ಬಾಳಿಗೊಂದು ಬಂಗಾರದ ಮಾತು

ಬಾಳಿಗೊಂದು ಬಂಗಾರದ ಮಾತು

ಆಗ ತಾನೇ ಕಾಲೇಜಿಗೆ ಸೇರಿದ ಪುಟ್ಟ ಬಾಲಕಿ ಪ್ರತಿದಿನ ತನ್ನ ತಂದೆ ತಾಯಿ ತನಗೆ ಒಂದಲ್ಲ ಒಂದು ವಿಷಯದಲ್ಲಿ ಬುದ್ಧಿ ಮಾತು! ಹೇಳುವುದನ್ನು ಕೇಳಿ ಬೇಸತ್ತು ಹೋಗಿದ್ದಳು. ಇದು ಆಕೆಯ ಪಾಲಕರ ಗಮನಕ್ಕೂ ಬಂದಿತ್ತು. ತಂದೆಯಂತೂ ಆಕೆಗೆ ತಿಳಿ ಹೇಳುವ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದನು.

ಅದೊಂದು ದಿನ ಆಕೆ ತನ್ನ ಕಾಲೇಜಿನಲ್ಲಿ ನಡೆದ ಸಂಗತಿಯನ್ನು ಹೇಳಲು ಹೋದಾಗ ಸಂಪೂರ್ಣವಾಗಿ ಅದನ್ನು ಗಮನವಿಟ್ಟು ಕೇಳಿದ ಆಕೆಯ ತಂದೆ ಅದಕ್ಕೆ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುವ ಮುನ್ನವೇ ಆಕೆ
ಅಪ್ಪ ಎಲ್ಲ ವಿಷಯಗಳನ್ನು ನಾನು ನಿಮಗೆ ಹೇಳುವುದು ನಿಮ್ಮಿಂದ ಪ್ರತಿಕ್ರಿಯೆ ಬಯಸಲು ಅಲ್ಲ… ಬದಲಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಳ್ಳಲು’ ಎಂದು ತುಸು ಖಡಕ್ಕಾಗಿ ಹೇಳಿದಳು.

ಮನಸ್ಸಿಗೆ ಕೊಂಚ ಬೇಸರವಾದರೂ ಏನೊಂದೂ ಮಾತನಾಡದೆ ತಂದೆ ಅಲ್ಲಿಂದ ಕಾಲ್ಕಿತ್ತರು. ಮಗಳ ಹೆಗಲ ಮೇಲೆ ಕೈ ಹಾಕಿದ ತಾಯಿ ಹೋಗಲಿ ಬಿಡು… ನಿನಗೆ ಐಸ್ ಕ್ರೀಮ್ ಕೊಡಿಸುತ್ತೇನೆ ಬಾ ಎಂದು ಆಕೆಯ ಕೈಹಿಡಿದು ಮನೆಯಿಂದ ಹೊರಗೆ ಕರೆದುಕೊಂಡು ಹೊರಟಳು.

ಮನೆಗೆ ಹತ್ತಿರವೇ ಇದ್ದ ಐಸ್ ಕ್ರೀಮ್ ಪಾರ್ಲರ್ ಗೆ ಬಂದು ಕುಳಿತ ಅವರಿಬ್ಬರೂ ತಮ್ಮ ಇಷ್ಟದ ಫ್ಲೇವರ್ ನ ಐಸ್ ಕ್ರೀಮ್ ತಿನ್ನುತ್ತಿರುವಾಗ ತಾಯಿ ಗಾಡಿಗೆ ಬ್ರೇಕ್ ಯಾಕೆ ಇರುತ್ತೆ ಗೊತ್ತಾ? ಎಂದು ಕೇಳಿದಳು.

ಅದಕ್ಕೆ ಉತ್ತರವಾಗಿ ಮಗಳು ಇದು ಯಾವ ಹೊಸ ಪ್ರಶ್ನೆ ಅಂತ ಕೇಳ್ತೀಯಾ ಅಮ್ಮ ಆಕ್ಸಿಡೆಂಟ್ ನಿಂದ ಬಚಾವಾಗೋದಕ್ಕೆ, ಅವಸರದಲ್ಲಿ ಅಪಘಾತ ಆಗದೆ ಉಳಿಯೋದಕ್ಕೆ ಬ್ರೇಕ್ ಬೇಕಲ್ಲವೇ ಎಂದು ಉಡಾಫೆಯಿಂದ ನಗುತ್ತಾ ಕೇಳಿದಳು.

ಉಹೂಂ! ನೀನು ಹೇಳುತ್ತಿರುವುದು ಅರ್ಧ ಸತ್ಯ… ಗಾಡಿಗೆ ಬ್ರೇಕ್ ಇದ್ದರೆ ನೀನು ಹೆಚ್ಚು ವೇಗವಾಗಿ ಗಾಡಿಯನ್ನು ಚಲಾಯಿಸಲು ಸಾಧ್ಯ ಎಂಬ ಕಾರಣಕ್ಕೆ ವಾಹನಗಳಲ್ಲಿ ಬ್ರೇಕ್ ಅಳವಡಿಸಿರುತ್ತಾರೆ ಎಂದು ಹೇಳಿದಳು.

ಅದು ಹೇಗೆ ಅಮ್ಮ ಎಂದು ಮಗಳು ಕೇಳಲು ‘ವಾಹನದಲ್ಲಿ ಬ್ರೇಕ್ ಇಲ್ಲ ಅಂದರೆ ನೀನು ಸ್ಪೀಡ್ ಆಗಿ ಓಡಿಸೋಕೆ ಸಾಧ್ಯನಾ? ಸ್ಪೀಡ್ ಆಗಿ ಗಾಡಿಯನ್ನು ಓಡಿಸ್ತೀಯಾ?’ ಎಂದು ಅಮ್ಮ ಕೇಳಲು ಉಹೂಂ ಸಾಧ್ಯವೇ ಇಲ್ಲ ಎಂದು ಮಗಳು ಹೇಳಿದಳು.

ಗಾಡಿಯಲ್ಲಿ ಬ್ರೇಕ್ ಇದ್ದರೆ ಓಡಿಸುತ್ತೀಯಾ ಎಂಬ ಅಮ್ಮನ ಮಾತಿಗೆ ಆತ್ಮವಿಶ್ವಾಸದಿಂದ ಮೂತಿಯನ್ನು ಉಬ್ಬಿಸಿ ‘ಗಾಡಿಯಲ್ಲಿ ಬ್ರೇಕ್ ಇದ್ದರೆ ಯಾರು ಬೇಕಾದರೂ ಗಾಡಿ ಓಡಿಸ್ತಾರೆ’ ಎಂದು ಹೇಳಿದಳು.
ಹಾಗಾದರೆ ಈಗ ಹೇಳು ಗಾಡಿಯಲ್ಲಿ ಬ್ರೇಕ್ ಇರುವುದು ಯಾತಕ್ಕೆ ಎಂದು? ಎಂದು ಅಮ್ಮ ನಸುನಗುತ್ತಾ ಪ್ರಶ್ನಿಸಲು ಮಗಳು ಬ್ರೇಕ್ ಇದ್ದರೆ ನಾವು ಹೆಚ್ಚು ಆತ್ಮವಿಶ್ವಾಸದಿಂದ ವೇಗವಾಗಿ ಗಾಡಿಯನ್ನು ಓಡಿಸಲು ಸಾಧ್ಯ ಅಲ್ವಾ ಅಮ್ಮ ಎಂದು ಮರು ಪ್ರಶ್ನೆ ಹಾಕಿದಳು.

ಹಾಗೇನೆ ಪುಟ್ಟ ನಿನ್ನ ಬದುಕೆಂಬ ಗಾಡಿಯಲ್ಲಿ ಆಗಾಗ ನಾವು ಅಂದ್ರೆ ನಾನು,ನಿನ್ನಪ್ಪ, ನಿನ್ನ ಶಿಕ್ಷಕರು ಹಾಕುವ ಸಮಯೋಚಿತ ಬ್ರೇಕ್ ಗಳು ನೀನು ಮತ್ತಷ್ಟು ವೇಗವಾಗಿ ನಿನ್ನ ಗುರಿಯತ್ತ ಸಾಗಲು ಅನುಕೂಲ ಆಗಲಿ, ಬದುಕಿನಲ್ಲಿ ನೀನಂದುಕೊಂಡದ್ದೆಲ್ಲವನ್ನು ಸಾಧಿಸಲಿ ಎಂಬ ಆಶಯದಿಂದ. ಈ ಬ್ರೇಕ್ ಗಳು ನಿನ್ನ ವೇಗವನ್ನು ಕಡಿಮೆ ಮಾಡಲು ಅಲ್ಲ, ನಿನ್ನ ತಪ್ಪುಗಳನ್ನು ಕಡಿತಗೊಳಿಸಲು. ಬದುಕಿನ ಎಲ್ಲಾ ತಪ್ಪುಗಳು ನಿನಗೆ ಸಂಭವಿಸಿಯೇ ಅನುಭವಕ್ಕೆ ಬರಬೇಕೆಂದಿಲ್ಲ. ತಮ್ಮ ತಪ್ಪುಗಳಿಂದ ಬೇರೆಯವರು ಬದುಕಿನಲ್ಲಿ ಪಡುವ ಕಷ್ಟಗಳನ್ನು ನೋಡಿ ನೀವು ನಿಮ್ಮ ಬದುಕಿನಲ್ಲಿ ಆ ತಪ್ಪುಗಳು ಜರುಗದಂತೆ ಮುಂಜಾಗರೂಕತೆ ವಹಿಸಲಿ ಎಂಬ ಆಶಯದಿಂದ ನಾವು ನಿನ್ನ ವಿಷಯದಲ್ಲಿ ಮೂಗು ತೂರಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಲು ಮಗಳ ಕಂಗಳಲ್ಲಿ ಅರಿವಿನ ಜ್ಯೋತಿಯ ಬೆಳಕು ಹರಡಿ ‘ಸಾರಿ ಅಮ್ಮ, ನಾನು ನಿಮ್ಮಿಬ್ಬರನ್ನು ತಪ್ಪು ತಿಳಿಯುತ್ತಿದ್ದೆ’ ಎಂದು ಅಮ್ಮನನ್ನು ಆಕೆ ತಬ್ಬಿಕೊಂಡಳು.


‘ಇದರಲ್ಲಿ ನಿನ್ನ ತಪ್ಪೇನಿಲ್ಲ ಪುಟ್ಟಿ, ನಿನ್ನ ವಯೋ ಸಹಜ
ಯೋಚನೆಗಳನ್ನು ನೀನು ಆಡಿ ಬಿಡುತ್ತೀಯಾ?
ದೈಹಿಕವಾಗಿ ನೀವು ಬೆಳೆದಿರಬಹುದು ಆದರೆ
ಕಣ್ಣಿಗೆ ಕಂಡ,ಕಿವಿಯಿಂದ ಕೇಳಿದ ಬಹಳಷ್ಟು ವಿಷಯಗಳು ನಿಜವಲ್ಲದೇ ಇರಬಹುದು ಎಂಬುದನ್ನು ಅರಿಯುವ ಮಾನಸಿಕ ವಿಚಾರ ಸೂಕ್ಷ್ಮತೆಗಳು ನಿಮ್ಮಲ್ಲಿ ಇನ್ನೂ ಬೆಳೆದಿರುವುದಿಲ್ಲ. ಆದ್ದರಿಂದ ನಾವು ಪದೇಪದೇ ನಿಮಗೆ ತಪ್ಪ-ಸರಿ, ಉಚಿತ-ಅನುಚಿತ ವಿಷಯಗಳನ್ನು ಮನದಟ್ಟು ಮಾಡಿಸಲು ಬ್ರೇಕ್ ಹಾಕುತ್ತೇವೆ ತಿಳಿಯಿತಾ?’ ಎಂದು ಹೇಳಿದಾಗ ಹೌದೆಂದು ಮೌನವಾಗಿ ತಲೆಯಾಡಿಸಿದಳು.

ಅಪ್ಪನ ಇಷ್ಟದ ಫ್ಲೆವರ್ ನ ಐಸ್ ಕ್ರೀಮ್ ಅನ್ನು ಖರೀದಿಸಿ ಪ್ಯಾಕ್ ಮಾಡಿಸಿ ಮನೆಗೆ ತಂದು ಅಪ್ಪನ ಮುಂದೆ ಹಿಡಿದ ಮಗಳು ‘ಅಪ್ಪ, ಸಾರಿ’ ಎಂದು ಕಿವಿ ಹಿಡಿದುಕೊಂಡಳು.

ಏನು ನಡೆದಿರಬಹುದು ಎಂದು ಊಹಿಸಿದ ಅಪ್ಪ ಮಗಳ ತಲೆಯನ್ನು ನೇವರಿಸಿ ‘ನಾವು ಪದೇ ಪದೇ ಬುದ್ಧಿ ಹೇಳುವುದು ನಿನ್ನ ಒಳಿತಿಗೆ ಎಂದು ಈಗಲಾದರೂ ನಿನಗೆ ಅರ್ಥ ಆಯ್ತಲ್ಲ. ಕೆಲವೇ ಸಾವಿರ ರೂಪಾಯಿಗಳಿಗೆ ಖರೀದಿಸುವ ಮೊಬೈಲ್ ಫೋನಿನ ಸ್ಕ್ರೀನ್ ಹಾಳಾಗದಿರಲಿ ಅಂತ ಸ್ಕ್ರೀನ್ ಗಾರ್ಡ್ ಹಾಕಿಸೊ ನೀನು ಬ್ಯಾಕ್ ಕೇಸ್ ಕೂಡ ಹಾಕಿಸಿ ನಿನ್ನ ಮೊಬೈಲ್ ನ ಕಾಪಾಡ್ಕೋತಿಯ… ಅಂತದ್ರಲ್ಲಿ ಬೆಲೆ ಕಟ್ಟೋಕೆ ಆಗದೆ ಇರೋ ನಿನ್ನ ಬದುಕನ್ನ ನಾವು ಗಾರ್ಡ್ ಮಾಡದೇ ಇರೋಕೆ ಸಾಧ್ಯನಾ ಪುಟ್ಟಿ. ಒಂದು ಮೊಬೈಲ್ ಕಳೆದು ಹೋದರೆ ಒಡೆದು ಹೋದರೆ ಮತ್ತೊಂದು ಖರೀದಿಸಬಹುದು… ಆದರೆ ಬದುಕು ಹಾಗಲ್ಲ. ಅಚ್ಚ ಬಿಳಿ ಪೇಪರ್ ನಲ್ಲಿ ಪುಟ್ಟ ಕಪ್ಪುಚುಕ್ಕೆ ಕೂಡ ದೊಡ್ಡದಾಗಿ ಕಾಣಿಸುವ ಹಾಗೆ ನಮ್ಮ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಮ್ಮ ಬದುಕೆಂಬ ಬಿಳಿ ಪುಟದಲ್ಲಿ ಕಪ್ಪು ಚುಕ್ಕೆಯಂತೆ ಕಾಣಿಸುತ್ತವೆ ಆದ್ದರಿಂದ ಹುಷಾರಾಗಿ ಬದುಕಿನಲ್ಲಿ ಮುಂದೆ ಅಡಿ ಇಡಬೇಕು’ ಎಂದು ತಂದೆ ಹೇಳಿದಾಗ ಹೌದಲ್ಲವೇ ಎಂದ ಮಗಳ ಕಣ್ಣಲ್ಲಿ ಮಿಂಚಿನ ಪ್ರಭೆ ಮೂಡಿದ್ದನ್ನು ಕಂಡ ಆಕೆಯ ಪಾಲಕರಿಗೆ ನೆಮ್ಮದಿ ಮೂಡಿತು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!