ನಮ್ಮೂರ ರಾಜಿ ಪಂಚಾಯತಿ ‘ನಾಯಕ’ ಭಗವಂತಪ್ಪ

ನಮ್ಮೂರ ರಾಜಿ ಪಂಚಾಯತಿ ‘ನಾಯಕ’ ಭಗವಂತಪ್ಪ

 

 

 

 

 

 

 

 

 

ಪಂಚಾಯತಿ ಕಟ್ಟೆ ಮತ್ತು ನ್ಯಾಯಾಂಗ- ಆಗಿನ ಕಾಲದ ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಜಗಳಗಳು ಸರ್ವೇ ಸಾಮಾನ್ಯ, ಆದರೆ ಜನ ಆ ಜಗಳ ಹಿಡಿದುಕೊಂಡು ಕೋರ್ಟು, ಕಚೇರಿ ಅಲೆಯುತ್ತಿರಲಿಲ್ಲ. ಕಿತ್ತಾಡಿದ ನಂತರ ಹಿರಿಯರು ಬಗೆಹರಿಸಿದರೆ ಮತ್ತೆ ಒಂದಾಗುತ್ತಿದ್ದರು. ಆದರೆ ಬಗೆ ಹರಿಸುವ ವ್ಯಕ್ತಿ ಸಕಾರಾತ್ಮಕ ಧೋರಣೆ ಹೊಂದಿದ ಪ್ರಾಮಾಣಿಕ ವ್ಯಕ್ತಿ ಆಗಿರುತ್ತಿದ್ದ ಎಂಬುದು ವಿಶೇಷ. ‌
ನಿರ್ಮಲ, ನಿರ್ವಿಕಾರ ಹಾಗೂ ನಿಸ್ವಾರ್ಥ ಮುಖಂಡ ಅಂತಹ ರಾಜಿ ಪಂಚಾಯತಿಯ ಪ್ರಮುಖನಾಗಿರುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ, ನಮ್ಮ ಗ್ರಾಮ ಸಂಸ್ಕೃತಿ ಕೂಡ!

ರಾಜ ಮಹಾರಾಜರ ಕಾಲದಲ್ಲಿ ವ್ಯಾಜ್ಯಗಳನ್ನು ರಾಜರ ದಂಡನಾಯಕರು, ಕಾನೂನು ಬಲ್ಲ ಮಂತ್ರಿಗಳು ಪರಿಹಾರ ಮಾಡುತ್ತಿದ್ದರು. ನಂತರ ರಾಜನಿಂದ ಬಹುದೂರವಿದ್ದ ಗ್ರಾಮಗಳು, ತಮ್ಮದೇ ಆದ ಪಂಚಾಯತ ವ್ಯವಸ್ಥೆಯನ್ನು ರೂಪಿಸಿಕೊಂಡು, ಕೆಲವು ಪ್ರಮುಖರನ್ನು ಪಂಚರೆಂದು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಕನಿಷ್ಠ ಐದು ಜನರ ತಂಡ ಹೊಂದಿದ್ದ ಕಾರಣದಿಂದ ಸರಪಂಚರು ಎನ್ನುತ್ತಿದ್ದರು. ಊರ ಬಹುದೊಡ್ಡ ಮರದ ಕೆಳಗಿನ ಕಟ್ಟೆಯನ್ನು ‌’ಪಂಚಾಯತಿ ಕಟ್ಟೆ’ ಎಂದು ಕರೆಯುತ್ತಿದ್ದರು. ಅದೇ ಗ್ರಾಮೀಣ ಭಾಗದ ಓಪನ್ ಕೋರ್ಟ್. ಆ ಪಂಚಾಯತಿ ತೀರ್ಮಾನವನ್ನು ಜನ ಪ್ರೀತಿ, ವಿಶ್ವಾಸದಿಂದ ಗೌರವಿಸಿ, ಒಪ್ಪಿಕೊಳ್ಳುತ್ತಿದ್ದರು. ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ವಿಷಯಗಳ ಭಿನ್ನಾಭಿಪ್ರಾಯಗಳು ಅಲ್ಲಿ ಬಗೆಹರಿಸ್ಪಡುತ್ತಿದ್ದವು. ಆದರೆ ಈಗ ಕಾಲ ತುಂಬಾ ಬದಲಾಗಿದೆ. ನಿರ್ವಿಕಾರ ಮನೋಧರ್ಮದ ನಾಯಕರು ಮಾಯವಾಗಿ, ಸ್ವಾರ್ಥಿಗಳು ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ. ಜನರನ್ನು ಒಗ್ಗೂಡಿಸುವ ಬದಲಾಗಿ, ಜಾತಿ, ಧರ್ಮ ಹಾಗೂ ಪಕ್ಷಗಳ ಹೆಸರಿನಲ್ಲಿ ಒಡೆದು ಆಳುತ್ತಾರೆ. ಊರು ಹಾಳಾದರೂ ಚಿಂತೆಯಿಲ್ಲ ಅಧಿಕಾರ ಮಾತ್ರ ತಮ್ಮ ಕೈಯಲ್ಲಿ ಇರಲೆಂದು ಬಯಸುವುದು ಪ್ರಜಾಪ್ರಭುತ್ವದ ವ್ಯಂಗ್ಯ. ಇದು ಇಂದಿನ ಪ್ರತಿ ಗ್ರಾಮಗಳ ವ್ಯಥೆಯ ಕತೆಯಾಗಿದೆ.

 

ಕಾರಟಗಿ ಪಂಚಾಯತ ಇತಿಹಾಸ- ಅರವತ್ತು ಮತ್ತು ಎಪ್ಪತ್ತರ ದಶಕದಿಂದ ಕಾರಟಗಿ ಗ್ರಾಮ ಪಂಚಾಯತಿ ಇತಿಹಾಸ ಪ್ರಾರಂಭವಾಗುತ್ತದೆ. ಆದರೆ ನನ್ನ ನೆನಪಿನ ಮಿತಿಯ ಇತಿಹಾಸ ಆರಂಭವಾಗುವುದು ಎಪ್ಪತ್ತರ ದಶಕದ ಬಾಲ್ಯದಿಂದ. ಒಂದು ತಾಸು ಓಡಾಡಿದರೆ ಸಾಕು ಊರು ಕೈಗೆ ಸಿಗುತ್ತಿತ್ತು. ಸಾಮರಸ್ಯ ಕಾರಟಗಿಯ ವಿಶೇಷ. ‌ಎಲ್ಲ ಜಾತಿ ಜನಾಂಗದವರು ಪ್ರೀತಿ ವಿಶ್ವಾಸದಿಂದ ಬದುಕಿ ಬಾಳುವ ಕಾಲವದು. ನಮ್ಮ ದೊಡ್ಡ ಕಿರಾಣಿ ಅಂಗಡಿಯಲ್ಲಿ ಎಲ್ಲ ಜಾತಿಯ ಜನ ಕೆಲಸ ಮಾಡುತ್ತಿದ್ದರು. ಆಯಾ ಜನಾಂಗದವರನ್ನು ಜಾತಿ ಹಿಡಿದು ಕರೆಯುವುದು ‘ಅನಾಗರಿಕ ಲಕ್ಷಣ’ ಎನಿಸುತ್ತಿರಲಿಲ್ಲ.‌ ಗೌಡರು, ಐನ್ಯಾರು, ಶೆಟ್ಟರು, ಕುರುಬರು ಹಾಗೂ ತೀರಾ ಹಿಂದುಳಿದವರನ್ನು ಕಪ್ಪು ಕಡಿ ತಿನ್ನುವವರು ಎನ್ನುತ್ತಿದ್ದರು, ಆದರೆ ಜಾತಿ ಅಹಮಿಕೆ ಇರುತ್ತಿರಲಿಲ್ಲ. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು.

ಕೃಷಿ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಒಟ್ಟಾಗಿ ನಿರ್ವಹಣೆ ಮಾಡುತ್ತಿದ್ದರು. ಕೆಲವೇ ಕೆಲವು ಜನ ಶ್ರೀಮಂತ ರೈತರು ಮತ್ತು ವ್ಯಾಪಾರಿಗಳು ಇದ್ದ ಕಾಲವದು. ವ್ಯಾಪಾರ ಮತ್ತು ಕೃಷಿಯಲ್ಲಿ ಆಸಕ್ತಿ ಇರದೇ ಹೋದವರು ಮಾತ್ರ ರಾಜಕಾರಣ ಅಂದರೆ ಹಿರೇತನ ಮಾಡುತ್ತಿದ್ದರು. ಈ ರೀತಿ ಮಾಡುವ ಹಿರೇತನದಲ್ಲಿ ಮೋಸ ವಂಚನೆ ಇರದೆ, ಬರೀ ಸ್ವಾಭಿಮಾನ, ಗೌರವ ಇರುತ್ತಿತ್ತು. ತನಗೆ ಎಲ್ಲರೂ ಮಹತ್ವ ಕೊಡಲಿ ಎಂಬ ಕೇವಲ ನಿರೀಕ್ಷೆ ಇರುತ್ತಿತ್ತು. ಲಿಂಗಾಯತ ಕೋಮಿನ ಅರಳಿ ಗುಂಡಪ್ಪ ಅವರು ನಮ್ಮೂರಿನ ಘೋಷಿತ ಪಂಚಾಯತಿ ಹಿರಿಯರಾಗಿದ್ದರು.

ಜನ ನಾಯಕರಾದ ಭಗವಂತಪ್ಪ ನಾಯಕ- ಅರಳಿ ಗುಂಡಪ್ಪ ಅವರ ಪ್ರಭಾವದಿಂದಾಗಿ, ಎರಡನೇ ತಲೆಮಾರಿನ ನಾಯಕರು ರೂಪುಗೊಂಡರು.
ಹಾಗೆ ರೂಪುಗೊಂಡ ಅಪರೂಪದ ಯುವಕರೆಂದರೆ ‘ಭಗವಂತಪ್ಪ ನಾಯಕ’ ಅವರು. ನಲವತ್ತರ ದಶಕದಲ್ಲಿ ಜನಿಸಿದ ವಾಲ್ಮೀಕಿ ಜನಾಂಗದ ಭಗವಂತಪ್ಪ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾರಟಗಿಯಲ್ಲಿ ಪೂರೈಸಿದರು. ಆಗ ಹೈಸ್ಕೂಲ್ ಕಟ್ಟಿ ಏರಿದರೂ, ಹತ್ತನೇ ವರ್ಗ ಪಾಸಾಗಬೇಕೆಂಬ ನಿಯಮ ಇರಲಿಲ್ಲ, ಅಷ್ಟರೊಳಗೆ ಅವರ ಕಾಯಕ ರೂಪುಗೊಳ್ಳುತ್ತಿತ್ತು. ವ್ಯಾಪಾರ, ಕೃಷಿ ಚಟುವಟಿಕೆಗಳಲ್ಲಿ ಯುವಕರು ತೊಡಗಿಕೊಂಡು, ಹದಿನೆಂಟರ ಪ್ರಾಯದಲ್ಲೇ ಮದುವೆಯಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ನಮ್ಮ ಮನೆತನದ ಎಲ್ಲ ಹಿರಿಯರ ಮದುವೆ ಇಪ್ಪತ್ತರ ಪ್ರಾಯದ ಒಳಗೆ ಮುಗಿದಿರುವುದು ಆಗ ಸಾಮಾನ್ಯ ಸಂಗತಿ.
ಅದೇ ರೀತಿ ಭಗವಂತಪ್ಪ ಅವರು ತಮ್ಮ ಮದುವೆಯ ನಂತರ ಕೃಷಿ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಗುಂಡಪ್ಪ ಅರಳಿ ಅವರ ನಂತರ ಪಂಚಾಯತ ವ್ಯವಸ್ಥೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಾಲ್ಗೊಳ್ಳುತ್ತಾರೆ. ಸಣ್ಣ ಪುಟ್ಟ ತಕರಾರುಗಳನ್ನು ಮೊದಲು ಅರಳಿ ಗುಂಡಪ್ಪ ಅವರು ಬಗೆಹರಿಸುವುದನ್ನು ಇವರು ಗಮನಿಸುತ್ತ ಬೆಳೆಯುತ್ತಾರೆ. ಹೀಗೆ ಜನರ ವ್ಯಾಜ್ಯ ಮತ್ತು ತಕರಾರುಗಳನ್ನು ಪರಿಹರಿಸುವುದು ಕೂಡ ಸಮಾಜ ಸೇವೆ ಎಂಬ ಭಾವನೆ ಮೂಡುತ್ತದೆ.‌ ಗ್ರಾಮದ ಸಣ್ಣ ಪುಟ್ಟ ಜಗಳಗಳು ಕೋರ್ಟ್ ಕಟ್ಟೆ ಏರದಂತೆ ತಡೆದ ಹೆಗ್ಗಳಿಕೆ ಭಗವಂತಪ್ಪ ಅವರಿಗೆ ಸಲ್ಲುತ್ತದೆ. ಬಿಳಿ ಜುಬ್ಬಾ, ಬಿಳಿ ಧೋತರ ಉಟ್ಟುಕೊಂಡು, ಧೋತರದ ಚುಂಗನ್ನು ಕೈಯಲ್ಲಿ ಹಿಡಿದುಕೊಂಡು ನಿಧಾನವಾಗಿ ನಡೆಯುತ್ತಿದ್ದ ಅವರ ವ್ಯಕ್ತಿತ್ವ ನನಗೆ ಚೆನ್ನಾಗಿ ನೆನಪಿದೆ.‌ ನಮ್ಮ ತಂದೆಯವರ ಆಪ್ತ ಒಡನಾಡಿಗಳಲ್ಲಿ ಭಗವಂತಪ್ಪ ಕೂಡ ಒಬ್ಬರು. ಅತ್ಯಂತ ಪ್ರೀತಿಯಿಂದ ಭಗವಂತಪ್ಪಣ್ಣ ಎಂದು ಕರೆದರೆ, ನಿಧಾನವಾಗಿ ‘ಹೇಳ ದಣಿ’ ಎಂಬ ಆಪ್ತ ಕರೆ ಬರುತ್ತಿತ್ತು.

ಬಹುತೇಕ ಹಳ್ಳಿಗಳಲ್ಲಿ ಲೀಡರ್ ಎನಿಸಿಕೊಂಡವರು ಏರು ದನಿಯಲ್ಲಿ, ಜೋರಾಗಿ ಮಾತನಾಡುವುದು ಸಹಜ. ಆದರೆ ಭಗವಂತಪ್ಪ ಅವರು ತುಂಬಾ ಮೆಲು ದನಿಯಲ್ಲಿ, ಸೂಕ್ಷ್ಮವಾಗಿ ಮಾತನಾಡುತ್ತಿದ್ದರು. ಜೋರಾಗಿ ಮಾತನಾಡದೇ ತಮ್ಮ ಪ್ರಭಾವ, ವರ್ಚಸ್ಸು ಇಟ್ಟುಕೊಂಡದ್ದು ಇವರ ವಿಶೇಷತೆ.

ಪಂಚಾಯತ ಅಧ್ಯಕ್ಷತೆ ಮತ್ತು ಕಾಂಗ್ರೆಸ್ ರಾಜಕೀಯ-
ಭಗವಂತಪ್ಪ ನಾಯಕ ಅವರು ಪಂಚಾಯತ ಸದಸ್ಯರಾದ ನಂತರ ಜಾತಿ, ಧರ್ಮ, ಪಕ್ಷ ಸಿದ್ಧಾಂತಗಳನ್ನು ಮೀರಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಪಂಚಾಯತ ಅಧ್ಯಕ್ಷ ವ್ಯಾಪ್ತಿಯ ಹೊರಗೆ, ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ನಾಯಕತ್ವ ರೂಪಿಸಿಕೊಂಡರು.‌ ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ನಾಯಕರಾಗಿ ರೂಪುಗೊಳ್ಳಲು ಅಂದಿನ ಜನಪ್ರಿಯ ಸಂಸದರಾದ ಎಚ್.ಜಿ. ರಾಮುಲು ಅವರು ಕಾರಣರಾದರು. ಹಿಂದುಳಿದ ವರ್ಗಗಳ ಮತ ಕ್ರೋಢೀಕರಿಸುವ ಇಂದಿರಾಗಾಂಧಿ ಹಾಗೂ ದೇವರಾಜ್ ಅರಸ್ ಅವರ ಪ್ರಭಾವ ರಾಜ್ಯದಲ್ಲಿ ಆರಂಭವಾದ ಸಂದರ್ಭದಲ್ಲಿ ಇವರು ಕಾರಟಗಿ ಭಾಗದಲ್ಲಿ ಪ್ರಭಾವ ಹೆಚ್ಚಿಸಿಕೊಂಡದ್ದು ಗಮನಾರ್ಹ ಸಂಗತಿ. ಆಗ ಶ್ರೀರಂಗದೇವರಾಯಲು ಅವರು ಕನಕಗಿರಿ ಶಾಸಕರಾಗಿದ್ದರು, ಕೊಪ್ಪಳ ಲೋಕಸಭೆಯನ್ನು ಎಚ್.ಜಿ. ರಾಮುಲು ಪ್ರತಿನಿಧಿಸಿ ಸಂಸದರಾಗಿದ್ದರು. ಕಾರಟಗಿ ಭಾಗದ ಪ್ರತಿಯೊಂದು ನಿರ್ಣಯಗಳ ಹಿಂದೆ ಭಗವಂತಪ್ಪ ಅವರ ಪ್ರಭಾವ ದಟ್ಟವಾಗಿರುತ್ತಿತ್ತು. ಇಂದಿರಾಗಾಂಧಿ ಅವರ ಜೊತೆಗೆ ಆಪ್ತ ಒಡನಾಟ ಸಂಸದ ರಾಮುಲು ಅವರಿಗೆ ಇತ್ತು, ಅದೇ ರೀತಿ ರಾಜಮನೆತನದ ಶ್ರೀರಂಗದೇವರಾಯಲು ಶಾಸಕರಾಗಿ ಜನಪರ ಕೆಲಸ ಮಾಡುತ್ತಿದ್ದರು. ‌ದಂತಕಥೆಯ ರಾಜಕೀಯ ನಾಯಕ ರಾಮುಲು ಅವರು ಭಗವಂತಪ್ಪ ಅವರ ಮಾತಿಗೆ ಮನ್ನಣೆ ಕೊಡುತ್ತಾರೆ ಎಂಬ ಅಭಿಪ್ರಾಯ ಅನೇಕ ಅಭಿವೃದ್ಧಿ ಕಾರ್ಯಗಳ ಪ್ರೇರಕ ಶಕ್ತಿಯಾಯಿತು.

ವಿ.ಎಸ್.ಎಸ್.ಎನ್. ಸಂಘ-
ಕಾರಟಗಿಯ ಹಿರಿಯರಾದ ವಕೀಲ ಸೂಗಪ್ಪ ಇನ್ನೋರ್ವ ಕಾಂಗ್ರೆಸ್ ನಾಯಕರು. ಅವರ ಕಾನೂನು ಪರ ಮಾರ್ಗದರ್ಶನದಲ್ಲಿ ಭಗವಂತಪ್ಪ ಅವರು ಸಂಘ ಸಂಸ್ಥೆಗಳ ಕಟ್ಟಿ ಬೆಳೆಸಿದರು. ಗ್ರಾಮೀಣ ಭಾಗದ ರೈತರ ಒಳಿತಿಗಾಗಿ, ಆಗ ಸೊಸೈಟಿಗಳು ಸ್ಥಾಪಿತವಾದುವು. ವಕೀಲ ಸೂಗಪ್ಪ ಅವರ ನಂತರ ಭಗವಂತಪ್ಪ ಅವರು ಅಧ್ಯಕ್ಷರಾದರು. ಗ್ರಾಮೀಣ ಭಾಗದಲ್ಲಿ ರೈತರ ಸಲುವಾಗಿ ಸ್ವಸಹಾಯ ಸಂಘ ಆರಂಭವಾಗಲು ಭಗವಂತಪ್ಪ ಹೆಚ್ಚು ಶ್ರಮಿಸಿ ರೈತರಿಗೆ ಗೊಬ್ಬರ, ಬೀಜ ಸೂಕ್ತ ರೀತಿಯಲ್ಲಿ ವಿತರಣೆ ಆಗುವಂತೆ ನೋಡಿಕೊಂಡರು. ನಂತರ ಊರಿನ ಇತರ ಹಿಂದುಳಿದ ಸಮಾಜದ ಯುವಕರಿಗೆ ಆದ್ಯತೆ ನೀಡಿದರು. ಪರಕಿ ಪರಸಪ್ಪ, ಬೂದಿ ರಡ್ಡೆಪ್ಪ ಅವರಂತಹ ಯುವಕರ ಪಡೆ ಸೃಷ್ಟಿ ಮಾಡಿ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಿದರು.‌

ಬದಲಾಗದ ಕಾಂಗ್ರೆಸ್ ನಿಷ್ಠೆ-
ಎಂಬತ್ತರ ದಶಕದಲ್ಲಿ ಗುಂಡೂರಾವ್ ಸರ್ಕಾರದ ಕಾಲ ಮುಗಿದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಯಿತು. ದೇವರಾಜ್ ಅರಸ್ ಅವರು ಇಂದಿರಾಗಾಂಧಿ ಅವರಿಂದ ದೂರ ಸರಿದ ಹೊತ್ತಿನಲ್ಲಿ ಅನೇಕ ರಾಜಕೀಯ ಕಾರಣಗಳಿಂದ ಅನೇಕರು ಕಾಂಗ್ರೆಸ್ ಪಕ್ಷ ತೊರೆಯಬೇಕಾಯಿತು.‌ ನಮ್ಮ ಭಾಗದಲ್ಲಿ ಜನತಾ ಪಕ್ಷದ ಪ್ರಭಾವ ಹೆಚ್ಚಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಯಿತು. ‌ಒಮ್ಮೆ ಲೋಕಸಭಾ ಚುನಾವಣೆಯಲ್ಲಿ ರಾಮುಲು ಅವರಿಗೆ ಸೋಲಾಯಿತು. ನಂತರ ಕಾಂಗ್ರೆಸ್ ಪಕ್ಷ ರಾಮುಲು ಅವರಿಗೆ ಟಿಕೆಟ್ ನಿರಾಕರಣೆ ಮಾಡಿದಾಗ, ರಾಮುಲು ಅವರು ಪಕ್ಷದ ಜೊತೆಗೆ ಮುನಿಸಿಕೊಂಡರು. ಅಂತಹ ಸಂದಿಗ್ಧ ಸಂದರ್ಭದಲ್ಲಿ ಕೂಡ ಭಗವಂತಪ್ಪ ಅವರು ಪಕ್ಷ ನಿಷ್ಟರಾಗಿ ಕೆಲಸ ಮಾಡಿ ಬಸವರಾಜ ಪಾಟೀಲ ಅನ್ವರಿ ಅವರ ಗೆಲುವಿಗಾಗಿ ಶ್ರಮಿಸಿದರು. ಈ ಘಟನೆಯಿಂದ ಮಾಜಿ ಸಂಸದರಾಗಿದ್ದ ಎಚ್.ಜಿ. ರಾಮುಲು ಅವರಿಗೆ ಸ್ವಲ್ಪ ಬೇಸರವಾಯಿತು ಎಂಬ ಮಾತಿದೆ. ಆದರೆ ಇವರ ಪಕ್ಷ ನಿಷ್ಠೆಯನ್ನು ರಾಮುಲು ಅವರು ಕೂಡ ಪ್ರಶಂಸೆ ಮಾಡುವ ಸಂದರ್ಭ ಬಂತು. ನಮ್ಮ ಊರಿನ ಅನೇಕರು ಜನತಾ ಪಕ್ಷದ ಮೂಲಕ ಅಧಿಕಾರ ಪಡೆದರೂ, ಇವರು ವಿಚಲಿತರಾಗಲಿಲ್ಲ. ಊರಿನ ಸಾಲೋಣಿ ನಾಗಪ್ಪ ಅವರು ಶಾಸಕರಾದ ಸಂದರ್ಭದಲ್ಲಿ ಕೂಡ ಇವರು ಕಾಂಗ್ರೆಸ್ ಪರವಾಗಿ ಪಕ್ಷ ನಿಷ್ಠೆ ಪಾಲಿಸಿಕೊಂಡು ಬಂದರು.

ಪಂಚಾಯತ ಚುನಾವಣೆಯಲ್ಲಿ ಅವಿರೋಧ ಆಯ್ಕೆ- ಇಡೀ ರಾಜ್ಯದಲ್ಲಿ ಕಾರಟಗಿ ಎರಡನೇ ದೊಡ್ಡ ಗ್ರಾಮ ಪಂಚಾಯತಿ ಎಂಬ ಹಿರಿತನ ಪಡೆದಿತ್ತು. ಅಬ್ದುಲ್ ನಜೀರ್ ಸಾಬ್ ಅವರ ಗ್ರಾಮ ಪರಿಕಲ್ಪನೆಯ ಮಂಡಲ ಪಂಚಾಯತ, ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪರಿಷತ್ತು ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭವಾದಾಗ ಕಾರಟಗಿ ಮಂಡಲ ಪಂಚಾಯತ ಅಧಿಕಾರ ಜನತಾ ಪಕ್ಷದ ಪಾಲಾಯಿತು. ಆಗ ಅರಳಿ ಬಸಪ್ಪ ಅವರು ಮಂಡಲ ಪ್ರಧಾನರಾದರು. ಭಗವಂತಪ್ಪ ನಾಯಕ ವಿರೋಧ ಪಕ್ಷದ ನಾಯಕರಾಗಿ ಊರಿನ ಅಭಿವೃದ್ಧಿಗೆ ಆದ್ಯತೆ ನೀಡಿದರು. ಊರಿನ ಅಭಿವೃದ್ಧಿಯ ಪ್ರತಿಯೊಂದು ವಿಷಯದಲ್ಲಿ ಎಲ್ಲ ಪಕ್ಷದವರು ಇವರ ಮಾತಿಗೆ ಬೆಲೆ ಕೊಡುತ್ತಿದ್ದರು.
ನಂತರ ಮತ್ತೆ ಅಧಿಕಾರಕ್ಕೆ ಬಂದಾಗ, ಮಂಡಲ ವ್ಯವಸ್ಥೆ ಬದಲಾಗಿ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ವ್ಯವಸ್ಥೆ ಜಾರಿಯಾಯಿತು. ಆಗ ಕಾರಟಗಿ ಗ್ರಾಮ ಪಂಚಾಯತ ಚುನಾವಣಾ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ತಮ್ಮ ಪಕ್ಷದ ಶಾಸಕರಾದ ಮಲ್ಲಿಕಾರ್ಜುನ ನಾಗಪ್ಪ ಅವರಲ್ಲಿ ವಿನಂತಿ ಮಾಡಿಕೊಂಡು, ಎಲ್ಲಾ ಸ್ಥಾನಗಳನ್ನು ಅವಿರೋಧವಾಗಿ, ಪಕ್ಷಾತೀತವಾಗಿ ಆಯ್ಕೆ ಮಾಡಲು ಕಾರಣರಾಗಿ, ಹೊಸ ಇತಿಹಾಸ ನಿರ್ಮಾಣ ಮಾಡಿ, ಇಡೀ ರಾಜ್ಯದ ಗಮನ ಸೆಳೆದರು.

‌ಗ್ರಾಮೀಣ ಚುನಾವಣೆಗಳ ಕಾರಣದಿಂದ ಗ್ರಾಮದ ಸಾಮರಸ್ಯ ಹಾಳಾಗಬಾರದು ಎಂದು ಬಲವಾಗಿ ನಂಬಿದ್ದರು. ಪದೇ ಪದೇ ತಾವೇ ಅಧಿಕಾರ ಹಿಡಿಯಲು ಅಪೇಕ್ಷೆ ಪಡದೇ ಇತರ ಯುವಕರಿಗೆ ಅವಕಾಶ ನೀಡುವ ‘ಕಿಂಗ್ ಮೇಕರ್’ ಆಗಿ ಬೆಳೆದರು. ಊರಿನ ಸಣ್ಣ ಪುಟ್ಟ ಜಗಳಗಳ ತಡೆ ಹಿಡಿಯಲು ತಮ್ಮದೇ ಆದ ಸಿಂಡಿಕೇಟ್ ಹೊಂದಿದ್ದ ಇವರು, ಬೂದಿ ರಡ್ಡೆಪ್ಪ ಅವರ ಮೂಲಕ ಪರಿಹಾರ ಮಾರ್ಗ ಸೂಚಿಸುತ್ತಿದ್ದರು. ಬಹುಪಾಲು ವ್ಯಾಜ್ಯಗಳನ್ನು ತಾವೇ ಬಗೆಹರಿಸಿ ಎಲ್ಲರಿಗೆ ನ್ಯಾಯ ಒದಗಿಸುತ್ತಿದ್ದರು.

ತೋಂಟದಾರ್ಯ ಪೂಜ್ಯರ ಒಡನಾಟ-
ಗದುಗಿನ ಮಠದ ತೋಂಟದಾರ್ಯ ಪೂಜ್ಯರು ಕಾರಟಗಿಯಲ್ಲಿ ಕಾಲೇಜು ಆರಂಭಿಸುವ ವಿಚಾರ ಪ್ರಸ್ತಾಪಿಸಿದರು. ಆಗ ಸ್ವತಂತ್ರ ಜಮೀನಿನ ಅಗತ್ಯ ಮನಗಂಡ ಭಗವಂತಪ್ಪ ಅವರು ಜಮೀನು ಕೊಡಿಸಲು ಪ್ರತ್ಯಕ್ಷ ನೆರವಾಗಿ, ಪೂಜ್ಯರ ಪ್ರಶಂಸೆಗೆ‌ ಪಾತ್ರರಾದರು.

ಶಿಸ್ತು, ಸಂಯಮ ಮತ್ತು ಶುದ್ಧ ಶಾಖಾಹಾರ-
ಬಾಲ್ಯದಿಂದಲೂ ತಮ್ಮದೇ ಆದ ಶಿಸ್ತು, ಸಂಯಮದ ನಡೆ ಇವರದು. ಇವರ ಆಹಾರ ಪದ್ಧತಿಯನ್ನು ನಮ್ಮ ತಂದೆ ಮತ್ತು ಅವರ ಸ್ನೇಹಿತರು ಮುಕ್ತವಾಗಿ ಹೊಗಳುತ್ತಿದ್ದರು. ಅವರ ಮಗ ಶಿವರಡ್ಡಿ ನಾಯಕ ವಕೀಲರಾಗಿ ತಂದೆಯ ಹಾದಿಯಲ್ಲಿ ಸಾಗಿರುವುದು ಅಭಿನಂದನೀಯ.

 

 

 

 

 

 

 

 

 

 

-ಪ್ರೊ. ಸಿದ್ದು ಯಾಪಲಪರವಿ

Don`t copy text!