ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ,
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ.
ಹೂವಿಲ್ಲದ ಪರಿಮಳದ ಪೂಜೆ!
ಹೃದಯಕಮಳದಲ್ಲಿ ‘ಶಿವಶಿವಾ’ ಎಂಬ ಶಬ್ದ
*ಇದು, ಅದ್ವೈತ ಕಾಣಾ ಗುಹೇಶ್ವರಾ.
-ಅಲ್ಲಮ ಪ್ರಭು
ಅಲ್ಲಮ ಪ್ರಭು ಜ್ಞಾನದ ಅರಿವಿನ ದೀವಿಗೆ . ಶರಣರ ವಚನಗಳಲ್ಲಿ ಆಳವಾದ ಅನುಭವ ಆಧ್ಯಾತ್ಮಿಕ ಚಿಂತನೆ ಇದೆ. ದಿವ್ಯ ಪ್ರಭೆ ಅಲ್ಲಮರು ಪ್ರಕೃತಿ ಬಯಲು ಪರಿಸರ ಸಮಷ್ಟಿಯ ಪ್ರಜ್ಞೆಯನ್ನು ಶರೀರ ಮತ್ತು ಕಾಯ ಗುಣಗಳ ಅನುಭವಗಳ ಜೊತೆಗೆ ಸಮನ್ವಯಗೊಳಿಸಿದ ಶ್ರೇಷ್ಟ ಚಿಂತಕ ವಚನಕಾರ
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ,
ಇಷ್ಟ ಲಿಂಗ ಪ್ರಾಣ ಲಿಂಗ ಮತ್ತು ಭಾವ ಲಿಂಗ ಎಂಬ ಲಿಂಗ ಪ್ರಜ್ಞೆಯ ವಿವಿಧ ರೂಪ. ಪ್ರಾಣ ಲಿಂಗ ಅದು ಚೈತನ್ಯ ಚಲನಶೀಲತೆ ಇಂತಹ ಪ್ರಾಣ ಲಿಂಗಕ್ಕೆ ಒಂದು ಸೂರು ನೆಲೆ ಎಂದರೆ ಶರೀರ ಅದುವೇ ಪ್ರಾಣ ಲಿಂಗದ ಕವಚ ಕಾಯ. ಇಡೀ ಸೃಷ್ಟಿಗೆ ನೆಲೆ ಸೂರು ಆಕಾಶ ಕಾಯ ಎಂಬ ಅರ್ಥವನ್ನು ನೀಡುತ್ತದೆ. ಅಲ್ಲಮರು ಪ್ರಕೃತಿ ಬಯಲು ಜೊತೆಗೆ ಜೀವ ಜಾಲಗಳ ಸಮೀಕರಣ ಮಾಡಿ ಅಧ್ಯಾತ್ಮದ ಅರಿವು ಮೂಡಿಸುವಲ್ಲಿ ಯಶಸ್ವಿ ಕಂಡವರು.
ಆಕಾಶಗಂಗೆಯಲ್ಲಿ ಮಜ್ಜನ.
ಪ್ರಾಣ ಲಿಂಗವೆಂದಾಕ್ಷಣ ಅದು ಕೇವಲ ವ್ಯಕ್ತಿಗೆ ಸಂಬಂಧ ಪಟ್ಟ ಅರ್ಥವಲ್ಲ.ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳ ಪ್ರಾಣವೆಂದು ಮತ್ತು ಅವುಗಳನ್ನು ಕಾಪಾಡುವ ಗೌರವಿಸುವ ಹೊಣೆಗಾರಿಕೆ ಭಕ್ತನ ಮೇಲಿದೆ. ಮಜ್ಜನ ಸ್ನಾನ ಪ್ರಕೃತಿಯಲ್ಲಿನ ಸಹಜದತ್ತವಾದ ಮಳೆಯಿಂದ ಎಲ್ಲಾ ಪಕ್ಷಿ ಜಲಚರ ಪ್ರಾಣಿ ಇವುಗಳ ಮಜ್ಜನ ನಡೆಯುತ್ತದೆ.ಇಂತಹ ಸರಳ ಸುಂದರ ಅನುಭವ ಅಲ್ಲಮರು ಸಾದರ ಪಡಿಸುತ್ತಾರೆ.
ಹೂವಿಲ್ಲದ ಪರಿಮಳದ ಪೂಜೆ!
ಎಲ್ಲಾ ಜೀವಿಗಳ ಪ್ರಾಣ ಲಿಂಗದ ವಾರಸುದಾರರು ತಮ್ಮ ತಮ್ಮ ಸ್ನಾನ ಮಜ್ಜನ ಮಾಡಿದ ನಂತರ ಅಂತಹ ಸೂಕ್ಷ್ಮ ಮನಸ್ಸಿನ ಪ್ರಾಣಲಿಂಗದ ಪೂಜೆ ಹೂವು ಹಣ್ಣು ಪತ್ರಿ ಶ್ರೀಗಂಧ ಧೂಪ ದೀಪ ಪುಷ್ಪ ಪರಿಮಳವಿಲ್ಲದೆ ನಡೆಯುವ ಪೂಜೆ ಅರ್ಚನೆ ಎಂದಿದ್ದಾರೆ ಅಲ್ಲಮರು.
ಶಿವಶಿವಾ’ ಎಂಬ ಶಬ್ದ ಇದು, ಅದ್ವೈತ ಕಾಣಾ ಗುಹೇಶ್ವರಾ.
ಶಿವ ಎಂಬ ಮಂತ್ರ ಶಬ್ದ ಇದು ಸಕಲ ಜೀವಿಗಳ ಪ್ರಾಣ ಲಿಂಗದ ಪ್ರತೀಕ
ಹೀಗಾಗಿ ಹೂವು ಹಣ್ಣು ಪತ್ರಿ ಶ್ರೀಗಂಧ ಧೂಪ ದೀಪ ಹಚ್ಚಿ ಉನ್ಮಾದದ ಸ್ವರ ಶಿವ ಶಿವಾ ಎಂಬ ಶಬ್ದಗಳು ಮಂತ್ರವಾಗದೆ ಅವು ಅದ್ವೈತ ಸಾರುವ ಶಬ್ದಗಳು ಸಕಲ ಚರಾಚರ ಜೀವಿಗಳ ಪ್ರಾಣ ಲಿಂಗದ ಪ್ರತೀಕ ಶಿವನೆಂಬ ಪ್ರಜ್ಞೆ ಎಂದಿದ್ದಾರೆ ಅಲ್ಲಮ. ತನ್ನ ಬಿಟ್ಟು ದೇವರಿಲ್ಲ ಮಣ್ಣು ಬಿಟ್ಟು ಮಡಿಕೆ ಇಲ್ಲ ಎನ್ನುವ ಸುಂದರ ಅನುಭವ ಅದ್ವೈತ ತತ್ವವನ್ನು ಅಲ್ಲಮರು ಅತ್ಯಂತ ಸರಳವಾಗಿ ಹೇಳುತ್ತಾ ವ್ಯಕ್ತಿ ಕೇಂದ್ರಿತ ಧರ್ಮದಲ್ಲಿ ನಡೆಯುವ ಪೂಜೆ ಅರ್ಚನೆ ಬೂಟಾಟಿಕೆಗಳನ್ನು ಅಲ್ಲಗಳೆದು ಎಲ್ಲಾ ಜೀವಿಗಳ ಅಸ್ತಿತ್ವದ ಹಕ್ಕು ಮತ್ತೂ ಅಸ್ಮಿತೆಯ ಗೌರವ ಅಲ್ಲಮರ ವಚನದಲ್ಲಿ ಕಾಣಬಹುದು.
-ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338