ಬಸವಣ್ಣನವರ ವಚನಗಳಲ್ಲಿ ಸಮಾನತೆಯ ಸಂದೇಶ
“ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮದೇವಯ್ಯ
ನಿಮ್ಮ ಮಹಾ ಮನೆಯ ಮಗನೆಂದನಿಸಯ್ಯ”
ಬಸವಣ್ಣನವರ ಅತ್ಯಮೂಲ್ಯ ವಚನಗಳಲ್ಲಿ ಇದೂ ಒಂದು. “ಬಸವಣ್ಣನವರ ವಚನಗಳಲ್ಲಿ ಸಮಾನತೆಯ ಪ್ರಜ್ಞೆ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವಾಗ ಇದು ಸೂಕ್ತವೆನಿಸುತ್ತದೆ.
೧೨ ನೆಯ ಶತಮಾನದ ಶರಣ ಕ್ರಾಂತಿ ನಡೆದದ್ದೇ ಅಸಮಾನತೆ ಹಾಗೂ ಜಾತೀಯತೆ ವಿರುದ್ಧ ಎಂಬುದು ಗಮನಾರ್ಹ. ಅಂದಿನ ಆ ಶರಣರ ವಚನಗಳೆಲ್ಲವೂ ಜಾತಿಯಯತೆ , ಮೇಲು – ಕೀಳು ,ಬಡವ ಬಲ್ಲಿದ ಹಾಗೂ ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಕುರಿತೇ ಆಗಿವೆ. ವೃತ್ತಿ ಆಧಾರಿತ ಕಾಯಕವಾದರೂ ಅದುವೇ ಜಾತಿ ಹುಟ್ಟಿಗೆ ಕಾರಣವಾಗಿದ್ದು ವಿಪರ್ಯಾಸ. ಒಂದು ಕಾಲ ಘಟ್ಟದಲ್ಲಿ ಮನು ಆಧಾರಿತ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಬಂದಿದ್ದ ಮೇಲ್ವರ್ಗದವರು ಕೆಳವರ್ಗದವರನ್ನು ಇನ್ನಿಲ್ಲದಂತೆ ಅತಿ ಕೀಳಾಗಿ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಮಾನವೀಯತೆ ಲೆಕ್ಕಕ್ಕೆ ಇಲ್ಲದಂತಾಗಿತ್ತು. ಮೇಲ್ವರ್ಗದವರ ಮುಂದೆ ಹಾಯುವಂತಿಲ್ಲ , ಗುಡಿ , ಮಂದಿರದೊಳಗೆ ಪ್ರವೇಶವಿಲ್ಲ , ತಮ್ಮ ಕೇರಿಗಳಲ್ಲಿ ಬರಗಾಲ ಬಿದ್ದು ನೀರು ಸಿಗದೇ ಇದ್ದಾಗಲೂ ಮೇಲ್ವರ್ಗದ ಕೇರಿಗಳಿಂದ ನೀರು ಪಡೆಯುವಂತಿಲ್ಲ. ಇತ್ಯಾದಿ..
ಕೇವಲ ಶೂದ್ರಾತಿ ಶೂದ್ರರಾಗಿ ದುಡಿಯುವುದು , ಇಲ್ಲವೇ ಗುಲಾಮರಾಗಿ ಬದುಕುವುದು ಮಾತ್ರ ಇವರ ಜೀವನವಾಗಿತ್ತು . ಇಂತಹ ಸಂದರ್ಭದಲ್ಲಿಯೇ ಬಸವಣ್ಣನವರು ಈ ಶೋಷಿತರ ಪರವಾಗಿ ನಿಂತಿದ್ದು. “ಮಾದಾರ ಚೆನ್ನಯ್ಯನ ಮಗ ನಾನಯ್ಯ ” ಎಂದು ಹೇಳುವಲ್ಲಿಯೂ ಅವರ ಸಾಮಾಜಿಕ ಕಳಕಳಿಯನ್ನು ಕಾಣಬಹುದಾಗಿದೆ.
ಈ ವಚನದಲ್ಲಿ ಅವರು ಹೇಳಿದ್ದು , ಯಾರೇ ಆಗಿರಲಿ “ಇವನಾರು ಎಂದು ದೂರ ತಳ್ಳದಿರಿ . ಇವನು ನಮ್ಮವನು ಎಂದೇ ಅಪ್ಪಿಕೊಳ್ಳಿ. “ಎಂದು . ಇದರರ್ಥ ಜಾತಿ ಆಧಾರಿತವಾಗಿಯೋ ಇಲ್ಲಾ ಅಂತಸ್ತು ಆಧಾರಿತವಾಗಿಯೋ ಯಾರನ್ನೇ ಆಗಲಿ ಮನೆಯಿಂದ ಮತ್ತು ಮನದಿಂದ ದೂರ ತಳ್ಳದೆ ಅವರನ್ನು ಮಾನಸಿಕವಾಗಿ ಹಿಂಸಿಸದೆ ಅಪ್ಪಿಕೊಳ್ಳಿ , ಸಂತೈಸಿಕೊಳ್ಳಿ ಎಂಬುದಾಗಿದೆ. ಅಂದು ಹೇಳಿದ ಈ ವಚನ ಇಂದಿಗೂ ಪ್ರಸ್ತುತವೇ ಆಗಿದೆ. ಈಗಲೂ ಜಾತಿ ವ್ಯವಸ್ಥೆ ಇದೆ, ಅಸಮಾನತೆ ಇದೆ. ಆದರೆ ಮೊದಲಿನಷ್ಟು ಶೋಷಣೆ ಇಲ್ಲ. ಕಾಯಿದೆ ಬಲವಿದೆ , ರಕ್ಷಣೆ ಇದೆ. ಆದರೂ ಕೂಡ ಈ ಜಾತಿ ಜತೆಗೆ ಬಡತನದ ಅಸಮಾನತೆ ಕಾಣುತ್ತಿದ್ದು ಹೋಗಲೇಬೇಕು . ಅಂತಸ್ತು ಅಧಿಕಾರದ ದರ್ಪ ಹೋಗಬೇಕು , ಶ್ರೀಮಂತ ಮತ್ತು ಬಡವನ ನಡುವಿನ ಮಾನಸಿಕ ಕ್ಷೋಭೆ ಹೋಗಬೇಕು . ಕೇವಲ ನಾವೆಲ್ಲರೂ ಒಂದೇ ಎಂಬ ಸಮ ಮನೋಭಾವ ಬರಬೇಕು . ಕೇವಲ ಕಾಯಕ ನಿಷ್ಠೆ ಮತ್ತು ಗೌರವ ಇರಬೇಕು. ಇದುವೇ ಬಸವಣ್ಣನವರ ಬಯಕೆ ಮತ್ತು ಈ ವಚನದ ಆಕಾಂಕ್ಷೆಯಾಗಿದೆ. ಯಾರೇ ಇರಲಿ
” ಇವನಾರವ ಇವನಾರವ” ಎಂದು ದೂರ ತಳ್ಳದೆ “ನಾವೆಲ್ಲ ಒಂದೇ , ಮಾನವಕುಲದವರು , ಮಾನವಿಯತೆಯೊಂದೇ ಇಲ್ಲಿ ಮುಖ್ಯ” ಎಂಬುದಾಗಿರಲಿ. ತನ್ಮೂಲಕ ಈ ನೆಲೆಗಟ್ಟಿನಲ್ಲಿ ಸಮಾನತೆಯ ಮನೋಭಾವ ಎಲ್ಲರಲ್ಲೂ ಬರಲೆಂದು ಆಶಿಸುತ್ತೇನೆ.
ಲೇಖನ – ಈಶ್ವರ ಮಮದಾಪೂರ
ಗೋಕಾಕ