ನೆನೆಯುವೆ ಬಸವಾದಿ ಶರಣರಾ

ನೆನೆಯುವೆ ಬಸವಾದಿ ಶರಣರಾ

ಸಮಾಜದ ಸಮತೆಗಾಗಿ ಶ್ರಮಿಸಿದ
ಲಿಂಗನಿಷ್ಟೆಯ ನಡೆ ನುಡಿಯ ಅರುಹಿದ
ಭಕ್ತಿ ಮಾರ್ಗದಿ ಮುಕ್ತಿಪಥವ ತೋರಿದ
ಜಗಜ್ಯೋತಿ ಕ್ರಾಂತಿಯೋಗಿ ಬಸವಣ್ಣ||

ಮದ್ದಳೆಯ ನುಡಿಸಿ ಮಾಯೆಯ ಗೆಲಿದ
ಅರಿವು ಆಚಾರ ಅನುಭಾವದಾಳಕ್ಕಿಳಿದ
ಬೆಡಗಿನ ವಚನದ ವ್ಯೊಮಕಾಯ ಪ್ರಭುದೇವ||

ಭೋಗಕ್ಕೊಲಿಯದೆ ಯೋಗಕ್ಕೊಲಿದು
ಆತ್ಮ ಸಂಗಾತಿಯ ಅನುದಿನ ಅರಸಿ
ಅನುಭಾವ ಮಂಟಪದಿ ಅರಳಿ
ಕದಳಿಯ ಸೇರಿದ ಅಕ್ಕಮಹಾದೇವಿ||

ಅಹಂಕಾರ ಅಳಿದು ಶಿವಯೋಗಿಯಾಗಿ
ಸಿದ್ಧ ಪರ್ವತವನೇರಿದ ಸಿದ್ಧರಾಮ||
ಜ್ಞಾನದ ಮೇರುಶಿಖರದ ಮೆಟ್ಟಿಲೇರಿದ
ಪಂಚಾಚಾರಕೆ ಪಲ್ಲವಿ ಹಾಡಿದ
ಕ್ರಿಯಾ ಜ್ಞಾನಿ ಚೆನ್ನಬಸವಣ್ಣ||

ಅರಸನಾದರೂ ಅಡವಿ ಅಲೆದು
ಕಟ್ಟಿಗೆ ಮಾರಿದ ಮೊಳಿಗೆ ಮಾರಯ್ಯ||
ಕಸ ಗೂಡಿಸಿ ಹಸನಾದಳು ಸತ್ಯಕ್ಕ
ಶರಣೆಯಾದಳು ಸೂಳೆ ಸಂಕವ್ವೆ ||

ಶರಣರಾ ನುಡಿಗೆ ಮರುಳಾದ ಧೀರ
ಕರಿ, ಸಿರಿಯನ್ನೊಲ್ಲೆಯೆಂದ ದಾಸಿಮಯ್ಯ
ಅರಿತು ಅನುಸರಿಸಿದವಳು ದುಗ್ಗಳೆ
ವೀರಗಣಾಚಾರಿಯಾದ ಮಾಚಿದೇವ
ಸತ್ಯ ಶುದ್ಧ ಕಾಯಕದ ಲಕ್ಕಮ್ಮ ||

ಎನೆಂದು ಬನ್ನಿಸಲಿ ಶರಣ ಸಂಕುಲವಾ
ಹೇಳುತಾ ಸಾಗಿದರೆ ಮಾತು ಸಾಲದು
ವೈವಿಧ್ಯತೆಯಲ್ಲಿ ಏಕತೆ ಮೆರೆದವರು
ಸಮತೆ ಸಾರುತ ಮೇರು ಶಿಖರವೇರಿದವರು
ಅಂಗಗುಣವಳಿದು ಲಿಂಗಗುಣಿಗಳಾದವರ||

ಸವಿತಾ ಮಾಟೂರು ಇಲಕಲ್ಲ

Don`t copy text!