ಶಿಕ್ಷಣ ಮತ್ತು ಸಂಸ್ಕಾರ; ಪೋಷಕರ ಪ್ರೀತಿಯ ಹಾರ”
ಶಿಕ್ಷಣವೆಂದರೆ ಕೇವಲ ಪಾಠಶಾಲೆಯಲ್ಲಿ ಪಠ್ಯ ಪುಸ್ತಕಗಳನ್ನು ಓದುತ್ತಾ, ಪರೀಕ್ಷೆ ಬರೆಯುವ ಕ್ರಿಯೆ ಅಲ್ಲ. ಇದು ಜೀವನದ ಅವಿಭಾಜ್ಯ ಅಂಗವಾಗಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಅಲ್ಲ, ಪೋಷಕರೂ ಪ್ರಮುಖ ಪಾತ್ರ ವಹಿಸುತ್ತಾರೆ. ಪೋಷಕರ ಪ್ರೇರಣೆ, ಮಾರ್ಗದರ್ಶನ, ಮತ್ತು ಮನೋಬಲ ಮಕ್ಕಳ ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಆದರೆ ಇತ್ತೀಚಿನ ತಂತ್ರಜ್ಞಾನಗಳ ಬಳಕೆ ಮತ್ತು ಇತರ ಸಾಮಾಜಿಕ ಚಟುವಟಿಕೆಗಳ ಕಾರಣದಿಂದಾಗಿ, ಕೆಲವು ಪೋಷಕರು ತಮ್ಮ ಮೌಲ್ಯಯುತ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದನ್ನು ಮರೆತಿದ್ದಾರೆ. ಮಕ್ಕಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಶಾಲೆ ಮತ್ತು ತರಬೇತಿ ಕೇಂದ್ರಗಳ ಮೇಲೆ ಬಿಡುತ್ತಿದ್ದಾರೆ. ಪೋಷಕರು ಮಕ್ಕಳನ್ನು ಶಾಲೆಗೆ ಮತ್ತು ಕೋಚಿಂಗ್ ಸೆಂಟರ್‌ಗಳಿಗೆ ಕಳಿಸಿ, ಶಿಕ್ಷಕರೇ ಮಕ್ಕಳ ನಡವಳಿಕೆ ಹಾಗೂ ಚಿಂತನೆಯನ್ನು ಸರಿಪಡಿಸಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ “ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿನಂತೆ, ಮಕ್ಕಳ ನಡವಳಿಕೆ, ನೀತಿ ಮತ್ತು ಸನ್ಮೌಲ್ಯಗಳನ್ನು ಅವರಲ್ಲಿ ತುಂಬುವುದು ಪೋಷಕರದೇ ಮೊದಲ ಕರ್ತವ್ಯ.
1. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರದ ಅವಶ್ಯಕತೆ
– ಪೋಷಕರು ಮಕ್ಕಳ ಮೊದಲ ಶಿಕ್ಷಕರು. ಪೋಷಕರ ನಡವಳಿಕೆ, ಅಭ್ಯಾಸಗಳು ಮಕ್ಕಳಿಗೆ ಬೇರೆಯವರಿಗಿಂತ ಹೆಚ್ಚು ಪ್ರಭಾವ ಬೀರುತ್ತವೆ.
– ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಸಕ್ರಿಯ ಪಾಲ್ಗೊಳ್ಳುವಿಕೆ ಅವರ ಅಂಕಗಳ ಹೆಚ್ಚಳ, ಮತ್ತು ಒಟ್ಟಾರೆ ಚಿಂತನೆಯ ಮೇಲೆ ಹಿತಕರ ಪರಿಣಾಮ ಬೀರುತ್ತದೆ.
– ಪೋಷಕರ ಪ್ರೋತ್ಸಾಹ ಮತ್ತು ಪ್ರೀತಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ, ಶ್ರೇಷ್ಠ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ.
– ಕುಟುಂಬ ಮತ್ತು ಶಾಲೆಯ ಸಮನ್ವಯದಿಂದ ಮಾತ್ರ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ.
2. ಪೋಷಕರು ಮಕ್ಕಳ ವಿದ್ಯಾಭ್ಯಾಸದಲ್ಲಿ ಹೇಗೆ ಪಾಲ್ಗೊಳ್ಳಬಹುದು?
– ನಿತ್ಯ ಓದುವಿಕೆಗೆ ಅನುಕೂಲವಾದ ವಾತಾವರಣ ಕಲ್ಪಿಸುವುದು.
– ಓದುವಿಕೆ ಮೋಜಿನಿಂದ ಕೂಡಿರಬೇಕು; ಕೇವಲ ಒತ್ತಡದಿಂದ ಓದಿಸಿದರೆ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಅದಕ್ಕಾಗಿ ಪೋಷಕರು ಮಕ್ಕಳ ಜೊತೆಯಲ್ಲಿ ಪುಸ್ತಕಗಳನ್ನು ಓದಿ, ಚರ್ಚಿಸಿ, ಅವರಲ್ಲಿ ಓದುವ ಅಭಿರುಚಿ ಬೆಳೆಸಬೇಕು.
3. ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವುದು
– ಪೋಷಕರು ತಮ್ಮ ಉದ್ಯೋಗ ಅಥವಾ ತಂತ್ರಜ್ಞಾನದಿಂದ ಹೆಚ್ಚು ತೊಡಗಿಸಿಕೊಂಡು ಮಕ್ಕಳೊಂದಿಗೆ ಮಾತುಕತೆ, ಆಟ, ಓದುವಿಕೆ ಮುಂತಾದ ಚಟುವಟಿಕೆಗಳಿಗೆ ಸಮಯ ನೀಡುವುದನ್ನು ಮರೆತಿದ್ದಾರೆ.
– ಮಕ್ಕಳ ಭಾವನೆಗಳನ್ನು ಮನಗಾಣಲು ಪೋಷಕರು ಸಮಯ ನೀಡಬೇಕು. ಅವರು ಏನು ಕಲಿಯುತ್ತಿದ್ದಾರೆ, ಏನು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.
4. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು
– ಮಕ್ಕಳ ಸಾಧನೆ ಯಾವ ಮಟ್ಟದಲ್ಲಿದರೂ ಪೋಷಕರು ಅವರ ಪ್ರಗತಿಯನ್ನು ಗುರುತಿಸಿ, ಶ್ಲಾಘಿಸಬೇಕು.
– ಮಕ್ಕಳನ್ನು ಇತರರೊಂದಿಗೆ ಹೋಲಿಸುವುದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ; ಪ್ರತಿಯೊಬ್ಬನೂ ವಿಭಿನ್ನ ಪ್ರತಿಭೆ ಹೊಂದಿರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕು.
– ಮಕ್ಕಳಿಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ನೀಡಬೇಕು ಮತ್ತು ಅವರನ್ನು ನಿರ್ಧಾರ ತೀರುವ ತರಬೇತಿ ನೀಡಬೇಕು.
5. ಜೀವನ ಪಾಠಗಳನ್ನು ಕಲಿಸುವುದು
– ಶಿಕ್ಷಣ ಕೇವಲ ಅಂಕಗಳಿಗಾಗಿಯೇ ಅಲ್ಲ, ಇದು ಒಬ್ಬ ವ್ಯಕ್ತಿಯ ಜ್ಞಾನ, ನೈತಿಕತೆ, ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ.
– ಮಕ್ಕಳಿಗೆ ನೈತಿಕತೆ, ಪ್ರಾಮಾಣಿಕತೆ, ಸಮಯಪಾಲನೆ, ಶಿಸ್ತು ಮುಂತಾದ ಮೌಲ್ಯಗಳನ್ನು ಕಲಿಸಲು ಪೋಷಕರು ಮುಂದಾಗಬೇಕು.
– ಮಕ್ಕಳಿಗೆ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಸ್ವತಃ ಅಭ್ಯಾಸ ಮಾಡುವಂತೆ ಪ್ರೇರೇಪಿಸಬೇಕು.
6. ಪೋಷಕರ ಕೆಲವು ಸಾಮಾನ್ಯ ತಪ್ಪುಗಳು.
– ಇತರ ಮಕ್ಕಳೊಂದಿಗೆ ಹೋಲಿಸುವುದು: “ಅವನಿಗೆ 90% ಬಂದಿದೆ, ನಿನಗೆ ಏಕೆ ಬರಲಿಲ್ಲ?” ಎಂಬ ಪ್ರಶ್ನೆಗಳು ಮಕ್ಕಳ ಮೇಲೆ ಅತಿಯಾದ ಒತ್ತಡ ತರಬಹುದು.
– ಅತಿಯಾದ ನಿರೀಕ್ಷೆ ಇಡುವುದು: ಮಕ್ಕಳಿಗೆ ಅವರ ಹದಕ್ಕೆ ತಕ್ಕಂತೆ ಕಲಿಯಲು ಅವಕಾಶ ನೀಡಬೇಕು.
– ಮಕ್ಕಳನ್ನು ಶಾಲೆ ಮತ್ತು ಟ್ಯೂಷನ್‌ಗಳಿಗೆ ಕಳುಹಿಸಿ ಯಿಂದ ಪಾರಾಗುವ ಯತ್ನ ಮಾಡುವುದು. ಮಕ್ಕಳ ಒಟ್ಟು ಬೆಳವಣಿಗೆಯಲ್ಲಿ ಪಾಲ್ಗೊಳ್ಳದೆ, ಶಿಕ್ಷಕರೇ ಎಲ್ಲವನ್ನು ಮಾಡಬೇಕೆಂದು ನಿರೀಕ್ಷಿಸುವುದು.
– ಪಾಠಪುಸ್ತಕಗಳಿಗೆ ಮಾತ್ರ ಸೀಮಿತಗೊಳ್ಳುವುದು: ವಿದ್ಯಾರ್ಥಿಗಳು ಕೇವಲ ಪುಸ್ತಕ ಓದುವಿಕೆಗೆ ಸೀಮಿತಗೊಳ್ಳದೆ, ಲೈಫ್ ಸ್ಕಿಲ್ಸ್, ಕ್ರೀಡೆ, ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.
ಸಮಾಪ್ತಿ
ಮಕ್ಕಳ ಶಿಕ್ಷಣ ಯಶಸ್ವಿಯಾಗಲು ಶಾಲೆ, ಪೋಷಕರು, ಮತ್ತು ಸಮಾಜ ಎಲ್ಲಾ ಸೇರಿ ಕೆಲಸ ಮಾಡಬೇಕು. ಪೋಷಕರು ಮಕ್ಕಳ ಓದು, ಜೀವನದ ಪಾಠಗಳು, ಮತ್ತು ಭಾವನಾತ್ಮಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ ಮುಂಚೂಣಿಯಲ್ಲಿರಬೇಕು
–ವಾಣಿ ಭಟ್, ವಾಪಿ, ಗುಜರಾತ್.