ಅಪ್ಪ ಬಸವಣ್ಣ

 

ಅಪ್ಪ ಬಸವಣ್ಣ

 

 

 

 

 

 

 

 

 

ಶಿವ ಶರಣ ದುಂಬಿಗಳು ಭವದೊಳಗೆ
ಹಾರಾರಿ| ಶಿವಮತದ ಹುಟ್ಟು ಕಟ್ಟಿದವು
ವಚನಗಳು ಸವೆಯದೆ ಉಳಿದಿರುವ ಹೊಸ ಜೇನು||

ಮಹಾ ಮಾನವತಾವಾದಿ, ಮಾನವೀಯ ಮೌಲ್ಯಾರಾಧಕರು, ನವಯುಗ ಪ್ರವರ್ತಕರು, ಆದ ಬಸವಾದಿ ಶರಣರು ಲಿಂಗಾಂಗ ಸಾಮರಸ್ಯದ ಮೂಲಕ, ಬಹು ದೊಡ್ಡ ಆಧ್ಯಾತ್ಮಿಕ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿಯ ಮೂಲಕ ಲೋಕದ ಅಂಕು ಡೊಂಕುಗಳನ್ನು ತಿದ್ದಿ, ನರರನ್ನು ಹರನನ್ನಾಗಿಸುವ ಸುಲಭ ಶಿವಯೋಗ ಮಾರ್ಗವನ್ನು ಕೊಟ್ಟು ಮಾನವ ಧರ್ಮದ ಉನ್ನತಿಗೆ ಕಾರಣೀಭೂತರಾದರು. ಅರಿವು, ಆಚಾರ, ಅನುಭಾವದ ಮೂಲಕ ಪ್ರಸಾದ ಕಾಯವನ್ನು ಲಿಂಗಕಾಯವಾಗಿಸಿದರು.

1918 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕರು ಬಸವ ಜಯಂತಿಯಂದು ಅಪ್ಪ ಬಸವಣ್ಣನವರ ಕುರಿತು “ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಹೆಜ್ಜೆಗಳು ವಿಶೇಷ ಮತ್ತು ವಿಶಿಷ್ಠವಾಗಿದ್ದವು. ಅವರಿಗಿಂತ ಮುಂಚೆ ಆಗಿ ಹೋದ ಸಮಾಜ ಸುಧಾರಕರ ಚಿಂತನೆಗಳು ಸಾಮಾಜಿಕ ಅಥವಾ ಧಾರ್ಮಿಕ ಪರಿವರ್ತನೆಯ ಹೆಜ್ಜೆಗಳು, ಕೇವಲ ಒಂದೆರಡು ಚಿಂತನೆಗಳಿಗಾಗಿ ಮಾತ್ರ ಮೀಸಲಾಗಿದ್ದವು. ಆದರೆ ಬಸವಣ್ಣನವರ ಚಿಂತನೆಗಳು ಶ್ರೇಣಿಕೃತ ಸಮಾಜದ ಕೆಳಸ್ಥರದ ಜನರ ಜೊತೆಗೆ ಸಮಾಜದ ಸಮಗ್ರ ಏಳಿಗೆಗಾಗಿ ಸಂಬಂಧಪಟ್ಟಂತವು. ಮಹಿಳೆಯರ ಸಮಾಜೋಧಾರಕ ಏಳಿಗೆಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಮತ್ತು ಯಶಸ್ವಿಗಾಗಿ ಕಾರ್ಯರೂಪಕ್ಕೆ ತಂದವರು ಬಸವಣ್ಣನವರು” ಎಂದು ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.

ನಿಜವಾಗಿಯೂ ಜಾಗತಿಕವಾಗಿ ಎಲ್ಲ ರೀತಿಯ ಧಾರ್ಮಿಕ ಚಳುವಳಿಗಳನ್ನು ನೋಡಿದಾಗ ಕೇವಲ ಧಾರ್ಮಿಕ ವಿಷಯ ಅಥವಾ ಸಮಾಜ ಸುಧಾರಣೆ ಕಲವೇ ಅಂಶಗಳನ್ನು ಇಟ್ಟುಕೊಂಡು ಕ್ರಾಂತಿಗಳಾಗಿವೆ. ಆದರೆ 12 ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವ, ಅಚ್ಚಳಿಯದೇ ನಿಚ್ಚಳವಾಗಿ ಉಳಿಯುವ ಉನ್ನತ ಮಟ್ಟದ ಸುಧಾರಣೆಗಳನ್ನು ಪ್ರಾಯೋಗಿಕವಾಗಿ ಜಗಕೆ ಮಾದರಿಯಾಗುವಂತೆ ಸಾತ್ವಿಕ ಸಮಾಜ ನಿರ್ಮಿಸಿದ ಕೀರ್ತಿ ಅಪ್ಪ ಬಸವಣ್ಣನವರಿಗೆ ಸಲ್ಲುತ್ತದೆ. ಅಪ್ಪ ಬಸವಣ್ಣನವರು ಉದಾತ್ತ ಸಾಮಾಜಮುಖಿ ಚಿಂತನೆಯುಳ್ಳ ಕೇವಲ ವ್ಯಕ್ತಿಯಲ್ಲ, ಅದ್ಭುತ ಶಕ್ತಿ.

ಡಾ|| ವೀರಣ್ಣ ರಾಜೂರ ಅವರು ಬಸವಣ್ಣನವರು ಭಾರತದ ಪ್ರಥಮ ಸ್ವತಂತ್ರ ವಿಚಾರವಾದಿ ಎಂದು ಕರೆದರೆ,

ಚಂದ್ರಶೇಖರ ಪಾಟೀಲ ಅವರು ಒಂದು ಹೊಸ ಆಯಾಮಾ ಸೃಷ್ಠಿಸಬೇಕಾದರೆ 3 ಮಹತ್ವದ ಅಂಶಗಳು ಇರುತ್ತವೆ. ಅವು

ಸಿದ್ಧಾಂತ,
ಸಂಘಟಣೆ,
ಸಂಘರ್ಷದಿಂದ ಬೆಳೆದು ಬರಬೇಕು. ಬಸವಣ್ಣನವರು ಈ 3 ಹಂತಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಬಸವಣ್ಣನವರು ಕೇವಲ ವ್ಯಕ್ತಿಯಲ್ಲ. “ಮೌಲ್ಯಗಳ ಒಂದು ಮೊತ್ತ” ಎಂದು ಉದ್ಘಾರ ತೆಗೆದಿದ್ದಾರೆ.

ಇಂತಹ ಅಪ್ಪ ಬಸವಣ್ಣನವರು ಬರುವ ಪೂರ್ವದಲ್ಲಿ ಇದ್ದಂತಹ ಸಾಮಾಜಿಕ, ಧಾರ್ಮಿಕ, ರಾಜಕೀಯ, ಮತ್ತು ಸಾಹಿತ್ಯಿಕ, ಸಾಂಸ್ಕೃತಿಕ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ನೋಡೋಣ.

ವೇದಗಳ ಕಾಲದಿಂದ ಹೆಚ್ಚಾಗಿ ಉನ್ನತ ವರ್ಗದವರ ಧರ್ಮ ಎನ್ನಿಸಿಕೊಂಡಿದ್ದ ವೈದಿಕ ಧರ್ಮ ಆಚರಣೆಯಲ್ಲಿತ್ತು, ಈ ಧರ್ಮದ ಆಚಾರ ವಿಚಾರಗಳು, ನೀತಿ ನಿಯಮಗಳು ಜನಸಾಮಾನ್ಯರಿಗೆ ಗಗನ ಕುಸುಮವಾಗಿದ್ದವು.
ಅಂದರೆ ಜನಸಾಮಾನ್ಯರಿಗೆ ಭಯದ ವಾತಾವರಣವನ್ನು ಸೃಷ್ಠಿಮಾಡಿದ್ದರು.

ಅಂದರೆ ಧರ್ಮ,
ದೇವರು,
ದೇವಾಲಯಗಳು,
ಪೌರೋಹಿತಶಾಹಿ ವರ್ಗ,
ಮೌಢ್ಯತೆಯಿಂದ ಕೂಡಿದ ಸಂಪ್ರದಾಯಗಳ ಆಚರಣೆ,
ವಾಮಾಚಾರಾ,
ಹೋಮ ಹವನ,
ಪ್ರಾಣಿ ಬಲಿ,
ದೇವದಾಸಿ ಪದ್ದತಿ,
ಸತಿ ಸಹಗಮನ ಪದ್ದತಿ
ಒಟ್ಟಾರೆಯಾಗಿ

ಧರ್ಮ ಎನ್ನುವದು ಶೋಷಣೆಯ ಕೇಂದ್ರವಾಗಿತ್ತು. ಮನುಷ್ಯನಿಗೆ ಹಾವು ಕಚ್ಚಿ ವಿಷವೇರಿ ಸಾಯುವುದಕ್ಕಿಂದ, ಹಾವು ಕಚ್ಚಿದ ಭಯಕ್ಕೆ ಸಾಯುತ್ತಾನೆ ಎನ್ನುವಂತೆ ಜನಸಾಮಾನ್ಯರು ಧರ್ಮದ ವಿಷಯವನ್ನು ಅದರ ಸೂಕ್ಷ್ಮಗಳನ್ನು ತಿಳಿಯದಂತೆ ಭಯದ ವಾತಾವರಣವನ್ನು ಸೃಷ್ಠಿಮಾಡಿದ್ದರು.

ಧಾರ್ಮಿಕ ಸ್ಥಿತಿ:

ಜೈನಧರ್ಮ : ಅಹಿಂಸಾ ಪರಮೋ ಧರ್ಮಃ ಎಂದು ಪ್ರತಿಪಾದಿಸಿದರೂ, ಜೈನ ಧರ್ಮದ ಕಟ್ಟುನಿಟ್ಟಿನ ಆಚರಣೆಗಳು ಜನಸಾಮಾನ್ಯರನ್ನು
ತಲುಪಲಿಲ್ಲ.

ಜೊತೆಗೆ ಸ್ತ್ರೀಯರಿಗೆ ಮೋಕ್ಷವಿಲ್ಲ ಎಂದು ಪ್ರತಿಪಾದಿಸಿದವು. ಹೀಗಾಗಿ ಈ ಧರ್ಮವನ್ನು ಆಚರಿಸುವುದೆಂದರೆ ದೇಹ ದಂಡನೆಯ ಜೊತೆಗೆ ಮೋಕ್ಷ ಸಂಪಾದನೆಯೇ ಮುಖ್ಯ ಉದ್ಧೇಶವಾಗಿತ್ತು.

ಬೌದ್ಧ ಧರ್ಮ: “ಆಸೇಯೇ ದುಖಃಕ್ಕೆ ಮೂಲ” ಎಂಬ ಮುಖ್ಯ ಸಂದೇಶವಾಗಿದ್ದರೂ ತ್ರಿಪೀಠಕಗಳನ್ನು ಮತ್ತು ಅಷ್ಟಾಂಗ ಮಾರ್ಗಗಳನ್ನು ಹೇಳಿದರೂ, ರಾಜಾಶ್ರಯವನ್ನು ಪಡೆದು, ದೇಶ ವಿದೇಶಗಳಿಗೆ ವ್ಯಾಪಿಸಿತು. ಮುಂದೆ ಹೀನಯಾನ, ಮಹಾಯಾನ ಪಂಗಡಗಳಾಗಿ ಬೇರ್ಪಟ್ಟು ಪ್ರಾರಂಭದ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಮತ್ತು ಜನಸಾಮಾನ್ಯರನ್ನು ತಲುಪುವಲ್ಲಿ ವಿಫಲವಾಯಿತು.

ಮುಂದೆ ಆಚಾರತ್ರಯರಾದ ಶಂಕರಾಚಾರ್ಯರು,
ರಾಮಾನುಜಚಾರ್ಯರು,
ಮಧ್ವಾಚಾರ್ಯರು
ಬಂದರೂ ಕೂಡ ತಮ್ಮದೇ ಆದ ವಿಶಿಷ್ಠ ತತ್ವ ಸಿದ್ಧಾಂತಗಳನ್ನು ಹೇಳಿದರು. ಆದರೆ ಅವು ಕೇವಲ ಉನ್ನತ ವರ್ಗದವರಿಗೆ ಮಾತ್ರ ತಲುಪಿದವು.

ಹೀಗಾಗಿ ಜನಸಾಮಾನ್ಯರ ಮನಸ್ಥಿತಿಯನ್ನು ಅರಿಯುವ, ಅವರ ಭಾವನೆಗಳಿಗೆ ಸ್ಪಂದಿಸುವ ಮತ್ತು ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ವ್ಯಕ್ತಿ ಅಥವಾ ಧರ್ಮ ಯಾವುದೂ ಬರಲಿಲ್ಲ.

ಸಾಮಾಜಿಕ ಸ್ಥಿತಿ:

ವರ್ಗ, ವರ್ಣ, ಆಶ್ರಮಗಳ ಶ್ರೇಣಿಕೃತ ಸಮಾಜದಲ್ಲಿ ಬಡವ ಬಲ್ಲಿದ, ಮೇಲು ಕೀಳು, ಸ್ತ್ರೀ ಪುರುಷ, ಎಂಬ ಬೇದಭಾವದಿಂದ ಮತ್ತು ಅಜ್ಞಾನ, ಮೌಢ್ಯತೆಗಳಿಂದ ತುಂಬಿತ್ತು.

ನಾವೂ ಇತಿಹಾಸದಲ್ಲಿ ಇಜಿಪ್ತ ನಾಗರಿಕತೆಯನ್ನು ಜಗತ್ತಿನಲ್ಲಿಯೇ ಅತ್ಯಂತ ಮುಂದುವರೆದ ನಾಗರಿಕತೆ ಆಗಿತ್ತು, ಆದರೆ ಗುಲಾಮ ಗಿರಿ ಅದಕ್ಕೆ ಒಂದು ಕಪ್ಪು ಚುಕ್ಕೆ ಆಗಿತ್ತು ಎಂಬುದನ್ನು ಓದಿದ್ದೆವೆ. ಗುಲಾಮರನ್ನು ಅತ್ಯಂತ ಕೀಳಾಗಿ ಪಶುವಿನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ಅದೇ ರೀತಿ ಶೂದ್ರರೂ ಕೂಡ ಅತ್ಯಂತ ಹೀನಾಯವಾದ ಬದುಕನ್ನು ಬದುಕಬೇಕಾಗಿತ್ತು. ಅವರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವಿರಲಿಲ್ಲ. ಪಶುವಿನ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳುತ್ತಿದ್ದರು.

ಮಹಿಳೆಯರಿಗೂ ಕೂಡ ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ, ದೇವದಾಸಿ ಪದ್ದತಿ, ಯಾವುದೇ ಧಾರ್ಮಿಕ ಸಂಸ್ಕಾರವಿರಲಿಲ್ಲ. ವಿದ್ಯೆಯನ್ನು ಪಡೆಯುವಂತಿರಲಿಲ್ಲ. ಆಸ್ತಿಯಲ್ಲಿ ಹಕ್ಕಿರಲಿಲ್ಲ. ದೇವರ ಪೂಜೆ ಮಾಡುವಂತಿರಲಿಲ್ಲ., ದೇವಾಲಯಗಳಿಗೆ ಪ್ರವೇಶವಿರಲಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಕೂಡ ಶೂದ್ರರಂತೆ ಬದುಕಬೇಕಾಗಿತ್ತು.

ಇದಕ್ಕೆಲ್ಲ ಮೂಲ ಕಾರಣ ಅವರ ಅಜ್ಞಾನ ಮತ್ತು ಅಸಹಾಯಕತೆ ಆಗಿತ್ತು.

ಸಮಾಜ ಚಿಗುರೊಡೆದಾಗಿನಿಂದ ಜಾತಿಯತೆಯ ಬೇರು ಆಳವಾಗಿ ಬೆಳೆಯುತ್ತಲೆ ಬಂದಿದೆ.

ಅದರಷ್ಟೇ ಪ್ರಬಲವಾಗಿ ಸ್ತ್ರೀ ಪುರುಷರೆಂಬ ಬೇಧ ಭಾವ ಕೂಡ ಬೆಳೆದು ಬಂದಿದೆ. ಅಂತಹ ಕಾಲದಲ್ಲಿ ಸಮಾನತೆಯ ಸತ್ವಯುತ ಬೀಜ ಬಿತ್ತಿದವರು ನಮ್ಮ ಬಸವಾದಿ ಶರಣರು. “ಹೆಣ್ಣು ಶೂದ್ರಳು, ಅವಳು ಆಧ್ಯಾತ್ಮಿಕ ಸಾಧನೆಗೆ ಯೋಗ್ಯಳಲ್ಲ” ಎಂದಾಗ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ ಕಪಿಲಸಿದ್ಧಮಲ್ಲಿಕಾರ್ಜುನ ಎಂದು “ಹೆಣ್ಣಿಗೆ ದೈವತ್ವವನ್ನು” ತಂದು ಕೊಟ್ಟವರು ನಮ್ಮ ಶರಣರು.

ಕೂಟಕ್ಕೆ ಸತಿ ಪತಿ ನಾಮವಲ್ಲದೆ, ಅರಿವಿಂಗೆ ಬೇರೊಂದೊಡಲುಂಟೆ” ಎಂದು ಆಯ್ದಕ್ಕಿ ಲಕ್ಕಮ್ಮ ಪ್ರಶ್ನಿಸಿದಳು. ಅಪ್ಪ ಬಸವಣ್ಣನವರು ಮಹಿಳೆಯರಿಗೆ ಕೊಟ್ಟ ಸಾಮಾಜಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜೊತೆಗೆ ಆಧ್ಯಾತ್ಮಿಕ ಸಾಧನೆಯ ಸದುಪಯೋಗ ಪಡೆದು ಸಾಧನೆಯ ಶೀಖರವೇರಿ, ಜಗಕೆ ಮಾದರಿಯಾದರು ನಮ್ಮ ಶರಣೆಯರು.

ಸಾಹಿತ್ಯಿಕ ಸ್ಥಿತಿ:

ಕ್ರಿ ಶ 450 ರಲ್ಲಿ ಹಲ್ಮಿಡಿ ಶಾಸನದ ಮೂಲಕ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಂಪರೆ 10 ನೇ ಶತಮಾದಲ್ಲಿ ಪ್ರಬುದ್ಧಮಾನವಾಗಿ ಬೆಳೆಯಿತು. ಪಂಪ,ರನ್ನ, ಜನ್ನ, ಪೊನ್ನ ಮೊದಲಾದವರು ಉನ್ನತ ಮಟ್ಟದ ಸಾಹಿತ್ಯವನ್ನು ರಚಿಸಿದರು. ಆದರೆ ಇವರ ಕೃತಿಗಳು ಜನಸಾಮಾನ್ಯರನ್ನು ತಲುಪಲಿಲ್ಲ. ಇವರ ಸಾಹಿತ್ಯವು ಪ್ರೌಢಿಮೆಯಿಂದ ಕೂಡಿದ್ದು ಬುದ್ದಿವಂತರಿಗೆ ಮಾತ್ರ ಎನ್ನುವಂತಾಗಿತ್ತು. ವಚನಗಳು ಬಸವಾದಿ ಶರಣರ ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ಒಳಗೊಂಡ, ಸಾಧನೆಯ ಸಿದ್ಧಿಯ ಅನುಭವ ಪೂರ್ಣ ವಾಙ್ಮಯ. ಈ ವಚನಗಳು ಮರ್ತ್ಯರ ಮನದ ಮೈಲಿಗೆ ಕಳೆಯಲು ಬಂದ ಉನ್ನತ ಜನಪರ ಸಾಹಿತ್ಯ. ಅಕ್ಷರ ಅರಿಯದವರು ಕೂಡ ಈಡಿ ಜಗಕೆ ಅಕ್ಷರದ ಬೆಳಕು ನೀಡಿದರು.

ಸಾಂಸ್ಕೃತಿಕ ಸ್ಥಿತಿ:
ದ್ರಾವಿಡರು ಉತ್ತರ ಭಾರತದಿಂದ ವಲಸೆ ಬಂದವರಾಗಿದ್ದರಿಂದ ದಕ್ಷಿಣ ಭಾರತದಲ್ಲಿ ಆರ್ಯ ದ್ರಾವಿಡ ಮಿಶ್ರ ಸಂಸ್ಕೃತಿ ಬೆಳೆದು ಬಂದಿತ್ತು.
ದೇವರು ಧರ್ವ, ಪುರೋಹಿತಶಾಹಿ, ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ ಇವೆಲ್ಲ ಕೇವಲ ಉಚ್ಛ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದವು. ಸಂಸ್ಕಾರದಿಂದ ಬರುವಂತಹುದು ಸಂಸ್ಕೃತಿ. ಇದು ಮಾನವೀಯ ಮೌಲ್ಯಗಳನ್ನು ಒಳಗೊಂಡಿರಬೇಕಾಗಿತ್ತು. ಮಾನವೀಯ ಮೌಲ್ಯಗಳಾದ ಪ್ರೀತಿ, ಸ್ನೇಹ, ಕರುಣೆ, ಸಹನೆ, ಬಂಧುತ್ವ, ಪರಸ್ಪರರನ್ನು ಗೌರವಿಸುವದು, ಬದುಕುವ ಹಕ್ಕು ಇವೆಲ್ಲ ಕೇವಲ ಗ್ರಂಥಸ್ತ ಭಾಷೆಯಾಗಿ ಉಳಿಯಿತು. ಜನಸಾಮಾನ್ಯರು ಇವೆಲ್ಲವುಗಳಿಂದ ವಂಚಿತರಾಗಿದ್ದರು.

ಬಸವ ಸಾರಿದನಂದು ಕುಶಲದಲಿ ವಚನಗಳ
ಮುಸುಕಿರುಳು ಹರಿದು ನಸುಕಾತು| ಜಗದೊಳಗೆ
ಹೊಸಮತದ ಸೂರ್ಯ ಉದಯಿಸಿದ||

ಎಂಬ ಜಾನಪದರ ತ್ರಿಪದಿಯಂತೆ ಮೌಢ್ಯತೆಯಲ್ಲಿ ಮುಳುಗಿದ, ಅಂಧಕಾರದಿಂದ ಕೂಡಿದ, ಅಸ್ಪೃಶ್ಯತೆಯ ಕಳಂಕದಿಂದ ಸಮಾಜದಿಂದ ದೂರಾಗಿದ್ದ ಎಲ್ಲ ಕೆಳಸ್ಥರದ ಜನಸಾಮಾನ್ಯರನ್ನು ಅಸಮಾನ್ಯರನ್ನಾಗಿ ಬೆಳಗಿಸಲು, ಅವರಲ್ಲಿ ಆತ್ಮಸ್ಥೈರ್ಯ ತುಂಬಲು, ಹೊಸಮತದ ಸೂರ್ಯನಾಗಿ, ಭೂವಿಯ ಬೆಳಕಾಗಿ, ಚಂಚಲ ಚಿತ್ತವ ಅಚಲಗೊಳಿಸಲು ಇಷ್ಟಲಿಂಗದಿಂದ, ಅಷ್ಟಮದಗಳನ್ನು ಅಳಿಸುವ ಸೂತ್ರ ಹಿಡಿದು, ಹಸಿವು ಮುಕ್ತ ಸಮಾಜ ನಿರ್ಮಿಸಲು ಅಪ್ಪ ಬಸವಣ್ಣನವರು ಪ್ರತಿಸೂರ್ಯನಂತೆ ಮೂಡಿಬಂದರು.

ಮನುಸ್ಮೃತಿಯಲ್ಲಿ ಮನು ಹೇಳಿರುವಂತೆ “ಬ್ರಾಹ್ಮಣೋ ಧರ್ಮ ಮೂಲಃ” ಅಂತ ಇದ್ದದ್ದನ್ನು “ದಯವೇ ಧರ್ಮದ ಮೂಲ” ಅಂತಾ ಬದಲಾಯಿಸಿದವರು .
ಮನುಸ್ಮೃತಿಯ 4 ಆಧ್ಯಾಯ, 80 ನೇ ಶ್ಲೋಕದಲ್ಲಿ : ಶೂದ್ರನಿಗೆ ಬುದ್ಧಿ ಹೇಳಬಾರದು, ಓದು ಕಲಿಸಬಾರದು, ಯಜ್ಞದ ಹವಿಸ್ಸಿನಲ್ಲಿ ಶೇಷವನ್ನು ಕೊಡಬಾರದು. ಧರ್ಮೋಪದೇಶವನ್ನು ಮತ್ತು ವ್ರತಾಚರಣೆಗಳನ್ನು ಹೇಳಿಕೊಡಬಾರದು.
ಒಂದು ವೇಳೆ ಇದೇ ಧರ್ಮ ನೀತಿ ಮುಂದುವರೆದಿದ್ದರೆ. ನಾವ್ಯಾರು ಮನುಷ್ಯರ ರೀತಿ ಬದುಕಲು ಸಾಧ್ಯವಗುತ್ತಿರಲಿಲ್ಲ. ನಮ್ಮೆಲ್ಲರ ಬದುಕು ಹಸನಾಗಲು, ಈಶನನ್ನು ವಶಮಾಡಿಕೊಂಡು ಸಾತ್ವಿಕ ಮತ್ತು ಸಾರ್ಥಕ, ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಕಾರಣವೇ ಅಪ್ಪ ಬಸವಣ್ಣನವರು ಹಾಕಿಕೊಟ್ಟ ವೈಚಾರಿಕ ತತ್ವಗಳನ್ನು ಒಳಗೊಂಡ, ನಡೆನುಡಿ ಸಿದ್ಧಾಂತವನ್ನು ಸಾರಿದ ಮಾನವೀಯ ದರ್ಮ. ಅಥವಾ ದುಡಿಯುವ ವರ್ಗದವರ ಧರ್ಮ. ಅದೇ ಬಸವ ಧರ್ಮ.

ಬಸವಣ್ಣನವರ ಕುರಿತು ನಮಗೆ 21 ಶಾಸನಗಳು ಲಭ್ಯವಾಗಿವೆ. ಡಾ|| ಪಾಂಡುರಂಗ ದೇಸಾಯಿ ಇವರ ಪ್ರಕಾರ ಬಸವಣ್ಣನವರು ಕ್ರಿ ಶ 1105 ರಲ್ಲಿ ಬಾಗೇವಾಡಿಯ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಜನಿಸಿದರೆಂದು ಉಲ್ಲೇಖಿಸಲಾಗಿದೆ.
ಬಾಗೇವಾಡಿಯ ಅಗ್ರಹಾರಗಳ ಒಡೆಯರಾದ “ಮಾದಿರಾಜನ ಮಗ ಬಸವರಾಜ” ಎಂದು ಅರ್ಜುನವಾಡ ಶಾಸನದಲ್ಲಿ ದೊರೆಯುವ ವಿಷಯ.
ಬಸವಣ್ಣನವರು ತನ್ನ ಅಕ್ಕನಿಗೆ ಧಾರ್ಮಿಕ ಸಂಸ್ಕಾರ ಇಲ್ಲದಿರುವುದು, ದೇವರ ಪೂಜೆಯನ್ನು ಹೆಣ್ಣುಮಕ್ಕಳು ಮಾಡುವಂತಿಲ್ಲ, ಅಸ್ಪ್ರುಶ್ಯರನ್ನು ಮುಟ್ಟುವಂತಿರಲಿಲ್ಲ. ಸಮಾಜವನ್ನು ತಿದ್ದಬೇಕಾದವರು, ಜನರಿಗೆ ಧರ್ಮಮಾರ್ಗ ತೋರಬೇಕಾದವರೇ ತಾರತಮ್ಯ ಮಾಡುವುದನ್ನು ಮತ್ತು ಅವರ ನೆಡೆಯೊಂದು ಪರಿ, ನುಡಿಯೊಂದು ಪರಿ ಎಂಬುದನ್ನು ಗಮನಿಸಿದರು.
ಎನಯ್ಯ ವಿಪ್ರರು ನುಡಿದಂತೆ ನಡೆಯರು, ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ” ಎಂದು ತನ್ನ ಅಕ್ಕನಿಗೆ ಇರದ ಧಾರ್ಮಿಕ ಆಚರಣೆಯಾದ ಉಪನಯನವನ್ನು ತಿರಸ್ಕರಿಸಿದರು. ಕೂಡಲ ಸಂಗಮಕ್ಕೆ ಬಂದು ಈಶಾನ್ಯ ಗುರುಗಳಿಂದ ವೇದಾಧ್ಯಯನಗಳನ್ನು ಮಾಡಿದರು.

ಮುಂದೆ ಮಾವ ಬಲದೇವನ ಜೊತೆಗೆ ಮಂಗಳವೇಡೆಗೆ ಹೋಗಿ ಕರಣಿಕರಾಗಿ, ಬಿಜ್ಜಳನ ಭಂಡಾರದ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮುಂದೆ ಕಲ್ಯಾಣಕ್ಕೆ ಬಂದು ಕ್ರಾಂತಿಯ ಕಿಡಿ ಹೊತ್ತಿಸಿ ಜಗತ್ತೆ ಹೊರಳಿ ನೋಡುವಂತಹ, ಸಾಮಾನ್ಯರನ್ನು ಶಿವಯೋಗಿಗಳನ್ನಾಗಿ, ಭಕ್ತರನ್ನು ಲಿಂಗ-ಜಂಗಮವಾಗಿ, ಕಾಯಕ ತತ್ವದ ಜೊತೆಗೆ ಸ್ವಾಭಿಮಾನದ ಸ್ವತಂತ್ರ ಬದುಕನ್ನು ಕಟ್ಟಿಕೊಟ್ಟರು.

ಐನಸ್ಟಿನ ಅವರು ಹೇಳುವಂತೆ “ಧರ್ಮರಹಿತ ವಿಜ್ಞಾನ ಕುಂಟು, ವಿಜ್ಞಾನ ರಹಿತ ಧರ್ಮ ಕುರುಡು” ಎನ್ನುವಂತೆ ಅಂದರೆ ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ವೈಚಾರಿಕತೆಯ ತಳಹದಿಯ ಮೇಲೆ ಅಂತರಂಗದ ಅರಿವನ್ನು ಜಾಗೃತ ಮಾಡಲು ಮತ್ತು ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದೆಡೆ ಸಾಗಲು ಅಂಗದ ಮೇಲೆ ಲಿಂಗವನ್ನು ಕೊಟ್ಟರು. ಆತ್ಮ ವಿಶ್ವಾಸವನ್ನು ತುಂಬಿದರು. ಮೇಲು ಕೀಳು ಎಂಬ ಬೇಧಭಾವನ್ನು ಹೋಗಲಾಡಿಸಲು ಕಾಯಕಕ್ಕೆ ದೈವತ್ವವನ್ನು ತಂದುಕೊಟ್ಟರು.

ಪಂಚಾಚಾರಗಳೆ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿ, ಷಟ್ಸ್ಥಲಗಳೇ ಆತ್ಮವಾಗಿ ಸಾಮಾನ್ಯನನ್ನು ಶರಣರನ್ನಾಗಿಸಿದವು. ಪಂಚಾಚಾರಗಳು ನಮಗೆ ನಡೆ ನುಡಿ ತತ್ವದ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಕಲಿಸುತ್ತದೆ. ಅಷ್ಟಾವರಣಗಳು ನಮ್ಮ ಅಂತರಂಗದ ಅರಿವನ್ನು ಜಾಗೃತಗೊಳಿಸುತ್ತವೆ. ಷಟ್ಸ್ಥಲಗಳು ನಮ್ಮನ್ನು ಅಂತರಂಗದ ಪಯಣದ ಜೊತೆಗೆ ಭಕ್ತಿ ಮಾರ್ಗದ ಮೂಲಕ ಐಕ್ಯದ ಕಡೆಗೆ ಕೊಂಡೊಯ್ಯುತ್ತವೆ. ಹೀಗೆ ಜನಸಾಮಾನ್ಯರಿಗೂ ಆಧ್ಯಾತ್ಮಿಕದ ಸಾಧನೆಯ ಹಾದಿ ತೋರಿ ಕಲ್ಯಾಣವನ್ನು ಅವಿಮುಕ್ತ ಕ್ಷೇತ್ರವಾಗಿಸಿ ಜಗಜ್ಯೋತಿಯಾಗಿ ಬೆಳಗಿದರು.

ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಾಸೋಹ ಎಂಬ ವಿಶಿಷ್ಠ ಪರಿಕಲ್ಪನೆಯನ್ನು ಪ್ರಾರಂಭಿಸಿದರು. ಕಾಯಕದ ಮೂಲಕ ಬಂದ ಆದಾಯದಲ್ಲಿ ಸ್ವಾಭಿಮಾನದಿಂದ ಜಂಗಮದಾಸೋಹಗೈದು ತಮ್ಮ ಜೀವನವನ್ನು ಪಾವನಗೈದರು.

ಉಂಡು ತೇಗಿತು ಲೋಕ ಕೊಂಡಾಡಿ ಕಾಯಕವ
ಕಂಡಕಂಡಲ್ಲಿ ದಾಸೋಹ |
ಕಾಯಕವ ಕಂಡ ಜೀವನದ ಹೊಸಮಾತು||

ಕಾಯಕದ ರಾಯಭಾರಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ನೂಲಿಯ ಚಂದಯ್ಯ ಶರಣರ ವಚನಗಳು ಕಾಯಕ ತತ್ವವನ್ನು ಸಾರುವ ಉನ್ನತ ವಚನ ರಚನೆಗೈದಿದ್ದಾರೆ.

ಪಾಪ ಪುಣ್ಯ, ಸರ್ಗ- ನರಕ, ಮೇಲು ಕೀಳು, ಕರ್ಮ ಸಿದ್ಧಾಂತ, ಇಂತಹ ಅವೈಜ್ಞಾನಿಕತೆಯಿಂದ ಕೂಡಿದ ಕರ್ಮ ಸಿದ್ದಾಂತ ತಳ್ಳಿಹಾಕಿದರು. ಸೂತಕಗಳನ್ನು ಅಲ್ಲಗಳೆದು ಅವುಗಳ ವೈಜ್ಞಾನಿಕ ಕಾರಣಗಳನ್ನು ನೀಡಿ ಜನರಲ್ಲಿ ವೈಚಾರಿಕತೆಯ ಅರಿವು ತುಂಬಿದರು. ಸತ್ಯ ಶುದ್ಧ ಕಾಯಕ, ನಿತ್ಯ ಲಿಂಗಾರ್ಚಣೆ, ಭಕ್ತಿಯ ದಾಸೋಹ, ದಯವೇ ಧರ್ಮದ ಮೂಲ ಎನ್ನುತ್ತ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದರು.

ಕಲ್ಯಾಣದಲ್ಲಿ ನೀಡುವರುಂಟು, ಬೇಡುವರಿಲ್ಲ ಎನ್ನುವಂತಹ ಸಮೃದ್ಧವಾದ ಸಾತ್ವಿಕ ಸಮಾಜವನ್ನು ಪ್ರಾಯೋಗಿಕವಾಗಿ ಕಟ್ಟಿ 770 ಅಮರಗಣಂಗಳು ನಾಡಿಗೆ ನೀಡಿದ ಕೀರ್ತಿ ಅಪ್ಪ ಬಸವಣ್ಣನವರದು.

770 ಅಮರಗಣಂಗಳಲ್ಲಿ 33 ಜನ ಶರಣೆಯರಿದ್ದರು ಎನ್ನುವುದೇ ದೊಡ್ಡ ಸಾಧನೆ. ಇಡಿ ಜಗತ್ತಿನಲ್ಲಿಯೇ ಮಹಿಳೆಯರಿಗೆ ಸಮಾನತೆಯ ಜೊತೆಗೆ ಅಭವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟ , ಅಂತರಂಗದ ಅನುಭವದ ಅಭಿವ್ಯಕ್ತಿಯಾದ, ಸಾಹಿತ್ಯಕವಾಗಿ ಸಾಮೂಹಿಕ ವಚನ ರಚನೆಯಲ್ಲಿ ಪಾಲ್ಗೊಂಡಿದ್ದು ಜಗತ್ತಿನಾದ್ಯಂತ ಬೇರೆಲ್ಲೂ ಕಂಡುಬರುವದಿಲ್ಲ.
ಅದಕ್ಕಾಗಿಯೇ : ಅರ್ಥರ್ ಮೆಲ್ಟ್ ಎನ್ನುವ ಆಂಗ್ಲ ಲೇಖಕ, ಬಸವಣ್ಣನವರು ಭಾರತದ ಮೊದಲ ಸ್ವತಂತ್ರ ಚಿಂತಕ” ಮತ್ತು ಭಾರತದ ಮಾರ್ಟಿನ್ ಲೂಥರ್ ಎಂದು ಕರೆದಿದ್ದಾರೆ.

ಡಾ|| ಬಿ ಆರ್ ಅಂಬೇಡ್ಕರರವರು “ನನಗೆ ಮೊದಲೇ ಬಸವಣ್ಣನವರ ತತ್ವಗಳು ತಿಳಿದಿದ್ದರೆ ಸಂವಿಧಾನವು ಇನ್ನಷ್ಟು ಉತ್ಕೃಷ್ಠವಾಗಿರುತ್ತಿತ್ತು ಎಂದಿದ್ದಾರೆ.

ಗಾಂಧಿಜಿ :” “ಬುದ್ಧನಿಗೆ ಸಿಕ್ಕಂತಹ ರಾಜ ಅಶೋಕ ಚಕ್ರವರ್ತಿ ಬಸವಣ್ಣನವರಿಗೆ ಸಿಕ್ಕಿದ್ದರೆ 12 ನೇ ಶತಮಾನದಲ್ಲಿಯೇ ಬಸವ ತತ್ವ ಜಗತ್ಪ್ರಸಿದ್ಧವಾಗುತ್ತಿತ್ತು” ಎಂದಿದ್ದಾರೆ.

1215 ರಲ್ಲಿ ಫ್ರಾನ್ಸನಲ್ಲಿ ಅಲ್ಲಿಯ ರಾಜ ಮತ್ತು ಜಮೀನುದಾರರ ನಡುವೆ “ಮ್ಯಾಗ್ನಾಕಾರ್ಟ್” ಒಪ್ಪಂದವಾಯಿತು. ಸಮಾನತೆಯನ್ನು ಸಾರುವ ಈ ಒಪ್ಪಂದವನ್ನು ಆಧಾರವಾಗಿಟ್ಟುಕೊಂಡು 17 ಯುರೋಪ ರಾಷ್ಟ್ರಗಳು ತಮ್ಮ ಸಂವಿಧಾನವನ್ನು ರಚಿಸಿದವು.
ಆದರೆ ಬಸವಣ್ಣನವರು ಇದಕ್ಕೆ 100 ವರ್ಷ ಮುಂಚೆಯೇ ಇಂತಹ ಸಮಾನತೆಯ ತತ್ವವನ್ನು ಹೇಳಿದ್ದರು. ಆದರೆ ವಿಪರ್ಯಾಸ ಮಾನವೀಯ ತತ್ವಗಳನ್ನು ಒಳಗೊಂಡ ಜಗದ ಧರ್ಮವಾಗಬೇಕಿದ್ದ ಜನಸಾಮಾನ್ಯರ ಸರ್ವ ಜನಾಂಗಕ್ಕೆ ಸಲ್ಲುವ ಧರ್ಮ ನಮ್ಮ ಅಜ್ಞಾನ, ಅಹಂಕಾರದಿಂದ ಹಿನ್ನೆಡೆ ಕಂಡಿತು.

ಮಾನವ ಹಕ್ಕುಗಳ ಅರಿವಿಲ್ಲದ ಕಾಲದಲ್ಲಿ ಅರಿವು ಮೂಡಿಸಿ ಸಾಮಾನ್ಯನು ಅಸಮಾನ್ಯನಾಗಿ ಬೆಳೆಯಬಹದು ಎಂಬುದನ್ನು ಅಪ್ಪ ಬಸವಣ್ಣನವರು ಸಾಧಿಸಿ ತೋರಿಸಿದರು.

 

 

 

 

 

 

 

 

 

 

ಸವಿತಾ. ಎಮ್ ಮಾಟೂರ
ಇಲಕಲ್ಲ

Don`t copy text!