ವೃತ್ತಿ ರೈಲ್ವೆ ಸಹಾಯಕ : ಪ್ರವೃತ್ತಿ ಶಿಕ್ಷಕ
ಬಹುತೇಕರು ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಮ್ಮ ‘ಲೈಫ್ ಸೆಟ್ಲ್’ ಆಯ್ತು ಎಂದು ನಿಟ್ಟುಸಿರು ಬಿಟ್ಟು ತಮ್ಮ ನೌಕರಿ ತಮ್ಮ ಸಂಸಾರ ಚನ್ನಾಗಿ ನಿರ್ವಹಿಸುತ್ತಾರೆ. ಈ ವೃತ್ತಿ ಬದುಕಿನಾಚೆ ನಮಗೆ ಇನ್ನೊಂದು ಸಾಮಾಜಿಕ ಜವಾಬ್ದಾರಿ ನಮಗಿದೆ ಎಂದು ಯೋಚಿಸುವರು ತುಂಬಾ ಅಪರೂಪ. ತಮ್ಮ ವೃತ್ತಿ ಬದುಕಿನ ಜೊತೆಗೆ ಒಂದಿಷ್ಟು ಸಮಯವನ್ನು ಊರಿನ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮೀಸಲಿಟ್ಟು ವಿನೂತನ ಪ್ರಯತ್ನಿಸುತ್ತಿರುವ ‘ರೈಲ್ವೆ ಸಿಗ್ನಲ್ ಮ್ಯಾನ್’ ಈಗ ‘ಸ್ಕೂಲ್ ಮಾಸ್ತರ್’ ಆಗಿ ಕರೆಸಿಕೊಳ್ಳುತ್ತಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಲ್ಲಿ ಸಹಾಯಕ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುವ ವೀರಪ್ಪ ತಾಳದವರ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದವರು.
ಕುಟುಂಬ ನಿರ್ವಹಣೆಗೆ ಸರ್ಕಾರಿ ನೌಕರಿ ಇದೆ, ಉತ್ತಮ ಸಂಬಳ ಕೂಡ ಇದೆ, ಹಾಯಾಗಿ ಬದುಕು ನಡೆಸಬಹುದು, ಆದರೆ ಬದುಕು ಎಂದರೆ ಇಷ್ಟೇನಾ?
ನಾನೊಬ್ಬನೇ ಚನ್ನಾಗಿ ಜೀವನ ನಡೆಸಿದರೆ ಸಾಲದು, ನನ್ನಂತೆ ಇತರರು ನೆಮ್ಮದಿಯ ಬದುಕು ನಡೆಸಬೇಕು ಎನ್ನುವ ಘನವಾದ ಉದ್ದೇಶದಿಂದ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂದು ಹೊಸ ಯೋಜನೆ ರೂಪಿಸಿದರು. ಅದುವೇ “ಹಳ್ಳಿ ರಂಗಶಾಲೆ”
ನನ್ನೂರು ಯಾವಗಲ್ಲ, ಊರಿನ ಎಲ್ಲಾ ಮಕ್ಕಳು ಅಕ್ಷರ ಕಲಿಯಬೇಕು, ಶಾಲೆಯಲ್ಲಿ ಓದಿದರೂ ಅದೆಷ್ಟೋ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ, ಪ್ರತಿಭೆ ಇದ್ದಾರೂ ಅದನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಮಾರ್ಗದರ್ಶಕರ ಕೊರತೆ ತುಂಬಾ ಇತ್ತು, ಇದ್ದರಿಂದ ಮಕ್ಕಳ ಬಹುಮುಖ ಪ್ರತಿಭೆಗೆ ಹಿನ್ನಡೆಯಾಗುತ್ತಿತ್ತು, ಹೀಗಾಗಿ ಅಕ್ಷರ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನ, ಕಥೆ, ಕವನ, ಚಿತ್ರಕಲೆ, ಹಾಡು, ಜಾನಪದ ಕಲೆ ಹೀಗೆ ವಿವಿಧ ವಿಭಾಗದಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ “ಹಳ್ಳಿ ರಂಗ ಶಾಲೆ” ಎನ್ನುವ ಹೆಸರಿನಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ವೀರಪ್ಪ ಮಾಸ್ತರ್.
ವೀರಪ್ಪ ಅವರು ಮುಂಜಾನೆ 5 ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ 7ಗಂಟೆಗೆ ಮನೆಗೆ ವಾಪಸ್ಸಾಗುತ್ತಾರೆ. ಸಂಜೆ 7 ರಿಂದ 9 ಗಂಟೆಯ ವರೆಗೆ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಾರೆ. ವೀರಪ್ಪ ಅವರ ಜೊತೆ ತಮ್ಮ ಸ್ನೇಹಿತರು ಕೈಜೋಡಿಸಿ ಮಕ್ಕಳಿಗೆ ಅಕ್ಷರ ಕಲಿಸಲು ಸಮಯ ನೀಡುತ್ತಿದ್ದಾರೆ.ಕಳೆದ ಒಂದೂವರೆ ವರ್ಷದಿಂದ ಎಲೆಮರೆ ಕಾಯಿಯಂತೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವೀರಪ್ಪ ಅವರು ‘ಹಳ್ಳಿ ರಂಗಶಾಲೆ’ ನಡೆಸುತ್ತಿರುವುದು ತಮ್ಮ ಮನೆಯ ಕೋಣೆಯಲ್ಲಿ, ಮಕ್ಕಳಿಗೆ ಸಾಮಾನ್ಯ ಜ್ಞಾನ, ಬೇಸಿಕ್ ಕಲಿಕೆಯ ಜೊತೆಗೆ ಹಾಡು, ಭಾಷಣ, ನೃತ್ಯ, ಕವಾಯತ್ ಕಲಿಸುತ್ತಾರೆ. ವೀರಪ್ಪ ಅವರು ಒಬ್ಬ ಕವಿ, ಬರಹಗಾರ ಮತ್ತು ಅತ್ಯುತ್ತಮ ಛಾಯಾಗ್ರಹಕ ಕೂಡ ಹೌದು, ಹೀಗಾಗಿ ಅವರೇ ರಚಿಸಿದ ಕವಿತೆಗಳನ್ನು ಓದಿಸುವುದು, ಚಿತ್ರ ಕಲೆ ಬಿಡಿಸುವುದು, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ ಕುರಿತು ಸಾಮಾನ್ಯ ಜ್ಞಾನವನ್ನು ಬೋಧಿಸಿ ವಿದ್ಯಾರ್ಥಿಗಳು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅನುಕೂಲ ಆಗುತ್ತದೆ, ಹೆಚ್ಚಿನ ಅಂಕಗಳನ್ನು ಪಡೆಯಲು ಈಗಲೇ ಸಿದ್ಧತೆ ಮಾಡಿಸುವುದು ಅತ್ಯುತ್ತಮ ಎನ್ನುವುದು ವೀರಪ್ಪ ಅವರ ದೂರದೃಷ್ಟಿಯ ಆಲೋಚನೆ.
ತಮ್ಮ ‘ಹಳ್ಳಿ ರಂಗಶಾಲೆ’ ಉಚಿತ ತರಬೇತಿಯ ಎಲ್ಲಾ ಮಕ್ಕಳಿಗೂ ಪ್ರತ್ಯೇಕ ಸಮವಸ್ತ್ರ ಇವೆ, ಒಂದಿಷ್ಟು ಹಣ ದಾನಿಗಳು ನೀಡಿದರೆ, ಉಳಿದ ಹಣ ತಮ್ಮ ಸಂಬಳದ ದುಡ್ಡಿನಲ್ಲಿಯೇ ಖರ್ಚು ಮಾಡಿ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳು ಖರೀದಿಸಿ ಕೊಡಿಸುತ್ತಾರೆ. ಪ್ರತಿ ವರ್ಷ ಬರುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜೋತ್ಸವ ಕಾರ್ಯಕ್ರಮಗಳನ್ನು
ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನಗಳನ್ನು ವಿತರಣೆ ಮಾಡುವುದು, ದೇಶಾಭಿಮಾನ ಗೀತೆ, ಘೋಷಣೆಗಳನ್ನು ಕೂಗುತ್ತಾ ಊರೆಲ್ಲಾ ಸುತ್ತುತ್ತಾರೆ. ಯಾವುದೇ ಸರ್ಕಾರಿ – ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎನ್ನುವಂತೆ ವಿಶಿಷ್ಟವಾಗಿ ಆಚರಿಸುವ ‘ಹಳ್ಳಿ ರಂಗಶಾಲೆಯ’ ಪುಟ್ಟ ಯೋಚನೆ, ಯೋಜನೆ ಗದಗ ಜಿಲ್ಲೆಯಾದ್ಯಂತ ಮನೆಮಾತಾಗಿದೆ.
ಒಬ್ಬ ಸರ್ಕಾರಿ ನೌಕರ ತನ್ನ ಕರ್ತವ್ಯ ಜೊತೆ ಜೊತೆಗೆ ಮತ್ತೊಂದು ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಸಾಧ್ಯ ಎನ್ನುವುದು ವೀರಪ್ಪ ತಾಳದವರ ಅವರು ತೋರಿಸಿಕೊಟ್ಟಿದ್ದಾರೆ. ನಮಗೆ ದೊರೆತಿರುವ ಅಲ್ಪ ಸಮಯವನ್ನು ಮಕ್ಕಳ ಶೈಕ್ಷಣಿಕ ಕಲಿಕೆಗೆ ವಿನಿಯೋಗಿಸಬೇಕು, ನಮಲ್ಲಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚಿಕೊಳ್ಳಲು ನಾವು ಮನಸ್ಸು ಮಾಡಬೇಕು, ವೃತ್ತಿ ಬದುಕಿನ ಜೊತೆಗೆ ಪ್ರವೃತ್ತಿಯನ್ನು ತುಂಬಾ ಶ್ರದ್ಧೆಯಿಂದ ನಿಭಾಯಿಸಲು ನಾವು ಮುಂದಾಗಬೇಕು ಎನ್ನುವುದು ವೀರಪ್ಪ ಅವರ ಪಾಸಿಟಿವ್ ಥಿಂಕಿಂಗ್.
ವೀರಪ್ಪ ಅವರ ‘ಹಳ್ಳಿ ರಂಗಶಾಲೆ’ ಕಂಡು ಜಿಲ್ಲೆಯ ಸುಮಾರು ಇಪ್ಪತ್ತು ಕಡೆಗಳಲ್ಲಿ ವಿವಿಧ ಹೆಸರಿನಲ್ಲಿ ತೆರೆದುಕೊಂಡಿವೆ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಮನೆ ಮನೆಗೆ ತೆರಳಿ ಹೋಮ್ ವರ್ಕ್ ಕೊಟ್ಟು ಮಕ್ಕಳ ಕಲಿಕೆಗೆ ಬ್ರೇಕ್ ಬೀಳದಂತೆ ನಿರ್ವಹಿಸಿದ್ದಾರೆ. ಈಗಾಗಲೇ ಎರಡು ಕವನ ಸಂಕಲನಗಳನ್ನು ಹೊರತಂದಿರುವ ಇವರು ಒಂದು ‘ಅನುಭವ ಕಥನ’ ಮತ್ತೊಂದು ‘ಮಕ್ಕಳ ಕವಿತೆ’ ಗಳ ಪುಸ್ತಕಗಳನ್ನು ಹೊರತರುವ ಸಿದ್ಧತೆ ನಡೆಸಿದ್ದಾರೆ.
ಹಳ್ಳಿ ರಂಗಶಾಲೆ ಇನ್ನಷ್ಟು ವಿನೂತನವಾಗಿ ಬೆಳೆಸುವ ಗುರಿ ಹೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ನಗರಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಳ್ಳಿಯಲ್ಲಿಯೇ ತರಬೇತಿ ದೊರಕುವಂತೆ ಮಾಡುವುದು, ಹಾಗೇ ಅಧಿಕೃತವಾಗಿ ಹೊಸ ಶಾಲೆ ತೆರೆದು ಬಡ ಮಕ್ಕಳಿಗೆ ಡಿಜಿಟಲ್ ಮಾದರಿಯ ಶಿಕ್ಷಣ ಒದಗಿಸುವ ಮಹತ್ವದ ಕನಸು ಹೊತ್ತಿದ್ದಾರೆ.
ಸರ್ಕಾರಿ ಹುದ್ದೆಯ ಜೊತೆಗೆ ಪ್ರಜ್ಞಾವಂತ ಸಮಾಜ ನಿರ್ಮಾಣದ ಕನಸು ಕಂಡು ಸಾಮಾಜಿಕ ಕಳಕಳಿಯ ಅಪರೂಪದ ನೌಕರ ವೀರಪ್ಪ ತಾಳದವರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ, ವರ್ತಮಾನ ಸಮಾಜಕ್ಕೆ ಮಾದರಿ ಎನಿಸುತ್ತದೆ. ಸೇವೆಯೇ ಶ್ರೇಷ್ಠ ಜೀವನ ಎಂದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರ ಕಾರ್ಯಕ್ಕೆ ನಮದೊಂದು ಸಲಾಂ ಇರಲಿ.
– ಬಾಲಾಜಿ ಕುಂಬಾರ, ಚಟ್ನಾಳ
ಮೋ.9739756216