‌ಮಾನವೀಯತೆ ಮುಖ್ಯವೆನ್ನುವ “ಮಮದಾಪೂರರ ಚುಟುಕುಗಳು”

‌ಮಾನವೀಯತೆ ಮುಖ್ಯವೆನ್ನುವ “ಮಮದಾಪೂರರ ಚುಟುಕುಗಳು”

 

 

 

 

 

 

 

 

 

 

 

(ಶ್ರೀ ಈಶ್ವರ‌ ಮಮದಾಪೂರ ಅವರ ಚುಟುಕು ಸಂಕಲನ)

ಗೋಕಾವಿ‌ ನಾಡಿನ ಪ್ರಮುಖ ಕವಿ ಈಶ್ವರ ಮಮದಾಪೂರ ಅವರು ಈಚೆಗೆ ನಾಲ್ಕು‌ ಪುಸ್ತಕಗಳನ್ನು‌ ಒಮ್ಮೆಲೆ ಬಿಡುಗಡೆ ಮಾಡಿದ್ದಾರೆ.ಅವರ ಗಜಲ್ ಜುಲ್ ಕಾಫಿಯ ಸಂಕಲನ, ದ್ವಿಪದಿ ಸಂಕಲನ‌, ಕವನ ಸಂಕಲನ‌ ಮತ್ತು ಗದ್ಯ‌ ಲೇಖನಗಳ ಸಂಕಲನ‌ ಗಳನ್ನು‌ ಒಮ್ಮೆಲೆ ಪ್ರಕಟಿಸಿದ್ದಾರೆ..ಈವರೆಗೆ ಹನಿಗವನ, ಚುಟುಕು ಗಜಲ್ ,ದ್ವಿಪದಿ‌, ಹೈಕು ಮೊದಲಾದ ಕಾವ್ಯ‌ಪ್ರಕಾರಗಳಲ್ಲಿ ಮಹತ್ವದ್ದಾದುದನ್ನು ಸಾಧಿಸಿದ್ದ ಮಮದಾಪೂರ ಅವರು ಗದ್ಯ ವಿಮರ್ಶಾ ಸಂಕಲನವನ್ನು ತಂದು ಈಗ ಅಲ್ಲಿಯೂ ತಮ್ಮ ಛಾಪು‌ ಮೆರೆದಿದ್ದಾರೆ. ನಾನು ಅವರ ದ್ವಿಪದಿಗಳಿಂದ ಆಕರ್ಷಿತನಾಗಿದ್ದೇನೆ .. ನಿತ್ಯವೂ ಸಾಮಾಜಿಕ‌ ಮಾಧ್ಯಮಗಳಲ್ಲಿ ಅವರು ಪ್ರಕಟಿಸುವ ದ್ವಿಪದಿಗಳನ್ನು ಓದುವ ,ಅವುಗಳಿಗಾಗಿ ಕಾಯುವ ಓದುಗರಿದ್ದಾರೆ. ನಾಲ್ಕು ನೂರಕ್ಕೂ ಮಿಕ್ಕಿ ದ್ವಿಪದಿಗಳನ್ನು ಅವರು ಬರೆದಿದ್ದಾರೆ.

ಈಶ್ವರ ಮಮದಾಪೂರ ಅವರ ಕಾವ್ಯ ಶಕ್ತಿಯನ್ನು ಗೌರವಿಸಿದ ವೈದ್ಯ ವಾರ್ತಾ‌ ಪ್ರಕಾಶನ ಮೈಸೂರು ಇವರು, ಎರಡು ಕೃತಿಗಳನ್ನು” ಮಮದಾಪೂರರ ಹನಿ” ಗಳು
ಮಮದಾಪೂರ,ಚುಟುಕುಗಳು” ಎಂಬ ಎರಡು ಸಂಕಲನಗಳನ್ನು ಪ್ರಕಟಿಸಿದ್ದಾರೆ.

೨೦೧೮ರಲ್ಲಿ‌ ‘ಮಮದಾಪೂರರ ಚುಟುಕುಗಳು’ ಎಂಬ ಈ ಕೃತಿ ವೈದ್ಯ ವಾರ್ತಾ ಪ್ರಕಾಶನದಿಂದ ಪ್ರಕಟವಾದದ್ದು ಮಮದಾಪೂರ ಅವರಲ್ಲಿರುವ ಪ್ರತಿಭೆಗೆ ಸಂದ ಗೌರವದ ಪ್ರತೀಕ . ಚುಟುಕು ಯುಗಾಚಾರ್ಯ ಎಂದೇ ಹೆಸರಾದ, ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತನ್ನು‌ ಕಟ್ಟಿದ ಡಾ. ಎಂ.ಜಿ. ಆರ್. ಅರಸು ಅವರು ಮೈಸೂರಿನಲ್ಲಿ‌ ನಡೆಸುವ ಈ‌ ಪ್ರಕಾಶನ‌ ಶ್ರೇಷ್ಠ ಚುಟುಕು ಕವಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ಗಮನಾರ್ಹ.

ಚುಟುಕು ನಾಲ್ಕು ಸಾಲಿನ‌ ಪದ್ಯ. ಹನಿಗವನಕ್ಕೂ ಚುಟುಕಿಗೂ ಇರುವ ವ್ಯತ್ಯಾಸಗಳಲ್ಲಿ ಪ್ರಮುಖವಾದುದು ಈ ಸಾಲುಗಳ ಪರಿಮಿತಿಯೇ. ಸಾಲುಗಳ ನಿಯತತೆಯಿಲ್ಲದೆ ಮುಕ್ತವಾಗಿ ಬರೆದ ಕಿರುಪದ್ಯವು ಹನಿಗವನ ಎನಿಸುತ್ತದೆ. ಇಲ್ಲಿ ನಿಯಮಿತವಾಗಿ‌ ನಾಲ್ಕು ಸಾಲುಗಳಲ್ಲಿ ಬರೆದಿರುವ ೧೫೦ ಚುಟುಕುಗಳಿವೆ.

ಪ್ರತಿ ಚುಟುಕು ಒಂದು ಶೀರ್ಷಿಕೆಯನ್ನು ಹೊಂದಿದ್ದು ಆ ಶೀರ್ಷಿಕೆಯ ಆಶಯವನ್ನು ಚುಟುಕು ವಿಸ್ತರಿಸುತ್ತದೆ. ಉದಾಹರಣೆಗೆ ಮೊದಲ ಚುಟುಕು ‘ಬೆಳಕು’ ಎಂಬ ಹೆಸರು ಹೊಂದಿದ್ದು ಮನುಷ್ಯ ಹೊಂದಿರುವ ನಗೆಯನ್ನು ಬೆಳಕಿಗೆ ಹೋಲಿಸುತ್ತದೆ.

ನಗು ಬೇಕು ಜೀವನದಲ್ಲಿ
ಚಂದ್ರಮನ ಬೆಳದಿಂಗಳಂತೆ
ಕೋಪ ತಾಪ ಅಟ್ಟಕ್ಕೆ ಅಟ್ಟಿ
ಅವು ಅಮವಾಸ್ಯೆ ಕತ್ತಲಿದ್ದಂತೆ

ಇಲ್ಲಿ ನಗುವನ್ನು ಹುಣ್ಣಿಮೆಯ ಬೆಳದಿಂಗಳಿಗೂ , ಕೋಪ ತಾಪಗಳನ್ನು ಕತ್ತಲಿಗೂ ಹೋಲಿಸುವ ಕವಿ ಅವು ದೂರವೇ ಇರಲಿ ಎಂದು ಹಾರೈಸುತ್ತಾನೆ. ‘ಸತ್ಯ’ ಎಂಬ ಹೆಸರಿನ ಚುಟುಕು‌ ಪ್ರೀತಿಯನ್ನು ನಿತ್ಯ ಸತ್ಯ ಎಂದು ಸಾರುತ್ತದೆ. ಬೆಳಕು ಹೆಸರು ಇರಿಸಿಕೊಂಡ ಇನ್ನೊಂದು ಚುಟುಕು ತನ್ನ ಪ್ರೇಮಿಯ ಕಂಗಳಲ್ಲಿ ಅಪಾರ ಬೆಳಕಿದೆ , ಆ ಬೆಳಕಿನ‌ ಮುಂದೆ ನಕ್ಷತ್ರಗಳೂ ಮಾಸುತ್ತವೆ ಎಂದಿದೆ.. ಹೀಗೆ ತಾವು ಇರಿಸಿಕೊಂಡ ಶೀರ್ಷಿಕೆಯ ವಸ್ತು ವ್ಯಾಪ್ತಿಯನ್ನು‌ ಪೋಷಿಸುವಂತೆ ಕವಿ‌ ಈಶ್ವರ ಮಮದಾಪೂರ ಅವರು ಚುಟುಕುಗಳನ್ನು ಹೆಣೆದಿದ್ದಾರೆ.

ಬಡತನ ಸಿರಿತನಗಳ ವಿಪರ್ಯಾಸವನ್ನು‌ ಕವಿತೆಯಾಗಿಸುವ ಕವಿ ಸಿರಿವಂತರ‌ ಮಹಲಿಗೂ ಬಡವನ ಜೋಪಡಿಗೂ ಇರುವ ಅಂತರವನ್ನು ತುಂಬ ಸಶಕ್ತವಾಗಿ ಚಿತ್ರಿಸುತ್ತಾರೆ.

ಹೊರಗಡೆ ದೀಪಗಳ ಬೆಳಕು
ಸಾವಿರ ಸಾವಿರ
ನನ್ನ ಪುಟ್ಟ ಜೋಪಡಿಯಲ್ಲಿ
ದೀಪದೆಣ್ಣೆಗೂ ಬರ

ಎನ್ನುವ ಸಾಲು ಬಡವರ ನೋವಿಗೆ ದನಿಯಾಗುತ್ತವೆ. ಕವಿಯ ಸಾಮಾಜಿಕ ಚಿಂತನೆಯನ ಮುಖ ಇಲ್ಲಿ ಅನಾವರಣವಾಗುತ್ತದೆ. ಖ್ಯಾತ ಚುಟುಕು ಕವಿಗಳಾದ ಸಿಪಿಕೆ ಯವರಿಂದ ‘ ಪ್ರೇಮದ ಪ್ರವಾದಿ’ ಎಂದು‌ ಕರೆಸಿಕೊಂಡಿರುವ ಮಮದಾಪೂರ ಅವರು ಆ ಮೆಚ್ಚಿಕೆಗೆ ತಕ್ಕಂತೆ ಈ ಸಂಕಲನದ ತುಂಬ ಪ್ರೀತಿಯನ್ನು ವ್ಯಾಖ್ಯಾನಿಸುವ ಹತ್ತಾರು ಚುಟುಕುಗಳಿವೆ. ಪದರೀತಿಯಲ್ಲಿ ತುಂಟತನದ ಭಾವ ಇದ್ದರೆ ಆ ಪ್ರೀತಿಯ ಪಲಕುಗಳು ತುಂಬ ಚೇತೋಹಾರಿ ಎನಿಸುತ್ತವೆ. ಅಂಥ ಒಂದೆರಡು ಚುಟುಕುಗಳು ಓದಿದೊಡನೆ ಕಿರುನಗೆ ಹುಟ್ಟಿಸುವಂತಿವೆ. ಪ್ರೇಮದಲ್ಲಿ ಮುಳುಗಿರುವವನಿಗೆ ಬಂದಿರುವದು ಯಾವ ಬಗೆಯ ಜ್ವರ ತಿಳಿಯದೆ ವೈದ್ಯರೂ ಕಕ್ಕಾಬಿಕ್ಕಿಯಾಗಿ ಕೊನೆಗೆ‌ ಇದು‌ ಪ್ರೇಮ ಜ್ವರ ಎಂದು‌ ಕಂಡು ಹಿಡಿದು ಉಸಿರು ಬಿಡುತ್ತಾರೆ.

ಆ ವೈದ್ಯನಿಗೊ ಆಶ್ಚರ್ಯ
ನನ್ನ ನಾಡಿ ಮಿಡಿತದಲ್ಲಿ
ನಿನ್ನ ಹೆಸರೇ ಧ್ವನಿಸುತ್ತಿದೆ
ಅವನೆಂದ ಇದು ಪ್ರೇಮಜ್ವರ!

ಈ ಬಗೆಯ ಖುಷಿಕೊಡುವ ಅನೇಕ ಚುಟುಕುಗಳು ಸಂಕಲನದಲ್ಲಿ ಸಾಕಷ್ಟವೆ. ಪ್ರೀತಿ ವಂಚಿತ ಕವಿ ಅವಳಿಂದ ನಿದ್ದೆಯಿಲ್ಲದ ರಾತ್ರಿಗಳನ್ನು‌ ಪಡೆದುದನ್ನು‌ ಒಂದು ಚುಟುಕಿನಲ್ಲಿ ಸೂಚಿಸುತ್ತಾರೆ. ಕವಿ‌ ಮಮದಾಪೂರ ಅವರ ಕಾವ್ಯ ಶಕ್ತಿಯನ್ನು ಮೆಚ್ಚಲು ಕಾರಣವಾಗುತ್ತವೆ.

ಆದರೆ‌ ಪ್ರೀತಿ ಎಂದರೆ ಕೇವಲ ಗಂಡು ಹೆಣ್ಣಿನ ನಡುವಿನ ಪ್ರೀತಿ ಮಾತ್ರವಲ್ಲ ಈ ಜಗತ್ತನ್ನೆ ಕಾಪಾಡುವ ಅನಂತ ಮನುಷ್ಯ ಪ್ರೀತಿಯನ್ನೂ ಕವಿ ಗುರುತಿಸಿದ್ದಾರೆ. ಪ್ರೇಮ ಭಾವ ಎಂಬ ಚುಟುಕು ದೇವರಲ್ಲಿ..

ಕೊಡು ದೇವರೆ
ದ್ವೇಷವಿಲ್ಲದ ವರ
ಎಲ್ಲರಲಿ ಪ್ರೇಮ
ಭಾವದ ಸ್ವರ

ಹೀಗೆ ಅವರ ಕಾವ್ಯ ಪ್ರೀತಿ ಎಲ್ಲೆಡೆ ಹರಡಿ ದ್ವೇಷವನ್ನು ಕಳೆಯಲಿ ಎಂಬ ಆಶಯ ವ್ಯಕ್ತ ಮಾಡುತ್ತದೆ. ಕವಿತೆ ಯಾವುದೇ ಪ್ರಕಾರದ್ದಿರಲಿ ಅದು ಮಾಡಬೇಕಾದ ಕಾರ್ಯ ಇದೇ ತಾನೆ!

ಕವಿ‌ ಮಮದಾಪೂರ ಅವರು ಕವಿತೆ ಬರೆಯುವದೇ ಕವಿಗೆ ಪೂಜೆ ಎಂದು ಭಾವಿಸಿದವರು. ನೀವು‌ ಕವಿತೆ ಬರೆಯಲು ಎಷ್ಟು ಸಮಯ ಬಳಸುತ್ತೀರೋ ಅಷ್ಟು ನಿಮ್ಮ ಸಮಯ ಸಾರ್ಥಕ ಎನ್ನುತ್ರಾರೆ. ‘ ಸಮಯ’ ವೆಂಬ ಚುಟುಕು ಕವಿತೆ ಬರೆಯಲು‌ ಮೀಸಲಿಟ್ಟ ಸಮಯ ಪೂಜೆಮಾಡಲು‌ ಮೀಸಲಿಟ್ಟ ಸಮಯಕ್ಕಿಂತ ಮಿಗಿಲು ಎಂಬ ಭಾವ ವ್ಯಕ್ತ‌ಮಾಡುತ್ತಾರೆ.

ದೇವಪೂಜೆಗೆ ಸಮಯ
ಎಷ್ಟೊಂದು ಸಮಯ
ಅಕ್ಷರ ಪೂಜೆಗೆ ಸಮಯ
ನೀಡಿದಷ್ಟೂ ಸಾರ್ಥಕಮಯ

ಚುಟುಕಿನಲ್ಲಿ ಸಮಯ ಪದ ಮತ್ತೆ‌ ಮತ್ತೆ ಬಂದು‌ ಕವಿತೆಗೊಂದು ಅರ್ಥಪೂರ್ಣತೆ ಒದಗಿಸುತ್ತದೆ. ಕೊನೆಯಲ್ಲಿ ಬರುವ ‘ ಸಾರ್ಥಕಮಯ’ ಎಂಬ ಪದ ಕೇವಲ ಪ್ರಾಸ ಪದವಾಗಿ ಬರದೆ ಕವಿತೆಗೆ ಒಂದು ಸಾರ್ಥಕ ಮುಕ್ತಾಯ ಒದಗಿಸುತ್ತದೆ. ದೇಶ ಪ್ರೇಮ ಸಾರುವ , ಯುವಕರಲ್ಲಿ ತುಂಬಿರುವ ದುಶ್ಚಟಗಳನ್ನು ಬಿಡಿಸುವ ಪ್ರಯತ್ನ ಮಾಡುವ ಚುಟುಕುಗಳು ಇಲ್ಲಿವೆ. ಹೋಗುವ ಮುನ್ನ‌ ಇಲ್ಲಿ ಉಳಿಸಿ‌ ಹೋಗಬೇಕಾದದ್ದು ಒಂದಿಷ್ಟು‌ ಪ್ರೀತಿ ದಯೆಯನ್ನು‌ ಮಾತ್ರ ಎನ್ನುವ ಕವಿ (ಮಣ್ಣಾಗುವ ಮುನ್ನ) ಇಲ್ಲಿ ಅಂತಿಮವಾಗಿ ಉಳಿಸಿ‌ ಹೋಗಬೇಕಾದದ್ದು ಮಾನವಿಯತೆಯನ್ನು‌ ( ಎಲ್ಲಿಯತನಕ) ಎನ್ನುತ್ತಾರೆ. ಹಸಿದವರಿಗೆ ಅನ್ನ‌ಕೊಡು ಅಲ್ಲಿ ದೇವರಿದ್ದಾನೆ ( ಹಸಿವು) ಎಂದು ಸಾರುತ್ತಾರೆ.

ಈಚೆಗೆ ದಿನಕರ ದೇಸಾಯಿಯವರ ಮಾದರಿಯ ನಾಲ್ಕು ಸಾಲಿನ ಚುಟುಕುಗಳ ರಚನೆ ಅಷ್ಟಾಗಿ‌ ಕನ್ನಡದಲ್ಲಿ ಕಂಡು ಬರುತ್ತಿಲ್ಲ. ಹಲವಾರು ಜನ ಬರೆಯುತ್ತಿದ್ದರೂ ಅಲ್ಲಿ‌ ಕಾವ್ಯವೇ ಕಾಣೆಯಾಗಿರುವ , ದಿಡಿರ್ ಕವಿಯಾಗಿ ಬಿಡಬೇಕೆನ್ನುವ ಪೃವೃತ್ತಿ ಎದ್ದು ಕಾಣುತ್ತಿದೆ. ಕನ್ನಡ ಕಾವ್ಯ ಪರಂಪರೆಯೊಂದಿಗೆ ಸತತ ಅನುಸಂಧಾನ‌ ಇರಿಸಿಕೊಂಡು ಹೊಸ ಹೊಸತನ್ನು‌ ಕೊಡುತ್ತಿರುವ ಈಶ್ವರ‌ ಮಮದಾಪೂರ ನಿರಂತರ ಸಾಹಸಶೀಲರು. ಅದಕ್ಕೆ ಸಾಕ್ಷಿ ಈಚೆಗೆ ಅವರು ತಂದಿರುವ ದ್ವಿಪದಿ ಸಂಕಲನ. ಕನ್ನಡ ಚುಟುಕು ಕಾವ್ಯ ಪ್ರಕಾರವೂ ವೈವಿಧ್ಯಮಯವಾಗಿ ಬೆಳೆಯುತ್ತಿರುವದಕ್ಕೆ ಈಶ್ವರ ಮಮದಾಪೂರ ಅವರಂಥವರ ಕೊಡುಗೆ ಖಂಡಿತ ವಾಗಿಯೂ ಸೇರಿಕೊಳ್ಳುತ್ತದೆ. ಈ ಕವಿ ನಿತ್ಯ ವೂ ಕಾವ್ಯವನ್ನು ಪ್ರೀತಿಯಲ್ಲಿಯೇ ಉಸಿರಾಡುತ್ತಾರೆ. ಕಾವ್ಯಕೂಟ ಗಜಲ್ ಬಳಗ ಕಟ್ಟಿಕೊಂಡು ನೂರಾರು ಜನರಿಗೆ ಮಾರ್ಗದರ್ಶನ ಮಾಡುತ್ತಾರೆ. ಜೊತೆಗೆ ಹೊಸತನ್ನು‌ ಕೊಡುತ್ತಾರೆ..ಈ ವಿಭಿನ್ನ ಕಾರ್ಯಗಳಲ್ಲಿ ನಿರತವಾಗಿರುವ
ಈಶ್ವರ ಮಮದಾಪೂರ ಅವರ ಕಾವ್ಯ ಪ್ರೀತಿಗೊಂದು ಸಲಾಮು ಸಲ್ಲಲೇ ಬೇಕು.. ಅವರ ಚುಟುಕುಗಳನ್ನು ಪ್ರಕಟಿಸಿದ ವೈದ್ಯ ವಾರ್ತಾ ಪ್ರಕಾಶನದ ಸಮಸ್ತರನ್ನು ವಂದಿಸುತ್ತೇನೆ.

-ಡಾ.ವೈ.ಎಂ.ಯಾಕೊಳ್ಳಿ
ಕವಿ ,ವಿಮರ್ಶಕ
ಸವದತ್ತಿ

Don`t copy text!