ಕಥೆ:
ಮೊದಲ ಸಂಬಳದ ಪಾಠ
ಈಗ ಪ್ರಿಯಾಂಕಾ, 25 ವರ್ಷದ ಯುವತಿ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ತನ್ನ ಮೊದಲನೇ ಉದ್ಯೋಗವನ್ನು ಮಾಡುತ್ತಿದ್ದಾಳೆ. ಬಾಲ್ಯದಿಂದಲೇ ಹಣಕಾಸಿನ ಬಗ್ಗೆ ಹೆಚ್ಚಿನ ಅರಿವು ಇಲ್ಲದಿದ್ದಳು. ಸ್ಕೂಲ್ ಫೀಸ್, ಕಾಲೇಜು ಫೀಸ್, ಬಟ್ಟೆ ಬರೆ ಎಲ್ಲ ತಂದೆ, ತಾಯಂದಿರೇ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಹಣ ಕಾಸಿನ ಬಗ್ಗೆ ತಿಳಿದುಕೊಳ್ಳುವ ಅವಕಾಶವೇ ಒದಗಿರಲಿಲ್ಲ.
ಅದು ಒಂದು ವಿಶೇಷ ದಿನ! ಪ್ರಿಯಾಂಕಾ ತನ್ನ ಮೊದಲ ಸಂಬಳ ಪಡೆಯುತ್ತಾಳೆ!
ಅವಳ ಅಕೌಂಟ್‌ಗೆ ₹32,000 ಕ್ರೆಡಿಟ್ ಆಗಿತ್ತು. ಖುಷಿಯಿಂದ ಮನೆಗೆ ಬಂದು ತಾಯಿಗೆ ತೋರಿಸಿದಳು. ತಾಯಿ ಆಶೀರ್ವಾದ ಕೊಟ್ಟರು. ಮೊದಲು ಅವಳ ಮನೆದಲ್ಲಿ ಹಣವನ್ನು ಹೇಗೆ ಉಳಿಸಬೇಕು ಮತ್ತು ಸರಿಯಾದ ರೀತಿಯಲ್ಲಿ ಬಳಸಬೇಕು ಎಂಬ ಬಗ್ಗೆ ಯಾವತ್ತೂ ಚರ್ಚೆಯಾಗಿರಲಿಲ್ಲ, ಇಂದು ಸಹ ಆಗಲಿಲ್ಲ.
ಅವಳ ಸ್ನೇಹಿತರು— ನಯನಾ, ಸಮೀರ್ ಮತ್ತು ಶ್ರುತಿ— ಈ ಸುದ್ದಿಯನ್ನು ಕೇಳಿ, “ಪಾರ್ಟಿ ಕೊಡಲೇಬೇಕು!” ಎಂದು ಕೂಗಿದರು.
ನಯನಾ: “ಮೊದಲ ಸಂಬಳ ಸಿಕ್ಕಿದಾಗ ಪಾರ್ಟಿ ಮಾಡಲೇಬೇಕು! ಇದು ನಿನಗಾಗಿ, ಖುಷಿಯಾಗಿ ಖರ್ಚು ಮಾಡು! ಏನಾದರೂ ಖರೀದಿಸು, ಈ ದಿನ ವಿಶೇಷವಾಗಬೇಕು!”
ಪ್ರಿಯಾಂಕಾ ಒಪ್ಪಿಕೊಂಡಳು. “ನನಗೂ ಖುಷಿಯೇ, ಖರ್ಚಾದರೂ ಪರವಾಗಿಲ್ಲ!” ಎಂದುಕೊಂಡಳು.
‘ಮಾಲ್’ಗೆ ಹೋದಾಗ…
ಮೊದಲು ಶಾಪಿಂಗ್ ಮಾಲ್‌ಗೆ ಹೋದರು. ಸ್ನೇಹಿತರು ಒಂದೊಂದೆ ಅಂಗಡಿಗಳಲ್ಲಿ ನಿಂತು “ಅದು ಚೆನ್ನಾಗಿದೆ, ಈ ಬಟ್ಟೆ ಸೂಪರ್!” ಎಂದು- ಪ್ರಿಯಾಂಕಾಳನ್ನು ಪ್ರೇರೇಪಿಸಿದರು.
ಶ್ರುತಿ: “ನೀನೇನೂ ಖರೀದಿಸಿಲ್ಲ. ಕಡಿಮೆ ಕ್ರಯ”ಇರುವಾಗ, ಯಾಕೆ ಬೇಗನೆ ಒಂದು ಜೀನ್ಸ್ ಅಥವಾ ಬ್ಲೇಜರ್ ತೆಗೆದುಕೊಳ್ಳಬಾರದು?”
ಸಮೀರ್: “ಹೌದು, ಮೊದಲು ಒಂದು ಮೊಬೈಲ್ ಕೇಸ್, ಒಂದು ಚಪ್ಪಲಿ ತಗೋ. ನಾವು ನಿಮಗೆ ಸೂಪರ್ ಆಯ್ಕೆ ಮಾಡಿಕೊಡ್ತೀವಿ!”
ಅವರು ಒಂದು ರೂಪಾಯಿಯೂ ಖರ್ಚು ಮಾಡಲಿಲ್ಲ, ಆದರೆ ಪ್ರಿಯಾಂಕಾ ಅವಸರದಲ್ಲಿ ₹9,500 ಖರ್ಚು ಮಾಡಿಬಿಟ್ಟಳು!
ರೆಸ್ಟೋರೆಂಟ್‌ನಲ್ಲಿ ಬಿದ್ದ ಬಿಲ್!
ನಯನಾ: ಹೊಟ್ಟೆ ತುಂಬಾ ಹಸಿಯುತ್ತಿದೆ.
ಉಳಿದವರಿಬ್ಬರೂ ಹೌದೆಂದರು ಹಾಗೂ ಇದು ಪ್ರಿಯಾಂಕನ ಪಾರ್ಟಿಯೆಂದು ಸೂಚಿಸಿದರು.
ಅವರು ಹೈ-ಎಂಡ್ ರೆಸ್ಟೋರೆಂಟ್‌ಗೆ ಹೋದರು. ಸ್ನೇಹಿತರು ಮೆನು ಕಾರ್ಡ್ ನೋಡಿದರು, ಅವರವರಿಗೆ ಏನು ಬೇಕೋ ಅದನ್ನು ತರಿಸಿಕೊಂಡು ತಿಂದರು. ಬಿಲ್ ₹6,000! ಪ್ರಿಯಾಂಕಾಳ ಹೊಟ್ಟೆ ತುಂಬಿದರೂ ಮನಸ್ಸು ಹಗುರಾಗಲಿಲ್ಲ. ಅವಳ ಅಂತರಂಗವು ತಾಳಮಾಳಗೊಂಡಿತ್ತು.
ಅದು ರಾತ್ರಿ ಸಮಯ. ಪ್ರಿಯಾಂಕಾ ಖಾತೆ ಚೆಕ್ ಮಾಡುತ್ತಿದ್ದಳು.
₹32,000 ಸಂಬಳ
– ₹9,500 (ಶಾಪಿಂಗ್)
– ₹6,000 (ಹೋಟೆಲ್)
– ₹3,000 (ವೈಯಕ್ತಿಕ ಖರ್ಚು)
ಉಳಿದಿದ್ದು: ₹13,500 ಮಾತ್ರ!
ಇದು ಕೇವಲ ಮೂರು ದಿನದ ಖರ್ಚು! “ಮನೆಯ ಖರ್ಚಿಗೆಗಾಗಿ ಅಮ್ಮನ ಕೈಯಲ್ಲಿ ಏನು ಕೊಡಲಿ?” ಬಿಲ್, ಪ್ರಯಾಣ, ತಿಂಡಿಗೆ ಬೇರೇನು ಉಳಿಯುತ್ತದೆ?
“ನಾನು ದುಡ್ಡು ಸಂಪಾದಿಸೋಕೆ ಶುರು ಮಾಡಿದೇನಾ ಅಥವಾ ಬೇರೆ ಯಾರೋ ನನ್ನ ಹಣವನ್ನು ಬಳಸೋಕೆ ಶುರು ಮಾಡಿದ್ರಾ?”
ಆ ಕ್ಷಣ ಅವಳಿಗೆ, ಹಣಕಾಸಿನ ನಿರ್ವಹಣೆಯ ಮಹತ್ವ ಅರಿವಾಯಿತು.
ಪಾಠ ಕಲಿತ ಪ್ರಿಯಾಂಕಾ
• ಮಾಡಿದ ದೊಡ್ಡ ತಪ್ಪು: ಸ್ನೇಹಿತರ ಪ್ರೇರಣೆಗೆ ಒಳಗಾದಳು, ಅನಗತ್ಯ ಖರ್ಚುಮಾಡಿದಳು.
• ಮುಂದೆ ಮಾಡುವ ನಿರ್ಧಾರ:
1. ಬಜೆಟ್ ರೂಪಿಸುವುದು.
2. ಶಾಪಿಂಗ್ ಮುಂಚಿತವಾಗಿ ಪ್ಲ್ಯಾನ್ ಮಾಡುವುದು.
3. ಸ್ನೇಹಿತರು ಅಣಕಿಸುತ್ತಾರೆ, ಆದರೆ ಖರ್ಚು ಮಾಡುವುದು ನನ್ನ ಹೊಣೆ ಎಂಬುದನ್ನು ಅರಿತುಕೊಳ್ಳುವುದು.
4. ಒಂದು ತಿಂಗಳ ಭವಿಷ್ಯದ ಉಳಿತಾಯ ತಯಾರಿಸಿಕೊಳ್ಳುವುದು.
ಮುಂದಿನ ತಿಂಗಳು:
• ₹10,000 ಉಳಿತಾಯ ಖಾತೆಗೆ ಹಾಕಿದಳು.
• ₹5,000 ಹೂಡಿಕೆ ಮಾಡಿದಳು.
• ₹5,000 ಅಮ್ಮನಿಗೆ ಕೊಟ್ಟಳು.
ಪಾಠ: “ನಿಮ್ಮ ದುಡ್ಡು, ನಿಮ್ಮ ನಿರ್ಧಾರ!”
ನಿಮ್ಮ ಹಣವನ್ನು ನೀವು ನಿರ್ವಹಿಸದಿದ್ದರೆ, ಇತರರು ಖರ್ಚು ಮಾಡಲು ಒತ್ತಾಯಿಸುತ್ತಾರೆ. ಪ್ರಿಯಾಂಕಾ ಒಮ್ಮೆ ತಪ್ಪು ಮಾಡಿದಳು, ಆದರೆ ಜೀವನದ ದೊಡ್ಡ ಪಾಠವನ್ನು ಕಲಿತಳು.
ನೀವು ಪ್ರಿಯಾಂಕಾ ತರ ಪಾಠ ಕಲಿತಿದ್ದೀರಾ?
–ವಾಣಿ ಭಟ್ ವಾತಾಪಿ ಗುಜರಾತ್