ಆಂತರಂಗಿಕ ಚೆಲುವು ಮತ್ತು ಬಹಿರಂಗದ ತೋರಿಕೆ

ಆಂತರಂಗಿಕ ಚೆಲುವು ಮತ್ತು ಬಹಿರಂಗದ ತೋರಿಕೆ

ನೀವು ಈಗಾಗಲೇ ಒಂದು ಯಂತ್ರದಲ್ಲಿ ಇರುವ ತಾಂತ್ರಿಕ ತೊಂದರೆಯನ್ನು ನಿವಾರಿಸಲು ಓರ್ವ ಇಂಜಿನಿಯರ 10,000 ಡಾಲರ್ ಗಳನ್ನು ಶುಲ್ಕವಾಗಿ ಪಡೆದ ಕಥೆಯನ್ನು ಓದಿರಬಹುದು. ಒಂದು ಡಾಲರ್ ಸ್ಕ್ರೂ ಅನ್ನು ತಿರುಗಿಸಲು 9999 ಡಾಲರ್ ಯಾವ ಸ್ಥಳದಲ್ಲಿ ತಿರುಪಿನ ಅವಶ್ಯಕತೆ ಇದೆ ಎಂಬುದನ್ನು ಗೊತ್ತು ಹಿಡಿಯಲು ಆತ ಶುಲ್ಕವನ್ನು ವಿಧಿಸಿದ.

ಮೇಲಿನ ಘಟನೆ ಕೇವಲ ದಂತ ಕಥೆಯಲ್ಲ.ಹಾಗೆ ಶುಲ್ಕ ವಿಧಿಸಿದ ವ್ಯಕ್ತಿ 1865 ರಿಂದ 1973ರ ವರೆಗೆ ಇಂಗ್ಲೆಂಡ್ ದೇಶದಲ್ಲಿ ನೆಲೆಸಿದ್ದ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ ಚಾರ್ಲ್ಸ್ ಪ್ರೊಟೆಯಸ್ ಸ್ಟೀನ್ ಮೆಟ್ಜ್ ಎಂಬ ವ್ಯಕ್ತಿ.

 

 

 

 

 

 

 

 

 

 

 

(ಚಾರ್ಲ್ಸ್ ಪ್ರೊಟೆಯಸ್ ಸ್ಟೀನ್ ಮೆಟ್ಜ್)

ಒಂದು ಬಾರಿ ಖ್ಯಾತ ಕಾರು ತಯಾರಿಕಾ ಕಂಪನಿ ಫೋರ್ಡ್ ನ ರಿವರ್ ರೋಜ್ ಕಾರು ತಯಾರಿಕಾ ಘಟಕದಲ್ಲಿ ಬೃಹತ್ತಾದ ಜನರೇಟರ್ ಒಂದು ಕೆಟ್ಟು ವಿಪರೀತ ಶಬ್ದ ಹೊರಡಿಸುತ್ತಿತ್ತು. ಫೋರ್ಡ್ ಕಂಪನಿಯ ಘಟಾನುಘಟಿ ಇಂಜಿನಿಯರ್ಗಳಿಗೂ ಈ ತೊಂದರೆಯ ಕುರಿತು ಜನರೇಟರಿನ ಯಾವ ಭಾಗ ಏನಾಗಿದೆ ಎಂಬುದರ ಕುರಿತು ಗೊತ್ತಾಗಲಿಲ್ಲ. ಜನರೇಟರ್ ಇಲ್ಲದೆ ಮುಂದಿನ ಕೆಲಸಕ್ಕೆ ತೊಂದರೆಯಾಗುತ್ತಿದ್ದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂದು ಎಲ್ಲರೂ ಒದ್ದಾಡುತ್ತಿದ್ದರು. ಅಂತಿಮವಾಗಿ ಸರ್ ಹೆನ್ರಿ ಫೋರ್ಡ್ ಚಾರ್ಲ್ಸ್ ನನ್ನು ಕರೆ ಕಳುಹಿಸಿದರು.

ಹಾಗೆ ಬಂದ ಚಾರ್ಲ್ಸ್ ಒಂದು ನೋಟ್ ಬುಕ್ ಒಂದು ಪೆನ್ ಮತ್ತು ಒಂದು ಮಂಚಕ್ಕಾಗಿ ಕೋರಿಕೆ ಇಟ್ಟನು. ನಂತರದ ಎರಡು ದಿನ ಹಗಲು-ರಾತ್ರಿ ಆತ ಸಂಪೂರ್ಣವಾಗಿ ಆ ಪ್ಲಾಂಟನಲ್ಲಿಯೇ ಕುಳಿತು ಮಲಗಿ ಆ ಜನರೇಟರ್ ನ ಶಬ್ದವನ್ನು ಆಲಿಸುತ್ತ ತನ್ನಲ್ಲಿ ತಾನೇ ವಿಚಿತ್ರ ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಿದ್ದನು.

ಎರಡು ದಿನಗಳ ನಂತರ ಆತ ಒಂದು ಏಣಿಯನ್ನು, ಅಳತೆ ಮಾಡುವ ಟೇಪನ್ನು ಮತ್ತು ಸೀಮೆ ಸುಣ್ಣದ ಬಳಪವನ್ನು ಕೇಳಿ ಪಡೆದನು. ನಂತರ ನಿಧಾನವಾಗಿ ಜನರೇಟರ್ ನ ಮೇಲ್ಭಾಗವನ್ನು ಹತ್ತಿ ಅದರ ಮೇಲೆ ಒಂದು ಭಾಗದಲ್ಲಿ x ಎಂದು ಸುಣ್ಣದ ಬಳಪದಿಂದ ಗುರುತಿಸಿದನು.

ನಂತರ ಅಲ್ಲಿದ್ದ ಇಂಜಿನಿಯರ್ಗಳತ್ತ ತೆರಳಿದ ಚಾರ್ಲ್ಸ್ ಈ ಪ್ಯಾನಲನ್ನು ತೆಗೆದು ನಾನು ಗುರುತು ಹಾಕಿರುವ ಜಾಗದಲ್ಲಿನ ಹದಿನಾರು ಸುತ್ತು ವೈರುಗಳನ್ನು ತೆಗೆದುಹಾಕಿ ಎಂದು ಹೇಳಿದ.

ಚಾರ್ಲ್ಸ್ ನ ಮಾತಿನಂತೆ ಆತ ಹೇಳಿದ ರೀತಿಯಲ್ಲಿ ಎಲ್ಲ ಕ್ರಮವನ್ನು ಕೈಗೊಂಡ ನಂತರ ಜನರೇಟರನ್ನು ಮತ್ತೆ ಶುರು ಮಾಡಿದಾಗ ಅದು ಈ ಹಿಂದಿನಂತೆ ಸುಗಮವಾಗಿ ಕಾರ್ಯನಿರ್ವಹಿಸಲಾರಂಭಿಸಿತು.

ಕೆಲ ದಿನಗಳ ನಂತರ ಹೆನ್ರಿ ಬೋರ್ಡ್ ಅವರ ಆಫೀಸಿಗೆ ಚಾರ್ಲ್ಸ್ ನಿಂದ ಒಂದು ಪತ್ರ ಮತ್ತು ರಿಪೇರಿ ಮಾಡಿದ ಬಾಬತ್ತು ಹತ್ತು ಸಾವಿರ ಡಾಲರ್ ಬಿಲ್ಲನ್ನು ಕಳುಹಿಸಲಾಗಿತ್ತು. ಬಿಲ್ ಹಣದ ಮೊತ್ತವನ್ನು ನೋಡಿ ಹೆನ್ರಿ ಫೋರ್ಡ್ ಚಕಿತರಾಗಿ ಅಷ್ಟೊಂದು ದೊಡ್ಡ ಮೊತ್ತದ ಬಿಲ್ ನೀಡಿರಲು ಕಾರಣವನ್ನು ಪ್ರಶ್ನಿಸಿ ಮರು ಟಪಾಲನ್ನು ಬರೆದರು.

ಸೀಮೆ ಸುಣ್ಣದಿಂದ ಗುರುತು ಮಾಡಲು ಒಂದು ಡಾಲರ್ ಮತ್ತು ಯಾವ ಸ್ಥಳದಲ್ಲಿ ಜನರೇಟರಿಗೆ ತೊಂದರೆಯಾಗಿತ್ತು ಎಂಬುದನ್ನು ಗುರುತಿಸಿ ಸರಿಯಾದ ಜಾಗವನ್ನು ಕಂಡುಹಿಡಿಯಲು 9999 ಡಾಲರ್ ಎಂದು ಚಾರ್ಲ್ಸ್ ಬರೆದು ಕಳುಹಿಸಿದ.

 

 

 

 

 

 

 

 

 

👆ಹೆನ್ರಿ ಪೋರ್ಡ್ ಚಾರ್ಲ್ಸ್ ಕಾರ ಕಂಪನಿ ಮಾಲೀಕ)

ಯಾವುದೇ ರೀತಿಯ ವಿಚಾರಣೆ ಇಲ್ಲದೆ, ದೂರಿಲ್ಲದೆ ಏನನ್ನೂ ಪ್ರಶ್ನಿಸದೆ ನಮೂದಿಸಿದಷ್ಟು ಮೊತ್ತವನ್ನು ಚಾರ್ಲ್ಸ್ ನ ಬ್ಯಾಂಕ್ ಖಾತೆಗೆ ಹೆನ್ರಿ ಫೋರ್ಡ್ ವರ್ಗಾಯಿಸಿದರು.

ಫೋರ್ಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ತಂದೆಯಿಂದ ಈ ದಂತ ಕಥೆಯನ್ನು ಕೇಳಿದ ಜಾಕ್ ಬಿ ಸ್ಕಾಟ್ 1965 ರಲ್ಲಿ ಲೈಫ್ ಎಂಬ ಪತ್ರಿಕೆಯಲ್ಲಿ ಇದನ್ನು
ಬರೆದು ಪ್ರಕಟಿಸಿದ.

 

ಕೇವಲ ನಾಲ್ಕು ಅಡಿ ಎತ್ತರದ, ಗೂನು ಬೆನ್ನಿನ, ವಕ್ರವಾದ ದೇಹವನ್ನು ಚಾರ್ಲ್ಸ್ ಹೊಂದಿದ್ದನು. ದೇಹದ ಆಕೃತಿಯಿಂದ ಆತನ ತಲೆಯ ಆಕಾರಕ್ಕಿಂತ ಕೈ ಕಾಲುಗಳು ತುಸು ಹೆಚ್ಚು ಉದ್ದವಾಗಿವೆ ಎಂಬಂತೆ ಭಾಸವಾಗುವ ಚಾರ್ಲ್ಸ್ ಎಂಬ ವ್ಯಕ್ತಿ ತನ್ನ ಬುದ್ಧಿಮತ್ತೆಯಲ್ಲಿ ಮಾತ್ರ ಅದ್ಭುತ ಸಾಮರ್ಥ್ಯವನ್ನು ಹೊಂದಿದ ದೈತ್ಯನಾಗಿದ್ದನು. ಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್ ಸ್ಟೀನ್, ನಿಕೋಲಾ ಟೆಸ್ಲಾ ಮತ್ತು ಥಾಮಸ್ ಅಲ್ವಾ ಎಡಿಸನ್ ಅವರ ಸ್ನೇಹಿತನಾಗಿದ್ದ ಚಾರ್ಲ್ಸ್ ತನ್ನ ಅಪಾರ ಬುದ್ಧಿ ಮತ್ತೆಯಿಂದ ಹೆಸರು ಗಳಿಸಿದ ವ್ಯಕ್ತಿಯಾಗಿದ್ದನು.

ನೋಡಿದಿರಾ ಸ್ನೇಹಿತರೆ! ಬುದ್ಧಿಮತ್ತೆಗೂ ದೈಹಿಕ ಅಂಗಸೌಷ್ಟವಕ್ಕೂ ಯಾವುದೇ ಸಂಬಂಧವಿಲ್ಲ.. ಎಷ್ಟೋ ಬಾರಿ ಬೇರೆಯವರ ಅಂದ ಚಂದಗಳನ್ನು , ಅವರು ಧರಿಸಿರುವ ಬಟ್ಟೆಗಳನ್ನು, ಓಡಾಡುವ ವಾಹನಗಳನ್ನು ನೋಡಿ ಅವರನ್ನು ಅಳೆಯುವ ಕೆಟ್ಟ ಮನಸ್ಥಿತಿ ನಮ್ಮ ಜನರಲ್ಲಿದೆ.

ಇದನ್ನು ಅರಿತೇ ಕೆಲ ಜನರು ಮಾನಸಿಕವಾಗಿ ಅತ್ಯಂತ ಕೆಟ್ಟ ಮನಸ್ಥಿತಿಯನ್ನು ಹೊಂದಿದ್ದರೂ ತೋರಿಕೆಯ ಒಳ್ಳೆಯತನದ ಪ್ರದರ್ಶನದಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಆಂತರಂಗಿಕವಾಗಿ ಟೊಳ್ಳು ವ್ಯಕ್ತಿತ್ವವನ್ನು ಹೊಂದಿದ್ದರೂ ಬಹಿರಂಗದಲ್ಲಿ ದೃಢತೆ
ಮತ್ತು ಹಸನ್ಮುಖತೆಯನ್ನು ತೋರುತ್ತ ಗುಳ್ಳೆ ನರಿಯಂತೆ
ಆಡುತ್ತಾರೆ.

ಮಾಸಲು ಬಟ್ಟೆ ಧರಿಸಿ ಕೈ ಕಾಲುಗಳಲ್ಲಿ ಮಣ್ಣು ಮೆತ್ತಿಕೊಂಡು ಬಿಸಿಲಿನಲ್ಲಿ ದೇಹವನ್ನು ಕಪ್ಪಾಗಿಸಿ ಒಣಗಿಸಿಕೊಂಡು ನಮಗೆ ಅನ್ನ ನೀಡುವ ರೈತನನ್ನು ನಾವು ಅದೆಷ್ಟು ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದು ಒಂದು ಬಾರಿ ಯೋಚಿಸಿದರೆ ಸಾಕು…. ನಮ್ಮ ಟೊಳ್ಳು ವ್ಯಕ್ತಿತ್ವದ ಅನಾವರಣವಾಗುತ್ತದೆ.

ಶ್ರೀಮಂತರಿಗೆ ಮಣೆ ಹಾಕಿ ಗೌರವಿಸುವ,, ಅವರು ತಮ್ಮ ಮನೆಗೆ ಕಾಲಿಟ್ಟದ್ದೆ ಮಹಾಭಾಗ್ಯ ಎಂಬಂತೆ ವರ್ತಿಸುವ ನಮ್ಮ ಜನ ಬಡವರನ್ನು ದೀನದಲಿತರನ್ನು ಕಳ್ಳರು ಸುಳ್ಳರು ಎಂಬಂತೆ ದೂರವಿರಿಸುವುದನ್ನು ನೋಡಿದಾಗ ಮನಸ್ಸು ಕಳವಳಿಸುತ್ತದೆ.

ಈ ಹಿಂದೆ ಜನರ ಇಂತಹ ಮನಸ್ಥಿತಿಯನ್ನು ಬದಲಾಯಿಸಲು ಸಾಕಷ್ಟು ಜನ ಪ್ರತಿಭಾವಂತರು ಪ್ರಯತ್ನಪಟ್ಟಿದ್ದಾರೆ. ತುಂಡು ಬಟ್ಟೆಯನ್ನು ಧರಿಸಿ ಕನ್ನಡಕ ಮತ್ತು ಕೋಲುಗಳನ್ನು ಆಸ್ತಿಯಾಗಿಸಿಕೊಂಡ
ತನ್ನ ಮೆದುವಾದ ಆದರೆ ಅಷ್ಟೇ ದೃಢವಾದ ಧೀ ಶಕ್ತಿಯಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿದ
ಗಾಂಧೀಜಿ ನಮಗೆ ಆದರ್ಶವಾಗಬೇಕು.

ತಾವು ಉಪನ್ಯಾಸ ನೀಡಲು ಬಂದ ಭವನದ ಒಳಗೆ ತಮ್ಮ ವೇಷ ಭೂಷಣಗಳ ದೆಸೆಯಿಂದ ಮೊದಲು ಪ್ರವೇಶ ದೊರೆಯದೆ ಹೋದಾಗ ಒಳ್ಳೆಯ ವೇಷ ಭೂಷಣ ಧರಿಸಿ ಬಂದು ಉಪನ್ಯಾಸ ನೀಡಿದ ನಂತರ ಔತಣಕೂಟದಲ್ಲಿ ತಮ್ಮ ಬಟ್ಟೆಗಳಿಗೆ ಆಹಾರವನ್ನು ಸೇವಿಸಲು ಕೇಳಿಕೊಂಡ ಪಂಡಿತ್ ಈಶ್ವರ್ ಚಂದ್ರ ವಿದ್ಯಾಸಾಗರರು ಅಂದಿನ ಸೊ ಕಾಲ್ಡ್ ನಾಗರಿಕ ಸಮಾಜಕ್ಕೆ ಮಾತಿನಲ್ಲಿ ಮಾತ್ರವಲ್ಲದೇ ಕೃತಿಯ ಮೂಲಕ ತಪರಾಕಿ ನೀಡಿದ್ದರು
ಅವರ ಬದುಕು ಕೂಡ ನಮಗೆ ಆದರ್ಶವೇ ಅಲ್ಲವೇ?

ಹೊರಗಿನ ಥಳುಕಿಗಿಂತ ಆಂತರ್ಯದ ಸೌಂದರ್ಯಕ್ಕೆ
ಬೆಲೆ ಕೊಡುವ ಮೂಲಕ ಗೌರವಿಸೋಣ. ಏನಂತೀರಾ ಸ್ನೇಹಿತರೆ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!