ಪದ್ಮವಿಭೂಷಣ ಶ್ರೀ, ಶ್ರೀ, ಶ್ರೀ
ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನ
ಯುಗ ಧರ್ಮ, ಸಾಕ್ಷಿಪ್ರಜ್ಞೆ,
ಧಾರ್ಮಿಕ ಶಕ್ತಿ & ಇಷ್ಟಲಿಂಗ ಅನುಸಂಧಾನ ಇವುಗಳ ಸಮ್ಮಿಲನಕ್ಕೆ ಸಂಕೇತವಾಗಿರುವ
ಕಾಯಕಯೋಗಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ
ಪದ್ಮವಿಭೂಷಣ ಶ್ರೀ, ಶ್ರೀ, ಶ್ರೀ
ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನದ ಭಕ್ತಿಯ ನಮನಗಳು
ಮಾಗಡಿ ತಾಲೂಕಿನ ವೀರಾಪುರದ
ಶ್ರೀಯುತ ಹೊನ್ನೇಗೌಡ & ತಾಯಿ ಗಂಗಮ್ಮನವರ ಚೀತ್ ಗರ್ಭದಲ್ಲಿ ೧/೪ ೧೯೦೮ ರಂದು ಜನಿಸಿದರು ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶ್ರೀಗಳ ಶೈಕ್ಷಣಿಕ ಜೀವನ ಆರಂಭವಾಯಿತು. ನಂತರ ಪ್ರಾಥಮಿಕ ಶಿಕ್ಷಣವನ್ನು ಪಾಲನ ಹಳ್ಳಿಯಲ್ಲಿ ಪ್ರಾರಂಭಿಸಿದರು. ಪ್ರಾಥಮಿಕ
ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶ್ರೀಗಳು ಅಕ್ಕನ ಮಡಿಲಲ್ಲಿ ಬೆಳೆದರು.
ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ ೧೯೨೨ ರಿಂದ ತುಮಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ ೧೯೨೬ ರಲ್ಲಿ ಮೆಟ್ರಿಕ್ಯುಲೇಷನ್
ಮುಗಿಸಿದರು. ನಂತರ ೧೯೨೭ ರಲ್ಲಿ ಆಗಿನ ಸಿದ್ದಗಂಗಾ
ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳ ಬಾಂಧವ್ಯ ಬೆಳೆಯಿತು. ನಂತರ ಎಂಟ್ರೆನ್ಸ್ ಪರೀಕ್ಷೆಯಲ್ಲಿ
ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.
ವಿದ್ಯಾಭ್ಯಾಸದೊಂದಿಗೆ ಸಿದ್ಧಗಂಗಾ ಮಠದ ಒಡನಾಟದಲ್ಲಿದ್ದರು.
ಹಿರಿಯ ಗುರುಗಳಾದ ಶ್ರೀ ಉದ್ದಾನ ಸ್ವಾಮೀಜಿಗಳ ಹಾಗೂ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಒಡನಾಟದಿಂದ ಮಠದ ಹಿತವನ್ನೇ ಬಯಸುತ್ತ ಮಠಕ್ಕೆ ಭೇಟಿ ಕೊಡುತ್ತಿದ್ದರು.
ಶ್ರೀರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ಗಂಗಾ ಮಠಕ್ಕೆ ೧೯೩೦ ರಲ್ಲಿ ಉದ್ಧಾನ ಶಿವಯೋಗಿಗಳ ಕಿರಿಯ ಶ್ರೀ ಗಳಾಗಿದ್ದ ಮರಳಾರಾಧ್ಯರು ಆಕಸ್ಮಿಕವಾಗಿ ಶಿವೈಕರಾದರು.
ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶ್ರೀಗಳನ್ನು ಉದ್ದಾನ ಸ್ವಾಮೀಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರ ಅಧಿಕಾರಿ ಎಂದು ಘೋಷಿಸಿದರು.
ನಂತರ ಶ್ರೀಗಳು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದುರಿಗಿದರು. ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಟ್ಟರು ನಂತರ ಶ್ರೀ ಉದ್ದಾನ ಶಿವಯೋಗಿಗಳು ಶಿವೈಕ್ಯರಾದಗ ಮಠದ ಸಕಲ ಆಡಳಿತ,
ಮಠದ ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮದ
ಜವಾಬ್ದಾರಿಯು ಪೂಜ್ಯಶ್ರೀಗಳಿಗೆ ವಹಿಸಲಾಗುತ್ತದೆ. ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಅತಿವೃಷ್ಟಿ, ಅನಾವೃಷ್ಟಿಗಳಂತ ಸಮಯದಲ್ಲಿ ಎಲ್ಲವನ್ನು ಧೈರ್ಯವಾಗಿ ಮೆಟ್ಟಿ ನಿಂತು ಭಕ್ತರ ಮನೆಗೆ ಬಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೆ ಹೋಗಿ ದವಸ ಧಾನ್ಯಗಳನ್ನು ತರುತ್ತಿದ್ಧರು .
ಶಿಕ್ಷಣ ಸಂಸ್ಥೆಗಳ ಜೊತೆ ದಿನನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗೂ ಗಣ್ಯರ ಭೇಟಿ, ಮಠದ ಆರ್ಥಿಕ ನಿರ್ವಹಣೆಗಳು
ಸೇರಿ ಪೂಜ್ಯಶ್ರೀಗಳಿಗೆ ಬಿಡುವಿಲ್ಲದಂತಾಯಿತು.
ಇದು ಯಾವುದಕ್ಕೂ ಧೃತಿಗೆಡದೆ
ಶ್ರೀಗಳು ಪೂಜ್ಯ ಲಿಂಗೈಕ್ಯ ಶ್ರೀಅಟವಿ ಸ್ವಾಮಿಗಳ ಹಾಗೂ ಲಿಂಗೈಕ್ಯ ಶ್ರೀ ಉದ್ದಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾರ್ಥಿ ನಿಲಯಗಳನ್ನು ಪ್ರಸಾದ ನಿಲಯಗಳನ್ನು ಸಮರ್ಪಕವಾಗಿ ಮುನ್ನಡೆಸುತ್ತಾರೆ. ದಣಿವರಿಯದೆ ಕಾರ್ಯನಿರತರಾಗಿ
ಕಾಯಕವೇ ಕೈಲಾಸ ಎಂದು ನುಡಿಯಲ್ಲಿ ಮಾತ್ರ ಹೇಳದೆ
ನಡೆಯಲು ತೋರಿಸಿಕೊಟ್ಟಿದ್ದಾರೆ.
ಶ್ರೀಗಳು ಶಿಕ್ಷಣ & ತರಬೇತಿಗಾಗಿ
ಒಟ್ಟು ೧೩೨ ಸಂಸ್ಥೆಗಳನ್ನು ಸ್ಥಾಪಿಸಿದರು. ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಅಧುನಿಕ ಶಿಕ್ಷಣ & ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಒಬ್ಬ ಭಾರತೀಯ ಅಧ್ಯಾತ್ಮಿಕ ನಾಯಕ, ಮಾನವೀಯ & ಶಿಕ್ಷಣ ತಜ್ಞರು ಹಾಗೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು. ಶ್ರೀಗಳು ತಮ್ಮ ಶ್ರೀಮಠವನ್ನು ಬಸವ ತತ್ವದ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಿದರು.
ಎಲ್ಲ, ವರ್ಗ, ವರ್ಣ, ವಲಯ, ಭಾಷೆ, ಪ್ರಾಂತ ಪ್ರದೇಶಗಳ ಭೇದವಿಲ್ಲದೆ ಸರ್ವರಿಗೂ ಮುಕ್ತ ಅವಕಾಶವನ್ನು ನೀಡಿದರು. ದೀನ ದಲಿತರ ಸೇವೆಗೆ ಮುಂದಾದರು. ಗ್ರಾಮೀಣ ಪ್ರದೇಶದಲ್ಲಿ ಬಸವ ತತ್ವಗಳನ್ನು ಪ್ರಸಾರ ಮಾಡಬೇಕೆಂದು ಗ್ರಾಮಾಂತರ ಬಸವ ಜಯಂತಿ ಎಂಬ ಕಾರ್ಯಕ್ರಮವನ್ನು ರೂಪಿಸಿ ಹಳ್ಳಿ ಹಳ್ಳಿಗಳಲ್ಲಿ
ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವನ್ನು ತಮ್ಮ ಮಠದಿಂದ ಆಯೋಜಿಸಿದರು.
ಬಸವ ತತ್ವಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂಬುದನ್ನು ತೋರಿಸಿಕೊಟ್ಟರು.
ಅಜ್ಞಾನ ಮತ್ತು ಅನಕ್ಷರತೆಯಿಂದ ತುಂಬಿದ ಸಮಾಜಕ್ಕೆ ಬೆಳಕು ನೀಡಲು ಬಂದವರು ಸಿದ್ದಗಂಗಾ ಶ್ರೀಗಳು
ಅವರು ನಿಜವಾದ ಅರ್ಥದಲ್ಲಿ ದೇವಮಾನವರು ಜಾತಿ ಸಂಕೋಲೆಗಳನ್ನು ಮೀರಿದ ಮಹಾನುಭಾವರು. ಮಾನವನಲ್ಲಿ ಮಾನವತೆಯನ್ನು, ವಿಶ್ವಬಂದುತ್ವವನ್ನು, ತಂದುಕೊಟ್ಟ ವಿರಳ ವಿರಕ್ತರು.
ಸೇವಾಘನತೆಯಲ್ಲಿ ಆತ್ಮ ಸಾಕ್ಷಾತ್ಕಾರ ಹೊಂದಿದ ಶಿವಾನುಭವಿಗಳು.
ಬ್ರಹ್ಮ ಪದವಿಯೂ ಬೇಡ
ವಿಷ್ಣು ಪದವಿಯೂ ಬೇಡ
ಎನ್ನುವ ಶರಣರ ವಚನ ವಾಣಿಯಂತೆ ಈ ಲೋಕದ ಯಾವ ಸಂಪದವನ್ನು ಬಯಸದೇ ಸಮಾಜ ಸೇವೆಯನ್ನೇ ಜಂಗಮ ದಾಸೋಹವೆಂದು ನಂಬಿ ಲೋಕ ಸೇವೆಯನ್ನು ಮಾಡುತ್ತ ಆತ್ಮ ಕಲ್ಯಾಣ ಸಾಧಿಸಿ ಮಹಾ ಜಂಗಮ ಜ್ಯೋತಿಯಾದರೂ.
ನುಡಿದರೆ ಮುತ್ತಿನ ಹಾರದಂತಿರಬೇಕು
ಸ್ಪಟಿಕದ ಸಲಾಕೆಯಂತಿರಬೇಕು
ಎನ್ನುವ ಶರಣರ ವಚನ ವಾಣಿಯಂತೆ
ಶ್ರೀಗಳ ಮಾತು ಹಿತಮಿತವಾಗಿ, ಅರ್ಥಗರ್ಭಿತವಾಗಿ
ನುಡಿದರೆ ಲಿಂಗ ಮೆಚ್ಚಿ ಹೌದೌದು
ಎನ್ನುವಂತೆ ಇರುತ್ತಿತ್ತು.
ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ್
ಮಹಾಸ್ವಾಮೀಜಿ ಒಂದು ಹೆಸರಲ್ಲ ಅದೊಂದು ದಿವ್ಯ ಮಂತ್ರ ಅವರೊಂದು ವ್ಯಕ್ತಿಯಲ್ಲ ಮಹಾನ್ ಶಕ್ತಿ ‘ಶಿವಶಕ್ತಿಯನ್ನು ಇಳೆಗೆ ತಂದ ಅವತಾರ ಪುರುಷರು, ನಡೆದಾಡುವ ದೇವರು.
ದೇವಲೋಕದ ಹುಚ್ಚು ಬಿಡಿಸಿ, ಈ ಲೋಕವನ್ನೇ ದೇವಲೋಕ ಮಾಡಿ,
ಅಲ್ಲಿದೆ ನಮ್ಮನೆ ಇದು ಸುಮ್ಮನೆ ಅಂದವರಿಗೆ ಅದೇ ಸುಮ್ಮನೆ ಇದು ನಿಜವಾದ ಮನೆ ಇಲ್ಲಿ ಸಲ್ಲುವವರು ಎಲ್ಲಿಯೂ ಸಲ್ಲುವಂತೆ ಮಾಡಿದ ಮಹಾಮಹಿಮರು.
ಶತಮಾನ ಕಂಡ ಪುಣ್ಯಪುರುಷರು
ಅವರ ಸಮಗ್ರ ಬದುಕು ಒಂದು ಶತಮಾನದುದ್ದಕ್ಕೂ ಆದರ್ಶದ ಹಸಿರು ಹಬ್ಬಿಸುತ ಸಚ್ಚಾರಿತ್ರ್ಯ ದ
ಕಂಪ ಸೂಸುತ, ಜ್ಞಾನದ ಬೆಳಕು ಪ್ರಸರಿಸುತ್ತಾ, ಸಾಗಿ ಬಂದಿದೆ.
ನೂರು ವರ್ಷಗಳ ಹಿಂದೆ ಹಚ್ಚಿದ ಬೆಂಕಿ ಇಂದಿಗೂ ಹಸಿದ ಹೊಟ್ಟೆಗೆ ಸಂತೃಪ್ತಿ ಕೊಡುವುದು,
ನೂರು ವರ್ಷಗಳ ಹಿಂದೆ ಹೊತ್ತಿಸಿದ ದೀಪ ಇಂದಿಗೂ ಬೆಳಕು ಕೊಡುವುದು,
ನೂರು ವರ್ಷದ ಹಿಂದೆ ನೆಟ್ಟ ಗಿಡ ಇಂದಿಗೂ ನೆರಳು ಕೊಡುವುದು
ಶ್ರೀಗಳ ಶ್ರಮದಿಂದ ಕಾಯಕ ದಾಸೋಹಕ್ಕೆ ಮತ್ತೊಂದು ಹೆಸರು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಗಳು.
ಜಾತಿ ಧರ್ಮವನ್ನು ಮೀರಿ ನಿಂತ
ಕಾಯಕ ದಾಸೋಹವನ್ನು ಕೈಂಕರ್ಯ ಮಾಡಿಕೊಂಡು
ಎಲ್ಲರಿಗೂ ಲೇಸನ್ನೇ ಬಯಸುವ ಬಸವಣ್ಣನವರ ಧ್ಯೇಯವನ್ನು ಮಂತ್ರವನ್ನಾಗಿ ಮಾಡಿಕೊಂಡು ಅದರಂತೆ ಬಾಳಿ ಬದುಕಿದ ಸ್ವಾಮೀಜಿಯವರನ್ನು ಹತ್ತಿರದಿಂದ ನೋಡಿದ ನಾವೇ ಭಾಗ್ಯವಂತರು
ಪೂಜ್ಯಶ್ರೀಗಳಿಗೆ ಕೇಂದ್ರ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ.
ಆದರೆ ಭಾರತಕ್ಕೆ ಸ್ವಾಮೀಜಿಯೇ ಒಂದು ರತ್ನವಾದರು. ನಮ್ಮ ಮಕ್ಕಳಿಗೆ ತಂದೆ ತಾಯಿ ನಾವಾದರೆ
ಪೂಜ್ಯರು ಜಗದ ಎಲ್ಲಾ ಮಕ್ಕಳಿಗೂ ತಂದೆ ತಾಯಿಯಾಗಿ ಮಾರ್ಗದರ್ಶಕರಾಗಿದ್ದರು.
–ವಚನ ಸಾಹಿತ್ಯ ಮಂದಾರ ಗುಂಪಿನಿಂದ ಈ ಲೇಖನ ಬಳಸಿಕೊಳ್ಳಲಾಗಿದೆ