ಶತಕದಂಚಿನಲಿ ಶಾಂತವಾದ ಜ್ಞಾನ ದೀಪ
ನುಡಿದರೆ ಮುತ್ತಿನ ಹಾರ, ಸ್ಪಟಿಕ ಸ್ಪಷ್ಟ ಮಾತುಗಳು, ಹೃಸ್ವ ಸ್ವರ, ಧೀರ್ಘ ಸ್ವರ, ಅಲ್ಪ ಪ್ರಾಣ, ಮಹಾಪ್ರಾಣ
……. ಹೀಗೆ ಕನ್ನಡ ವ್ಯಾಕರಣಕ್ಕೇ ಜೀವ ತುಂಬುತ್ತಿದ್ದ , ಶುದ್ಧ ಕನ್ನಡ ಅಷ್ಟೇ ಪರಿಶುದ್ಧ ಇಂಗ್ಲೀಷನ್ನ ಕಲಿಸುತ್ತಿದ್ದ, ಕಲಿಯುತ್ತಿದ್ದ, ಅಪ್ಪಟ ಭಾಷಾ ತಜ್ಞ, ಜ್ಞಾನ ದಾಸೋಹಿ, ಜ್ಞಾನ ದಾಹಿ ಶ್ರೀ ಅಮರಯ್ಯ ಮೇಷ್ಟ್ರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಐತಿಹಾಸಿಕ ಮಸ್ಕಿ ಪಟ್ಟಣದಲ್ಲಿ ತೊಂಬತ್ತೇಳು ವರ್ಷಗಳಿಂದ ತುಂಬು ಜೀವನ ನಡೆದುತ್ತಿದ್ದ, ಸಹಸ್ರಾರು ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದ ಮಹಾ ಚೇತನವೊಂದು ಇಂದು ನಮ್ಮ ಕಣ್ಣ ಮುಂದಿಲ್ಲ.
ಮಹಾಗುರು ಶ್ರೀ ಅಮರಯ್ಯ ಮೇಷ್ಟ್ರು ತಾವು ಬದುಕಿದ ತೊಂಬತ್ತೇಳು ವರ್ಷಗಳಲ್ಲಿ ಕನಿಷ್ಟ ಎಪ್ಪತೈದು ವಸಂತಗಳನ್ನು ಶಿಕ್ಷಣಕ್ಕಾಗಿಯೇ ಕಳೆದವರು. ತಮ್ಮ ಬದುಕಿನ ಬಹುಪಾಲು ಸಮಯವನ್ನು ಶಿಕ್ಷಣಕ್ಕಾಗಿಯೇ ಮೀಸಲಿಟ್ಟಿದ್ದ ಈ ಮಹಾಗುರುವಿನ ಗರಡಿಯಲ್ಲಿ ಮೂರು ತಲೆಮಾರುಗಳು ಶಿಕ್ಷಣ ಪಡೆದಿವೆ. ಮಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇರುವ ಇವರ ಶಿಷ್ಯಂದಿರ ಬಳಗದಲ್ಲಿ ಅಪ್ಪ-ಮಕ್ಕಳು-ಮೊಮ್ಮಕ್ಕಳೂ ಇದ್ದಾರೆ. ಇಂತಹ ಸಾರ್ಥಕ ಜೀವನ ನಡೆಸಿದ ಮಹಾಗುರುವಿನ ಬಗ್ಗೆ ಮಾತನಾಡುವುದಾಗಲೀ, ಬರೆಯುವುದಾಗಲೀ ಕೊಂಚ ಕಷ್ಟದ ಕೆಲಸವೇ.
ನನ್ನ ಹಾಗೂ ಗುರುಗಳ ನಡುವಿನ ಬಾಂಧವ್ಯಕ್ಕೆ ಇಪ್ಪತೈದು ವರ್ಷಗಳ ಹರೆಯ.
ಈ ಅನುಭವದ ಹಿನ್ನೆಲೆಯಲ್ಲಿ ಅವರ ಕುರಿತು ನನ್ನ ಅನುಭವಕ್ಕೆ ಬಂದ ಸುಮಧುರ ನೆನಪುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಲ್ಲೆನಷ್ಟೇ. ಇಂದು ನನಗೆ ಶುದ್ದ ಕನ್ನಡ ಬರೆಯಲು, ಓದಲು, ಮಾತಾಡಲು ಬರುತ್ತಿದೆ ಎಂದಾದರೆ ಅದರ ಸಂಪೂರ್ಣ ಶ್ರೇಯಸ್ಸು ಸೇರಬೇಕಾದದ್ದು ಆ ಮಹಾಗುರುವಿನ ಪಾದಕ್ಕೇ. ಇದು ನನ್ನಂತಹ ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳ ಅನುಭವವಾಗಿರಲಿಕ್ಕೂ ಸಾಕು.
ಕಲಿಸುವುದಕ್ಕೆ-ಕಾಠಿಣ್ಯಕ್ಕೆ , ಶಿಸ್ತಿಗೆ-ಶಿಕ್ಷಿಸುವುದಕ್ಕೆ ಹೆಸರಾಗಿದ್ದವರು ನಮ್ಮ ಪ್ರೀತಿಯ ಮೇಷ್ಟ್ರು. ಒಮ್ಮೆ ಬೆಳಗಿನ ಜಾವ ಗುರುಗಳ ಮನೆಗೆ ಗೃಹಪಾಠಕ್ಕಾಗಿ ಹೋಗಿದ್ದೆ , ಪಾಠದ ಮಧ್ಯೆ ಯಾವುದೋ ಸಂದರ್ಭದಲ್ಲಿ ಗುರುಗಳು ನಮಗೆ ” ಆಕಾಶದ ಬಣ್ಣ ಯಾವುದು ? ” ಎಂದು ಕೇಳುತ್ತಾರೆ, ನಾನು ತಕ್ಷಣವೇ ಆಕಾಶದ ಕಡೆಗೆ ನೋಡುತ್ತೇನೆ, ಬಹುಶಃ ಮಳೆಗಾಲವಿರಬೇಕು , ಆಕಾಶ ಬೆಳ್ಳಿ ಮೋಡಗಳಿಂದ ತುಂಬಿ ತುಳುಕುತ್ತಿತ್ತು. ನಾನು ತಟ್ಟನೆ ಎದ್ದು ನಿಂತು, ” ಆಕಾಶದ ಬಣ್ಣ ಬಿಳಿ ” ಎಂದು ಬಿಟ್ಟೆ. ಅದ್ಯಾವ ಶಕ್ತಿ ಗುರುಗಳ ರೆಟ್ಟೆಗೆ ಬಂದಿತ್ತೋ ಕಾಣೆ ಕೈಯ್ಯಲ್ಲಿದ್ದ ಛಡಿಯಿಂದ ನನ್ನನ್ನು ಥಳಿಸಿದ್ದನ್ನು ನೆನಪಿಸಿಕೊಂಡರೆ ಇಂದಿಗೂ ಮೈ ಝುಂ…. ಎನ್ನುತ್ತದೆ. ನಂತರ ಅವರೇ ನನ್ನನ್ನು ಒಳಗೆ ಕರೆದು
” ಆಕಾಶದ ಬಣ್ಣ ನೀಲಿ, ಅಲ್ಲಿ ಬೆಳ್ಳಗೆ ಕಂಡದ್ದು ಮೋಡಗಳು, ಆಕಾಶ ಮೋಡಗಳ ಮಧ್ಯೆ ಸಾಕಷ್ಟು ಅಂತರವಿದೆ ” ಎಂದೆಲ್ಲಾ ಖಗೋಲದ ಬಗ್ಗೆ ತಿಳಿಸಿಕೊಟ್ಟಾಗಲೇ ನನಗೆ ಆಕಾಶದ ಅನಂತತೆಯ ಬಗ್ಗೆ, ಗುರುಗಳ ಅಂತಃ ಶಕ್ತಿಯ ಬಗ್ಗೆ ತಿಳಿದದ್ದು.!
ಅವರಿಗೂ ನನಗೂ ಶಿಷ್ಯನಾಗಿದ್ದ ಗೆಳಯನೊಬ್ಬನ ಅನುಭವದ ಮಾತು. ಒಮ್ಮೆ ಅವರು ಗೆಳೆಯರೊಂದಿಗೆ ಗುರುಗಳ ಮನಗೆ ಹೋಗುತ್ತಾರೆ. ಗುರುಗಳು ಅವರೊಂದಿಗೆ ಎರಡು ತಾಸು ಚರ್ಚಿಸುತ್ತಾ ಇವರ ಬದುಕು, ಬೆಳವಣಿಗೆಗಳ ಕುರಿತು ತಿಳಿದುಕೊಳ್ಳತ್ತಾ ಪ್ರತಿ ಮಾತಿಗೂ ಶಿಷ್ಯಂದಿರ ಏಳಿಗೆ ಕಂಡು
” ವಹ್ವಾ ವಹ್ವಾ.….” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮಾತು ಮುಗಿದ ನಂತರ ಗೆಳೆಯರು ಮರಳಬೇಕು ಎನ್ನುವಾಗ ಗುರುಗಳು,
” ಪ್ರಬಂಧ ಕುಸುಮಾವಲಿ ಎನ್ನೋ ಪುಸ್ತಕ ಸಿಕ್ರೆ ತಗೊಂಬಂದು ಕೊಡ್ರಿಪಾ ನಾನದನ್ನು ಓದಬೇಕು “ ಎನ್ನುತ್ತಾರೆ ಆಗ ಅವರಿಗೆ ತೊಂಬತ್ತೇಳು ವರ್ಷ !!! ಅದಕ್ಕೇ ಅವರನ್ನು ನಾನು ಜ್ಞಾನ ದಾಸೋಹಿ ಎನ್ನುವುದರ ಜೊತೆಗೆ ಜ್ಞಾನ ದಾಹಿ ಎಂದು ಕರೆದದ್ದು.
ಬಹುಶಃ ಏಳೆಂಟು ವರ್ಷಗಳ ಹಿಂದಿನ ಮಾತು ನನ್ನ ಎರಡೂ ಮಕ್ಕಳನ್ನು ಮಹಾಗುರುವಿನ ಗರಡಿಯಲ್ಲಿ ಇಡಬೇಕು ಎಂದು ಅವರ ಮನೆಗೆ ಕರೆದೊಯ್ದಿದ್ದೆ , ಆದರದಿಂದ ನಮ್ಮನ್ನು ಬರಮಾಡಿಕೊಂಡಿದ್ದ ಗುರುಗಳು ತಮ್ಮ ಅನಾರೋಗ್ಯದಿಂದ ಪಾಠ ಮಾಡುವುದು ಕಷ್ಟ ಎಂದು ಹೇಳಿದರು. ನಾನಾಗ ,
” ಗುರುಗಳೆ ನನ್ನ ಮಕ್ಕಳು ನಿಮ್ಮ ಪ್ರಭಾವಲಯದಲ್ಲಿ ಒಂದಷ್ಟು ದಿನ ಇದ್ದರೆ ಅಷ್ಟೇ ಸಾಕು ” ಎಂದಿದ್ದೆ ಕೇವಲ ಮೂರು ತಿಂಗಳು ಮಾತ್ರ ಗುರುಗಳ ಮನೆಯಲ್ಲಿ ಕಲಿತು ಬಂದ ನನ್ನ ಮಗನಿಗೆ ನಿನ್ನ ಅಚ್ಚುಮೆಚ್ಚಿನ ಮೇಷ್ಟ್ರು ಯಾರಪ್ಪಾ ಎಂದು ಈಗ ಕೆರಳಿದರೂ ,
” ಅಮರಯ್ಯ ಮೇಷ್ಟ್ರು ” ಎಂದು ಹೇಳುತ್ತಾನೆ.
ಅಂಥ ಮಹಾಗುರುವಿನ ದೇಹವೀಗ ಪಂಚಭೂತಗಳಲ್ಲಿ ಲೀನವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುವುದು ಬರೀ ಆಡಂಬರವೆನಿಸುತ್ತದೆ. ಸಂತಾಪ ಸೂಚಿಸಲೂ ಮನಸ್ಸೇಕೋ ಒಪ್ಪುತ್ತಿಲ್ಲ. ಮತ್ತೆ ಪುನಃ ನನ್ನ ನೆಚ್ಚಿನ ಆಕಾಶದ ಕಡೆ ನೋಡುತ್ತೇನೆ. ಬೆಳ್ಳಿ ಮೋಡಗಳು ಬಿಡಿಸಿದ ನೂರೆಂಟು ಚಿತ್ತಾರಗಳು.ಅವುಗಳ ಮಧ್ಯೆ ಮಹಾಗುರುವಿನ ಆಕೃತಿ. ಅದೇ ಮುಖ, ಅದೇ ನಗು, ವಹ್ವಾ ವಹ್ವಾ…. ಎಂದು ಆಶೀರ್ವದಿಸುತ್ತಿರುವ ಕೈಗಳು. ಇಲ್ಲಿಂದಲೇ ನಮಿಸುತ್ತೇನೆ.
” ನಿನ್ನ ಪ್ರತಿ ಹೆಜ್ಜೆಯನ್ನು ಇಲ್ಲಿಂದಲೇ ನೋಡುತ್ತೇನೆ ಎನ್ನುತ್ತಾನೆ ಆ ಮಹಾ ಗುರು. ಆಗಲಿ ಗುರುಗಳೇ ಎನ್ನತ್ತಾ ಮುಂದಡಿಯಿಡುತ್ತೇನೆ ಎಚ್ಚರಿಕೆಯಿಂದ ಭಕ್ತಿಯಿಂದ ಶ್ರದ್ಧೆಯಿಂದ
✍️ ಆದಪ್ಪ ಹೆಂಬಾ ಮಸ್ಕಿ
——————————
ಆತ್ಮೀಯ ಓದುಗರಿಗೆ ನಮಸ್ಕಾರಗಳು,
ಅಮರಯ್ಯ ಮಾಸ್ತರ ಸಾಲಿಮಠ ಆದರ್ಶ ಶಿಕ್ಷಕರು. ಸಾಲಿಮಠ ಇವರ ಅಡ್ಡಹೆಸರು. ಅಮರಯ್ಯ ಮಾಸ್ತರ ಮತ್ತು ಅವರ ಮಕ್ಕಳು , ಅಳಿಯಂದಿರು, ಮೊಮ್ಮಕ್ಕಳು ಶಿಕ್ಷಕ ವೃತ್ತಿಯಲ್ಲಿದ್ದು, ಸಾಲಿಮಠ ಅನ್ನುವ ಅಡ್ಡ ಹೆಸರನ್ನು ಅರ್ಥಪೂರ್ಣವಾಗಿಸಿದ್ದಾರೆ. ಹೆಸರಿಗೆ ತಕ್ಕ ಸಾಲಿ ಮಾಸ್ತರಗಳಾಗಿ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಶ್ರೇಯಸ್ಸು ಈ ಕುಟುಂಬವರ್ಗದವರಿಗಿದೆ.
-ಸಂಪಾದಕ