್ಮಾರ ರವರ ಮುನ್ನುಡಿ ಇಡೀ ಕೃತಿಯ ಕೈಗನ್ನಡಿಯಾಗಿದೆ. ಅವರ ಮಾತುಗಳು ಕೃತಿಗೆ ಶೋಭೆ ತಂದಿವೆ. ಪುಸ್ತಕ ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಸದುದ್ದೇಶದಿಂದ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿ ಇಂತಹ ಸತ್ವಪೂರ್ಣ ಕೃತಿಗಳು ಓದುಗರ ಕೈ ಸೇರುವಲ್ಲಿ ಶ್ರಮಿಸುವ ಶ್ರೀ ವೀರೇಶ ಸೌದ್ರಿ ಮಸ್ಕಿ ಪ್ರಕಾಶಕರನ್ನು ಸ್ಮರಿಸಲೇಬೇಕು. ಸರ್ವಮಂಗಳ ಸಕ್ರಿಯವರ ಅಂತರಂಗದಿಂದ ಹೊರಹೊಮ್ಮಿದ ಈ ಕೃತಿ ನಾಡಿನ ಜನತೆಯ ಪ್ರೀತಿಗೆ ಪಾತ್ರವಾಗಲಿ ಸಹೃದಯ ಓದುಗರ ಪ್ರೀತಿಯಿಂದ ಇದನ್ನು ಸ್ವಾಗತಿಸಲಿ ಎಂದು ಮನಪೂರ್ವಕವಾಗಿ ಹಾರೈಸುವೆನು.

ಅಧ್ಯಯನ ಮತ್ತು ಅನುಭವದಲ್ಲಿ ಚಿಕ್ಕವಳಾಗಿದ್ದರೂ ನನಗೆ ಕೃತಿ ವಿಮರ್ಶೆಯ ಸದಾವಕಾಶ ನೀಡಿದ್ದು ನನ್ನ ಬರಹ ಮಟ್ಟವನ್ನು ಹೆಚ್ಚಿಸಿದೆ. ಎನ್ನುವ ತೃಪ್ತಿ ನನಗಿದೆ.

 

 

 

 

 

 

 

 

 

ಶ್ರೀಮತಿ ರೇಖಾ ಪಾಟೀಲ
ಇತಿಹಾಸ ಉಪನ್ಯಾಸಕರು
ರಾಯಚೂರು

Don`t copy text!